ಮೊದಲ ಡೇಟಿಂಗ್‌ನ ರೋಮಾಂಚನ!

ತನ್ನ ಸ್ನೇಹಿತೆಯರು ಅಮೇರಿಕನ್ನರಾದರೂ ಆಗಿದ್ದರೆ ಚೆನ್ನಾಗಿತ್ತು. ಡೇಟ್‌ ಮಾಡುವಾಗ ಏನೇನು ಆಗಬಹುದು, ಏನನ್ನು ಬಯಸಬಹುದು ಎಂದು ಅವರಿಂದ ತಿಳಿದುಕೊಳ್ಳಬಹುದಿತ್ತು ಎಂದುಕೊಂಡಳು ಅನು. ಅವಳು ಡ್ಯಾನ್‌ ಜೊತೆ ಹೊರಗೆ ಹೋಗುತ್ತಿರುವುದನ್ನು ಅವಳ ರೂಮ್‌ಮೇಟ್‌ಗಳು ನೋಡುವುದು ಅವಳಿಗೆ ಬೇಕಿರಲಿಲ್ಲ. ಹಾಗಾಗಿ ಆತನಿಗೆ ಕೆಫೆಟೇರಿಯದ ಬಳಿ ಸಂಧಿಸಲು ತಿಳಿಸಿದಳು. ಅವಳ ಬಹಳಷ್ಟು ಭಾರತೀಯ ಸಹಪಾಠಿಗಳು ಹೆಚ್ಚುಕಮ್ಮಿ ಸಂಪ್ರದಾಯಸ್ಥರು. ಇಲ್ಲಿ ಓದಿ, ಅರೇಂಜ್ಡ್‌ ಮದುವೆಯಾಗಲು ಭಾರತಕ್ಕೆ ಹಿಂದಿರುಗುವಂತಹವರು. ಅವಳ ದೇಶದಿಂದ ಬಂದಿದ್ದ ಯಾವೊಬ್ಬ ಗಂಡಸೂ ಭಾರತೀಯ ಹುಡುಗಿಯಾಂದಿಗೆ ಸುತ್ತಾಡಲು ಹೋಗುತ್ತಿರಲಿಲ್ಲ. ಯಾಕೆಂದರೆ, ಅವರದೇ ಜಾತಿಯ, ಅವರದೇ ರಾಜ್ಯದ ಅಥವಾ ಅವರದೇ ಭಾಷೆ ಮಾತನಾಡುವವರು, ಕಮ್ಮಿ ಇರುತ್ತಿದ್ದರು.

ಅನು ಕೆಫೆಟೇರಿಯಾದಲ್ಲಿ ಕಾಯುತ್ತ ಮ್ಯಾಗಜೀನ್‌ ಒಂದನ್ನು ತಿರುವಿ ಹಾಕಲು ಪ್ರಾರಂಭಿಸಿದಳು. ನನ್ನ ನಿಯಮ-ನಿಬಂಧನೆಗಳನ್ನೆಲ್ಲ ಮರೆತು ಅವನ ಜೊತೆ ಸ್ವಲ್ಪ ಖುಷಿಯಿಂದಿರಲು ಪ್ರಯತ್ನಿಸಬೇಕು.

ಡ್ಯಾನ್‌ ಸರಿಯಾಗಿ 5 ಗಂಟೆಗೆ, ನೀಲಿಜೀನ್ಸ್‌ ಮತ್ತು ಕಡುಹಸಿರಿನ ಪೋಲೊ ಅಂಗಿ ಧರಿಸಿ ಬಂದ. ಸಮಯ ಪಾಲನೆ - ಅವಳಿಗೆ ರೂಢಿಯಾಗುತ್ತಿದ್ದ ಮತ್ತೊಂದು ಅಮೇರಿಕನ್‌ ಆಚಾರ.

'ಓಕೆ ಅನು, ಮೂವಿಗೆ ಸಿದ್ಧವೇ?"

'ಹೌದು ಮತ್ತೆ!" ಕ್ಯಾಂಪಸ್‌ನಲ್ಲಿಯ ಅತಿ ಸುಂದರ ಯುವಕ ನನ್ನ ಜೊತೆ ಏನು ಮಾಡುತ್ತಿದ್ದಾನೆ?

ಇಬ್ಬರೂ ಅವನ ಕಾರಿನ ಬಳಿಗೆ ನಡೆದರು. ಅಲ್ಲಿ, ಅವಳು ಮೊದಲು ಕುಳಿತುಕೊಳ್ಳಲು ಅವನು ಪ್ಯಾಸೆಂಜರ್‌ ಕಡೆಯ ಬಾಗಿಲನ್ನು ತೆರೆದು ನಿಂತ. ಅದು ಆತ ಸೌಜನ್ಯಶೀಲನಾಗಿದ್ದಿದ್ದರಿಂದ ಮಾಡಿದುದೆ? ಭಾರತದಲ್ಲಿ, ನೌಕರಿಗಿರುವ ಕಾರುಚಾಲಕರು ಮಾತ್ರ ಹಾಗೆ ಮಾಡುತ್ತಾರೆ.

ಆತ ಡ್ರೆೃವರ್‌ ಸೀಟಿನಲ್ಲಿ ತೂರಿಕೊಂಡ. 'ಕೆಲವೇ ಮೈಲಿಗಳಿಗೆ ಒಂದು ಒಳ್ಳೆಯ ಕಾಫಿ ಅಂಗಡಿ ಇದೆ. ಮೊದಲು ಕಾಫಿ ಏನಾದರೂ ಬೇಕೆ?"

'ಕಾಫಿಗೆ ಬೇಡ ಎನ್ನುವುದು ನನಗೆ ತುಂಬಾ ಕಷ್ಟ."

ಹುಡುಗಿಯರ ಜೊತೆ ಹೊರಗೆ ಹೋಗುವುದರಲ್ಲಿ ಆತನಿಗೆ ಮುಜುಗರವಿದ್ದಂತೆ ಕಾಣಲಿಲ್ಲ. ಆತ ಇಂತಹುದನ್ನು ಹಲವಾರು ಸಾರಿ ಮಾಡಿರುವುದರ ಬಗೆಗೆ ಅವಳಿಗೆ ಯಾವ ಸಂದೇಹವೂ ಇರಲಿಲ್ಲ.

'ಒಂದು ಸ್ಲೈಸು ಚಾಕೊಲೇಟ್‌ ಕೇಕ್‌ ತೆಗೆದುಕೊಂಡರೆ ಹೇಗೆ? ಇಬ್ಬರೂ ಅದನ್ನು ಭಾಗ ಮಾಡಿಕೊಳ್ಳಬಹುದು."

'ಖಂಡಿತ."

ಅವಳನ್ನು ಗಾಬರಿ ಮತ್ತು ಆತಂಕದಲ್ಲಿ ಬಿಟ್ಟು ಡ್ಯಾನ್‌ ಕೌಂಟರ್‌ ಬಳಿಗೆ ಹೋದ. ಇದು ಅವಳ ಜೀವನದಲ್ಲಿನ ಮೊಟ್ಟಮೊದಲ ಡೇಟ್‌. ಅವಳು ಅಮೇರಿಕನ್ನರ ಬಗೆಗೆ ತಿಳಿದುಕೊಂಡಿರುವಷ್ಟರ ಪ್ರಕಾರ, ಅವನು ಅಂದು ರಾತ್ರಿ ಅವಳ ಜೊತೆ ಮಲಗುವ ನಿರೀಕ್ಷೆ ಮಾಡುತ್ತಿರಬಹುದು. ಸಾಧ್ಯವೇ ಇಲ್ಲ! ಮದುವೆಯಾಗುವ ತನಕ ಯಾರೊಂದಿಗೂ ಮಲಗುವ ಮಾತೇ ಇಲ್ಲ ಎಂದು ಅವನಿಗೆ ಅವಳು ಹೇಳಲೇಬೇಕು.

'ಮತ್ತೆ, ಅನು ಹೇಳಿ. ಇಲ್ಲಿನ ಜೀವನ ಯಾವ ರೀತಿ ಇಷ್ಟವಾಗುತ್ತಿದೆ?"

'ಇಷ್ಟವಾಯಿತೇ ಎಂದು ಇನ್ನೂ ಸರಿಯಾಗಿ ಗೊತ್ತಾಗಿಲ್ಲ. ನಮ್ಮ ಮನೆಯವರನ್ನು ಮತ್ತು ಸ್ನೇಹಿತರನ್ನು ಬಹಳ ಮಿಸ್‌ ಮಾಡಿಕೊಳ್ಳುತ್ತೇನೆ. ಇದೇ ಮೊದಲ ಸಲ ನಾನು ಅವರನ್ನೆಲ್ಲ ಬಿಟ್ಟು ದೂರ ಇರುವುದು. ಪ್ರತಿ ತಿಂಗಳೂ ಒಂದೆರಡು ನೂರು ಡಾಲರ್‌ಗಳನ್ನು ಭಾರತಕ್ಕೆ ಫೋನ್‌ ಮಾಡುವುದಕ್ಕೇ ವ್ಯಯಿಸುತ್ತೇನೆ."

'ಚೈನೀಸ್‌ನವರಂತೆ ನೀವೂ ಸಹ ನಿಮ್ಮ ಕುಟುಂಬಕ್ಕೆ ತುಂಬಾ ಹತ್ತಿರ ಎಂದುಕೊಳ್ಳುತ್ತೇನೆ ನಾನು. ನನ್ನ ಹಳೆಯ ಗರ್ಲ್‌ಫ್ರೆಂಡ್‌, ಅದೇ ನಿಮ್ಮ ಅಪಾರ್ಟ್‌ಮೆಂಟ್‌ ಕಾಂಪ್ಲೆಕ್ಸ್‌ಗೆ ಬಂದವಳು, ಚೈನಾದವಳು."

ಅವನ ಹಳೆಯ ಗರ್ಲ್‌ಫ್ರೆಂಡ್‌ ಬಗ್ಗೆ ಅವಳಿಗೆ ಯಾಕೆ ಹೇಳುತ್ತಿದ್ದಾನೆ? ಭಾರತದಲ್ಲಿ ಇಂತಹ ವಿಷಯಗಳೆಲ್ಲ ಮುಚ್ಚಿಡುವಂತಹವು! 'ಹೌದು, ಬಹಳಷ್ಟು ಏಷಿಯನ್ನರು ತಮ್ಮ ಕುಟುಂಬದೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡಿರುವವರು ಎಂದುಕೊಳ್ಳುತ್ತೇನೆ. ನಮಗೆ ನಿಜವಾಗಲೂ ಕೂಡು ಸಂಸಾರಗಳು ಇರುತ್ತವೆ. ಹಾಗೂ ಎಂತಹ ವ್ಯತ್ಯಾಸಗಳಿದ್ದರೂ ಒಬ್ಬರಿಗೊಬ್ಬರು ಜೊತೆಯಾಗಿರುತ್ತೇವೆ." ತನ್ನ ವಿವರಣೆ ಸ್ವಲ್ಪ ಪ್ರತಿಷ್ಠೆಯದಾಗಿತ್ತು ಎಂದು ಅನು ಸ್ವಲ್ಪ ಅಧೈರ್ಯಗೊಂಡಳು.

'ಹ್ಞೂಂ, ಮೂವಿ 7 ಗಂಟೆಗೆ ಪ್ರಾರಂಭವಾಗುತ್ತದೆ. ಇನ್ನು ಹೊರಡೋಣ."

ಅವಳನ್ನು ಮುಂದೆ ಹೋಗಲು ಬಿಟ್ಟ ಡ್ಯಾನ್‌, ನಂತರ ಹಿಂಬಾಲಿಸಿದ. ಗಂಡಸು, ಹೆಂಗಸನ್ನು ಹಿಂಬಾಲಿಸುವ ದಿನವನ್ನು ಭಾರತ ಎಂದಾದರೂ ಕಾಣುತ್ತದೆಯೇ?

ಡ್ಯಾನ್‌ ಮುಂದೇನು ಮಾಡಬಹುದು ಎಂದು ಭಯಪಡುತ್ತಾ, ಭರವಸೆ ಮತ್ತು ಭಯದ ಮಧ್ಯೆ ಸಿಲುಕಿ, ಅನು ಅಕ್ಷರಶಃ ಕತ್ತಲೆಯಲ್ಲಿ ಕುಳಿತಳು. ಅವನು ಅವಳ ಕೈ ಯನ್ನು ಹಿಡಿದುಕೊಳ್ಳುವನೆ? ಅವಳನ್ನು ಮುಟ್ಟಲಿರುವನೆ? ಭಾರತದಲ್ಲಿ, ತಮ್ಮ ಮನೆಯವರನ್ನು ಎದುರಿಸುವಷ್ಟು ಧೈರ್ಯವಿದ್ದ ಕಾಲೇಜು ವಿದ್ಯಾರ್ಥಿಗಳು ಒಂದು ಚಿಕ್ಕ ರೋಮಾನ್ಸ್‌ ಹಂಚಿಕೊಳ್ಳಲು ಸಿನೆಮಾ ಥಿಯೇಟರ್‌ಗಳಿಗೆ ಹೋಗುತ್ತಿದ್ದರು. ಪೌರ್ವಾತ್ಯ ಏಕಿಷ್ಟು ಭಿನ್ನವಾಗಿತ್ತು? ಡ್ಯಾನ್‌ನತ್ತ ಕಣ್ಣಂಚಿನಲ್ಲಿ ದೃಷ್ಟಿ ಹಾಯಿಸಿದಳು. ಅವನು ಸಿನೆಮಾ ನೋಡುವುದರಲ್ಲಿ ಸಂಪೂರ್ಣವಾಗಿ ತಲ್ಲೀನನಾಗಿದ್ದ. ಅದು ಒಂದು ಹಾಸ್ಯ ಸಿನಿಮಾ. ಹೀಗಾಗಿ, ಅದು ಹೇಗೆ ಅವನು ಸಿನಿಮಾದಲ್ಲಿ ತಲ್ಲೀನನಾಗಿರದೆ ಇರಲು ಸಾಧ್ಯ? ಆತನ ಹುಡುಗುತನದ ನೋಟವನ್ನು ಆಕೆ ಇಷ್ಟಪಟ್ಟಳು.

ಸಿನಿಮಾ ಮುಗಿದ ನಂತರ ಥಿಯೇಟರ್‌ನಿಂದ ಹೊರಬರುತ್ತಿರಬೇಕಾದರೆ ಡ್ಯಾನ್‌ನ ಕಣ್ಣುಗಳು ಹುಮ್ಮಸ್ಸಿನಿಂದ ಪ್ರಕಾಶಿಸುತ್ತಿದ್ದವು. 'ನಿಮಗೆ ಇಷ್ಟವಾಯಿತೆ, ಅನು?"

'ಹೌದು". ಅವಳು ಸಿನಿಮಾಕ್ಕೆ ಯಾವುದೇ ಗಮನ ನೀಡಿರಲಿಲ್ಲ. ಹೇಳಬೇಕೆಂದರೆ ಅವಳಿಗೆ ಸಿನಿಮಾ ಬೋರು ಅನ್ನಿಸಿತ್ತು. 'ತುಂಬಾ ಇಷ್ಟವಾಯಿತು."

'ನನ್ನ ಜೊತೆ ಬಂದಿದ್ದಕ್ಕೆ ಧನ್ಯವಾದಗಳು, ಅನು. ಮಜವಾಗಿತ್ತು. ಮತ್ತೊಮ್ಮೆ ನಾವು ಜೊತೆ ಸೇರಬೇಕು". ಅವಳಿಗಾಗಿ ಥಿಯೇಟರ್‌ನ ಬಾಗಿಲನ್ನು ತೆರೆದು ಹಿಡಿದ.

ಅಮೇರಿಕನ್ನರು ಇದನ್ನು ಯಾಂತ್ರಿಕವಾಗಿ ಮಾಡುತ್ತಾರೆಯೇ? ಆತ ಅವಳನ್ನು ಮತ್ತೊಂದು ಡೇಟ್‌ ಕೇಳುತ್ತಿದ್ದಾನೆಯೇ? ಅದು ಅವಳು ಅಂದುಕೊಂಡಷ್ಟು ಕೆಟ್ಟದಾಗೇನೂ ಇರಲಿಲ್ಲ. ಆತ ಒಳ್ಳೆಯ ಸಭ್ಯನಂತೆ ಕಾಣಿಸಿದ. ನಾನು ಇದನ್ನು ನಿಭಾಯಿಸಬಹುದು ಎಂದುಕೊಂಡಳು.

'ಖಂಡಿತ. ಕೇಳಿದ್ದಕ್ಕೆ ಧನ್ಯವಾದಗಳು. ಮಜ ಇತ್ತು. ಆಗಾಗ ನೋಡುತ್ತಿರೋಣ."

ಅವನು ತಲೆಯಾಡಿಸಿದ. 'ಫೋನ್‌ ಮಾಡಿ. ಆದರೆ ಬೀಚ್‌ಗೆ ಹೋಗಬಹುದೇನೊ? ಈ ವಾರಾಂತ್ಯ ಸಾಂಟಾ ಕ್ರೂಜ್‌ನಲ್ಲಿ ಒಳ್ಳೆಯ ಹವೆ ಇರಬೇಕು".

'ನನಗೆ ಸೋಮವಾರ ಒಪ್ಪಿಸಬೇಕಾದ ಅಸೈನ್‌ಮೆಂಟ್‌ಗಳಿವೆ, ಡ್ಯಾನ್‌. ಬಹುಶಃ ಇನ್ನೊಂದು ವಾರಾಂತ್ಯ".

'ಸರಿ ಹಾಗಾದಲ್ಲಿ. ಶುಭರಾತ್ರಿ ಹಾಗೂ ಟೇಕ್‌ ಕೇರ್‌".

'ಟೇಕ್‌ ಕೇರ್‌" ನಮ್ಮ ನಮಸ್ತೆ ಇದ್ದ ಹಾಗೇನು? ತನಗಾಗುತ್ತಿದ್ದ ನಿರಾಸೆಯ ಬಗ್ಗೆ ತಾನೇ ಅಚ್ಚರಿಪಡುತ್ತ ತನ್ನ ಅಪಾರ್ಟ್‌ಮೆಂಟಿನ ಮೆಟ್ಟಿಲುಗಳನ್ನು ಪ್ರಯಾಸದಿಂದ ಹತ್ತಿದಳು. ಹೆರಾಲ್ಡ್‌ ರಾಬಿನ್ಸ್‌, ಮಿಲ್ಸ್‌, ಬೂನ್‌, ಅವರೆಲ್ಲರ ಪುಸ್ತಕಗಳಲ್ಲಿ ಓದಿದ್ದ ಆ ಚುಂಬನಗಳು, ಕೈ ಹಿಡಿಯುವುದು, ಅವೆಲ್ಲ ಸುಳ್ಳೆ ಹಾಗಿದ್ದರೆ? ಆತನನ್ನು ವಾಪಸು ಚುಂಬಿಸಲು ಸಹ ಅವಳು ಸಂತೋಷವಾಗಿ ಸಿದ್ಧಳಿದ್ದಳು. ಬಹುಶಃ ಅವನು ಅವಳನ್ನು ಸ್ನೇಹಿತೆಯಾಗಿ ಇಷ್ಟಪಟ್ಟಿದ್ದ. ಅದಕ್ಕಿಂತ ಹೆಚ್ಚಿಗೇನೂ ಇಲ್ಲ. ಓಹ್‌, ಸರಿ... ಅವಳು ಸಿನಿಮಾಗಳಲ್ಲಿ ನೋಡಿದಂತೆ, ಅಮೇರಿಕನ್ನರು ಕೇವಲ ದೈಹಿಕ ಸುಖವನ್ನು ಮಾತ್ರ ಅಪೇಕ್ಷಿಸದೆ ಇರಲೂಬಹುದು. ಇದನ್ನೆಲ್ಲ ಕೇಳಲು ಯಾರಾದರೂ ಅಮೇರಿಕನ್‌ ಹುಡುಗಿ ಪರಿಚಯವಿದ್ದಿದ್ದರೆ ಚೆನ್ನಾಗಿತ್ತು ಎಂದುಕೊಂಡಳು.

ಓಹ್‌! ಮರೆತೇ ಹೋಗಿತ್ತು! ಅವಳು ಪವನ್‌ಗೆ ಬರೆಯುತ್ತಿದ್ದ ಕಾಗದವನ್ನು ಮುಗಿಸಬೇಕಿತ್ತು.

(ಸಶೇಷ)

ಅಧ್ಯಾಯ - 5 ಅಧ್ಯಾಯ - 7

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+