ಅನು ಬದುಕಿನಿಂದ ದೀಪಕ್ ದೂರ.. ಬಹುದೂರ..
ಇಂಗ್ಲಿಷ್ ಮೂಲ : ಅಸಿತ ಪ್ರಭುಶಂಕರ
ಕನ್ನಡಕ್ಕೆ : ರವಿ ಕೃಷ್ಣಾ ರೆಡ್ಡಿ
[email protected]
ಸುದೀರ್ಘ ಹಗಲಿನ, ಬೆಳಕು ತುಂಬಿದ ಬೇಸಿಗೆಯ ದಿನಗಳು ಬಂದವು. ಅನೂಳ ಜೀವನ ಕ್ರಮಬದ್ದವಾದ ಆರಾಮದಾಯಕ ಜೀವನಕ್ಕೆ ಹೊಂದಿಕೊಳ್ಳುತ್ತಿತ್ತು. ದೀಪಕ್ ಅವಳಿಗೆ ಯಾವುದೇ ಕರೆಯಾಗಲಿ, ಇ-ಮೇಯ್ಲ್‌ು ಆಗಲಿ ಮಾಡದೆ, ಯಾವುದೇ ರೀತಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿರಲಿಲ್ಲ.
ಮೂರು ತಿಂಗಳ ಹಿಂದೆ ಒಂದು ದಿನ ಇದ್ದಕ್ಕಿದ್ದಂತೆ ಯಾವುದೇ ಪೂರ್ವಾಪರಗಳಿಲ್ಲದೆ ಅವಳಿಗೆ ಮದುವೆ ರದ್ದತಿಯ ಕಾಗದಪತ್ರಗಳನ್ನು ಕಳುಹಿಸಿದ್ದ. ಡ್ಯಾನ್ ಅದನ್ನು ಕಾಣಿಕೆ ಎಂಬುದಾಗಿ ಬಣ್ಣಿಸಿದ್ದ. ಅವಳೂ ಸಹ ಅದನ್ನು ಆ ರೀತಿಯಲ್ಲಿಯೇ ಸ್ವೀಕರಿಸಿದಳು. ಈಗ ಅವಳು ಯಾವಾಗಲೂ ತನ್ನನ್ನು ತಾನು ಏನಾದರೊಂದರಲ್ಲಿ ತೊಡಗಿಸಿಕೊಂಡಿರಲು ಯೋಗ, ಕಿಕ್‌ಬಾಕ್ಸಿಂಗ್ ಆರಂಭಿಸಿದಳು ಹಾಗು ಎಲ್ಲಾ ವ್ಯವಹಾರ ನಿಮಿತ್ತ ಪ್ರವಾಸಗಳನ್ನು ಒಪ್ಪಿಕೊಂಡಳು.
ಅಂದು ಸಂಜೆ ಅವಳು ಮನೆ ತಲುಪಿದಾಗ ಒಂದು ಕಾರು ತನ್ನ ಮನೆಯ ಮುಂದೆ ನಿಲ್ಲಿಸಿರುವುದನ್ನು ಗಮನಿಸಿದಳು. ಸೆಲ್‌ಪೋನಿನಲ್ಲಿ ಮಾತನಾಡಲು ಯಾರಾದರೂ ರಸ್ತೆಬದಿಯಲ್ಲಿನಿಲ್ಲಿಸಿರಬೇಕೇನೊ ಎಂದುಕೊಂಡಳು. ತನ್ನ ಕಾರನ್ನು ಗರಾಜಿನಲ್ಲಿ ಬಿಟ್ಟು ಅದರ ಬಾಗಿಲನ್ನು ಮುಚ್ಚಿ ಮನೆಯೊಳಗೆ ಬಂದಳು. ಅವಳು ಮನೆ ಪ್ರವೇಶಿಸಿದ ತಕ್ಷಣ ಬಾಗಿಲಿನ ಕರೆಗಂಟೆ ಬಾರಿಸಿತು.
ಅವಳು ಇಣುಕುಕಿಂಡಿಯಿಂದ ಹೊರಗೆ ನೋಡಿದಳು. ''ಪವನ್! ಒಳಗೆ ಬಾ, ಏನು ಆಶ್ಚರ್ಯ! ನೀನು ಯಾವಾಗ ಬಂದೆ?""
''ಇವತ್ತು ಬೆಳಿಗ್ಗೆ ತಾನೆ ಬಂದೆ. ನಾನು ಇಲ್ಲಿ ಕಂಪನಿ ಕೆಲಸದ ಮೇಲೆ ಗ್ರಾಹಕರೊಬ್ಬರನ್ನು ನೋಡಲು ಬಂದಿದ್ದೇನೆ.""
''ಆದರೆ ನೀನು ಯಾವುದೇ ಕರೆ ಆಗಲಿ ಇ-ಮೇಯ್ಲ್‌ು ಆಗಲಿ ಮಾಡಲಿಲ್ಲ?""
''ನೀನು ಪಕ್ಕಾ ಅಮೇರಿಕನ್ ಆಗಿಬಿಟ್ಟಿದ್ದೀಯ, ಅನು. ನಾನು ಯಾಕೆ ಕರೆ ಮಾಡಬೇಕು? ನಾವು ಭಾರತದಲ್ಲಿ ಅವೆಲ್ಲ ಮಾಡುವುದಿಲ್ಲ, ಅಲ್ಲವೆ?""
ಆದರೆ ಇಲ್ಲಿ ಅದು ಸಭ್ಯ ಶಿಷ್ಟಾಚಾರವನ್ನು ಮುರಿಯುವ ಹಾಗೆ. ''ನೀನು ಮೊದಲೆ ಕರೆ ಮಾಡಿದ್ದರೆ ನೀನು ಹೊರಗೆ ಕಾಯುವಂತಿರಲಿಲ್ಲ. ಎಷ್ಟು ಹೊತ್ತಿನಿಂದ ಕಾಯುತ್ತಿರುವೆ?""
''ಒಂದು ಗಂಟೆ ಹಾಗು 20 ನಿಮಿಷಗಳಿಂದ. ಅದೇನೂ ದೊಡ್ಡದಲ್ಲ ಬಿಡು.""
ಅವನು ಈಗಲೂ ಪಕ್ಕಾ ಭಾರತೀಯ! ಹೇಳದೆಕೇಳದೆ ಸುಮ್ಮನೆ ಬಂದು ಬಾಗಿಲ ಹತ್ತಿರ ಕಾಯುತ್ತಿರುತ್ತಾನೆ.
''ನಿನ್ನನ್ನು ನೋಡಿ ಖುಷಿಯಾಯಿತು, ಪವನ್. ನನ್ನ ಜೀವನದಲ್ಲಿ ಎಷ್ಟೆಲ್ಲ ನಡೆದು ಹೋಯಿತು ಅಂದರೆ ನಾನು ಎಲ್ಲಿಂದ ಆರಂಭಿಸಬೇಕು ಎಂದೇ ತಿಳಿಯುತ್ತಿಲ್ಲ.""
ಗರಾಜಿನಿಂದ ಆಗ ತಾನೆ ಬಂದಿದ್ದರಿಂದಾಗಿ ಅನೂಳ ಕೈಯಲ್ಲಿ ಇನ್ನೂ ಅವಳ ಕೈಚೀಲ ಮತ್ತು ಬೀಗದ ಕೈಗಳು ಇದ್ದವು. ಅವನ್ನು ಅಡಿಗೆ ಮನೆಯ ಕೌಂಟರ್ ಮೇಲೆ ಇಡಲು ಹೋಗುತ್ತಿರುವಾಗ ಪವನ್ ಅವಳನನ್ನು ಹಿಂಬಾಲಿಸಿದ. ''ನಿನಗೆ ನನ್ನ ವಿಳಾಸ ಹೇಗೆ ಗೊತ್ತಾಯಿತು?""
''ನಾನು ಭಾರತ ಬಿಡುವುದಕ್ಕೆ ಮುಂಚೆ ನಿಮ್ಮ ಮನೆಯವರು ಕೊಟ್ಟಿದ್ದರು.""
ಅವನು ಅವಳನ್ನು ವಿಚಿತ್ರವಾಗಿ ನೋಡುತ್ತಿದ್ದ. ಅವಳು ಸ್ಕರ್ಟ್‌ನಲ್ಲಿ ಇರುವುದನ್ನು ನೋಡಲು ಆವನಿಗೆ ಮುಜಗರವಾಗುತ್ತಿತ್ತೆ? ''ನಾನು ಇಲ್ಲಿಗೆ ಅಷ್ಟೇನೂ ದೂರವಿಲ್ಲದ ಅತಿಥಿಗೃಹದಲ್ಲಿ ಇದ್ದೇನೆ. ಅದು ನಮ್ಮ ಕಂಪನಿಯದ್ದೆ.""
''ನೀನು ಇಲ್ಲೇ ಇರಬಹುದಿತ್ತು, ಪವನ್. ಇಲ್ಲಿ ಒಂದು ಅಧಿಕ ರೂಮು ಇದೆ."" ಭಾರತದಲ್ಲಿ ಅತಿಥಿಗಳು ಮನೆಯಲ್ಲಿ ಉಳಿದುಕೊಳ್ಳುವುದು ಸಾಮಾನ್ಯ. ಅವನು ನಾನು ತುಂಬಾ ಪಾಶ್ಚಾತ್ಯಳಾಗಿಬಿಟ್ಟಿದ್ದೇನೆಂದು ಅಂದುಕೊಳ್ಳುವ ಹಾಗಿಲ್ಲ. ''ಒಂದು ನಿಮಿಷ ಕುಳಿತುಕೊ. ನಾನು ಬಟ್ಟೆ ಬದಲಾಯಿಸಿಕೊಂಡು ಬಂದುಬಿಡುತ್ತೇನೆ."" ಭಾರತೀಯ ಗಂಡಸರು ಎಷ್ಟೊಂದು ಆಷಾಡಭೂತಿಗಳು! ಹೆಂಗಸರು ಅವರ ಕಾಲುಗಳನ್ನು ತೋರಿಸುವಂತಹ ಬಟ್ಟೆಗಳನ್ನು ಧರಿಸುವಂತಿಲ್ಲ. ಅವಳು ಸ್ಕರ್ಟ್ ತೊಡದೆ ಇದ್ದರೆ ಡ್ಯಾನ್‌ಗೆ ಇಷ್ಟವಾಗುತ್ತಿರಲಿಲ್ಲ. ಅವಳ ಕಂದು ಬಣ್ಣದ ದೇಹಕ್ಕೆ ಅವಳು ಧರಿಸುವ ಪ್ಯಾಂಟ್ ನ್ಯಾಯ ಒದಗಿಸುವುದಿಲ್ಲ ಎಂದು ಯಾವಾಗಲೂ ಛೇಡಿಸುತ್ತಿದ್ದ. ಅವಳು ಜೀನ್ಸ್ ಮತ್ತು ಬಿಳಿಯ ಟಿ-ಶರ್ಟ್ ಹಾಕಿಕೊಂಡು ಹಿಂದಿರುಗಿದಳು.












Click it and Unblock the Notifications