ರೂಪಳಿಗೋಸ್ಕರ ಪವನ್‌ನಿಂದ ದೀಪಕ್‌ನ ಕೊಲೆ


‘‘ಆದರೂ ಎಲ್ಲರ ಎದುರೆ ಹೀಗೆ ಮಾಡಿದ್ದು ಆಶ್ಚರ್ಯವೆ. ಸರಿ, ಅವತ್ತು ರಾತ್ರಿ ಊಟವಾದ ಬಳಿಕ ಆ ಬೆಟ್ಟದ ಮೇಲೆ ಏನು ನಡೆಯಿತು? ರೂಪ ಏನಾದರೂ...?’’

‘‘ಅವಳು ನನಗೆ ಕರೆ ಮಾಡಿ, ದಯವಿಟ್ಟು ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗು ಎಂದು ಹೇಳಿದಳು.’’

ಅನು ತಲೆಯಾಡಿಸಿದಳು. ‘‘ಅವಳು ನನಗೆ ನಿನ್ನ ಬಗ್ಗೆ ಯಾವತ್ತೂ ಹೇಳಲಿಲ್ಲ. ನಾನು ಅವಳನ್ನು ಆಕ್ಷೇಪಿಸುತ್ತಿಲ್ಲ. ಆದರೆ ನೀನು ಅಮೇರಿಕದಲ್ಲಿ ಇರುವುದು ಅವಳಿಗೆ ಹೇಗೆ ಗೊತ್ತಾಯಿತು?’’

‘‘ನಾನು ಅವಳಿಗೆ ಭಾರತದಿಂದ ಕರೆ ಮಾಡಿ ನಾನು ಕಾನ್ಫರೆನ್ಸ್‌ಗೆ ಬರುತ್ತಿರುವ ವಿಷಯ ತಿಳಿಸಿದ್ದೆ. ಅವಳು ಅವನನ್ನು ಬಿಟ್ಟುಬಿಟ್ಟ ತಕ್ಷಣ, ಅವಳನ್ನು ನಿನ್ನ ಮನೆಯಲ್ಲಿ ಇಟ್ಟುಕೊಳ್ಳಲು ಆಗುತ್ತದೆಯೆ ಎಂದು ನಿನ್ನನ್ನು ನಾನೆ ಕೇಳುವುದಾಗಿ ಅವಳಿಗೆ ಮಾತು ಕೊಟ್ಟಿದ್ದೆ. ಅಂದು ಸಂಜೆ ನಿನಗೆ ಕರೆ ಮಾಡಲು ಅವಳು ಬಹಳ ಪ್ರಯತ್ನಿಸಿದಳಂತೆ, ಆದರೆ ನೀನು ಸಿಗಲಿಲ್ಲ ಎಂದು ಹೇಳಿದಳು.’’

‘‘ಹ್ಞುಂ... ನಾನು ಎಲ್ಲಾದರೂ...’’

‘‘ಡ್ಯಾನ್‌ನ ಜೊತೆ ಹೊರಗೆ ಹೋಗಿದ್ದೆಯಾ?’’

‘‘ಇಲ್ಲ, ಪವನ್‌, ನನಗೆ ಸಂಜೆ ಹೊತ್ತು ಯೋಗಾಭ್ಯಾಸದ ತರಗತಿಗಳಿವೆ.’’

‘‘ಅನು, ನಿನಗೆ ನಿನ್ನದೆ ಆದ ಸ್ವಂತ ಜೀವನವಿದೆ. ನೀನು ಎಲ್ಲಿಗೆ ಹೋಗಿದ್ದರೂ ಪರವಾಗಿಲ್ಲ. ಆದರೆ ಅವತ್ತು, ಆ ಕ್ಷಣದಲ್ಲಿ ನನಗೆ ಬಹಳ ಕೋಪ ಬಂತು. ನೀನು ಡ್ಯಾನ್‌ ಜೊತೆಗೆ ಹೊರಗೆ ಹೋಗಿರುವುದರಿಂದಲೆ ರೂಪಾಳಿಗೆ ನೀನು ಸಿಗಲಿಲ್ಲ ಎಂದುಕೊಂಡೆ. ನಾನೇ ನಿನಗೆ ಬಹಳಷ್ಟು ಸಾರಿ ಕರೆ ಮಾಡಿದೆ. ಅದರೆ ನನಗೂ ನೀನು ಸಿಗಲಿಲ್ಲ. ಏನು ಮಾಡಬೇಕೆಂತಲೆ ನನಗೆ ತೋಚಲಿಲ್ಲ. ಏನಾದರಾಗಲಿ, ಸದ್ಯಕ್ಕೆ ರೂಪಾಳನ್ನು ಕರೆದುಕೊಂಡು ಬಂದು ನಿನ್ನ ಮನೆಯ ಬಳಿ ಬಿಟ್ಟುಹೋಗಲು ನಿರ್ಧರಿಸಿದೆ. ನಮಗೆ ಹೆಚ್ಚಿಗೆ ಸಮಯ ಇರಲಿಲ್ಲ...’’

ಆಹಾ! ತಾನು ಮಿಸ್‌ ಮಾಡಿಕೊಂಡ ಆ ಎಲ್ಲಾ ಕರೆಗಳು ಯಾರವು ಎಂದು ಈಗ ಅನೂಗೆ ಗೊತ್ತಾಯಿತು. ಅವು ರೂಪಾಳ ಕರೆಗಳು ಎಂದು ಇಲ್ಲಿಯ ತನಕ ಭಾವಿಸಿದ್ದಳು.

‘‘ನನಗೆ ಜಾಸ್ತಿ ಸಮಯ ಇರಲಿಲ್ಲ. ಅವತ್ತು ರಾತ್ರಿಗೆ ನಾನು ಭಾರತಕ್ಕೆ ಹೊರಡುವ ವಿಮಾನವನ್ನು ಹಿಡಿಯಬೇಕಿತ್ತು. ದೀಪಕ್‌ ಮನೆಗೆ ಬರುವ ಮುಂಚೆಯೆ ನಾನು ಬೆಟ್ಟದ ಮೇಲಕ್ಕೆ ಹೋಗಿ ಅವಳನ್ನು ಕರೆದುಕೊಂಡು ಬರಬಹುದೆಂದು ಲೆಕ್ಕ ಹಾಕಿದೆ. ರೂಪಾಗೆ ಸಿದ್ಧವಾಗಿರಲು ತಿಳಿಸಿ, ದಾರಿಯಲ್ಲಿ ಸೆಲ್‌ಫೋನ್‌ನಿಂದ ಕರೆ ಮಾಡುವುದಾಗಿ ತಿಳಿಸಿದೆ.

‘‘ಅವಳಿಗೆ ಅಷ್ಟು ಹೇಳಿ ಮೇಜಿನ ಬಳಿಗೆ ಹಿಂದಿರುಗಿದಾಗ, ತನಗೆ ಹೆಣ್ಣು ಮಗುವಾಗುತ್ತಿರುವುದರಿಂದ ತನ್ನ ಹೆಂಡತಿಗೆ ಗರ್ಭಪಾತ ಮಾಡಿಸುವುದಾಗಿ ದೀಪಕ್‌ ಅಲ್ಲಿರುವವರಿಗೆ ಹೇಳುತ್ತಿದ್ದ... ಅವನು ಅಂತಹ ಕೆಲಸ ಮಾಡಲಿದ್ದಾನೆ ಎಂದು ಕೇಳಿ ನನಗೆ ದಿಗ್ಭ್ರಮೆಯಾಯಿತು. ಅದೇ ಸಮಯದಲ್ಲಿ ನೀನು ಡ್ಯಾನ್‌ ಜೊತೆ ಎಲ್ಲೋ ಹೋಗಿರುವೆ ಎಂದುಕೊಂಡು ಮೈಯೆಲ್ಲ ಉರಿಯಿತು. ರೂಪಾ ಭಾರತದಲ್ಲಿನ ತನ್ನವರ ಮನೆಗೆ ಹಿಂದಿರುಗಲು ಸಾಧ್ಯವಾಗದೆ ಇರುವುದಕ್ಕೆ ಬಹಳ ಕೋಪ ಬಂತು... ಇದಕ್ಕೆಲ್ಲ ದೀಪಕನೆ ಕಾರಣ. ಈಗ ಅವನ ಪಾಪದ ಕೊಡ ತುಂಬಿದೆ, ಇನ್ನು ಅವನಿಗೆ ಕರ್ಮ ಕಾಣಿಸಬೇಕು ಎಂದು ನಿಶ್ಚಯಿಸಿದೆ. ರೂಪ ಹೇಗಾದರೂ ಸರಿ ಅಲ್ಲಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಲು ತೀರ್ಮಾನಿಸಿದೆ.

‘‘ನಾನು ನನ್ನ ಬಾಡಿಗೆ ಕಾರಿನ ಹತ್ತಿರ ಹೋಗಿ, ಅದರ ಟ್ರಂಕಿನಿಂದ ಕಬ್ಬಿಣದ ಟೈರ್‌ ರಾಡನ್ನು ತೆಗೆದು ನನ್ನ ಸೀಟಿನ ಪಕ್ಕ ಇಟ್ಟುಕೊಂಡೆ. ಅವನು ನನಗಿಂತ ದೊಡ್ಡ ಆಸಾಮಿ, ಬಲಿಷ್ಠ. ಏನಾದರು ಅವನು ಎದುರು ಬಿದ್ದು ತೊಂದರೆ ಕೊಟ್ಟರೆ ಅಂತಹ ಯಾವುದಾದರೂ ಆಯುಧ ಸಹಾಯಕ್ಕೆ ಬರುತ್ತದೆ ಎಂದುಕೊಂಡೆ. ಆಗ ಅಲ್ಲಿಗೆ ಬಂದ ದೀಪಕ್‌, ಮನೆಗೆ ಬಂದು ಇನ್ನೂ ಸ್ವಲ್ಪ ಡ್ರಿಂಕ್ಸ್‌ ತೆಗೆದುಕೊಂಡು ಹೋಗು ಎಂದು ಆಹ್ವಾನಿಸಿ ನನ್ನ ಕೆಲಸ ಇನ್ನೂ ಸುಲಭ ಮಾಡಿದ... ಅದು ವಾರೆಕೋರೆಯ ಬೆಟ್ಟದ ಮೇಲಿನ ಅಪಾಯಕಾರಿ ರಸ್ತೆ. ಅದರ ಜೊತೆಗೆ ನಾನು ಎಂದೂ ಅವನ ಮನೆಗೆ ಹೋಗಿರಲಿಲ್ಲ, ಹಾಗಾಗಿ ದಾರಿ ಬೇರೆ ಗೊತ್ತಿರಲಿಲ್ಲ. ಆದ್ದರಿಂದ ಅವನನ್ನು ಹಿಂಬಾಲಿಸುತ್ತೇನೆಂದು ಹೇಳಿ ಅವನ ಹಿಂದೆಯೆ ಹೊರಟೆ.

‘‘ಆಗ ನನಗೆ ಇನ್ನೊಂದು ತರಹದ ಯೋಚನೆಗಳು ಬರಲು ಪ್ರಾರಂಭವಾಯಿತು. ಅವರವರ ಕರ್ಮ ಅವರಿಗೆ ಎಂದುಕೊಂಡೆ. ಇದೆಲ್ಲ ನನಗೆ ಯಾಕೆ ಎನ್ನಿಸಿತು. ನಾನು ಸುಮ್ಮನೆ ಒಳಗೆ ಹೋಗುವುದು, ಅವನ ಆತಿಥ್ಯವನ್ನು ಸ್ವೀಕರಿಸುವುದು, ಸಮಯ ನೋಡಿಕೊಂಡು ರೂಪಾಳನ್ನು ಪಕ್ಕಕ್ಕೆ ಕರೆದು ಅವಳಿಗೆ ಇವೆಲ್ಲವನ್ನು ಅರ್ಥಮಾಡಿಸಲು ಪ್ರಯತ್ನಿಸುವುದು, ಎಂದುಕೊಂಡೆ. ಆದರೆ ಆಗ ರೂಪ ನನ್ನ ಸೆಲ್‌ಫೋನ್‌ಗೆ ಕರೆ ಮಾಡಿದಳು. ತಾನು ಎಲ್ಲವನ್ನೂ ಪ್ಯಾಕ್‌ ಮಾಡಿಕೊಂಡು, ಸಿದ್ಧವಾಗಿದ್ದೇನೆಂದು ತಿಳಿಸಿದಳು!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+