ಸಿಂಗಪುರ ಕನ್ನಡಿಗರನ್ನು ಸೂಜಿಗಲ್ಲಿನಂತೆ ಸೆಳೆದ ವಚನಾಂಜಲಿ

By: ವೆಂಕಟ್, ಸಿಂಗಪುರ
Subscribe to Oneindia Kannada

ಕನ್ನಡ ಸಂಘ (ಸಿಂಗಪುರ) ಹಾಗೂ ಟ್ಯಾಂಪನೀಸ್ ಈಸ್ಟ್ ಕಮ್ಯುನಿಟಿ ಸೆಂಟರ್ ಜಂಟೀ ಸಹಯೋಗದಲ್ಲಿ "ವಚನಾಂಜಲಿ-2016" ಕಾರ್ಯಕ್ರಮವನ್ನು ಜುಲೈ 30ರಂದು ಟ್ಯಾಂಪನೀಸ್ ಈಸ್ಟ್ ಸಮದಾಯ ಭವನದ ಸಭಾಂಗಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ಸರ್ವಕಾಲಿಕವಾದ ವಚನ ಸಾಹಿತ್ಯದ ಮಹತ್ವವನ್ನು ಕನ್ನಡಿಗರಿಗೆ ಹಾಗೂ ಕನ್ನಡೇತರರಿಗೂ ಹರಡುವ ಸದುದ್ದೇಶದ ಕೈಂಕರ್ಯವೇ "ವಚನಾಂಜಲಿ". ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತ ಸಾಧ್ವಿ ಸಂಧ್ಯಾ ಹಾಗೂ ಸ್ನೇಹಲತ ಅವರು ಎಲ್ಲರಿಗೂ ಸ್ವಾಗತ ಕೋರಿ, ವಚನಗಳ ಮಹತ್ವವನ್ನು ತಿಳಿಸುತ್ತಾ ಪ್ರಾರ್ಥನಾ ಗೀತೆಯನ್ನು ಪ್ರಸ್ತುತಪಡಿಸಲು ಕೋರಿದರು.

ಕಾರ್ಯಕ್ರಮವು ಮುಪ್ಪಿನ ಷಡಕ್ಷರಿ ಅವರ "ಸಕಲಕೆಲ್ಲಕೆ ನೀನೆ ಅಕಳಂಕ ಗುರುವೆಂದು" ಎನ್ನುವ ವಚನಕ್ಕೆ, ವಿದುಷಿ ಅಶ್ವಿನಿ ಸತೀಶ್ ಅವರ ರಾಗ ಸಂಯೋಜನೆಯಲ್ಲಿ ಕುಮಾರಿಯರಾದ ದಿಶಾ, ಹರಿಣಿ, ಸಂಜನ, ಧನ್ಯಾ, ತನ್ವಿ, ಅನುಷ್ಕಾ, ಚೈತ್ರಾ ಜಗದೀಶ್ ಹಾಗೂ ಲೋಕೆಶ್ವರಿ ಸುಶ್ರಾವ್ಯವಾಗಿ ಹಾಡಿದರು. ಪಕ್ಕವಾದ್ಯದಲ್ಲಿ ಕಿಶನ್ (ವಯಲಿನ್), ಚೈತ್ರಾ ಅರ್ಚಕ್ (ಕೀ ಬೋರ್ಡ್) ಸಹಕಾರ ನೀಡಿದರು.

Vachananjali 2016 by Singapore Kannada Sangha

ಕನ್ನಡ ಸಂಘ(ಸಿಂಗಪುರ)ದ ಅಧ್ಯಕ್ಷರಾದ ವಿಜಯ ರಂಗ ಪ್ರಸಾದ, ಟ್ಯಾಂಪನೀಸ್ ಸಿಸಿ ಯ ಛೇರ್ಮನ್ ಮುರಳಿ, ಮುಖ್ಯ ಅತಿಥಿಗಳಾದ ಗೊ.ರು.ಚನ್ನಬಸಪ್ಪ, ನಾದನಿಧಿ ಡಾ. ಭಾಗ್ಯಮೂರ್ತಿ, ನಾಗರತ್ನ ನಾಗರಾಜು ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆಯನ್ನು ನೀಡಿದರು.

ವಿಜಯ ರಂಗ ಪ್ರಸಾದ ಅವರು ತಮ್ಮ ಸಾಂದರ್ಭಿಕ ನುಡಿಯಲ್ಲಿ, ಕನ್ನಡ ಸಂಘ (ಸಿಂಗಪುರ)ದ ಆಶ್ರಯದಲ್ಲಿ ಪ್ರಾರಂಭಗೊಂಡ "ವಚನಾಂಜಲಿ" ಕಾರ್ಯಕ್ರಮ ಹೊಸ ಹೊಸ ರೂಪಗಳನ್ನು ಪಡೆಯುತ್ತಾ, ಯಾವುದೇ ಸಮುದಾಯಕ್ಕೆ ಸೀಮಿತಗೊಳ್ಳದೇ ಸಮಸ್ತ ಸಿಂಗಪುರ ಕನ್ನಡಿಗರಿಗೆ ತಲುಪವಲ್ಲಿ ಯಶಸ್ವಿಗೊಳ್ಳುತ್ತಿರುವುದು ಹೆಮ್ಮೆಯ ವಿಷಯವೆಂದು ತಿಳಿಸಿದರು.

ಚಿಂತಕ, ಹಿರಿಯ ಸಾಹಿತಿ ಹಾಗೂ ಜಾನಪದ ತಜ್ಞ ಗೊ.ರು.ಚನ್ನಬಸಪ್ಪ ಅವರು 'ವಚನ ಸಾಹಿತ್ಯ ಹಾಗೂ ಜೀವನದ ಮೌಲ್ಯಗಳು' ಎಂಬ ವಿಷಯವನ್ನುದ್ದೇಶಿಸಿ ಮಾತನಾಡುತ್ತಾ, ವಚನ ಸಾಹಿತ್ಯವು ವ್ಯಕ್ತಿ ಪ್ರತಿಷ್ಠೆಯ ಸಾಹಿತ್ಯವಲ್ಲದೆ ಸಮುಕ್ತಿ ದೃಷ್ಟಿಯ ಸಾಹಿತ್ಯ, ಮನಸನ್ನು ನೇರವಾಗಿ ಮುಟ್ಟುವ ಸಾಹಿತ್ಯ ಪ್ರಾಕಾರಗಳಾದ ವಚನ, ದಾಸ ಹಾಗೂ ಜನಪದ ಸಾಹಿತ್ಯಗಳು ಹೃದಯದಿಂದ ಹೃದಯಕ್ಕೆ ಸಲ್ಲುವ ಸಾಹಿತ್ಯ ಎಂದರು.

ಇವುಗಳ ಮೂಲಕ ಜೀವನದ ಮೌಲ್ಯ, ವಾಸ್ತವ ಸತ್ಯ, ವಸ್ತುನಿಷ್ಠತೆಯನ್ನು ನೋಡಬಹುದು. ಜೇನಿನಲ್ಲಿ ಸಿಹಿಯನ್ನು ಹುಡುಕಬಾರದು. ಏಕೆಂದರೆ ಜೇನೆ ಸಿಹಿ ಎಂದು ಹೇಳುತ್ತಾ ಸಮಸ್ತ ವಚನಗಳೇ ಜೀವನದ ಮೌಲ್ಯ ಎಂದು ಸಾರಿದರು. ವಸಂತ ಕುಲಕರ್ಣಿ ಅವರ ನಿರೂಪಣೆಯಲ್ಲಿ, ಗೊ.ರು.ಚನ್ನಬಸಪ್ಪ ಅವರೊಂದಿಗೆ ನಡೆದ ಈ ವಿಚಾರ ಸಂಕಿರಣದಲ್ಲಿ ಗೊ.ರು.ಚ ಅವರು, ಪ್ರಶ್ನೆಗಳಿಗೆ ಉತ್ತರಿಸುತ್ತಾ, 12ನೇ ಶತಮಾನದಲ್ಲಿ ನಡೆದ ಕ್ರಾಂತಿಕಾರಿ ಆಂದೋಲನ ಸಮಾನ ಸಾಮಾಜ್ಯದ ಮೌಲ್ಯಗಳನ್ನು ಎತ್ತಿ ಹಿಡಿದು, ಕಾಯಕಕ್ಕೆ ಹೆಚ್ಚು ಮನ್ನಣೆ ಕೊಟ್ಟಿತು ಎಂದು ಹೇಳಿದರು.

Vachananjali 2016 by Singapore Kannada Sangha

ವಚನಗಳ ಸಮೂಹ ಗಾಯನ ಹಾಗೂ ನೃತ್ಯ : ಡಾ.ಭಾಗ್ಯಮೂರ್ತಿಯವರೊಡಗೂಡಿ, ವಿದುಷಿ ಅಶ್ವಿನಿ ಸತೀಶ್, ವಿದುಷಿ ಶೋಭಾ ರಘುನಾಥ್, ವಿದುಷಿ ಶೃತಿ ಆನಂದ್, ವಿದುಷಿ ಪ್ರತಿಮಾ ಬೆಳ್ಳಾವೆ, ವಿದುಷಿ ಪದ್ಮಿನಿ ಶ್ರೀನಿಧಿ ಹಾಗೂ ಪಕ್ಕವಾದ್ಯದಲ್ಲಿ ವಿದ್ವಾನ್ ತಿರುಚಿ ಎಲ್. ಸರವನನ್ (ಕೊಳಲು), ವಿದ್ವಾನ್ ಪವನ್ (ವಯಲಿನ್), ವಿದ್ವಾನ್ ರಾಜ ಸುಬ್ಬು (ಮೃದಂಗ) ಅವರ ಅಮೋಘ ಸಮ್ಮಿಲನದಲ್ಲಿ ನಡೆದ ವಚನಗಳ ಸಮೂಹ ಗಾಯನ ಇಡೀ ಸಭಾಂಗಣವನ್ನು ವಚನಾಮೃತ ಗೊಳಿಸಿತ್ತು.

ಅಲ್ಲಮಪ್ರಭುಗಳ "ತೋರುವುದೆಲ್ಲಾ ಬೇರಾಗಿ ಕಾಂಬುದು", ಬಸವಣ್ಣನವರ "ಅಂಕ ಕಂಡ ಕೋಲಾಸೆ ಮತ್ತೇಕಯ್ಯ", ಸಿದ್ದರಾಮಯ್ಯನವರ ಜನಪದ ಶೈಲಿಯ ವಚನ "ಸಿದ್ಧಾಂತಿಯ ಜ್ಞಾನ ಸಾಧನೆಯಲ್ಲಿ ಹೋಯಿತ್ತು", "ಜಗವನಾಡಿವನು ಜಗವನೇಡಿಸುವನು", ಮುಕ್ತಾಯಕ್ಕನವರ "ನುಡಿಯಲು ಬಾರದು ಕೆಟ್ಟ ನುಡಿಗಳ", ಜಿ.ವಿ.ರೇಣುಕಾ ಅವರ "ಛಲವಿರಬೇಕಯ್ಯ ಮನದಲ್ಲಿ ಗುರಿ ಸಾಧಿಸುವೆನೆನ್ನುವ" ವಚನಗಳಿಗೆ ರಾಗ ಸಂಯೋಜಿಸಿ ಪ್ರಸ್ತುತ ಪಡಿಸಿದರು.

ಕರ್ನಾಟಕದಿಂದ ಆಗಮಿಸಿದ ಅತಿಥಿ ಕಲಾವಿದರಾದ ಪ್ರಖ್ಯಾತ ನೃತ್ಯ ಗುರು, ವಿದುಷಿ ನಾಗರತ್ನ ನಾಗರಾಜ ಹಡಗಲಿ ಮತ್ತು ಅವರ ತಂಡವು ವಚನಗಳಿಗೆ ನೃತ್ಯವನ್ನು ಪ್ರದರ್ಶಿಸಿತು. ಧಾರವಾಡದ "ರತಿಕಾ ನೃತ್ಯ ನಿಕೇತನ" ತಂಡವು ವಚನಗಳಿಗೆ ನೃತ್ಯದ ಪ್ರಾಕಾರಗಳಾದ ಭರತ್ಯನಾಟ್ಯ, ಕಥಕ್ ಹಾಗೂ ಜನಪದ ಶೈಲಿಗಳಲ್ಲಿ ಅಮೋಘವಾದಂತಹ ನೃತ್ಯವನ್ನು ಪ್ರದರ್ಶಿಸಿ ಪ್ರೇಕ್ಷಕರ ಮನಸೂರೆಗೊಂಡಿತು.

ಕುಮಾರಿಯರಾದ ವೈಷ್ಣವಿ ಇಟಗಿ, ಸೃಷ್ಟಿ ಕುಲಕರ್ಣಿ, ಅನನ್ಯ ದತ್ತವಾಡ್, ದಿವ್ಯಾ ಕೊಲಕೂರ ಮತ್ತು ವೈಷ್ಣವಿ ಹಿರೇಮಠ್ ಅವರು ತಮ್ಮ ಮನೋಜ್ಞ ಅಭಿನಯ, ನೃತ್ಯ ಹಾಗೂ ವಿವಿಧ ಬಗೆಯ ಉಡುಗೆ ತೊಡುಗೆಗಳಲ್ಲಿ ವಚನಗಳ ಸಾರವನ್ನು ನೃತ್ಯದ ಮೂಲಕ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾದರು.

ವಚನ ಪಠನ ಹಾಗೂ ಪ್ರಬಂಧ ಸ್ಪರ್ಧೆಗಳು : ವಚನಗಳ ಸಾರಾಮೃತವನ್ನು ವಿವಿಧ ರೂಪಗಳಲ್ಲಿ ಹರಡುವ ಸಂಘದ ಸದುದ್ದೇಶದ ಕಾರ್ಯಗಳಲ್ಲಿ ವಚನಗಳ ಪಠನ ಹಾಗೂ ಪ್ರಬಂಧ ಸ್ಪರ್ಧೆಗಳು ಪ್ರತೀ ವರ್ಷ ವೃದ್ಧಿಗೊಳ್ಳುತ್ತಿರುವುದು ಸ್ವಾಗತಾರ್ಹ ಹಾಗೂ ಗಮನೀಯವಾದಂತಹ ಬೆಳವಣಿಗೆ. ವಯೋಮಿತಿಗನುಗುಣವಾಗಿ ವಿವಿಧ ಭಾಗಗಳಲ್ಲಿ ನಡೆದ ಸ್ಪರ್ಧೆಗಳು ಮಕ್ಕಳಿಗೆ, ಹಿರಿಯರಿಗೆ ಹಾಗೂ ಪೋಷಕರಿಗೆ ವಚನಗಳನ್ನು ಪರಾಮರ್ಶಿಸುವ ಸುಯೋಗವನ್ನು ಒದಗಿಸಿಕೊಟ್ಟವೆಂದರೆ ಅತಿಶಯೋಕ್ತಿಯಲ್ಲ.

ಜುಲೈ 24ರಂದು ನಡೆದ ಸ್ಪರ್ಧೆಗಳ ಫಲಿತಾಂಶವನ್ನು ಪ್ರಕಟಿಸಿ ವಿಜೇತರಿಗೆ ವಿಜಯ ರಂಗ ಪ್ರಸಾದ, ಟ್ಯಾಂಪನೀಸ್ ಸಿಸಿಯ ಛೇರ್ಮನ್ ಮುರಳಿ, ಮುಖ್ಯ ಅತಿಥಿಗಳಾದ ಗೊ.ರು.ಚನ್ನಬಸಪ್ಪ ಅವರ ಸಮ್ಮುಖದಲ್ಲಿ ಪ್ರಮಾಣ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು.

ಸ್ಪರ್ಧೆಯ ವಿಜೇತರು : ವಚನ ಪಠನ ಸ್ಪರ್ಧೆಗಳ ಸಬ್-ಜೂನಿಯರ್ ವಿಭಾಗದಲ್ಲಿ ಶ್ರೀಸ್ತುತಿ ಸಿ.ಕೊಳಕಿ (ಮೊದಲನೇಯ), ಶಂಕರಿ ಮಳಲಿ ಹಾಗೂ ಅದ್ವೈತ್ ಆತ್ರೇಯ (ಎರಡನೇಯ), ಮಾನ್ಯ ಗದ್ದೆಮನೆ (ಮೂರನೇಯ), ಛಾರ್ವಿ (ನಾಲ್ಕನೇಯ), ಶೃತಾ ಬಾಲಾಜಿ & ಸಂಕೀರ್ತ್ ಐತ್ರಾಜ್ (ಸಮಾಧಾನಕರ) ಬಹುಮಾನವನ್ನು ಪಡೆದರು.

ಜೂನಿಯರ್ ವಿಭಾಗದಲ್ಲಿ ಅಮೋಘ್ ಆತ್ರೇಯ (ಮೊದಲನೇಯ), ಧನ್ಯಾ ಅಯ್ಯರ್ (ಎರಡನೇಯ), ಹಿತೈಷಿ & ವೇದಾ ಭಟ್ (ಮೂರನೇಯ), ನವ್ಯ ಶ್ರೀ (ನಾಲ್ಕನೇಯ), ಶೃತಾ ಬಾಲಾಜಿ & ಸಂಕೀರ್ತ್ ಐತ್ರಾಜ್ (ಸಮಾಧಾನಕರ) ಬಹುಮಾನವನ್ನು ಪಡೆದರು.

ಪ್ರಬಂಧ ಸ್ಪರ್ಧೆಗಳ ಸಿನೀಯರ್ ವಿಭಾಗದಲ್ಲಿ ಧೃತಿ ಭಟ್ಟ (ಮೊದಲನೇಯ) ಸವಿ ಸಿ.ಸುರೇಂದ್ರ (ಎರಡನೇಯ), ರಾಹುಲ್ ಖಡ್ಕೆ (ಮೂರನೇಯ) ಬಹುಮಾನ ಪಡೆದರೆ, ಹಿರಿಯರ ವಿಭಾಗದಲ್ಲಿ ನೀಲಾಂಬಿಕ ಪಾಟೀಲ್ (ಮೊದಲನೇಯ), ಸುನೀತಾ ಕಾರ್ತೀಕ್ (ಎರಡನೇಯ) ಹಾಗು ಕಾವ್ಯ ಅನಂತರಾಮ(ಮೂರನೇಯ) ಬಹುಮಾನವನ್ನು ಪಡೆದರು.

ಸಂಘದ ಉಪಾಧ್ಯಕ್ಷರಾದ ಸುರೇಶ ಭಟ್ಟ ಅವರು ಸಮಾರೋಪ ಭಾಷಣದಲ್ಲಿ ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯನ್ನು ನಿಭಾಯಿಸಿದ ರಷ್ಮಿ ಉದಯಕುಮಾರ್, ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾದ Ozone Group ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸಿದ ಎಲ್ಲಾ ಸ್ವಯಂ ಸೇವಕರಿಗೆ ವಂದನೆಗಳನ್ನು ತಿಳಿಸಿದರು.

ಸಂಘದ ಪರವಾಗಿ ಗೊ.ರು.ಚ ಹಾಗೂ ಟ್ಯಾಂಪನೀಸ್ ಸಿ.ಸಿಯ ಛೇರ್ಮನ್ ಮುರಳಿ ಅವರಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ ಜಯಪ್ರಕಾಶ್, ಕವಿತಾ ಬಾದಾಮಿ ಹಾಗೂ ವೆಂಕಟ್ ಅವರಿಗೆ ಸಂಘದ ಪರವಾಗಿ ವಂದನೆಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಕಲಾವಿದರಿಗೂ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.

ವರದಿ - ವೆಂಕಟ್
ಪೊಟೋಗ್ರಫಿ - ಸಮಂತ್ ಯಾದವ್ ಹಾಗೂ ರಮೇಶ್ ನಾಡಗೌಡ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vachananjali 2016 program was held in Singapore by Kannada Sangha Singapore in association with Tampines East Community Club on 30th July in a grand fashion. Kannada writer, folk expert Go Ru Channabasappa was the chief guest.
Please Wait while comments are loading...