ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಾರ ಸಮ್ಮೇಳನದಲ್ಲಿ ಸ್ಥಳೀಯರ ಪ್ರತಿಭಾ ಪ್ರದರ್ಶನ

ಅಕ್ಟೋಬರ್ 29 ಮತ್ತು 30ರಂದು 20ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಿಂಗಪುರ ಕನ್ನಡ ಸಂಘದ 'ಸಿಂಗಾರ ಸಮ್ಮೇಳನ 2016'ಕ್ಕೆ ದಿನಗಣನೆ ಆರಂಭವಾಗಿದೆ. ಈ ಸಮ್ಮೇಳನ ಸ್ಥಳೀಯ ಪ್ರತಿಭೆಗಳ ಪ್ರತಿಭಾ ಪ್ರದರ್ಧನಕ್ಕೂ ವೇದಿಕೆ ಕಲ್ಪಿಸಲಿದೆ.

By ಶ್ರೀವಿದ್ಯಾ, ಸಿಂಗಪುರ
|
Google Oneindia Kannada News

ಕನ್ನಡ ಸಂಘ(ಸಿಂಗಪುರ)ವು ಈ ವರ್ಷ ತನ್ನ ಇಪ್ಪತ್ತನೆಯ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ, ಇದೇ 2016ರ ಅಕ್ಟೋಬರ್ 29-30ರಂದು ಸಿಂಗಪುರ ಪಾಲಿಟೆಕ್ನಿಕ್ ಕನ್ವೆನ್ಷನ್ ಸೆಂಟರ್‌ನ ಸಭಾಂಗಣದಲ್ಲಿ ನಡೆಯಲಿರುವ "ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನ"ವನ್ನು ವೈಭವದಿಂದ ಆಚರಿಸಲು ಎಲ್ಲಾ ಸಿದ್ದತೆಗಳನ್ನು ನಡೆಸುತ್ತಿದೆ.

ಈ ಕಾರ್ಯಕ್ರಮದ ಅಂಗವಾಗಿ, ಅನೇಕ ಸುಪ್ರಸಿದ್ಧ ಕಲಾವಿದರು, ಸಾಹಿತಿಗಳು, ಗಾಯಕರು, ಸಂಗೀತಗಾರರು ಆಗಮಿಸುತ್ತಿದ್ದಾರೆ. ಹೊರಗಿನಿಂದ ಬರುವ ಕಲಾವಿದರಷ್ಟೇ ಅಲ್ಲ, ಸ್ಥಳೀಯ ಕಲಾವಿದರು ಕೂಡ ಈ ಸಮ್ಮೇಳನಕ್ಕೆ ಅತ್ಯುತ್ಸಾಹದಿಂದ ಸಜ್ಜಾಗುತ್ತಿದ್ದಾರೆ.

ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡಲು ತಯಾರಾಗುತ್ತಿರುವ ನಮ್ಮ ಹೆಮ್ಮೆಯ ಸ್ಥಳೀಯ ಕಲಾವಿದರು ಪ್ರಸ್ತುತ ಪಡಿಸುವ ಕಾರ್ಯಕ್ರಮಗಳ ಒಂದು ಪಕ್ಷಿನೋಟ ಇಲ್ಲಿದೆ.

Talent show by local artists at Singara Sammelana

ಸಮೂಹ ಗಾಯನ : ಅಶ್ವಿನಿ ಸತೀಶ್ ವೃಂದದವರಿಂದ

ಆಕಾಶವಾಣಿ ಬೆಂಗಳೂರಿನ B HIGH ಶ್ರೇಣಿಯಲ್ಲಿ ಕರ್ನಾಟಕ ಶಾಸ್ತ್ರೀಯ, ಲಘು ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತ ಕಲಾವಿದೆಯಾದ ಅಶ್ವಿನಿ ಸತೀಶ್ ಅವರು ದುಬೈನಲ್ಲಿ ಕೆಲವು ವರ್ಷಗಳಿದ್ದು, ಸಿಂಗಪುರಕ್ಕೆ ಬಂದದ್ದು 2012ರ ಉತ್ತರಾರ್ಧದಲ್ಲಿ.

ವಿದುಷಿ ಡಾ.ಟಿ.ಎಸ್. ಸತ್ಯವತಿ ಅವರ ಬಳಿ ಸಂಗೀತ ಕಲಿತ ಅಶ್ವಿನಿ ಅವರು ಭಾರತ, ಅಮೆರಿಕ ಹಾಗೂ ಸಿಂಗಪುರದ ಸಂಗೀತಾರ್ಥಿಗಳಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಕ್ಷಣ ನೀಡುತ್ತಿದ್ದು, ತಮ್ಮದೇ ಹಲವಾರು ಸಂಗೀತ ಸುರುಳಿಗಳನ್ನೂ ಬಿಡುಗಡೆ ಮಾಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಸಂಗೀತಾರ್ಥಿಗಳು ಕನ್ನಡ ಸಮ್ಮೇಳನದಲ್ಲಿ ಹಾಡಿ ರಂಜಿಸಲಿದ್ದಾರೆ.

ಡಾ. ಭಾಗ್ಯ ಮೂರ್ತಿ ತಂಡದವರಿಂದ

ಕಳೆದ ಮೂರು ದಶಕಗಳಿಂದ ಸಿಂಗಪುರದಲ್ಲಿ ಗಾಯಕಿ, ಸಂಗೀತ ಸಂಯೋಜಕಿ ಮತ್ತು ನಿರ್ದೇಶಕಿಯಾಗಿ ಪ್ರಸಿದ್ಧಿ ಪಡೆದಿರುವ ಡಾ. ಭಾಗ್ಯ ಮೂರ್ತಿಯವರು ಸಿಂಗಪುರದಲ್ಲಿ ಹಲವಾರು ಕಡೆ ಕರ್ನಾಟಕ ಸಂಗೀತದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಂಗೀತಾಸಕ್ತರನ್ನೆಲ್ಲರನ್ನೂ ಮಕ್ಕಳಂತೆ ನೋಡಿಕೊಳ್ಳುವ ಈ "ಸಂಗೀತ ಸರಸ್ವತಿ", "ಗೀತ ಕಲಾ ನಿಪುಣ", "ನಾದ ನಿಧಿ" ಗಾನ ಕೋಗಿಲೆಗೆ ಸಿಂಗಪುರ ಮತ್ತು ದ್ವೀಪದಾಚೆಯೂ ಹಲವಾರು ಶಿಷ್ಯಂದಿರಿದ್ದಾರೆ. ಇವರಿಗೆ "ಸಿಂಗೈ-ಗಾಮ" ಪ್ರಶಸ್ತಿ ಸಿಕ್ಕಿದೆ ಹಾಗೂ ಜೀವಮಾನದಲ್ಲಿ ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿದ ಶ್ರೀಲಂಕಾ ವಿಶ್ವವಿದ್ಯಾನಿಲಯ "ಗೌರವ ಡಾಕ್ಟರೇಟ್" ಪ್ರಶಸ್ತಿ ನೀಡಿ ಗೌರವಿಸಿದೆ.

ಇವರ ನಿರ್ದೇಶನದಲ್ಲಿ ಸರಿ ಸುಮಾರು ಮೂವತ್ತಕ್ಕೂ ಹೆಚ್ಚು ಸಿಂಗನ್ನಡಿಗರು, ನಮ್ಮ ಸ್ಥಳೀಯ ಕನ್ನಡ ಬರಹಗಾರ, ಕವಿಯೊಬ್ಬರು ಈ ಸುಸಂದರ್ಭಕ್ಕೆಂದೇ ರಚಿಸಲಾದ ಸುಂದರ ಕವಿತೆಯೊಂದನ್ನು ಸುಶ್ರಾವ್ಯವಾಗಿ ಹಾಡಲು ಸಜ್ಜಾಗುತ್ತಿದ್ದಾರೆ. ಹಿರಿಯರಿಂದ ಕಿರಿಯರವರೆಗೂ ಎಲ್ಲ ವಯಸ್ಸಿನವರೂ ಭಾಗವಹಿಸಿ ಪ್ರಸ್ತುತ ಪಡಿಸಲಿರುವ ಸಿಂಗನ್ನಡ ಗೀತೆಯು ನಮ್ಮ ಸಂಸ್ಕೃತಿ ಸಮ್ಮೇಳನಕ್ಕೆ ವಿಶೇಷ ಕಲೆ ತರುವುದರಲ್ಲಿ ಸಂದೇಹವೇ ಇಲ್ಲ.

ಶೃತಿ ಆನಂದ್ ತಂಡದವರಿಂದ

ಸಂಗೀತ ಕಲಾನಿಧಿ ವಿದುಷಿ ಆರ್. ವೇದವಲ್ಲಿ, ಎಂ.ಎಸ್. ಶೀಲಾ ಮತ್ತು ಎಂ.ಎಸ್ ಸರಸ್ವತಿಯವರಲ್ಲಿ ಸಂಗೀತ ಶಿಕ್ಷಣವನ್ನು ಪಡೆದಿರುವ ಶೃತಿಯವರು ಸಿಂಗಪುರ ಮತ್ತು ಭಾರತದಲ್ಲಿ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿರುವುದಲ್ಲದೇ, 2008ರಲ್ಲಿ ರಂಗಾಪುರವಿಹಾರ ಎಂಬ ಧ್ವನಿಸಾಂದ್ರಿಕೆಯನ್ನು ಹೊರತಂದಿದ್ದಾರೆ. ಇವರ ನೇತೃತ್ವದಲ್ಲಿ ಹದಿನೈದಕ್ಕೂ ಹೆಚ್ಚಿನ ಚಿಣ್ಣರು ಭಾಗವಹಿಸಿ ವೃಂದಗಾನವೊಂದನ್ನು ಪ್ರಸ್ತುತ ಪಡಿಸಲು ಸಿದ್ಧರಾಗುತ್ತಿದ್ದಾರೆ.

ಉಪಾಸನಾ ಮೋಹನ್ ಶಿಬಿರಾರ್ಥಿ ಬಳಗ

ಕಳೆದ 18 ವರ್ಷಗಳಿಂದ ಸುಗಮ ಸಂಗೀತ ಕ್ಷೇತ್ರಕ್ಕೆ ತನ್ನನ್ನು ಅರ್ಪಿಸಿಕೊಂಡಿರುವ ಉಪಾಸನಾ, ಕರ್ನಾಟಕ ಹಾಗೂ ಕಡಲಾಚೆ ಬೆಳಗುತ್ತಿದೆ. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ರಾಗ ಸಂಯೋಜಕರಾಗಿ ಜನಮನ ಗೆದ್ದಿರುವ ಮೋಹನ್, ಬೆಂಗಳೂರಿನ ಸಂಗೀತ ಪ್ರಿಯರಿಗೆ ಉಪಾಸನಾ ಮೋಹನ್ ಎಂದೇ ಖ್ಯಾತರಾಗಿದ್ದಾರೆ.

ಎದೆಯೊಳಗೆ ಸಂಸ್ಕಾರದತ್ತವಾಗಿ ಅಡಗಿಸಿಕೊಂಡಿದ್ದ ಸಂಗೀತವನ್ನೇ ಬಾಳ ಸಂಗಾತಿಯನ್ನಾಗಿ ಮಾಡಿಕೊಂಡಿರುವ ಮೋಹನ್ ಚಿಕ್ಕವಯಸ್ಸಿನಲ್ಲೇ ಸಂಗೀತ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಈಗಾಗಲೇ 350ಕ್ಕೂ ಹೆಚ್ಚು ಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿ ಹಾಡಿದ್ದಾರೆ. ಇವರು ಸಿಂಗಪುರದಲ್ಲಿಯೂ ಕೂಡ ನಡೆಸಿದ ಭಾವಗೀತೆಗಳ ಶಿಬಿರದಲ್ಲಿ ಕಲಿತು ಹಾಡಿದ ಸುಮಾರು 25 ಜನ ಶಿಬಿರಾರ್ಥಿಗಳು ಮತ್ತೆ ಈ ಸಮ್ಮೇಳನದಲ್ಲಿ ಕವಿಪುಂಗವರ ಭಾವತುಂಬಿದ ಕನ್ನಡ ಗೀತೆಗಳನ್ನು ಹಾಡಲು ತಾಲೀಮು ನಡೆಸುತ್ತಿದ್ದಾರೆ.

ಕಿಂದರಿ ಜೋಗಿ ನೃತ್ಯ ರೂಪಕ

ಸಿಂಗಪುರದ ಸಿಂಗನ್ನಡಿಗ ಭರತನಾಟ್ಯ ಗುರುಗಳಾದ ವಿದುಷಿ M.S. ಶ್ರೀಲಕ್ಷ್ಮಿ ಯವರು "ನಾಟ್ಯರಂಜಿನಿ" ಕಲಾ ಸಂಸ್ಥೆಯ ಸ್ಥಾಪಕರು. ತಮ್ಮ ಮೂವತ್ತೈದು ವರ್ಷಗಳ ವೃತ್ತಿ ಜೀವನದಲ್ಲಿ ಸರಿಸುಮಾರು 400 ನೃತ್ಯ ಪ್ರದರ್ಶನವನ್ನು ನೀಡಿದ್ದಾರೆ.

"ನೃತ್ಯ ಶಿರೋಮಣಿ" ಮತ್ತು ಪ್ರತಿಷ್ಠಿತ "ಆರ್ಯಭಟ" ಪ್ರಶಸ್ತಿಗೆ ಭಾಜನರಾಗಿರುವ ಶ್ರೀಲಕ್ಷ್ಮಿಯವರ ನಿರ್ದೇಶನದಲ್ಲಿ ''ಕಿಂದರಿಜೋಗಿ'' ಎಂಬ ಕುವೆಂಪು ರಚಿತ ನಾಟಕವನ್ನಾಧರಿಸಿದ ನೃತ್ಯರೂಪಕ ಪ್ರದರ್ಶಿತಗೊಳ್ಳಲಿದೆ. ಹದಿನೈದಕ್ಕೂ ಹೆಚ್ಚು ಚಿಣ್ಣರು ಈ ಕಾರ್ಯಕ್ರಮಕ್ಕೆ ಭರದಿಂದ ತಾಲೀಮು ನಡೆಸುತ್ತಿದ್ದು, ಬರಲಿರುವ ಸಮ್ಮೇಳನದಲ್ಲಿ ಪ್ರೇಕ್ಷಕರನ್ನು ಮೋಡಿಮಾಡಲಿದ್ದಾರೆ.

ಜಗದ್ವಂದ್ಯ ಕೃಷ್ಣ - ನೃತ್ಯ ರೂಪಕ

ಕನ್ನಡ ರಾಜ್ಯೋತ್ಸವದ ಸಂಭ್ರಮದ ಜೊತೆಗೆ ದೀಪಾವಳಿಯ ಸಡಗರವು ಸಮ್ಮೇಳನದ ಅಂಗವಾಗಿ ಆಚರಿಸಲ್ಪಡುತ್ತಿದೆ. ನರಕಾಸುರನ ಸಂಹಾರವನ್ನು ಗೈಯ್ದ ಜಗದಂತರ್ಯಾಮಿ ಶ್ರೀ ಕೃಷ್ಣನ ಸ್ಮರಣೆಯನ್ನು ನೃತ್ಯ ರೂಪಕವಾಗಿ ಪ್ರಸ್ತುತ ಪಡಿಸಲಿದ್ದಾರೆ ಸಾಧನ ಜಯರಾಮ್ (Sadhana Performing Arts) ಅವರ ಶಿಷ್ಯ ವೃಂದ.

ಜಗದ್ವಂದ್ಯ ಕೃಷ್ಣ ಎಂಬ ಶಿರೋನಾಮದಡಿಯಲ್ಲಿ ಸ್ವಾಗತಂ ಕೃಷ್ಣ, ಕಾಳಿಂಗ ಮರ್ದನ, ದಶವತಾರ, ಮಾಧವ ಪಂಚಕ, ದ್ರೌಪದಿ ವಸ್ತ್ರಾಪಹರಣ, ಮುಂತಾದ ಸನ್ನಿವೇಶಗಳನ್ನು ಭರತನಾಟ್ಯದ ಮೂಲಕ ಪ್ರಸ್ತುತ ಪಡಿಸಲಿದ್ದಾರೆ.

ಫ್ಯಾಶನ್ ಶೋ

''ಕರುನಾಡ ಬಣ್ಣದ ಬೆಡಗು ಬಿನ್ನಾಣದ ಮೆರಗು'' ಎಂಬ ಅಡಿ ಬರಹವಿರುವ ವಸ್ತ್ರವಿನ್ಯಾಸ ಪ್ರದರ್ಶನವೊಂದು ಸಮ್ಮೇಳನದಲ್ಲಿ ಫ್ಯಾಶನ್ ಪ್ರಿಯರಿಗೆ ರಸದೌತಣ ಬಡಿಸಲು ಸಿದ್ಧವಾಗುತ್ತಿದೆ. ನಿರ್ಮಲಾ ಗೌಡ ಅವರ ನೇತೃತ್ವದಲ್ಲಿ ಸಿದ್ಧವಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಕಲಾತ್ಮಕ ಸಾಂಪ್ರದಾಯಿಕ ಹಾಗೂ ನವೀನ ಮಾದರಿಯ ವೈವಿಧ್ಯಮಯ ವಸ್ತ್ರವಿನ್ಯಾಸಗಳಲ್ಲಿ ಸುಮಾರು 20 ಸಿಂಗನ್ನಡ ರೂಪದರ್ಶಿಯರು ಕ್ಯಾಟ್ ವಾಕ್ ಮಾಡಲಿದ್ದಾರೆ.

ಮೌನ ಸಂದೇಶ - ಮುಖಾಭಿನಯ ಪ್ರದರ್ಶನ (MIME)

MIME ಎಂಬ ಮೂಕಾಭಿನಯ ಕಲೆಯ ಮೂಲಕ ಸಾಮಾಜಿಕ ಮತ್ತು ಪರಿಸರ ಜವಾಬ್ದಾರಿಗಳನ್ನು ಬಿಂಬಿಸುವ ಅಣಕು ಪ್ರದರ್ಶನಗಳನ್ನು ಸತತವಾಗಿ ನೀಡುತ್ತಾ ಬಂದಿರುವ ಯುವ ಕನ್ನಡಿಗರ "ಮೌನ ಸಂದೇಶ" ತಂಡ ಮತ್ತೊಮ್ಮೆ ತಮ್ಮ ಈ ವಿಶಿಷ್ಟ ಕಲಾಪ್ರಕಾರದ ಮೂಲಕ ಸಂಸ್ಕೃತಿ ಸಮ್ಮೇಳನದಲ್ಲಿ ಪರಿಸರ ಜಾಗೃತಿ ಮೂಡಿಸಲು ಸನ್ನದ್ಧವಾಗುತ್ತಿದೆ.

2015ರಲ್ಲಿ 8 ಜನರನ್ನೊಳಗೊಂಡ ನಮ್ಮ ಹೆಮ್ಮೆಯ ಯುವ ಕಲಾವಿದ ಪವನ್ ಜೋಶಿಯವರ ನೇತೃತ್ವದ ಈ ತಂಡ, ಕನ್ನಡ ಸಂಘ ಪ್ರತಿ ವರ್ಷ ನಡೆಸುವ ಸಿಂಗಾರ ಉತ್ಸವದಲ್ಲಿ 'ಗಾಂಧಿ ತತ್ವಗಳು ಮತ್ತು ಸಮಾಜದಲ್ಲಿ ಭ್ರಷ್ಟಾಚಾರ' ವಿಷಯವಾಗಿ ತಮ್ಮ ಮೊದಲ ಅಣಕು ಪ್ರದರ್ಶನ ನೀಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು.

ಹಲವಾರು ಕಾರ್ಯಕ್ರಮಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಯಶಸ್ವಿಯಾಗಿರುವ ಈ ತಂಡದ ಸದಸ್ಯರ ಸಂಖ್ಯೆ ಇಂದು ಇಪ್ಪತ್ತರವರೆಗೂ ಬೆಳೆದಿದೆ. ತಮ್ಮ ಅಣಕು ಪ್ರದರ್ಶನಗಳ ಮೂಲಕ ಯುವ ಪೀಳಿಗೆಯವರಲ್ಲಿ ಪರಿಸರ ಸ್ನೇಹ ಮತ್ತು ಸಾಮಾಜಿಕ ಕಳಕಳಿಯನ್ನು ಮೂಡಿಸಲು ಪ್ರಯತ್ನಿಸುತ್ತಿರುವ ಈ ಸಿಂಗನ್ನಡಿಗರ ಮೌನ ಸಂದೇಶ ತಂಡದ ಬರಲಿರುವ ಕಾರ್ಯಕ್ರಮವನ್ನು ಸಮ್ಮೇಳನದಲ್ಲಿ ನೋಡಲು ಮರೆಯದೇ ಭಾಗವಹಿಸಿ.

ವಾದ್ಯಗೋಷ್ಠಿ - ಯುವ ಕಲಾಭಾರತಿ ಪ್ರಶಸ್ತಿಗೆ ಭಾಜನರಾಗಿರುವ, ಪ್ರಖ್ಯಾತ ಕರ್ನಾಟಕ ಸಂಗೀತ ಪ್ರವೀಣೆ ವಿದುಷಿ ವೈಷ್ಣವಿ ಆನಂದ್ ಅವರ ನೇತೃತ್ವದಲ್ಲಿ "ಚೇತಾಸ್" ತಂಡದ ಶಿಷ್ಯವೃಂದವು ಶಾಸ್ತ್ರೀಯ ಸಂಗೀತ ವಾದ್ಯಗೋಷ್ಠಿಯನ್ನು ಪ್ರಸ್ತುತ ಪಡಿಸಲು ಭರದಿಂದ ಸಿದ್ಧತೆಯನ್ನು ನಡೆಸುತ್ತಿದೆ. ತಬಲಾ, ವಯಲಿನ್, ಕೀಬೋರ್ಡ್, ಚಂಡೆ ಇನ್ನೂ ಅನೇಕ ವಿವಿಧ ವಾದ್ಯಗಳ ಸಮ್ಮಿಲನದ ಈ ಗೋಷ್ಠಿ ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಸಂದೇಹವಿಲ್ಲ.

ಇನ್ನೇಕೆ ತಡ ಬನ್ನಿ ಈ ಎಲ್ಲ ಕಾರ್ಯಕ್ರಮಗಳನ್ನು ನೋಡಿ ಕೇಳಿ ಆನಂದಿಸೋಣ ಸಂಭ್ರಮದಲ್ಲಿ ಭಾಗಿಯಾಗೋಣ!

English summary
Count down has begun for Singara Sammelana 2016 by Singapore Kannada Sangha. 20th anniversary will be held on 29, 30 October. Many artists from Karnataka have been invited. Many local talented artists too will be showcasing their talent at two day Kannada conference.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X