• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಂಗಪುರದಲ್ಲಿ ಕನ್ನಡ ಹುಡುಗಿಯ ಅಪರೂಪದ ಸಾಧನೆ

By ವಸಂತ ಕುಲಕರ್ಣಿ, ಸಿಂಗಪುರ
|

ಸಿಂಗಪುರದಲ್ಲಿ ಕನ್ನಡ ಮಣ್ಣಿನ ಹುಡುಗಿಯೊಬ್ಬಳು ಕೀಳರಿಮೆಯನ್ನು ಬದಿಗೊತ್ತಿ ಸತತ ಪರಿಶ್ರಮದಿಂದ ಹತ್ತನೇ ತರಗತಿಯಲ್ಲಿ ಅತ್ಯುತ್ತಮ ಅಂಕ ಗಳಿಸಿ ಹೆತ್ತವರು ಅಭಿಮಾನದಿಂದ ಬೀಗುವಂತೆ ಮಾಡಿದ್ದಲ್ಲದೆ, ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆ ಸಚಿವೆ(ಸ್ಮೃತಿ ಇರಾನಿ)ಯಿಂದ ಮೆಚ್ಚುಗೆ ಪತ್ರ ಪಡೆದ ಯಶೋಗಾಥೆ ಇಲ್ಲಿದೆ. ಇಂಥ ಅಪರೂಪದ ಸಾಧನೆ ಮಾಡಿದ ಪ್ರೀತಿಯ ಮಗಳ ಸಾಧನೆಯ ಹಾದಿ ಕುರಿತು ಸಿಂಗಪುರದಲ್ಲಿರುವ (ಮೂಲತಃ ಧಾರವಾಡದವರಾದ) ಕನ್ನಡಿಗ ವಸಂತ ಕುಲಕರ್ಣಿ ಅವರು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ವೃಂದಾ ಕುಲಕರ್ಣಿಗೆ ಅಭಿನಂದನೆಗಳು. - ಸಂಪಾದಕ.

***
2013ರ ಅಕ್ಟೋಬರ್ ತಿಂಗಳು. ನನ್ನ ಮಗಳು (ವೃಂದಾ ಕುಲಕರ್ಣಿ) ಎಂದಿನಂತೆ ತನ್ನ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶವನ್ನು ತೆಗೆದುಕೊಂಡು ನನ್ನ ಹತ್ತಿರ ಸಹಿ ಮಾಡಿಸಿಕೊಳ್ಳಲು ಬಂದಳು. ಎಂದಿನಂತೆ ಯಾಂತ್ರಿಕವಾಗಿ ಸಹಿ ಮಾಡಿ ವಾಪಸ್ಸು ಕೊಡಲು ಕೈಗೆತ್ತಿಕೊಂಡರೆ ಆಶ್ಚರ್ಯ ಕಾದಿತ್ತು. ಬಹುತೇಕ ಎಲ್ಲ ವಿಷಯಗಳಲ್ಲಿ "ಎ 1" ಅಥವಾ "ಎ 2" ಶ್ರೇಣಿ ಪಡೆದಿದ್ದಳು. ನನ್ನ ಮಗಳ ಅಂಕಗಳನ್ನು ನೋಡಿ ನನಗೆ ಕ್ಷಣ ಕಾಲ ಆಶ್ಚರ್ಯವಾಯಿತಾದರೂ ಕಣ್ಣು ತುಂಬಿ ಬಂದಿತು. ಮೊಟ್ಟ ಮೊದಲ ಬಾರಿಗೆ ಸಂತಸ ತುಂಬಿದ ಹೃದಯದಿಂದ ಸಹಿ ಮಾಡಿ ಕೊಟ್ಟೆ. ಹೀಗೆಯೇ ಮುಂದೂ ಕೂಡ ಉತ್ತಮ ಅಂಕಗಳನ್ನು ಪಡೆ ಎಂದು ಹರಸಿದೆ. ಆದರೆ ನನಗೆ ಒಳಗೊಳಗೆ ಆ ಭರವಸೆ ಇರಲಿಲ್ಲ.

ನಾನು ಭಾರತ ಬಿಟ್ಟು ಹೊರಗೆ ಬಂದುದ್ದರಿಂದ ಮತ್ತು ಇನ್ನೂ ಅನೇಕ ಕಾರಣಗಳಿಂದ ನನ್ನ ಮಗಳ ಶಿಶು ವಿಹಾರದ ಅಭ್ಯಾಸ ಅಷ್ಟೊಂದು ಚೆನ್ನಾಗಿ ಆಗಿರಲಿಲ್ಲ. ಒಮ್ಮೆಲೇ ಪ್ರಥಮ ತರಗತಿಗೆ ಹೋಗಿದ್ದುದರಿಂದ ಸ್ಥಳೀಯ ಸಿಂಗಪುರದ ಶಾಲೆಯಲ್ಲಿ ಅವಳು ಹಿಂದುಳಿದಿದ್ದಳು. ಅಲ್ಲಿಯವರೆಗೆ ಶಿಶುವಿಹಾರದ ವಿಷಯದ ಬಗ್ಗೆ ನಿರ್ಲಕ್ಷ್ಯ ಹೊಂದಿದ್ದ ನಮಗೆ ಅದರ ಮಹತ್ವ ಅಚಾನಕ್ ಆಗಿ ತಿಳಿಯಿತು. ಇಲ್ಲಿಯ ಮಕ್ಕಳು ಶಿಶು ವಿಹಾರದಲ್ಲಿಯೇ ಓದು ಮತ್ತು ಗಣಿತಗಳ ಪ್ರಾಥಮಿಕ ಪಾಠಗಳಲ್ಲಿ ಪರಿಣಿತಿ ಹೊಂದುತ್ತಾರೆ. [ಇಂಗ್ಲಿಷ್ ಮೇಲೆ ದಿಗ್ವಿಜಯ ಸಾಧಿಸಿದ ಮಕ್ಕಳಿಬ್ಬರ ಕಥೆ]

Success story of Kannada girl in Singapore

ಶಾಲೆಯ ಇತರ ಮಕ್ಕಳಿಗಿಂತ ಸಾಕಷ್ಟು ಹಿಂದುಳಿದಿದ್ದರಿಂದಲೋ ಏನೋ ಸಿಂಗಪುರದ ಸ್ಥಳೀಯ ಶಾಲೆಯಲ್ಲಿ ಹೊಂದಾಣಿಕೆ ಆಗಲಿಲ್ಲ. ನಾನು ಮತ್ತು ನನ್ನ ಪತ್ನಿ ತುಂಬಾ ಯೋಚಿಸಿ, ಅವಳಿಗೆ ಸಿಂಗಪುರದಲ್ಲಿಯೇ ಆಗಲಷ್ಟೇ ಆರಂಭವಾದ ಆದರೆ ತುಂಬಾ ದುಬಾರಿಯಾದ ಭಾರತೀಯ ಶಾಲೆಗೆ ಸೇರಿಸಿದೆವು. ಭಾರತೀಯ ಶಾಲೆಯಲ್ಲಿ ಅಷ್ಟೇನೂ ಒತ್ತಡ ಇರಲಿಲ್ಲವಾದ್ದರಿಂದ ಅವಳು ಖುಶಿಯಾಗಿರುತ್ತಿದ್ದಳು. ಆದರೆ ಪರೀಕ್ಷೆಗಳಲ್ಲಿ ನಮ್ಮ ನಿರೀಕ್ಷೆಯಷ್ಟು ಮುಂದುವರೆಯಲಿಲ್ಲ. ಮೊದಮೊದಲು ನಾವು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲವಾದರೂ, ಕೆಲವು ವರ್ಷಗಳ ನಂತರ ಸ್ವಲ್ಪ ಆತಂಕಗೊಂಡೆವು. ಸಹಜವಾಗಿಯೇ ಸ್ವಲ್ಪ ಹೆಚ್ಚು ಓದಲು, ಅಭ್ಯಾಸ ಮಾಡಲು ಒತ್ತಡ ಹಾಕತೊಡಗಿದೆವು. ಪ್ರತಿಬಾರಿ ಪರೀಕ್ಷೆಯ ಫಲಿತಾಂಶ ಬಂದಾಗ ಮಗಳು ಸಪ್ಪೆ ಮುಖ ಮಾಡುವುದು ಮತ್ತು ನಾವಿಬ್ಬರೂ ನಿರಾಶರಾದರೂ ಅವಳಿಗೆ ಮುಂದಿನ ಬಾರಿ ಇನ್ನೂ ಚೆನ್ನಾಗಿ ಪ್ರಯತ್ನ ಮಾಡಲು ಪ್ರೋತ್ಸಾಹಿಸುವದು ಮಾಮೂಲಿ ಕೆಲಸವಾಯಿತು.

ಅವಳು ದೊಡ್ಡವಳಾಗತೊಡಗಿದ ಮೇಲೆ ತನ್ನ ಸಾಧಾರಣ ಫಲಿತಾಂಶದ ಬಗ್ಗೆ ಅವಳಿಗೇ ತಿಳಿಯತೊಡಗಿ ಕ್ರಮೇಣ ಕೀಳರಿಮೆ ಬೆಳೆಸಿಕೊಳ್ಳತೊಡಗಿದಳು. ಅದರಲ್ಲೂ ಅವಳಿಗಿಂತ ಐದು ವರ್ಷ ಚಿಕ್ಕವನಾದ ನನ್ನ ಮಗ ಓದಿನಲ್ಲಿ ಜಾಣನಾಗಿದ್ದರಿಂದ ಕೀಳರಿಮೆಯ ಪ್ರಭಾವ ಇನ್ನೂ ಹೆಚ್ಚಾಗತೊಡಗಿತು. ನಮ್ಮಿಬ್ಬರಿಗೆ ಅವಳ ಈ ಕೀಳರಿಮೆ ಇನ್ನೂ ಹೆಚ್ಚಿನ ಚಿಂತೆಯ ವಿಷಯವಾಗತೊಡಗಿತು. ಅದನ್ನು ಕಡಿಮೆ ಮಾಡಲು ಅವಳನ್ನು ಅವಳಿಗೆ ಅಚ್ಚುಮೆಚ್ಚಾದ ನೃತ್ಯ ಮತ್ತು ಈಜು ಪಾಠಗಳಿಗೆ ಸೇರಿಸಿದೆವು. ಅವುಗಳಲ್ಲಿ ಅವಳು ಚೆನ್ನಾಗಿ ಮಾಡಿದಾಗಲೆಲ್ಲ ಹುರಿದುಂಬಿಸುತ್ತಿದ್ದೆವು.

ಒಂದು ಕಡೆಗೆ ವಿದ್ಯೆಯಲ್ಲಿ ಸಾಧಾರಣವಾದರೇನಂತೆ? ಕಲೆ ಮತ್ತು ಆಟಗಳಲ್ಲಿ ಮುಂದುವರೆದು ವಿವೇಕಿಯಾಗಿ ಬಾಳಲು ಕಲಿತರೆ ಸಾಕು ಎನ್ನುವ ಭಾವ ಮನದಲ್ಲಿದ್ದರೆ, ಮತ್ತೊಂದು ಕಡೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯೆಯಲ್ಲಿ ಹಿಂದುಳಿದರೆ ಮುಂದೆ ಹೇಗೆ ಎಂಬ ಚಿಂತೆ ಎಲ್ಲ ಮಧ್ಯಮ ವರ್ಗದ ತಂದೆ ತಾಯಿಯರಿಗಿರುವಂತೆ ನಮಗೂ ಇತ್ತು. [ಕಲೆಯಲ್ಲಿ ಅರಳಿದ ಧಾರವಾಡದ ಪ್ರತಿಭೆ ಶಶಿಕಲಾ]

ಇದೇ ಸಮಯದಲ್ಲಿ ಅಮೀರ್ ಖಾನರ "ತಾರೆ ಜಮೀನ್ ಪರ್" ಸಿನಿಮಾ ನೋಡಿ ಅದರಲ್ಲಿನ ಮಕ್ಕಳು ಎಲ್ಲದರಲ್ಲೂ ಮುಂದೆ ಇರಬೇಕು ಎಂಬ ಗೀಳಿಗೊಳಪಟ್ಟ ತಂದೆಯಂತಾಗಬಾರದೆಂಬ ಆಶಯ ಮನಸ್ಸಿನಲ್ಲಿ ಉಂಟಾಗಿ, ಏನೇ ಆಗಲಿ ನನ್ನ ಮಗಳನ್ನು ಎದೆಗುಂದದಂತೆ ನೋಡಿಕೊಳ್ಳಬೇಕು ಎಂಬ ಭಾವ ಮೂಡಿತು. ಅವಳನ್ನು ಒತ್ತಾಯಿಸುವದನ್ನು ಪೂರ್ತಿಯಾಗಿ ನಿಲ್ಲಿಸಿದೆವು. ಅವಳ ಫಲಿತಾಂಶದ ದಿನವನ್ನು ಎಂದಿನ ದಿನದಂತೆ ಸಾಮಾನ್ಯವಾಗಿ ತೆಗೆದುಕೊಳ್ಳತೊಡಗಿದೆವು. ಇತರ ವಿಷಯಗಳಲ್ಲಿಯ ಅವಳ ಯಶಸ್ಸನ್ನು ಹೊಗಳಿ ಹುರಿದುಂಬಿಸತೊಡಗಿದೆವು. ಇದರ ಜೊತೆ ಜೊತೆಗೆ ನಾವಿಬ್ಬರೂ ನಮ್ಮಿಂದಾದಷ್ಟು ಪಾಠ ಹೇಳಿಕೊಡತೊಡಗಿದೆವು. ಅದರಲ್ಲೂ ನನ್ನ ಪತ್ನಿಯು ಸದಾ ಅವಳಿಗೆ ಅಭ್ಯಾಸದಲ್ಲಿ ಬೆಂಬಲವಾಗಿ ನಿಂತಳು.

ಅವಳು ಎಂಟನೇಯ ತರಗತಿಗೆ ಬಂದ ನಂತರ ಶಾಲೆಯ ಶಿಕ್ಷಕರ ಗುಣಮಟ್ಟ ಹೆಚ್ಚಾಗಿದ್ದಕ್ಕೋ ಏನೋ ಸ್ವಲ್ಪ ಪ್ರಮಾಣದಲ್ಲಿ ವಿದ್ಯಾಭ್ಯಾಸದಲ್ಲಿ ಕೂಡ ಸುಧಾರಣೆ ಕಂಡು ಬಂದಾಗ ಸಮಾಧಾನವಾಗ ತೊಡಗಿತು. ಆದರೆ ಅವಳು ಒಂಭತ್ತನೇಯ ತರಗತಿಗೆ ಬಂದ ನಂತರ ಅವಳಲ್ಲಿ ಒಮ್ಮೆಲೇ ಬದಲಾವಣೆ ಕಂಡು ಬಂದಿತು. ನಾವೇನೂ ಹೇಳದೇ ಅವಳಿಗೆ ಅಭ್ಯಾಸದಲ್ಲಿ ಅತೀವ ಆಸಕ್ತಿ ಉಂಟಾಯಿತು. ಇದು ತಾತ್ಕಾಲಿಕ ಇರಬಹುದೇನೋ ಎನಿಸಿತಾದರೂ, ಹಾಗೇನೂ ಆಗಲಿಲ್ಲ. ಯಾವಾಗಲೂ "ಬಿ" ಮತ್ತು "ಬಿ+" ಇರುವ ವಿಷಯಗಳಲ್ಲಿ ಮೊದಲನೇ ಪರೀಕ್ಷೆಯಲ್ಲಿಯೇ "ಎ" ಮತ್ತು "ಎ+"ಗಳನ್ನು ಗಳಿಸಿದಳು. ಮೊದಲ ಸೆಮಿಸ್ಟರಿನ ಪರೀಕ್ಷೆಯಲ್ಲಿ ತನ್ನ ತರಗತಿಯಲ್ಲಿ ಮೊದಲ ಹತ್ತು ಸ್ಥಾನಗಳಲ್ಲೊಂದನ್ನು ಗಳಿಸಿದಳು. ನಂತರದ ಎಲ್ಲ ಪರೀಕ್ಷೆಗಳಲ್ಲಿ ಉತ್ತಮವಾಗಿಯೇ ಅಂಕಗಳನ್ನು ಗಳಿಸಿದಳು. ಈ ಬದಲಾವಣೆಗೆ ಮುಖ್ಯವಾಗಿ ತನ್ನ ಒಂಭತ್ತನೇ ತರಗತಿಯ ಮಿತೃ ವೃಂದವೇ ಕಾರಣ ಎಂದು ಹೇಳುತ್ತಾಳೆ.

ಇದೆಲ್ಲಕ್ಕೂ ಶಿಖರಪ್ರಾಯವಾಗಿ 2015ರ CBSEಯ 10ನೇ ತರಗತಿಯಲ್ಲಿ 10ಕ್ಕೆ 10 CGPA (Cumulative Grage Point Average) ಅಂಕಗಳನ್ನು ಗಳಿಸಿದಳು. ಮಗಳ ಕಠಿಣ ಪರಿಶ್ರಮ ನೋಡಿ ನಾವಿಬ್ಬರೂ ಅವಳು 9ಕ್ಕೂ ಹೆಚ್ಚು CGPA ಅಂಕಗಳನ್ನು ಗಳಿಸುವಳೆಂಬ ಭರವಸೆ ಇತ್ತು. (ಕೆಲವೇ ವರ್ಷಗಳ ಹಿಂದೆ ನಾವು ಈ ಭರವಸೆಯನ್ನು ಕನಸಿನಲ್ಲೂ ಕಾಣುವ ಸ್ಥಿತಿಯಲ್ಲಿರಲಿಲ್ಲ). ಆದರೆ 10ಕ್ಕೆ 10 CGPA ಅಂಕ ನಮ್ಮೆಲ್ಲ ನಿರೀಕ್ಷೆಗಳಿಗಿಂತ ಬಹಳ ಮೇಲಿನದಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಅವಳು ಗಳಿಸಿದ ಅಂಕಗಳಿಗಿಂತ ಅವಳು ತನ್ನ ಕೀಳರಿಮೆಯ ವಿರುದ್ಧ ಹೋರಾಟ ಮಾಡಿ ಗೆದ್ದ ಪರಿ ನಮಗೆ ತುಂಬಾ ಅಪ್ಯಾಯಮಾನವಾದದ್ದು.

Success story of Kannada girl in Singapore

ಮೊನ್ನೆ ಅವಳ ಶಾಲೆಯಲ್ಲಿ ನಡೆದ ವಾರ್ಷಿಕ ಸನ್ಮಾನ ಸಭೆಯಲ್ಲಿ ಮಗಳಿಗೆ ಒಂದು ದೊಡ್ಡ ಕಪ್ಪು (10ಕ್ಕೆ 10 CGPA ಅಂಕಕ್ಕಾಗಿ) ಮತ್ತು ಆರು ಸಣ್ಣ ಕಪ್ಪು(ವಿಷಯಗಳಲ್ಲಿ ಉತ್ತಮ ಅಂಕ ಗಳಿಸಿದ್ದಕ್ಕಾಗಿ)ಗಳನ್ನು ಕೊಟ್ಟು, ಭಾರತದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಿಯಾದ ಸ್ಮೃತಿ ಇರಾನಿ ಅವರ ಅಭಿನಂದನಾ ಪತ್ರವನ್ನು ಕೊಡಮಾಡಿ ಸನ್ಮಾನಿಸಿದಾಗ ಕಳೆದ ವರುಷಗಳ ಪ್ರಯಾಸ ಮತ್ತು ಪ್ರಯತ್ನಗಳೆರಡು ಸ್ಮೃತಿ ಪಟಲದ ಮುಂದೆ ಹಾದುಹೋದವು. ಹೆಮ್ಮೆ ಮತ್ತು ಹರುಷಗಳಿಂದ ಎದೆ ತುಂಬಿ ಬಂದಿತು.

ಈ ಯಶಸ್ಸಿಗೆ ನಮ್ಮ ಬೆಂಬಲ ಮತ್ತು ಮುತುವರ್ಜಿಗಿಂತ ನಾವಿಬ್ಬರೂ ನಮ್ಮ ಮಗಳ ತೀವ್ರ ಪ್ರಯತ್ನ ಮತ್ತು "Die Hard attitude" ಕಾರಣ ಎಂದು ಅಭಿಪ್ರಾಯಪಡುತ್ತೇವೆ. ಹತ್ತನೆಯ ತರಗತಿಯಲ್ಲಿ ತನ್ನ ಎಲ್ಲ ಮನೋರಂಜನೆಗಳನ್ನು ಬದಿಗಿಟ್ಟು ಒಂದೇ ಸಮನೆ ಅಭ್ಯಾಸ ಮಾಡುವುದನ್ನು ನೋಡಿ ಖುಶಿಯಾದರೂ, ಎಲ್ಲಿ ಇವಳು ಅನಾರೋಗ್ಯಕ್ಕೊಳಗಾಗುತ್ತಾಳೆಯೋ ಎಂಬ ಆತಂಕ ನಮಗಾಗುತ್ತಿತ್ತು. ಅನೇಕ ಬಾರಿ ಬಲವಂತವಾಗಿ ನಾವು ಅವಳನ್ನು ಹೊರಗೆ ಕರೆದೊಯ್ಯುತ್ತಿದ್ದೆವು.

ನಾನು ಸದಾ ಅವಳಿಗೆ ಹೇಳುತ್ತಿದ್ದ "There is no substitute for hardwork" ಎಂಬ ಥಾಮಸ್ ಅಲ್ವಾ ಎಡಿಸನ್‍ನ ಉಕ್ತಿಯನ್ನು ನನಗೇ ರುಜುವಾತು ಮಾಡಿ ತೋರಿಸಿದ ನನ್ನ ಮಗಳ ಮೇಲೆ ನನಗೆ ತುಂಬಾ ಅಭಿಮಾನ. ಈಗ ಬಯೋಟೆಕ್ನಾಲಜಿ ವಿಷಯದಲ್ಲಿ ಎಂಜಿನೀಯರಿಂಗ್ ಮಾಡುವ ಗುರಿಯನ್ನು ಹೊಂದಿದ್ದಾಳೆ ಮತ್ತು ಆ ಲಕ್ಷ್ಯದತ್ತ ಹೆಜ್ಜೆಯಿಡುತ್ತಿದ್ದಾಳೆ. ಆದರೆ ಈ ಯಶಸ್ಸು ಅವಳ ತಲೆಗೇರದಿರಲಿ, ಇದೊಂದು ಸಣ್ಣ ಮೆಟ್ಟಿಲಷ್ಟೇ. ದೊಡ್ಡ ಶಿಖರವನ್ನೇರುವುದು ಇನ್ನೂ ಮುಂದಿದೆ ಎಂದೂ ಯಾವಾಗಲೂ ಅವಳಿಗೆ ಹೇಳುತ್ತಿರುತ್ತೇನೆ. ಭಗವಂತನ ದಯೆಯಿಂದ ಅವಳು ಇದೇ ದಾರಿಯಲ್ಲಿ ಯಾವುದೇ ಅಹಂಭಾವವಿಲ್ಲದೇ ವಿನಯಶೀಲತೆಯಿಂದ ಮುಂದುವರೆಯಲಿ ಎಂಬುದು ನಮ್ಮ ಆಶಯ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು success story ಸುದ್ದಿಗಳುView All

English summary
This is success story of girl from Karnataka (Dharwad) who excelled in academics with continuous hard work in Singapore. Singapore Kannadiga Vasant Kulkarni shares his joy how his daughter Vrunda came out triumphant after initial hiccups. Vrunda received appreciation letter from Indian govt HRD minister Smriti Irani for her achievement. Well done Vrunda Kulkarni.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more