ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದ 'ಸಿಂಹ' ಲೀ ಕುಆನ್ ಯೂ, ನುಡಿನಮನ

By ಗಿರೀಶ್ ಜಮದಗ್ನಿ, ಸಿಂಗಪುರ
|
Google Oneindia Kannada News

ಪುಟ್ಟದಾದರೂ ಅತ್ಯಾಧುನಿಕ ರಾಷ್ಟ್ರಗಳಲ್ಲಿ ಒಂದಾಗಿರುವ ಸಿಂಗಪುರದ ಹುಟ್ಟಿಗೆ ಕಾರಣರಾದ, ಮಾ.23ರಂದು ಇಹಲೋಕ ತ್ಯಜಿಸಿದ ಮಾಜಿ ಪ್ರಧಾನಿ ಲೀ ಕುಆನ್ ಯೂ ಅವರ ವೈಯಕ್ತಿಕ ಮತ್ತು ರಾಜಕೀಯ ಜೀವನ ನಮ್ಮ ರಾಜಕಾರಣಿಗಳಿಗೂ ಮಾದರಿ. ಕಸ ವಿಲೇವಾರಿ ಅಧ್ಯಯನಕ್ಕೆಂದು ವಿದೇಶಕ್ಕೆ ತೆರಳುವ ನಮ್ಮ ಪುಢಾರಿಗಳು ಸಿಂಗಪುರಕ್ಕೂ ಹೋಗಿ ಯೂ ಅವರ ಜೀವನದ ಅಧ್ಯಯನ ಮಾಡಿ, ಅಳವಡಿಸಿಕೊಳ್ಳಲಿ. ವಿಶಿಷ್ಟ ಜೀವನಶೈಲಿಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಲೀ ಕುಆನ್ ಯೂ ಅವರಿಗೆ ಸಿಂಗಪುರ ವಾಸಿ ಗಿರೀಶ್ ಅವರ ನುಡಿನಮನ.

***
ಮಾರ್ಚ್ 23, 2015 ಕೆಂಪು ಚುಕ್ಕೆ ಎಂದು ಖ್ಯಾತವಾದ ಸಿಂಗಪುರಕ್ಕೆ ದುಃಖ ತಂದ ದಿನ. ಈಗಿನ ಆಧುನಿಕ ಸಿಂಗಪುರದ ಜನಕ ಎಂದೇ ಎಲ್ಲರ ಗೌರವ ಮತ್ತು ಪ್ರೀತಿಗೆ ಪಾತ್ರರಾಗಿದ್ದ ಸಿಂಗಪುರದ ಮಾಜಿ ಪ್ರಧಾನಿ ಲೀ ಕುಆನ್ ಯೂ ಅವರು ನಿಧನಹೊಂದಿದ ದಿನ. ಕೊಳಚೆ, ಕೊಳಗೇರಿ, ಮೀನುಗಾರಿಕೆಯನ್ನೇ ಮೂಲ ಉದ್ಯೋಗವಾಗಿಸಿಕೊಂಡು ಬಡತನದಲ್ಲಿ ನರಳುತ್ತಿದ್ದ ಜನರನ್ನು ಹೊಂದಿದ್ದ ದ್ವೀಪವನ್ನು ಈಗಿನ ಅತ್ಯಾಧುನಿಕ ರಾಷ್ಟ್ರವನ್ನಾಗಿ ಪರಿವರ್ತಿಸಿ, ಭೂಪಟದಲ್ಲಿ ತನ್ನದೇ ಸ್ಥಾನ ಪಡೆದುಕೊಳ್ಳಲು ತಮ್ಮ ಜೀವನವನ್ನೇ ಮುಡುಪಾಗಿಟ್ಟ ಲೀ ಕುಅನ್ ಯೂ ಅವರು ತಮ್ಮ ಇಹಲೋಕದ ಸಾರ್ಥಕ ಯಾತ್ರೆ ಮುಗಿಸಿದ ದಿನ.

ಅವರ ಸಾಧನೆ ಮತ್ತು ಸಿಂಗಪುರಕ್ಕೆ ಅವರ ಅಪ್ರತಿಮ ಕೊಡುಗೆಯನ್ನು ಅರಿಯಲು ಅವರ ಜೀವನ ಯಾತ್ರೆಯನ್ನು ಮುಕ್ತ ಮನಸ್ಸಿನಿಂದ ನೋಡಲೇಬೇಕು. 1950ರ ದಶಕದಿಂದಲೇ ಅವರು ಹುಟ್ಟು ಹಾಕಿದ ಪಕ್ಷ "ಪೀಪಲ್ಸ್ ಆಕ್ಷನ್ ಪಾರ್ಟಿ" ಸಿಂಗಾಪುರದ ಸ್ವ-ಅಧಿಕಾರಕ್ಕೆ ಮತ್ತು ಮುಂದೆ ಮಲೇಶಿಯ ಜೊತೆಗೆ ಸೇರುವುದಕ್ಕೆ ಬಹಳ ಹೋರಾಟ ನಡೆಸುತ್ತಲೇ ಇದ್ದರು. 1959ರಲ್ಲಿ ತಮ್ಮ ಮೂವತ್ತೈದನೇ ವಯಸ್ಸಿನಲ್ಲಿ ಸಿಂಗಪುರದ ಮೊದಲ ಪ್ರಧಾನಿಯಾದರು. 1963ರಲ್ಲಿ ಮಲಯಾ, ಸಿಂಗಪುರ, ಸರವಾಕ್ ಮತ್ತು ಸಬಾಹ್ ಒಳಗೊಂಡ ಮಲೇಶಿಯಾ ದೇಶದ ರಚನೆಯಾಗಿತ್ತು. ಸಿಂಗಪುರ ಕೂಡ ಅದರ ಅವಿಭಾಜ್ಯ ಅಂಗವಾಗಬೇಕೆಂದು ಬಹಳ ಶ್ರಮ ಪಟ್ಟಿದ್ದರು ಲೀ ಅವರು.

Singapore founder Lee Kuan Yew - a tribute

ಸ್ವತಂತ್ರ ಸಿಂಗಪುರದ ಮೊದಲ ಪ್ರಧಾನಿ : ಅವರ ಕಲ್ಪನೆಯ ಬಹು ಜನಾಂಗೀಯ ರಾಷ್ಟ್ರಕ್ಕೆ ಮಲೇಶಿಯ ದೇಶದ ರಚನೆ ಇಂಬುಕೊಡುವಂತಿತ್ತು. ಆದರೆ ಈ ಪುಟ್ಟ, ನೈಸರ್ಗಿಕ ಸಂಪನ್ಮೂಲವೇ ಇರದ, ಕೊಳಚೆ ತುಂಬಿದ ದ್ವೀಪ ಮಲೇಶಿಯಾಗೆ ಬೇಡವಾಗಿತ್ತು. ಇದಲ್ಲದೇ ಇತರ ರಾಜಕೀಯ ಕಾರಣಗಳಿಂದ ಸಿಂಗಪುರವನ್ನು ಮಲೇಶಿಯದಿಂದ ಬೇರ್ಪಡಿಸಿ ಬಲವಂತವಾಗಿ ಸ್ವಾತಂತ್ರ್ಯವನ್ನು ಹೇರಲಾಯಿತು. ಸಿಂಗಪುರವನ್ನು ಒಳಗೊಂಡ ಸಂಘಟಿತವಾದ, ಬಲಿಷ್ಠವಾದ ಮಲೇಶಿಯದ ಕನಸು ಕಂಡಿದ್ದ ಲೀ ಕುಆನ್ ಯೂ ಅವರು ವಿಭಜನೆಯ ಸುದ್ದಿ ಕೇಳಿ ಗಳಗಳನೆ ಅತ್ತಿದ್ದರೂ ಕೂಡ! ಆದರೆ ಆದದ್ದನ್ನು ನೆನೆದು ಕೂರುವ ಜಾಯಮಾನವಲ್ಲ ಅವರದು! 1965, ಆಗಸ್ಟ್ 9ರಂದು ಸಿಂಗಪುರ ಪ್ರತ್ಯೇಕ ರಾಷ್ಟ್ರವಾಯಿತು. ಲೀ ಅವರು ಸ್ವತಂತ್ರ ಸಿಂಗಪುರದ ಮೊದಲ ಪ್ರಧಾನಿಯಾದರು.

ಅಂದೇ ಸಿಂಗಪುರವನ್ನು ಅಧುನಿಕ, ಬಲಿಷ್ಠ ರಾಷ್ಟ್ರವನ್ನಾಗಿ ಮಾಡುವ ಪಣ ತೊಟ್ಟರು. ಮುಖ್ಯವಾಗಿ ಜನರಿಗೆ ತಲೆಯ ಮೇಲೆ ಸೂರಿನ ಅವಶ್ಯಕತೆಯಿತ್ತು. ಮೀನುಗಾರಿಕೆಯಲ್ಲದೇ ಹೊಸ ಉದ್ಯಮಗಳನ್ನು ಹುಡುಕಬೇಕಿತ್ತು. ಕೊಳಚೆಯ ನಿರ್ಮೂಲನವಾಗಬೇಕಿತ್ತು. ಆಗಾಗ ಜನ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿದ್ದ ಪ್ರವಾಹಕ್ಕೆ ತಡೆಯೊಡ್ಡಲು ಹೊಸ ಯೋಜನೆಗಳನ್ನು ನಿರೂಪಿಸಬೇಕಿತ್ತು. ಆಗಲೇ ವಿಕಾರವಾಗಿ ತಲೆ ಎತ್ತುತ್ತಿದ್ದ ಭ್ರಷ್ಟಾಚಾರದ ಪಿಡುಗನ್ನು ಮೆಟ್ಟಿ ನಿಲ್ಲಬೇಕಿತ್ತು. ಮಾಡಲು ಎಷ್ಟೊಂದು ಕೆಲಸಕಾರ್ಯಗಳಿದ್ದವು. [ಸಿಂಗಾಪುರದ 'ಲಯನ್' ಲೀ ಸ್ಮರಿಸಿದ ಮೋದಿ]

ಐಷಾರಾಮಿ ಬೆನ್ನು ಹತ್ತಿದ್ದರೆ? : ಗದ್ದುಗೆಯೇರಿದ ಖುಷಿಯಲ್ಲಿ ಲೀ ಅವರು ಇವೆಲ್ಲವನ್ನೂ ಹಾಗೆ ಬಿಟ್ಟು ಐಷಾರಾಮಿ ಜೀವನದ ಬೆನ್ನುಹತ್ತಿ ಸುಖವನ್ನು ಆನಂದಿಸಬಹುದಿತ್ತು. ಆದರೆ ಸ್ವತಃ ಮಧ್ಯಮವರ್ಗದ ಜೀವನದಲ್ಲೇ ಬೆಳೆದ ಮತ್ತು ಸಾಮಾನ್ಯ ಜನರೊಂದಿಗೆ ಸದಾ ಒಡನಾಟವಿಟ್ಟುಕೊಂಡಿದ್ದ ಲೀ ಅವರಿಗೆ ಜನರ ತೊಂದರೆಗಳು ಅರ್ಥವಾಗುತ್ತಿದ್ದವು. ಎಲ್ಲಕ್ಕಿಂತ ಮಿಗಿಲಾಗಿ ಸಿಂಗಪುರವನ್ನು ಬಹು ಎತ್ತರಕ್ಕೆ ಕೊಂಡೊಯ್ಯುವ ಮಹದಾಕಾಂಕ್ಷೆ ಇತ್ತು. ಇವೆಲ್ಲಕ್ಕೂ ಸಾಥ್ ಕೊಡಲು ಅವರಿಗೆ ಚೈತನ್ಯವಿತ್ತು, ಉತ್ಕಟ ಬಯಕೆಯಿತ್ತು. ಲೀ ಅವರು ಎಷ್ಟಾದರೂ ದಾರ್ಶನಿಕರಲ್ಲವೇ? ಸಿಂಗಪುರ ಎದುರಿಸುತ್ತಿದ್ದ ಪ್ರತಿಯೊಂದು ಕಷ್ಟಗಳಿಗೂ ಪರಿಹಾರ ಹುಡುಕುವ ಕಾರ್ಯಕ್ಕಿಳಿದರು. 30 ವರ್ಷದಲ್ಲಿ ಸಿಂಗಪುರದ ಜನರೆಲ್ಲರಿಗೂ ಸೂರು ಒದಗಿಸುವ ಬಹು ಮಹತ್ವಾಕಾಂಕ್ಷೆಯ ಸರ್ಕಾರದ ಬಹುಮಹಡಿ ವಸತಿಗಳ ಯೋಜನೆಗೆ ಚಲನೆ ಸಿಕ್ಕಿತು. ಸರಕಾರವೇ ನಿರ್ಮಿಸಿದ ಈ ಕ್ರಾಂತಿಕಾರಿ ಬಹುಮಹಡಿ ವಸತಿ ಯೋಜನೆ ಮುಂದೆ ಇತರ ದೇಶಗಳಿಗೂ ಮಾದರಿಯಾಯ್ತು.

ಕೊಳಚೆ ನಿರ್ಮೂಲನ ಮಾಡಲು ಜನರ ಪದ್ಧತಿ, ಚಟ, ಅಭ್ಯಾಸಗಳಲ್ಲಿ ಬದಲಾವಣೆ ತರಬೇಕಿತ್ತು. ಇದಕ್ಕೆ ಕೆಲವು ಕಠಿಣ, ಆಗ ಅಪ್ರಿಯವೆನಿಸಿದ ಕ್ರಮಗಳನ್ನು ಶಿಸ್ತಾಗಿ ಜಾರಿಗೆ ತಂದರು. ಆಗ ಲೀ ಅವರು ತೆಗೆದುಕೊಂಡ ಕಠಿಣ ಕ್ರಮಗಳೇ ಈಗಲೂ ಸಿಂಗಪುರ ಇಷ್ಟು ಸ್ವಚ್ಛ ಮತ್ತು ಸುಂದರವಾಗಿರಲು ಕಾರಣ. ಅಲ್ಲಲ್ಲಿ ಉಗಿಯುವುದು, ಕೈಲ್ಲಿದ್ದನ್ನು ಎಲ್ಲೆಂದರಲ್ಲಿ ಎಸೆಯುವುದು, ಚ್ಯೂಯಿಂಗ್ ಗಮ್ ಅಗೆದು ಕಂಡಲ್ಲಿ ಉಗಿಯುವುದು... ಎಲ್ಲದಕ್ಕೂ ಕಡಿವಾಣ ಬಿತ್ತು. ಮೀರಿದರೆ ಕಠಿಣ ಸಜೆಯೂ ಆಗುತ್ತಿತ್ತು!

ಮೂವತ್ತೊಂದು ವರ್ಷ ದೀರ್ಘ ಕಾಲ ಸಿಂಗಪುರದ ಪ್ರಧಾನಿಯಾಗಿದ್ದ ಲೀ ಅವರ ಜನಹಿತ ಮತ್ತು ದೇಶಪರ ಕಾರ್ಯಗಳು ಒಂದೆರಡಲ್ಲ. ಬರೀ ಏಷ್ಯಾದಲ್ಲಿ ಅಲ್ಲದೇ ಪ್ರಪಂಚದ ಇತರ ಅಭಿವೃದ್ಧಿ ಹೊಂದುತ್ತಿದ್ದ, ಹೊಂದುತ್ತಿರುವ ದೇಶಗಳು ಇವರ ಹಲವು ಯೋಜನೆಗಳನ್ನು ಅನುಸರಿಸಿ ಅದರ ಲಾಭ ಪಡೆದುಕೊಂಡಿವೆ. ಸದಾ ಹೊಸತರ ಅನ್ವೇಷಣೆಯಲ್ಲೇ ನಿರತರಾಗಿದ್ದ ಲೀ ಅವರು ಅಪಾರ ಪರಿಸರ ಪ್ರೇಮಿಯಾಗಿದ್ದರು ಕೂಡ. ಪ್ರತೀ ವರ್ಷ ನವೆಂಬರ್ ತಿಂಗಳಿನಲ್ಲಿ ಗಿಡ ನೆಡುವ ಪರಿಪಾಠವನ್ನು ತಪ್ಪದೇ ಪಾಲಿಸುತ್ತಿದ್ದರು. ಈಗಲೂ ಸಿಂಗಪುರದ ರಸ್ತೆಯ ಇಕ್ಕೆಲದಲ್ಲಿ ಸಾಲು ಮರಗಳು ಮತ್ತು ಬಹುತೇಕ ಸಿಂಗಪುರ ಹಸಿರಿನಿಂದ ಆವೃತವಾಗಿರುವದಕ್ಕೆ ಅವರ ಕೊಡುಗೆ ಅಪಾರ.

ಲೀ ವ್ಯಕ್ತಿತ್ವಕ್ಕೆ ತಕ್ಕ ಶ್ರದ್ಧಾಂಜಲಿ : ವ್ಯಕ್ತಿ ಪೂಜೆ ಮತ್ತು ಅವರ ವೈಭವೀಕರಣವನ್ನು ವಿರೋಧಿಸುತ್ತಿದ್ದ ಲೀ ಅವರಿಗೆ ಅಪ್ಯಾಯಮಾನವಾಗುವಂತೆ, ಅವರು ನಿಧನ ಹೊಂದಿದ ದಿನ ಶಾಲಾ, ಕಾಲೇಜು, ಕಚೇರಿ, ವ್ಯಾಪಾರ, ವಹಿವಾಟುಗಳಿಗೆ ರಜೆ ಘೋಷಿಸಲಿಲ್ಲ. ಲೀ ಅವರ ನಿಧನದ ದುಃಖ ಹೃದಯದಲ್ಲಿ ಮಡುಗಟ್ಟಿದ್ದರೂ ಸಿಂಗಪುರವಾಸಿಗಳು ತಂತಮ್ಮ ಕೆಲಸ ಕಾರ್ಯಗಳಲ್ಲಿ ಎಂದಿನಂತೆ ತೊಡಗಿಕೊಂಡಿದ್ದು ಲೀ ಅವರಿಗೆ ಅವರು ನೀಡಿದ ಶ್ರದ್ಧಾಂಜಲಿ.

ಜೀವನ ಪೂರ್ತಿ ಶ್ರಮಜೀವಿಯಾಗಿದ್ದ ಲೀ ಅವರು ಸಹ ಬಹುಷಃ ಅದನ್ನೇ ಬಯಸಿದ್ದರು. ನಮ್ಮೂರಿನಲ್ಲಿ ನಾಯಕ ಮೃತರಾದಾಗ ಅಥವಾ ಹಗರಣದಲ್ಲಿ ಸಿಕ್ಕಿ ಜೈಲಿಗೆ ಹೋದಾಗಲೂ, ಹೊರ ಬಂದಾಗಲೂ ಎದೆ ಬಡಿದುಕೊಂಡು, ರಸ್ತೆಯಲ್ಲಿ ಬಿದ್ದು ಹೊರಳಾಡಿ, ಬೆಂಕಿ ಹಚ್ಚಿಕೊಂಡು ಸಾಯುವ ಹಿಂಬಾಲಕರ ಅಸಹ್ಯ ನಡವಳಿಕೆಗಳನ್ನು ನೋಡಿ ಅಭ್ಯಾಸವಾಗಿದ್ದ ನಮಗೆ, ತಮ್ಮ ನೆಚ್ಚಿನ ನಾಯಕ, ದೇಶದ ಜನಕನ ನಿಧನವನ್ನು ಬಹಳ ಗೌರವ, ಗಾಂಭೀರ್ಯ ಮತ್ತು ಸಮಾಧಾನದಿಂದ ಸ್ವೀಕರಿಸಿದ ಸಿಂಗಪುರದ ಜನತೆಯ ಅನುಕರಣೀಯ ರೀತಿ ವಿಸ್ಮಯವಾಗಿತ್ತು.

ಲೀ ಅಂತಹ ಮಹಾ ಚೇತನಗಳು ಭೂಮಿಯಲ್ಲಿ ಅವತರಿಸುವುದು ಅಪರೂಪವೇ ಸರಿ. ಅವರ ಜೀವನ ಮತ್ತು ಅವರ ಕಾರ್ಯವೈಖರಿಯ ಸದುದ್ದೇಶಗಳ ಅಧ್ಯಯನ ಮಾಡಿದರೆ ಯಶಸ್ಸಿನ ಸೂತ್ರಗಳ ಅರಿವಾಗಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ಬದುಕನ್ನು ಸಾರ್ಥಕ ಮಾಡಿಕೊಳ್ಳುವ ಬಗೆ ತಿಳಿಯಬಹುದು.

English summary
Singapore founder Lee Kuan Yew - a profile by Girish Jamadagni, Kannadiga residing in Singapore. He was the first Prime Minister of Singapore, governing for three decades. He is recognised as the founding father of modern Singapore. A tribute to the real leader par excellence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X