ನಾವಿಕೋತ್ಸವ ಲಾಂಛನ ಲಾಂಚ್ ಮಾಡಿದ ಪ್ರಣಯರಾಜ

Posted By:
Subscribe to Oneindia Kannada

ಬೆಂಗಳೂರು, ಜುಲೈ 13 : "ಉದ್ಯೋಗವನ್ನು ಹುಡುಕಿಕೊಂಡು ದೂರದ ಅಮೆರಿಕದಲ್ಲಿ ಬದುಕು ಕಟ್ಟಿಕೊಂಡಿರುವ ಕನ್ನಡಿಗರು ಮೂವತ್ತು ನಲವತ್ತು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿರಬಹುದು. ಆದರೆ, ಅವರಲ್ಲಿ ಕನ್ನಡ ಅಳಿದಿಲ್ಲ. ಬದಲಾಗಿ ಕನ್ನಡದ ಮೇಲಿನ ಪ್ರೀತಿ ಇನ್ನಷ್ಟು ಗಟ್ಟಿಯಾಗಿದೆ. ಅಲ್ಲಿ ಹೋದಾಗ ಅವರಿಂದ ಮನತುಂಬುವಷ್ಟು ಸ್ನೇಹಿ ಪ್ರೀತಿ ವಿಶ್ವಾಸ ಪಡೆದಿದ್ದೇನೆ."

ಹೀಗೆಂದು ಅಮೆರಿಕನ್ನಡಿಗರನ್ನು ಮನತುಂಬಿ ಶ್ಲಾಘಿಸಿದವರು 'ಪ್ರಣಯರಾಜ' ಡಾ. ಶ್ರೀನಾಥ್. ಕನ್ನಡದ ಮಣ್ಣಿನ ಮೇಲೆ ಪ್ರತಿಭಾ ಪ್ರದರ್ಶನ ಮಾಡಲೆಂದು ಬೆಂಗಳೂರಿಗೆ ಆಗಮಿಸಿರುವ ನಾವಿಕ ಸಂಘದ 'ನಾವಿಕೋತ್ಸವ - 2016'ರ ಲಾಂಛನವನ್ನು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಬೆಳಿಗ್ಗೆ ಲಾಂಚ್ ಮಾಡಿ ಪ್ರಣಯರಾಜ ಮಾತನಾಡಿದರು.

ಅಮೆರಿಕಾದ ನಾರ್ತ್ ಅಮೆರಿಕಾ ವಿಶ್ವ ಕನ್ನಡ ಆಗರ (ನಾವಿಕ) ಮತ್ತು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮತ್ತು ಅನಿವಾಸಿ ಭಾರತೀಯ ಸಮಿತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಈ ಬಾರಿ ಜುಲೈ 16 ಮತ್ತು 17ರಂದು 'ನಾವಿಕೋತ್ಸವ-2016' ನಡೆಯಲಿದೆ.[2011ರಲ್ಲಿ ನಡೆದ ಅಮೆರಿಕನ್ನಡೋತ್ಸವದ ವರದಿ]

Pranayaraja Srinath launches Navikotsava 2016 logo

ಶನಿವಾರ ಮತ್ತು ಭಾನುವಾರ 2 ದಿನಗಳ ಕಾಲ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ 'ನಾವಿಕೋತ್ಸವ'ದಲ್ಲಿ ಕನ್ನಡ ಸಾಹಿತ್ಯಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರಾಧನೆ ನಡೆಯಲಿದ್ದು, ಖ್ಯಾತ ಸಾಹಿತಿಗಳು, ಕಲಾವಿದರು, ಅಧಿಕಾರಿಗಳು, ಸರ್ಕಾರದ ವಿವಿಧ ಇಲಾಖೆಗಳ ಸಚಿವರು ಭಾಗವಹಿಸಲಿದ್ದಾರೆ. ಜತೆಗೆ ಎರಡೂ ದಿನಗಳ ಕಾಲ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಎಡೆಬಿಡದೆ ವೈವಿಧ್ಯಮಯ ಕಾರ್ಯಕ್ರಮಗಳು ಮೇಲೈಸಲಿವೆ.

ಸಿದ್ದರಾಮಯ್ಯನವರಿಂದ 'ನಾವಿಕೋತ್ಸವ' ಉದ್ಘಾಟನೆ; 'ಯುವಸೂಚಿ'ಗೆ ಚಾಲನೆ

ಜುಲೈ 16ರಂದು ಭಾನುವಾರ ಬೆಳಗ್ಗೆ 9.30ಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ 'ನಾವಿಕೋತ್ಸವ'ವನ್ನು ಉದ್ಘಾಟಿಸಲಿದ್ದಾರೆ. ಇದೇ ವೇಳೆ ಅವರು 'ಯುವಸೂಚಿ' ಎಂಬ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕನ್ನಡ ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು 'ತವರು' ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಅನಂತರ ವಿಶ್ವದ ವಿವಿಧ ದೇಶಗಳಿಂದ ಆಗಮಿಸುವ ಕನ್ನಡಿಗರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷವಾಗಿ ಸುಮಾರು 150ಕ್ಕೂ ಹೆಚ್ಚು ವಿಶ್ವ ಕನ್ನಡಿಗ ಕುಟುಂಬಗಳು ಈ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಂಗು ತುಂಬಲಿವೆ.

ಸಂಜೆ 6ಕ್ಕೆ ನಡೆಯಲಿರುವ ನಾವಿಕೋತ್ಸವದ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕನ್ನಡದ ಸಾಧಕರು ಮತ್ತು ಅನಿವಾಸಿ ಕನ್ನಡಿಗರ ಬಾಂಧವ್ಯ ಬೆಸೆಯಲು ಶ್ರಮಿಸಿದ ಕನ್ನಡಿಗರಿಗೆ ಗೌರವ ಸಮರ್ಪಣೆ ಮಾಡಲಾಗುವುದು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೇಂದ್ರ ರಸಗೊಬ್ಬರ ಇಲಾಖೆ ಸಚಿವರಾದ ಅನಂತ್ ಕುಮಾರ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಭಾರತೀಯ ಅಂಚೆ ಇಲಾಖೆಯ (ಮೈಸ್ಟಾಂಪ್) ನಾವಿಕೋತ್ಸವಕ್ಕಾಗಿ ರೂಪಿಸಿರುವ 'ನಾವಿಕೋತ್ಸವ -2016' ವಿಶೇಷ ಅಂಚೆ ಚೀಟಿ ಬಿಡುಗಡೆಯಾಗಲಿದೆ. ಇಂತಹ ವಿಶೇಷ ಅಂಚೆಚೀಟಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಡಾ. ರೇಣುಕಾ ರಾಮಪ್ಪ ಅವರ ನೇತೃತ್ವದಲ್ಲಿ ವಿಶ್ವ ಕನ್ನಡಿಗರ ಬಾಂಧವ್ಯ ಬೆಸೆಯುವ ಮತ್ತು ಸಾಹಿತ್ಯ ಮತ್ತು ಸಂಸ್ಕೃತಿಯ ವಿನಿಮಯ ನಡೆಯುವ ವಿಶೇಷ ಕಾರ್ಯಕ್ರಮವಿದು.

Pranayaraja Srinath launches Navikotsava 2016 logo

ಯುವಸೂಚಿ ಎಂಬ ಕಾರ್ಯಕ್ರಮದ ಅಡಿಯಲ್ಲಿ ಅಮೆರಿಕಕ್ಕೆ ವಿದ್ಯಾಭ್ಯಾಸಕ್ಕೆಂದು ಬರುವ ವಿದ್ಯಾರ್ಥಿಗಳು, ಹೊಸದಾಗಿ ನೌಕರಿ ಹುಡುಕಿಕೊಂಡು ಬರುವ ಯುವಕರಿಗಾಗಿ ಅಗತ್ಯವಿರುವ ಮಾರ್ಗದರ್ಶನ, ಅನುಕೂಲಗಳನ್ನು ಕಲ್ಪಿಸಿಕೊಡಲಾಗುವುದು ಎಂದು ನಾವಿಕ ಅಧ್ಯಕ್ಷೆ ಡಾ. ರೇಣುಕಾ ರಾಮಪ್ಪ ಅವರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.

ಸಂಜೆ 7ಕ್ಕೆ ಹುಬ್ಬಳ್ಳಿಯ ಗುರು ಇನ್‌ಸ್ಟಿಟ್ಯೂಟ್, ಗುರುಬಲ ಎಂಟರ್‌ಟೈನರ್ಸ್, ಬೆಂಗಳೂರು ಸಂಯುಕ್ತವಾಗಿ ಅರ್ಪಿಸುವ, ಯಶವಂತ ಸರದೇಶಪಾಂಡೆ ನಿರ್ದೇಶನದ ಹೊಸ ಫ್ಯಾಮಿಲಿ ಕಾಮಿಡಿ ನಾಟಕ 'ಹೀಗೇಕೆ ನೀ ದೂರ ಓಡುವೆ' ಪ್ರದರ್ಶನ ನಡೆಯಲಿದೆ.

ಜುಲೈ 17ರಂದು ಕನ್ನಡ ಮೆರವಣಿಗೆಯ ಸಂಭ್ರಮ

ಭಾನುವಾರ, ಜುಲೈ 17ರ ಬೆಳಗ್ಗೆ 9.30ಕ್ಕೆ ನಾವಿಕೋತ್ಸವದ ಶೋಭಾಯಾತ್ರೆ ನಡೆಯಲಿದೆ. ಉತ್ಸವದ ಎರಡನೇ ದಿನ ನಡೆಯುವ ಶೋಭಾಯಾತ್ರೆಗೆ ವಿವಿಧ ಜಾನಪದ ಕಲಾತಂಡಗಳು ಮೆರುಗು ನೀಡಲಿವೆ. ಕನ್ನಡ ಮೆರವಣಿಗೆ ಸಂಭ್ರಮಕ್ಕೆ ಡೊಳ್ಳು ಕುಣಿತ, ಗಾರುಡಿ ಗೊಂಬೆ ನೃತ್ಯದ ಮೂಲಕ ಕಲಾವಿದರು ಕಲಾ ಪ್ರದರ್ಶನ ಮಾಡಲಿದ್ದಾರೆ. ಮೆರವಣಿಗೆಯಲ್ಲಿ ಕಹಳೆ ಮತ್ತು ಹುರಿಮೆ ವಾದ್ಯವೂ ಮೊಳಗಲಿದೆ. ಕನ್ನಡ ಪ್ರಾಧಿಕಾರದ ಮಾಜಿ ಅಧ್ಯಕ್ಷ 'ಮುಖ್ಯಮಂತ್ರಿ' ಡಾ.ಚಂದ್ರು ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ನಾವಿಕೋತ್ಸವಕ್ಕೆ ಉದ್ಯಮದ ಸ್ಪರ್ಶ, ಉದ್ಯಮಿಗಳ ಸಮಾವೇಶ

ನಾವಿಕೋತ್ಸವದ ಅಂಗವಾಗಿ ದೇಶ-ವಿದೇಶಗಳ ಕನ್ನಡಿಗ ಉದ್ಯಮಿಗಳನ್ನು ಬೆಸೆಯಲೆಂದೇ ಬೆಳಗ್ಗೆ 11.30ಕ್ಕೆ ವಾಣಿಜ್ಯೋದ್ಯಮ ಮತ್ತು ಉದ್ಯಮಿಗಳ ಸಮಾವೇಶ ನಡೆಯಲಿದೆ. ಪ್ರವಾಸೋದ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಸಚಿವ ಪ್ರಿಯಾಂಗ ಖರ್ಗೆ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಎಂ.ಸಿ. ದಿನೇಶ್, ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷ ವಿ.ಸಿ ಪ್ರಕಾಶ್ ಸಮಾವೇಶದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಅಜಯ-ಗಾನ-ಯಾನ'ದೊಂದಿಗೆ ನಾವಿಕೋತ್ಸವ ಸಮಾಪನ

ಸಂಜೆ 6ಕ್ಕೆ ನಾವಿಕೋತ್ಸವದ ಸಮಾರೋಪ ಸಮಾರಂಭ ನಡೆಯಲಿದ್ದು, ಕನ್ನಡದ ಕಲಾ ಸಾಧಕರು ಹಾಗೂ ವಿವಿಧ ದೇಶದ ಕನ್ನಡ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಸನ್ಮಾನಿಸಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ದಯಾನಂದ್, ವಿಶ್ವವಾಣಿ ದಿನಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಹಾಗೂ ಖ್ಯಾತ ನಟರಾದ ಪ್ರಣಯರಾಜ ಶ್ರೀನಾಥ್, ಸಾಧಕರನ್ನು ಸನ್ಮಾನಿಸಲಿದ್ದಾರೆ. ಸಂಜೆ 7ಕ್ಕೆ 'ಅಜಯ-ಗಾನ-ಯಾನ' ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ನಾವಿಕೋತ್ಸವಕ್ಕೆ ವೈಭವದ ತೆರೆ ಬೀಳಲಿದೆ.

ಎಲ್ಲಿ ಮುಂದಿನ ವಿಶ್ವ ಕನ್ನಡ ಸಮ್ಮೇಳನ? : ಈ ಕುರಿತು ರೇಣುಕಾ ರಾಮಪ್ಪ ಅವರನ್ನು ವಿಚಾರಿಸಿದಾಗ, ಬರುವ ವರ್ಷ ಅಮೆರಿಕದ ಹಳೆಯ ಕನ್ನಡ ಕೂಟಗಳಲ್ಲಿ ಒಂದಾಗಿರುವ ಶ್ರೀಗಂಧ ಕನ್ನಡ ಕೂಟ 25 ವರ್ಷಗಳನ್ನು ಪೂರೈಸುತ್ತಿರುವುದರಿಂದ ಫ್ಲಾರಿಡಾದಲ್ಲಿ ನಾವಿಕ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವ ಇರಾದೆ ಇದೆ ಎಂದು ಅವರು ತಿಳಿಸಿದರು.

ಹೆಚ್ಚಿನ ಮಾಹಿತಿಗೆ : 9845217869

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada actor Pranayaraja Srinath launched logo of Navikotsava 2016, which is going to be held at Ravindra Kalakshetra, Bengaluru on July 16 and 17. North America Vishwa Kannada Agara (NAVIKA) and Kannada and Culture Department of Karnataka Government, NRI Committee and Kannada Pradhikara have jointly organised the two day “Navikotsava-2016” on 16th and 17th July.
Please Wait while comments are loading...