ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ಮೇಳೈಸಿದ 'ಲಯತರಂಗ'ದ ನಾದವೈಭವ

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ರಚನಾತ್ಮಕ ಕಲಾವಿದರಿಗೆ ದೇಶ ಕಾಲಗಳ ಪರಿಮಿತಿ ಇರುವುದಿಲ್ಲ. ನಿತ್ಯವೂ ಹೊಸದನ್ನು ಹುಡುಕುವ, ಹೊಸದನ್ನು ರಚಿಸುವ ತವಕ ಸದಾ ಅವರಲ್ಲಿ ತುಡಿಯುತ್ತಿರುತ್ತದೆ. ಅಂತಹ ಒಂದು ಕ್ರಿಯಾಶೀಲ ಯುವ ತಂಡ ಬೆಂಗಳೂರಿನ ಅರುಣ್ ಕುಮಾರ್ ನೇತೃತ್ವದ "ಲಯತರಂಗ". ಲಯತರಂಗ ನಾವೀನ್ಯ ಮತ್ತು ದಿಟ್ಟತನದ ಪ್ರದರ್ಶನಕ್ಕೆ ಹೆಸರಾದ ಒಂದು ವಿಶಿಷ್ಟವಾದ ಮೇಳ. ಜಗತ್ತಿನ ವಿವಿಧ ಸಂಗೀತ ಶೈಲಿಗಳನ್ನು ಕರ್ನಾಟಕ ಸಂಗೀತದ ಜೊತೆ ಹೊಸೆದು ಹೊಸದೊಂದು ಸಂಗೀತದ ಆಯಾಮವನ್ನು ಸೃಜಿಸಿದ ಈ ತಂಡ ಜನವರಿ 23ರ ಸಂಜೆ ಕನ್ನಡ ಸಂಘ (ಸಿಂಗಪುರ)ವು ಇಲ್ಲಿನ ಪ್ರತಿಷ್ಠಿತ SOTA (School of the Arts)ದ ಸಭಾಂಗಣದಲ್ಲಿ ಏರ್ಪಡಿಸಿದ ಸಂಗೀತ ಕಚೇರಿಯಲ್ಲಿ ಪ್ರದರ್ಶನ ನೀಡಿತು.

ಕಾರ್ಯಕ್ರಮ ಶುರುವಾಗುವ ಮೊದಲೇ ಸಭಾಂಗಣದ ಅಂಗಳದಲ್ಲಿ ಜನ ಕಿಕ್ಕಿರಿದು ನಿಂತು ಕಾರ್ಯಕ್ರಮದ ಶುಭಾರಂಭಕ್ಕೆ ಕಾಯುತ್ತಿದ್ದರು. ಕೆಲವು ಕನ್ನಡ ಸಂಘದ ಕಾರ್ಯಕರ್ತರು ಸಕಲ ಸಿದ್ಧತೆಗಳನ್ನು ನೆರವೇರಿಸುವುದರದಲ್ಲಿ ಮಗ್ನರಾಗಿದ್ದರೆ, ಮತ್ತೆ ಕೆಲವರು ಕಾರ್ಯಕ್ರಮಕ್ಕೆ ಆಗಮಿಸಿದ ಪ್ರೇಕ್ಷಕರನ್ನು ನೋಂದಾಯಿಸುವುದು ಮತ್ತು ಮುಂಬರುವ ಕಾರ್ಯಕ್ರಮಗಳ ಬಗ್ಗೆ ವಿವರಿಸುವುದರಲ್ಲಿ ನಿರತರಾಗಿದ್ದರು. ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾದ ಬೆಂಗಳೂರಿನ "KNS INFRASTRUCTURE Pvt. Ltd. Bangalore" ಯೋಜನೆಗಳನ್ನು ಕುರಿತು ಪರಿಚಯ ಮಾಡಿಕೊಡುತ್ತಿದ್ದರು. ಸಹ ಪ್ರಾಯೋಜಕರಾದ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ತಮ್ಮ ಮಳಿಗೆಯಲ್ಲಿ ತಮ್ಮ ಆಭರಣಗಳ ಕುರಿತಾದ ಬಿತ್ತಿಪತ್ರಗಳನ್ನು ಹಂಚುವಲ್ಲಿ ನಿರತರಾಗಿದ್ದರು. [ಸಿಂಗಪುರದಲ್ಲಿ 'ಕನ್ನಡ ಡಿಂಡಿಮ' - ದೀಪೋತ್ಸವ 2015]

Mesmerizing music by Laya Tharanga in Singapore

ಒಳಗೆ ವೇದಿಕೆ ತುಂಬಾ ಸುಂದರವಾಗಿ ಸುಸಜ್ಜಿತಗೊಂಡಿತ್ತು. ವಿ ಜಿ ರಮೇಶ್ ಅವರು ವಿನ್ಯಾಸಗೊಳಿಸಿದ, ಕಾರ್ಯಕ್ರಮದ ವಿವರಗಳನ್ನು ಹೊಂದಿದ ದೊಡ್ಡ ಫಲಕವನ್ನು ವೇದಿಕೆಯ ಮೇಲ್ಭಾಗದಲ್ಲಿ ಇಳಿ ಬಿಟ್ಟಿದ್ದರು. ಗಿರೀಶ್ ಜಮದಗ್ನಿ ನೇತೃತ್ವದಲ್ಲಿ ಮೂರು ದಿಕ್ಕುಗಳಿಂದ ಮೂರು ಛಾಯಾಗ್ರಾಹಕರು (ಮನೋಜ್ಞ, ಶ್ರೇಯಸ್ ಮತ್ತು ವೇಣುಗೋಪಾಲ್) ಕಾರ್ಯಕ್ರಮವನ್ನು ಸೆರೆ ಹಿಡಿಯಲು ಸಿದ್ಧರಾಗಿ ನಿಂತಿದ್ದರು.

ಸರಿಯಾಗಿ ಸಂಜೆ ಆರಕ್ಕೆ ಶುರುವಾದ ಕಚೇರಿಯ ಆರಂಭದಲ್ಲಿ ಕಾರ್ಯಕ್ರಮದ ನಿರೂಪಕಿ ರಶ್ಮಿ ಉದಯಕುಮಾರ್ ಅವರು ಸಮಾರಂಭಕ್ಕೆ ಆಗಮಿಸಿದ ಗಣ್ಯರು ಮತ್ತು ಪ್ರೇಕ್ಷಕರಿಗೆ ಕಾರ್ಯಕ್ರಮದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು. ಕನ್ನಡ ಸಂಘ (ಸಿಂಗಪುರ)ದ ಅಧ್ಯಕ್ಷ ವಿಜಯರಂಗಪ್ರಸಾದ್ ಅವರು ಸ್ವಾಗತ ಭಾಷಣ ಮಾಡುತ್ತಾ, ಕನ್ನಡ ಸಂಘ ಇಂದು SOTA (School Of The Arts)ದಂತಹ ಪ್ರತಿಷ್ಠಿತ ವೇದಿಕೆಯ ಮೇಲೆ ಕಾರ್ಯಕ್ರಮದ ಏರ್ಪಾಟು ಮಾಡುವಷ್ಟು ಬೆಳೆದು ನಿಂತದ್ದನ್ನು ನೋಡಿ ಹೆಮ್ಮೆ ಆಗುತ್ತದೆ ಎಂದಾಗ, ಇಡೀ ಸಭೆ ಕರತಾಡನ ಮಾಡಿ ಪ್ರಶಂಸಿಸಿತು. ಕನ್ನಡ ಸಂಘವನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಸಿಂಗನ್ನಡಿಗರಾದ ನಮ್ಮ ಮೇಲಿದೆ ಎಂದು ಹೇಳಿದರು. [ಸಿಂಗಪುರದಲ್ಲಿ ಕನ್ನಡ ಹುಡುಗಿಯ ಅಪರೂಪದ ಸಾಧನೆ]

ಲಯಸಾಗರದಲ್ಲಿ ಮೈಮರೆತ ಪ್ರೇಕ್ಷಕರು : ಸ್ವಾಗತ ಭಾಷಣದ ನಂತರ ವೇದಿಕೆಯ ಮೇಲೆ ಆಗಮಿಸಿದ ಲಯತರಂಗ ತಂಡದ ಕಲಾವಿದರಾದ ರವಿಚಂದ್ರ ಕುಳುರು (ಕೊಳಲು), ಜಯಚಂದ್ರ ರಾವ್ (ಮೃದಂಗ), ಗಿರಿಧರ್ ಉಡುಪ (ಘಟ), ಪ್ರಮಾಥ್ ಕಿರಣ್ (ಪರ್ಕಶನ್), ಮಥಿಯಾಸ್ ಮುಲ್ಲರ್ (ಗಿಟಾರ್) ಮತ್ತು ಅರುಣ್ ಕುಮಾರ್ (ಡ್ರಮ್ಸ್) ವೇದಿಕೆಯ ಮೇಲೆ ಆಗಮಿಸಿ ಸಭಿಕರಿಗೆ ನಮಸ್ಕರಿಸಿ ತಮ್ಮ ಕಚೇರಿಯನ್ನು ಆರಂಭಿಸಿದರು. ಕ್ಷಣಗಳುರುಳಿದಂತೆ ಲಯತರಂಗದ ಲಯಸಾಗರದಲ್ಲಿ ಪ್ರೇಕ್ಷಕರೆಲ್ಲ ಮೈಮರೆತು ತಲ್ಲೀನರಾದರು ಎಂದರೆ ಅತಿಶಯೋಕ್ತಿಯಲ್ಲ. ಮುತ್ತುಸ್ವಾಮಿ ದೀಕ್ಷಿತರ ಮಹಾಗಣಪತಿಂ ಕೃತಿಯ ಮೇಲೆ ಆಧರಿಸಿ ರಚಿಸಿದ ಕೃತಿಯಿಂದ ಆರಂಭಿಸಿದ ತಂಡ, ಮುಲ್ಲರ್ ಅವರ ನಳನಕಾಂತಿ ರಾಗದ ಕೃತಿ, ಭೈರವ್ ರಾಗದ ಅಜನಿರ್ವಿಕಲ್ಪಂ ಮುಂತಾದ ಕೃತಿಗಳನ್ನು ಅದ್ಭುತವಾಗಿ ಪ್ರಸ್ತುತಪಡಿಸಿತು.

Mesmerizing music by Laya Tharanga in Singapore

ಇದಾದ ನಂತರ ಎಲ್ಲ ಕಲಾವಿದರು ಸರದಿಯಲ್ಲಿ ವಾದ್ಯಗಳನ್ನು ನುಡಿಸಿ ತಮ್ಮ ತಮ್ಮ ವಾದ್ಯಗಳ ಮೇಲೆ ತಮಗಿರುವ ನೈಪುಣ್ಯತೆಯನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿದರು. ಇದರ ಮೇಲೆ ಪ್ರಸ್ತುತಪಡಿಸಿದ ವಾದ್ಯಗಳ "ಬೋಲ್‍"ಗಳ ಜುಗಲ್‍ಬಂದಿ ಮತ್ತು ವಾದ್ಯಗಳ ಜುಗಲ್‍ಬಂದಿ ಪ್ರೇಕ್ಷಕರನ್ನು ರಂಜಿಸಿ ಅವರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಕಲಾವಿದರು ಪ್ರೇಕ್ಷಕರನ್ನು ತಮ್ಮೊಂದಿಗೆ ತಾಳಕ್ಕೆ ತಕ್ಕಂತೆ ತಾಳ ಹಾಕಲು ಪ್ರೇರೇಪಿಸಿದಾಗ ಇಡೀ ಸಭೆ ಕಚೇರಿಯಲ್ಲಿ ಸ್ವತಃ ಪಾಲ್ಗೊಂಡು ನಾದವೈಭವವನ್ನು ಮೆರೆಸಿತು. [ಸಿಂಗಪುರದಲ್ಲಿ ನರೇಂದ್ರ ಮೋದಿ ಭಾಷಣದ ಜಾದೂ]

ಕಾರ್ಯಕ್ರಮದ ಎರಡನೇ ಹಂತದಲ್ಲಿ ವೇದಿಕೆಗೆ ಆಗಮಿಸಿದ ಗಾಯಕಿ ಪಲ್ಲವಿ ಅರುಣ್ ಗಣೇಶನ ಪ್ರಾರ್ಥನೆ "ಪರಬ್ರಹ್ಮರೂಪ ಗಣೇಶಂ ಭಜೇ" ಹಾಡಿನೊಂದಿಗೆ ತಮ್ಮ ಗಾಯನದ ಕಾರ್ಯಕ್ರಮ ಆರಂಭಿಸಿದರು. ಗೋಪಾಲ ಕೃಷ್ಣ ಅಡಿಗರ "ಯಾವ ಮೋಹನ ಮುರಳಿ ಕರೆಯಿತೋ", ಜನಪ್ರಿಯ ಚಿತ್ರಗೀತೆಗಳಾದ "ನೋಡಯ್ಯ ಕ್ವಾಟೆ ಲಿಂಗವೇ", ಮತ್ತು "ಪ್ರಪಂಚವೇ ದೇವರು ಮಾಡಿರೋ ಬಾರು", ಕೆ.ಎಸ್ ನರಸಿಂಹಸ್ವಾಮಿ ಅವರ "ದೀಪವು ನಿನ್ನದೇ ಗಾಳಿಯು ನಿನ್ನದೇ" ಮತ್ತು ಜಿ.ಎಸ್ ಶಿವರುದ್ರಪ್ಪನವರ "ಎದೆ ತುಂಬಿ ಹಾಡಿದೆನು ಅಂದು ನಾನು" ಮುಂತಾದವುಗಳನ್ನು ಭಾವಪೂರ್ಣವಾಗಿ ಹಾಡಿ ರಂಜಿಸಿದರು. ಕನ್ನಡೇತರ ಪ್ರೇಕ್ಷಕರಿಗಾಗಿ ಹಿಂದಿ ಹಾಡುಗಳಾದ "ಚೀನಿ ಕಮ್" ಮತ್ತು "ದಮ್ ಮಾರೋ ದಮ್" ಹಾಡುಗಳನ್ನು ಹಾಡಿದಾಗ ಪ್ರೇಕ್ಷಕರಿಂದ ಕಿಡಿಗಡಚಿಕ್ಕುವ ಚಪ್ಪಾಳೆ.

ಸಾಧಕರಿಗೆ ಸನ್ಮಾನ : ನಂತರ ಕಾರ್ಯಕ್ರಮದ ನಿರೂಪಕಿ ರಶ್ಮಿ ಉದಯಕುಮಾರ್ ಮುಂಬರುವ ಕನ್ನಡ ಸಂಘದ ಅನೇಕ ಕಾರ್ಯಕ್ರಮಗಳ ಬಗ್ಗೆ ವಿವರಿಸಿ ಸಿಂಗನ್ನಡಿಗರನ್ನು ಭಾಗವಹಿಸಲು ಕೋರಿದರು. ಕಲಾವಿದರನ್ನು ಕನ್ನಡ ಸಂಘ, ಸಿಂಗಪುರ ಸತ್ಕರಿಸಿತು. ಅವರನ್ನು ಸತ್ಕರಿಸಲು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶಂಕರರಾಜನ್ ಮತ್ತು ಸಂಘದ ಅಧ್ಯಕ್ಷರಾದ ವಿಜಯರಂಗಪ್ರಸಾದ್ ಅವರು ಕನ್ನಡ ಸಂಘ (ಸಿಂಗಪುರ)ದ ಪರವಾಗಿ ಎಲ್ಲಾ ಅತಿಥಿಗಳಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಅಭಿವಂದಿಸಿದರು. ಒಬ್ಬೊಬ್ಬರಂತೆ ಕಲಾವಿದರನ್ನು ಕರೆದು ಅವರ ಪರಿಚಯ ಮತ್ತು ಸಾಧನೆಗಳನ್ನು ವಿವರಿಸಿದಾಗ ಸಭಿಕರ ಚಪ್ಪಾಳೆಯ ಶಬ್ದ ಎಲ್ಲ ದಿಕ್ಕುಗಳಲ್ಲಿ ಮೊಳಗಿತು. ಮುಖ್ಯ ಅತಿಥಿಗಳು ಮತ್ತು ಕಾರ್ಯಕ್ರಮದ ಪ್ರಾಯೋಜಕರಿಬ್ಬರಿಗೂ ಕಾಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾದ ಬೆಂಗಳೂರಿನ "KNS INFRASTRUCTURE Pvt. Ltd. Bangalore"ನ ಅಧಿಕಾರಿ ತಮ್ಮ ಯೋಜನೆಗಳ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದರು. ಕಾರ್ಯಕ್ರಮದ ರೂವಾರಿ ವೆಂಕಟೇಶ್ ಅವರು ಅಭಿನಂದನೆ ಸಲ್ಲಿಸಿದರು.

ಕೊನೆಯದಾಗಿ ಮತ್ತೊಮ್ಮೆ ಕಲಾವಿದರೆಲ್ಲ ವೇದಿಕೆಯ ಮೇಲೆ ಆಗಮಿಸಿ "Grand Finale"ಯ ಅಂಗವಾಗಿ "ಕೃಷ್ಣಾ ನೀ ಬೇಗನೇ ಬಾರೋ", "ದಮಾ ದಮ್ ಮಸ್ತಕಲಂದರ್" ಮತ್ತು ಸರಣಿ ವಾದನಗಳೊಂದಿಗೆ ಅದ್ಭುತವಾಗಿ ಕಾರ್ಯಕ್ರಮವನ್ನು ಮುಗಿಸಿದಾಗ ನೆರೆದಿದ್ದ ಸಭಿಕರಿಗೆ ಸುಮಾರು ಮೂರು ಗಂಟೆಗಳ ಕಾರ್ಯಕ್ರಮ ಇಷ್ಟು ಬೇಗ ಮುಗಿಯಿತೇ ಎಂದು ಭಾಸವಾಯಿತು. ಕಾರ್ಯಕ್ರಮ ಮುಗಿಸಿ ಹೊರಬಂದಾಗ ಸಂತೃಪ್ತಿ ತುಂಬಿದ ಮುಖಗಳು ಮತ್ತು ಪ್ರಶಂಸೆಯ ಮಾತುಗಳೇ ಎಲ್ಲ ಕಡೆಗೆ! ಇಂತಹ ಕಾರ್ಯಕ್ರಮವೊಂದನ್ನು ಏರ್ಪಡಿಸಿ ಕನ್ನಡ ಸಂಘ (ಸಿಂಗಪುರ) ಗುಣಮಟ್ಟದ ಹೊಸ ಮಟ್ಟಕ್ಕೆ ತಲುಪಿದೆ, ಮುಂದೆಯೂ ಇಂತಹ ಅನೇಕ ಕಾರ್ಯಕ್ರಮಗಳಾಗಲಿ ಎಂಬ ಮಾತುಗಳು ಕೇಳಿಬಂದವು.

ಒಟ್ಟಿನಲ್ಲಿ ಕನ್ನಡ ಸಂಘ (ಸಿಂಗಪುರ)ಕ್ಕೆ ಇದೊಂದು ಮುಖ್ಯ ಹೆಜ್ಜೆ. ಅಲ್ಲದೇ ಸುಸಂಸ್ಕೃತ ಕನ್ನಡಿಗ ಇಂತಹ ಸದಭಿರುಚಿಯ ಕಾರ್ಯಕ್ರಮಗಳನ್ನು ನೀಡಿದರೆ ಯಾವಾಗಲೂ ಅದ್ಭುತವಾಗಿ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ಈ ಕಾರ್ಯಕ್ರಮ ಸಿದ್ಧ ಮಾಡಿ ತೋರಿಸಿದೆ.

ವರದಿ: ವಸಂತ ಕುಲಕರ್ಣಿ, ಸಿಂಗಪುರ
ಛಾಯಾಚಿತ್ರಗಳು: ಗಿರೀಶ್ ಜಮದಗ್ನಿ, ಸಿಂಗಪುರ

English summary
Kannada Singha Singapore presented 'Laya Tharanga', a Confluence of Sounds (musical orchestra) - A fusion of Indian Classical with another genres from across the globe. The program was organized at School Of The Arts (SOTA) auditorium. Laya Tharanga, lead by Arun Kumar from Bengaluru presented some wonderful music.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X