ಸಿಂಗಪುರದಲ್ಲಿ ಕರ್ನಾಟಕದ ಶಾಸ್ತ್ರೀಯ ಸಂಗೀತ ಶಿಬಿರ

By: ವಸಂತ ಕುಲಕರ್ಣಿ, ಸಿಂಗಪುರ
Subscribe to Oneindia Kannada

ಕರ್ನಾಟಕ ಶಾಸ್ತ್ರೀಯ ಸಂಗೀತವೆಂದರೆ ಸಂಗೀತ ಪ್ರೇಮಿಗಳಿಗೆಲ್ಲರಿಗೂ ಮೊದಲಿಗೆ ನೆನಪಾಗುವುದು ಸಂಗೀತ ತ್ರಿಮೂರ್ತಿಗಳಾದ ಶ್ರೀ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮ ಶಾಸ್ತ್ರಿಗಳು. ತ್ಯಾಗರಾಜರ ನಂತರ ಬಂದ ರಚನೆಕಾರರಲ್ಲಿ ಕರ್ನಾಟಕ ರಾಜ್ಯದ ಮೈಸೂರು ವಾಸುದೇವಾಚಾರ್ಯ ಮತ್ತು ಮುತ್ತಯ್ಯ ಭಾಗವತರು ಕರ್ನಾಟಕ ಸಂಗೀತಕ್ಕೆ ನೀಡಿದ ಕೊಡುಗೆ ಅಪಾರ. ಇಂತಹ ಮಹತ್ವದ ರಚನೆಕಾರರ ಕೃತಿಗಳನ್ನು, ಕಡಲಾಚೆಗೆ, ಕನ್ನಡ ಕಲಾವಿದರೊಬ್ಬರಿಂದ ಕಲಿಯುವ ಅವಕಾಶ ಬಹಳ ಅಪರೂಪ ಹಾಗೂ ವಿಶೇಷ ಎಂದೇ ಹೇಳಬಹುದು.

ಇಂತಹ ಅವಕಾಶವನ್ನು ಒದಗಿಸಿ ಕೊಟ್ಟವರು ಸಿಂಗಪುರದಲ್ಲಿ 2013 ಮತ್ತು 2014ರಲ್ಲಿ "ದಾಸಸಾಹಿತ್ಯ ಸಂಗೀತ ಶಿಬಿರ" ಹಾಗೂ "ಸುಗಮ ಸಂಗೀತ ಶಿಬಿರ"ಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದ, ವಿದುಷಿ ಅಶ್ವಿನಿ ಸತೀಶ್ ಅವರು. ಸಂಗೀತಾರ್ಥಿಗಳನ್ನು ಮುಂದಿನ ಮಟ್ಟಕ್ಕೆ ಕೊಂಡೊಯ್ಯುವುದು ಈ ಶಿಬಿರದ ಸದುದ್ದೇಶ ಕೂಡ. ಅವರ ಆಸಕ್ತಿ ಮತ್ತು ಪರಿಶ್ರಮದಿಂದ 2016ರ ಜುಲೈ ತಿಂಗಳಿನಲ್ಲಿ ಆರಂಭವಾದ ಕರ್ನಾಟಕದ ಸಂಗೀತ ರಚನೆಕಾರರ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಬಿರ 18ನೇ ಸೆಪ್ಟೆಂಬರ್ ರಂದು ಸಂಗೀತ ಕಾರ್ಯಕ್ರಮದೊಂದಿಗೆ ಸಂಪೂರ್ಣಗೊಂಡಿತು.

Karnataka music workshop by Ashwini Satish in Singapore

ಇಂಥದೊಂದು ಶಿಬಿರವನ್ನು ನಡೆಸುವ ಕನಸು ಹೊತ್ತು, ಸಂಗೀತಾಸಕ್ತರನ್ನು ಒಂದುಗೂಡಿಸಿ ವಿದುಷಿ ಅಶ್ವಿನಿಯವರು ಈ ಶಿಬಿರವನ್ನು ಆಯೋಜಿಸಿ, ಸುಮಾರು ಹತ್ತು ವಾರಾಂತ್ಯಗಳಲ್ಲಿ ಮೈಸೂರು ವಾಸುದೇವಾಚಾರ್ಯರ ಮತ್ತು ಮುತ್ತಯ್ಯ ಭಾಗವತರ ರಚನೆಗಳನ್ನು ಸಂಗೀತಾರ್ಥಿಗಳಿಗೆ ಹೇಳಿಕೊಟ್ಟರು. ಗುರುಗಳ ಪರಿಶ್ರಮ ಮತ್ತು ಸಂಗೀತಾರ್ಥಿಗಳ ಉತ್ಸಾಹ, ಕಲಿಯುವ ಮನೋಭಾವದ ಫಲವಾಗಿ ಈ ಶಿಬಿರ ಸಾಂಗವಾಗಿ ನೆರವೇರಿತು.

ಶಿಬಿರದಲ್ಲಿ ಮುತ್ತಯ್ಯ ಭಾಗವತರ ಹಂಸಧ್ವನಿ ರಾಗದ "ಗಂ ಗಣಪತೇ", ಗೌಡ ಮಲ್ಹಾರದ "ಸಾರಸ ಮುಖಿ", ವಿಜಯನಾಗರಿ ರಾಗದ "ವಿಜಯಾಂಬಿಕೆ" ಮತ್ತು ಮೈಸೂರು ವಾಸುದೇವಾಚಾರ್ಯರ ಸರಸ್ವತಿ ಮನೋಹರಿ ರಾಗದ "ಕರುಣಿಸೌ ತಾಯೆ", ಶುದ್ಧ ಧನ್ಯಾಸಿ ರಾಗದ "ಶ್ರೀ ಹರಿ ವಲ್ಲಭೇ", ಸುನಾದ ವಿನೋದಿನಿ ರಾಗದ "ದೇವಾದಿ ದೇವ, ಶ್ರೀ ವಾಸುದೇವ", ನಾಗಸ್ವರಾವಳೀ ರಾಗದ "ರಮಾ ರಮಣ ನಾರಾಯಣ" ಮತ್ತು ಕಾಪಿ ರಾಗದ "ಗೋವಿಂದಂ ಭಜರೇ ಮನ" ಮುಂತಾದ ಸರಳ ಕೃತಿಗಳನ್ನು ವಿದುಷಿ ಅಶ್ವಿನಿ ಶಿಬಿರಾರ್ಥಿಗಳಿಗೆ ಹೇಳಿಕೊಟ್ಟರು. ಕನ್ನಡಾಭಿಮಾನಿಯಾದ ಅಶ್ವಿನಿ ಸತೀಶ್ ಕನ್ನಡದ ರಚನೆಕಾರರನ್ನು ಸಿಂಗಪುರದ ಅನೇಕ ಸಂಗೀತ ಸಭೆ, ಕಾರ್ಯಕ್ರಮಗಳ ಮೂಲಕ ಸಭಿಕರಿಗೆ ಪರಿಚಯಿಸುವುದನ್ನು ಮತ್ತು ಪ್ರಚಲಿತಗೊಳಿಸುವುದನ್ನು ಎಂದೂ ಮರೆಯುವುದಿಲ್ಲ. ಈ ಶಿಬಿರ ಕೂಡ ಈ ದಿಶೆಯಲ್ಲಿ ಒಂದು ಮಹತ್ವದ ಹೆಜ್ಜೆ.

Karnataka music workshop by Ashwini Satish in Singapore

ಈ ಶಿಬಿರ ಕೂಡ ಎಂದಿನಂತೆ ಎಲ್ಲ ವಿದ್ಯಾರ್ಥಿಗಳು ಸೇರಿ ಆಯೋಜಸಿದ ಚಿಕ್ಕ, ಚೊಕ್ಕ, ಸರಳವಾದ ಈ ಕಾರ್ಯಕ್ರಮದೊಂದಿಗೆ ಮುಕ್ತಾಯವಾಯಿತು. ಅಶ್ವಿನಿ ಸತೀಶ್ ಅವರ ಪ್ರಸ್ತಾವನೆಯೊಂದಿಗೆ ಆರಂಭವಾದ ಕಾರ್ಯಕ್ರಮದ ಮೊದಲ ಕೃತಿ ಮುತ್ತಯ್ಯ ಭಾಗವತರ "ಗಂ ಗಣಪತೇ ನಮೋ". ನಂತರ "ಸಾರಸಮುಖಿ" ಕೃತಿಯನ್ನು ಕುಮಾರಿ ಧೃತಿ ಭಟ್ಟ ಕೀ ಬೋರ್ಡ್ ಮತ್ತು ಕುಮಾರ ಕಿಶನ್ ಹೆಬ್ಬಾರ್ ಪಿಟೀಲಿನಲ್ಲಿ ನುಡಿಸಿ ಸಭಿಕರನ್ನು ರಂಜಿಸಿದರು. ಮೈಸೂರು ವಾಸುದೇವಾಚಾರ್ಯರ ಕೃತಿ "ಶ್ರೀ ಹರಿ ವಲ್ಲಭೆ" ಕೃತಿಯನ್ನು ರಾಗದ ಮನೋಧರ್ಮವನ್ನು ಪ್ರಸ್ತುತ ಪಡಿಸುವುದರ ಮೂಲಕ ಕುಮಾರಿ ಧನ್ಯಾ ಅಯ್ಯರ್ ಮತ್ತು ಕುಮಾರಿ ದಿಶಾ ನಾಯಕರ್ ರಾಗಾಲಾಪನೆಯ ಮೂಲಕ ಆರಂಭಿಸಿದರು.

ಶಿಬಿರಾರ್ಥಿಗಳೆಲ್ಲ ಸುಶ್ರಾವ್ಯವಾಗಿ ಕೃತಿಯನ್ನು ಹಾಡಿದ ನಂತರ ಪ್ರೀತಾ ಶ್ರೀರಾಮ್ ಅವರು ಅಚ್ಚುಕಟ್ಟಾದ ಸ್ವರಪ್ರಸ್ತಾರದೊಡನೆ ಅಂತ್ಯಗೊಳಿಸಿದರು. ಹೀಗೆಯೇ ಮುಂದುವರೆದು "ಗೋವಿಂದಂ ಭಜರೇ ಮನ" ಕೃತಿಯೊಂದಿಗೆ ಶಿಬಿರಾರ್ಥಿಗಳ ಪ್ರಸ್ತುತಿ ಮುಕ್ತಾಯಗೊಂಡಿತು. ಈ ಕೃತಿಯ ಮನೋಧರ್ಮವನ್ನು ಕುಮಾರಿ ಅನುಷ್ಕ ಹಾಡಿ ಸಭಿಕರ ಮನಗೆದ್ದರು. ಇದಾದ ನಂತರ ಅಶ್ವಿನಿ ಸತೀಶ್ ಅವರು ಮೈಸೂರು ವಾಸದೇವಾಚಾರ್ಯರ ಕೃತಿಯೊಂದನ್ನು ಪ್ರಸ್ತುತ ಪಡಿಸಿದ್ದು ವಿಶೇಷವಾಗಿತ್ತು. ವಿದ್ವಾನ್ ಆದಿತ್ಯ ಅವರು ಪಿಟೀಲಿನ ಮೇಲೆ ಹಾಗೂ ವಿದ್ವಾನ್ ಮುತ್ತುಸುಬ್ರಮಣಿಯಂ ಅವರು ಜೊತೆ ನೀಡಿದರು.

Karnataka music workshop by Ashwini Satish in Singapore

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿದುಷಿ ಶ್ರೀವಿದ್ಯಾ ಶ್ರೀರಾಮ್ ಅವರು ಮಾತನಾಡುತ್ತಾ, ಮುಖ್ಯವಾಗಿ ಇಂದು ಎಲ್ಲರೂ ತ್ರಿಮೂರ್ತಿ ರಚನೆಕಾರರ ಹಾಗೂ ಪ್ರಚಲಿತ ರಾಗಗಳ ಸರಳ ಕೃತಿಗಳನ್ನು ಎಲ್ಲರೂ ಕಲಿಯುವಂತಹ ಇಂದಿನ ದಿನಗಳಲ್ಲಿ, ಮೈಸೂರು ವಾಸುದೇವಾಚಾರ್ಯ ಮತ್ತು ಮುತ್ತಯ್ಯ ಭಾಗವತರಂತಹ ಅಪರೂಪದ ರಚನೆಕಾರರ ಕೃತಿಗಳನ್ನು ಬೆಳಕಿಗೆ ತರುವ ಹಾಗೂ ಅಪರೂಪದ ರಾಗಗಳನ್ನು ಪರಿಚಯಿಸುವ ಇಂತಹ ಪ್ರಯತ್ನ ವಿಭಿನ್ನ ಮತ್ತು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು. ಈ ಕಾರ್ಯಕ್ರಮದಲ್ಲಿ ಮಕ್ಕಳಷ್ಟೇ ಅಲ್ಲದೆ ತಂದೆ ತಾಯಿಯರೂ ಪಾಲ್ಗೊಂಡಿರುವುದು ಶ್ಲಾಘನೀಯವೆಂದರು.

ಚೈತ್ರ ಜಗದೀಶ್ ಅವರು ಸ್ವಾಗತಿಸಿ, ಕಾರ್ಯಕ್ರಮದ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ವಸಂತ ಕುಲಕರ್ಣಿ ರಚನೆಕಾರರನ್ನು ಕುರಿತು ಮಾತನಾಡಿದರು ಹಾಗೂ ಪ್ರೀತಾ ಶ್ರೀರಾಮ್ ವಂದಿಸಿದರು. ಲೋಕೇಶ್ವರಿ ನಾಯಕರ್ ಮತ್ತು ಕುಮಾರಿ ತನ್ವಿ ಅವರು ಶಿಬಿರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

Karnataka music workshop by Ashwini Satish in Singapore

ಅಶ್ವಿನಿ ಸತೀಶ್ ಅವರ ಬಗ್ಗೆ

ಆಕಾಶವಾಣಿ ಬೆಂಗಳೂರಿನ B HIGH ಶ್ರೇಣಿಯಲ್ಲಿ ಕರ್ನಾಟಕ ಶಾಸ್ತ್ರೀಯ, ಲಘು ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತ ಕಲಾವಿದೆಯಾದ ಅಶ್ವಿನಿ ಸತೀಶ್ ಅವರು ದುಬೈನಲ್ಲಿ ಕೆಲವು ವರ್ಷಗಳಿದ್ದು, ಸಿಂಗಪುರಕ್ಕೆ ಬಂದದ್ದು 2012ರ ಉತ್ತರಾರ್ಧದಲ್ಲಿ. ವಿದುಷಿ ಡಾ.ಟಿ.ಎಸ್. ಸತ್ಯವತಿ ಅವರ ಬಳಿ ಸಂಗೀತ ಕಲಿತ ಅಶ್ವಿನಿ ಅವರು, ಕನ್ನಡ ದೂರದರ್ಶನ ಚಾನೆಲ್ಗಳಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ.

2016ರಲ್ಲಿ "ಅನನ್ಯ ಯುವ ಪುರಸ್ಕಾರ" ಪಡೆದ ಅಶ್ವಿನಿ ಅವರು ಭಾರತ, ದುಬೈ, ಬರ್ಮಿಂಗ್ಹ್ಯಾಮ್, ಮಲೇಶಿಯಾ ಮತ್ತು ಸಿಂಗಪುರದಲ್ಲಿ ಹಲವಾರು ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಲ್ಲದೆ, ಭಾರತ, ಅಮೇರಿಕ ಹಾಗೂ ಸಿಂಗಪುರದ ಸಂಗೀತಾರ್ಥಿಗಳಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಕ್ಷಣ ನೀಡುತ್ತಿದ್ದು, ತಮ್ಮದೇ ಹಲವಾರು ಸಂಗೀತ ಸುರುಳಿಗಳನ್ನೂ ಬಿಡುಗಡೆ ಮಾಡಿದ್ದಾರೆ.

ವರದಿ : ವಸಂತ ಕುಲಕರ್ಣಿ (ಸಿಂಗಪುರ)
ಛಾಯಾಚಿತ್ರ : ಚಂದ್ರ ಶೇಖರ್ ಕಿಗ್ಗ (ಸಿಂಗಪುರ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka music workshop on rare compositions by Mysore Vasudevacharya and Muttaiya Bhagavatar conducted by Vidushi Ashwini Satish in Singapore. The workshop was concluded with rendering of songs by workshop students.
Please Wait while comments are loading...