ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಲ್ಟನ್ ಕೀನ್ಸ್ ಕನ್ನಡಿಗರ ಚೊಚ್ಚಲ ರಾಜ್ಯೋತ್ಸವ

By ಗಿರೀಶ್, ಯುಕೆ
|
Google Oneindia Kannada News

2014ರ, 1ನೇ ನವೆಂಬರ್, ಯುಕೆಯ ಕನ್ನಡಿಗರಿಗೆ ಕೇವಲ ಒಂದು ಸಾಧಾರಣ ವಾರಾಂತ್ಯವಾಗಿರದೇ, ತಮ್ಮ ನೆಲದ ಕಂಪನ್ನು ಸವಿಯುವ ದಿನವಾಗಿತ್ತು. ಇತ್ತೀಚೆಗಷ್ಟೇ ತನ್ನ ದಶಮಾನೋತ್ಸವ ಸಮಾರಂಭವನ್ನು ಬಹಳ ಸಂಭ್ರಮದಿಂದ ಆಚರಿಸಿದ ಕನ್ನಡಿಗರುಯುಕೆಯ ಹೊಸ ಶಾಖೆಯಾದ 'ಕನ್ನಡಿಗರು ಮಿಲ್ಟನ್ ಕೀನ್ಸ್' ರವರು ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು.

ಶಾಖೆಯ ಮುಖಂಡ ಅನಿಲ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಚೊಚ್ಚಲ ಕನ್ನಡ ರಾಜ್ಯೋತ್ಸವದಲ್ಲಿ 200ಕ್ಕೂ ಹೆಚ್ಚು ಕನ್ನಡಿಗರು ಭಾಗವಹಿಸಿ ಸಡಗರದಿಂದ 59ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು.

ಮಧ್ಯಾಹ್ನ 3ರಿಂದ ಸಂಜೆ 8ರವರೆಗೆ ನಡೆದ ಈ ನಾಡಹಬ್ಬದಲ್ಲಿ ಮಿಲ್ಟನ್ ಕೀನ್ಸ್ ಅಷ್ಟೇ ಅಲ್ಲದೆ ದೂರ ದೂರದಿಂದ ಕನ್ನಡಾಭಿಮಾನಿಗಳು ಕುಟುಂಬ ಸಮೇತರಾಗಿ ಬಂದು ಭಾಗವಹಿಸಿದ್ದು ವಿಶೇಷವಾಗಿತ್ತು. ಪುಟಾಣಿಗಳ 'ಹಚ್ಚೇವು ಕನ್ನಡದ ದೀಪ' ನೃತ್ಯರೂಪಕದೊಂದಿಗೆ ಪ್ರಾರಂಭವಾದ ಸಮಾರಂಭ ತನ್ನ ವೈವಿಧ್ಯಮಯ ಕಾರ್ಯಕ್ರಮಗಳಿಂದ ಜನಮನ ಸೂರೆಗೊಂಡಿತು.


ಕನ್ನಡದ ಹಿರಿಯ ಕಲಾವಿದ 'ಅಭಿನಯ ಚತುರ' ಎಸ್. ಶಿವರಾಂರವರು ಹಾಗು ಮಿಲ್ಟನ್ ಕೇನ್ಸ್ ಕೌನ್ಸಿಲರ್ ಗೀತಾ ಮೋರ್ಲಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳು ಕನ್ನಡ ನಾಡು, ನುಡಿ, ಏಕೀಕರಣದ ಸಂದೇಶವನ್ನು ಸಾರಿದರು.

ಶಿವರಾಂರವರು ತಮ್ಮ ಚಿತ್ರಬದುಕನ್ನು ಮೆಲುಕು ಹಾಕುತ್ತ ತಾವು ನಟಿಸಿದ 'ಪ್ರೇಮಾಯಣ', 'ಶರಪಂಜರ' ಮುಂತಾದ ಚಿತ್ರಗಳ ಸ್ವಾರಸ್ಯಕರ ಘಟನೆಗಳನ್ನು ಹಂಚಿಕೊಂಡರು. ತಮ್ಮ ತಿಳಿಹಾಸ್ಯ ಭರಿತ ಭಾಷಣದಿಂದ ಜನರನ್ನು ನಗೆಗಡಲಲ್ಲಿ ತೇಲಿಸಿದರು.

Kannada Rajyotsava by Milton Keynes, London

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ 'ಸಮರ್ಥನಂ' ಅಂಗವಿಕಲ ಮಕ್ಕಳು ಪ್ರದರ್ಶಿಸಿದ ನೃತ್ಯರೂಪಕಗಳು ನೆರೆದಿದ್ದ ಜನಸಮೂಹವನ್ನು ಮೂಕವಿಸ್ಮಿತರಾಗಿಸಿದರೆ, ಚಿ. ಬಾಲಸುಬ್ರಮಣ್ಯಂ ನೀಡಿದ ಮಿಮಿಕ್ರಿ, ಹಾಡುಗಳು ಜನರನ್ನು ಬೆರಗುಗೊಳಿಸಿದವು. ಇದೇ ಸಂದರ್ಭದಲ್ಲಿ ಸಮರ್ಥನಂ ಟ್ರಸ್ಟ್ ಗೆ ಕನ್ನಡಿಗರುಯುಕೆಯ ವತಿಯಿಂದ £1,200 ಧನಸಂಗ್ರಹ ಮಾಡಿ, ದಾನ ನೀಡುವುದರಲ್ಲಿ ನೆರವಾದ ಎಲ್ಲ ಸಭಿಕರೂ ಹಾಗೂ ಅತಿಥಿಗಳು ತಮ್ಮ ಭಾಷಾಭಿಮಾನವನ್ನಷ್ಟೇ ಅಲ್ಲದೆ ಹೃದಯ ವೈಶಾಲ್ಯವನ್ನು ಮೆರೆದರು.

Kannada Rajyotsava by Milton Keynes, London

ಕಾರ್ಯಕ್ರಮದ ಮತ್ತೊಂದು ಆಕರ್ಷಣೆ ಸ್ಥಳೀಯ ಪ್ರತಿಭೆಗಳ ಕಲಾ ಪ್ರದರ್ಶನ. ಲಕ್ಷ್ಮಿ ನವೀನ ಅವರ 'ದೇವಿ ನಮನ' ನೃತ್ಯರೂಪಕ, ದೀಪ್ತಿ ನವೀನ ಹಾಗು ತಂಡದವರು ಹಾಡಿದ 'ವಿಶ್ವ ವಿನೂತನ' ಗೀತೆ, ಕು. ಅನರ್ಘ್ಯ ಹಾಡಿದ 'ಹಿಂದೂಸ್ಥಾನವು ಎಂದು ಮರೆಯದ' ಗೀತೆ, ನೀಲಿಮಾ ರಾವ್ ಹಾಗೂ ಅರುಣ್ ಕುಕ್ಕೆಯವರ ಯುಗಳ ಗೀತೆ, ನಿರೂಪಕರಾದ ಗಿರೀಶ್ ಹಾಗೂ ನವೀನ ಹಾಡಿದ 'ಕಾಲವನ್ನು ತಡೆಯೋರು' ಹಾಡುಗಳು ನೆರೆದಿದ್ದ ಜನರ ಮನಮುದಗೊಳಿಸಿದವು. ಪ್ರೇಕ್ಷಕರಿಗೆ ಮನರಂಜನೆಯ ರಸದೂಟವಲ್ಲದೆ, ಲಘು ಉಪಹಾರ, ಹೋಳಿಗೆ ತುಪ್ಪ, ಹಾಗೂ ಉಚಿತ ಪಾನೀಯಗಳ ವ್ಯವಸ್ಥೆಯನ್ನು ಮಾಡಲಾಗಿತ್ತು.

ಗಿರೀಶ್ ಹಾಗೂ ನವೀನರ ಅಚ್ಚುಕಟ್ಟಾದ ನಿರೂಪಣೆಯಿಂದ ತಮ್ಮ ಪ್ರಥಮ ಪ್ರಯತ್ನದಲ್ಲೇ ಒಂದು ಯಶಸ್ವೀ ಕಾರ್ಯಕ್ರಮವನ್ನು ಆಯೋಜಿಸಿದ್ದ ಹೆಮ್ಮೆ ಮಿಲ್ಟನ್ ಕೀನ್ಸ್ ಕನ್ನಡಿಗರು ತಂಡದ್ದಾದರೆ, ಹೇಮಂತ ಋತುವಿನ ಕುಳಿರ್ಗಾಳಿಯ ವಾರಾಂತ್ಯ ಸಂಜೆಯನ್ನು ಕನ್ನಡ ಭಾಷೆ, ಸಂಸ್ಕೃತಿಯ ಸೊಗಡನ್ನು ಅನುಭವಿಸಿ, ತಾಯ್ನಾಡನ್ನು ನೆನಪಿಸಿ ಮೈಮರೆತ ಸಂತೃಪ್ತಿ ಕನ್ನಡಾಭಿಮಾನಿಗಳಲ್ಲಿತ್ತು.

English summary
Kannadigaru UK new chapter at Milton Keynes hosted Kannada Rajyotsava celebration on November 1st. This event had mainly charity in mind and money generated was donated to Samarthanam, school of blinds in Bengaluru. The veteran Kannada actor K. Shivaram was the chief guest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X