ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈರ ಮಾರ ಆಡುವ ಕನ್ನಡದಲ್ಲಿದೆ ಶ್ರೀಮಂತಿಕೆ : ಕೃಷ್ಣೇಗೌಡ

ಕನ್ನಡ ಭಾಷೆಯ ಶಕ್ತಿ, ತಾಕತ್ತು ಪಂಪ, ರನ್ನ, ಜನ್ನ ಮುಂತಾದ ಕವಿಗಳು ಬರೆದಿರುವ ಪದಗಳಲ್ಲಿ ಇಲ್ಲ. ಕನ್ನಡದ ಶಕ್ತಿ ಇರುವುದು ಈರ ಮಾರ ಕೆಂಪ ಆಡುವ ಮಾತುಗಳಲ್ಲಿ. ಹಳ್ಳಿಯಲ್ಲಿರುವ ರೈತ, ಚಮ್ಮಾರ, ಅಗಸ, ಕೂಲಿಕಾರ ಆಡುವ ಮಾತುಗಳಲ್ಲಿ...

By ಪ್ರಸಾದ ನಾಯಿಕ, ಸಿಂಗಪುರ
|
Google Oneindia Kannada News

ಸಿಂಗಪುರ, ಅಕ್ಟೋಬರ್ 29 : "ಕನ್ನಡ ಎನ್ನುವುದು ಬರೀ ಸಂವಹನ ಭಾಷೆಯಲ್ಲ, ಅದು ನಮ್ಮ ಜೀವನ. ಜಗತ್ತಿನ ಅತ್ಯಂತ ಶ್ರೀಮಂತ ಭಾಷೆಗಳಲ್ಲಿ ಕನ್ನಡವೂ ಒಂದು, ಜಗತ್ತಿನ ಸಿಹಿಯಾದ ಐದು ಭಾಷೆಗಳಲ್ಲಿ ಕನ್ನಡವೂ ಒಂದು ಎಂದು ಆಚಾರ್ಯ ವಿನೋಭಾ ಭಾವೆ ಅವರೇ ಹೇಳಿದ್ದಾರೆ. ಅದು ಕನ್ನಡ ಭಾಷೆಯಲ್ಲಿರುವ ತಾಕತ್ತು, ಶಕ್ತಿ."

ಹೀಗೆಂದು ಸಿಂಗಪುರದಲ್ಲಿ ನಡೆಯುತ್ತಿರುವ ಎರಡು ದಿನಗಳ ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ, ಅಕ್ಟೋಬರ್ 29ರಂದು ನರಕ ಚತುರ್ದಶಿಯ ದಿನ, ಹಾಸ್ಯೋತ್ಸವ ಉಕ್ಕಿಸುವ ಬದಲು ಕನ್ನಡ ಭಾಷೆಯ ಬಗ್ಗೆ ಅಭಿಮಾನ ಉಕ್ಕುವಂತೆ ಮಾಡಿ, ಭರ್ಜರಿ ಚಪ್ಪಾಳೆ, ಶಿಳ್ಳೆ, ನಿರರ್ಗಳ ಮಾತುಗಳ ಮೇಲೊಂದಿಷ್ಟು ನಗುವನ್ನೂ ಉಕ್ಕಿಸಿದವರು ಮಾತಿನ ಸರದಾರ ಪ್ರೊ. ಕೃಷ್ಣೇಗೌಡ ಅವರು.

ಕೃಷ್ಣೇಗೌಡರಿಂದ ಹಾಸ್ಯೋಲ್ಲಾಸದ ಮಾತುಗಳನ್ನು ಕೇಳಲು ಬಂದವರಿಗೆ ಅಚ್ಚರಿ ಕಾದಿತ್ತು. ಬೆಳಕಿನ ಹಬ್ಬ ದೀಪಾವಳಿಯಂದು ಕನ್ನಡ ಭಾಷೆಯ ಸುರುಸುರುಬತ್ತಿ, ನಗೆಬುಗ್ಗೆಯ ಹೂಕುಡಿಕೆಗೆ, ಬುಡುಬುಡಿಕೆಯವ ಆಡುವ ಮಾತುಗಳ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯ ಭೂಚಕ್ರವನ್ನೂ ಹಚ್ಚಿದರು. [ಸಿಂಗಪುರದಲ್ಲಿ ಬೆಳಗಿತು ದೀಪ - ಮೊಳಗಿತು ಕನ್ನಡದ ಕಹಳೆ]

Kannada is one of the richest languages in the world : Krishnegowda

ಕನ್ನಡ ಭಾಷೆಯ ಶಕ್ತಿ, ತಾಕತ್ತು ಪಂಪ, ರನ್ನ, ಜನ್ನ ಮುಂತಾದ ಕವಿಗಳು ಬರೆದಿರುವ ಪದಗಳಲ್ಲಿ ಇಲ್ಲ. ಕನ್ನಡದ ಶಕ್ತಿ ಇರುವುದು ಈರ ಮಾರ ಕೆಂಪ ಆಡುವ ಮಾತುಗಳಲ್ಲಿ. ಹಳ್ಳಿಯಲ್ಲಿರುವ ರೈತ, ಚಮ್ಮಾರ, ಅಗಸ, ಕೂಲಿಕಾರ ಆಡುವ ಮಾತುಗಳಲ್ಲಿ ಕನ್ನಡದ ಶ್ರೀಮಂತಿಕೆ ಸಮೃದ್ಧವಾಗಿ ಅಡಗಿಕೊಂಡಿದೆ ಎಂದು ಕೃಷ್ಣೇಗೌಡ ವಾಗ್ಝರಿ ಹರಿಸಿದರು, ಸಿಂಗಪುರ ಕನ್ನಡಿಗರು ಮೂಕವಿಸ್ಮಿತರಾಗುವಂತೆ ಮಾಡಿದರು.

ಬಡತನ, ಶ್ರೀಮಂತಿಕೆಯ ಬಗ್ಗೆ ಮಾತನಾಡುತ್ತ. ನಾವು ಇಷ್ಟೆಲ್ಲ ಗಳಿಸಿದವರು ಶ್ರೀಮಂತರೆಂದುಕೊಂಡಿದ್ದೇವೆ. ಒಂದು ಬಾರಿ ಹಳ್ಳಿಯ 80ರ ಹರೆಯದ ಅಜ್ಜಿಯನ್ನು ಮಾತನಾಡಿಸಿದೆ. ಆಗ ಶ್ರೀಮಂತಿಕೆ ಎನ್ನುವುದು ಏನೆಂದು ನನಗೆ ಅರಿವಾಯಿತು. ಹದಿನಾರರ ಹರೆಯದಲ್ಲಿ ಗಂಡನನ್ನು ಕಳೆದುಕೊಂಡು, ನಾಲ್ಕು ಮನೆಗಳ ಕಸ ಗುಡಿಸಿ, ನಾಲ್ಕಾರು ಮನೆಗಳಲ್ಲಿ ಅಡುಗೆ ಮಾಡಿ, ಇದ್ದರೆ ಉಂಡು ಇಲ್ಲದಿದ್ದರೆ ನೆಮ್ಮದಿಯಾಗಿ ನಿದ್ದೆ ಮಾಡುವ ಆ ಮುದುಕಿ, "ನನಗೆಲ್ಲಿದೆ ಕಷ್ಟ, ನಾನು ದೊರೆಯ ಮಗಳಂತೆ ಬದುಕಿದ್ದೇನೆ. ಅನ್ನ ಋಣ ಇರುವವರೆಗೆ ಆತ ಉಂಡ, ಹೋದ. ನನ್ನ ಅನ್ನದ ಋಣ ಇರುವವರವಗೆ ನಾನೂ ಇರುತ್ತೇನೆ, ನಂತರ ನಾನೂ ಹೋಗುತ್ತೇನೆ" ಎಂದಾಗ ನನಗೆ ಬಡತನ ಯಾವುದು, ಶ್ರೀಮಂತಿಕೆ ಯಾವುದು ಎನ್ನುವ ಅರಿವಾಯಿತು ಎಂದರು ಕೃಷ್ಣೇಗೌಡರು.

ಹುಡುಗಿ ಹೇಗಿದ್ದಾಳೆ ಅಂತ ಪಟ್ಟಣದವರನ್ನು ಕೇಳಿ ನೋಡಿ! ಬೊಂಬಾಟಾಗವ್ಳೆ, ಸಖತ್ತಾವಳ್ಳೆ ಅಂತಾರೆಯೇ ಹೊರತು, ಆ ಹುಡುಗಿಯ ಸೌಂದರ್ಯವನ್ನು ಮನಸ್ಸಿಗೆ ತಟ್ಟುವ ಹಾಗೆ ಹೇಳಲು ಸಾಧ್ಯವೆ? ಇದೇ ಪ್ರಶ್ನೆಯನ್ನು ಹಳ್ಳಿಯಲ್ಲಿ ಕೇಳಿನೋಡಿ. ನೋಡಾಕೆ ಹಲಸಿನ ತೊಳೆ ಇದ್ದಂಗವ್ಳೆ ಅಂತಾರೆ, ಬೆಳ್ಳಗಿದ್ರೆ ಸಮುದ್ರ ಶಂಖದಂಗವ್ಳೆ, ಖಡಕ್ಕಾಗಿದ್ರೆ ಬಿಲ್ಲು ಬಿಟ್ಟ ಬಾಣದಂಗವ್ಳೆ ಅಂತ ಅನುಭವದ ಮೂಸೆಯಿಂದ ಹುಡುಗಿಯನ್ನು ವಿವರಿಸುತ್ತಾರೆ. ಅದು ಕನ್ನಡ ಭಾಷೆಯಲ್ಲಿನ ತಾಕತ್ತು, ಸೊಗಡು ಎಂದು ಕೃಷ್ಣೇಗೌಡರು ಅಂದಾಗ ಸಿಂಗನ್ನಡಿಗರೆಲ್ಲ ಅಹುದಹುದೆಂದು ತಲೆದೂಗಿದರು.

ಕನ್ನಡದ ಭಾಷೆಯ ಸೊಗಡು ಬೈಗುಗಳಗಳಲ್ಲಿಯೂ ಅಡಗಿದೆ. ನಗರಗಳಲ್ಲಿ ಬೈಗುಳವೆಂದರೆ ಮೂಗುಮುರಿಯುತ್ತಾರೆ. ಅದೇ ಹಳ್ಳಿಗಳಲ್ಲಿ ಹ್ಯಾಗ್ಯಾಕೆ ಬೈಗುಳಗಳನ್ನು ಬಳಸುತ್ತಾರೆ ಹೋಗಿ ನೋಡಿ ಎಂದು ಬೈಗುಗಳ ಅನಾವರಣ ಕೂಡ ಮಾಡಿದರು. ಬೈಗುಳಗಳಿರಲಿ, ಇಂದಿನ ಜನರಿಗೆ ಕಥೆಗಳನ್ನೂ ಹೇಳಲು ಬರುವುದಿಲ್ಲ. ಗೋವಿನ ಹಾಡು ಪದ್ಯದಲ್ಲಿ, ಗೋವು ತನ್ನ ಮಗುವನ್ನು ಬಿಟ್ಟು ಹೋಗುವಾಗ ಇರುವ ಸನ್ನಿವೇಶದ ಕಥೆ ಕೇಳುವಾಗ ಇಂದಿನ ಪೀಳಿಗೆಯ ಎಷ್ಟು ಮಕ್ಕಳ ಕಣ್ಣಲ್ಲಿ ನೀರು ಬರುತ್ತದೆ ಹೇಳಿ? ಕಣ್ಣೀರು ಬಂದರೆ ಅದು ನಿಜವಾದ ಕನ್ನಡದ ಸಾಮರ್ಥ್ಯ ಎಂದರು ಕೃಷ್ಣೇಗೌಡರು.

English summary
Kannada is one of the richest languages in the world : Krishnegowda. Prof Krishnegowda enthralled the audience at Singapore Polytechnic College in Singapore with his speech.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X