• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫ್ಲೋರಿಡಾದಲ್ಲಿ ದೀಪಾವಳಿ-ಕನ್ನಡ ರಾಜ್ಯೋತ್ಸವದ ರೋಮಾಂಚನ

By ಜಮುನಾ ರಾಣಿ ಎಚ್.ಎಸ್., ಮಯಾಮಿ
|

ದೀಪಾವಳಿ ಅಂದರೆ ನಮಗೆ ನೆನಪಾಗುವುದು ಚಳಿಗಾಲದ ಸಂಜೆಯಲ್ಲಿ ಮಿನುಗುವ ದೀಪಗಳು, ಪಟಪಟ ಪಟಾಕಿಗಳು, ಸುರಸುರ ಎನ್ನುವ ಸುರುಸುರು ಬತ್ತಿಗಳು, ಜೂಮ್ ಎಂದು ಆಕಾಶಕ್ಕೆ ಎಗರಿ ನಾಸಾ ರಾಕೆಟ್ ಗೂ ಪೈಪೋಟಿ ಮಾಡುವ ರಾಕೆಟ್ ಗಳು, ಬಣ್ಣ ಬಣ್ಣದ ರುಚಿ ರುಚಿಯಾದ ಸಿಹಿ ತಿಂಡಿಗಳು. ಹಾಗೆಯೇ ಕನ್ನಡ ರಾಜ್ಯೋತ್ಸವ ಎಂದರೆ ನವೆಂಬರ್, ಕನ್ನಡದ ಬಾವುಟ, ಹಾಡುಗಳು, ರೋಮಾಂಚನ...

ನಿಜವಾದ ಕನ್ನಡ ಪ್ರೇಮಿ ಯಾರು, ಎನ್ನಾರೈ ಕನ್ನಡಿಗನ ಅನುಭವಾಮೃತ

ಆದರೆ, ಭಾರತದ ಗಡಿ ದಾಟಿ ಹೋಗಿರುವ ಕನ್ನಡಿಗರು ಇದನ್ನೆಲ್ಲಾ ಮರೆತೇ ಬಿಡುತ್ತಾರೆ ಎನ್ನುವ ಹಾಗಿಲ್ಲ. ಇವರೆಲ್ಲರೂ ಕೂಡಿ ಇಲ್ಲಿ ಜೊತೆಜೊತೆಯಾಗಿ ಹಬ್ಬವನ್ನು ಆಚರಿಸುತ್ತಾರೆ ಎನ್ನುವುದು ಮತ್ತಷ್ಟು ಕುತೂಹಲದ ವಿಷಯ. ಇಲ್ಲಿ ಕನ್ನಡ ಕೂಟವನ್ನು ರಚಿಸಿ ಕನ್ನಡಿಗರನ್ನು ಒಂದೆಡೆ ಒಗ್ಗೂಡಿಸಿ ಹಾಡು ಹರಟೆಯ ಜೊತೆ ಸಡಗರಿಸುವ ಸಮಯ ನವೆಂಬರ್.

ಆಗಲೇ ಇಲ್ಲಿ ನಿಧಾನವಾಗಿ ಚಳಿಗಾಲ ಶುರುವಾಗಿದೆ. ಇಷ್ಟು ದಿನ ಬಿರುಬೇಸಿಗೆಯಲಿದ್ದ ಇಲ್ಲಿನ ಜನರಿಗೆ ಅಬ್ಬಾ, ಚಳಿಗಾಲ ಬಂತಲ್ಲ ಸ್ವಲ್ಪ ದಿನ ಆರಾಮಾಗಿರಬಹುದು ಎನ್ನುವ ಖುಷಿ. ಈ ಖುಷಿಯನ್ನು ಹೆಚ್ಚಿಸುವ ಸಲುವಾಗಿ ಸಂಸಾರದೊಂದಿಗೆ ಕಾರ್ ನಲ್ಲಿ ಸೌತ್ ಫ್ಲೋರಿಡಾದ ನಂದಿ ಕನ್ನಡ ಕೂಟ ಏರ್ಪಡಿಸಿದ್ದ ದೀಪಾವಳಿ- ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಹೊರಟೆವು. ಹೋಗ್ತಾ ರೇಡಿಯೋ ಬಟನ್ ಒತ್ತಿದಾಗ ಕೇಳಿ ಬರುತ್ತಿರೋ ಅಬ್ಬರದ ಸ್ಪಾನಿಷ್ ಮ್ಯೂಸಿಕ್ ಗೆ ಮಗ ತಲೆಯಾಡಿಸುತ್ತಿರುವುದನ್ನು ನೋಡಿ ನಗಬೇಕೋ ಅಳಬೇಕೋ ತಿಳಿಯದಾಗಿತ್ತು. ಈ ಭಾಗದಲ್ಲಿ ಇಂಗ್ಲೀಷಿಗಿಂತ ಸ್ಪಾನಿಷ್ ಜಾಸ್ತಿ ಎನ್ನುದನ್ನು ಕಂಡು ನಾವು ಅಮೇರಿಕಾದಲ್ಲಿದ್ದೇವೋ ಮೆಕ್ಸಿಕೋದಲ್ಲಿದ್ದೇವೋ ಎನ್ನುವ ಅನುಮಾನ ಬರುವುದಂತೂ ಗ್ಯಾರೆಂಟಿ.

ಅರಬರ ಸುಂದರ ಮರುಭೂಮಿಯಲ್ಲಿ ಕನ್ನಡದ ತಂಪಾದ ಗಾಳಿ

ಅಂತೂ ಒಂದು ಗಂಟೆ ಪ್ರಯಾಣದ ನಂತರ ಕಾರ್ ಪಾರ್ಕ್ ಮಾಡಿ ಆಡಿಟೋರಿಯಂ ಒಳಗೆ ಹೋದ ತಕ್ಷಣವೇ... ಆಹಾ.. ಸುಮಧುರವಾಗಿ ಕೇಳಿ ಬರುತ್ತಿರುವ ಕನ್ನಡದ ಹಾಡಿನ ಅಲೆಗಳು ನಮ್ಮನ್ನು ಬೆಂಗಳೂರಿಗೆ ಕರೆದೊಯ್ದವೇನೋ ಅನ್ನಿಸತೊಡಗಿತ್ತು. ಸುತ್ತಲೂ ಕನ್ನಡದ ಜನ, ಕನ್ನಡದಲ್ಲಿಯೇ ಮಾತುಕತೆ, ಕನ್ನಡದ ಹಾಡು ಹಸೆ ಜಾತ್ರೆಯ ಸಡಗರವನ್ನು ತಂದಿತ್ತು.

ಇದೇ ನವೆಂಬರ್ 17 ಶನಿವಾರ, ಬ್ರೊವರ್ಡ್ ಕಲಾಸೌಧದಲ್ಲಿ ನಂದಿ ಕನ್ನಡ ಕೂಟದ ವತಿಯಿಂದ ಈ ಸಂಭ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು ಎರಡು ತಿಂಗಳಿನಿಂದ ತಾಲೀಮು ನಡೆಸಿದ್ದ ಮಕ್ಕಳು, ಅಮ್ಮಂದಿರು, ಅಪ್ಪಂದಿರು, ಎಲ್ಲರೂ ತಮ್ಮ ಪ್ರತಿಭೆಯನ್ನು ತೋರಿಸಲು ಕಾತರಿಸುತ್ತಿದ್ದರು.

ಕರ್ನಾಟಕದಲ್ಲಿ ಕನ್ನಡಾಭಿಮಾನದ ಪುನರುಜ್ಜೀವನದ ರೋಚಕ ಕಥೆ

ಹಚ್ಚೇವು ಕನ್ನಡದ ದೀಪ ಹಾಡಿನ ಮೂಲಕ ಶುರುವಾದ ಕಾರ್ಯಕ್ರಮ, ಮಕ್ಕಳ ಹಾಡು, ವಾದ್ಯ, ಕನ್ನಡದ ಹೊಸ ಹಾಡುಗಳಿಗೆ ಕುಣಿತ ಕುರ್ಚಿಯಲ್ಲಿ ಕುಂತಿದ್ದವರನ್ನು ತುತ್ತ ತುದಿಗೆ ತಂದು ನಿಲ್ಲಿಸಿತು. ಡಾ. ಮಹದೇವ ಭಟ್ಟರ ನಿರ್ದೇಶನದ "ಎಷ್ಟು ಸಾಹಸವಂತ ಹನುಮಂತ" ಗೀತ ನಾಟಕ ಕುರ್ಚಿಯಿಂದೆದ್ದು ಚಪ್ಪಾಳೆ ಗಿಟ್ಟಿಸದೆ ಬಿಡಲಿಲ್ಲ. ಕೌಶಲ್ ವಿಶು ನಿರ್ದೇಶನದ ಫ್ಯಾಷನ್ ಶೋ ಅಂತೂ... ಅದೇನು ಗತ್ತು, ಗಮ್ಮತ್ತು ಭಾರತೀಯ ಸೀರೆಗಳನ್ನುಟ್ಟು ಜಡೆ ಹಾಕಿದ ಮಹಿಳೆಯರು ಮತ್ತು ಪೇಟ ತೊಟ್ಟು ಪಂಚೆಯುಟ್ಟ ಗಂಡಸರು ಯಾವುದೋ ಮದುವೆ ಸಂಭ್ರಮದ ಕಳೆ ಕಟ್ಟಿತ್ತು ವೇದಿಕೆಯಲ್ಲಿ.

ಯುರೋಪಿಗೂ ಲಗ್ಗೆ ಇಟ್ಟ ಕನ್ನಡದ ಏಕೈಕ ಆನ್ಲೈನ್ ರೇಡಿಯೋ!

'ಚೌಕ' ನಾಟಕ ಹೆಣ್ಣುಗಂಡು ಎನ್ನುವುದು ಬದುಕಿನ ಚೌಕದಲ್ಲಿ ಒಂದೆ ಎಂದು ನಗೆಯ ಮೂಲಕ ಎತ್ತಿ ಹಿಡಿಯಿತು. ನಂತರ ಆರಂಭಗೊಂಡದ್ದು ಗಾಯಕರಾದ ಸುಮಿತ್ ಚಂದ್ರ ಮತ್ತು ಅಪರ್ಣ ನರೇಂದ್ರ ಅವರಿಂದ ಕನ್ನಡದ ಸುಮಧುರ ಗೀತೆಗಳ ಗಾಯನ... ಇಷ್ಟೊತ್ತು ಕುರ್ಚಿಯಲ್ಲಿ ಕುಳಿತಿದ್ದ ಎಲ್ಲರನ್ನೂ ವೇದಿಕೆಯನ್ನು ಹತ್ತಿ ಕುಣಿಯುವಂತೆ ಮಾಡಿತು. ಅಬ್ಬಾ, ಅದೆಷ್ಟು ಸೊಗಸು ನಮ್ಮ ಭಾಷೆ. ಸುಮಾರು ನಾಲ್ಕು ಘಂಟೆಗಳ ಕಾಲ ನಾವು ನಮ್ಮ ಕರುನಾಡಿನಲ್ಲಿಯೇ ಇದ್ದೇವೇನೋ ಅನ್ನಿಸದೇ ಇರಲಿಲ್ಲ.

ಈ ಕಾರ್ಯಕ್ರಮದ ಗೆಲುವಿನ ರೂವಾರಿಗಳು ಮಹೇಶ್ ಜೋಶಿ, ಅಧ್ಯಕ್ಷ, ನಾಗತಿಹಳ್ಳಿ ನಾಗರಾಜ್ ಉಪಾಧ್ಯಕ್ಷ, ಶಾಲಿನಿ ಉಮೇಶ್ ಕಾರ್ಯದರ್ಶಿ, ಅರ್ಚನಾ ತುಳಸಿ, ಖಜಾಂಚಿ, ಪ್ರೀತಿ ರವೀಂದ್ರ ಮಿಯಾಮಿ ದೇಡ್ ಕೌಂಟಿ ನಿರ್ದೇಶಕರು, ರವೀಂದ್ರ ಶ್ರೀನಿವಾಸ್ ಪಾಮ್ ಬೀಚ್ ಕೌಂಟಿ ನಿರ್ದೇಶಕರು, ದರ್ಶನಾ ಜೋಡತ್ತಿ ಬ್ರೊವಾರ್ಡ್ ಕೌಂಟಿ ನಿರ್ದೇಶಕರು.

ಹೀಗೆ ಸರಿಸುಮಾರು ರಾತ್ರಿ 9ರ ತನಕ ನಡೆದ ಈ ದೀಪಾವಳಿ- ರಾಜ್ಯೋತ್ಸವದ ಕಾರ್ಯಕ್ರಮ ಕೊನೆಗೊಂಡಿದ್ದು ಎಲ್ಲರನ್ನೂ ಕೂಟದ ವತಿಯಿಂದ ಸನ್ಮಾನಿಸಿದ ನಂತರವೇ. ಕೊನೆಗೆ ದೀಪಾವಳಿ ಹಬ್ಬದ ಭರ್ಜರಿ ಊಟ ಮಾಡಿ ಕಾರಲ್ಲಿ ಕುಳಿತಾಗಲೂ ಕನ್ನಡದ ಕಂಪು ಕಿವಿಗಳಲ್ಲಿ ರಿಂಗಣಿಸುತ್ತಲೇ ಇತ್ತು!

English summary
Florida Kannadigas celebrate Deepavali and Kannada Rajyotsava organized by Nandi Kannada Koota in Miami, South Florida, USA. Kannada songs, fashion show, Kannada play and many other programs enthralled the audience.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X