ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ಮೊಟ್ಟಮೊದಲ ಸುಗಮ ಸಂಗೀತ ಶಿಬಿರ

By ಸುರೇಶ ಭಟ್ಟ, ಸಿಂಗಪುರ
|
Google Oneindia Kannada News

ನಮ್ಮ ಕರ್ನಾಟಕದಲ್ಲಿ ವಿವಿಧ ಮಾಧ್ಯಮಗಳ ಮೂಲಕ ನವೋದಯ ಗೀತೆಗಳು, ಭಾವಗೀತೆಗಳು, ಸುಗಮ ಸಂಗೀತ ಕಾರ್ಯಕ್ರಮಗಳು ಪ್ರಖ್ಯಾತಗೊಂಡು ಜನಮನ ಸೂರೆಗೊಳ್ಳುತ್ತಿರುವುದು ಸಂತಸದ ವಿಷಯ. ಆದರೆ ಕರ್ನಾಟಕದಿಂದಾಚೆ, ಕಡಲಾಚೆ ಇಂತಹ ಅವಕಾಶಗಳು, ಪ್ರಯೋಗಗಳು ವಿರಳ ಎಂದೇ ಹೇಳಬಹುದು.

ಸಿಂಗಪುರದಲ್ಲಿ 2013 ಮತ್ತು 2014ರಲ್ಲಿ ಎರಡು "ದಾಸಸಾಹಿತ್ಯ ಸಂಗೀತ ಶಿಬಿರ"ಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದ, ಯಾವಾಗಲೂ ಏನಾದರೂ ಹೊಸ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ನಿಟ್ಟಿನಲ್ಲಿ ಆಲೋಚಿಸುವ ವಿದುಷಿ ಅಶ್ವಿನಿ ಸತೀಶ್ ಅವರು ಈ ಬಾರಿ ಸಿಂಗಪುರದಲ್ಲಿ ಮೊಟ್ಟ ಮೊದಲನೆಯ "ಸುಗಮ ಸಂಗೀತ ಶಿಬಿರ"ವನ್ನು ಆಯೋಜಿಸಿದ್ದರು.

ಅವರ ಪರಿಶ್ರಮದಿಂದ 2014ರ ಅಗಸ್ಟ್ ತಿಂಗಳಿನಲ್ಲಿ ಆರಂಭವಾದ ರಾಷ್ಟ್ರಭಕ್ತಿಗೀತೆ, ಭಾವಗೀತೆ ಮತ್ತು ಜನಪದ ಗೀತೆಗಳ ಈ ಶಿಬಿರ 19ನೇ ಅಕ್ಟೋಬರ್ 2014ರಂದು ಸುಗಮ ಸಂಗೀತ ಸಂಜೆ ಕಾರ್ಯಕ್ರಮದೊಂದಿಗೆ ಸಂಪೂರ್ಣಗೊಂಡಿತು.


ಕರ್ನಾಟಕದಿಂದಾಚೆಗೆ ನಮ್ಮ ಸುಂದರ ಕನ್ನಡದ ಭಾವಗೀತೆಗಳನ್ನು ಕಲಿಸುವವರು ಹಾಗೂ ಕಲಿಯುವವರು ಕಡಿಮೆ ಎಂದೇ ಹೇಳಬಹುದು. ಇದ್ದರೂ ಅವರ ಶಾಲೆ, ಆಫೀಸ್ ಕೆಲಸ; ವಿವಿಧ ವಿಶೇಷ ತರಗತಿಗಳು, ಪಕ್ಕವಾದ್ಯ ಕಲಾವಿದರ ಬಿಡುವು ವೇಳೆ, ಒಂದಾದ ಮೇಲೊಂದು ಬರುವ ಹಬ್ಬಗಳು ಇತ್ಯಾದಿ ಹಲವಾರು ಕಾರಣಗಳಿಂದ ಸಮಯ ಹೊಂದಾಣಿಕೆಯಾಗುವುದು ಬಹಳ ಕಷ್ಟ.

ಇಂಥದೊಂದು ಶಿಬಿರವನ್ನು ನಡೆಸುವ ಕನಸು ಹೊತ್ತು, ಸಂಗೀತಾಸಕ್ತರನ್ನು ಒಂದುಗೂಡಿಸಿ ವಿದುಷಿ ಅಶ್ವಿನಿಯವರು ಈ ಶಿಬಿರವನ್ನು ಆಯೋಜಿಸಿದರು. ಸುಮಾರು ಹತ್ತು ವಾರಾಂತ್ಯಗಳಲ್ಲಿ ಕನ್ನಡದ ಹಲವಾರು ಪ್ರಖ್ಯಾತ ಹಾಗೂ ಉದಯೋನ್ಮುಖ ಕವಿಗಳ ರಚನೆಗಳನ್ನು ಸಂಗೀತಾರ್ಥಿಗಳಿಗೆ ಹೇಳಿಕೊಟ್ಟರು. ಗುರುಗಳ ಪರಿಶ್ರಮ ಮತ್ತು ಸಂಗೀತಾರ್ಥಿಗಳ ಉತ್ಸಾಹ, ಕಲಿಯುವ ಮನೋಭಾವದ ಫಲವಾಗಿ ಈ ಶಿಬಿರ ಸಿಂಗಪುರದಲ್ಲಿ ನಡೆಯಿತು.


ಮನಸೂರೆಗೊಂಡ ಸಂಗೀತ ಕಾರ್ಯಕ್ರಮ : ಅಂದೇವೋ ನಮೋ ನಿನ್ನ ಚರಣಕ ಎಂಬ ಜಾನಪದ ಶೈಲಿಯ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಸಾ.ಶಿ. ಮರುಳಯ್ಯ (ಸುಮಸುಂದರ ತರುಲತೆಗಳ), ವಿ.ಸಿ.ಐರ್ ಸಂಗ್ (ಜನನಿ ಜನ್ಮ ಭೂಮಿ ಎಮಗೆ), ದ. ರಾ. ಬೇಂದ್ರೆ (ಭೃಂಗದ ಬೆನ್ನೇರಿ ಬಂತು), ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ (ಜೀವವಿಂದು ಏನೋ ಒಂದು, ಬನ್ನಿ ಭಾವಗಳೆ), ಜಿ.ಎಸ್. ಶಿವರುದ್ರಪ್ಪ (ಮುಂಗಾರಿನ ಆಭಿಷೇಕಕೆ), ದೊಡ್ಡರಂಗೇಗೌಡ (ಬಿಡಿಸದ ಪದರಂಗ), ಎನ್. ಮಧ್ಯಸ್ಥ (ಚಂದದ ತೋಟವಿದು), ಎಚ್.ಎಸ್. ಲೀಲಾವತಿ (ಹಾಡಾಗಿ ಹರಿದಾಳೆ), ಬೆಟಗೇರಿ ಕೃಷ್ಣಶರ್ಮ (ಬಹುವದನೆ ಬಹುಸದನೆ ಭಾರತಿ) ಮುಂತಾದ ಹಾಡುಗಳನ್ನು ಈ ಶಿಬಿರದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು.

ಈ ಕವಿಗಳ ಸಾಲಿನಲ್ಲಿ ನಮ್ಮವರೆ ಅದ ಸಿಂಗಪುರದ ಉದಯೋನ್ಮುಖ ಕವಿ ವಸಂತ ಕುಲಕರ್ಣಿ ಅವರ "ಅಂತರ ಹಾಗೂ ಇತರ ಕವನಗಳು" ಕವನ ಸಂಕಲನದ ಎರಡು ಹಾಡುಗಳನ್ನು ಅಶ್ವಿನಿಯವರು ಆಯ್ದುಕೊಂಡು ಅದಕ್ಕೆ ಸಂಗೀತ ನೀಡಿದ್ದು ಅತೀ ಸಮಂಜಸವಾಗಿದ್ದು, ಸಾಹಿತ್ಯ ಮತ್ತು ಸಂಗೀತಾಭಿಮಾನಿಗಳ ಮೆಚ್ಚುಗೆ ಪಡೆಯಿತು. ವಸಂತ ಕುಲಕರ್ಣಿ ಅವರ ವರ್ಷಾಧಾರೆ ಹಾಡಿನ ವಿಡಿಯೋ ತುಣುಕನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ . ವಸಂತ ಕುಲಕರ್ಣಿ ಅವರು ರಚಿಸಿದ "ಶಬ್ದಗಳ ಮಿತಿ" ಹಾಗೂ ಕೆ.ಎಸ್. ನರಸಿಂಹಸ್ವಾಮಿ ಅವರ "ತೌರ ಸುಖದೊಳಗೆನ್ನ.." ಹಾಡುಗಳನ್ನು ಸ್ವತಃ ಅಶ್ವಿನಿಯವರೇ ಸುಶ್ರಾವ್ಯವಾಗಿ ಹಾಡಿ ಎಲ್ಲರನ್ನೂ ಭಾವಪೂರ್ಣ ಲೋಕಕ್ಕೆ ಕೊಂಡೊಯ್ದರು.

First ever Light music workshop in Singapore

ಸ್ವಾರಸ್ಯಕರ ವಿವರಣೆ ನೀಡಿದ ಗಿರೀಶ್ ಜಮದಗ್ನಿ : ಸ್ವತಃ ಬರಹಗಾರ, ಕವಿ ಹಾಗೂ ಸಂಗೀತೋಪಾಸಕರಾದ ಸಿಂಗಪುರದ ಇನ್ನೊಬ್ಬ ಬಹುಮುಖ ಪ್ರತಿಭೆ ಗಿರೀಶ್ ಜಮದಗ್ನಿಯವರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅಗಮಿಸಿದ್ದುದು ಬಹು ಔಚಿತ್ಯವಾಗಿತ್ತು. ಆಕಾಶವಾಣಿ, ಭದ್ರಾವತಿಯಿಂದ ಮೂಡಿಬರುತ್ತಿದ್ದ ಭಾವಗೀತೆಗಳನ್ನು ನೆನಪಿಸಿಕೊಂಡ ಗಿರೀಶ್ ಅವರು ಸಾಹಿತ್ಯ-ಸಂಗೀತ ರಸಿಕರನ್ನುದ್ದೇಶಿಸಿ ಮಾತನಾಡಿದರು.

ಸಿಂಗಪುರದಲ್ಲಿ ನಡೆದ ಮೊಟ್ಟ ಮೊದಲ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಹಾಡಿನ ಆಯ್ಕೆ, ಆಯೋಜಕರ ಪರಿಶ್ರಮ, ಸಾಹಿತ್ಯವನ್ನು ಕಲಿತು, ನೆನಪಿಟ್ಟುಕೊಂಡು ಕಾಗದದ ಚೀಟಿಯ ಸಹಾಯವಿಲ್ಲದೇ ಸ್ವರ-ರಾಗ-ತಾಳಬದ್ಧವಾಗಿ ಹಾಡಿದ ಮಕ್ಕಳ ಪ್ರತಿಭೆ ಮುಂತಾದ ವೈಶಿಷ್ಟ್ಯತೆಗಳನ್ನು ಅವರು ಒತ್ತಿ ಹೇಳಿದ್ದಲ್ಲದೆ ಭಾವಗೀತೆ, ನವೋದಯ ಗೀತೆಗಳು ಬೆಳೆದುಬಂದ ಬಗೆಯನ್ನು ಸ್ವಾರಸ್ಯಕರವಾಗಿ ವಿವರಿಸಿ, ಸಿಂಗಪುರದಲ್ಲಿ ಸ್ಥಳೀಯ ಕನ್ನಡಿಗರ ಸಾಹಿತ್ಯ ಮತ್ತು ಸಂಗೀತವನ್ನು ಒಟ್ಟಿಗೆ ತರುವ ಇಂತಹ ಕಾರ್ಯಕ್ರಮಗಳು ಇನ್ನು ಮುಂದೆಯೂ ಹೀಗೆಯೇ ಮುಂದುವರೆಯಲಿ ಎಂದು ಆಶಿಸಿದರು.

ಮುಖ್ಯ ಅತಿಥಿಗಳಿಗೆ, ಪಕ್ಕವಾದ್ಯ ಕಲಾವಿದರಿಗೆ (ಸರವಣನ್ ಕೀಬೋರ್ಡ್ ನಲ್ಲಿ ಮತ್ತು ಕುಮಾರನ್ ತಬಲಾದಲ್ಲಿ) ಹಾಗೂ ಗುರು ಅಶ್ವಿನಿಯವರಿಗೆ ಕಿರು ಕಾಣಿಕೆ ಅರ್ಪಿಸಿದ ಮೇಲೆ ಈ ಕಾರ್ಯಕ್ರಮವು ಕುವೆಂಪು ರಚನೆಯ "ಅಸತ್ತಿನಿಂದ ಸತ್ತಿನೆಡೆಗೆ" ಎಂಬ ಶಾಂತಿಗೀತೆಯೊಂದಿಗೆ ಸಂಪನ್ನವಾಯಿತು. ಚಿಕ್ಕ, ಚೊಕ್ಕ, ಸರಳವಾದ ಈ ಕಾರ್ಯಕ್ರಮ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.


ಅಶ್ವಿನಿ ಸತೀಶ್ ಅವರ ಬಗ್ಗೆ

ಆಕಾಶವಾಣಿ ಬೆಂಗಳೂರಿನ B HIGH ಶ್ರೇಣಿಯಲ್ಲಿ ಕರ್ನಾಟಕ ಶಾಸ್ತ್ರೀಯ, ಲಘು ಶಾಸ್ತ್ರೀಯ ಸಂಗೀತ ಹಾಗೂ ಲಘು ಸಂಗೀತ ಕಲಾವಿದೆಯಾದ ಅಶ್ವಿನಿ ಸತೀಶ್ ಅವರು ದುಬೈನಲ್ಲಿ ಕೆಲವು ವರ್ಷಗಳಿದ್ದು, ಸಿಂಗಪುರಕ್ಕೆ ಬಂದದ್ದು 2012ರ ಉತ್ತರಾರ್ಧದಲ್ಲಿ. ವಿದುಷಿ ಡಾ.ಟಿ. ಎಸ್. ಸತ್ಯವತಿ ಅವರ ಬಳಿ ಸಂಗೀತ ಕಲಿತ ಅಶ್ವಿನಿ ಅವರು ಉದಯ, ಚಂದನ, ಈ-ಟಿವಿ, ಸುವರ್ಣ ಮೊದಲಾದ ಕನ್ನಡ ದೂರದರ್ಶನ ಚಾನೆಲ್ಗಳಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಭಾರತ, ದುಬೈ, ಬರ್ಮಿಂಗ್ಹ್ಯಾಮ್, ಮಲೇಶಿಯಾ ಮತ್ತು ಸಿಂಗಪುರದಲ್ಲಿ ಹಲವಾರು ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಲ್ಲದೆ, ತಮ್ಮದೇ ಹಲವಾರು ಸಂಗೀತ ಸುರುಳಿಗಳನ್ನೂ ಬಿಡುಗಡೆ ಮಾಡಿದ್ದಾರೆ. ಸಿಂಗಪುರದಲ್ಲಿ ಅವರು ಕನ್ನಡ ಸಂಘ(ಸಿಂಗಪುರ) ಮತ್ತು Singapore Indian Fine Arts Society (SIFAS) ಸಂಸ್ಥೆಗಳು ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಗೂ ಸಿಂಗಪುರದ ಹಲವಾರು ದೇವಸ್ಥಾನಗಳಲ್ಲಿ ಆಯೋಜಿಸಿದ ಸಂಗೀತ ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ ಮತ್ತು ತೀರ್ಪುಗಾಗರಾಗಿ, ಪರೀಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಸಿಂಗಪುರದ ಪ್ರಖ್ಯಾತ ಶಾಲೆ Global Indian International Schoolನ ಸಾಂಸ್ಕೃತಿಕ ಕೇಂದ್ರವಾದ GICCಯಲ್ಲಿ ಕರ್ನಾಟಕ ಸಂಗೀತ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. (ಛಾಯಾ ಚಿತ್ರ: ಕುಮಾರಿ ವೃಂದಾ, ಶರಣ್ಯ, ಸಿಂಗಪುರ)

English summary
Light music workshop conducted by Ashwini Satish in Singapore concluded in a grand fashion. The participants sang various songs composed by renowned musicians, including Vasant Kulkarni, on this occasion. Report by Suresha Bhatta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X