ಬಹ್ರೇನ್ ಕನ್ನಡಿಗರಿಂದ ನಾರಾಯಣ ಗುರು ಜಯಂತಿ
ಇಲ್ಲಿನ ಅನಿವಾಸಿ ಬಿಲ್ಲವರ ಸಂಘವಾದ ಗುರುಸೇವಾ ಸಮಿತಿ - ಬಹ್ರೇನ್ ಬಿಲ್ಲವಾಸ್ ಆಶ್ರಯದಲ್ಲಿ ಸೆಪ್ಟೆಂಬರ್ 8ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3ರ ವರೆಗೆ ಕರ್ನಾಟಕ ಸೋಷಿಯಲ್ ಕ್ಲಬ್ ಸಭಾಂಗಣದಲ್ಲಿ ಶ್ರೀ ನಾರಾಯಣ ಗುರು ಜಯಂತಿಯನ್ನು ಬಹು ವಿಜೃಂಭಣೆಯಿಂದ ಆಚರಿಸಲಾಯಿತು.
ಸುಮಾರು 200ಕ್ಕೂ ಹೆಚ್ಚು ಸದಸ್ಯರು ತಮ್ಮ ಬಂಧು ಬಾಂಧವರೊಂದಿಗೆ ಪೂಜೆಯಲ್ಲಿ ಭಾಗವಹಿಸಿ ಗುರು ದೇವರ ಕೃಪೆಗೆ ಪಾತ್ರರಾದರು.

ದೀಪ ಬೆಳಗುವ ಮೂಲಕ ಸಂಪ್ರದಾಯಬದ್ಧವಾಗಿ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಪುರುಷರೆಲ್ಲರೂ ಬಿಳಿ ಅಂಗಿ ಮತ್ತು ಕೇಸರಿ ಪಂಚೆಯನ್ನು ತೊಟ್ಟಿದ್ದು ವಿಶೇಷವಾಗಿತ್ತು.
ನಾರಾಯಣ ಗುರು ಜಯಂತಿಯ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ, ಸಂಘದ ಮಹಿಳಾ ಸದಸ್ಯರು ಹಾಗೂ ಪುರುಷ ಸದಸ್ಯರು ಸಾಮೂಹಿಕ ಭಜನೆಯಲ್ಲಿ ಪಾಲ್ಗೊಂಡು, ಹಾಡಿ ಕುಣಿಯುತ್ತ ಕಾರ್ಯಕ್ರಮಕ್ಕೆ ರಂಗು ತಂದರು.

ಈ ಸಂದರ್ಭದಲ್ಲಿ ಬಹ್ರೇನ್ ಬಿಲ್ಲವಾಸ್ ಅಧ್ಯಕ್ಷ ಅಜಿತ್ ಬಂಗೇರರು ಶ್ರೀ ನಾರಾಯಣ ಗುರು ಸಂದೇಶ ಪುಸ್ತಕವನ್ನು ವಿತರಿಸಿದರು. ಪೂಜೆಯನ್ನು ಶ್ರೀಯುತ ಜಯಪ್ರಕಾಶ ಬೆಂಗ್ರೆಯವರು ನಡೆಸಿಕೊಟ್ಟರು. ಪೂಜಾಂತ್ಯದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆಯನ್ನು ಮಾಡಲಾಯಿತು.
ಗುರು ಜಯಂತಿಯ ಅಂಗವಾಗಿ ಸೆಪ್ಟೆಂಬರ್ 2ರಂದು ಸಂಘದ ಸದಸ್ಯರ ಮನೆಯಲ್ಲಿ ನಗರ ಭಜನೆ ಹಾಗೂ ಶ್ರೀ ನಾರಾಯಣ ಗುರು ಸಂದೇಶ ಜಾಥಾ ಮಾಡಲಾಯಿತು.












Click it and Unblock the Notifications