ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಖತ್ ಮಜಾ ಕೊಟ್ಟ ಸಿಂಗಾರ ಇಮೇಜ್ ಕಪ್ 2015

By ವೆಂಕಟ್, ಸಿಂಗಪುರ
|
Google Oneindia Kannada News

ಕನ್ನಡ ಸಂಘ (ಸಿಂಗಪುರ)ದ ಕ್ರೀಡಾಸಕ್ತ ಸದಸ್ಯರಿಗೆ ಬೋಲಿಂಗ್ ಸ್ಪರ್ಧೆಗಳು ತಮ್ಮದೇ ಆದ ಛಾಪನ್ನು ಸೃಷ್ಟಿಸಿ, ಮನರಂಜಿಸುವಲ್ಲಿ ಪ್ರಖ್ಯಾತಗೊಳ್ಳುತ್ತಿವೆಂದು ಹೇಳಬಹುದು. ಇಮೇಜ್ (Image - Institute of Learning & Development)ನ ಪ್ರಾಯೋಜಕತ್ವದ ಸಹಾಯದಲ್ಲಿ ಸಿಂಗಾರ ಇಮೇಜ್ ಕಪ್ - 2015' ಬೋಲಿಂಗ್ ಪಂದ್ಯಗಳನ್ನು 12 ಸೆಪ್ಟೆಂಬರ್ 2015ರಂದು, ಬುಕಿತ್ ಬಟೋಕ್ ಸಿವಿಲ್ ಸರ್ವಿಸ್ ಕ್ಲಬ್‌ನಲ್ಲಿ ಏರ್ಪಡಿಸಲಾಗಿತ್ತು.

ಕ್ರೀಡಾ ಉಪ-ಸಮಿತಿಯ ಛೇರ್ಮನ್ ನಿರ್ಮಲ ಕೆ. ಗೌಡ ಅವರ ಸಾರಥ್ಯದಲ್ಲಿ ಪಂದ್ಯಗಳು ಸಮಾನವಾಗಿ ವಿಂಗಡಿಸಲ್ಪಟ್ಟ ತಂಡಗಳ ನಡುವೆ ತೀವ್ರ ಪೈಪೋಟಿಯಲ್ಲಿ ಸುಸೂತ್ರವಾಗಿ ನಡೆದವು. ಯಥಾರೀತಿಯಲ್ಲಿ ನುರಿತ ಪಟುಗಳು ಪೂರ್ವ ತಯಾರಾಗಿ ಬಂದು ಭಾಗವಹಿಸಿದ್ದರೆ, ಮಿಕ್ಕವರು ಅಲ್ಲಿಗೇ ಬಂದು ನೇರ ತಯಾರಿ ನಡೆಸಿದಂತೆ ಕಾಣುತಿತ್ತು. ಹಿರಿಯರ 8 ತಂಡಗಳಲ್ಲಿ ಮಾರಾಮಾರಿ ಪೈಪೋಟಿ ಒಂದೆಡೆಯಾದರೆ, 2 ಕಿರಿಯರ ತಂಡದಲ್ಲಿ ಮಕ್ಕಳು ತಮ್ಮ ಆಟಗಳನ್ನು ಆನಂದಿಸುತ್ತಿದ್ದರು.

Bowling Tournament by Kannada Sangha (Singapore)

ನುರಿತ ಆಟಗಾರರ 'ಗುಂಡು'ಗಳು ತೂರಿದಂತೆ ನಡೆ ಎಂಬ ವಾಕ್ಯವನ್ನು ಪರಿಪಾಲಿಸಿ ಗುರಿಯಲ್ಲಿ ನಿಂತ ಪಿನ್‌ಗಳನ್ನು ಛಿದ್ರಗೊಳಿಸಿದರೆ, ಮಿಕ್ಕವರ ಗುಂಡುಗಳು ತೂರಾಡಿಕೊಂಡು ನಡೆದು ಗುರಿ ಮುಟ್ಟುವ ಮೊದಲೇ ಮೋರಿಯಲ್ಲಿ ಬಿದ್ದು ಶಾಪಕ್ಕೆ ಗುರಿಯಾಗುತ್ತಿದ್ದವು!

ಇಡೀ ವಾತಾವರಣ ತಿಳಿ ಹಾಸ್ಯದಲ್ಲಿ ಮಿಂದು ಎಲ್ಲರೂ ಒಂದು ಕುಟುಂಬದ ಸದಸ್ಯರಂತೆ ಸೇರಿ ನಲಿಯುತ್ತಿರುವುದು ಸಂಘದ ಪ್ರಯತ್ನಕ್ಕೆ ಕನ್ನಡಿ ಹಿಡಿದಂತಿತ್ತು. ಹೊಸದಾಗಿ ಸಿಂಗಪುರಕ್ಕೆ ಬಂದ ಸದಸ್ಯರು ಇತರೆ ಸ್ಥಳೀಯ ಕನ್ನಡಿಗರ ಜೊತೆ ಒಡನಾಟ, ಪರಸ್ಪರ ಪರಿಚಯ ಮಾಡಿಕೊಳ್ಳುತ್ತಿರುವ ದೃಶ್ಯ, ಕನ್ನಡ ಸಂಘ (ಸಿಂಗಪುರ)ವು ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶವನ್ನು ಎತ್ತಿ ಹಿಡಿಯುವಂತಿತ್ತು.

ಮೂರನೆಯ ಸುತ್ತಿನ ಕೊನೆಯಲ್ಲಿ ಎಲ್ಲರ ಕಣ್ಣು ಅತೀ ಹೆಚ್ಚು ಅಂಕ ಪಡೆದ ತಂಡದೆಡೆಗೆ ನಾಟಿತ್ತು. ಮೂರು ಸುತ್ತುಗಳು ಮುಗಿದ ನಂತರ ಕನಕೇಶ್, ಪ್ರತಿಮಾ, ಕೃಷ್ಣ, ವಿನಯ್ ಹಾಗೂ ಸಂದೀಪ್ ಅವರ ತಂಡ 1904 ಅಂಕಗಳೊಂದಿಗೆ ಮೊದಲನೆಯ ಸ್ಥಾನಕ್ಕೆ ಲಗ್ಗೆ ಹಾಕಿದರೆ, ಅರವಿಂದ್ ನಿಂಬರ್ಗಿ, ಪುಷ್ಪ, ದರ್ಶನ್, ರಮೇಶ್ ಹಾಗೂ ಪ್ರಭು ಕೂಡ್ಲಾಪುರ ಅವರ ತಂಡ 1850 ಅಂಕಗಳೊಂದಿಗೆ ಎರಡನೆ ಸ್ಥಾನದಲ್ಲಿ ತೃಪ್ತಿಗೊಳ್ಳಬೇಕಾಯಿತು.

Bowling Tournament by Kannada Sangha (Singapore)

ವೈಯಕ್ತಿಕವಾಗಿ ಅತ್ಯಧಿಕ ಅಂಕಗಳನ್ನು ಪಡೆದವರ ಪಟ್ಟಿಯಲ್ಲಿ ಪುರುಷರ ವಿಭಾಗದಲ್ಲಿ ಕನಕೇಶ್ (487), ಪ್ರಭು ಕೂಡ್ಲಾಪುರ (472), ರಾಮಪ್ರಸಾದ್ (443) ಮತ್ತು ಮಹಿಳೆಯರ ವಿಭಾಗದಲ್ಲಿ ಸಂಧ್ಯಾ ರಾಮಪ್ರಸಾದ್ (295), ನಿರ್ಮಲಾ ಗೌಡ (291) ಅಗ್ರರೆನಿಸಿದರು.

ಮಕ್ಕಳ ವಿಭಾಗದಲ್ಲಿ ಭಾಗವಹಿಸಿದ ಎಲ್ಲರೂ ವಿಜೇತರೆನ್ನಬಹುದು! ಮನೋಜ್ಞ ನರಸಿಂಹ (276) ಮೊದಲ ಸ್ಥಾನ, ನಿಶಾಂತ್ ಹರಿಮನೆ (250) ಎರಡನೆಯ ಸ್ಥಾನ, ಶರಣ್ಯ ಜಮದಗ್ನಿ (242) ಮೂರನೆಯ ಸ್ಥಾನ ಹಾಗೂ ಪ್ರಜ್ವಲ ಕನಕೇಶ್ (213) ನಾಲ್ಕನೆಯ ಸ್ಥಾನವನ್ನು ಗಳಿಸಿದರು.

ಕೊನೆಯಲ್ಲಿ ವಿಜೇತರಿಗೆ ಕನ್ನಡ ಸಂಘ (ಸಿಂಗಪುರ)ದ ಅಧ್ಯಕ್ಷರಾದ ವಿಜಯ ರಂಗ ಪ್ರಸಾದ, ಇಮೇಜ್ ಇಂಟರ್‌ನ್ಯಾಷನಲ್‌ನ ವ್ಯವಸ್ಥಾಪಕ ನಿರ್ದೇಶಕಿ ರಾಜಶ್ರೀ ಹಾಗೂ ಕ್ರೀಡಾ ಉಪ-ಸಮಿತಿಯ ಛೇರ್ಮನ್ ನಿರ್ಮಲ.ಕೆ.ಗೌಡ ಅವರು ಬಹುಮಾನಗಳನ್ನು ನೀಡಿ ಪ್ರಶಂಸಿದರು. (ವರದಿ-ವೆಂಕಟ್, ಫೋಟೋ : ಸಮಂತ್ ಯಾದವ್)

English summary
Bowling Tournament conducted by Kannada Sangha (Singapore) on September 12, 2015. This program was sponsored by Image International - Institute of Learning & Development. Report by Venkat and photos by Samanth Yadav.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X