• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಸುಧೇಂದ್ರ, ಕಡಮೆ ದಂಪತಿ, ಭೂಪತಿ - ಸಮ್ಮೇಳನದ ಮುಖ್ಯ ಅತಿಥಿಗಳಿವರು!

|

ಈ ಬಾರಿಯ ನಮ್ಮ ಕನ್ನಡ ಸಾಹಿತ್ಯ ರಂಗದ 9ನೇ ವಸಂತ ಸಾಹಿತ್ಯೋತ್ಸವ ನ್ಯೂಜೆರ್ಸಿಯಲ್ಲಿ ಮೇ 18 ಮತ್ತು 19ರಂದು (ಶನಿವಾರ ಮತ್ತು ಭಾನುವಾರ) ಮಾರ್ಲ್ ಟನ್ ನಲ್ಲಿ ನಡೆಯಲಿದೆ. ನ್ಯೂಜೆರ್ಸಿಯಲ್ಲಿ ಎರಡು ದಿನಗಳ ಕಾಲ ಕನ್ನಡ ಸಾಹಿತ್ಯದ ಗುಂಗು ರಂಗೇರಲಿದೆ.

ವಸುಧೇಂದ್ರ

ನಮ್ಮ ಸಮ್ಮೇಳನದ ಮೂಲವಸ್ತು ಅಂದರೆ ಥೀಮ್ "ಬದಲಾವಣೆ". ಅಂತೆಯೇ ಈ ಬಾರಿಯ ಮುಖ್ಯ ಅತಿಥಿಗಳಾಗಿ ನಮ್ಮೊಂದಿಗಿರಲಿದ್ದಾರೆ ಖ್ಯಾತ ಕಥೆಗಾರ, ಪುಸ್ತಕ ಪ್ರಕಾಶಕ ವಸುಧೇಂದ್ರ ಅವರು. ಮೂಲತಃ ಬಳ್ಳಾರಿಯ ವಸುಧೇಂದ್ರ ಇಂದು ಕನ್ನಡದಲ್ಲಷ್ಟೇ ಅಲ್ಲದೆ ಭಾರತದ ಹಲವು ಭಾಷೆಗಳ ಓದುಗರಿಗೆ ಪರಿಚಿತರು. "ನಮ್ಮಮ್ಮ ಅಂದ್ರೆ ನಂಗಿಷ್ಟ" ದಿಂದ "ಮೋಹನಸ್ವಾಮಿ"ಯವರೆಗಿನ ಅವರ ಪಯಣದ ಬದಲಾವಣೆಯೇ ಸಾಕು ಅವರಿಗಿಂತ ಅರ್ಹ ವ್ಯಕ್ತಿ ಇಂದು ಕನ್ನಡದಲ್ಲಿ 'ಬದಲಾವಣೆ' ಎಂಬ ವಿಷಯದ ಬಗ್ಗೆ ಮಾತನಾಡಲು ಇನ್ನೊಬ್ಬರಿಲ್ಲ ಎನ್ನಲು.

'ಕನ್ನಡಕ್ಕೆ ಐದು ಪೈಸೆ ಕಿಮ್ಮತ್ತು ನೀಡದ ಅಮೆಜಾನ್‌ಗೆ ಧಿಕ್ಕಾರ'!

ಹಲವಾರು ಕನ್ನಡ ಪುಸ್ತಕಗಳನ್ನು ಪ್ರಕಟಿಸಿರುವ, ಯುವ ಬರಹಗಾರರನ್ನು ಪ್ರೋತ್ಸಾಹಿಸುತ್ತಿರುವ ಅವರು, ತಮ್ಮ ಕಥೆಗಳಲ್ಲಿ ಬಳ್ಳಾರಿಯ ಸೊಗಡು, ಭಾಷೆಯ ಆಪ್ತತೆ, ಗಣಿಗಾರಿಕೆ, ನಿಸರ್ಗನಾಶ ಇತ್ಯಾದಿಗಳನ್ನು ಸೂಕ್ಷ್ಮವಾಗಿ ಚಿತ್ರಿಸಿದಷ್ಟೇ ಅಲ್ಲದೆ ಸಂಸ್ಕೃತಿ, ಸಾಂಪ್ರದಾಯಿಕತೆಯ ಸಂಕೀರ್ಣತೆಗಳನ್ನೂ ಸಶಕ್ತವಾಗಿ ಹಿಡಿಯಬಲ್ಲರು. ತಮ್ಮ ಕಥೆಗಳಲ್ಲಿ, ಪ್ರಬಂಧಗಳಲ್ಲಿ, ಅವರು ಸದಾ ಹೊಸದೊಂದು ಸಾಮಾಜಿಕ ನ್ಯಾಯದೆಡೆಗೆ ಸೃಜನಶೀಲವಾಗಿ ಬೆರಳು ತೋರಿಸಲು ಯತ್ನಿಸಿದವರು. ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸೇರಿ ಹತ್ತು ಹಲವು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಡ ಪುಸ್ತಕಗಳನ್ನು ಪ್ರಕಟಿಸುವ, ಓದುವ ಬಗೆಯಲ್ಲೇ ಬದಲಾವಣೆ ತಂದ "ಛಂದ ಪುಸ್ತಕ"ದ ಸಂಸ್ಥಾಪಕರು.

ಚಾರಣದಲ್ಲಿ ಆಸಕ್ತಿಯಿರುವ ಇವರು ತಾಂಜಾನಿಯಾ ದೇಶದಲ್ಲಿರುವ ಕಿಲಿಮಂಜಾರೋ ಪರ್ವತವನ್ನೂ, ಕೈಲಾಶ-ಮಾನಸ ಸರೋವರದ ಚಾರಣವನ್ನೂ ಮತ್ತು ಹಿಮಾಲಯದ ಹಲವು ಪರ್ವತಗಳನ್ನೂ ಹತ್ತಿದ್ದಾರೆ. ಸ್ಕ್ವಾಷ್ ಆಟ, ಮಹಾಭಾರತದ ಓದು, ಶಾಸ್ತ್ರೀಯ ಸಂಗೀತವನ್ನು ಕೇಳುವುದು ಅವರ ಇತರ ಹವ್ಯಾಸಗಳಾಗಿವೆ. ಓದಿಗೆ ಅಡ್ಡಿಪಡಿಸುವ ಟಿವಿ ನೋಡುವುದಿಲ್ಲವೆಂದು ಹದಿನೆಂಟು ವರ್ಷಗಳ ಹಿಂದೆ ನಿರ್ಧರಿಸಿ, ಅದರಂತೆ ನಡೆದುಕೊಳ್ಳುತ್ತಿದ್ದಾರೆ!

ಕಸಾರಂನಲ್ಲಿ ತ್ರಿವೇಣಿ ಮತ್ತು ಜ್ಯೋತಿ 'ಸಾಹಿತ್ಯ ಸಲ್ಲಾಪ'

ಭಾರತದ ಇಂದಿನ ನಿರ್ಣಾಯಕ ಕಾಲಘಟ್ಟದಲ್ಲಿ LGBT ಹಕ್ಕು, ಸಮಾನತೆಗಾಗಿ ಹೋರಾಟದಲ್ಲಿ ತೊಡಗಿಕೊಂಡವರು. ಮುಕ್ತವಾಗಿ ಆ ಕುರಿತು ಮಾತನಾಡಿದವರು, ಅವರಿಂದಿಗೆ ತಮ್ಮನ್ನು ಗುರುತಿಸಿಕೊಂಡವರು. ವೃತ್ತಿಯಿಂದ ಸಾಫ್ಟ್ವೇರ್ ಇಂಜಿನಿಯರಾದರೂ, ಇಂದು "ವಸುಧೇಂದ್ರ" ಬರಹಗಾರರಾಗಿ, ಪ್ರಕಾಶಕರಾಗಿ, ಹೋರಾಟಗಾರರಾಗಿ ಸಕ್ರಿಯರೂ ಪ್ರಸ್ತುತರೂ ಆಗಿರುವಾಗ, ಕನ್ನಡ ಸಾಹಿತ್ಯ ರಂಗದ ಮುಖ್ಯ ಅತಿಥಿಗಳಾಗಿ ನಮ್ಮೊಂದಿಗಿರಲಿರುವುದು, ನಮ್ಮೆಲ್ಲರ ಹೆಮ್ಮೆ ಹಾಗೂ ಖುಷಿ.

ಕಡಮೆ ದಂಪತಿ

ಅವರೊಂದಿಗೆ ಇಂದು ಸುನಂದಾ ಕಡಮೆ ಹಾಗೂ ಪ್ರಕಾಶ್ ಕಡಮೆ ದಂಪತಿ ಸಹ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾದ ಕಡಮೆಯವರು ಹುಬ್ಬಳ್ಳಿಯಲ್ಲಿ ಬದುಕು ಕಟ್ಟಿಕೊಂಡವರು. ಸಾಹಿತ್ಯ ಕೃಷಿ ನಡೆಸಿದವರು. ಸುನಂದಾ ಅವರ ಬರಹಗಳಲ್ಲಿ, ಉತ್ತರ ಕನ್ನಡದ ಸಹಜತೆಯಿದೆ, ಭಾಷೆಯ ಸೊಗಸಿದೆ. ನಿತ್ಯ ಜೀವನದ ಸೂಕ್ಷ್ಮ ವಿಷಯಗಳನ್ನು ಮುಖ್ಯವಸ್ತುವಾಗಿಟ್ಟುಕೊಂಡು ಬರೆದ ಅವರ ಹಲವು ಕಥೆಗಳು, ಓದುಗರನ್ನು ಅವುಗಳ ಸರಳ ನೀರೂಪಣೆಯಿಂದಾಗಿ, ಭಾಷೆಯ ಸೊಗಸಿನಿಂದಾಗಿ ತಟ್ಟುತ್ತವೆ. ಮಹಿಳಾವಾದವನ್ನು ಎಲ್ಲೂ ಅಬ್ಬರದಿಂದ ಮಂಡಿಸದೆ, ಸೂಕ್ಷ್ಮವಾಗಿ ತಟ್ಟಿಹೋದಂತಿರುತ್ತವೆ. ಎಂಟಕ್ಕೂ ಹೆಚ್ಚು ಕಥಾಸಂಕಲನಗಳನ್ನು ಹೊರತಂದಿರುವ ಇವರನ್ನು ಹಲವು ಪ್ರಶಸ್ತಿಗಳು ಅರಸಿ ಬಂದಿವೆ.

ಪ್ರಕಾಶ್ ಕಡಮೆಯವರು ಕವಿಗಳಾಗಿ ಆಪ್ತವಲಯದಲ್ಲಿ ಜನಜನಿತರು. ಹೊಸ ಪ್ರತಿಭೆಗಳನ್ನು ಸದಾ ಬೆನ್ನು ತಟ್ಟುವ ತಮ್ಮ ಪರಿಯಿಂದಾಗಿ ಎಲ್ಲರಿಗೂ ಪರಿಚಿತರು. ಸಾಹಿತ್ಯದ ಓದುಗರೂ, ಪ್ರೋತ್ಸಾಹಕರೂ ಆಗಿರುವ ಕವಿಹೃದಯದ ಪ್ರಕಾಶ್ ಕಡಮೆಯವರು ತಮ್ಮ ಸುತ್ತಲಿನ ಜೀವನವನ್ನು ಸದಾ ಬೆರಗಿನಿಂದ ಅವಲೋಕಿಸಿದವರು. ಹುಟ್ಟೂರಿನ ಬಗ್ಗೆ ಒಂದು ಹಿಡಿ ಹೆಚ್ಚೇ ಪ್ರೀತಿ ಇಟ್ಟುಕೊಂಡವರು. ಹಲವು ಬಗೆಯ ಸಾಹಿತ್ಯಗೋಷ್ಠಿಗಳನ್ನು ತಮ್ಮ ಮನೆಯಂಗಳದಲ್ಲಿ ನಡೆಸಿಕೊಂಡು ಬರುತ್ತಾ "ನಾಗಸುಧೆ ಜಗಲಿ"ಯನ್ನು ಸಾಹಿತ್ಯದ ಅಂಗಳವನ್ನಾಗಿಸಿರುವ ಕಡಮೆ ದಂಪತಿಗಳು ಈ ಬಾರಿ ನಮ್ಮೊಡನೆ ಇರುವುದು ಇಲ್ಲಿನ ಸಾಹಿತ್ಯಾಸಕ್ತರಿಗೂ ಹೆಮ್ಮೆ ತಂದಿದೆ.

ವಸುಂಧರಾ ಭೂಪತಿ

ಈ ಮೂವರಲ್ಲದೆ, ಈ ಬಾರಿ ಸಾಹಿತ್ಯ ರಂಗದ ಸುಗ್ಗಿ ಎಂಬಂತೆ ವಸುಂಧರಾ ಭೂಪತಿ ನಮ್ಮೊಡನಿದ್ದಾರೆ. ವಸುಂಧರಾ ಭೂಪತಿಯವರು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿ, ಹೆಣ್ಣು ಭ್ರೂಣಹತ್ಯೆ ನಿಷೇಧ ಸಮಿತಿಯ ಸದಸ್ಯರಾಗಿ, ಕರ್ನಾಟಕ ಸರ್ಕಾರದ ಹಲವು ಸಾಹಿತ್ಯ ಮತ್ತು ಮಹಿಳಾ ಸಂಬಂಧಿ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸಂಪಾದಕರಾಗಿ, ಪತ್ರಕರ್ತರಾಗಿ ಸದಾ ಮಹಿಳಾ ಸಬಲೀಕರಣದ ದೃಷ್ಟಿಕೋನದ ವಿಷಯಗಳನ್ನು ಎತ್ತಿಕೊಂಡಿದ್ದಾರೆ. ಹಲವಾರು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ ಅನುಭವ ಅವರದ್ದು. ಆರೋಗ್ಯ, ವೈದ್ಯಕೀಯ ವಿಚಾರಗಳಾಧಾರಿತ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಪ್ರತಿಷ್ಠಿತ "ಯೂನಿಸೆಫ್ ಪತ್ರಿಕೋದ್ಯಮ ಪ್ರಶಸ್ತಿ"ಯೂ ಸೇರಿದಂತೆ ವಿಭಿನ್ನ ಪ್ರಶಸ್ತಿಗಳ ಗರಿ ಇವರದ್ದು.

ಬನ್ನಿ, ಈ ಎಲ್ಲ ಸಹೃದಯ ಸಾಹಿತ್ಯ ದಿಗ್ಗಜರೊಡನೆ ನಾವೂ ಕೆಲಹೊತ್ತು ಹರಟೋಣ.

English summary
9th Vasanta Sahityotsava in New Jersey on May 18 and 19, on Saturday and Sunday. Kannada writer, story teller Vasudhendra, Kadame couple and Vasundhara Bhupati are participating in Kannada literary event by Kannada Sahitya Ranga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X