ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್, ಉದಯಶಂಕರ್ ಇಂದೇನಾದರೂ ಇದ್ದಿದ್ದರೆ...

By ನಾಗರಾಜ್ ಎಂ., ಕನೆಕ್ಟಿಕಟ್, ಯುಎಸ್ಎ
|
Google Oneindia Kannada News

New Kannada movie songs in bad taste
ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಚಳಿಗಾಲ ಎಂದರೆ ಅಬ್ಬಬ್ಬ ಏನು ಚಳಿ, ಬೆಳಗ್ಗಿನ ಜಾವ ದಟ್ಟ ಮಂಜು ಕವಿದ ವಾತಾವರಣ, ಅಲ್ಲಲ್ಲಿ ಹೊರಗಡೆ ಬೆಂಕಿ ಹತ್ತಿಸಿಕೊಂಡು ಮೈ ಕಾಯ್ಸ್ತಾ ಕೂತಿರೋ ಜನ... ಆದರೆ ಯಾಕೋ ಇತ್ತೀಚಿನ ವರ್ಷಗಳಲ್ಲಿ ಡಿಸೆಂಬರ್-ಜನವರಿ ಬಂದರು ಅದೇ ಸೆಕೆ, ಮೈ ಸುಡೋ ಬಿಸಿಲು. ಎಲ್ಲ ಹವಾಮಾನ ವೈಪರಿತ್ಯ. ಕೆಟ್ಟಕಾಲ ಬರ್ತಾ ಇದೆ ಅಂತಾ ಕಾರಿನ ಹಿಂದಿನ ಸೀಟಿನಲ್ಲಿ ಕೂತಿದ್ದ ಅಜ್ಜಿ ಗೊಣಗಾಡಿದ್ದು ಕೇಳಿತ್ತು.

ಆ ಸೆಕೆಗೋ, ಟ್ರಾಫಿಕ್ ಜಾಮ್ಗೋ... ಸ್ವಲ್ಪ ತಲೆ ನೋವು ಬಂದಂತಾಗಿ, ಕೈಗೆ ಸಿಕ್ಕ "ಕನ್ನಡ ಹಾಡುಗಳು" ಎಂದು ಬರೆದಿದ್ದ ಸೀಡಿಯನ್ನು ಹಾಕಿ ಸಿಡಿ ಪ್ಲೇಯರ್ ಆನ್ ಮಾಡಿದ್ದೆ.

"ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ-ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೇ? ನಿನಗೆ ಬೇರೆ ಹೆಸರು ಬೇಕೇ?
ಸ್ತ್ರೀ ಎಂದರೆ ಅಷ್ಟೇ ಸಾಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ?"

ಸಿ.ಅಶ್ವಥ್ ಅವರ ಸೊಗಸಾದ ಧ್ವನಿ ಸುರುಳಿಯಲ್ಲಿ ಕೇಳಿಬಂದ ಈ ಹಾಡಿಗೆ, ಅರ್ಥಗರ್ಭಿತವಾದ, ಆ ಹಾಡು ಕೇಳಿದೊಡನೆಯೇ ಹೆಣ್ಣು-ಸ್ತ್ರೀ ಅಂದರೆ ಮನದಲ್ಲೇ ಒಂದು ಗೌರವ, ಪೂಜ್ಯ ಭಾವನೆ ಬರುವಂತೆ.... ಸ್ತ್ರೀ ಅನ್ನು ಹೊಗಳಿರುವ ಅವರ ಪರಿ ಕೇಳಿ ಭಾವವಶನಾಗಿದ್ದೆ. ಎರಡೆರಡು ಬಾರಿ ಅದೇ ಹಾಡನ್ನು ರಿಪೀಟ್ ಮಾಡಿ ಕೇಳಿದ್ದೆ.

ಅಷ್ಟೊತ್ತಿಗೆ, ಹಿಂಬದಿಯಲ್ಲಿ ಅಜ್ಜಿಯ ಜೊತೆ ಕೂತಿದ್ದ 5 ವರ್ಷದ ಅಣ್ಣನ ಮಗಳು ಯಾವುದೋ ಹಾಡನ್ನು ಸಣ್ಣದಾಗಿ ಹೇಳುತ್ತಿದುದನ್ನು ನೋಡಿ, ಜೋರಾಗಿ ಹೇಳು ಪುಟ್ಟ.. ನಾವು ಕೇಳ್ತಿವಿ ಅಂದೊಡನೆಯೆ ಹಾಡು ಹೇಳಲು ಸ್ಟಾರ್ಟ್ ಮಾಡಿಯೇ ಬಿಟ್ಟಿದ್ದಳು!

"ಮೈ ನೇಮ್ ಬಸಂತಿ ..
ಬನ್ರೋಪ್ಪ ನನ್ನ ಬೆನ್ನತ್ತಿ!
ನೂರು ಬಾಯ್ ಫ್ರೆಂಡ್ಸ್
ಆರು ಹಸ್ಬೆಂಡ್ಸ್
ಓಡಿ ಹೋಗವ್ರೆ...ನಾನು ಏನು ತಾನೇ ಮಾಡ್ಲಿ ?"....ಬ್ಲಾ ಬ್ಲಾ ಬ್ಲಾ

ಹೇ.. ಹೇ.. ಸಾಕು ಮಾಡೇ ನಿನ್ನ ಈ ಒಂಚೂರು ಅರ್ಥ ಇಲ್ಲದ ಹಾಡನ್ನು, ಯಾರೇ ಹೇಳಿಕೊಟ್ಟಿದ್ದು ನಿಂಗೆ ಈ ಹಾಡನ್ನು ಅಂತಾ ಅಜ್ಜಿ ಗದರಿಯೇಬಿಟ್ಟಿದ್ದರು. ಯಾರು ಇಲ್ಲಜ್ಜಿ, ಇದು ಹೊಸ ಸಿನಿಮಾ "ಪ್ರೇಂ ಅಡ್ಡಾ"ದ ಹಾಡು (ಚಿತ್ರಗಳು), ನೀವೇ ಬೇಕಾದರೆ ಕೇಳಿ ಅಂತ ಯಾವುದು ಒಂದು ಸಿಡಿ ತೆಗೆದು, ಅಂಕಲ್ ಇದನ್ನು ಪ್ಲೇ ಮಾಡಿ ಅಂತ ಕೈಯಲ್ಲಿ ಇಟ್ಟೇ ಬಿಟ್ಟಿದ್ದಳು.

ಹಮ್... ಅಬ್ಬ ..ಈಗ ತಾನೇ ಹೆಣ್ಣನ್ನು ಸುಶೀಲತೆಯಿಂದ ವರ್ಣನೆ ಮಾಡಿದ ಆ ಹಾಡೆಲ್ಲಿ? ಹೆಣ್ಣು ಅಂದರೆ ಒಂದು ಭೋಗದ ವಸ್ತು ಅನ್ನೋ ಹಾಗೆ ವರ್ಣಿಸಿ, ಉತ್ತರ ಕರ್ನಾಟಕದ ಬೈಗುಳವನ್ನು ಸಹಾ ಹಾಡಿನಲ್ಲಿ ಸೇರಿಸಿ "ಸೂಪರ್ ಕ್ಯಾಚಿ ಸಾಂಗ್" ಅಂತಾ ಬರೀ ಅಶ್ಲೀಲತೆಯಿಂದ ವರ್ಣನೆ ಮಾಡಿದ ಈ ಹಾಡೆಲ್ಲಿ?

ಏನು ಕಾಲ ಕೆಟ್ಟು ಹೋಯಿತು? ಅರ್ಧ ಈ ಸಿನೆಮಾದೋರಿಂದಾನೆ... ನಮ್ಮ ಯುವಜನತೆ ಇರಲಿ, ಚಿಕ್ಕ ಮಕ್ಕಳು ಸಹಾ ಕೆಟ್ಟು ಅಡ್ಡ ದಾರಿ ಹಿಡಿತಾ ಇದ್ದಾರೆ. ಅದಕ್ಕೆ ದಿನ ಬೆಳಿಗ್ಗೆ ಎದ್ದು ನೋಡಿದರೆ ಅಲ್ಲಿ ಹೆಣ್ಣಿನ ಶೋಷಣೆ, ಇಲ್ಲಿ ಹೆಣ್ಣಿನ ಮಾನಭಂಗ, ಬರೀ ಇವೆ ನ್ಯೂಸ್ ಪೇಪರ್/ಟಿವಿಯಲ್ಲಿ ಹವಾಮಾನ ವೈಪರಿತ್ಯದ ಒಂದೆಡೆ ಇದ್ದರೆ, ಈ ಸಿನೆಮಾದೋರ ಕೆಟ್ಟ ಹಾಡುಗಳು ಬೇರೆ. ಕೆಟ್ಟಕಾಲ ಬರ್ತಾ ಇದೆ, ಇನ್ನು ಏನು ಗತಿ ಕಾದೈತೋ ದೇವರೇ ಬಲ್ಲ, ಅಂತಾ ಅಜ್ಜಿ ಬೈಗುಳ ಕೇಳಿ, ಸರಿಯಾಗಿ ಹೇಳಿದಿರಿ ಅಜ್ಜಿ ಎಂದು ನಾನು ಕೂಡ ತಲೆಯಾಡಿಸಿದ್ದೆ.

ಬೇಗನೆ ಹಣವನ್ನು ಕ್ಯಾಚ್ ಮಾಡಲಿಕ್ಕೊಸ್ಕರ ಹೆಚ್ಚು ಹೆಚ್ಚಾಗಿ ಈ ತರಹದ "ಕ್ಯಾಚಿ" ಸಾಂಗ್ಸ್ ಅನ್ನು ರಚಿಸಿ ಸಮಾಜವನ್ನು ಹದಗೆಡಿಸುತ್ತಿರುವುದನ್ನು ನೋಡಿದರೆ, ನೋಡುವ/ಕೇಳುವ ಜನರ ಟ್ರೆಂಡ್ ಚೇಂಜ್ ಆಗಿದಿಯೋ? ಅಥ್ವಾ ಈ ಸಿನೆಮಾದೋರ ಟ್ರೆಂಡ್ ಚೇಂಜ್ ಆಗಿದಿಯೋ? ಅಥವಾ ನಾವು ಚೇಂಜ್ ಆಗಬೇಕೋ? ಒಂದು ಅರಿಯದೆ ಸಿಡಿ ಪ್ಲೇಯರ್ ಬಂದ್ ಮಾಡಿದ್ದೆ.

"ಓ ಎಂಥ ಸೌಂದರ್ಯ ಕಂಡೆ ... ಓಓಓ ಎಂಥ ಸೌಂದರ್ಯ ಕಂಡೆ.. ಆದಿ ಶಕ್ತಿಯೋ, ಮಹಾಲಕ್ಷ್ಮಿಯೋ ..ವಾಣಿಯೋ ಕಾಣೆ ನಾ..." ಅಂತಾ ಹಾಡಿದ್ದ ನಮ್ಮ ಗಾನಗಂಧರ್ವ ಡಾ| ರಾಜ್ ಕುಮಾರ್, ಕನ್ನಡದ ಸುಸಂಸ್ಕೃತಿಯನ್ನು ಎತ್ತಿ ಹಿಡಿಯುವಂತೆ ಹಾಡು ರಚಿಸುತ್ತಿದ್ದ ಸಾಹಿತ್ಯರತ್ನ ಚಿ.ಉದಯಶಂಕರ್ ಮೊದಲಾದವರು ಇಂದೇನಾದರೂ ಇದ್ದಿದ್ದರೆ...

English summary
Nagaraj Maheshwarappa from Connecticut, USA laments latest Kannada movie songs are not in good taste. Some of the new Kannada movie songs are spoiling the taste of younger generation. Now, era of Rajkumar and Chi Udayshankar is over.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X