ನ್ಯೂಜೆರ್ಸಿ 'ಬೃಂದಾವನ'ದಲಿ ರಾಜೇಶ್ 'ಕೃಷ್ಣ'ನ ಗಾನಸುಧೆ

By: * ಪದ್ಮಪಾದ
Subscribe to Oneindia Kannada
Rajesh Krishnan
2010ರಲ್ಲಿ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ ನ್ಯೂಜೆರ್ಸಿಯ ಬೃಂದಾವನದಲ್ಲಿ ಫೆಬ್ರವರಿ 4ರಂದು ಖ್ಯಾತ ಹಿನ್ನೆಲೆ ಗಾಯಕರಾದ ರಾಜೇಶ್ ಕೃಷ್ಣನ್ ಹಾಗು ಡಾ. ಶಮಿತಾ ಮಲ್ನಾಡ್ ಅವರುಗಳಿಂದ ಅದ್ಭುತವಾದ ಸಂಗೀತ ಸಂಜೆ ನಡೆಯಿತು.

ರಾಜೇಶ್ ಜೊತೆ ಆಗಮಿಸಿದ್ದ ಅವರ ಪತ್ನಿ ರಮ್ಯ ವಸಿಷ್ಠ ಕೂಡ ಕೆಲವು ಹಾಡುಗಳನ್ನು ಹಾಡಿದರು. ಶಂಕರ ಕ್ಯಾನ್ಸರ್ ಫ಼ೌಂಡೇಶನ್ ಸಹಾಯಾರ್ಥವಾಗಿ "ಮೈತ್ರಿ" ತಂಡ ಆಯೋಜಿಸಿದ್ದ ಈ ನಾಲ್ಕು ಗಂಟೆಗಳ ಸಂಗೀತ ಕಾರ್ಯಕ್ರಮವನ್ನು 400ಕ್ಕೂ ಹೆಚ್ಚು ಕನ್ನಡಿಗರು ಆನಂದಿಸಿ ಸುಮಾರು 4,000 ಡಾಲರಿಗಿಂತ ಹೆಚ್ಚು ಹಣವನ್ನು ಸಂಗ್ರಹಿಸಿ ನೀಡಲಾಯಿತು.

ಸಂಜೆ 6ಕ್ಕೆ ಸರಿಯಾಗಿ, ಬೃಂದಾವನದ ನಿರ್ದೇಶಕಲ್ಲೊಬ್ಬರಾದ ವಿದ್ಯಾ ಮೂರ್ತಿ ಅವರ ಲವಲವಿಕೆಯ ನಿರೂಪಣೆಯಲ್ಲಿ, ಬೃಂದಾವನದ ಮಕ್ಕಳಿಂದ ಅಮೇರಿಕ ಹಾಗು ಭಾರತ ದೇಶದ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯ್ತು. ಅಮೆರಿಕದಲ್ಲಿ ನಡೆದ ಸಾಗರದಾಚೆ ಸಪ್ತಸ್ವರ ಸಂಗೀತ ಸ್ಪರ್ಧೆಯ ವಿಜೇತೆ, ಕುಮಾರಿ ಅಕ್ಷತ ರಾಮನಾಥ್ ಅವರ "ಇಂದು ಎನಗೆ ಗೋವಿಂದ" ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ "ಬಾರೊ ಕೃಷ್ಣಯ್ಯ" ಎಂದು ಅಕ್ಷತ ಹಾಡಿ ರಾಜೇಶ್ ಕೃಷ್ಣನ್ ಹಾಗು ತಂಡದವರನ್ನು ಹಾಡಿನ ಮೂಲಕ ಸ್ವಾಗತಿಸಿದಾಗ, ಅಕ್ಷತಳ ಗಾನ ಮಾಧುರ್ಯಕ್ಕೆ ಮೆಚ್ಚಿದ ಪ್ರೇಕ್ಷಕರ ಕರತಾಡಣ ಮುಗಿಲು ಮುಟ್ಟಿತ್ತು.

ಬೃಂದಾವನದ ಪರವಾಗಿ ವಿದ್ಯಾ ಮೂರ್ತಿಯವರು ರಾಜೇಶ್ ಹಾಗು ರಮ್ಯ ಅವರಿಗೆ "ಮದುವೆಯ ಶುಭಾಶಯ" ಕೋರಿದರು. ನಂತರ ಮೊದಲ ಮೂರು ಹಾಡುಗಳು ರಾಜೇಶ್ ಅವರು ತಮ್ಮ ಬಾಳ ಗೆಳತಿ ರಮ್ಯ ವಸಿಷ್ಠರಿಗೆ ಹೇಳಿದಂತಿತ್ತು. "ಯಾರೋ ಕಣ್ಣಲ್ಲಿ ಕಣ್ಣನ್ನಿಟ್ಟು...", "ಉಸಿರೆ ಉಸಿರೆ..." ಹಾಗು "ಪೇಮಚಂದ್ರಮ ಕೈಗೆ ಸಿಗುವುದೆ ಹೇಳೆ ಸಂಗಾತಿ" ಹಾಡುಗಳು ಪ್ರೇಕ್ಷಕರ ಮನ ಸೂರೆಗೊಂಡವು. ಶಮಿತಾ ಅವರಿಗೆ ರಾಜ್ಯ ಪ್ರಶಸ್ತಿ ತಂದುಕೊಟ್ಟ "ಮಧುರಾ ಪಿಸುಮಾತಿಗೆ" ಹಾಡಿನೊಂದಿಗೆ ಪ್ರಾರಂಭಿಸಿದರು. 5-6 ಹಾಡುಗಳನ್ನು ಸೇರಿಸಿ ಹಾಡಿದ "ಮೆಡ್ಲೆ" ಮುಗಿದನಂತರ ರಮ್ಯ ಮತ್ತು ರಾಜೇಶ್ ಜೊತೆಗೂಡಿ "ಕರಿಯ ಐ ಲವ್ ಯು...ಬಿಳಿಮೋಡಾದ ಮೇಲಾಣೆ" ಎಂದು ದುನಿಯಾ ಚಿತ್ರದ ಹಾಡನ್ನು ಹಾಡಿ ರಂಜಿಸಿದರು.

ಹಾಡಿನ ಸರಮಾಲೆಯಲ್ಲಿ ಕೆಲವು ಹಳೆಯ ಹಾಡುಗಳಾದ "ಎಲ್ಲೆಲ್ಲಿ ನೋಡಲಿ ನಿನ್ನನೆ ಕಾಣುವೆ", "ಜೊತೆಯಲಿ ಜೊತೆ ಜೊತೆಯಲಿ", "ಬಾಳ ಬಂಗಾರ ನೀನು" ಹಾಗೂ "ಗಿಲ್ ಗಿಲ್ ಗಿಲ ಗಿಲಕ್ಕೆ ಕಾಲು ಗೆಜ್ಜೆ" ಹಾಗೂ ಹೊಸ ಹಾಡುಗಳಾದ "ಸುಮ್ಮನೆ ಸುಮ್ಮನೆ ಇದ್ದರು ಸುಮ್ಮನೆ" "ಮಳೆಬರುವ ಹಾಗಿದೆ" "ಐತಲಕಡಿ" "ಕಿಟ್ಟಪ್ಪ" ಹಾಡುಗಳ ಮೂಲಕ ತಮ್ಮ ಮಾಧುರ್ಯದ ಸವಿಯುಣಿಸಿ ಪ್ರೇಕ್ಷಕರನ್ನು ಕುಣಿಯುವಂತೆ ಮಾಡಿದರು. ರಾಜೇಶ್ ಕೃಷ್ಣನ್ ರನ್ನು ಕರ್ನಾಟಕದಲ್ಲಿ ಮನೆಮಾತಗಿಸಿದ "ಅಮೆರಿಕ ಅಮೆರಿಕ" ಚಿತ್ರದ "ನೂರು ಜನ್ಮಕು, ನೂರಾರು ಜನ್ಮಕು" ಹಾಡಿದಾಗ ಪ್ರೇಕ್ಷಕರ ಕರತಾಡನ ಮುಗಿಲು ಮುಟ್ಟಿದರೆ ಕೊನೆಗೆ "ಸಂತೋಷಕ್ಕೆ ಹಾಡು ಸಂತೋಷಕ್ಕೆ" ಹಾಡಿದಾಗ ಪ್ರೇಕ್ಷಕರು ಹಾಡಿಗೆ ತಕ್ಕಂತೆ ಕುಣಿಯಲಾರಂಭಿಸಿದರು. ಕನ್ನಡ ಚಿತ್ರಗೀತೆಗಳಲ್ಲದೆ ಒಂದು ತೆಲುಗು ಹಾಗು ಹಲವು ಹಿಂದಿ ಹಾಡುಗಳನ್ನು ಹಾಡಿ ಎಲ್ಲರನ್ನು ಮನರಂಜಿಸಿದರು..ರಾಜೇಶ್, ರಮ್ಯ ಹಾಗು ಶಮಿತ.

ಇದೇ ಸಂಧರ್ಭದಲ್ಲಿ ಆಗಮಿಸಿದ್ದ ಅಕ್ಕ ವಿಶ್ವಸ್ಥ ಮಂಡಲಿಯ ಚೇರ್ಮನ್ ಅಮರ್ ನಾಥ್ ಗೌಡ ಅವರನ್ನು ಗೌರವಿಸಲಾಯಿತು. ಅವರು ನೆರೆದಿದ್ದ ಸಭಿಕರಿಗೆ 6ನೇ ಅಕ್ಕ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಟ್ಟ "ಬೃಂದಾವನ"ದ ಸದಸ್ಯರಿಗೆ ವಂದಿಸುತ್ತ, ಅಟ್ಲಾಂಟದಲ್ಲಿ ನಡೆಯುವ 7ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಎಲ್ಲರನ್ನೂ ಅಹ್ವಾನಿಸಿದರು. ಮಧ್ಯಂತರದಲ್ಲಿ ಬೃಂದಾವನದ ಪುಟಾಣಿಗಳು ಹಾಡಿದ "ಏಳು ಸ್ವರವು ಸೇರಿ ಸಂಗೀತವಾಯಿತು" ಎಲ್ಲರ ಗಮನ ಸೆಳೆಯಿತು.

ಬೃಂದಾವನ ಕನ್ನಡ ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್ ಕಡ್ಳೇಬೇಳೆ ಅವರ ವಂದನಾರ್ಪಣೆಯ ನಂತರ ಶಮಿತ ಅವರ "ಜೋಕೆ...ನಾನು ಬಳ್ಳಿಯ ಮಿಂಚು" ಹಾಡಿನೊಂದಿಗೆ ಕಾರ್ಯಕ್ರಮ ಮುಗಿದಾಗ ರಾತ್ರಿ 10 ಆಗಿತ್ತು. ಉತ್ತಮವಾದ ಕಾರ್ಯಕ್ರಮವನ್ನು ನ್ಯೂಜೆರ್ಸಿಯಲ್ಲಿ ನಡೆಸಿ ನ್ಯೂಯಾರ್ಕ್, ಪೆನ್ಸಿಲ್ವೇನಿಯ, ಡೆಲವೇರ್ ಹಾಗು ಕನೆಕ್ಟಿಕಟ್ ರಾಜ್ಯದ ಕನ್ನಡಿಗರಿಗೂ ಈ ಗಾನಸುಧೆಯನ್ನು ಸವಿಯಲು ಅನುವು ಮಾಡಿಕೊಟ್ಟ ನ್ಯೂಜೆರ್ಸಿಯ "ಬೃಂದಾವನದ ಮೈತ್ರಿ" ತಂಡಕ್ಕೆ "ಭಲೆ ಮೈತ್ರಿ ತಂಡ...ನಿಮ್ಮ ಕಾರ್ಯ ಹೀಗೆ ಮುಂದುವರೆಯುತ್ತಿರಲಿ" ಎಂದು ಶುಭ ಹಾರೈಸುತ್ತೇನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada actor and Singer Rajesh Krishnan's concert was a grand success in Brindavana, New Jersey, USA. Rajesh Krishnan was accompanied by his wife Ramya Vasishta and singer Dr Shamita Malnad. On this occasion $ 4,000 was collected and handed over to Shankar Cancer Foundation.
Please Wait while comments are loading...