ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಮನ್‌ನಲ್ಲಿ ಧುಮ್ಮಿಕ್ಕಿ ಹರಿಯುತ್ತಿರುವ ವಾದಿ ದರ್ಬಾತ್

By * ರಂಗನಾಥ ಪಿಎಸ್
|
Google Oneindia Kannada News

 Wadi Darbat waterfalls in Oman
ಮರಳುಗಾಡಿನಲ್ಲಿ ಹಸಿರು, ಜಲಪಾತ, ನದಿಗಳು ಹಾಗು ಪ್ರಾಣಿ ಪಕ್ಷಿಗಳನ್ನು ಕಾಣುವುದು ಬಹಳ ಕಡಿಮೆ. ಆದರೆ ಒಮಾನ್ ದೇಶದ ಧೋಫಾರ್ ಪ್ರಾಂತ್ಯದಲ್ಲಿನ ಸಲಾಲ ಸುತ್ತಮುತ್ತಲಿನ ಪ್ರದೇಶ ಇದಕ್ಕೆ ತದ್ವಿರುದ್ದ, ಇಲ್ಲೂ ಸಹ ಮಾನವನಿರ್ಮಿತ ಹಾಗು ಪ್ರಕೃತಿ ನಿರ್ಮಿತ ಉದ್ಯಾನವನಗಳಿವೆ, ಜತೆಗೆ ಸಣ್ಣ ಪುಟ್ಟ ಜಲಪಾತಗಳು, ಸರೋವರಗಳು ನಮಗೆ ಕಾಣಸಿಗತ್ತವೆ.

ಅರಬ್ಬಿ ಭಾಷೆಯಲ್ಲಿ ವಾದಿ ಎಂದರೆ ಕಣಿವೆ ಪ್ರದೇಶ ಅಥವ ನದಿ ಪ್ರದೇಶ. ಹೆಚ್ಚು ಮಳೆ ಬಂದಾಗ ನೀರು ಹರಿಯುವ ಕಣಿವೆ ಪ್ರದೇಶವನ್ನು ವಾದಿ ಎಂದು ಕರೆಯುತ್ತಾರೆ. ಒಮಾನ್ ದೇಶದಲ್ಲಿ ಇಂತಹ ನೂರಾರು ವಾದಿಗಳಿವೆ. ಅತಿ ಹೆಚ್ಚು ಮಳೆ ಬಂದಾಗ ಈ ವಾದಿಗಳಲ್ಲಿ ನೀರು ಹರಿಯುತ್ತದೆ. ಇಂತಹ ಕೆಲ ವಾದಿಗಳು ಕೆಲ ಪ್ರದೇಶಗಳಲ್ಲಿ ಜಲಪಾತಗಳನ್ನು ಸೃಷ್ಟಿ ಮಾಡುತ್ತವೆ. ಅಂತಹ ಪ್ರಕೃತಿ ನಿರ್ಮಿತ ಈ ಜಲಪಾತದ ಹೆಸರು ವಾದಿ ದರ್ಬಾತ್.

ವಾದಿ ದರ್ಬಾತ್ ಒಮಾನ್ ದೇಶದ ಧೋಫಾರ್ ಪ್ರಾಂತ್ಯದಲ್ಲಿರುವ ಪ್ರದೇಶ. "ಸಲಾಲ" ದಿಂದ 50 ಕಿ.ಮೀ ದೂರದಲ್ಲಿದ್ದು "ತಾಖ" ಪಟ್ಟಣದಿಂದ "ಮಿರ್ಬಾತ್" ಪಟ್ಟಣ ಕಡೆ ಹೋಗುವ ರಸ್ತೆಯಲ್ಲಿ ಎಡಗಡೆ ವಾದಿ ದರ್ಬಾತ್ ಸಿಗುತ್ತದೆ. "ತಾಖ" ಪಟ್ಟಣದಿಂದ ಸುಮಾರು 7 ಕಿ.ಮೀ ದೂರದ ರಸ್ತೆಯಲ್ಲಿ ಕ್ರಮಿಸಿದರೆ ರಸ್ತೆಯ ಎಡಬದಿಯಲ್ಲಿ ಈ ಜಲಪಾತವನ್ನು ಕಾಣಬಹುದು. ಈ ಜಲಪಾತದಲ್ಲಿ ಯಾವಾಗಲೂ ನೀರು ಹರಿಯುವುದಿಲ್ಲ. ಆದರೆ ಧೋಫಾರ್ ಬೆಟ್ಟ ಗುಡ್ಡಗಳಲ್ಲಿ ಅತಿ ಹೆಚ್ಚು ಮಳೆಯಾದಾಗ ನಾವು ನೀರನ್ನು ಕಾಣಬಹುದು. ಸಾಮನ್ಯವಾಗಿ ಮಳೆಗಾಲವೆಂದರೆ ಇಲ್ಲಿ ಕರಿಯಲ್ಪಡುವ "ಕರೀಫ್ ಸೀಸನ್"ನಲ್ಲಿ ಮಾತ್ರ ಸ್ವಲ್ಪ ಜಾಸ್ತಿ ಮಳೆಯಾಗುತ್ತದೆ. ಆ ಸಮಯದಲ್ಲಿ ಕೆಲದಿನಗಳ ಮಟ್ಟಿಗೆ ನಾವು ಈ ಜಲಪಾತವನ್ನು ಕಾಣಬಹುದು.

ಅಂದಾಜು ನೂರು ಮೀಟರ್ ಉದ್ದವಿರುವ ಈ ಜಲಪಾತ ನಾಲ್ಕೈದು ಕವಲಾಗಿ ಒಡೆದು ನೀರು ಕೆಳಗೆ ಬೀಳುತ್ತದೆ. ಕಡಿದಾದ ಬಂಡೆಯನ್ನು ಸುತ್ತುವರಿದಿರುವ ಹಚ್ಚ ಹಸಿರು ಮರಗಿಡಗಳ ನಡುವೆ ಬಾಗಿ ಬಳುಕುತ್ತಾ ಧುಮುಕುವುದನ್ನು ನೋಡುವುದೇ ಒಂದು ರೋಮಾಂಚಕ ಅನುಭವ. ನೀರು ಬಂಡೆಗೆ ತಾಗಿ ಮುತ್ತು ಚೆಲ್ಲಿದಂತೆ ಚೆದುರಿ ಬೀಳುತ್ತಿರುವ ಸುಂದರ ನೋಟ. ಎಷ್ಟೊಂದು ಜಲಧಾರೆಗಳು ಅದನ್ನು ನೋಡಿಯೇ ಸೌಂದರ್ಯವನ್ನು ಸವಿಯಬೇಕು. ಈ ವಾದಿ ದರ್ಬಾತ್ ಪೂರ್ವಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ.

ಇಡೀ ಒಮಾನ್ ನಲ್ಲಿ ಇತ್ತೀಚೆಗೆ ನವೆಂಬರ್ ಮಾಸದಲ್ಲಿ 2, 3 ಮತ್ತು 4ನೇ ದಿನಾಂಕದಂದು ಅತಿ ಹೆಚ್ಚಿನ ಮಳೆಯಾಯಿತು. ಆಗ ಬಹುತೇಕ ಎಲ್ಲ ವಾದಿಗಳು ತುಂಬಿ ಹರಿದು ಜನರಿಗೆ ಹೆಚ್ಚಿನ ನಷ್ಟ ಉಂಟಾಯಿತು. ಆದರೆ ಸಲಾಲ ಸುತ್ತ ಮುತ್ತಲಿನ ಮಳೆಯಿಂದಾಗಿ ವಾದಿ ದರ್ಬಾತ್ ಅತಿ ಸುಂದರ ಜಲಪಾತಕ್ಕೆ ಸಾಕ್ಷಿಯಾಯಿತು. ನೀರು ಹರಿಯುವುದಕ್ಕೆ ಶುರುವಾದಾಗಿನಿಂದ ಪ್ರತಿಯೊಬ್ಬರು ತಮ್ಮ ತಮ್ಮ ಸ್ನೇಹಿತರಿಗೆ ಕರೆ ಮಾಡಿ ಜಲಪಾತ ನೋಡುವುದಕ್ಕೆ ಕರೆಯುವವರೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿಯಾದಾಗಿನಿಂದ ಮಸ್ಕತ್, ಸುರ್, ಸೋಹಾರ್, ನಿಜ್ವ ಮತ್ತು ಬರ್ಕಾ ಮುಂತಾದ ಪ್ರದೇಶಗಳಿಂದ ಜನರು ಸಾಲು ಸಾಲಾಗಿ ಬರುತ್ತಿದ್ದಾರೆ. ಮರಳುಗಾಡಿನ ಬಿಸಿಲಿಗೆ ಬೆಂದು ಹೋಗಿದ್ದ ಜನತೆ ಬದಲಾದ ಹವಾಮಾನದ ಕಂಪನ್ನು ಸವಿಯಲು, ಮಳೆ ಬೀಳುತಿದ್ದರೂ ಲೆಕ್ಕಿಸದೆ ಈ ಸುಂದರ ದೃಶ್ಯವನ್ನು ನೋಡಲು ಬರುತ್ತಿದ್ದಾರೆ.

English summary
Magnificent Wadi Darbat waterfall is attracting thousands of tourists in Oman near Salalah. The Wadi Darbat natural waterfall occurs when heavy rain lashes the area. Article by PS Rananath, Oman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X