ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನೆ ಮೇಲೆ ಒಂಟೆ ಮೇಲೆ ಕುದುರೆ ಮೇಲೆ ಟೂಟೂಟೂ

By * ವಾಣಿ ರಾಮದಾಸ್, ಸಿಂಗಪುರ
|
Google Oneindia Kannada News

I will not talk to you
ಇತ್ತೀಚೆಗೆ ಪ್ರೈಮರಿ ಶಾಲೆಯೊಂದಕ್ಕೆ ಭೇಟಿ ನೀಡಿದ್ದೆ. ಶಾಲೆ ಬಿಟ್ಟಾಗ ಮಕ್ಕಳೊಂದಿಗೆ ನಾನೂ ಹೊರನಡೆದೆ. ಮಕ್ಕಳ ಬೆನ್ನ ಮೇಲಿನ ಪುಸ್ತಕ ಜೊತೆಗೆ ನೀರಿನ ಬಾಟಲ್, ಛತ್ರಿಯ ಹೊರೆ ಕಂಡು ಅಯ್ಯೋ ಎನಿಸಿತು. ನನ್ನ ಅಕ್ಕ-ಪಕ್ಕ ನಡೆಯುತ್ತಿದ್ದ ಆ ಮಕ್ಕಳು ಮಣ ಭಾರದ ಬ್ಯಾಗ್ ಹೊತ್ತಿದ್ದೂ ಒಬ್ಬರಿಗೊಬ್ಬರು ತಳ್ಳಾಡುತ್ತಾ, ಕೈ-ಕೈ ಹಿಡಿದುಕೊಂಡು, ಕಿಸಿ ಕಿಸಿ ನಗುತ್ತಾ ಯಾವುದೇ ಯೋಚನೆ ಇಲ್ಲದೆ ತಮ್ಮದೇ ಪ್ರಪಂಚದಲಿ ನಡೆಯುತ್ತಿದ್ದರು. ಈ ಮಕ್ಕಳ ಬಾಲ್ಯದಾಟವನು ನೋಡುತ್ತಾ ನಾನೂ ಆ ಮೆರವಣಿಗೆಯಲಿ ಜೊತೆಗೂಡಿದೆ. ಎಂಥಾ ಮುದವಿತ್ತಾ...

ಇಷ್ಟರಲ್ಲಿ ಸುಯ್ಯನೆ ಓಡಿ ಬಂದ ಡುಮ್ಮಕಿದ್ದ ಹುಡುಗಿಯೊಬ್ಬಳು ನನ್ನ ಪಕ್ಕ ಬರುತ್ತಿದ್ದ ಹುಡುಗಿಯತ್ತ ಕೈ ತೋರಿ ಡೊಂಟ್, ಟಾಕ್ ಟು ಮಿ, ಯೂ ಶಿಟ್ ಎಂದೆನ್ನುತ್ತಾ ಮೂತಿಸೊಟ್ಟ ಮಾಡಿ, ಭುಜ ಕುಣಿಸಿ ಓಡಿದಳು. ನನ್ನ ಪಕ್ಕದ ಹುಡುಗಿಗೆ ಏನೆಂದು ತಿಳಿಯುವಷ್ಟರಲ್ಲಿ ಇದು ನಡೆದು ಹೋಗಿತ್ತು. ಇವಳೂ ತಕ್ಷಣ ತನ್ನ ಮುಂದಿದ್ದ ಎಲ್ಲರನ್ನೊ ದಬ್ಬಿ, ಬೈದ ಹುಡುಗಿಯತ್ತ ಓಡಿ ಯೂ ಡರ್ಟಿ ಪಿಗ್, ಐ ವಿಲ್ ಸೀ ಯೂ ಟುಮಾರೋ ಎಂದು ಚೀನಿಯಲಿ ಪುಕನಿ ಹೌ(ಪ್ರಾಯಶಃ ಟೂ) ಎಂದು ಕೂಗಿ ಮೊದಲು ಅಂದಿದ್ದ ಹುಡುಗಿಯತ್ತ ಮೂತಿ ಸೊಟ್ಟ ಮಾಡಿ ಓಡಿದಳು. ಸಿಂಗಪುರದಲ್ಲಿ ಹೀಗೆ ಹಾದಿಯಲಿ ಮಕ್ಕಳ ಜಗಳ ಹತ್ತು ವರುಷದಲಿ ನಾ ಮೊದಲ ಬಾರಿ ಕಂಡದ್ದು. ನಗು ಬಂದಿತು. ನಾನಾಗಿದ್ರೆ ಖಂಡಿತ ಒಂದೆರಡು ತದಕ್ತಾ ಇದ್ದೆ ಆ ಡುಮ್ಮಿಗೆ!

ಪ್ರೇಮಮಯಿ ಚಿತ್ರದ ಟೂ...ಟೂ...ಬೇಡಪ್ಪ, ಓಡಿಬಂದು ನನ್ನ ಸಂಗ ಕಟ್ಟಪ್ಪ....ನೆನಪಾಯಿತು. ಬಾಲ್ಯಕ್ಕೆ ಗಿರಕಿ ಹೊಡೆದೆ. ಏನ್ ಮಾಡ್ತೀರಾ ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಎಂದಂತೆ ನೆನಪುಗಳ ಪಿಶಾಚಿ ಮನದ ಗವಾಕ್ಷಿಯಲಿ ಬಂದು ಕಾಡ್ತಾನೇ ಇರುತ್ತೆ.

"ಆನೆ ಮೇಲೆ-ಒಂಟೆ ಮೇಲೆ, ಕುದುರೆ ಮೇಲೆ, ಕತ್ತೆ ಮೇಲೆ.... ನಿನ್ನ ಮೇಲೆ, ನನ್ನ ಮೇಲೆ ಟೂ..ಟೂ" ಅಥವಾ "ಅಟ್ಟಂ ಬಟ್ಟಂ ನಾಗರ ಬಟ್ಟಂ ನಿನ್ ಕೈಗೆ ಟೋಪಿ, ನನ್ ಕೈಗೆ ಪೀಪೀ ಟೂ ಟೂ... ಎಂದು ಬೆರಳನ್ನು ಮಡಿಸಿ ಕೆನ್ನೆಗೆ ತಗುಲಿಸಿಕೊಂಡು ಹೇಳುತ್ತಿದ್ದ ಮಾತುಗಳು. ಆ ಮುನಿಸು ಚಣ ಮಾತ್ರ. ಹಾವೋ, ಮಾವೋ, ಓತಿಕೇತ, ನೆಲ್ಲಿ-ಹುಣಿಸೆಗಳ ಕಂಡಾಗ ಬೆಸ್ಟ್ ಫ್ರೆಂಡ್ಸ್. ಟೂ ಬಿಟ್ಟವರ ಬಳಿ ತಿನಿಸಿದ್ದರಂತೂ ಏನ್ ಬಟರಿಂಗ್, ಬಟ್ಲರಿಂಗ್.

ಟೂ ಇದ್ಯಲ್ಲಾ ಅದು ಆತ್ಮೀಯರಿಗೆ ಮಾತ್ರ ಮೀಸಲು. ಅಣ್ಣ-ಅಕ್ಕ, ತಂಗಿ-ತಮ್ಮ, ಗಳಸ್ಯ-ಕಂಠಸ್ಯದ ಸ್ನೇಹಿತರ ಬಳಿ ಮಾತ್ರ. ನೆನಪಿಸಿಕೊಳ್ಳಿ- "ಅಟ್ಟೆ, ಮಟ್ಟೆ, ಕೋಳಿ ಮೊಟ್ಟೇ" ಎಂದು ತಲೆಯ ಮೇಲೆ ತದಕಿ, ಸ್ನಾನದ ಮನೆಯಲ್ಲಿ ಕಣ್ಣಿಗೆ ಸೋಪು ಹಾಕಿದ್ದು, ಒಂದೇ ತಟ್ಟೆಯಲಿ ತಿಂದದ್ದು. ಒಂಥರಾ ಕಾಯಿ (ಗಜಗ?) ಸಿಗೋದು, ಅದನ್ನು ಉಜ್ಜಿ ತೊಡೆ ಮೇಲೆ ಚುರ್ ಅನಿಸೋದು. ಬಾಲ್ಯದಲಿ ಟೂ ಬಿಡೋದು ಮತ್ತೆ ಒಂದಾಗುವುದು ಸ್ನೇಹ, ಬಾಂಧವ್ಯ ಬಿಗಿಯಾಗುವುದರ ಸಂಕೇತ.

ಬಾಲ್ಯದಲಿ ಹುಟ್ಟುವ ಈ ಟೂ...ಟೂ... ಬಾಳಿನುದ್ದಕ್ಕೂ ಇರುತ್ತೆ ನೋಡಿ! ಮದ್ವೆ ಆದ ಹೊಸದರಲ್ಲಿ ಟೂ ಬಿಟ್ಟರೆ ರಮಿಸುವ ಪತಿರಾಯ ವರುಷಗಳು ಕಳೆದಂತೆ ಟೂ ಎಂದರೆ ಸದ್ಯ, ಕಿಟಿ ಪಿಟಿ ಇಲ್ಲದೆ ನೆಮ್ಮದಿ ಎನ್ನುತ್ತಾನೆ. ದಾಂಪತ್ಯವೇ ಹಾಗೆ "ಕಂಡ್ರೆ ಕಣ್ಣುರಿ-ಕಾಣದಿದ್ರೆ ಹೊಟ್ಟುರಿ". ಸಣ್ಣ ಸಣ್ಣ ವಿಷಯಕ್ಕೂ ನಿತ್ಯ ಟೂ...ಟೂ. ವಿಪರೀತಕ್ಕೆ ಇಟ್ಟುಕೊಂಡರೆ ಅದು ಪರ್ಮನೆಂಟ್ ಟೂ...ಟೂ ಕೂಡ ಆದೀತು. ಟೂ ಬಿಡೋದ್ರಲ್ಲಿ ಗಂಡಸ್ರೂ ಕಮ್ಮಿ ಏನಿಲ್ಲ. ಬಿಸಿನೆಸ್, ಆಸ್ತಿ ಪಾಲುದಾರಿಕೆ, ನೆಂಟಸ್ತನ ಹಲವು ವಿಷಯಗಳಲ್ಲಿ ಒಡಹುಟ್ಟಿದವರು, ಅದೇಕೆ ಕುಟುಂಬಗಳೇ ಆಜನ್ಮ ಪರ್ಯಂತ ಟೂ ಬಿಟ್ಟು ಆ ಟೂ ವಂಶಪಾರಂಪರ್ಯವಾಗಿ ಬೆಳೆಯುವಂತೆ ಮಾಡಿದ್ದಾರೆ ಎಂಬುದೂ ಕೇಳಿದ್ದೇವೆ.

ಆ ಸಿನಿಮಾದವರಿಗಂತೂ ನಿತ್ಯ ಟೂ. ಈ ದಿನದ ಬೆಳಿಗ್ಗೆ ಸುದ್ದಿ ಇವ್ಳು ಅವ್ನ ಜೊತೆ ಟೂ-ಅವ್ನು ಇವ್ಳ ಜೊತೆ ಟೂ. ಒಂದೆರಡು ಗಂಟೆಗಳಲ್ಲೇ ಇದೀಗ ಇಬ್ಬರೂ ಟೂ ಇನ್ ಒನ್ ಎಂಬ ಸುದ್ದಿ. ಅದು ಸತ್ಯವೋ-ಸುಳ್ಳೋ.. ಓದುಗರಿಗೆ ಮಾತ್ರ ಟೂ ಗಾಸಿಪ್. ಕೆಲವೊಮ್ಮೆ ಟೂ ಬಿಡುವುದಕ್ಕೆ ಹೆಚ್ಚು ಕಾರಣಗಳೇನೂ ಬೇಕಾಗೋಲ್ಲ. ಸಣ್ಣ ಟೀಕೆ, ತಪ್ಪು ಗ್ರಹಿಕೆ, ಚಿಕ್ಕ ಜಗಳ, ಭಿನ್ನಾಭಿಪ್ರಾಯಗಳು ಇಬ್ಬರ ಮಧ್ಯೆ ಮಾತಿನ ಸೇತುವೆ ಕುಸಿಯುವಂತೆ ಮಾಡಬಹುದು. ಕೆಲವೊಮ್ಮೆ ಸಮೀಪರು, ಆತ್ಮೀಯರು "ಮಾತು ಬಿಟ್ಟರೆ ಬಿಡು, ನನಗೇನು ಎಂಬ ದೊಡ್ಡಸ್ತಿಕೆಯೋ", ಬರ್ತಾರೆ ಬಿಡು ಎಂಬ ಭಾವವೋ ಮೂಡಿದಲಿ ಈರ್ವರೂ ಒಳಗೊಳಗೆ ಸಂಕಟಪಡುವ ಸ್ಥಿತಿ ಎದುರಾಗುತ್ತದೆ.

ಬಾಲ್ಯದಲಿ ಮನಸ್ತಾಪ ಬಂದಾಗ ಮಾತು ಬಿಟ್ಟು ಮತ್ತೆ ಮಾತನ್ನು ಆರಂಭಿಸುವ ಪ್ರವೃತ್ತಿ ಬಾಲ್ಯಕ್ಕೇ ಸೀಮಿತ. ಮುಂದೆ ದೊಡ್ಡವರಾದಂತೆ ಈ ಟೂ ಇದೊಂದು ತರಹ ಅಹಿಂಸಾತ್ಮಕ ಅಸ್ತ್ರ. ಮಾನಸಿಕ ಹಿಂಸೆ ಹಾಗೂ ಶಿಕ್ಷೆ-ಬಿಸಿ ತುಪ್ಪ ಉಗುಳುವ ಹಾಗಿಲ್ಲ-ನುಂಗುವ ಹಾಗಿಲ್ಲ. ಅಪರೂಪವಾಗಿ ಭೇಟಿ ಆಗುವವರು ಟೂ ಬಿಟ್ಟರೆ ಅಷ್ಟೋಂದು ಪರಿಣಾಮಕಾರಿ ಆಗುವುದಿಲ್ಲ. ಆದರೆ ಒಂದೇ ಮನೆಯಲ್ಲಿದ್ದು ಟೂ ಬಿಟ್ಟವರು ಸುಮ್ಮನಿದ್ದರೆ ಮಿಕ್ಕವರ ಪರಿಸ್ಥಿತಿ ಗೋವಿಂದಾ..ಗೋವಿಂದ ಅಲ್ವಾ!

English summary
It is always fun to see children playing together and do all kinds of mischiefs. Vani Ramdas from Singapore goes down the memory lane and recalls how beautiful the life is.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X