• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಾಸ್ ಏಂಜಲಿಸ್‌ನಲ್ಲಿ ಎಚ್ಚೆಸ್ವಿಯವರ ಚಿತ್ರಪಟ ನಾಟಕ

By * ಆಹಿತಾನಲ, ದ. ಕ್ಯಾಲಿಫೋರ್ನಿಯ
|
Dr. HS Venketesh Murthy
ರಾಮಾಯಣ ಮತ್ತು ಮಹಾಭಾರತದಂಥ ಪುರಾಣ ಕೃತಿಗಳು ನಮ್ಮ ಸಂಸ್ಕೃತಿಗೆ ದೀಪಕಂಬದಂತಿದ್ದು, ಸಮಕಾಲೀನ ಬದುಕಿನೊಡನೆ ಹಾಸುಹೊಕ್ಕಾಗಿ ಬೆರೆತುಹೋಗಿದೆ. ಅವುಗಳಲ್ಲಿ ಬರುವ, ಸೀತೆ, ರಾಮ, ಕೃಷ್ಣ, ಮೊದಲಾದ ಪಾತ್ರಗಳು ನಮ್ಮ ದೈನಂದಿನ ಆಚಾರ, ನಡವಳಿಕೆಗಳಲ್ಲಿ ಮರೆಯಲಾರದಷ್ಟು ಪರಿಣಾಮವನ್ನುಂಟುಮಾಡಿರುವುದಲ್ಲದೆ, ಪುರಾಣವನ್ನೂ, ಅವುಗಳಲ್ಲಿ ವರ್ಣಿತವಾಗಿರುವ ಹಲವು ವ್ಯಕ್ತಿತ್ವಗಳನ್ನೂ ಜೀವಂತವಾಗಿರಿಸಿದೆ.

ಇಂಥ ಪುರಾಣ ಕತೆಗಳು ಜಾನಪದ ರೂಪತಳೆದು, ಬೇರೆ-ಬೇರೆ ಉಪಕತೆಗಳಾಗಿ, ಅವು ಪುರಾಣ ಕತೆಗಳಷ್ಟೇ ಪುರಾತನವೆಂಬಷ್ಟು ನಂಬಿಕೆಯನ್ನು ನಮ್ಮ ಕಲ್ಪನೆಯಲ್ಲಿ ಮೂಡಿಸಿದೆ. ರಾಮಾಯಣದ ಮೇಲಿನ, ಹೆಳವನಕಟ್ಟೆ ಗಿರಿಯಮ್ಮನ ಕಾವ್ಯ ಇಂತಹ ಜಾನಪದ ರೂಪಕಕ್ಕೆ ಉದಾಹರಣೆಯಾಗಿ ನಿಂತಿದೆ. ಈ ಜಾನಪದ ಕಾವ್ಯವನ್ನು ಆಧಾರವಾಗಿಟ್ಟುಕೊಂಡು, ಜನಪ್ರಿಯ ಕವಿಗಳೂ, ನಾಟಕಗಾರರೂ ಆದ, ಎಚ್.ಎಸ್.ವೆಂಕಟೇಶಮೂರ್ತಿಯವರು (ಎಚ್ಚೆಸ್ವಿ), ಚಿತ್ರಪಟ' ಎಂಬ ಒಂದು ಅಪೂರ್ವ ಗೀತ ನಾಟಕವನ್ನು ರಚಿಸಿದ್ದಾರೆ. ಎಚ್ಚೆಸ್ವಿ ಅವರೇ ಹೇಳಿದಂತೆ, ರಾಮಾಯಣವನ್ನು ಒಂದು ಭಾಷೆಯೆಂತಲೇ ಪರಿಗಣಿಸಬಹುದು. ಭಾರತದ ಬೇರೆ-ಬೇರೆ ಜನ ಸಮುದಾಯಗಳು, ತಮ್ಮ ಕಾಲದಲ್ಲಿ ಬಳಕೆಯಲ್ಲಿರುವ ಭಾಷೆಗಳ ಮೂಲಕ, ರಾಮಾಯಣದಂಥ ಪುರಾಣ ಕತೆಗಳನ್ನು ತಮ್ಮ ಸುತ್ತಲಿನ ಪರಿಸರ ಮತ್ತು ಸನ್ನಿವೇಶಗಳಿಗೆ ಹೊಂದಿಸಿಕೊಂಡು ಮಾಡಿದ ವ್ಯಾಖ್ಯಾನಗಳು, ಮೂಲ ಕತೆಗಳಿಗೆ ಹೊಸ ಭಾಷೆ, ಹೊಸ ಆಯಮವನ್ನು ನೀಡಲು ಕಾರಣವಾಗಿದೆ. ಸಾಮಾನ್ಯರ ತಿಳಿವಳಿಕೆಯಲ್ಲಿ ಕ್ರೂರನೆಂದೆನಿಸಿಕೊಂಡ ರಾವಣನನ್ನು, ಒಬ್ಬ ಉದಾತ್ತ, ನಿಷ್ಠಾವಂತ ಸಭ್ಯನಂತೆ ಚಿತ್ರಿಸಿದ ಇಂಥ ನಿದರ್ಶನಗಳನ್ನು ನಮ್ಮ ಸಾಹಿತ್ಯದಲ್ಲಿ ಕಾಣಬಹುದು.

ರಾಮಾಯಣದ ಇಂಥ ಒಂದು ಜನಪದ ರೂಪದ ಕಥನ ಚಿತ್ರಪಟ.' ಇಲ್ಲಿ ಎಲ್ಲರಿಗೂ ತಿಳಿದಿರುವ ಶೂರ್ಪನಖಿಯ ಮೂಲ ಕತೆಯ ಹಂದರವಿದೆ. ರಾವಣನ ಸಂಹಾರವಾದ ಮೇಲೆ, ರಾಮಪಟ್ಟಾಭಿಷೇಕದ ನಂತರ, ರಾಮ-ಸೀತೆಯರ ಮೇಲೆ ಸೇಡು ತೀರಿಸಿಕೊಳ್ಳುವ ಪ್ರಸಂಗವೇ ಚಿತ್ರಪಟ'ದ ಕಥಾವಸ್ತು. ಶೂರ್ಪನಖಿ ಮಾಯಾವಿಯಾಗಿ ಬಂದು, ಸೀತೆಯನ್ನು ಮೋಸಗೊಳಿಸಿದ ಇಂಥ ಪ್ರಸಂಗಗಳನ್ನು ನಮ್ಮ ಹಳ್ಳಿಗಳಲ್ಲಿ ಪ್ರದರ್ಶಿಸುತ್ತಿರುವ ಯಕ್ಷಗಾನಗಳಲ್ಲಿಯೂ ಗಮನಿಸಬಹುದು. ಪ್ರಸ್ತುತ ನಾಟಕದಲ್ಲಿ, ಶೂರ್ಪನಖಿ ಕೊರವಂಜಿಯಾಗಿ ಬರುತ್ತಾಳೆ. ಆದರೆ, ಇವಳ ಪಾತ್ರಕ್ಕಿಂತ ಮುಖ್ಯವಾದುದು ಸೀತೆಯದಾಗಿದ್ದು, ಇಡೀ ಘಟನೆಯನ್ನು ಸೀತೆಯ ದೃಷ್ಟಿಕೋನದಿಂದ ನೋಡಿರುವುದು ಈ ಗೀತ ನಾಟಕದ ವೈಶಿಷ್ಟ್ಯ. ಪರಿಣಾಮವಾಗಿ, ನಾಟಕ ಅತ್ಯಂತ ಕುತೂಹಲಕಾರಿಯಾಗಿ ಅಂತ್ಯವಾಗಿ, ಹೀಗೂ ನಡೆಯಲು ಸಾಧ್ಯ!' ಎಂಬ ಕಲ್ಪನೆಯನ್ನು ಪ್ರೇಕ್ಷಕರಲ್ಲಿ ಮೂಡಿಸುತ್ತದೆ. ಕಥನದ ಎಲ್ಲ ಪಾತ್ರಗಳು ರಾಮಾಯಣದ್ದೇ ಆದರೂ, ಅವು ದೈವಾಂಶ ಸಂಭೂತರಾಗದೇ, ಮಾನವ ಸ್ತರದಲ್ಲಿ ವ್ಯವಹರಿಸಿ, ಜನಸಾಮಾನ್ಯರ ಭಾವನೆಗಳನ್ನು ಸ್ಪಂದಿಸುತ್ತವೆ. ಮೂಲ ಕತೆ ಪೌರಾಣಿಕ - ಆದರೆ, ಉಂಟಾಗುವ ಸಂವೇದನೆ ಆಧುನಿಕ. ರೂಢಿಗತವಾದ ಪುರಾಣದ ಅರ್ಥವನ್ನೂ ಮೀರಿದ ಸಂದೇಶ ಈ ನಾಟಕದಲ್ಲಿ ಅಡಕವಾಗಿದೆ.

ವಿಶಿಷ್ಟ ಗ್ರಾಮ್ಯ ಭಾಷೆ : ಈ ಗೀತನಾಟಕದ ಹಲವು ವೈಶಿಷ್ಟ್ಯಗಳಲ್ಲಿ, ಅಲ್ಲಿ ಬಳಸಿರುವ ಗ್ರಾಮ್ಯ ಭಾಷೆ ಒಂದು. ದಾವಣಗೆರೆ ಪ್ರದೇಶದ ಆಡುಮಾತುಗಳನ್ನು ಬಳಸಿ, ಎಚ್ಚೆಸ್ವಿ ಅವರು, ನಾಟಕಕ್ಕೆ ಜಾನಪದ ರೂಪವನ್ನು ನೀಡಲು ಯಶಸ್ವಿಯಾಗಿದ್ದಾರೆ. ಇದಕ್ಕೆ ಸಮರ್ಥನೆಯೆಂಬಂತೆ, ನಾಟಕವನ್ನು ಪ್ರಸ್ತುತಪಡಿಸುವವರು ಭೂತೆಯರೆಂದು ಕರೆಯ್ಯಿಸಿಕೊಳ್ಳುವ ಒಂದು ಗ್ರಾಮೀಣ ನಾಟಕ ತಂಡ. ಪುರಾಣದ ಕತೆಯನ್ನು ಹಾಡು, ನೃತ್ಯಗಳ ಮೂಲಕ ಪ್ರಸ್ತುತಪಡಿಸುವುದೇ ಇವರ ಪಾತ್ರ. ಶೂರ್ಪನಖಿ- ಸೀತೆ - ರಾಮ - ರಾವಣರ ಸಂಬಂಧವನ್ನು ವಿಶಿಷ್ಟ ರೀತಿಯಲ್ಲಿ ಸಾದರಪಡಿಸಲು ಚಿತ್ರಪಟ ಅನುಕೂಲವಾಗಿದೆ. ಭೂತೆಯರ ಸಂಭಾಷಣೆಯಲ್ಲಿ ಅಲ್ಲಲ್ಲಿ ಹಳ್ಳಿಭಾಷೆಯ ನವಿರು ಹಾಸ್ಯ ಮಿಂಚಿ ನಲಿಯುತ್ತದೆ. ಭಾಗಶಃ ನಿರೂಪಕರಾಗಿ, ಭಾಗಶಃ ನಾಟಕದ ಪಾತ್ರಧಾರಿಗಳಾಗಿಯೂ ಅಭಿನಯಿಸುವ ಈ ಭೂತೆಯರು, ಪ್ರಸಂಗದ ಹಿನ್ನೆಲೆಯನ್ನು ಸಮರ್ಥವಾಗಿ ಪ್ರಸ್ತುತಪಡಿಸುವ ಈ ಕಥನದ ತಂತ್ರ ವಿಶೇಷವಾದುದು.

ಬಿ. ಜಯಶ್ರೀಯವರು ಈ ಹಿಂದೆ ಈ ಗೀತ ನಾಟಕವನ್ನು ಕರ್ನಾಟಕದಲ್ಲಿ ರಂಗಭೂಮಿಗೆ ತಂದಿದ್ದರು. ಇದೀಗ ನಾಟಕ ಮತ್ತು ಸಂಗೀತಗಳಲ್ಲಿ ನುರಿತ, ನಮ್ಮವರೇ ಆದ, ಚಂದ್ರ ಐತಾಳರ ಸಮರ್ಥ ನಿರ್ದೇಶನದಲ್ಲಿ ಅಮೆರಿಕದಲ್ಲಿ ಮೊಟ್ಟಮೊದಲಿಗೆ ನವೆಂಬರ 20, 2010, ಶನಿವಾರ ರಂದು, ಈ ಗೀತ ನಾಟಕದ ರಂಗಪ್ರದರ್ಶನವಾಗಲಿದೆ. ಲಾಸ್ ಏಂಜಲಿಸ್ ವಲಯದಲ್ಲಿ ಇತ್ತೀಚೆಗೆ ಚಂದ್ರ ಐತಾಳರ ಮುಂದಾಳತ್ವದಲ್ಲಿ ಸ್ಥಾಪಿತವಾಗಿರುವ ಅಸೀಮ' ತಂಡದವರು, ದಕ್ಷಿಣ ಕ್ಯಾಲಿಫೋರ್ನಿಯದ, ಕರ್ನಾಟಕ ಸಾಂಸ್ಕೃತಿಕ ಸಂಘದ (KCA-SC) ಆಶ್ರಯದಲ್ಲಿ, KCA-SC ಸದಸ್ಯರುಗಳೇ ಪಾತ್ರವಹಿಸಿದ ಈ ಗೀತ ನಾಟಕವು ರಂಗಪ್ರದರ್ಶನಕ್ಕಾಗಿ ಸಜ್ಜುಗೊಳ್ಳುತ್ತಿದೆ. ನಾಟಕದಲ್ಲಿ ಬರುವ ಹಾಡುಗಳಿಗೆ ಸುಶ್ರಾವ್ಯ ರಾಗಸಂಯೋಜನೆಯೂ ಐತಾಳರದ್ದೇ ಆಗಿದೆ. ಕರ್ನಾಟಕದ ಜನಪದ ಶೈಲಿಯಲ್ಲದೆ, ರಾಜಸ್ಥಾನ, ಹಿಮಾಚಲ ಪ್ರದೇಶಗಳ ಜನಪದ ಸಂಗೀತಗಳ ಧಾಟಿ - ಇದಕ್ಕೂ ಮೀರಿ, ಪೂರ್ವ ಯುರೋಪ್ ಜನಪದ ಸ್ವರಗಳನ್ನೂ ಈ ನಾಟಕದಲ್ಲಿ ಅಳವಡಿಸಿಕೊಂಡಿದ್ದಾರೆ ಐತಾಳರು.

ಗ್ರೀಕ್ ನಾಟಕಗಳ ತಂತ್ರಗಾರಿಕೆಯನ್ನು ಬಳಸಿ, ಭೂತೆಯರ ಪಾತ್ರಗಳನ್ನೂ, ಚಿತ್ರಪಟದಿಂದ ರಾವಣ ಜೀವಂತವಾಗಿ ಮೂಡಿ ಬರುವ ಸನ್ನಿವೇಶವನ್ನೂ ಅಪೂರ್ವವಾದ ರೀತಿಯಲ್ಲಿ ರೂಪಿಸಿದ ಈ ನಾಟಕ ಒಂದು ಹೊಸ ಆಯಾಮವನ್ನೇ ತಳೆದಿದೆ. ಗ್ರೀಕ್ ನಾಟಕಗಳಲ್ಲಿ ಸಾಮಾನ್ಯವಾದ ಸಂಗೀತದ ಹಿಮ್ಮೇಳ, ನಟರ-ನಿರೂಪಕರ ಮುಮ್ಮೇಳ - ಹಲವಾರು ಬಾರಿ ಪ್ರೇಕ್ಷಕರೊಡನೆ ನೇರ ಸಂಭಾಷಣೆ, ಇವೇ ಮೊದಲಾದ ವಿಧಾನಗಳನ್ನು ನಿರ್ದೇಶಕರು ಬಳಸಿಕೊಂಡಿದ್ದಾರೆ. ಪರಂಪರೆಯ ರಾವಣ ಮತ್ತು ಶೂರ್ಪನಖಿಯರನ್ನು ಯಕ್ಷಗಾನ ಶೈಲಿಯಲ್ಲಿ ಪ್ರಸ್ತುತಪಡಿಸಿ, ಕ್ಷಣಕಾಲ ಪ್ರೇಕ್ಷಕರನ್ನು ಗತಕಾಲಕ್ಕೆ ಕೊಂಡೊಯ್ಯುವ ಪ್ರಯತ್ನವನ್ನೂ ಈ ಗೀತ ನಾಟಕದಲ್ಲಿ ಕಾಣಬಹುದು. ಇದರಿಂದಾಗಿ ನಾಟಕದ ಸಮಕಾಲೀನತೆಗೆ ಧಕ್ಕೆ ಬರುವುದಿಲ್ಲ. ಇಲ್ಲಿ ಬಳಸಿರುವ ಇಂಥ ಹೊಸ ಪ್ರಯೋಗಗಳು ಪ್ರೇಕ್ಷರ ಮನ ಸೆಳೆಯುವುದರಲ್ಲಿ ಸಂದೇಹವಿಲ್ಲ.

ನಾಟಕದಿಂದ ಬರುವ ಉತ್ಪತ್ತಿಯನ್ನು KCA-Sc building fund ಮತ್ತು ಕಲ್ಕೇರಿ ಸಂಗೀತ ವಿದ್ಯಾಲಯ, ಧಾರವಾಡ - ಈ ಎರಡು ಸಂಸ್ಥೆಗಳಿಗೆ ಹಂಚಲಾಗುವುದು.

ಕಲ್ಕೇರಿ ಸಂಗೀತ ವಿದ್ಯಾಲಯ : ಧಾರವಾಡದ ಸಮೀಪದ ಕಲ್ಕೇರಿ ಗ್ರಾಮದಲ್ಲಿ ಹಿಂದುಳಿದ, ದಲಿತ ಮತ್ತು ಬುಡಕಟ್ಟು ಜನಾಂಗಗಳ ಮಕ್ಕಳ ಶೈಕ್ಷಣಿಕ ಮತ್ತು ಸಂಗೀತ ಅಭ್ಯಾಸಗಳಿಗಾಗಿ ಸ್ಥಾಪಿತವಾದ ಒಂದು ಆದರ್ಶ ವಿದ್ಯಾ ಸಂಸ್ಥೆ. ಧಾರವಾಡ ಸುತ್ತಲಿನ ಹಲವು ಸಂಗೀತತಜ್ಞರು ಮತ್ತು ಸ್ವಯಂಪ್ರೇರಿತ ಶಿಕ್ಷಕರು, ವೇತನ ಪಡೆಯದೆ, ನಿಸ್ವಾರ್ಥತೆಯಿಂದ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಆಧುನಿಕ ಸೌಲಭ್ಯಗಳಿಲ್ಲದ, ಹುಲ್ಲು ಛಾವಣಿಯಿಂದ ರಚಿಸಲ್ಪಟ್ಟ ಗುಡಿಸಲು, ಹಗಲಿನಲ್ಲಿ ಸುಮಾರು ಐವತ್ತು ಮಂದಿ ಬಡ ಮಕ್ಕಳ ತರಗತಿಯೂ ಹೌದು, ರಾತ್ರಿಕಾಲ ಅವರ ವಸತಿಗ್ರಹವೂ ಹೌದು. ಈ ಬಡ ಮಕ್ಕಳ ಜೀವನ ಮತ್ತು ಶೈಕ್ಷಣಿಕ ಮಟ್ಟಗಳನ್ನು ಉತ್ತಮಗೊಳಿಸಲು ಪ್ರಯತ್ನಗಳು ನಡೆಯುತ್ತಲೇ ಇದ್ದು, ಈ ನಿಧಿ ಸಂಗ್ರಹ ಕಾರ್ಯಕ್ರಮ ಅಂಥ ಪ್ರಯತ್ನಗಳಲ್ಲಿ ಒಂದು.

ನಾಟಕ ಪ್ರದರ್ಶನದ ವಿವರಗಳು:

ರಚನೆ : ಡಾ. ಎಚ್.ಎಸ್. ವೆಂಕಟೇಶಮೂರ್ತಿ

ಸಂಗೀತ ಮತ್ತು ನಿರ್ದೇಶನ : ಡಾ. ಚಂದ್ರ ಐತಾಳ

ಪ್ರದರ್ಶನ ದಿನಾಂಕ : ಶನಿವಾರ, ನವೆಂಬರ 20, 2010

ಸಮಯ : ಸಂಜೆ 6.30

ಸ್ಥಳ : Baldwin Park Performing Arts CeNter, 4640, Maine Avenue, Baldwin Park, CA 91706

ಪ್ರವೇಶ ಧನ : 15 ಡಾಲರುಗಳು; 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ 10 ಡಾಲರುಗಳು

ಕಾರ್ಯಕ್ರಮ ಮುಗಿದ ಮೇಲೆ ಲಘು ಭೋಜನದ ವ್ಯವಸ್ಥೆ ಇದೆ. ಈ ಕಾರ್ಯಕ್ರಮವನ್ನು ಪ್ರಾಯೋಜಿಸಲು ಉದಾರೀ ದಾನಿಗಳನ್ನು ನಮ್ರತೆಯಿಂದ ಕೋರುತ್ತಿದ್ದೇವೆ. ಪ್ರಾಯೋಜಿಕ ವಿವರಗಳು ಹೀಗಿವೆ:

1. Platinum Sponsors: $ 500 (+ 4 Tickets for best Seats)

2. Gold Sposors: $ 250 (+ 4 complimentary tickets)

3. Silver Sponsors : $ 100 ( 2 Complimentary Tickets)

ಹೆಚ್ಚಿನ ವಿವರಗಳಿಗೆ:

1. ನಾಗ ಐತಾಳ : (626) 574-0047

2. ರಮೇಶ ಗೌಡ : (909) 860-2076

3. ಕವಿತಾ ಕೊಟ್ರಪ್ಪ : (909) 392-1454

4. ಶ್ರೀನಿವಾಸ ಭಟ್ಟ : (909) 623-3185 (myplot@gmail.com)

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more