ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀಗಿದ್ದರು ನಮ್ಮ ಎಚ್ಚೆನ್ ಮೇಷ್ಟ್ರು

By * ಶೇಷಾದ್ರಿವಾಸು
|
Google Oneindia Kannada News

HN portrait by Sheshadrivasu
ಆಗ ನಾನು ನ್ಯಾಷನಲ್ ಹೈಸ್ಕೂಲಿನಲ್ಲಿ ಓದುತ್ತಿದ್ದೆ. ಒಂದು ದಿನ ಪ್ರಜಾವಾಣಿಯಲ್ಲಿ ಎಚ್ಚೆನ್ ಅವರ ಫೋಟೋ ಜೊತೆಗೆ ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದಿರುವ ಸುದ್ದಿ ಹಾಕಿದ್ದರು. ಮೂಢ ನಂಬಿಕೆಗಳ ವಿರುದ್ಧ, ವೈಜ್ಞಾನಿಕ ಮನೋಭಾವದ ಬಗ್ಗೆ ಪತ್ರಿಕೆಗಳಲ್ಲಿ ಬರುತ್ತಿದ್ದ ಅವರ ಲೇಖನಗಳನ್ನು ಕುತೂಹಲದಿಂದ ಓದುತ್ತಿದ್ದೆ. ನಾನು ಸ್ಕೂಲಿನಲ್ಲಿ ದಿನಾಲೂ ನೋಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಪ್ರಶಸ್ತಿ ಬಂದಿರುವ ಸುದ್ದಿ ಓದಿ ಸಂತೋಷವಾಗಿತ್ತು. ಅದೇ ಸಂಭ್ರಮದಲ್ಲಿ ಅವರ ಚಿತ್ರವನ್ನು ಆಹ್ವಾನಪತ್ರಿಕೆಯೊಂದರ ಹಿಂಭಾಗದಲ್ಲಿ ಬರೆದಿಟ್ಟಿದ್ದೆ. ಒಂದು ದಿನ ಮಧ್ಯಾನ್ಹದ ವಿರಾಮ ಸಮಯದಲ್ಲಿ ನಮ್ಮ ಕ್ಲಾಸಿನ ಮುಂದೆ ಓಡಾಡುತ್ತಿದ್ದ ಎಚ್ಚೆನ್ ಗೆ ಆ ಚಿತ್ರವನ್ನು ತೋರಿಸಿದೆ. ಅವರು ಖುಷಿಯಿಂದ “ಬಹಳ ಚೆನ್ನಾಗಿ ಚಿತ್ರ ಬರೆದಿದ್ದೀಯಪ್ಪಾ" ಅಂತ ಹೇಳಿದರು. ಯಾವ ಕ್ಲಾಸಿನಲ್ಲಿ ಓದುತ್ತಿದ್ದಿಯಾ ಅಂತ ವಿಚಾರಿಸಿದರು. ಕೊನೆಯಲ್ಲಿ ಅವರನ್ನು ಚಿತ್ರದ ಮೇಲೆ ಸಹಿ ಹಾಕಲು ಕೇಳಿಕೊಂಡಾಗ ಸೊಗಸಾಗಿ ಕನ್ನಡದಲ್ಲೇ ಸಹಿ ಹಾಕಿದರು.

ನಲವತ್ತರ ದಶಕದ ಕೊನೆಯ ಭಾಗದಲ್ಲಿ, ನಮ್ಮ ತಂದೆ ಕೆ.ಟಿ. ಚಂದ್ರಶೇಖರನ್ ನ್ಯಾಷನ್ ಹೈಸ್ಕೂಲು, ಕಾಲೇಜುಗಳ ವಿದ್ಯಾರ್ಥಿಯಾಗಿದ್ದರು. ಅವರಿಗೆ ಎಚ್ಚೆನ್ ಭೌತಶಾಸ್ತ್ರದ ಅಧ್ಯಾಪಕರಾಗಿದ್ದರು. ಎಚ್ಚೆನ್ ವಾಸ ನ್ಯಾಷನಲ್ ಕಾಲೇಜಿನ ಹಾಸ್ಟೆಲಿನಲ್ಲಿಯೇ. ವಿದ್ಯಾರ್ಥಿಗಳಿಗೂ ಎಚ್ಚೆನ್ ರಿಗೂ ಮೊದಲಿನಿಂದಲೂ ಅಚ್ಚುಮೆಚ್ಚು. ಅವರ ರೂಮು ಯಾವಾಗಲೂ ವಿದ್ಯಾರ್ಥಿಗಳಿಂದ ತುಂಬಿರುತ್ತಿತ್ತು. ಎಷ್ಟೋ ಸಲ ಮಧ್ಯಾಹ್ನದ ವೇಳೆ ಮಲಗಿಕೊಳ್ಳಲು ಅವರ ರೂಮಿಗೆ ಹೋಗುತ್ತಿದ್ದೆ ಅಂತ ನಮ್ಮ ತಂದೆ ಹೇಳುತ್ತಾರೆ. ಹೈಸ್ಕೂಲಿನಲ್ಲಿ ಓದುತ್ತಿದ್ದ ಸಮಯದಲ್ಲೇ ನಮ್ಮ ತಂದೆ ಕನ್ನಡ ಕಾದಂಬರಿಗಳನ್ನು ಓದುತ್ತಿದ್ದರು. ತಮ್ಮ ಸಂಗ್ರಹದಲ್ಲಿದ್ದ ಅನಕೃ ಪುಸ್ತಕಗಳನ್ನು ಎಚ್ಚೆನ್ ಮತ್ತಿತರ ಅಧ್ಯಾಪಕರುಗಳಿಗೆ ಓದಲು ಕೊಡುತ್ತಿದ್ದರಂತೆ. ಎಚ್ಚೆನ್ ರ ಪುಸ್ತಕಗಳನ್ನೂ ವಿದ್ಯಾರ್ಥಿಗಳು ಕೊಂಡೊಯ್ಯುತ್ತಿದ್ದರು. ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಒಂದು ಘಟನೆ:

ನ್ಯಾಷನಲ್ ಕಾಲೇಜಾದ ಮೇಲೆ ನಮ್ಮ ತಂದೆ ಕೆಲಸಕ್ಕೆ ಸೇರಿದರು. ಕೆಲವು ವರ್ಷಗಳ ನಂತರ ಒಮ್ಮೆ ಕೆಂಪೇಗೌಡ ಸರ್ಕಲ್ಲಿನಲ್ಲಿದ್ದ ಹಳೆ ಪುಸ್ತಕಗಳ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವಾಗ ಸ್ವಾಮಿ ವಿವೇಕಾನಂದರ ಪುಸ್ತಕವೊಂದು ಅವರ ಕಣ್ಣಿಗೆ ಬಿತ್ತು. ಅದನ್ನು ತಿರುವಿಹಾಕುವಾಗ ಮೊದಲ ಪುಟದಲ್ಲಿ ಎಚ್ ನರಸಿಂಹಯ್ಯನವರ ಹಸ್ತಾಕ್ಷರ ಕಾಣಿಸಿತು. ಅರೆರೆ ಇವರ ಪುಸ್ತಕ ಇಲ್ಯಾಕೆ ಬಂತು ಅಂದುಕೊಂಡು ಅದನ್ನು ಕೊಂಡುಕೊಂಡು ನ್ಯಾಷನಲ್ ಕಾಲೇಜಿನ ಎಚ್ಚೆನ್ ರ ರೂಮಿಗೆ ಹೋದರಂತೆ. ಆ ಪುಸ್ತಕವನ್ನು ಕೈಯಲ್ಲಿ ಹಿಡಿದಿದ್ದ ನಮ್ಮ ತಂದೆಯನ್ನು ನೋಡುತ್ತಲೇ ಎಚ್ಚೆನ್ ಸರ್ರನೆ ಸಿಡುಕಿ “ನೀನಾ ಈ ಪುಸ್ತಕವನ್ನು ತಗೊಂಡು ಹೋಗಿದ್ದು? ಇಷ್ಟುದಿನ ಆದಮೇಲೆ ಕೊಡ್ತಾ ಇದೀಯಾ. ಜವಾಬ್ದಾರಿ ಇದೆಯಾ ನಿಂಗೆ..." ಅಂತ ಬಯ್ದರಂತೆ! ಆಗ ನಮ್ಮ ತಂದೆಯೂ ಕೋಪಗೊಂಡು “ಸಾರ್ ನಿಮ್ಮ ಪುಸ್ತಕ ತಗೊಂಡು ಹೋಗಿದ್ದು ನಾನಲ್ಲ. ನಾನು ಇಲ್ಲಿಗೆ ಬಂದೇ ಎಷ್ಟೋ ವರ್ಷಗಳಾಗಿ ಹೋಗಿದೆ" ಅಂತ ಹೇಳಿ ಕೆಂಪೇಗೌಡ ರಸ್ತೆಯಲ್ಲಿ ಹಳೆ ಪುಸ್ತಕಗಳ ಅಂಗಡಿಯಲ್ಲಿ ಆ ಪುಸ್ತಕ ಸಿಕ್ಕ ವಿಚಾರವನ್ನು ತಿಳಿಸಿದಾಗ ಎಚ್ಚೆನ್ ನೊಂದುಕೊಂಡು “ಕೋಪಾ ಮಾಡಿಕೊಳ್ಳಬೇಡಪ್ಪಾ ಚಂದ್ರಶೇಕರಾ... ಈ ಪುಸ್ತಕ ನನಗೆ ತುಂಬಾ ಬೇಕಾಗಿತ್ತು. ಎಷ್ಟೋ ಸಮಯ ಹುಡುಕಿದ್ದೆ. ಸಿಕ್ಕಿರಲಿಲ್ಲ. ಈಗ ನಿನ್ನ ಕೈಯಲ್ಲಿ ನೋಡಿ ನೀನೇ ಅದನ್ನು ಕೊಂಡೊಯ್ದವನು ಅಂದುಕೊಂಡೆ." ಎಂದು ಪುಸ್ತಕದ ಹಣ 2 ರುಪಾಯಿ ಕೊಡಲು ಮುಂದಾದಾಗ, ನಮ್ಮ ತಂದೆ “ಸಾರ್ ನನಗೆ ದುಡ್ಡು ಬೇಡಾ. ನಿಮ್ಮ ಪುಸ್ತಕ ನಿಮಗೆ ತಲುಪಿಸಿದ್ದೇನೆ ಅಷ್ಟೆ" ಅಂದರಂತೆ.

ಎಚ್ಚೆನ್ ಬದುಕಿರುವವರೆಗೂ ನ್ಯಾಷನಲ್ ಕಾಲೇಜಿನ ಹಾಸ್ಟೆಲ್ಲಿನಲ್ಲಿಯೇ ಇದ್ದರು. ಅವರು ಮಲಗುತ್ತಿದ್ದುದು ಒಂದು ಚಾಪೆಯ ಮೇಲೆ. ವಯಸ್ಸಾದ ಮೇಲೆ ಎದ್ದು ಕೂರುವುದಕ್ಕೆ ಅನುಕೂಲವಾಗಲಿ ಅಂತ ಅವರ ಶಿಷ್ಯರೊಬ್ಬರು ಮಂಚವೊಂದನ್ನು ಅವರ ರೂಮಿನಲ್ಲಿ ಹಾಕಿಸಿದರು. ಅಷ್ಟೆ ವ್ಯತ್ಯಾಸ! ಅಂತಹ ಸರಳ ವ್ಯಕ್ತಿಗಳು ಈಗ ಯಾರೂ ಇಲ್ಲ ಅಂತ ನಮ್ಮ ತಂದೆ ಆಗಾಗ ನೆನಪಿಸಿಕೊಳ್ಳುತ್ತಿರುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X