• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೃಂದಾವನದಲಿ ಆಡುವನಾರೆ ಗೋಪಿಜನಪ್ರಿಯ

|

"ಈ ದಿನ ನಮ್ಮ ಬೃಂದಾವನ ಕನ್ನಡ ಕೂಟದಲ್ಲಿ ಒಂದು ವಿಶೇಷ ದಿನ. ಡಿಸೆಂಬರ್ 5 ರಂದು 5 ವರ್ಷಗಳನ್ನು ಪೂರೈಸಿಕೊಂಡ ನಮ್ಮ ನಿಮ್ಮೆಲ್ಲರ ಪುಟ್ಟ ಬೃಂದಾವನಕ್ಕೆ ಈ ದಿನ ಹುಟ್ಟುಹಬ್ಬದ ಸಡಗರದ ಆಚರಣೆ. ಅದರ ಜೊತೆಗೆ ಮಕ್ಕಳ ದಿನಾಚರಣೆ. ಹಾಗಾಗಿ ನಮ್ಮೆಲ್ಲರಿಗೆ ಬೆಳಗಿನಿಂದ ರಾತ್ರಿಯವರೆಗೂ ಸಂಭ್ರಮವೋ ಸಂಭ್ರಮ..ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ತಮ್ಮೆಲ್ಲರಿಗೂ ಆದರದ ಆತ್ಮೀಯ ಸ್ವಾಗತ, ಸುಸ್ವಾಗತ" ಎಂದು ಅಚ್ಚ ಕನ್ನಡದಲ್ಲಿ ಹದಿನಾರರ ಹರೆಯದ ಸ್ಪೂರ್ತಿ ಭಟ್ಟ ಮಧ್ಯಾಹ್ನ 3 ಘಂಟೆಗೆ ಸ್ವಾಗತ ಬಯಸಿದ ಕ್ಷಣದಿಂದ ಒಂದರ ಹಿಂದೆ ಒಂದರಂತೆ ನಡೆದ ಕಾರ್ಯಕ್ರಮಗಳು ಮುಗಿದಾಗ ಮಧ್ಯರಾತ್ರಿ 12 ಆಗಿತ್ತು.

ಅಮೇರಿಕಾದ ಈಶಾನ್ಯ ಪ್ರದೇಶದ ಐದು ಕನ್ನಡ ಕೂಟಗಳಾದ ಮೇರಿಲ್ಯಾಂಡಿನ ಕಾವೇರಿ ಕನ್ನಡ ಕೂಟ, ಡೆಲವೇರಿನ ತ್ರಿವೇಣಿ ಕನ್ನಡ ಕೂಟ, ಪೆನ್ಸಿಲ್ವೇನಿಯದ ಹ್ಯಾರಿಸ್ ಬರ್ಗ್ ಕನ್ನಡ ಕೂಟ, ಕನೆಕ್ಟಿಕಟ್ಟಿನ ಹೊಯ್ಸಳ ಕನ್ನಡ ಕೂಟ ಹಾಗು ಅತಿಥೇಯ ನ್ಯೂಜೆರ್ಸಿಯ ಬೃಂದಾವನ ಕನ್ನಡ ಕೂಟದಿಂದ 18 ಮಕ್ಕಳ ಕಾರ್ಯಕ್ರಮ ಹಾಗು 10 ದೊಡ್ಡವರ ಕಾರ್ಯಕ್ರಮಗಳನ್ನು ಸುಮಾರು 100 ಮಕ್ಕಳು ಹಾಗು 50 ಜನ ದೊಡ್ಡವರು ವೇದಿಕೆ ಮೇಲೆ ಬಂದು ರಂಜಿಸಿದ್ದು ಬೃಂದಾವನದ ಐದನೇ ವಾರ್ಷಿಕೊತ್ಸವ ಹಾಗೂ ಮಕ್ಕಳ ದಿನಾಚರಣೆಗೆ ವಿಶೇಷ.

ಮಕ್ಕಳಿಗೆ ಬೃಂದಾವನ ಐಡಲ್ ಹಾಗು ಚಿತ್ರಕಲಾ ಸ್ಪರ್ಧೆಗಳನ್ನೂ, ದೊಡ್ಡವರಿಗೆ ರಂಗೋಲಿ, ಆರತಿ ತಟ್ಟೆ ಹಾಗು ತರಕಾರಿ ಕೆತ್ತನೆ ಸ್ಪರ್ಧೆಗಳನ್ನೂ ನಡೆಸಲಾಯ್ತು. ಈ ಸ್ಪರ್ಧೆಗಳಿಂದ ನಮ್ಮ ಬೃಂದಾವನದ ಸದಸ್ಯರು ಗಾಯನ, ಚಿತ್ರಕಲೆ ಹಾಗು ವಿಶಿಷ್ಟವಾದ ಕಲೆಗಳಲ್ಲಿ ತಮ್ಮ ಪ್ರತಿಭೆಯನ್ನು, ಕಾರ್ಯಕ್ರಮಕ್ಕೆ ಬಂದಿದ್ದ ಸುಮಾರು 400 ಜನ ಕನ್ನಡಿಗರಿಗೆ ತೋರಿಸಿಕೊಟ್ಟರು.

ಮಕ್ಕಳ ಕಾರ್ಯಕ್ರಮಗಳಂತೂ ಅದ್ಭುತವಾಗಿದ್ದವು. ಅಚ್ಚ ಕನ್ನಡದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಪುಟ್ಟ ಪುಟ್ಟ ಮಕ್ಕಳು, ಅದನ್ನು ಫೋಟೊ ಹಾಗೂ ವೀಡಿಯೊಗಳಲ್ಲಿ ಸೆರೆ ಹಿಡಿಯಲು ಉತ್ಸುಕರಾಗಿ ಮುಂದೆ ಕುಳಿತ ಆ ಮಕ್ಕಳ ಪೋಷಕರು, ಇವರೆಲ್ಲರ ಮುಖಗಳಲ್ಲಿ ಕಂಡ ಆನಂದ, ಉಲ್ಲಾಸ, ಉತ್ಸಾಹವನ್ನು ಕಂಡು ಬೃಂದಾವನದ ಅಧ್ಯಕ್ಷೆ ಉಷಾ ಪ್ರಸನ್ನ ಕುಮಾರ್ ಹಾಗು ಅವರ 10 ಜನದ "ಸ್ಪೂರ್ತಿ" ತಂಡ ಹಲವು ತಿಂಗಳಿಂದ ಪಟ್ಟ ಶ್ರಮ ಸಾರ್ಥಕವೆನಿಸಿತು.

ವನಮಾಲ ಪಾಟೀಲ್ ಹಾಗು ಅಮೂಲ್ಯ ಕಟ್ಟೀಮನಿ ಯವರ ಪ್ರಾರ್ಥನೆ ಯೊಂದಿಗೆ ಪ್ರಾರಂಭವಾದ ಮಧ್ಯಾಹ್ನದ ಕಾರ್ಯಕ್ರಮ, ಕೂಟದ ಮಕ್ಕಳಿಂದ ಬೃಂದಾವನದ ಸಂಕೇತ ಗೀತೆ ಹಾಗೂ ಭಾರತದ ರಾಷ್ಟ್ರಗೀತೆ ಮುಗಿದ ಕೂಡಲೆ ಕಾರ್ಯಕ್ರಮಗಳ ಸರಮಾಲೆ ಸರಸರನೆ ಹೋಯಿತು. ವಿದ್ಯಾ ಮೂರ್ತಿ ನಿರ್ವಹಿಸಿದ ಗಣೇಶ, ಲಕ್ಷ್ಮಿ, ಸರಸ್ವತಿ ನೃತ್ಯ, ಸ್ಮಿತ ಸಂತೋಷ್ ನಡೆಸಿಕೊಟ್ಟ "ಅಡವಿ ರಾಜನ" ಪುಟ್ಟ ಮಕ್ಕಳ ನೃತ್ಯ, ಹ್ಯಾರಿಸ್ ಬರ್ಗ್ ಕನ್ನಡ ಕೂಟದ ಅದಿತಿ ಕುಲಕರ್ಣಿ ನಿರ್ವಹಿಸಿದ್ದ ನೇರಳೆ ಬಣ್ಣದ ಫ್ರಾಕ್ ತೊಟ್ಟ ಮಕ್ಕಳಿಂದ "ಒಂದೆ ಒಂದು ಸಾರಿ ಕಣ್ಮುಂದೆ ಬಾರೆ" ಮಾಡಿದ ಸಮೂಹ ನೃತ್ಯ, ಸುವರ್ಚಲ ಕಾಮತ್ ರವರು ನಡೆಸಿಕೊಟ್ಟ "ಪುಣ್ಯಕೋಟಿ" ನೃತ್ಯ ರೂಪಕ, ಎಡಿಸನ್ನಿನ ಶ್ರೀ ಕೃಷ್ಣ ವೃಂದಾವನದ ಸುಮಾರು 20 ಕ್ಕೂ ಹೆಚ್ಚು ಮಕ್ಕಳಿಂದ "ಭಜನೆ", ಅನನ್ಯ ಕಟ್ಟೀಮನಿ ಹಾಗು ಸ್ಪೂರ್ತಿ ಭಟ್ಟ ನಡೆಸಿಕೊಟ್ಟ "ಫ್ಯೂಷನ್ ಡಾನ್ಸ್", ನಾಗಶ್ರೀ ಬದರಿ ಮತ್ತು ಸುನೀತ ಮುತ್ತು ನಿರ್ವಹಿಸಿದ "ನಮ್ಮೂರ ವೈಭವ" ನೃತ್ಯರೂಪಕ ಹಾಗೂ ಕನೆಕ್ಟಿಕಟಿನ ಹೊಯ್ಸಳ ಕನ್ನಡ ಕೂಟದ ಮಕ್ಕಳಿಂದ ಯಶವಂತ್ ಗಡ್ಡಿ ನಡೆಸಿಕೊಟ್ಟ "ಕಂತಿ ನಾಗಚಂದ್ರ ಸಂವಾದ", ಮಕ್ಕಳ ದಿನಾಚರಣೆ ಕಾರ್ಯಕ್ರಮದ ವೈಶಿಷ್ಟ್ಯವಾಗಿದ್ದವು.

ವೀಣಾ ಮೋಹನ್ ರವರ ಸುಲಲಿತ ನಿರೂಪಣೆಯಿಂದ ಪ್ರಾರಂಭವಾದ ಸಂಜೆಯ ಕಾರ್ಯಕ್ರಮದಲ್ಲಿ, ಮೊದಲು ಕರ್ನಾಟಕದ ನಾಡಗೀತೆಯಾದ "ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ" ಯ ಹಾಡು ಹಾಗೂ ದೊಡ್ಡ ಪರದೆಯ ಮೇಲೆ ಆ ಹಾಡಿಗೆ ತಕ್ಕಂತೆ ಬಂದ ದೃಶ್ಯ ರೂಪಕಕ್ಕೆ ಎಲ್ಲರೂ ಎದ್ದು ನಿಂತು ಗೌರವಿಸುವ ಮೂಲಕ ಸಂಜೆಯ ಕಾರ್ಯಕ್ರಮಗಳು ಪ್ರಾರಂಭವಾಯ್ತು. ಬೃಂದಾವನದ ೫ನೇ ವಾರ್ಷಿಕೋತ್ಸವಕ್ಕೆಂದೇ ರಘು ಮೂರ್ತಿ ಯವರು ವಿಶೇಷ ಕಾಳಜಿ ವಹಿಸಿ ತಯಾರಿಸಿದ್ದ "ಐದು ವರ್ಷಗಳ ಹಿನ್ನೋಟ" ದ "ಸ್ಲೈಡ್ ಶೊ" ನಲ್ಲಿ ಡಿಸೆಂಬರ್ 2004 ರಿಂದ ಇಂದಿನ ವರೆಗೂ ಬೃಂದಾವನದಲ್ಲಿ ನಡೆದ ಕಾರ್ಯಕ್ರಮಗಳು ಒಂದೊಂದಾಗಿ ತೆರೆದುಕೊಂಡವು.

ಕರ್ನಾಟಕದಿಂದ ಆಗಮಿಸಿದ್ದ ಅತಿಥಿಗಳಾದ ಶ್ರೀಯುತರಾದ ರಾಜೇಶ್ ಕೃಷ್ಣನ್, ಭಾರ್ಗವ, ರತ್ನಮಾಲ ಪ್ರಕಾಶ್, ಮಾಲತಿ ಶರ್ಮ, ಅಪೂರ್ವ ಶ್ರೀಧರ್, ಪ್ರವೀಣ್ ಗೋಡ್ಕಿಂಡಿ, ಅನೂರ್ ಅನಂತಕೃಷ್ಣ ಶರ್ಮ (ಶಿವು) ಅ. ರಾ. ಮಿತ್ರ, ಪಿ. ಬಿ. ಶ್ರೀನಿವಾಸ್, ಪುತ್ತೂರ್ ನರಸಿಂಹ ನಾಯಕ್, ಶಮಾ ಹಾಗು ಸಂಜಯ್, ಸಂಗೀತ ಕುಲಕರ್ಣಿ, ನಾಗಾಭರಣ, ಶ್ರೀನಿವಾಸ್ ಕಪ್ಪಣ್ಣ, ಜಯಂತ್ ಕಾಯ್ಕಿಣಿ, ಗುರುಕಿರಣ್, ಅರುಣ್ ಕುಮಾರ್ ರವರ "ಲಯತರಂಗ" ತಂಡದವರು, ಗಂಗಾವತಿ ಪ್ರಾಣೇಶ್, ಮಿಮಿಕ್ರಿ ದಯಾನಂದ್, ರಿಚರ್ಡ್ ಲೂಯಿಸ್, ಈ ಟಿವಿ ಸೂರಿ, ಸಿಹಿಕಹಿ ಚಂದ್ರು, ಶ್ರೀನಾಥ್ ವಸಿಷ್ಠ, ಕಲ್ಪನ ನಾಗನಾಥ್, ಸಾರಿಕ ಪ್ರವೀಣ್, ಜಹಾಂಗೀರ್, ಗಣೇಶ್ ದೇಸಾಯಿ, ನಮಿತ ದೇಸಾಯಿ ಹಾಗೂ ಅಮೇರಿಕದ ಹಲವಾರು ಕಲಾವಿದರನ್ನು ಕಂಡಾಗ, ಕೇವಲ ೫ ವರ್ಷಗಳ ಅವಧಿಯಲ್ಲಿ ಸುಮಾರು 25 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿರುವ ಬೃಂದಾವನದ ಕಾರ್ಯಕಾರಿ ಸಮಿತಿಗಳ ಬಗ್ಗೆ ನೆರೆದಿದ್ದ ಸಭಿಕರೆಲ್ಲಾ ಜೋರಾದ ಕರತಾಡನ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದರು.

ಯಶಸ್ವಿ ಸಾಂಸ್ಕೃತಿಕ ಕಾರ್ಯಕ್ರಮಗಳಂತೆ, ಪ್ರಾರಂಭದಿಂದಲೂ "ದಾನ ಧರ್ಮ" ಕಾರ್ಯಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸುತ್ತ ಬಂದಿರುವ ಬೃಂದಾವನ, ಕರ್ನಾಟಕದ ಸಮರ್ಥನಮ್ ಅಂಧರ ಸಂಸ್ಥೆ, ಶಂಕರ ಐ ಫೌಂಡೇಶನ್, "ಅಕ್ಕ" ನೆರೆ ಪರಿಹಾರ ನಿಧಿ, ಅಕ್ಷಯ ಪಾತ್ರೆ ಸಂಸ್ಥೆ ಹಾಗೂ ಹತ್ತಿರದ "ಸೂಪ್ ಕಿಚನ್" ಗಳಿಗೆ ಸುಮಾರು 12,000 ಡಾಲರ್ ಗಿಂತ ಅಧಿಕವಾಗಿ ದಾನ ಮಾಡಿರುವುದು ಶ್ಲಾಘನೀಯ. ರಘು ಮೂರ್ತಿಯವರು ಇದರ ಬಗ್ಗೆ ವಿಶೇಷ ವರದಿ ಸಲ್ಲಿಸಿದ ಬಳಿಕ "ಅಕ್ಷಯ ಪಾತ್ರೆ" ಸಂಸ್ಥಾನದ ಬಗ್ಗೆ ವೀಡಿಯೊ ತೋರಿಸಲಾಯ್ತು. ತದನಂತರ ಬೃಂದಾವನ ಸಂವಿಧಾನ ತಿದ್ದುಪಡಿ ಬಗ್ಗೆ ನಡೆದ ಮತದಾನದ ಬಗ್ಗೆ ಶಂಕರ್ ಶೆಟ್ಟಿಯವರು ಎಲ್ಲ 15 ತಿದ್ದುಪಡಿಗಳನ್ನು ಬೃಂದಾವನದ ಸದಸ್ಯರು ಶೇಖಡ 85 ಕ್ಕಿಂತ ಹೆಚ್ಚಾದ ಬಹುಮತದಿಂದ ಅಂಗಿಕರಿಸಿದ್ದಾರೆ ಎಂದು ತಿಳಿಸಿದರು ಹಾಗೂ ಈ ಐದು ವರ್ಷಗಳಲ್ಲಿ ಚೆನ್ನಾಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವ ಪ್ರಸನ್ನ ಹಾಗು ಅವರ ಸಮಿತಿ, ವಸಂತ ಶಶಿ ಹಾಗು ಅವರ ಸಮಿತಿ ಹಾಗು ಸಧ್ಯಕ್ಕೆ ನಡೆಸುತ್ತಿರುವ ಉಷ ಪ್ರಸನ್ನ ಹಾಗು ಅವರ "ಸ್ಪೂರ್ತಿ" ತಂಡದವರಿಗೆ ಕೃತಜ್ನತೆಗಳನ್ನು ಸಲ್ಲಿಸಿದರು.

ಬೃಂದಾವನದ ಆಶ್ರಯದಲ್ಲಿ ನಡೆಯಲಿರುವ 6ನೆ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಬೆನ್ ಕಾಂತರಾಜು, ಪ್ರಸನ್ನ ಕುಮಾರ್ ಹಾಗು ಶಂಕರ್ ಶೆಟ್ಟಿ ಯವರು ಸಂಕ್ಷಿಪ್ತವಾಗಿ ಮಾತನಾಡಿ, ಈ ಸಮ್ಮೇಳನದ ಯಶಸ್ಸಿಗೆ ಸಭೆಯಲ್ಲಿ ನೆರೆದಿದ್ದ ಕನೆಕ್ಟಿಕಟ್, ನ್ಯೂಯಾರ್ಕ್, ನ್ಯೂಜೆರ್ಸಿ, ಪೆನ್ಸಿಲ್ವೇನಿಯ ಹಾಗು ಡೆಲವೇರ್ ಕನ್ನಡಿಗರ ಬೆಂಬಲ ಹಾಗು ಸಹಾಯಕ್ಕೆ ಯಾಚಿಸಿ "ಸ್ವಯಂಸೇವಕರ ಪಟ್ಟಿ" ಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಲು ಕೋರಿಕೊಂಡರು. ಕಳೆದ ವಾರವಷ್ಟೆ ನಡೆದ ೬ನೆ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಎಲ್ಲ ಸಂಚಾಲಕರು ಹಾಗು 34 ವಿವಿಧ ಸಮಿತಿಯ ಮುಖ್ಯಸ್ಥರ ಪ್ರಥಮ ಸಭೆಯ ಚಿತ್ರಗಳ ಪ್ರದರ್ಶನದೊಂದಿಗೆ "ಜೇನಿನ ಗೂಡು ನಾವೆಲ್ಲ, ಬೇರೆಯಾದರೆ ಜೇನಿಲ್ಲ" ಎಂಬುದನ್ನು ಬಿತ್ತರಿಸಲಾಯ್ತು.

ಮೇರಿಲ್ಯಾಂಡಿನ ಕಾವೇರಿ ಕನ್ನಡ ಕೂಟದಿಂದ ಶ್ರೀಕಂಠಯ್ಯ (ಕಂಠಿ) ನಿರ್ದೇಶನದ "ರಾಧೇಯ", ಕನೆಕ್ಟಿಕಟ್ಟಿನ ಹೊಯ್ಸಳ ಕನ್ನಡ ಕೂಟದಿಂದ ಯಶವಂತ್ ಗಡ್ಡಿ ನಿರ್ದೇಶನದ "ನಮ್ಮಳ್ಳಿ ನಾಟಕ", ಬೃಂದಾವನದ "ಬೃಂದಾವನ ನಾಟಕ ಮಂಡಲಿ" ಯಿಂದ ಸ್ವಾಮಿ ನಿರ್ದೇಶಿಸಿ ನಡೆಸಿಕೊಟ್ಟ "ಕಿಸ್ನ ಸಂಧಾನ", ಹ್ಯಾರಿಸ್ ಬರ್ಗ್ ಕನ್ನಡ ಕೂಟದ ಚಂಪ ಪ್ರಸಾದ್ ನಡೆಸಿಕೊಟ್ಟ "ಹಚ್ಚೇವು ಕನ್ನಡದ ದೀಪ" ದ ಹಾಡಿಗೆ "ದೀಪ ನೃತ್ಯ", ತ್ರಿವೇಣಿ ಕನ್ನಡ ಕೂಟದಿಂದ ಅನಿತ ಅನಂತಸ್ವಾಮಿ ಹಾಗು ವೃಂದದವರಿಂದ ಸುಶ್ರಾವ್ಯವಾಗಿ ಹೊರಹೊಮ್ಮಿದ "ರಂಗ ಗೀತೆಗಳು" ಜೊತೆಗೆ ಸಿಂಹಾದ್ರಿ ಸಂತೆಬೆನ್ನೂರಿನ ಉತ್ತಮವಾದ "ಧ್ವನಿ"ಗ್ರಹಣ ಹಾಗು ಕಿಶೋರ್ ಮಾಡಿದ "ಬೆಳಕಿನ" ವಿನ್ಯಾಸ, ಎಲ್ಲ ಕಾರ್ಯಕ್ರಮಗಳು ಮುಗಿಯುವವರೆಗೂ ಪ್ರೇಕ್ಷಕರನ್ನು ತಮ್ಮ ತಮ್ಮ ಆಸನಗಳಿಗೆ ಕಟ್ಟಿಹಾಕುವಂತೆ ಮಾಡಿತ್ತು. ನಮ್ಮ ಕನ್ನಡದವರೇ ಆದ ಮುರಳಿ ಹಾಗು ಶೇಷು ನಡೆಸುತ್ತಿರುವ ಶುದ್ಧ ಶಾಖಾಹಾರಿ "ಸ್ವಾಗತ್ ರೆಸ್ಟರಂಟ್" ನಿಂದ ಮಧು ರಂಗಯ್ಯ ತಂದಿಟ್ಟ ಉಪ್ಪಿಟ್ಟು ಕೇಸರಿಬಾತ್ ತಿಂಡಿ ಹಾಗು ಹಬ್ಬದೂಟ, ಎಲ್ಲ ಪ್ರೇಕ್ಷಕರಿಗೂ ಸುಂದರ ಕಾರ್ಯಕ್ರಮಗಳ ನಂತರ ರುಚಿಯಾದ ತಿಂಡಿ ಊಟವನ್ನು ಒದಗಿಸಿತು.

ಗ್ಯಾಲರಿ:ಬೃಂದಾವನ ಅಂಗಳದಲ್ಲಿ ಸಾಂಸ್ಕೃತಿಕ ಸಂಭ್ರಮ

ಬೃಂದಾವನದ ಸ್ಪೂರ್ತಿ ತಂಡದ ಅಹ್ವಾನಕ್ಕೆ ಓಗೊಟ್ಟು, ಬೃಂದಾವನದ ಐದನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಪಾಳ್ಗೊಳ್ಳಲು ಆಗಮಿಸಿದ ಮೇರೀಲ್ಯಾಂಡಿನ ಕಾವೇರಿ ಕನ್ನಡ ಕೂಟದ ಸದಸ್ಯರಿಗೂ, ನ್ಯೂಜೆರ್ಸಿಯ ತ್ರಿವೇಣಿ ಕನ್ನಡ ಕೂಟದ ಸದಸ್ಯರಿಗೂ, ಹ್ಯಾರಿಸ್ ಬರ್ಗ್ ಕನ್ನಡ ಕೂಟದ ಸದಸ್ಯರಿಗೂ, ನ್ಯೂಯಾರ್ಕ್ ಕನ್ನಡ ಕೂಟದ ಸದಸ್ಯರಿಗೂ ಹಾಗು ಕನೆಕ್ಟಿಕಟ್ಟಿನ ಹೊಯ್ಸಳ ಕನ್ನಡ ಕೂಟದ ಸದಸ್ಯರಿಗೂ, ಎಲ್ಲಾ 28 ಕಾರ್ಯಕ್ರಮಗಳನ್ನು ಮಧ್ಯರಾತ್ರಿಯವರೆಗೂ ಸಾವಧಾನವಾಗಿ ಕುಳಿತು ನೋಡಿ ಆನಂದಿಸಿ ಮಕ್ಕಳನ್ನು ಪ್ರೋತ್ಸಾಹಿಸಿ ಕೊನೆಗೆ ಹೊಟ್ಟೆ ತುಂಬಾ ಹಬ್ಬದೂಟವನ್ನು ಮಾಡಿಕೊಂಡು, ಎಲ್ಲ ಸ್ನೇಹಿತರೊಡನೆ ಹರಟುತ್ತ ಸಂತೋಷದಿಂದ ನಲಿದ ಎಲ್ಲ ಪ್ರೇಕ್ಷಕರಿಗೂ ಬೃಂದಾವನದ ಸ್ಪೂರ್ತಿ ತಂಡದ ಪರವಾಗಿ ಸಾಧನ ಶಂಕರ್ ಅವರು ಅನಂತಾನಂತ ಧನ್ಯವಾದಗಳನ್ನು ಅರ್ಪಿಸಿದರು.

ಈ ಒಂದು ಕಾರ್ಯಕ್ರಮಕ್ಕೆ ಸಹಾಯ ಧನ ಒದಗಿಸಿದ್ದ ಸದಸ್ಯರುಗಳಾದ ಬೆನ್ ಕಾಂತರಾಜು, ಸಂತೋಷ್ ಕುಮಾರ್ ಕಡ್ಲೆಬೇಳೆ, ರಮೇಶ್ ಮಂಜೆಗೌಡ, ಸುಬ್ಬಲಕ್ಷಮ್ಮ, ಉಷ ಪ್ರಸನ್ನ ಕುಮಾರ್, "ಗಾರ್ಡಿಯನ್ ಇನ್ಸುರೆನ್ಸ್" ನ ಶ್ರೀಧರ್ ರಾವ್ ಮತ್ತು ಎಲ್ಲ ಸ್ಪರ್ಧೆ ವಿಜೇತರಿಗೆ ಬಹುಮಾನಗಳನ್ನು ನೀಡಿದ "ಅಯೋಮ್ ಸ್ಪಾ" ನ ಅಂಜು ಅವರಿಗೂ "ದಾನ ಧರ್ಮ" ಕಾರ್ಯಗಳಿಗೆ ಉದಾರವಾಗಿ ಧನ ಸಹಾಯ ಮಾಡಿದ ಜ್ಯೋತಿ ಮತ್ತು ನಾಗೇಶ್ ಖರೀಡಿ ಹಾಗು ಮೀನ ಮತ್ತು ಸುರೇಶ್ ವಸಿಷ್ಠ ಅವರಿಗೂ ಬೃಂದಾವನದಿಂದ ಧನ್ಯವಾದಗಳು.

ಐದೇ ವರ್ಷದಲ್ಲಿ ಹಲವಾರು ಕೈಂಕರ್ಯಗಳನ್ನು ಸಾಧಿಸಿರುವ ಬೃಂದಾವನದ ಎಲ್ಲ ಸದಸ್ಯರಿಗೂ ಹಾಗು ಮೂರೂ ಕಾರ್ಯಕಾರಿ ಸಮಿತಿಯವರಿಗೂ "ಪ್ರವಾಸ"ದಿಂದ (ಬೃಂದಾವನದ ಪ್ರಚಾರ ವಾರ್ತಾ ಹಾಗು ಸಂಪರ್ಕ ಸಮಿತಿ) ಹಾರ್ಧಿಕ ಅಭಿನಂದನೆಗಳು. ಬೃಂದಾವನದ ಕೀರ್ತಿ ಪತಾಕೆ "ಸ್ಪೂರ್ತಿ"ಯಿಂದ ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಉತ್ತುಂಗಕ್ಕೇರಲಿ ಹಾಗು ಬೃಂದಾವನದ ಆಶ್ರಯದಲ್ಲಿ ಸೆಪ್ಟಂಬರ್ 2010 ರಲ್ಲಿ ನಡೆಸಲಾಗುತ್ತಿರುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಅತ್ಯಂತ ಯಶಸ್ವಿಯಾಗಲಿ ಎಂಬುದೇ ಎಲ್ಲರ ಹೃದಯಪೂರ್ವಕ ಹಾರೈಕೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more