ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿವಾಸಿ ಭಾರತೀಯನ ಬದುಕು, ಬಂಗಾರ!

By * ಶಾಂತಾ ನಾಗರಾಜ್, ಬೆಂಗಳೂರು
|
Google Oneindia Kannada News

Shantha Nagaraj
"ಆಕಾಶಂ ಪತಿತಂ ತೋಯಂ, ಯಥಾಗಚ್ಛತಿ ಸಾಗರಂ; ಸರ್ವ ದೇವ ನಮಸ್ಕಾರಂ ಕೇಶವಂ ಪ್ರತಿಗಚ್ಛತಿ" ಇದನ್ನು ನಮ್ಮ ಪೂರ್ವಜರು ಅತ್ಯಂತ ವಿಶಾಲ ಮನೋಭಾವದಿಂದ ಹೇಳುತ್ತಾ, ನಂಬುತ್ತಾ ಬಂದಿದ್ದರು. ಈಗ ಐವತ್ತು ನೂರು ವರ್ಷಗಳಲ್ಲಿ ತೀರಾ ಬದಲಾಗಿರುವ ಬದುಕಿನಲ್ಲಿ ಭಾರತೀಯರು ಈ ಪೂರ್ವಜರ ಮಾತುಗಳನ್ನು ಸ್ವಲ್ಪವೇ ಬದಲಾಯಿಸಿಕೊಂಡಿದ್ದಾರೆ ಅಷ್ಟೆ.

ಆಕಾಶದಿಂದ ಕೆಳಗೆ ಎಲ್ಲೆಲ್ಲಿ ಹನಿಗಳು ಬೀಳುತ್ತದೋ ಅಲ್ಲೆಲ್ಲಾ ನಾವೂ ನಮ್ಮ ಕೇಶವನೂ ಇರಬೇಕೆನ್ನುವುದೇ ಇಂದಿನ ಭಾರತೀಯರ ಸದಾಶಯವಾಗಿದೆ. ಹಾಗಾಗಿ ಇಂದು ಭಾರತೀಯರು ವಿಶ್ವವ್ಯಾಪಿಯಾಗಿದ್ದಾರೆ. ಅದು ಅತ್ತ ಅಟ್ಲಾಂಟಾ ಅಥವಾ ಕ್ಯೂಬಾ ಇರಲಿ, ಇತ್ತ ಅಸ್ಟ್ರೇಲಿಯಾದ ಬಂಡರ್ ಬರ್ಗ್ ಇರಲೀ ಅಲ್ಲೆಲ್ಲಾ ಭಾರತೀಯರ ಹೆಜ್ಜೆಗುರುತುಗಳು ಇವೆ. ಬಹುಶಃ ಇನ್ನು ಕೆಲವೇ ವರ್ಷಗಳಲ್ಲಿ ಭಾರತದಲ್ಲಿ ಎಷ್ಟು ಜನಸಂಖ್ಯೆ ಇರುತ್ತದೋ ವಿಶ್ವದಲ್ಲೆಲ್ಲಾ ಹರಡಿರುವ ಎನ್ಆರ್ಐ ಗಳ ಸಂಖ್ಯೆಯೂ ಅದಕ್ಕೆ ಸಮನಾದರೆ ಆಶ್ಚರ್ಯಪಡಬೇಕಾಗಿಲ್ಲ.

"ಮುಂದಿನ ವರ್ಷ ಬಂದೇ ಬಿಡುತ್ತೇನೆ" ಎಂದು ಹೆತ್ತವರ ಮೂಗಿಗೆ ತುಪ್ಪ ಸವರುತ್ತಾ ವರ್ಷ ಇಪ್ಪತ್ತೈದಾದರೂ ಅಲ್ಲೇ ಸ್ವಂತ ಮನೆ ಮಠಗಳನ್ನು ಮಾಡಿಕೊಂಡು ಅರಾಮಾಗಿರುವುದೂ, "ಅಮೆರಿಕಾ ಯಾಕೋ ಒಗ್ಗಲಿಲ್ಲ, ಅದಕ್ಕೆ ವಾಪಸ್ ಬಂದೆ" ಎನ್ನುವುದೂ, ಮತ್ತೆ ಒಂದೇ ವರ್ಷದಲ್ಲಿ ಅಲ್ಲಿಗೇ ವಾಪಸ್ ಹೋಗುವುದೂ, "ರಿಸೆಶನ್ ಅಂತೆ ಅದಕ್ಕೇ ಮಗ ವಾಪಸ್" ಎಂದು ಅಮ್ಮ ಹಿಗ್ಗುವುದೂ, "ಇಲ್ಲ ಸರಿಯಾಯಿತಂತೆ ಮತ್ತೆ ಪೂರ್ವಕ್ಕೆ ಹೋದ" ಎಂದು ನಿಟ್ಟುಸಿರು ಬಿಡುವುದೂ, "ಈಗ ಮತ್ತೆ ಕ್ಯಾಂಪಸ್ ಇಂಟರ್ವ್ಯೂ ಶುರುವಾಗಿದೆಯಂತೆ" ಎಂದು ಕೊನೆಯವರ್ಷದ ಪದವಿಯ ಹುಡುಗ ಹುಡುಗಿಯರು ಸಂಭ್ರಮಿಸುವುದೂ ಇವೆಲ್ಲಾ ಇವತ್ತು ನಮ್ಮ ಸುತ್ತ ನಿಸೂರಾಗಿ ನಡೆಯುತ್ತಿರುವ ವಿದ್ಯಮಾನ!

ಅರುವತ್ತನ್ನು ದಾಟಿದ ಅಲ್ಲಿಗೆ ಹೋಗಲಾರದ ಇಲ್ಲಿ ಮಕ್ಕಳಿಲ್ಲದೇ ಇರಲಾರದ ವೃದ್ಧರು ಈ ವಿದ್ಯಮಾನಕ್ಕೆ ಮೂಕಸಾಕ್ಷಿಗಳು. ಇವರಿಗೂ ಒಮ್ಮೊಮ್ಮೆ ರೆಕ್ಕೆಗಳು ಮೂಡುತ್ತವೆ. ಮಕ್ಕಳು "ಬನ್ನಿ" ಎಂದಾಗ ಸಂಭ್ರಮದಿಂದ ಹಾರಿ, ಅಲ್ಲಿ ನೀರಿನಿಂದ ಹೊರಬಿದ್ದ ಮೀನಿನಂತೆ ಚಡಪಡಿಸಿ, ವೀಸಾ ಅವಧಿ ಮುಗಿದು, ಯಾವಾಗ ವಾಪಸ್ ಹೋಗುತ್ತೀರಿ? ಎಂದು ಆ ಸರ್ಕಾರದಿಂದ ಕೇಳಿಸಿಕೊಂಡು "ನಮ್ಮೂರೆ ಚೆಂದ ನಮ್ಮವರೆ ಅಂದ" ಎಂದೂ, "ಇಲ್ಲೇ ಇದೆ ನಮ್ಮನೆ; ಅಲ್ಲಿ ಹೋಗಿದ್ದೆ ಸುಮ್ಮನೆ" ಎಂದೂ ವಾಪಸ್ ಆಗುವ ಈ ಜನಗಳಿಗೆ ವಿದೇಶ ಎನ್ನುವುದು ಮಕ್ಕಳ ಕರುಣಾಕೃಪೆಯಿಂದ ದೊರಕುವ ಒಂದು ರೀತಿಯ ಪಿಕ್‌ನಿಕ್ ಸ್ಪಾಟ್!

ಇಂಥ ಜನಗಳು ತಮ್ಮ ಮಕ್ಕಳ ಜೊತೆಗೆ ಇತರ ಭಾರತೀಯರನ್ನೂ ನೋಡುತ್ತಾ ಅವರ ಬದುಕನ್ನು ಪರಾಮರ್ಶಿಸುತ್ತಾ, ಕವಿ ಪು.ತಿ.ನರಸಿಂಹಾಚಾರ್ಯರು ಹೇಳುವ ಹಾಗೆ "ಲಘಿಮಾ ಕೌಶಲ್ಯ" ದಿಂದ, (ಅಂದರೆ ವಸ್ತುಸ್ಥಿತಿಯ ಒಳಗೆ ಪ್ರವೇಶ ಮಾಡದೇ ಹೊರಗಿದ್ದುಕೊಂಡೇ ವಿಷಯಗಳನ್ನು ಅಮೂಲಾಗ್ರವಾಗಿ ಗ್ರಹಿಸುವುದು) ಅವರನ್ನು ಅರ್ಥೈಸಬಹುದು. ಇಂಥಾ ಕೆಲಸ ಮಾಡುವವರಲ್ಲಿ ನಾನೂ ಒಬ್ಬಳು. ಏಕೆಂದರೆ ಮಗ ಸಿಂಗಪುರದಲ್ಲಿ ಇರುವ ಕಾರಣ ಆರೆಂಟುಸಲ ಸಿಂಗಪುರಕ್ಕೂ ಅದರ ಪಕ್ಕದ ದೇಶಗಳಾದ ಮಲೇಷಿಯಾ ಥೈಲ್ಯಾಂಡಿಗೂ ನನ್ನ ಸವಾರಿ ಚಿತ್ತೈಸುವುದರಿಂದ ಇಂಥಾ ಎನ್.ಆರ್.ಐ ಗಳ ಬದುಕಿನ ಒಳಗೆ ಇಣುಕಿನೋಡುವುದು ನನಗೂ ಸಾಧ್ಯವಾಗಿದೆ.

ತಮ್ಮ ನೆಲಬಿಟ್ಟು ಪರರ ನೆಲದಲ್ಲಿ ಕಾಲೂರಿದ ತಕ್ಷಣ ಎದುರಾಗುವ ಸಮಸ್ಯೆಯೆಂದರೆ ಆ ನೆಲದ ವ್ಯವಸ್ಥೆಗೆ ಒಗ್ಗಿಕೊಳ್ಳುವುದು. ಇದು ನಮ್ಮ ಜಾಣಮಕ್ಕಳಿಗೆ ಸಾಧ್ಯ ಎನ್ನುವುದು ನಮಗೆ ಸಮಾಧಾನದ ಹಾಗೂ ಅವರಿಗೆ ಅನಿವಾರ್ಯವಾಗುವ ಮಾತು. ಪ್ರಸಿದ್ಧ ಲೇಖಕಿ ನೇಮಿಚಂದ್ರ ತಮ್ಮ "ಒಂದು ಕನಸಿನ ಪಯಣ"ದಲ್ಲಿ ಪರದೇಶದಲ್ಲಿ ಆಗಷ್ಟೇ ಹೋಗಿ ನೆಲೆಯೂರಿದ ಭಾರತೀಯನನ್ನು ಭೇಟಿಯಾದ ಸಂದರ್ಭವನ್ನು ವಿವರಿಸುತ್ತಾ ಆತನ ಮಾತುಗಳನ್ನು ಗಮನಿಸಿ ಬರೆಯುತ್ತಾರೆ " ಆತ ವಿಚಿತ್ರವಾಗಿ ಮಾತು ಮಾತಿಗೆ ಭಾರತೀಯರು ತುಂಬಾ ಭಾವುಕರು, ಇಲ್ಲಿಯವರು ಹಾಗೆಲ್ಲಾ ಮೂರ್ಖತೆಯನ್ನು ತೋರುವುದಿಲ್ಲ ಎನ್ನುತ್ತಿದ್ದ. ಹಾಗಾದರೆ ಭಾವುಕತೆಯನ್ನೆಲ್ಲಾ ಬಿಟ್ಟು ಬರಿ ಯಾಂತ್ರಿಕತೆ ಇರುವ ಬದುಕಿಗೆ ಪರದೇಶಕ್ಕೆ ಹೋಗಬೇಕೆ ಎಂದುಕೊಂಡೆ". ಇದು ಹೀಗೆ! ಪರದೇಶದವರ ನಡವಳಿಕೆಯನ್ನು ಗಮನಿಸಿ, ಅದಕ್ಕೆ ಹೊಂದುವಂತೆ ನಡೆದುಕೊಳ್ಳುವುದಿದೆಯಲ್ಲ ಅದು ನಿಜಕ್ಕೂ ಒಂದುರೀತಿಯ ಪಂಥಾಹ್ವಾನವೇ. ನನ್ನದೇ ಒಂದು ವಿಚಿತ್ರ ಅನುಭವ ಹೀಗಿದೆ.

ಅತ್ತಿತ್ತ ನೋಡದಿರು, ಅಲುಗಾಡದಿರು : ನಾನು ಸಿಂಗಪುರಕ್ಕೆ ಹೋದಾಗಲೆಲ್ಲಾ ಹೊತ್ತು ಕಳೆಯಲು ಕಸೂತಿಯನ್ನೋ ಕ್ರೋಷಾ ಹೆಣಿಗೆಯನ್ನೋ ಬಾಲ್ಕನಿಯಲ್ಲಿ ಕೂತು ಮಾಡುವುದು ರೂಢಿ. ಅದೇ ಬಾಲ್ಕನಿಯಲ್ಲಿ ಪಕ್ಕದ ಮನೆ ಗೃಹಿಣಿಯೂ ಓಡಾಡುತ್ತಾ ನನ್ನನ್ನು ಕಂಡು "ಹಲೋ ಆಂಟೀ ಗುಡ್ ಮಾರ್ನಿಂಗ್" ಎನ್ನುತ್ತಿದ್ದಳೇ ವಿನಃ, ನಾನು ಮಾಡುತ್ತಿದ್ದ ಕೆಲಸದ ಕಡೆ ಕಿರುಗಣ್ಣಿಂದಲೂ ನೋಡುತ್ತಿರಲಿಲ್ಲ. ಅದೇ ನಮ್ಮ ನೆಲದಲ್ಲಾದರೆ ಅಕ್ಕಪಕ್ಕದವರು ಹತ್ತುಸಾರಿ ಹತ್ತು ಹಲವು ವಿಧದಲ್ಲಿ ಅದಕ್ಕೆ ಪ್ರತಿಕ್ರಯಿಸುತ್ತಿದ್ದರು. "ಏನು ಹಾಕುತ್ತಿದ್ದೀರಿ"? ಎಂದೋ, "ಇದರ ಪ್ಯಾಟ್ರನ್ ಚೆನ್ನಾಗಿದೆ" ಎಂದೋ ಆ ಬಗ್ಗೆ ಒಂದು ಮಾತು ಉರುಳಿಸುವುದು ನಮಗೆ ತೀರಾ ಸಹಜ. ಆದರೆ ಈ ಜನವೋ ಯಾವುದಕ್ಕೂ ಕಣ್ಣು ಕಿವಿಯಾಗುವುದೇ ಇಲ್ಲ! ನನಗೆ ಇದೇ ವಿಸ್ಮಯ.

" ಇದು ಯಾಕೆ ನಿಮ್ಮ ಸಿಂಗಪುರಿಯನ್ನರು ಹೀಗೆ" ಎಂದು ನನ್ನ ಮಗನ ಮುಂದೆ ಕೇಳಿದೆ. ಅವನ ಉತ್ತರ ನನ್ನನ್ನು ಇನ್ನೂ ತಬ್ಬಿಬ್ಬಾಗಿಸಿತು. "ಹೌದಮ್ಮ ಇಲ್ಲಿಯ ಜನ ಹಾಗೇ ನಮ್ಮ ಜನಗಳ ಹಾಗೆ ಇವರಿಗೆ ಕೆಟ್ಟಕುತೂಹಲವಿರುವುದಿಲ್ಲ ಮತ್ತು ಹೀಗಿರುವುದೇ ಸರಿ" ಎಂದ! ಸಣ್ಣಸಣ್ಣ ಕುತೂಹಲಗಳು ಕೆಟ್ಟ ಕುತೂಹಲ ಹೇಗಾಯಿತು? ಅಲ್ಲದೇ ಅದರಿಂದ ಸಿಗುವ ಸಣ್ಣ ಸಣ್ಣ ಸಂತೋಷಗಳು ಬದುಕಿಗೆ ಅಷ್ಟೊಂದು ಅಗತ್ಯವಲ್ಲವೇ? "ಇಲ್ಲ" ಅನ್ನುತ್ತಾನೆ ಮಗ! "ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಹೌ ಐ ವಂಡರ್ ವಾಟ್ ಯು ಆರ್" ಅನ್ನುವುದರಲ್ಲಿನ "ವಂಡರ್" ಬೇಡವೆಂದರೆ ಸಂಶೋಧನೆ ಎನ್ನುವ ಪದಕ್ಕೆ ಏನಾದರೂ ಅರ್ಥವಿದೆಯೇ? ಪರದೇಶಕ್ಕೆ ಹೋದ ಎನ್.ಆರ್.ಐ ಗಳು ತಮ್ಮ ಹೆತ್ತವರಿಗೇ ಪರಕೀಯರಾಗುವುದು ದಿನಗಳೆದಂತೆ ಇಲ್ಲಿಯವರ ಹಾಗೂ ಅವರ ನಡುವಣ ಕಂದರಗಳು ಅಗಲವಾಗುತ್ತಾ ಹೋಗುವುದೂ ಹೀಗೇ!

ಅಲ್ಲಿಗೆ ಉದ್ಯೋಗಕ್ಕೋ ವ್ಯಾಪಾರಕ್ಕೋ ಹೋದಾಗ ಪ್ರತಿದಿನ ಪ್ರತಿಘಳಿಗೆ ಇವರ ಜಾಣತನವನ್ನು ಒರೆಗಲ್ಲಿಗೆ ಹಚ್ಚುವುದಿದೆಯಲ್ಲ ಅದು ಮತ್ತೊಂದು ಪಂಥಾಹ್ವಾನ! ಭಾರತದಲ್ಲಿ ಬಹುಶಃ ಐ.ಟಿ ಉದ್ಯೋಗವನ್ನುಳಿದು ಬೇರೆ ಯಾವುದೇ ಉದ್ಯೋಗಕ್ಕೂ ಒಮ್ಮೆ ಸೇರಿದರಾಯಿತು. ಅವರು ಕೆಲಸ ಮಾಡಲಿ ಬಿಡಲಿ, ಸಾಲುಸಾಲಾಗಿ ರಜೆಯ ಮಜವನ್ನು ಅನುಭವಿಸುತ್ತಿರಲಿ, ಜವಾಬ್ದಾರಿಯನ್ನು ಸಹೋದ್ಯೋಗಿಗಳ ಹೆಗಲಿಗೇರಿಸುತ್ತಿರಲಿ, ಅಥವಾ ನೊಗಕಟ್ಟಿಸಿಕೊಂಡ ಎತ್ತಿನಂತೆ ದುಡಿಯುತ್ತಿರಲಿ, ಎಲ್ಲರಿಗೂ ತಿಂಗಳಿಗೊಮ್ಮೆ ಸಂಬಳವೆನ್ನುವುದು ತಾನಾಗೇ ನಡೆದುಬರುವ ಬುತ್ತಿ!

ಎನ್. ಆರ್. ಐ ಗಳ ಬದುಕು ಹೀಗೆ ಸುಗಮವಲ್ಲ. ಸುಖಾಸುಮ್ಮನೆ ಸಂಬಳ ನಡೆದುಬರುವುದಿಲ್ಲ. ಅದು ಅವರ ಸಮಯವನ್ನು, ಉಪಯೋಗಿಸಬಹುದಾದಷ್ಟೂ ಬುದ್ಧಿಯನ್ನು,ಎಲ್ಲಕ್ಕಿಂತಾ ಹೆಚ್ಚಾಗಿ ಉದ್ಯೋಗದ ಜೊತೆಗಿನ ತದಾತ್ಮತೆಯನ್ನು ಬೇಡುತ್ತಿರುತ್ತದೆ. ಹಾಗೆ ತಮ್ಮ ತನು ಮನಗಳನ್ನು ಅರ್ಪಿಸಿದವರಿಗೆ ತಕ್ಕ ನೆಲೆಬೆಲೆಗಳು ಬಹುಬೇಗ ಕೈಗೆಟುಕುವುದೂ ಇದೆ. ಮೆರಿಟ್‌ಗೆ ಅನುಗುಣವಾಗಿ ಮುಂಬಡ್ತಿಗಳು, ಅದಕ್ಕೆ ತಕ್ಕ ವೇತನಗಳು, ಅದರ ಜೊತೆಗೇ ಲಭಿಸಬಹುದಾದ ಮಾನಮರ್ಯಾದೆಗಳು ಸುಗಮಸಾಧ್ಯ! ಏಕೆಂದರೆ ಇಲ್ಲಿಯಹಾಗೆ ಜಾತಿಯ ಗೋಜಲುಗಳು ಇಲ್ಲವಲ್ಲ? ಹುಟ್ಟಿನಿಂದ ಮೀಸಲಾತಿಯ ಜಾತಿಯ ಕಾರಣ ಯಾವ ಉದ್ಯೋಗವೂ ಮತ್ತು ಮುಂಬಡ್ತಿಯೂ ದೊರೆಯುವುದಿಲ್ಲವಲ್ಲ? "ಈ ವಿಶ್ವವಿಖ್ಯಾತ ಕಟ್ಟಡದ ರೂವಾರಿ ಭಾರತೀಯ, ಈ ಎಂ ಆರ್ ಟಿ ಮತ್ತು ಬಸ್ಸುಗಳ ಡಿಜಿಟಲ್ ಕಾರ್ಡ್ ರೂಪಿಸಿದವನು ಭಾರತೀಯ" ಇತ್ಯಾದಿ ಮಾತುಗಳು ಪರದೇಶದಲ್ಲಿ ಕೇಳಿದಾಗ ನಿಜಕ್ಕೂ ಖುಷಿಯಾಗುತ್ತದೆ. ನಮ್ಮ ಜನರ ಜಾಣತನದ ಹೆಗ್ಗುರುತುಗಳು ಅಲ್ಲೆಲ್ಲಾ ಹರಿದಾಡುತ್ತಿರುತ್ತದೆ!

ಇನ್ನು ಪರದೇಶಕ್ಕೆ ಹೋದವರ ಹೆತ್ತವರ ಕಥೆ..? (ನಿರೀಕ್ಷಿಸಿ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X