ಅಟ್ಲಾಂಟದಲ್ಲಿ ನಮಿತಾ, ಗಣೇಶ್ ದೇಸಾಯಿ ಗಾನಸುಧೆ

By: * ಮಂಗಳ ಉಡುಪ, ಅಟ್ಲಾಂಟ
Subscribe to Oneindia Kannada
Namita Desai
ಸೆಪ್ಟೆಂಬರ್ 12ರ ರಾತ್ರಿ ಅಟ್ಲಾಂಟಾದ ರಿವರ್‌ಡೇಲ್ ಬಾಲಾಜಿ ದೇವಸ್ಥಾನದಿಂದ ಹೊರಟ ಕನ್ನಡಿಗರು ಖಂಡಿತವಾಗಿಯೂ "ವಿಠ್ಠಲ"ನ ಗುಂಗಲ್ಲೇ ತಮ್ಮ ವಾರಾಂತ್ಯವನ್ನು ಕಳೆದಿರುತ್ತಾರೆ ಎಂದರೆ ತಪ್ಪಾಗಲಾರದು. ಇಲ್ಲಿನ ನೃಪತುಂಗ ಕನ್ನಡ ಕೂಟದವರು ಆಯೋಜಿಸಿದ ನಮಿತಾ ದೇಸಾಯಿಯವರ ಭರತನಾಟ್ಯ ಮತ್ತು ಗಣೇಶ್ ದೇಸಾಯಿಯವರ ಸಂಗೀತ ಕಾರ್ಯಕ್ರಮ ಕಣ್ಣು ಕಿವಿಗಳೆರಡಕ್ಕೂ ತೃಪ್ತಿ ನೀಡಿ ಅತ್ಯಂತ ಯಶಸ್ವಿಯಾಗಿತ್ತು.

ಕರ್ನಾಟಕದಲ್ಲಿ ಈಗಾಗಲೇ "ಮೂಡಲಮನೆ" ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿ ಕನ್ನಡಿಗರಿಗೆ ಚಿರಪರಿಚಿತರಾಗಿರುವ ನಮಿತಾ ದೇಸಾಯಿಯವರ ಕಿರುಪರಿಚಯದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಗಣೇಶನಮನದಿಂದ ಪ್ರಾರಂಭವಾದ ಅವರ ನೃತ್ಯ ಕಾರ್ಯಕ್ರಮ 50 ನಿಮಿಷಗಳ ಕಾಲ ಆಬಾಲವೃದ್ಧರಾಗಿ ಎಲ್ಲರನ್ನೂ ಹಿಡಿದಿಟ್ಟು ಎಲ್ಲರ ಮನ ರಂಜಿಸಿತು. ಶೃಂಗಾಪುರಾಧೀಶ್ವರಿ ಶಾರದೆಯಾಗಿ ಒಮ್ಮೆ ಮೈತಳೆದರೆ ಮತ್ತೊಮ್ಮೆ ಕಡಗೋಲನ್ನು ಪುಟ್ಟ ಕೃಷ್ಣನ ಕೈಯಿಂದ ಬೇಡುವ ತಾಯಿ ಯಶೋದೆಯಾಗಿ ಅತ್ಯಂತ ಸುಲಭವಾಗಿ ಪರಕಾಯ ಪ್ರವೇಶ ಮಾಡಿದರು.

ಅಲ್ಲದೆ ವೀಕ್ಷಕರನ್ನು ಸಹ ತಮ್ಮ ಅಭಿನಯದ ಮೂಲಕ ತಮ್ಮ ಲೋಕಕ್ಕೆ ಸೆಳೆದೊಯ್ದರು. ಹೆಚ್ಚಿನ ನೃತ್ಯಗಳ ನೃತ್ಯ ಸಂಯೋಜನೆ ನಮಿತಾ ದೇಸಾಯಿಯವರ ಗುರು ಶ್ರೀಮತಿ ಭಾನುಮತಿಯವರದ್ದಾಗಿತ್ತು. ಗಣೇಶ್ ದೇಸಾಯಿಯವರು ಹಾಡಿದ "ಉತ್ತಮರ ಸಂಗ ಎನಗಿತ್ತು ಸಲಹೋ" ಕೃತಿಗೆ ಸ್ವತಃ ತಾವೇ ನೃತ್ಯ ಸಂಯೋಜಿಸಿದ್ದ ನಮಿತಾ ದೇಸಾಯಿಯವರು ಅದನ್ನು ನರ್ತಿಸಿದಾಗ ದಾಸರ ಮನಸ್ಸಿನ ಭಾವ ಸಂಪೂರ್ಣವಾಗಿ ಹೊರಬಂದಿತ್ತು.

Namita Desai
ನಾಟ್ಯದ ನಂತರ ಗಣೇಶ್ ದೇಸಾಯಿಯವರ ಪರಿಚಯದೊಂದಿಗೆ ಸಂಗೀತ ಕಾರ್ಯಕ್ರಮ ಪ್ರಾರಂಭವಾಯಿತು. ಅವರ ಗಾಯನ ಪ್ರಾರಂಭಿಸಿದ ತಕ್ಷಣ ಇಂತಹಾ ಪ್ರತಿಭೆ ತಮ್ಮ ಮುಂದಿದೆಯೆಂದು ತಿಳಿಯದೆ ಇದ್ದ ಜನರು ದಂಗಾದರು. ದಾಸರ ಕೃತಿಗಳನ್ನು ಒಂದೊಂದಾಗಿ ಹಾಡಿ ಜನರೆಲ್ಲಾ ಬೇರೆಯೊಂದೇ ಲೋಕದಲ್ಲಿ ತೇಲಿಹೋಗುವಂತೆ ಮಾಡಿದರು. "ಶರಣು ನಿನಗೆ ಶರಣೆಂಬೆನು ವಿಠ್ಠಲ" ಕೃತಿಯನ್ನು ಪ್ರಾರಂಭಿಸಿ ಜನರಿಗೆ ವಿಠ್ಠಲನ ಹುಚ್ಚನ್ನೇ ಹಿಡಿಸಿದರು ಎಂದೇ ಹೇಳಬಹುದು. ಬರೀ ದಾಸರ ಕೃತಿಗಳಷ್ಟೇ ಅಲ್ಲದೆ ಜನಪ್ರಿಯ ಭಾವಗೀತೆಗಳನ್ನೂ ಅಷ್ಟೇ ಸುಲಲಿತವಾಗಿ, ಮಧುರವಾಗಿ ಹಾಗೂ ಭಾವಪೂರ್ಣವಾಗಿ ಹಾಡಿದರು.

"ಮಂಕುತಿಮ್ಮನ ಕಗ್ಗ" ದಿಂದ ಸಾಕಷ್ಟು ಕಗ್ಗಗಳನ್ನು ಹಾಡಿ ನಡುವೆ ಐರಸಂಗ ಅವರ ಕೆಲವು ಕವಿತೆಗಳನ್ನು ಉದಾಹರಿಸಿ ಉತ್ತಮ ಸಾಹಿತ್ಯಕ್ಕೆ ಇರುವ ಶಕ್ತಿಯ ಬಗ್ಗೆ ಮಾತನಾಡಿದರು. ಜನರನ್ನು ಒಳ್ಳೆಯ ಕನ್ನಡ ಸಾಹಿತ್ಯದ ಕಡೆ ಸೆಳೆಯುವ ಬಗ್ಗೆ ಅವರ ಆಸಕ್ತಿ ಇದೆಯೆಂದು ಇದರಿಂದ ತಿಳಿಯುತ್ತದೆ. ಅವರೇ ರಾಗ ಸಂಯೋಜಿಸಿದ ಜೋ ಜೋ ಶ್ರೀ ಕೃಷ್ಣ ಹಾಡಿದಾಗ ಜನರೆಲ್ಲ ಸಮ್ಮೋಹಶಕ್ತಿಗೆ ಒಳಗಾದವರಂತೆ ತಲೆಯಾಡಿಸುತ್ತಿದ್ದರು. ಸಭೆಯಲ್ಲಿದ್ದ ಕೆಲವು ಮಕ್ಕಳು ನಿಜವಾಗಿಯೂ ನಿದ್ದೆ ಹೋದರು. ಚಕೋರಂಗೆ ಚಂದ್ರಮನ ವಚನ ಮತ್ತು ಎದೆ ತುಂಬಿ ಹಾಡುವೆನು ಹಾಡಿನ ಮೂಲಕ ಕಾರ್ಯಕ್ರಮ ಮುಗಿಸಿದರು. ಆದರೆ ಕೇಳುಗರು ಯಾರಿಗೂ ತಮ್ಮ ಕುರ್ಚಿ ಬಿಟ್ಟೇಳುವ ಮನಸ್ಸೇ ಇರಲಿಲ್ಲ.

ಗಣೇಶ್ ದೇಸಾಯಿಯವರಿಗೆ ಅಮೋಘವಾಗಿ ತಬಲಾ ಸಾಥ್ ನೀಡಿದ ಆಂಜನೇಯ ಶಾಸ್ತ್ರಿಯವರನ್ನೂ ಇಲ್ಲಿ ಸ್ಮರಿಸಲೇ ಬೇಕು. ಜೊತೆಗೆ ತ್ರಿಶೂಲ್ ಮಲ್ಲಿಕಾರ್ಜುನರವರ ರಿದಮ್‌ಪ್ಯಾಡ್ ಮತ್ತು ಶ್ರೇಯಸ್ ಶ್ರೀನಿವಾಸ್ ತಬಲಾ ಕಾರ್ಯಕ್ರಮಕ್ಕೆ ಮೆರುಗು ತಂದಿತು.

ವಂದನಾರ್ಪಣೆಯ ನಂತರ ಆಯೋಜಿಸಿದ್ದ ಊಟದ ಕಡೆಯೂ ಸಾಗದೇ ಎಲ್ಲರೂ ವೇದಿಕೆಯ ಮೇಲೆ ಬಂದು ಕಲಾವಿದರನ್ನು ಅಭಿನಂದಿಸುವುದರಲ್ಲೇ ಮಗ್ನರಾಗಿದ್ದರು. ಅಂತೂ ಅಟ್ಲಾಂಟಾ ನೃಪತುಂಗ ಕನ್ನಡ ಕೂಟದ ವತಿಯಿಂದ ನಡೆದ ಈ ರಸಸಂಜೆಗೆ ಬಂದವರೆಲ್ಲ ಒಂದು ವಿಭಿನ್ನ ಅನುಭವಕ್ಕೆ ಸಿಕ್ಕಿ ಮೋಡಿಗೆ ಒಳಗಾದವರಂತೆ ಹಿಂದಿರುಗಿದರು.

ಈ ದೇಸಾಯಿ ದಂಪತಿಗಳು ಇನ್ನೂ ಡಿಸೆಂಬರ್‌ನವರೆಗೂ ಅಮೇರಿಕಾ ಪ್ರವಾಸದಲ್ಲಿರುತ್ತಾರೆ. ನಿಮ್ಮ ನಿಮ್ಮ ಊರುಗಳಿಗೂ ಕರೆಸಿ ಕಾರ್ಯಕ್ರಮ ಆಯೋಜಿಸಿ. ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಉತ್ತಮ ಜ್ಞಾನ, ಅದ್ಭುತವಾದ ಕಂಠ ಇವೆರಡರ ಜೊತೆ ಸಾಹಿತ್ಯದ ಒಲವು ಸೇರಿದರೆ ಹೇಗಿರಬಹುದೆಂಬ ಒಂದು ಉದಾಹರಣೆಯನ್ನು ನೋಡಬಹುದು. ನಿಮಗೆ ಖಂಡಿತಾ ನಿರಾಸೆಯಾಗುವುದಿಲ್ಲ. ಅವರ ಬಗ್ಗೆ ಮತ್ತು ಅವರ ಮುಂದಿನ ಕಾರ್ಯಕ್ರಮಗಳ ಬಗೆಗಿನ ವಿವರಕ್ಕೆ ಅವರ ಬ್ಲಾಗ್ http://namitaganesh.blogspot.com/ಗೆ ಭೇಟಿ ನೀಡಿ.

ನಮಿತಾ ಮತ್ತು ಗಣೇಶ್ ದೇಸಾಯಿ ಸಂದರ್ಶನ »

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Please Wait while comments are loading...