ನಮಿತಾ ಮತ್ತು ಗಣೇಶ್ ದೇಸಾಯಿ ಸಂದರ್ಶನ

By: * ಮಂಗಳ ಉಡುಪ, ಅಟ್ಲಾಂಟ
Subscribe to Oneindia Kannada
Namita Desai and Ganesh Desai
ಪ್ರಶ್ನೆ: ನಿಮ್ಮ ತಾಯಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತ ಪರಿಣಿತೆ ಹಾಗೂ ಶಿಕ್ಷಕಿ. ಆದರೆ ನಿಮಗೆ ನೃತ್ಯದಲ್ಲಿ ಆಸಕ್ತಿ ಹೇಗೆ ಬಂತು?

ನಮಿತಾ ದೇಸಾಯಿ : ನನ್ನ ಅಮ್ಮನಿಗೆ ಅವರು ಚಿಕ್ಕವರಿದ್ದಾಗಿನಿಂದ ನೃತ್ಯ ಕಲಿಯಬೇಕೆಂದು ತುಂಬಾ ಆಸೆ ಇತ್ತು. ಆದರೆ ಅದು ಈಡೇರಿರಲಿಲ್ಲ. ಅದಕ್ಕೆ ನನಗಾದರೂ ಕಲಿಸಬೇಕೆಂದು ಅವರು ಪ್ರಯತ್ನ ಪಟ್ಟರು. ಆದರೆ ಧಾರವಾಡದಲ್ಲಿ ಆಗ ಯಾವ ಗುರುಗಳೂ ಸಿಗಲಿಲ್ಲ. ಕೆ.ರಾಮಮೂರ್ತಿ ಎನ್ನುವ ಎಕನಾಮಿಕ್ಸ್ ಪ್ರೊಫೆಸರ್ ಒಬ್ಬರು ನೃತ್ಯದ ಬಗ್ಗೆ ನಡೆಸಿದ ಕಾರ್ಯಾಗಾರದಲ್ಲಿ ಸೇರಿದ ನಂತರ ನನಗೆ ತುಂಬಾ ಆಸಕ್ತಿ ಹುಟ್ಟಿತು. ನಂತರ ಬೆಂಗಳೂರಿಗೆ ಬಂದು ಉಷಾ ದಾತಾರ್ ಅವರ ಬಳಿ ಕಲಿತೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನೃತ್ಯದಲ್ಲೇ ಸ್ನಾತಕೋತ್ತರ ಪದವಿ ಮಾಡಿದೆ. ಈಗ ಭಾನುಮತಿ ಅವರ ಬಳಿ ಅಭ್ಯಸಿಸುತ್ತಿದ್ದೇನೆ.

ಪ್ರ : ದೂರದರ್ಶನದಲ್ಲಿ ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೀರಿ. ನೃತ್ಯದಲ್ಲಿನ ನಟನೆಗೂ ತೆರೆಯ ಮೇಲಿನ ನಟನೆಗೂ ನಿಮಗನಿಸುವ ವ್ಯತ್ಯಾಸವೇನು?

ನ.ದೇ. : ಕಿರುತೆರೆಯ ಮೇಲೆ ನಟಿಸಲು ನಾನು ಕಲಿತ ನೃತ್ಯ ತುಂಬಾ ಉಪಯೋಗವಾಯಿತು. ನೃತ್ಯದಲ್ಲಿ ಮಾಡುವ ಅಭಿನಯದಲ್ಲಿ ಸಾಕಷ್ಟು ಉತ್ಪ್ರೇಕ್ಷೆ ಇರುತ್ತದೆ. ಮಾತಿನ ಸಹಾಯವಿಲ್ಲದೆ ಭಾವವನ್ನು ತೋರಿಸಬೇಕು. ಆದರೆ ಧಾರಾವಾಹಿಗಳಲ್ಲಿ ನಟಿಸುವಾಗ ನೃತ್ಯದ ಅಭಿನಯಕ್ಕಿಂತ ಕಡಿಮೆ ನಟಿಸಿದರೆ ಸಾಕಾಗುತ್ತದೆ. ನನಗೆ ಈಗಲೂ ನಾಟ್ಯ ಮತ್ತು ಅದಕ್ಕೆ ಪೂರಕವಾದ ಅಭಿನಯ ತುಂಬ ಇಷ್ಟ, ನಿಜವಾದ ಕಲೆಯನ್ನು ತೋರಿಸಲು ಅದರಿಂದ ಸಾಧ್ಯವಾಗುತ್ತದೆ. ಈ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಜ್ಞಾನದಿಂದ ಭಾರತೀಯ ಸಂಸ್ಕೃತಿಯನ್ನು ಮೆಚ್ಚಿ ಆನಂದಿಸುವ ಗುಣ ನನಗೆ ಬಂದಿದೆ.

ಪ್ರ: ಇದು ನಿಮ್ಮ ಮೊದಲ ಅಮೇರಿಕಾ ಪ್ರವಾಸ, ಹೇಗೆ ಅನ್ನಿಸುತ್ತಿದೆ?

ನ.ದೇ. : ನಿಜವಾಗಿಯೂ ಸಂತೋಷವಾಗಿದೆ. ಅಲ್ಲಿಂದ ಬಂದು ಇಲ್ಲಿ ನೀವು ತೋರಿಸುತ್ತಾ ಇರೋ ಪ್ರೀತಿ, ಆದರಾತಿಥ್ಯ ಇವುಗಳನ್ನು ನೋಡಿ ಆಶ್ಚರ್ಯವಾಗುತ್ತಿದೆ. ನಮ್ಮ ಸಂಸ್ಕೃತಿಯ ಬಗ್ಗೆ ಇಂಥ ಅಭಿಮಾನವಿಟ್ಟುಕೊಂಡಿರುವುದೇ ದೊಡ್ಡ ವಿಷಯ.

ಗಣೇಶ್ ದೇಸಾಯಿ :

ಪ್ರಶ್ನೆ : ಸಂಗೀತದ ಕಡೆ ನಿಮ್ಮನ್ನು ಸೆಳೆದ ಶಕ್ತಿ ಯಾವುದು?

ಗ.ದೇ : ನಾನು ಬೆಳೆಯುತ್ತಿರುವಾಗ ಮನೆಯಲ್ಲಿ ಸಂಗೀತದ ವಾತಾವರಣವೇ ಇತ್ತು. ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಬಳಿ ನಮ್ಮ ಊರು. ಮನೆಯಲ್ಲಿ ಯಕ್ಷಗಾನ, ನಾಟಕ ಪರಂಪರೆಯಿಂದ ನಡೆದುಕೊಂಡು ಬಂದಿತ್ತು. ನಮ್ಮ ತಂದೆಯವರ ಭಾಗವಹಿಸುವಿಕೆಯೇ ನನಗೆ ಒಂದು ರೀತಿಯ ಪ್ರೇರಣೆ ಆ ವಯಸ್ಸಿಗೆ ಆಯಿತು. ನಂತರ ಶಿರಸಿಗೆ ವಿದ್ಯಾಭ್ಯಾಸಕ್ಕೆ ಬಂದಾಗ ಶಾಸ್ತ್ರೀಯ ಸಂಗೀತವನ್ನು ಸುಜಾತ ಭಟ್ ಹಾಗೂ ಆರ್.ಪಿ.ಅಸುಂಡಿಯವರಿಂದ ಕಲಿತೆ. ದತ್ತಾತ್ರೇಯ ಹೆಗಡೆಯವರಿಂದ ತಬಲಾ ಅಭ್ಯಾಸ ಮಾಡಿದೆ. ಮಾರ್ಕೆಟಿಂಗ್ ಮತ್ತು ಹ್ಯೂಮನ್ ರಿಸೋರ್‌ಸಸ್ ವಿಭಾಗದಲ್ಲಿ ಎಮ್.ಬಿ.ಎ ವ್ಯಾಸಂಗ ಮಾಡಲು ಬೆಂಗಳೂರಿಗೆ ಬಂದಾಗ ಉಭಯ ಗಾನ ವಿದುಷಿ ಗುರು ಶ್ಯಾಮಲಾ ಜಿ ಭಾವೆ ಅವರ ಬಳಿ ಕೂಡ ಅಭ್ಯಾಸ ಮಾಡಿದೆ.

ಪ್ರ: ಶಾಸ್ತ್ರೀಯ ಸಂಗೀತದಿಂದ ಸುಗಮ ಸಂಗೀತದ ಕಡೆ ಹೇಗೆ ಆಸಕ್ತಿ ಹುಟ್ಟಿತು?

ಗ.ದೇ : ಚಿಕ್ಕವನಾಗಿದ್ದಾಗಿಂದ ಸಾಕಷ್ಟು ಸಿನೆಮಾ ಹಾಡುಗಳು, ಭಾವಗೀತೆಗಳನ್ನು ಕೇಳುತ್ತಲೇ ಬೆಳೆದೆ. ಕಾಲೇಜಿನಲ್ಲಿದ್ದಾಗ ಒಂದು ಸ್ಪರ್ಧೆಗೆಂದು ಧಾರವಾಡಕ್ಕೆ ಹೋದಾಗ ಅಲ್ಲಿ ಐರಸಂಗ ಎನ್ನುವ ಕವಿ ಮತ್ತು ಅವರ ಕಾವ್ಯಗಳ ಪರಿಚಯವಾಯಿತು. ಆಗ ಇವರ ಕವಿತೆಗಳಂತೇ ಎಷ್ಟೊಂದು ಒಳ್ಳೆಯ ಕವಿತೆಗಳು ಜನರನ್ನು ಮುಟ್ಟದೆ ಹೋಗುತ್ತಿವೆಯಲ್ಲ ಅನ್ನಿಸಿತು. ನನ್ನ ಹಾರ್ಮೋನಿಯಂ ಗುರುಗಳಾದ ವಸಂತ್ ಕನಕಾಪುರ್ ಅವರ ಪ್ರೋತ್ಸಾಹವೂ ಸೇರಿ ಕವಿತೆಗಳಿಗೆ ರಾಗ ಸಂಯೋಜಿಸುವುದಕ್ಕೆ ಪ್ರಾರಂಭಿಸಿದೆ.

ಪ್ರ :
ನಿಮ್ಮ ಸಂಗೀತದ ಮೂಲಕ ಸಾಧಿಸಬೇಕು ಎಂದುಕೊಂಡಿರುವ ಧ್ಯೇಯ, ಉದ್ದೇಶ ಏನಾದರೂ ಇದೆಯೆ?

ಗ.ದೇ : ಮೊಟ್ಟ ಮೊದಲಿಗೆ ಒಳ್ಳೆಯ ಮನುಷ್ಯನಾಗಬೇಕು. ಕವಿಗಳ ಸಾಹಿತ್ಯವನ್ನು ನಮ್ಮ ಭಾವನೆಗಳ ಮೂಲಕ ಜನರಿಗೆ ತಲುಪಿಸಬೇಕು. ಜನರಿಗೆ ಹಾಡಿನ ಅರ್ಥ ತಿಳಿಯಬೇಕು. ಅರ್ಥ ತಿಳಿದು ಅವರು ತಮ್ಮ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಬೇಕು. ಅದಕ್ಕೆ ನಾನು ಅಳವಡಿಸುವ ಸಂಗೀತದಲ್ಲಿ ಸಾಹಿತ್ಯಕ್ಕೆ ಪ್ರಾಮುಖ್ಯತೆ ಕೊಟ್ಟು ವಾದ್ಯಗಳ ಅಬ್ಬರ ಕಡಿಮೆ ಇಡುವ ಪ್ರಯತ್ನ ಮಾಡಿದ್ದೀನಿ. ಹಾಡಿಗೆ ಪೂರಕವಾದ ವಾದ್ಯ, ಸಂಗೀತವನ್ನು ನೀಡಿ ಅಪರಿಚಿತ ಕವಿಗಳ, ಅವರ ಸಾಹಿತ್ಯಗಳನ್ನ ಜನರಿಗೆ ಪರಿಚಯ ಮಾಡಿಸಬೇಕು ಅನ್ನುವುದು ನನ್ನ ಉದ್ದೇಶ.

ಪ್ರ: ಅಟ್ಲಾಂಟ ಕನ್ನಡಿಗರು ನಿಮ್ಮ ಗಾಯನಕ್ಕೆ ಸಂಪೂರ್ಣ ಮರುಳಾದರು ಅನ್ನಿಸುತ್ತೆ. ನಿಮಗೆ ನಿನ್ನೆಯ ಕಾರ್ಯಕ್ರಮದ ಬಗ್ಗೆ ಏನನ್ನಿಸಿತು?

ಗ.ದೇ: ಕಲಾವಿದರಿಗೆ ಎಲ್ಲಾ ಕಾರ್ಯಕ್ರಮಗಳೂ ಚೆನ್ನಾಗಿಯೇ ಆಗುತ್ತೆ ಎಂದು ಹೇಳಲಾಗುವುದಿಲ್ಲ. ಕಲೆ ಅನ್ನುವುದು ಬರೀ ಮನರಂಜನೆ ಅಲ್ಲ. ಅದು ಒಂದು ರೀತಿಯ ಮೆಡಿಟೇಶನ್ ಅನ್ನಬಹುದು. ಕೆಲವೊಮ್ಮೆ ಮಾತ್ರ ಅಂತಹ ಅನುಭವವಾಗುತ್ತೆ. ನಿನ್ನೆಯ ಕಾರ್ಯಕ್ರಮದಲ್ಲಿ ಪಕ್ಕವಾದ್ಯದವರ, ಧ್ವನಿವರ್ಧಕಗಳ ವ್ಯವಸ್ಥೆ, ಜನರ ಪ್ರತಿಕ್ರಿಯೆ ಎಲ್ಲವೂ ನನ್ನ ಮಟ್ಟಿಗೆ ತುಂಬಾ ಪರಿಣಾಮಕಾರಿಯಾಗಿತ್ತು. ಇದರಿಂದಾಗಿ ಕಾರ್ಯಕ್ರಮ ಚೆನ್ನಾಗಿ ಬಂದಿರಬಹುದು.

ಪ್ರ: ಕರ್ನಾಟಕದಲ್ಲಿ ಮತ್ತು ಭಾರತದಲ್ಲಿ, ಗಾಯಕರಿಗೆ ಅದರಲ್ಲಿ ಶಾಸ್ತ್ರೀಯ ಸಂಗೀತ ಕಲಾವಿದರಿಗೆ ತಕ್ಕಮಟ್ಟಿಗಿನ ಪ್ರೋತ್ಸಾಹ/ಪ್ರಚಾರ ಸಿಗುತ್ತಿದೆ ಎಂದು ನಿಮಗನ್ನಿಸುತ್ತದೆಯೆ?

ಗ.ದೇ : ಪ್ರಾಮಾಣಿಕವಾಗಿ ಮಾಡಿದ ಪ್ರಯತ್ನ ಯಾವತ್ತೂ ವ್ಯರ್ಥವಾಗುವುದಿಲ್ಲ ಅನ್ನೋದು ನನ್ನ ನಂಬಿಕೆ. ನನ್ನ ಮಟ್ಟಿಗೆ ಅದು ನಿಜ ಕೂಡ.

ಪ್ರ: ನೀವೇ ಸ್ವತ: ಸಂಗೀತ ಸಂಯೋಜನೆ ಮಾಡುವುದರಿಂದ ಅದರ ಬಗ್ಗೆ ಏನಾದರೂ ಹೇಳಿ.

ಗ.ದೇ : Grammar of Carnatic music, Art of Hindusthani music and Science of Western music ಇದಿಷ್ಟಿದ್ದರೆ ಒಳ್ಳೆಯ ಹಾಡುಗಳ ಸೃಷ್ಟಿ ಸಾಧ್ಯ ಎನ್ನುವುದು ನನ್ನ ನಂಬಿಕೆ. ನಾನೇ ಕಂಪೋಸ್ ಮಾಡಿ ಹಾಡಿದಾಗ ಸಿಗುವ ತೃಪ್ತಿ ಬೇರೆ. ನಾನು ರಾಗ ಸಂಯೋಜಿಸುವಾಗ ಆ ಹಾಡಿನ ಅರ್ಥವನ್ನು ಮೊದಲು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇನೆ. ಕೆಲವೊಂದು ಸಾಹಿತ್ಯದ ಒಳಾರ್ಥಗಳೇ ಬೇರೆ ಇರುತ್ತವೆ, ಅದನ್ನು ಮನನ ಮಾಡಿಕೊಂಡು ಅದರ ಭಾವಕ್ಕೆ ತಕ್ಕಂತೆ ಹಾಡುವ ಪ್ರಯತ್ನ ಮಾಡುತ್ತೇನೆ.

ಪ್ರ:
ಒಬ್ಬ ಯಶಸ್ವೀ ಗಾಯಕನಾಗುವುದಕ್ಕೆ ಬೇಕಾದ ಅಂಶಗಳೇನು?

ಗ.ದೇ : ಭಾರತೀಯ ಸಂಗೀತ, ಕರ್ನಾಟಕ ಶಾಸ್ತ್ರೀಯವಾಗಲೀ ಹಿಂದೂಸ್ಥಾನೀ ಯಾಗಲೀ ಅದನ್ನು ಮೊದಲು ಕಲಿಯಬೇಕು. ಮನೆಯ ಬುನಾದಿ ಭದ್ರವಾಗಿದ್ದರೆ ಯಾವ ರೀತಿಯ ಮನೆಯನ್ನಾದರೂ ಕಟ್ಟುವ ಹಾಗೇ ಶಾಸ್ತ್ರೀಯ ಸಂಗೀತದ ಭದ್ರ ಬುನಾದಿಯ ಮೇಲೆ ಯಾವ ರೀತಿಯ ಸಂಗೀತವನ್ನಾದರೂ ಸುಲಭವಾಗಿ ಕಲಿಯಬಹುದು. ಜೊತೆಗೆ ಉಚ್ಛಾರಣೆಯೂ ಬಹಳ ಮುಖ್ಯ. ಅದರ ಬಗ್ಗೆಯೂ ಸಾಕಷ್ಟು ಗಮನ ಕೊಡಬೇಕು.

ಪ್ರದೀಪ್ ವಿಠ್ಠಲಮೂರ್ತಿಯವರು ನೃಪತುಂಗ ಇ-ನ್ಯೂಸ್‌ಗೋಸ್ಕರ ಮಾಡಿದ ಸಂದರ್ಶನದ ವೀಡಿಯೋ ತುಣುಕು ಇಲ್ಲಿದೆ :
http://www.youtube.com/watch?v=-qouTVPI_iY
http://www.youtube.com/watch?v=OQh-Ch81j8M
http://www.youtube.com/watch?v=1oAzeWkCois

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Please Wait while comments are loading...