• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಪಿಗೆ ಮರದ ಹಸಿರೆಲೆ ನಡುವೆ ಏನಿತ್ತು?

By Staff
|
Shashidhar Kote and Malathi Sharma in Cary
ಉತ್ತರ ಕೆರೋಲಿನಾದ ಸಂಪಿಗೆ ಕನ್ನಡ ಸಂಘ ಹಾಗೂ ಸವಿತಾ ರವಿಶಂಕರ್ ಅವರ ಮನೆಯಂಗಳದಲ್ಲಿ ಕರ್ನಾಟಕದ ಖ್ಯಾತ ಗಾಯಕರಾದ ಶಶಿಧರ ಕೋಟೆ ಮತ್ತು ಮಾಲತಿ ಶರ್ಮಾ ಸಂಗೀತ ಸೌರಭ.

* ಲಕ್ಷ್ಮಿನಾರಾಯಣ ಗಣಪತಿ, ಕೇರಿ; ನಾರ್ಥ್ ಕೆರೋಲಿನ

ಕಲೆಯ ಬೆಲೆ ಎಲ್ಲರಿಗಿಂತಲೂ ಚೆನ್ನಾಗಿ ಅರಿವಿರುವುದು ಕಲಾವಿದರಿಗೇ. ತಮ್ಮ ಸೃಷ್ಟಿಯ ಕಂಪನ್ನು ಅಭಿಮಾನಿಗಳಿಗೆ ಉಣಿಸಿ ಅವರ ಪ್ರತಿಕ್ರಿಯೆಗೆ ಹಾತೊರೆದು ಧನ್ಯರಾಗ ಬೇಕೆನ್ನುವ ಇಚ್ಛೆ ಇದ್ದರೂ, ಕಲೋಪಾಸನೆ ಕಲಾವಿದರ ಅಂತರಂಗದ ಅಗತ್ಯವೂ ಹೌದು. ಶಿವರುದ್ರಪ್ಪನವರ ಕವಿವಾಣಿಯಂತೆ, "..ಹಾಡುವುದು ಅನಿವಾರ್ಯ ಕರ್ಮ ..." ಮತ್ತು " ... ಹಾಡೊ ಹಕ್ಕಿಗೆ ಬೇಕೆ ಬಿರುದು ಸನ್ಮಾನ.." ಎಂಬ ಒಳ ತಿರುಳು. ಒಟ್ಟಿನಲ್ಲಿ " ಎದೆ ತುಂಬಿ ಹಾಡುವ " ಕಲಾವಿದ ಪೂರ್ಣಗೊಳ್ಳುವುದು ಕೇಳುಗರ ಅಭಿಮಾನದಿಂದಲೇ. ಇದಕ್ಕೊಂದೆರಡು ಉದಾಹರಣೆ ಎಂಬಂತೆ ಮೊನ್ನೆ ನಮ್ಮಲ್ಲಿಗೆ ಬಂದ ಇಬ್ಬರು ಕಲಾವಿದರ ಬಗ್ಗೆ ಅಭಿಮಾನದಿಂದ ಬರೆಯುತ್ತಿದ್ದೇನೆ.

ಮತ್ತೆ ದಸರೆ ಬಂದುದು ನಮಗೆ ತಿಳಿಯುವುದು ನಮ್ಮ ಸ್ನೇಹಿತ ದಂಪತಿಗಳಾದ ಸವಿತಾ ಹಾಗೂ ರವಿಶಂಕರ್ ಅವರುಗಳಿಂದ. ನಮ್ಮೂರಿನಲ್ಲಿ ಮೊದ ಮೊದಲಿಗೆ ಉತ್ಸುಕತೆಯಿಂದ ಈ ಹೆಣ್ಣು ಮಗಳು ಆರಂಭಿಸಿದ ಭಾರತೀಯ ಸಂಪ್ರದಾಯ (ದಸರಾ ಬೊಂಬೆ) ಈಗ ಒಳ್ಳೆ ರಂಗೇರಿಸಿಕೊಂಡು ಹಲವಾರು ಹೆಂಗಳೆಯರು ಗೊಂಬೆ ಇರಿಸಲಾರಂಭಿಸಿದ್ದಾರಂತೆ. ಹೆಚ್ಚಾಗಿ ಬರೆ ಹೆಂಗಸರು ಮಕ್ಕಳಷ್ಟೆ ಕೂಡಿ "ಅರಿಶಿನ ಕುಂಕುಮ" ಕ್ಕೆ ಆಮಂತ್ರಣ ನೀಡುವುದರಿಂದ ಸ್ವಲ್ಪ ಮಂದಿ ಗಂಡಸರಿಗೆ ತಲೆ ಬಿಸಿಯಾಗಿದೆಯಂತೆ. ತಲೆಬಿಸಿಗಿಂತಲೂ ಹೊಟ್ಟೆ ಬಿಸಿ ಎನ್ನಬಹುದು; ಇರಲಿ ಬಿಡಿ. ನಿಜವಾಗಿ ನಮ್ಮ ಸಂಸ್ಕೃತಿ ಸಂಪ್ರದಾಯಗಳು ಉಳಿಯುವುದಾದರೆ ನಮ್ಮ ಮನೆಗಳಲ್ಲಿ, ನಮ್ಮವರು ಆಚರಿಸುವ ಹಬ್ಬಗಳ ಮೂಲಕವೇ ಎನ್ನಿ.

ಈ ಬಾರಿ ದಸರೆಗೆ ಸರಿಯಾಗಿ ನಮ್ಮ ಕನ್ನಡ ಸಂಘ ಸಂಪಿಗೆ ಶಶಿಧರ ಕೋಟೆ ಯವರ "ಸಂಗೀತ ಲಹರಿ" ಕಾರ್ಯಕ್ರಮವಿರಿಸಿಕೊಂಡರೆ, ಅದಕ್ಕೆ ಮುನ್ನಾ ದಿನ ಸವಿತಾ ಮನೆಯಲ್ಲಿ ದಸರಾ ಗೊಂಬೆಗಳ ಸಂಭ್ರಮದೊಂದಿಗೆ ಗಾಯಕಿ "ಮಾಲತಿ ಶರ್ಮ" ರ ಗಾಯನ ಕಾರ್ಯಕ್ರಮ. ಹಿಂದೆರಡು ಬಾರಿ ನಮ್ಮ ಕನ್ನಡ ಸಂಘದ ಆಶ್ರಯದಲ್ಲಿ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಲತಿ ನಮ್ಮೂರಿಗೆ ಹೊಸಬರಲ್ಲ. ಈ ಬಾರಿ ಮಾತ್ರ, ಸ್ನೇಹಿತರ ಮನೆಯಲ್ಲಿ ಖಾಸಗಿ ಸಂಭ್ರಮದ ಆಚರಣೆಯ ಪಾಲಾಗಿ ಒದಗಿ ಬಂದಿದ್ದರು. ನನಗೋ ಹಳೆಯ ದಿನಗಳ ನೆನಪು. ಗಣಪತಿ ಹಬ್ಬ, ದಸರಾ ಪೂಜೆಯ ನೆಪದಲ್ಲಿ ಖರ್ಚಿಲ್ಲದೆ ಪ್ರಸಾದದಿಂದ ಹೊಟ್ಟೆ ತುಂಬಿಸಿಕೊಂಡು, ಸಂಗೀತ ಕೇಳಿ ಖುಷಿಪಟ್ಟ ದಿನಗಳ ನೆನಪು.

ಶಿವರುದ್ರಪ್ಪ, ಪರಮೇಶ್ವರ ಭಟ್ಟ, ಬೇಂದ್ರೆ, ನಿಸಾರ್ ಹೀಗೆ ಹಲವು ಕವಿಗಳ ಹಾಡನ್ನು ತಮ್ಮ ಸೊಗಸಾದ ಕಂಠದಲ್ಲಿ ನಮಗುಲಿಯುತಿದ್ದ ಮಾಲತಿಯವರ ಮುಖದಲ್ಲೊಂದು ಸಂತೃಪ್ತಿ ಕಾಣುತ್ತಿತ್ತು. ಖಾಸಾ ಗೆಳತಿಯ ಮನೆಯಲ್ಲಿ ಖಾಸಗಿ ಕಛೇರಿ ಕೊಡುತ್ತಿದ್ದೇನೆಂಬುದಕ್ಕೋ ಏನೊ ಅಂದು ಕೊಂಡಿದ್ದೆ. ಎಲ್ಲ ಕವಿಗಳ ಭಾವಕ್ಕೆ ಜೀವ ತುಂಬಿ ಹಾಡಿದವರು ಕೊನೆಗೆ ಕಾರ್ಯ ಮುಕ್ತಾಯಗೊಳಿಸುತ್ತ, ತಮಗೆ ಸ್ವಲ್ಪ ಗಂಟಲಿನ ತೊದರೆ ಇದ್ದರೂ ಕುಳಿತು ಕೇಳಿದ ನಮಗೆ ವಂದನೆಗಳನ್ನರ್ಪಿಸುತ್ತಾ "..ಎದೆ ತುಂಬಿ ಹಾಡಿದ್ದರು..". ಸಂಗೀತ ಅವರ ಕರ್ಮನಿಷ್ಠೆ ಎಂದು ನಮ್ಮೆಲ್ಲರ ಮುಂದೆ ಪ್ರೀತಿಯಿಂದ ಸಾರಿದ್ದರು. ಅವರಿಗಿದ್ದ ಗಂಟಲಿನ ತೊಂದರೆ ನನಗಂತೂ ಕೇಳಿರಲಿಲ್ಲ. ಮುಕ್ತ ಮನಸ್ಸಿನಿಂದ ಮುಗ್ಧತೆಯಿಂದ ಕವಿ ಭಾವವನ್ನು ಅನುಭವಿಸಿ ಹಾಡಿದುದರ ಮಾಧುರ್ಯ ಮಾತ್ರ ಅರಿವಾಗಿತ್ತು.

ಇದೇ ಸಿಹಿ ಗುಂಗಿನಲ್ಲಿದ್ದಾಗ ಮಾರನೇ ದಿನ "ಶಶಿಧರ ಕೋಟೆ" ಯವರ ಸಂಗೀತ ಲಹರಿ ಕಾರ್ಯಕ್ರಮ. ನಮ್ಮೂರಿನ ಪಾರ್ಥ ಆಜಿಯ ಕೊಳಲು, ಸುಧೀಂದ್ರ ರ ಮೃದಂಗ ಹಾಗೂ ರವಿ ಕಲ್ಮಠ್ ಅವರ ಕೀ ಬೋರ್ಡ್ ಜೊತೆ ಸೇರಿ ಹಾಡಿದ ಹಾಡುಗಾರನಲ್ಲಿ ಹುಡುಗನಂತಹ ಉತ್ಸಾಹ - ಅಪರೂಪಕ್ಕೆ ಕಾಣುವಂತಹುದು. ತಮ್ಮ ಗಾನಸಿರಿಯಲ್ಲಿ ಎಂತವರನ್ನೂ ಹಿಡಿದಿರಿಸಬಲ್ಲ ಶಶಿಧರ್ ಎದುರು ಕುಳಿತಿದ್ದ ನಾವು ನೂರಿಪ್ಪತ್ತೈದೇ ಮಂದಿ ಎಂದು ನಿರಾಸೆಗೊಳ್ಳದವರು ಹೇಳಿದ್ದು, "ನೀವೊಬ್ಬೊಬ್ಬರೂ ನನಗೆ ನೂರು ಮಂದಿಯಂತೆ" ಎಂದು. ಈ ವಾರಾಂತ್ಯದ ಗೋಳಿನಲ್ಲಿ ಭಾನುವಾರ ಮಧ್ಯಾಹ್ನದ ಕಾರ್ಯಕ್ರಮಕ್ಕೆ ಜನ ಬರುವುದು ಕಷ್ಟವೆಂದು ಸ್ವಲ್ಪ ಸಂಕೋಚದಿಂದಲೇ ಹೇಳಿದ್ದೆ. ಅಸಲು ನನಗೆ ಖೇದವೆನಿಸಿದ್ದು, ಇಷ್ಟೊಂದು ಪ್ರತಿಭಾವಂತ ಗಾಯಕನನ್ನು ಕೇಳುವ ಸುಖ ಕಳೆದುಕೊಂಡವರ ಬಗ್ಗೆ ಎನ್ನಿ.

ಇರಲಿ ಸಂಸಾರ ತಾಪತ್ರಯ ಜಾಸ್ತಿಯಾಗೋದು ಭಾನುವಾರವೇ. ಶಾಸ್ತ್ರೀಯ, ಜಾನಪದ, ಭಾವಗೀತೆಗಳೆಲ್ಲದರ ಸೊಗಸನ್ನುಣಿಸಿದ ಕಂಠ ಸಿರಿ ಎಲ್ಲರೂ ಮಾರು ಹೋಗುವಂತಹುದು. ಹಲವಾರು ಪ್ರತಿಭಾವಂತ ಗಾಯಕರುಗಳ ಕಂಠದಲ್ಲಿ ಹಿಂದೆ ಕೇಳಿದ್ದ ಹಾಡುಗಳೂ ಸಹ ಕೋಟೆಯವರ ಸಂಗೀತ ಲಹರಿಯ ಹೊಸ ಮಾಧುರ್ಯದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ್ದವು; ಸಭೆಯಲ್ಲಿದ್ದ ಹಿರಿಯರುಗಳೂ ತಲೆದೂಗಿದ್ದರೆನ್ನಿ. ಅವರ ಭಕ್ತಿಗೀತೆಗಳಲ್ಲಿ ನನಗೆ ಕಂಡಿದ್ದು ಅವರ ಸಾಹಿತ್ಯ ಮತ್ತು ಸಂಗೀತದ ಮೇಲಿನ ಭಕ್ತಿ ಮತ್ತು ಪ್ರೀತಿ. ಎಷ್ಟು ಹಾಡಿದರೂ ದಣಿಯದ ಕಲಾವಿದ ಮನಸ್ಸು. ಅದಕ್ಕೇ ನೋಡಿ ಈ ಇಬ್ಬರೂ ಕಲಾವಿದರನ್ನೂ ಮನಃಪೂರ್ವಕವಾಗಿ ನಮ್ಮೂರಿನವರ ಪರವಾಗಿ ಅಭಿನಂದಿಸುತ್ತೇನೆ. ನಿಮ್ಮೂರಿನ ಅಕ್ಕಪಕ್ಕ ಇವರುಗಳು ಬಂದರೆ ನಿಮ್ಮ ಕಿವಿ ಮನಸ್ಸುಗಳಿಗೆ ಸ್ವಲ್ಪ ಪುರುಸೊತ್ತು ಮಾಡಿಕೊಂಡು ಆನಂದಿಸಿ. ನಮಸ್ಕಾರ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more