• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೂರ್ವಕರಾವಳಿಯಲ್ಲಿ ಅಕ್ಕ ಸಮ್ಮೇಳನ-2010

By Staff
|

Satish Hosanagara
* ಸತೀಶ್ ಹೊಸನಗರ, ನ್ಯೂಜೆರ್ಸಿ

ನ್ಯೂಜರ್ಸಿ,(ಅಮೆರಿಕ)ಆ. 10 : ಉತ್ತರ ಅಮೆರಿಕಾ ಕನ್ನಡ ಕೂಟಗಳ ಆಗರ, ಅಕ್ಕ, ಆಯೋಜಿಸಿರುವ 6ನೇ ವಿಶ್ವ ಕನ್ನಡ ಸಮ್ಮೇಳನ ಅಮೆರಿಕಾದ ನ್ಯೂ ಜೆರ್ಸಿ ರಾಜ್ಯದಲ್ಲಿರುವ ಎಡಿಸನ್ ನಗರದಲ್ಲಿ ನಡೆಯಲಿದೆ. ಸಮ್ಮೇಳನದ ದಿನಾಂಕ ಸೆಪ್ಟೆಂಬರ್ 3ರಿಂದ 5, 2010. ಸ್ಥಳೀಯ "ಬೃಂದಾವನ" ಕನ್ನಡ ಕೂಟ ಹಾಗೂ ನೆರೆಯ ನ್ಯೂಯಾರ್ಕ್, ಡೆಲವೇರ್, ಪೆನ್ಸಿಲ್‌ವೇನಿಯಾ ಹಾಗೂ ಕನೆಕ್ಟಿಕಟ್ ರಾಜ್ಯಗಳಲ್ಲಿ ನೆಲೆಸಿರುವ ಕನ್ನಡಿಗರ ಸಹಯೋಗದೊಂದಿಗೆ ಎಡಿಸನ್ ನಲ್ಲಿರುವ ರಾರಿಟನ್ ಸೆಂಟರ್ ನಲ್ಲಿ ಸಮ್ಮೇಳನವನ್ನು ವ್ಯವಸ್ಥೆ ಮಾಡಲಾಗಿದೆ.

ಅಕ್ಕ ಸಂಸ್ಥೆಯ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಅಮರನಾಥ ಗೌಡ, ಅಕ್ಕ (AKKA) ಸಂಸ್ಥೆಯ ಹಾಲಿ ಅಧ್ಯಕ್ಷರಾದ ರವಿ ಡಂಕನಿಕೋಟೆ ಅವರು ಈ ವಿಷಯವನ್ನು ಸ್ಥಳೀಯ ಕಾಲಮಾನ ಆಗಸ್ಟ್ 8ರ ಶನಿವಾರ ಇಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ಅಕ್ಕ ಕಾರ್ಯದರ್ಶಿ ದಯಾಶಂಕರ್ ಆದಪ್ಪ, ನಿರ್ದೇಶಕರುಗಳಾದ ರಮೇಶ್ ಮಂಜೇಗೌಡ, ಬಸವರಾಜ ಶಿವಣ್ಣ, ಸತೀಶ್ ಗೆಜ್ಜೇನಹಳ್ಳಿ, ಶಿವಮೂರ್ತಿ ಕೀಲಾರ, ಮಾದೇಶ್ ಬಸವರಾಜು ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಇವರೊಂದಿಗೆ ಎಡಿಸನ್ ಕೌನ್ಸಿಲ್‌ಮನ್ ಸುಧಾಂಶು ಪ್ರಸಾದ್, ಹಾಗೂ ನ್ಯೂ ಜೆರ್ಸಿ ಅಸೆಂಬ್ಲಿಮನ್ ಉಪೇಂದ್ರ ಚಿವುಕುಲ ವೇದಿಕೆಯನ್ನು ಉಪಸ್ಥಿತರಿದ್ದರು.

ಸಾಧನಾ ಶಂಕರ್ ಅವರ ನಿರೂಪಣೆಯಲ್ಲಿ ಮೂಡಿಬಂದ ಕಾರ್ಯಕ್ರಮ ಜಯಂತಿ ನಾಡಿಗ್ ಅವರ "ಪರಬ್ರಹ್ಮ ರೂಪಂ ಗಣೇಶಂ ಭಜೇ" ಸುಶ್ರಾವ್ಯವಾದ ಪ್ರಾರ್ಥನೆಯಿಂದ ಆರಂಭವಾಯಿತು. ನಂತರ ಮಾತನಾಡಿದ ಬೃಂದಾವನದ ಹಾಲಿ ಅಧ್ಯಕ್ಷೆ ಉಷಾ ಪ್ರಸನ್ನ ಕುಮಾರ್, "ಬೃಂದಾವನ" ಕನ್ನಡ ಕೂಟದ ವತಿಯಿಂದ 2010ರ ವಿಶ್ವ ಕನ್ನಡ ಸಮ್ಮೇಳವನ್ನು ನಡೆಸುವ ಉದ್ದೇಶದಿಂದ ಕರೆಯಲಾಗಿದ್ದ "ಬೃಂದಾವನ" ನಿರ್ದೇಶಕರ ಸಭೆಯಲ್ಲಿ ಸಮ್ಮೇಳನ ಸಮಿತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯ್ತು ಎಂದರು. ಸಮ್ಮೇಳನದ ಪ್ರಧಾನ ಕಾರ್ಯಕಾರಿ ಸಮಿತಿಯಲ್ಲಿ ಸಂಚಾಲಕರಾಗಿ ವಿ. ಪ್ರಸನ್ನ ಕುಮಾರ್, ಮಧು ರಂಗಯ್ಯ, ಹಾಗೂ ಶಂಕರ್ ಶೆಟ್ಟಿ; ಕಾರ್ಯದರ್ಶಿಗಳಾಗಿ ಮೋಹನ್ ಕಡಬ, ಜಂಟಿ ಕಾರ್ಯದರ್ಶಿ ರಾಘವೇಂದ್ರ ಮೂರ್ತಿ, ಖಜಾಂಚಿಯಾಗಿ ವಿಜಯ್ ಮೂರ್ತಿ ಹಾಗೂ ಜಂಟಿ ಖಜಾಂಚಿಯಾಗಿ ಬೆನ್ ಕಾಂತರಾಜು ಅವರ ಹೆಸರುಗಳನ್ನು ಸಭೆಯಲ್ಲಿ ಪ್ರಕಟಿಸಲಾಯಿತು.

ಬೃಂದಾವನ ಸದಸ್ಯರಾದ ವಿಜಯ್ ಮೂರ್ತಿ ಅವರು ಮಾತನಾಡಿ ತಮ್ಮ ಕನ್ನಡ ಕೂಟದ ಬಗ್ಗೆ ಕಿರು ಮಾಹಿತಿ ನೀಡಿದರು. ಸಣ್ಣ-ಸಣ್ಣ ಕುಟುಂಬಗಳು ಕ್ರಮೇಣ ಗುಂಪಾಗಿ ಹಬ್ಬ-ಹರಿದಿನ ಹಾಗೂ ವಿಶೇಷ ಸಂದರ್ಭಗಳಲ್ಲಿ ಒಂದೆಡೆ ಸೇರುತ್ತಿದ್ದೆವು, ಈ ಒಗ್ಗಟ್ಟು ಮತ್ತು ಪ್ರಸನ್ನ ಕುಮಾರ್ ಅವರ ಮಾರ್ಗದರ್ಶನದಿಂದ ಬೃಂದಾವನ ಕನ್ನಡಕೂಟ ಮೈದಾಳಿ ದಷ್ಟಪುಷ್ಟವಾಗಿ ಬೆಳೆಯಿತು ಎಂದರು. ಕಳೆದ ನಾಲ್ಕೈದು ವರ್ಷಗಳ ಅವಧಿಯಲ್ಲಿ ಈ ಪ್ರಾಂತ್ಯದ ಕನ್ನಡಿಗರನ್ನು ಭಾವನಾತ್ಮಕವಾಗಿ ಒಗ್ಗೂಡಿಸುವ ಬೃಂದಾವನ ಚಟುವಟಿಕೆಗಳ ಸಿಂಹಾವಲೋಕನವನ್ನು ಮಾಡಿದರು.

ಮುಂದಿನ ವಿಶ್ವ ಕನ್ನಡ ಸಮ್ಮೇಳನವನ್ನು ನ್ಯೂ ಜೆರ್ಸಿಯಲ್ಲಿ ನಡೆಸುವುದಾಗಿ "ಅಕ್ಕ"(AKKA)ಅಧ್ಯಕ್ಷ ರವಿ ಡಂಕನಿಕೋಟೆ ಅವರು ಅಧಿಕೃತವಾಗಿ ಘೋಷಿಸಿದಾಗ ಸಭೆಯಲ್ಲಿ ಕರತಾಡನಗಳ ಮೂಲಕ ಹರ್ಷವನ್ನು ವ್ಯಕ್ತಪಡಿಸಲಾಯಿತು. ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ವಾಣಿಜ್ಯ-ವ್ಯವಹಾರದ ದೃಷ್ಟಿಯಿಂದ, ಹೆಚ್ಚು ಹೆಚ್ಚು ಕನ್ನಡಿಗರನ್ನು ಕಲೆಹಾಕಿ ಸಾಹಿತ್ಯ, ಅಭಿವೃದ್ಧಿ ಹಾಗೂ ಆರ್ಥಿಕ ಪೋಷಣೆಗಳ ಉದ್ದೇಶವನ್ನಿಟ್ಟುಕೊಂಡು ಮುಂದಿನ ವರ್ಷ ನ್ಯೂ ಜೆರ್ಸಿಯಲ್ಲಿ ನಡೆಯುವ ವಿಶ್ವ ಕನ್ನಡ ಸಮ್ಮೇಳನ ಯಶಸ್ವಿಯಾಗುವುದಾಗಿ ಅವರು ಸಮರ್ಥಿಸಿಕೊಂಡರು. ಇತ್ತೀಚೆಗೆ ಅಮೇರಿಕದಲ್ಲಿ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಚಾಂಪಿಯನ್‌ಶಿಪ್ ಪಡೆದ ಕಾವ್ಯ ಹಾಗೂ ಐಶ್ವರ್ಯ ಅವರನ್ನು ಅಭಿನಂದಿಸುವುದರ ಜೊತೆಗೆ ಕನ್ನಡ ಮೂಲದ ವಿದ್ಯಾರ್ಥಿಯೊಬ್ಬ ಎಸ್.ಎ.ಟಿ.ಯಲ್ಲಿ ನೂರಕ್ಕೆ ನೂರು ಅಂಕಗಳಿಸಿದ್ದನ್ನು ಪ್ರಸ್ತಾಪಿಸಿದರು.

ನಂತರ ಮಾತನಾಡಿದ ಅಮರನಾಥ ಗೌಡರು ಸಮ್ಮೇಳನದ ಮೊದಲ ದಿನ ಬಿಸಿನೆಸ್ಸ್ ಫೋರಮ್‌ನಿಂದ ಆರಂಭವಾಗಿ ನಂತರ ಎರಡು ದಿನಗಳಲ್ಲಿ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಜೊತೆಗೆ ಶಿಕ್ಷಣ, ಮನರಂಜನೆ, ಯೂಥ್ ಹಾಗೂ ಮಹಿಳಾ ಫೋರಮ್‌ಗಳೂ ಇರುತ್ತವೆ. ಎಲ್ಲದಕ್ಕಿಂತ ಮುಖ್ಯವಾಗಿ ಸಮ್ಮೇಳನದುದ್ದಕ್ಕೂ ಕರ್ನಾಟಕ ಮೂಲದ ಆಹಾರ-ತಿಂಡಿ-ತಿನಿಸುಗಳನ್ನು ಯಥೇಚ್ಚವಾಗಿ ಒದಗಿಸುವುದಾಗಿ ಅವರು ಭರವಸೆ ನೀಡಿದರು.

ನ್ಯೂ ಜೆರ್ಸಿ ಅಸೆಂಬ್ಲಿಮನ್ ಉಪೇಂದ್ರ ಚಿವುಕುಲರವರು ಬೃಂದಾವನ ಹಾಗೂ ಅಕ್ಕದ ಪದಾಧಿಕಾರಿಗಳನ್ನು ಅಭಿನಂದಿಸುವುದರ ಜೊತೆಗೆ ಕರ್ನಾಟಕದ ಇತಿಹಾಸ ಹಾಗೂ ಮುನ್ನಡೆಯನ್ನು ತಮ್ಮ ಭಾಷಣದಲ್ಲಿ ಕೊಂಡಾಡಿದರು. ಈ ಸಮ್ಮೇಳನದ ಸಂಬಂಧವಾಗಿ ಯಾವುದೇ ಸಹಾಯ, ಸಹಕಾರವನ್ನೂ ನೀಡುವುದಾಗಿ ವಾಗ್ದಾನ ಮಾಡಿದರು. ನಂತರ ಮಾತನಾಡಿದ ಎಡಿಸನ್ ಕೌನ್ಸಿಲ್‌ಮನ್ ಸುಧಾಂಶು ಪ್ರಸಾದ್ ಸ್ಥಳೀಯ (ರಾಜ್ಯ ಹಾಗೂ ಪಟ್ಟಣ) ಮತ್ತು ಅಂತಾರಾಷ್ಟ್ರೀಯ ವ್ಯವಹಾರ-ವಾಣಿಜ್ಯ ಅಭಿವೃದ್ಧಿ ಹೊಂದುವ ಬಗ್ಗೆ ಭರವಸೆ ವ್ಯಕ್ತಪಡಿಸುತ್ತಾ ಕರ್ನಾಟಕದ ಪರಂಪರೆ ಮತ್ತು ಸಂಸ್ಕೃತಿ ವಿಶ್ವದುದ್ದಕ್ಕೂ ಪಸರಿಸುವುದಾಗಿ ಭರವಸೆ ವ್ಯಕ್ತಪಡಿಸಿದರು. ಎಲ್ಲದಕ್ಕಿಂತ ಮುಖ್ಯವಾಗಿ ಮುಂದಿನ ಅನಿವಾಸಿ ತಲೆಮಾರುಗಳಿಗೆ ನಮ್ಮತನದ ಬಗ್ಗೆ ತಿಳಿವಳಿಕೆ ಬೆಳೆಯುವುದರ ಅಗತ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು. ಇನ್ನೇನು ಕೇವಲ ಐವತ್ತೈದು ವಾರಗಳಲ್ಲಿ ಆರಂಭವಾಗುವ ಕಾರ್ಯಕ್ರಮಕ್ಕೆ ಕ್ಷಣಗಣನೆಯನ್ನು ಹುಟ್ಟುಹಾಕಿ ಸಭೆಯಲ್ಲಿ ಕನ್ನಡ ಮಿಂಚಿನ ಸಂಚಾರ ಮಾಡಿಸಿದರು.

ಮುಂದಿನ ವರ್ಷದ ಕಾರ್ಯಕ್ರಮಕ್ಕೆ ಎಂದಿನಂತೆ ಸ್ಥಳೀಯ ಹಾಗೂ ಭಾರತದ ಯಶಸ್ವಿ ಉದ್ಯಮಿಗಳನ್ನು, ಗಣ್ಯ ರಾಜಕೀಯ ವ್ಯಕ್ತಿಗಳನ್ನು, ಕವಿಕಲಾವಿದರನ್ನು ಹಾಗೂ ಧಾರ್ಮಿಕ-ಆಧ್ಯಾತ್ಮಿಕ ರಂಗದ ಪ್ರಮುಖ ಮುಖಂಡರನ್ನು ಆಹ್ವಾನಿಸಲಾಗುವುದು ಎಂದು ರವಿ ಡಂಕನಿಕೋಟೆ ಮತ್ತು ಅಮರನಾಥ ಗೌಡ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು. ಮೂರು ದಿನಗಳ ವಿಶ್ವ ಕನ್ನಡ ಸಮ್ಮೇಳನದಲ್ಲಿ ಶುಕ್ರವಾರ ಆರಂಭಗೊಳ್ಳುವ ಬಿಸಿನೆಸ್ಸ್ ಫೋರಮ್‌ನ ಪ್ರಾಮುಖ್ಯತೆಯನ್ನು ವಿವರಿಸುತ್ತಾ ಈ ಆರ್ಥಿಕ ಸಂದರ್ಭದಲ್ಲಿ ವ್ಯವಹಾರ-ವಾಣಿಜ್ಯ ಚಟುವಟಿಕೆಗಳ ಹೆಚ್ಚುವಿಕೆಯ ಅಗತ್ಯವನ್ನು ವಿವರಿಸಿದರು. ಯೂಥ್ ಪೋರಮ್, ಮಹಿಳೆಯರ ಫೋರಮ್, ಸದುದ್ದೇಶಗಳಿಗೆ ಹಣ ಸಂಗ್ರಹಿಸುವ ಕೆಲಸ ಹಾಗೂ ಕರ್ನಾಟಕ ಭಾರತ ಮತ್ತು ಅಮೇರಿಕಗಳ ಬಗ್ಗೆ ಕಲಿಯುವ ಕಲಿಸುವುದರ ಪ್ರಾಮುಖ್ಯತೆ ಚರ್ಚಿಸಿದರು. ಜೊತೆಗೆ ಈ ವರ್ಷ ಟ್ವೆಂಟಿ-ಟ್ವೆಂಟಿ ಕ್ರಿಕೆಟ್ ಟೂರ್ನ್‌ಮೆಂಟ್ ಅನ್ನು ನಡೆಸುವ ಇಂಗಿತವನ್ನೂ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಸಂಚಾಲಕ ಪ್ರಸನ್ನ ಕುಮಾರ್ ಅವರು ಅಕ್ಕ ಗಣ್ಯರಿಗೆ, ಬೃಂದಾವನದ ಕಾರ್ಯಕಾರಿ ಸಮಿತಿಗೆ, ಕಾರ್ಯಕ್ರಮಕ್ಕೆ ನೆರೆಯ ರಾಜ್ಯಗಳಿಂದ ಆಗಮಿಸಿದ ಹಾಗೂ ಶುಭಸಂದೇಶವನ್ನು ಕಳಿಸಿದ ಇತರ ಕನ್ನಡ ಕೂಟದ ಪದಾಧಿಕಾರಿಗಳಿಗೆ ಹಾಗೂ ಧನ್ಯವಾದಗಳನ್ನು ಹೇಳುತ್ತಾ, ಮುಂಬರುವ ಕಾರ್ಯಕ್ರಮಕ್ಕೆ ಎಲ್ಲರ ಸಹಾಯ ಹಾಗೂ ಸಹಕಾರ ಮುಖ್ಯ ಎಂದರು. ಇವುಗಳಿಲ್ಲದೇ ಯಾವ ಕಾರ್ಯಕ್ರಮವೂ ಕಷ್ಟ ಸಾಧ್ಯವೆಂದರು. ಮುಖ್ಯವಾಗಿ ಸಭೆಯಲ್ಲಿ ಉಪಸ್ಥಿತರಿದ್ದ ನ್ಯೂ ಯಾರ್ಕ್, ಕನೆಕ್ಟಿಕಟ್, ಪೆನ್ಸಿಲ್ವೇನಿಯಾ, ಡೆಲವೇರ್ ಹಾಗೂ ನ್ಯೂ ಜೆರ್ಸಿ ರಾಜ್ಯಗಳಲ್ಲಿ ನೆಲೆಸಿರುವ ಕನ್ನಡಿಗರ ಸಹಯೋಗದೊಂದಿಗೆ ಮುಂದಿನ ಸಮ್ಮೇಳನವನ್ನು "ಅಕ್ಕ" (AKKA) ಮಾರ್ಗದರ್ಶನದಲ್ಲಿ ಅದ್ದೂರಿಯಾಗಿ ನಡೆಸುವ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಈ ಹಿಂದೆ ನಡೆದ ಎಲ್ಲ ಸಮ್ಮೇಳನಗಳಿಗಿಂತಲೂ ದೊಡ್ಡ ಹಾಗೂ ಯಶಸ್ವಿ ಸಮ್ಮೇಳನವನ್ನು ನಡೆಸಲು ಎಲ್ಲರ ಸಹಕಾರವನ್ನು ಕೋರಿದರು. ಶ್ರೋತೃಗಳಲ್ಲಿ ಅಪಾರ ಕರತಾಡನದ ಮೂಲಕ ಉತ್ಸಾಹ ಪ್ರಕಟವಾಗುವುದರ ಜೊತೆಗೆ ನ್ಯೂ ಯಾರ್ಕ್ ಕನ್ನಡ ಕೂಟದ ಜಯಂತ್, ಪುರುಷೋತ್ತಮ, ತ್ರಿವೇಣಿ ಕನ್ನಡ ಕೂಟದ ವಿವೇಕ್, ನಂದಿನಿ, ದತ್ತಕುಮಾರ್, ಕನೆಕ್ಟಿಕಟ್ ಕನ್ನಡ ಕೂಟದ ಅರುಣ್ ಮೊದಲಾದವರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ 2010ರ ವಿಶ್ವ ಕನ್ನಡ ಸಮ್ಮೇಳನದ ವೆಬ್ ಸೈಟ್ ಅನ್ನು ಉಪೇಂದ್ರ ಚಿವುಕುಲ, ಸುಧಾಂಶು ಪ್ರಸಾದ್ ಹಾಗೂ ರವಿ ಡಂಕನಿಕೋಟೆ ಉದ್ಘಾಟಿಸಿದರು. ವೆಬ್ ಸೈಟ್‌ನಲ್ಲಿ ಶರತ್‌ ಅವರು ಹೊಸದಾಗಿ ಮೂಡಿಸಿದ ಸುಂದರ ಗ್ರಾಫಿಕ್ಸ್ ಹಾಗೂ ಚಿತ್ರಗಳು ನೋಡುಗರ ಮನಸೆಳೆದವು.ಕೊನೆಯಲ್ಲಿ ಅಕ್ಕ ಕಾರ್ಯದರ್ಶಿ ದಯಾಶಂಕರ್ ಆದಪ್ಪ ವಂದಿಸಿದರು. ಈ ಪತ್ರಿಕಾ ಗೋಷ್ಠಿಗೆ ಸ್ಥಳೀಯ ಹಾಗೂ ದೂರದ ವರದಿಗಾರರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more