ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಗಿಗಳ ಮಿತ್ರ ಹೆಗ್ಡೆಗೆ ಕ್ವೀನ್ಸ್ ಸರ್ವಿಸ್ ಪ್ರಶಸ್ತಿ

By ವರದಿ: ಪ್ರಕಾಶ್ ರಾಜಾರಾವ್
|
Google Oneindia Kannada News

NZ Queens Service Medal to Sadananda Hegde
ನ್ಯೂಜಿಲೆಂಡ್ ಸರ್ಕಾರ ಸಮಾಜ ಸೇವೆ ಮಾಡಿದ ಮಹನೀಯರಿಗೆ ನೀಡುವ ಪುರಸ್ಕಾರ ಪ್ರತಿಷ್ಠಿತ ಕ್ವೀನ್ಸ್ ಸರ್ವೀಸ್ ಮೆಡಲ್ ಗೌರವಕ್ಕೆ ಈ ಬಾರಿ ಕನ್ನಡಿಗ ವೈದ್ಯ ಡಾ. ಬ್ರಹ್ಮಾವರ ರಾಮಣ್ಣ ಸದಾನಂದ ಹೆಗ್ಡೆಯವರು ಭಾಜನರಾಗಿದ್ದಾರೆ. ಆಕ್ಲೆಂಡ್ ಇಂಡಿಯನ್ ಅಸೋಸಿಯೇಷನ್ ಹಾಗೂ ಡಾ. ಹೆಗ್ಡೆಯವರ ಅಭಿಮಾನಿಗಳು ಸೇರಿ ಪ್ರಶಸ್ತಿ ಪಡೆದ ಅವರನ್ನು ಅಭಿನಂದಿಸುವ ಸಲುವಾಗಿ ಮಹಾತ್ಮ ಗಾಂಧೀ ಕೇಂದ್ರದಲ್ಲಿ ದಿನಾಂಕ 17ನೇ ಜನವರಿ 2009, ಶನಿವಾರದಂದು ಒಂದು ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಮುಖ್ಯ ಅತಿಥಿಯಾಗಿ ಅಗಮಿಸಿದ್ದ ನ್ಯೂಜಿಲೆಂಡಿನ ಆಡಳಿತ ಪಕ್ಷ ನ್ಯಾಷನಲ್ ಪಾರ್ಟಿಯ ಸಂಸದ್ ಸದಸ್ಯ ಕನ್ವಲ್‌ಜೀತ್ ಸಿಂಗ್ ಬಕ್ಷಿಯವರು, "ಡಾ. ಹೆಗ್ಡೆಯವರಿಗೆ ದೊರೆತ ಪ್ರಶಸ್ತಿ ಇಡೀ ಭಾರತೀಯ ಸಮುದಾಯಕ್ಕೆ ಸಂತಸ ತಂದಿದೆ. ಈ ನಾಡಿನಲ್ಲಿ ಕನ್ನಡಿಗರು ಅಲ್ಪ ಸಂಖ್ಯಾತರಾದರೂ ಎಲ್ಲ ಕ್ಷೇತ್ರಗಳಲ್ಲೂ ಗಣನೀಯ ಸಾಧನೆ ಮಾಡುತ್ತಿರುವುದು ಹೆಮ್ಮೆ ಪಡುವಂತಹ ವಿಷಯ" ಎಂದರು. ಸಭಾಧ್ಯಕ್ಷರಾಗಿದ್ದ ಹರ್ಷದ್ ಭಾಯ್ ಪಟೇಲ್ [ಆಕ್ಲೆಂಡ್ ಇಂಡಿಯನ್ ಅಸೋಸಿಯೆಷನ್ ಅಧ್ಯಕ್ಷರು] ಅವರು "ಡಾ. ಹೆಗ್ಡೆಯವರು ನಮ್ಮೆಲ್ಲರಿಗೂ ಉತ್ತಮ ಮಾದರಿಯಾಗಿದ್ದಾರೆ" ಎಂದು ಹೇಳಿದರು.

ಹೆಗ್ಡೆಯವರ ಬಗ್ಗೆ : ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಶಾಲಾಭ್ಯಾಸ, ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದು ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಕೆಲಕಾಲ ಅದೇ ಸಂಸ್ಥೆಯಲ್ಲಿ ಉಪನ್ಯಾಸಕರಾಗಿದ್ದರು. ಡಾ. ಹೆಗ್ಡೆ ತಮ್ಮ ಮಗುವಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ನ್ಯೂಜಿಲೆಂಡಿಗೆ ಬಂದರು. ಒಂದೆರಡು ವರ್ಷ ಮಾತ್ರ ಇಲ್ಲಿದ್ದು ಕರ್ನಾಟಕಕ್ಕೆ ಮರಳಿ ಹೋಗಬೇಕೆಂಬ ಉದ್ದೇಶವಿದ್ದರೂ ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡ ಕಾರಣ ಇಲ್ಲೇ ಉಳಿಯುವಂತಾಯಿತು. ಮೂರು ವರ್ಷ ನ್ಯೂಜಿಲೆಂಡಿನ ದಕ್ಷಿಣ ದ್ವೀಪದ ಬಲ್‌ಕ್ಲೂತಾ ಆಸ್ಪತ್ರೆಯಲ್ಲಿ ಕೆಲಸ ಮಾಡಿ ನಂತರ ವೆಲ್ಲಿಂಗ್ಟನ್‌ನಲ್ಲಿ ತಮ್ಮದೇ ಕ್ಲಿನಿಕ್ ಆರಂಭಿಸಿದರು. ದೊಡ್ಡ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರಾಗುವ ಅವಕಾಶವಿದ್ದರೂ ತಮ್ಮ ರೋಗಿಗಳೊಡನೆ ನಿಕಟ ಸಂಪರ್ಕ ಹೊಂದಿ ಅವರಿಗೆ ನೆರವಾಗುವುದೆ ಹೆಗ್ಡೆಯವರಿಗೆ ಪ್ರಿಯವೆನಿಸಿತು. 1967ರಿಂದ 2008ರವರೆಗೆ ನಿರಂತರ ಸೇವೆ ಸಲ್ಲಿಸಿದ ಅವರು ಈಗ ವಿಶ್ರಾಂತರಾಗಿದ್ದಾರೆ. ನ್ಯೂಜಿಲೆಂಡ್ ರಾಜಧಾನಿ ವೆಲ್ಲಿಂಗ್ಟನ್‌ನಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಅವರು ಎಲ್ಲಾ ಜನಾಂಗದ ರೋಗಿಗಳ ಸೇವೆ ಮಾಡಿದರು.

"ಅವರೊಬ್ಬ ಒಳ್ಳೆಯ ವೈದ್ಯರು ಮಾತ್ರವಲ್ಲ, ರೋಗಿಗಳ ಮಿತ್ರ, ಹಿತೈಷಿ ಮತ್ತು ಮಾರ್ಗದರ್ಶಕ" ಎಂದು ತುಂಬು ಹೃದಯದಿಂದ ನಮಿಸಿದರು ಮಿಶೆಲ್ ಕ್ವಿರ್ಕ್ [ಇವರು ವೃತ್ತಿಯಿಂದ ವಕೀಲರು, ಇವರ ತಂದೆ ಟೊನಿ ಕ್ವಿರ್ಕ್ ಹಾಗೂ ಕುಟುಂಬದ ಎಲ್ಲರೂ ಸುಮಾರು ನಲವತ್ತು ವರ್ಷಗಳ ಕಾಲ ಹೆಗ್ಡೆಯವರ ಚಿಕಿತ್ಸೆಯ ಲಾಭ ಪಡೆದವರು]. ಸದಾ ತಾವೂ ನಗುತ್ತಿದ್ದು ತಮ್ಮ ರೋಗಿಗಳು ನೋವಿದ್ದರೂ ನಗುವಂತೆ ಮಾಡುತ್ತಿದ್ದ ಡಾ. ಹೆಗ್ಡೆಯವರ ಮುಂದಿನ ಬದುಕು ಸುಖಮಯವಾಗಿರಲಿ ಎಂದು ಮಿಶೆಲ್ ತಮ್ಮ ಕುಟುಂಬದ ಪರವಾಗಿ ಹಾರೈಸಿದರು.

ಕು. ವರ್ಷಾ ಪೈ ಅವರ ಪ್ರಾರ್ಥನೆ, ಮೀನಾ ಬಸ್ರೂರ್ ಅವರಿಂದ ಸ್ವಾಗತ ಭಾಷಣದ ನಂತರ ಡಾ. ಲಿಂಗಪ್ಪ ಕಲ್ಬುರ್ಗಿಯವರು [ಆಕ್ಲೆಂಡ್ ಇಂಡಿಯನ್ ಅಸೋಸಿಯೆಶನ್ ಕಾರ್ಯದರ್ಶಿ, ನ್ಯೂಜಿಲೆಂಡ್ ಕನ್ನಡ ಕೂಟದ ಮಾಜಿ ಅಧ್ಯಕ್ಷ ಮತ್ತು ಸಮಾಜ ಸೇವೆಗಾಗಿ ಸ್ವತಃ ನ್ಯೂಜಿಲೆಂಡ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿ ವಿಜೇತ] ಡಾ. ಹೆಗ್ಡೆಯವರ ಪರಿಚಯ ಮಾಡಿಕೊಟ್ಟು ಸ್ಥಳೀಯ ಭಾರತೀಯರ ಅದರಲ್ಲೂ ಕನ್ನಡಿಗರ ಸಾಧನೆಗಳನ್ನು ಗುರುತಿಸಿ ಅಭಿನಂದಿಸುವ ಕಾರ್ಯ ಅಗತ್ಯವಾದುದು. ಇದರಿಂದ ಮುಂದಿನ ಪೀಳಿಗೆಯವರಿಗೆ ಸ್ಪೂರ್ತಿದೊರೆಯುತ್ತದೆ ಎಂದರು.

"ನನಗೆ ಭಾಷಣ ಮಾಡಿ ಅಭ್ಯಾಸವಿಲ್ಲ" ಎಂದು ಆರಂಭಿಸಿದ ಡಾ. ಹೆಗ್ಡೆ ತಮ್ಮ ವೃತ್ತಿಯಲ್ಲಿ, ಜೀವನದಲ್ಲಿ ನೆರವಾದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿ, ನನ್ನ ರೋಗಿಗಳು ನನ್ನ ಕುಟುಂಬದವರಂತೆಯೆ ಆತ್ಮೀಯತೆ ತೋರುವುದು ಸಂತಸದ ವಿಷಯ ಎಂದು ಹೇಳಿದರು. ನನ್ನನ್ನು ಅಭಿನಂದಿಸಿತ್ತಿರುವ ನಿಮ್ಮ ಅಭಿಮಾನಕ್ಕೆ ನಾನು ಋಣಿಯಾಗಿದ್ದೇನೆ ಎಂದ ಅವರು ತಮ್ಮ ಭಾಷಣದುದ್ದಕ್ಕೂ ನಗೆ ಚಟಾಕಿಗಳನ್ನು ಹಾರಿಸಿದರು. ಡಾ ಹೆಗ್ಡೆಯವರ ಪತ್ನಿ ಪ್ರಫುಲ್ಲ, ಕಿರಿಯ ಪುತ್ರಿ ಬೀನಾ ಅವರುಗಳು ಸಹ ಮಾತನಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಹೆಗ್ಡೆಯವರ ಬಹುಕಾಲದ ಮಿತ್ರರಾದ ಡಾ.ಸುಧಾಕರ್ ಮಾಯಾದೇವ್, ಡಾ. ಬಸ್ರೂರ್ ಅವರುಗಳು ಮಾತನಾಡಿ ಡಾ. ಹೆಗ್ಡೆ ಹೆಚ್ಚು ಮಾತನಾಡದ ಅತ್ಯಂತ ಆತ್ಮೀಯ ಮಿತ್ರ ಎಂದು ಶ್ಲಾಘಿಸಿದರು. ಹೆಗ್ಡೆಯವರನ್ನು ಅಭಿನಂದಿಸಿ ಬಂದಿದ್ದ ಹಲವಾರು ಪತ್ರಗಳು, ಈಮೈಲ್ ಗಳನ್ನು ಸುರಕ್ಷಾ ಶೆಟ್ಟಿ ಮತ್ತು ನೇಹಾ ವಿಜಯ್ ಓದಿದರು. ಕಾರ್ಯಕ್ರಮದ ಅಂಗವಾಗಿ ಕು. ಮಯಾಂಕ ಪ್ರಭಾತ್ ಕುಮಾರ್ ಅವರಿಂದ ಭರತನಾಟ್ಯ ಏರ್ಪಡಿಸಲಾಗಿತ್ತು. ಅನುರಾಧಾ ಹೆಗ್ಡೆ ವಂದನಾರ್ಪಣೆ ಮಾಡಿದರು ಮತ್ತು ಸ್ಥಳೀಯ ರೇಡಿಯೊ ತರಾನ ಉದ್ಘೋಶಕ ರವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಲೀನಾ ಕಲ್ಬುರ್ಗಿಯವರು ಡಾ.ಹೆಗ್ಡೆಯರ ಪತ್ನಿ ಪ್ರಫುಲ್ಲ ಅವರಿಗೆ ಹೂಗಿಚ್ಚ ನೀಡಿದರು. ಡಾ. ಹೆಗ್ಡೆಯವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಅಪ್ಪಟ ಕನ್ನಡ ಶೈಲಿಯಲ್ಲಿ ಸನ್ಮಾನಿಸಿ ಮತ್ತು ಇಡೀ ಕಾರ್ಯಕ್ರಮವನ್ನು ಆತ್ಮೀಯತೆ ತುಂಬಿ ತುಳುಕುವಂತೆ ಆಯೋಜಿಸಿದ್ದ ಡಾ. ಕಲ್ಬುರ್ಗಿ ಮತ್ತು ಸಂಗಡಿಗರು ಎಲ್ಲರ ಮೆಚ್ಚುಗೆ ಗಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X