• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೆನಪಿನ ತರಂಗಾಂತರಗಳು!

By Staff
|

ರೇಡಿಯೋ ಎಂದಾಕ್ಷಣ ಹಿಂದಿನ ಪೀಳಿಗೆಯ ಮಂದಿಯ ಕಂಗಳು ಅರಳಿ ಇಷ್ಟಗಲವಾಗುತ್ತವೆ. ರೇಡಿಯೋ ಶಬ್ದವೊಂದೇ ಸಾಕು ತರಂಗಾತರಗಳ ಅಲೆಅಲೆಯ ಮೇಲೆ ತೇಲಿಸಿಕೊಂಡು ಹೋಗಿ ಹಳೆಯ ನೆನಪುಗಳ ಲೋಕಕ್ಕೆ ಕರೆದೊಯ್ಯಲು. ಎಫ್ಎಂ, ಟೀವಿ ಇಲ್ಲದ ಕಾಲದಲ್ಲಿ ಎಲ್ಲರ ಅಚ್ಚುಮೆಚ್ಚಿನ ಸಂಗಾತಿಯಾಗಿದ್ದ ಆ ಪೆಟ್ಟಿಗೆ ನಿಮ್ಮ ಅಟ್ಟದ ಮೇಲಿದ್ದರೆ ಥಟ್ಟನೆ ಒಮ್ಮೆ ಹೋಗಿ ನೋಡಿ, ನೆನಪುಗಳ ತರಂಗಗಳು ಏಳದಿದ್ದರೆ ಕೇಳಿ!

* ಗಿರೀಶ್ ಜಮದಗ್ನಿ, ಸಿಂಗಾಪುರ

ಜನವರಿ 18, 1903, ರೇಡಿಯೋ ತರಂಗಾಂತರಗಳನ್ನು, ಅಟ್ಲಾಂಟಿಕ್‌ನಿಂದಾಚೆಗೆ ಪ್ರಸಾರ ಮಾಡಿ, ಮಾರ್ಕೋನಿ, ವಿಜ್ಞಾನದ ಹೊಸ ಅಲೆಯನ್ನೇ ಸೃಷ್ಟಿಸಿದ. ರೇಡಿಯೋ ಯಾರು ಕಂಡು ಹಿಡಿದದ್ದು ಎನ್ನುವುದರ ಬಗ್ಗೆ ಸಾಕಷ್ಟು ವಾದ, ವಿವಾದ, ವ್ಯಾಜ್ಯಗಳಿದ್ದರೂ, ರೇಡಿಯೋ ಅವಿಷ್ಕಾರಕ್ಕೆ ಮೂಲ ಕಾರಣ, ಭಾರತದ ಜಗದೀಶ್ ಚಂದ್ರ ಬೊಸ್ 1894ರಲ್ಲಿ ಮಾಡಿದ ಒಂದು ಪ್ರಯೋಗ ಎನ್ನುವುದನ್ನು ಜಗತ್ತೇ ಒಪ್ಪಿದೆ.

ಅದೇನೆ ಇರಲಿ. ಇಪ್ಪತ್ತನೇ ಶತಮಾನದ ಮೊದಲರ್ಧದಲ್ಲಿ, ರೇಡಿಯೋದ ಬಳಕೆ ಬೆಳೆದು, ರೇಡಿಯೋ ಒಂದು ಬೃಹತ್ ಸಮೂಹ ಮಧ್ಯಮವಾಯಿತು. ನನ್ನ ಬಾಲ್ಯ ನೆನದಾಗಲೆಲ್ಲ, ರೇಡಿಯೋ ಜೊತೆಗೆ ನಾ ಕಳೆದ, ಅದರೊಂದಿಗೆ ಬೆಳೆದ ದಿನಗಳು ಮನಸ್ಸಿಗೆ ಮುದ ನೀಡಿ ನನ್ನನ್ನು ಭಾವುಕನನ್ನಾಗಿಸುತ್ತದೆ. ಹಿಂದೆ, ರೇಡಿಯೋ ಶ್ರೀಮಂತ ವರ್ಗದ ಜನರಿಗೆ ಮಾತ್ರ ಹೇಗೆ ಸೀಮಿತವಾಗಿತ್ತು ಎಂದು ನಮ್ಮ ತಂದೆ ಅವರ ಕಾಲವನ್ನು ನೆನಪಿಸಿಕೊಳ್ಳುತ್ತ ನನಗೆ ಹೇಳಿದ್ದು ನೆನಪಿದೆ. ರೇಡಿಯೋವನ್ನು ಬಡವರ, ಮಧ್ಯಮ ವರ್ಗದ ಜನರ ಮನೆಯಲ್ಲಿ ಕಾಣಲು ಬಹಳ ವರ್ಷಗಳೇ ಆಯಿತು. 1948-49ರಲ್ಲಿ ರೇಡಿಯೋದ ವಿರಳತೆಯನ್ನು ಜ್ಞಾಪಿಸಿಕೊಳ್ಳುತ್ತ, ಆಗಿನ ಕಾಲದ ಪ್ರಸಿಧ್ಧ ಗಾಯಕಿ ಜಿ.ವಿ.ರಂಗನಾಯಕಮ್ಮ ಅವರ ಹತ್ತು ನಿಮಿಷದ ಸಂಗೀತವನ್ನು ರೇಡಿಯೋದಲ್ಲಿ ಕೇಳಲು ನಾಲಕ್ಕು ಮೈಲಿ ದೂರದ ಶೆಟ್ಟರ ಮನೆಗೆ ನಡೆದು ಹೋಗಿದ್ದನ್ನು ನಮ್ಮ ತಂದೆ ಭಾವುಕರಾಗಿ ಈಗಲೂ ಸ್ಮರಿಸುತ್ತಾರೆ. ನನ್ನ ಪುಣ್ಯ. ನಾ ಹುಟ್ಟುವ ಮೊದಲೇ ನಮ್ಮ ಮನೆಯಲ್ಲಿ ರೇಡಿಯೋ ಪರಾಂಬರಿಸಿತ್ತು!

ನಾವೆಲ್ಲ ರೇಡಿಯೋ ಕೇಳುತ್ತಲೇ ಬೆಳೆದವರು. ನಮಗೆ ಬೇರೆ ಇನ್ಯಾವ ತರಹದ ಮನೋರಂಜನೆಯೇ ತಿಳಿದಿರಲಿಲ್ಲ. ನಮ್ಮ ತಂದೆ, ಆಗಿನ ಕಾಲಕ್ಕೆ 300 ರೂ ಕೊಟ್ಟು ತಂದ "ನ್ಯಾಷನಲ್ ಎಖೊ" ವಾಲ್ವ್ ರೇಡಿಯೋ ನಮ್ಮ ಮನೆಯ ಹಾಲ್‌ನ ಪ್ರಮುಖ ಜಾಗದಲ್ಲಿ ವಿರಾಜಮಾನವಾಗಿತ್ತು. ನಮ್ಮ ದೊಡ್ಡ ಅವಿಭಾಜ್ಯ ಕುಟುಂಬದಲ್ಲಿ ನಮ್ಮಲ್ಲಿ ಒಬ್ಬನಂತಾಗಿತ್ತು. ಆಗೆಲ್ಲ ರೇಡಿಯೋ ಗಾತ್ರ ದೊಡ್ಡದಿದ್ದಷ್ಟೂ ಘನತೆ ಹೆಚ್ಚು! ನಮ್ಮ ಮನೆಯದೂ ಅಷ್ಟೆ, ದೈತ್ಯಾಕಾರವಾಗಿತ್ತು. ಅದರ ಘನತೆ ಕುಂದದಂತೆ, ಅಪ್ಪ ಅದಕ್ಕೆ ಒಳ್ಳೆ ಬೀಟೆ ಮರದ ಪೀಠ ಕೂಡ ಮಾಡಿಸಿದ್ದರು. ಅಮ್ಮ ಆಗಾಗ ಅದಕ್ಕೊಂದು ಹೊದಿಕೆ ಹೊಲೆದು ತರಾವರಿ ಕಸೂತಿ ಮಾಡಿ ಅಲಂಕರಿಸುತ್ತಿದ್ದರು. ಹಾಗೆ ನೋಡಿದರೆ, ರೇಡಿಯೋ ಇಟ್ಟ ಸ್ಥಳ ನಮ್ಮ ಮನೆಯ ಹಾಲ್‌ನ ಪ್ರಮುಖ ಆಕರ್ಷಣೆಯ ಸ್ಥಳವೂ ಆಗಿತ್ತು! ನಮ್ಮ ನೆಂಟರು ಹಳ್ಳಿಯಿಂದ ಬಂದಾಗ, ನಾವೆಲ್ಲ ಅವರಿಗೆ ರೇಡಿಯೋ ಬಗ್ಗೆ (ನಮಗೆ ಗೊತ್ತಿದ್ದಷ್ಟು!) ಹೇಳಿ ಹೇಳಿ ಬೀಗುತ್ತಿದ್ದುದು ನನಗಿನ್ನು ನೆನಪಿದೆ!

ಆಗಿನ ಕಾಲದ ರೇಡಿಯೋಗಳು ಈಗಿನಂತೆ, ಹಾಕಿದ ತಕ್ಷಣ ಹಾಡಲು ಶುರುಮಾಡುತ್ತಿರಲಿಲ್ಲ. ಗುಂಡಿ ಒತ್ತಿದ ಮೇಲೆ, ದೀಪ ಹತ್ತಿ, ಒಳಗಿನ ನಿಯಂತ್ರಕಗಳ ತಂತಿಗಳು ಬೆಳಗಿ, ಕೆಂಪಾಗಿ ಕಾದು, ರೇಡಿಯೋಗೆ ಜೀವ ಬರಲು ಬಹಳ ಸಮಯವೇ ಹಿಡಿಯುತ್ತಿತ್ತು. ಅದರ ಮುಂದಿದ್ದ ಎರಡು ಬಿಳಿ ಬುಗುಟು(ನಾಬ್)ಗಳು, ದೊಡ್ಡ ಕಣ್ಣುಗಳಂತಿದ್ದು, ಅದರ ಸ್ಪೀಕರ್ ಇದ್ದ ಮೇಲ್ಭಾಗ ವಿಶಾಲ ಹಣೆಯಂತೆ ಕಂಗೊಳಿಸಿ, ದೂರದಿಂದ ನೋಡಿದರೆ ಯಾವುದೊ ರಾಕ್ಷಸನ ಮುಖದಂತೆ ಭಯಾನಕವಾಗಿ ಕಾಣುತಿತ್ತು!

ನಮ್ಮನೆಯಲ್ಲಂತೂ, ಬೆಳಗ್ಗೆ ಎದ್ದು ರೇಡಿಯೋ ಹಾಕಿದರೆ, "ಆಕಾಶವಾಣಿ, ಬೆಂಗಳೂರು. ಇಂದು, ಅಂದರೆ..." ಎಂದು ಶುರುವಾಗುತ್ತಿದ್ದ ಆರಂಭಿಕ ಘೊಷಣೆಯಿಂದ ಹಿಡಿದು, ಬೆಳಗಿನ 9.45ಕ್ಕೆ ಕೊನೆಗೊಳ್ಳುತ್ತಿದ್ದ "ಇಲ್ಲಿಗೆ ನಿಲಯದ ಮೊದಲನೆ ಪ್ರಸಾರ ಮುಕ್ತಾಯವಾಯಿತು. ನಮ್ಮ ಮುಂದಿನ ಪ್ರಸಾರ..." ಅನ್ನುವ ತನಕ ರೇಡಿಯೋಗೆ ಬಿಡುವಿರುತ್ತಿರಲಿಲ್ಲ. ಬಿತ್ತರವಾಗುತ್ತಿದ್ದ ಎಲ್ಲ ಕಾರ್ಯಕ್ರಮಗಳನ್ನು ("ರೈತರಿಗೆ ಸಲಹೆ"ಯೂ ಸೇರಿದಂತೆ!) ಮೈಯೆಲ್ಲ ಕಿವಿಯಾಗಿ ಕೇಳುತ್ತಿದ್ದೆವು. ಪ್ರದೇಶ ಸಮಾಚಾರ, ವಾರ್ತೆಗಳು ಓದುತ್ತಿದ್ದವರ ಧ್ವನಿ ದಿನವೂ ಕೇಳಿ, ಪರಿಚಯದವರಿಗಿಂತ ಅವರೇ ನಮಗೆ ಹತ್ತಿರವಾಗಿದ್ದರು!

ಇನ್ನು ರೇಡಿಯೋದಲ್ಲಿ, ನಾವು ಕೇಳದ ಕಾರ್ಯಕ್ರಮವಿರಲಿಲ್ಲ! ಮನೆಯಲ್ಲಿದ್ದ ಒಬ್ಬೊಬ್ಬರಿಗೂ ಅವರವರದೇ ಇಷ್ಟದ ಕಾರ್ಯಕ್ರಮಗಳಿದ್ದರೂ, ಹೇಗೊ, ಜಗಳವಾಡಿ, ಕಿತ್ತಾಡಿ, ರಂಪಾಟಮಾಡಿ, ಕೊನೆಗೂ ಒಂದು ಸಂಧಾನಕ್ಕೆ ಬಂದು, ನಮಗಿಷ್ಟವಾದ ಕಾರ್ಯಕ್ರಮ ಕೇಳುತ್ತಿದ್ದೆವು! ಚಿಂತನ, ಪ್ರದೇಶ ಸಮಾಚಾರ, ಎಂಟು ಗಂಟೆಯ ಹಿಂದಿ, ಇಂಗ್ಲಿಷ್ ವಾರ್ತೆಗಳು, ನಂತರ ಬರುವ ಶಾಸ್ತ್ರೀಯ ಸಂಗೀತ, ಮಧ್ಯಾನ್ಹ ಒಂದು ಘಂಟೆಯ ಸುಮಧುರ ಭಾವಗೀತೆಗಳು, ವಾರಕ್ಕೊಮ್ಮೆ ಬರುತ್ತಿದ್ದ ಪತ್ರೋತ್ತರ ಕಾರ್ಯಕ್ರಮ, ವಿವಿಧ ಕಾರ್ಖಾನೆಯ ಲಲಿತಕಲಾ ಸಂಘದವರು ನಡೆಸಿಕೊಡುತ್ತಿದ್ದ ಸಂಜೆಯ "ಕಾರ್ಮಿಕರಿಗಾಗಿ", ರಾತ್ರಿಯ ರೇಡಿಯೋ ನಾಟಕಗಳು, ಎಲ್ಲಕ್ಕಿಂತ ಹೆಚ್ಚಾಗಿ, ಭಾನುವಾರ ಪ್ರಸಾರವಾಗುತ್ತಿದ್ದ "ಬಾಲ ಜಗತ್" ಕಾರ್ಯಕ್ರಮ ಮತ್ತು ನಂತರ ಬರುತ್ತಿದ್ದ "ನಿಮ್ಮ ಮೆಚ್ಚಿನ ಚಿತ್ರಗೀತೆಗಳು", ಹೀಗೆ ಎಲ್ಲರಿಗೂ ಒಂದಿಲ್ಲೊಂದು ಕೇಳಲು ಸಿಗುತ್ತಿತ್ತು.

ಯಾವಾಗಲೂ ಯಾವುದಾದರು ಹೊಸ ರೇಡಿಯೋ ಕೆಂದ್ರಗಳನ್ನು ಹುಡುಕುವುದರಲ್ಲೇ ಸಂತಸ ಕಾಣುತ್ತಿದ್ದ ನನ್ನ ಅಣ್ಣ, ಕ್ರಿಕೆಟ್ ಕಾಮೆಂಟರಿ ಇತ್ತೆಂದರೆ ತನ್ನ ಅಚ್ಚುಮೆಚ್ಚಿನ "ವನಿತೆಯರಿಗಾಗಿ" ಕಾರ್ಯಕ್ರಮ ಕೇಳಲಾಗುತ್ತಿಲ್ಲವೆಂದು ಚಡಪಡಿಸುತ್ತಿದ್ದ ನನ್ನಮ್ಮ, ಗಮಕವೆಂದರೆ ಬಿಡುವಿಲ್ಲದಿದ್ದರೂ ಸಿಕ್ಕ ಸಮಯದಲ್ಲೇ ಕೇಳುತ್ತಿದ್ದ ಅಪ್ಪ, ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ಸಂಪ್ರದಾಯದ ಹಾಡುಗಳನ್ನು ಕೇಳಲು ರೇಡಿಯೋ ಹತ್ತಿರವೇ ಕುಳಿತು ಕಿವಿಕೊಟ್ಟು ಕೇಳುತ್ತಿದ್ದ ನನ್ನ ಕಿವುಡಜ್ಜಿ, ವಿರೋಧಿ ದಾಂಡಿಗ ಔಟಾದ ಸುದ್ಧಿ ಕಾಮೆಂಟರಿಯಲ್ಲಿ ಕೇಳಿ ಹುಚ್ಚರಂತೆ ಕುಣಿಯುತ್ತಿದ್ದ ನಮ್ಮನ್ನು ಬೆರಗಾಗಿ ನೋಡುತ್ತಿದ್ದ ಕೆಲಸದಾಕೆ ಕಾಳವ್ವ, ಕೆಲಸ ಮಾಡಲು ನಿಲ್ಲಿಸಿದ್ದ ರೇಡಿಯೋವನ್ನು ತನಗೇ ಎಲ್ಲ ತಿಳಿದಿದೆ ಎಂದು ರಿಪೇರಿ ಮಾಡಲು ಹೋಗಿ ಶಾಕ್ ಹೊಡಿಸಿಕೊಂಡಿದ್ದ ಎದುರು ಮನೆ ಮೀಸೆಮಾವ, ಮೆಚ್ಚಿನ ಚಿತ್ರಗೀತೆ ಕೇಳಲು ಕೋರಿದವರ ಹೆಸರಿನಲ್ಲಿ, ನಮ್ಮ ಹೆಸರೂ ಬರುತ್ತದೆಂದು ಆಸೆಯಿಂದ ರೇಡಿಯೋ ಮುಂದೆ ಕ್ಷಣ(ದಿನ)ಗಳ ಕಳೆಯುತ್ತಿದ್ದ ನಾನು, ಕನ್ನಡವನ್ನು ರಾಗ ರಾಗವಾಗಿ ಉಲಿದು ನಮ್ಮನ್ನು ರಂಜಿಸುತ್ತಿದ್ದ ರೇಡಿಯೋ ಸಿಲೋನ್‌ನ ನಿರೂಪಕಿ.... ಹೇಳುತ್ತ ಹೋದರೆ ಈ ನೆನಪುಗಳ ದಿಬ್ಬಣಕ್ಕೆ ಕೊನೆಯಿಲ್ಲ!

ಕಾಲ ಬದಲಾಗಬೇಕಲ್ಲವೇ? ಹೊಸ ನೀರು ಬಂದು ಹಳೇ ನೀರು ಕೊಚ್ಚಿ ಹೋಗುವಂತೆ, ನಂತರ ಬಂದ ಮಾನೋ, "2-ಇನ್-1"ಗಳಿಗೆ ಜಾಗ ಮಾಡಿಕೊಟ್ಟ ರೇಡಿಯೋವನ್ನು ನಾನೇ ಅಟ್ಟ ಸೇರಿಸಿದ್ದು ನೆನಪಿದೆ. ಧೂಳು ಹಿಡಿದು, ಗುರುತೂ ಹತ್ತದೆ, ಯಾವುದೋ ಕಾಲದ ಪಳೆಯುಳಿಕೆಯಂತೆ ಮೂಲೆಯಲ್ಲಿದ್ದ ನಮ್ಮ ನೆಚ್ಚಿನ ರೇಡಿಯೋವನ್ನು ಇತ್ತೀಚೆಗೆ ಅಟ್ಟದಲ್ಲಿ ಕಂಡಾಗ ಕರುಳು ಚುರ್ರೆಂದಿತು! "ನೋಡಿದೆಯ ನನ್ನ ಸ್ಥಿತಿ?" ಎಂದು ಹೇಳುವಂತಿದ್ದ ಅದರ ಬಿಳಿಕಣ್ಣುಗಳ ದಿಟ್ಟ ನೋಟ ಎದುರಿಸಲಾಗದೆ, ಅಟ್ಟ ಇಳಿದು ಬಂದಿದ್ದೆ!

ಪೂರಕ ಓದಿಗೆ

ಬೆಂಗಳೂರಲ್ಲಿ ಇಂಟರ್ನೆಟ್ ರೇಡಿಯೊ ಪ್ರಾರಂಭ

ರೇಡಿಯೊ ಮಿರ್ಚಿ ಮಂಗಳೂರಿನ ಆರ್ ಜೆ ದಾಖಲೆ

ಕನ್ನಡವೇ ಸಕತ್ ಹಾಟ್ ಮಗಾ ರೇಡಿಯೋ ಮಿರ್ಚಿನಂ.1

ಜಾಹೀರಾತಿನಲ್ಲಿ ರೇಡಿಯೋಗಳು ಕಡಿಮೆ ಇಲ್ಲ!

ಬೆಂಗಳೂರಿನಲ್ಲೀಗ ಬೊಂಬಾಟ್ ಕನ್ನಡ ಹಾಡುಗಳ ಜ್ವರ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more