• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೇ 30, 31ರಂದು ನಾಲ್ಕನೇ ವಸಂತ ಸಾಹಿತ್ಯೋತ್ಸವ

By Staff
|

ಕನ್ನಡ ಸಾಹಿತ್ಯಾಭಿಮಾನಿಗಳೆ,

ಕನ್ನಡ ಸಾಹಿತ್ಯ ರಂಗದ ಪರವಾಗಿ ತಮಗೆಲ್ಲ ಹೊಸ ವರುಷದ ಹಾರ್ದಿಕ ಶುಭಾಶಯಗಳು. ಈ ಮೊದಲೇ ಪ್ರಕಟಿಸಿರುವಂತೆ ಕನ್ನಡ ಸಾಹಿತ್ಯ ರಂಗದ ನಾಲ್ಕನೇ ವಸಂತ ಸಾಹಿತ್ಯೋತ್ಸವ, ಕಾವೇರಿ ಕನ್ನಡ ಸಂಘದ ಸಹಯೋಗದೊಂದಿಗೆ ಅಮೇರಿಕದ ರಾಜಧಾನಿ ಪ್ರದೇಶದಲ್ಲಿ ಮೇ 2009ರಲ್ಲಿ ನಡೆಯಲಿದೆ. ಸಾಹಿತ್ಯೋತ್ಸವ ನಡೆಯುವುದು ಮೇ 30 ಮತ್ತು 31, 2009ರ ವಾರಾಂತ್ಯದಲ್ಲಿ. ನಡೆಯುವ ಸ್ಥಳ ಮೇರೀಲ್ಯಾಂಡಿನ ರಾಕ್‌ವಿಲ್ ನಗರದಲ್ಲಿರುವ "The Universities of Maryland at Shadygrove, (Address: 9630 Gudelsky Drive, Rockville, MD 20854)" ಸಭಾಂಗಣದಲ್ಲಿ. ಶನಿವಾರ ಮಧ್ಯಾಹ್ನ ಪ್ರಾರಂಭವಾಗಿ ಭಾನುವಾರ ಮಧ್ಯಾಹ್ನದ ವೇಳೆಗೆ ಮುಕ್ತಾಯವಾಗುವ ಈ ಸಮಾರಂಭದಲ್ಲಿ ಕನ್ನಡ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಅನೇಕ ವಿಚಾರ ಸಂಕಿರಣಗಳು, ಕವಿಗೋಷ್ಠಿ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಕನ್ನಡ ಸಾಹಿತ್ಯದಲ್ಲಿ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಗುರುತಿಸಲ್ಪಟ್ಟಿರುವ ಕಾದಂಬರೀ ಮಾಧ್ಯಮದ ಮೈಲಿಗಲ್ಲುಗಳನ್ನು ಕುರಿತು ಪ್ರಾಸ್ತಾವಿಕ ಭಾಷಣ ಮಾಡಲು ಮುಖ್ಯ ಅತಿಥಿಯಾಗಿ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಡಾ|| ವೀಣಾ ಶಾಂತೇಶ್ವರ ಅವರು ಒಪ್ಪಿದ್ದಾರೆ. ಇವರಲ್ಲದೆ, ವಿಶೇಷ ಅತಿಥಿಯಾಗಿ ಬರುತ್ತಿರುವ ಕನ್ನಡದ ಅತ್ಯುತ್ತಮ ಕತೆಗಾರರಲ್ಲೊಬ್ಬರಾದ ವೈದೇಹಿ ಅವರು ತಮ್ಮ ಸ್ವಂತ ಕವಿತೆ, ಕಥಾ ಸಂಗ್ರಹಗಳಿಂದ ಕೆಲವನ್ನು ವಾಚನ ಮಾಡುತ್ತಾರೆ. ಇಬ್ಬರೂ ಸಭಿಕರೊಂದಿಗೆ ಕಲೆತು ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.

ವೀಣಾ ಶಾಂತೇಶ್ವರ : ಡಾ|| ವೀಣಾ ಶಾಂತೇಶ್ವರ ಅವರು ಧಾರವಾಡದ ಕರ್ನಾಟಕ ಕಾಲೇಜಿನ ಪ್ರಾಂಶುಪಾಲರಾಗಿಯೂ, ಅದರ ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ಸಣ್ಣಕತೆ, ಕಾದಂಬರಿಗಳ ಜೊತೆಗೆ ಹಲವಾರು ವಿಮರ್ಶಾತ್ಮಕ ಪ್ರಬಂಧಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ಮುಖ್ಯವಾದವು ಮಹಿಳಾ ಸಾಹಿತಿಗಳ ಸಣ್ಣಕತೆಗಳು, ಕಾವ್ಯಗಳನ್ನು ಕುರಿತ ಲೇಖನಗಳು; ಶೋಷಣೆ, ಬಂಡಾಯಗಳನ್ನು ಕುರಿತ ಲೇಖನಗಳು, ಇತ್ಯಾದಿ. ಇಂಗ್ಲಿಷಿನಲ್ಲಿಯೂ ಅನೇಕ ವಿಮರ್ಶಾತ್ಮಕ ಲೇಖನಗಳನ್ನೂ ಸಂಶೋಧನಾ ಪ್ರಬಂಧಗಳನ್ನೂ ಬರೆದಿದ್ದಾರೆ. ಇವರ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಪ್ರತಿಷ್ಠಿತ ಅನುಪಮಾ ಪ್ರಶಸ್ತಿ ಮುಂತಾದ ಹಲವಾರು ಸನ್ಮಾನಗಳು ದೊರೆತಿವೆ.

ವೈದೇಹಿ : ಕನ್ನಡದ ಅತ್ಯಂತ ಸಂವೇದನಾಶೀಲ ಕತೆಗಾರರಲ್ಲೊಬ್ಬರಾದ ವೈದೇಹಿ ಅವರು ಇತರ ಸಾಹಿತ್ಯ ಪ್ರಕಾರಗಳಲ್ಲೂ ಅಷ್ಟೇ ಸೃಜನಾತ್ಮಕವಾಗಿ ಕೆಲಸ ಮಾಡಿದ್ದಾರೆ. ನೂರಾರು ಕತೆಗಳು, ಕವನಗಳು, ಕಾದಂಬರಿ, ನೆನಪುಗಳ ಸಂಗ್ರಹ, ಮಹಿಳಾ ಸಾಮಾಜಿಕ ಸಮಸ್ಯೆಗಳನ್ನು ಕುರಿತ ಇಂಗ್ಲಿಷ್ ಲೇಖನಗಳ ಅನುವಾದ, ಮಕ್ಕಳ ನಾಟಕಗಳು, ಲಲಿತ ಪ್ರಬಂಧಗಳು - ಹೀಗೆ ಅವರ ಪ್ರತಿಭೆ ಅನೇಕ ತಾಣಗಳನ್ನು ಮುಟ್ಟಿದೆ. ಕರ್ನಾಟಕ ರಾಜ್ಯ ಸರ್ಕಾರದ ಪ್ರತಿಷ್ಠಿತ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಅನುಪಮಾ ಪ್ರಶಸ್ತಿ, ಕಥಾ'ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳು ವೈದೇಹಿ ಅವರಿಗೆ ಸಂದಿವೆ. ಇಂಥ ಪ್ರತಿಷ್ಠಿತ ಲೇಖಕಿಯರಿಬ್ಬರು ನಮ್ಮ ಸಮ್ಮೇಳನಕ್ಕೆ ಬರುತ್ತಿರುವುದು ಒಂದು ವಿಶೇಷ ಸಂಭ್ರಮದ ಸಂಗತಿಯಾಗಿದೆ.

ಸಮ್ಮೇಳನಕ್ಕೆ ತಯಾರಿ : ಸಮ್ಮೇಳನದ ತಯಾರಿ ಭರದಿಂದ ಸಾಗಿದೆ ಎಂದು ತಿಳಿಸಲು ನಮಗೆ ಹರ್ಷವಾಗುತ್ತಿದೆ. ಹಿಂದೆ ಪ್ರಕಟಿಸಿರುವಂತೆ, ಕಾರ್ಯಕ್ರಮಗಳ ಮುಖ್ಯ ಅಂಗವಾಗಿ ಕನ್ನಡ ಕಾದಂಬರಿಗಳ ಬಗ್ಗೆ ಅಮೆರಿಕನ್ನಡಿಗರು ಬರೆದ ಲೇಖನಗಳನ್ನೊಳಗೊಂಡ ಪುಸ್ತಕವೊಂದನ್ನು ಲೋಕಾರ್ಪಣೆ ಮಾಡುವ ತೀರ್ಮಾನವನ್ನೂ ಕೈಗೊಳ್ಳಲಾಗಿದೆ. ಕನ್ನಡದ ಈಚಿನ ಕಾದಂಬರಿಗಳಿಂದ ಆಯ್ದ ಮುವ್ವತ್ತು ಕಾದಂಬರಿಗಳನ್ನು ಅಧ್ಯಯನಮಾಡಿ ಅವುಗಳ ಬಗ್ಗೆ ಸುದೀರ್ಘ ಪ್ರತಿಕ್ರಿಯೆ/ಅಭಿಪ್ರಾಯ/ವಿಮರ್ಶೆ ಮೊದಲಾದ ಅನಿಸಿಕೆಗಳನ್ನು ಹಂಚಿಕೊಳ್ಳಲು ಈಗಾಗಲೇ ಲೇಖಕ/ಲೇಖಕಿಯರು ಉತ್ಸಾಹದಿಂದ ಮುಂದಾಗಿದ್ದಾರೆ. ಈ ಲೇಖಕ-ಲೇಖಕಿಯರೇ ಅಲ್ಲದೇ ಇನ್ನೂ ಹಲವಾರು ಸಾಹಿತ್ಯೋತ್ಸಾಹಿಗಳು ಗೋಷ್ಠಿಗಳಲ್ಲಿ ಭಾಗವಹಿಸುತ್ತಾರೆ. ಕಾವೇರಿ ತನ್ನ ವಾರ್ಷಿಕ ನಾಟಕೋತ್ಸವವನ್ನೂ ಇದೇ ಸಂದರ್ಭದಲ್ಲಿ ಆಚರಿಸುತ್ತಿರುವುದರಿಂದ ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳ ರಸಮೇಳವಾಗಲಿದೆ. ಲಘು ಸಂಗೀತ (ಭಾವಗೀತೆ), ನಾಟಕ (ನೃತ್ಯ-ನಾಟಕ, ಗೀತ-ನಾಟಕ, ಯಕ್ಷಗಾನಗಳೂ ಸೇರಿದಂತೆ), ಮುಂತಾದ ಪ್ರತಿಭಾಪ್ರದರ್ಶನಕ್ಕೆ ಇದೊಂದು ಉತ್ತಮ ಅವಕಾಶ.

ಸಂಪರ್ಕ : ಇಂಥಾ ಕಾರ್ಯಕ್ರಮಗಳನ್ನು ಪ್ರದರ್ಶಿಸಲು ಇಚ್ಛೆಯುಳ್ಳವರು ಕಾವೇರಿಯ 2009ರ ಅಧ್ಯಕ್ಷೆ ಮೀನಾ ರಾವ್ (ಸಂಪರ್ಕ: meenar@rocketmail.com) ಅಥವಾ ಅವರ ಕಾರ್ಯಕಾರೀ ಸಮಿತಿಯ ಸದಸ್ಯರನ್ನು ಸಂಪರ್ಕಿಸಬಹುದು. ಸಾಹಿತ್ಯಗೋಷ್ಠಿಗಳಲ್ಲಿ ಭಾಗವಹಿಸುವ ಇಚ್ಛೆಯುಳ್ಳವರು ಕನ್ನಡ ಸಾಹಿತ್ಯ ರಂಗದ ಅಧ್ಯಕ್ಷ ಎಚ್. ವೈ. ರಾಜಗೋಪಾಲ್ (ಸಂಪರ್ಕ: hyr1195@aol.com) ಅವರನ್ನಾಗಲೀ ಉಪಾಧ್ಯಕ್ಷ ಮೈ.ಶ್ರೀ. ನಟರಾಜ್ (ಸಂಪರ್ಕ: mysreena@aol.com) ಅವರನ್ನಾಗಲೀ ಸಂಪರ್ಕಿಸಬೇಕಾಗಿ ಕೋರಿಕೆ. ಸಮ್ಮೇಳನದ ಸಮಯದಲ್ಲಿ ಯಾವುದೇ ರೀತಿಯ (ಸಮಯ, ಪ್ರತಿಭೆ ಹಾಗು ಆರ್ಥಿಕ) ಸಹಾಯಮಾಡುವ ಇಚ್ಛೆಯುಳ್ಳ ಸ್ವಯಂಸೇವಕರು ದಯವಿಟ್ಟು ಕಾವೇರಿಯ ಹಾಲೀ ಅಧ್ಯಕ್ಷ ಶಿವ ಭಟ್ (ಸಂಪರ್ಕ: shivub@yahoo.com) ಅಥವಾ 2009ರ ಅಧ್ಯಕ್ಷೆ ಮೀನಾ ಅವರನ್ನಾಗಲೀ ಸಂಪರ್ಕಿಸಿ.

ಕನ್ನಡ ಸಾಹಿತ್ಯ ರಂಗ ಕನ್ನಡ ಭಾಷೆಯನ್ನು ಅಮೇರಿಕದಲ್ಲಿ ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೂ ತಲುಪಿಸಲು ನಿಷ್ಠೆಯಿಂದ ದುಡಿಯುತ್ತಿದೆ. ವಿಲನೋವಾ ವಿಶ್ವವಿದ್ಯಾಲಯದಲ್ಲಿ, ಲಾಸ್ ಏಂಜಲೀಸಿನಲ್ಲಿ ಮತ್ತು ಶಿಕಾಗೋನಲ್ಲಿ ನಡೆದ ಮೂರೂ ಸಮ್ಮೇಳನಗಳು ಬೇರೆ ಬೇರೆ ವಿಚಾರಗಳಮೇಲೆ ಬೆಳಕುಚೆಲ್ಲಿ ಸಹೃದಯೀ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿರುವಂತೆ, ನಾಲ್ಕನೆಯ ಸಮ್ಮೇಳನ ಕೂಡ ವಿಜೃಂಭಣೆಯಿಂದ ನಡೆಯುವಂತೆ ತಾವೆಲ್ಲಾ ಸಹಕರಿಸಬೇಕೆಂದು ನಮ್ಮ ಕಳಕಳಿಯ ಪ್ರಾರ್ಥನೆ. ಎಲ್ಲರೂ ತಪ್ಪದೇ ಬನ್ನಿ. ತಾರೀಖು ಮತ್ತು ಸ್ಥಳವಿವರಗಳನ್ನು ದಯವಿಟ್ಟು ಗುರುತು ಹಾಕಿಕೊಳ್ಳಿ. ಹೆಚ್ಚಿನ ವಿವರಗಳಿಗೆ ಆಗಿಂದಾಗ್ಗೆ ಕಾವೇರಿಯ ಜಾಲತಾಣಕ್ಕೆ ಭೇಟಿಕೊಡುತ್ತಿರಿ (www.kaverionline.org). ಕಾರ್ಯಕ್ರಮಗಳ ಬಗ್ಗೆ ಮುಂದೆ ಬರಲಿರುವ ಪ್ರಕಟನೆಗಳನ್ನು ಎದುರುನೋಡಿ.

ಕನ್ನಡ ಸಾಹಿತ್ಯ ರಂಗದ ಕಾರ್ಯಕಾರೀ ಸಮಿತಿಯ ಪರವಾಗಿ, ತಮ್ಮೆಲ್ಲರ ಸಹಕಾರವನ್ನು ಬಯಸುವ:

ಎಚ್. ವೈ. ರಾಜಗೋಪಾಲ್ ಮತ್ತು ಮೈ.ಶ್ರೀ. ನಟರಾಜ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more