ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜಿಲೆಂಡಿನಲ್ಲಿ 'ಮಕ್ಕಳ' ರಾಜ್ಯೋತ್ಸವ

By ವರದಿ: ಪ್ರಕಾಶ್ ರಾಜಾರಾವ್
|
Google Oneindia Kannada News

Kannada rajyotsava in NewZealand
ಕನ್ನಡದಾ ರವಿ ಮೂಡಿ ಬಂದ ಎಂದು ಬಣ್ಣದ ಅಂಗಿ ತೊಟ್ಟ ಕಿಟ್ಟು ಪುಟಾಣಿ ಮಕ್ಕಳು ರಾಜ್ಯೋತ್ಸವದ ಗೀತೆಗೆ ಹಾಡುತ್ತಾ ಕುಣಿಯುತ್ತಿದುದನ್ನು ನೋಡಿದವರಿಗೆ ಇದು ಕರ್ನಾಟಕದ ಒಂದು ಊರೇನೊ ಎನಿಸಿತು. ಆಕ್ಲೆಂಡಿನಲ್ಲಿ ದಿನಾಂಕ 22ನೇ ನವೆಂಬರ್, ಶನಿವಾರ ನ್ಯೂಜಿಲೆಂಡ್ ಕನ್ನಡ ಕೂಟ ಆಯೋಜಿಸಿದ ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡ ಮಕ್ಕಳು 53ನೇ ರಾಜ್ಯೋತ್ಸವವನ್ನು ಹರ್ಷೋತ್ಸವವಾಗಿಸಿದರು.

ಕೂಟದ ಸಂಸ್ಥಾಪಕ ಅಧ್ಯಕ್ಷರಾದ ಪ್ರಾಚಾರ್ಯ ಎಂ.ಕೆ. ವಾಮನ ಮೂರ್ತಿಯವರು ಜ್ಯೋತಿ ಬೆಳಗಿಸಿ ಎಲ್ಲರನ್ನು ಸ್ವಾಗತಿಸಿದರು. ಆಕ್ಲೆಂಡ್ ಇಂಡಿಯನ್ ಅಸೋಸಿಯೆಶನ್ ಸಂಸ್ಥೆಯ ಅಧ್ಯಕ್ಷ ಹರ್ಶದ್ ಪಟೇಲ್ ಅವರು ಕನ್ನಡ ಧ್ವಜಾರೋಹಣ ಮಾಡಿ ಮಾತನಾಡಿ ಕನ್ನಡಿಗರ ಭಾಷಾಭಿಮಾನ ಮತ್ತು ನ್ಯೂಜಿಲೆಂಡ್ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆ ಎರಡು ಶ್ಲಾಘನೀಯವಾಗಿದೆ ಎಂದರು. ಸಮಾರಂಭದಲ್ಲಿ ಹಾಜರಿದ್ದ ಮುತ್ತಮಿಳ್ ಸಂಘದ ಇಳಾಂಗೊ ಕೃಷ್ಣಮೂರ್ತಿ ಮತ್ತು ಇತರ ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪಟೇಲ್ ಅವರ ಮಾತುಗಳನ್ನು ಅನುಮೋದಿಸಿದರು.

ತೇನ ವಿನಾ ತೃಣಮಪಿ ನಚಲತಿ ಎಂದು ಕುವೆಂಪುರವರ ಕೃತಿಯನ್ನು ಹಾಡಿ ಸತ್ಯ ಕುಮಾರ್ ಅವರು ಪ್ರಾರ್ಥಿಸಿದ ನಂತರ ಮಕ್ಕಳಸೈನ್ಯ ವೇದಿಕೆಯನ್ನಾವರಿಸಿಕೊಂಡು ಬಿಟ್ಟಿತು. ಮೂರು ವರ್ಷದ ಪುಟಾಣಿಗಳು, ಸಂಜನಾ ಕಟ್ಟೆ ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಶಿಶು ಗೀತೆಯ ಕನ್ನಡಾನುವಾದದ ಫಳ ಫಳ ಹೊಳೆಯುವ ನಕ್ಷತ್ರ ಮತ್ತು ತನ್ವಿ ಕೆಡಿಯಪ್ಪ ನಮ್ಮ ಮನೆಯಲೊಂದು ಸಣ್ಣ ಪಾಪ- ಜಿ.ಪಿ. ರಾಜರತ್ನಮ್ ರಚನೆಯನ್ನು ಹಾಡಿ ಎಲ್ಲರ ಮನಗೆದ್ದರು. ಅಖಿಲಾ ಪುತ್ತಿಗೆ ಹಾಡಿದ ಗಗನವು ಎಲ್ಲೋ, ವರ್ಷಾ ಪೈ ಹಾಡಿದ ಬಾನಲ್ಲು ನೀನೆ, ನೇಹಾ ಮತ್ತು ಅನುಶಾ ಅವರು ಹಾಡಿದ ಜಲಲ ಜಲಲ ಜಲ ಧಾರೆ ಗೀತೆಗಳು ಮಧುರವಾಗಿದ್ದವು. ತನನಂ ತನನಂ , ಜೋಗಿ ಚಿತ್ರದ ಮಾದೇವ ಹಾಗೂ ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ ನೃತ್ಯಗಳು ನರ್ತಿಸಿದ ಪುಟಾಣಿಗಳ ಪ್ರತಿಭೆಗೂ ಮತ್ತು ಇವರುಗಳಿಗೆ ತರಬೇತಿ ನೀಡಿದ ನಮ್ರತಾ ಭಟ್, ಆಕಾಂಕ್ಷಾ ಬಿರಾದರ್, ಅನೌಷ್ಕಾ ಅವರುಗಳ ಪರಿಶ್ರಮಕ್ಕೂ ಕನ್ನಡಿ ಹಿಡಿದಂತಿತ್ತು. ಎಲ್ಲಾ ಬಾಲ ಕಲಾವಿದರನ್ನು ರತ್ನಾ ವಾಮನ ಮೂರ್ತಿಯವರು ಬಹುಮಾನ ನೀಡಿ ಗೌರವಿಸಿದಾಗ ಪ್ರೇಕ್ಷಕರು ಎದ್ದು ನಿಂತು ಕರತಾಡನದರು.

ಅತಿಥಿಯಾಗಿ ಬಂದಿದ್ದ ಥಾಮಸ್ ಅವರು ನಡೆಸಿದ ಜಾದೂಗಾರಿಕೆ ಕಾರ್ಯಕ್ರಮ ಆಕರ್ಷಣೀಯವಾಗಿತ್ತು. ಯಾರು ಹಿತವರು ನಿಮಗೆ [ರಚನೆ ಪ್ರಕಾಶ್ ರಾಜಾರಾವ್] ಮತ್ತು ಹೈ ಟೆಕ್ ತಿಮ್ಮಿ ಹಾಸ್ಯ ನಾಟಕಗಳು ಭಾಗವಹಿಸಿದ ಕಲಾವಿದರ ಅಭಿನಯ ಚತುರತೆಯಿಂದ ರಂಜಿಸಿದವು. ಪವನ್ ಕೌಶಿಕ್ ಅವರು ಕವಿ ನಿಸಾರ್ ಅಹ್ಮದ್ ಅವರ ಕೃತಿ ಹೊಸಿಲ ಬಳಿ ಬಂದಾಗ ಹಾಡಿದರೆ , ಕೃಷ್ಣಾ ನಾಗರಾಜ್ ಮತ್ತು ಶ್ರೀಧರನಾಥ್ ಅವರುಗಳು ಹಳೆಯ ಮರೆಯಲಾಗದ ಚಿತ್ರ ಗೀತೆಗಳನ್ನು ಹಾಡಿದರು. ಪವನ್ ಕೌಶಿಕ್, ವೆಂಕಟ್ ಮತ್ತು ಆನಂದ್ ಅವರು ಗಾಯಕರಿಗೆ ವಾದ್ಯಸಂಗೀತದ ನೆರವು ನೀಡಿದರು. ನಾಗರಾಜ್ ಅವರು ಕಾರ್ಯಕ್ರಮದ ನಡುವೆ ನಡೆಸಿದ ರಸ ಪ್ರಶ್ನೆ ಕರ್ನಾಟಕದ ಬಗ್ಗೆ ಸಾಕಷ್ಟು ಮಾಹಿತಿ ನೀಡಿತು.

ಮೈಸೂರಿನ ಪತ್ರಕರ್ತರಾದ ಗೌರಿ ಸತ್ಯ ಅವರು ತಾವು ಬರೆದ ನ್ಯೂಜಿಲೆಂಡ್ ಮಡಿಲಲ್ಲಿ ಎಂಬ ಕನ್ನಡ ಪುಸ್ತಕವನ್ನು ಕೂಟದ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು. ಗೌರಿ ಸತ್ಯ ಅವರು ತಮಗೆ ನೆರವಾದ ಎಲ್ಲರಿಗೂ, ವಿಶೇಷವಾಗಿ ಕೂಟದ ಸಂಸ್ಥಾಪಕ ಕಾರ್ಯದರ್ಶಿ ಡಾ. ಲಿಂಗಪ್ಪ ಕಲ್ಬುರ್ಗಿಯವರಿಗೆ ಕೃತಜ್ಞತೆ ಸಲ್ಲಿಸಿದರು.

ಕನ್ನಡ ಕೂಟದ ಅಧ್ಯಕ್ಷ ರವಿಶಂಕರ್ ರಾವ್ ಅವರು ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ ಹಾಗೂ ಕನ್ನಡಿಗರ ಹೆಮ್ಮೆಯ ಗಾಯಕ ಪಂಡಿತ್ ಭೀಮಸೇನ ಜೋಶಿಯರಿಗೆ ಭಾರತರತ್ನ ಪ್ರಶಸ್ತಿ ದೊರೆತ ಬಗ್ಗೆ ಹರ್ಷ ವ್ಯಕ್ತಪಡಿಸಿ ಮಾತನಾಡಿದರು. ಕಾರ್ಯದರ್ಶಿ ಪ್ರಕಾಶ್ ಬಿರಾದರ್ ಅವರು ವಂದನಾರ್ಪಣೆ ಮಾಡಿದರು. ನವ ದಂಪತಿಗಳ ಜೋಡಿ ಗಿರಿಧರ್ ಮತ್ತು ಶೋಭಾ ಅವರು ಕಾರ್ಯಕ್ರಮ ನಿರೂಪಣೆಯನ್ನು ಆಕರ್ಷಣೀಯವಾಗಿ ನಿಭಾಯಿಸಿದರು.

ಕರ್ನಾಟಕ ನಾಡಗೀತೆ, ನ್ಯೂಜಿಲೆಂಡ್ ಮತ್ತು ಭಾರತದ ರಾಷ್ಟ್ರ ಗೀತೆಗಳ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಇಂತಹ ಒಂದು ಸದಭಿರುಚಿಯ ಕಾರ್ಯಕ್ರಮವನ್ನು ಚೊಕ್ಕವಾಗಿ ಆಯೋಜಿಸಿದ ಕೂಟದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು, ಬೆಳಕು ಮತ್ತು ಧ್ವನಿ ಸಂಯೋಜನೆಯ ನಿರ್ವಹಿಸಿದ ಅನಿಲ್, ಚಕ್ರಪಾಣಿ, ರಘುನಂದನ್, ಊಟೋಪಚಾರಗಳ ಹೊಣೆಹೊತ್ತ ರಾಮಚಂದ್ರ ಹೊಳೆಕಲ್, ವೆಂಕಟೇಶ ಕುಮಾರ್, ಶ್ರೀಧರ ನಾಥ್ ಮತ್ತು ಇತರರು ಅಭಿನಂದನಾರ್ಹರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X