ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಡ್ನಿ ಕನ್ನಡಿಗರನ್ನು ಪುಳಕಗೊಳಿಸಿದ ದಸರಾ

By ಲೇಖನ : ಅಶೋಕ್ ಕುಮಾರ್, ಸಿಡ್ನಿ,ಆಸ್ಟ್ರೇಲಿಯಾ
|
Google Oneindia Kannada News

Sydney Dasara 2008ಸಿಡ್ನಿಯಲ್ಲಿ ಸಾವಿರಕ್ಕೂ ಹೆಚ್ಚು ದಸರಾ ಬೊಂಬೆಗಳು! ರಂಗೋಲಿ, ಕಂಸಾಳೆ, ಡೊಳ್ಳು ಕುಣಿತ, ನಂದಿಕೋಲು, ಪಟ್ಟದ ಕುಣಿತ, ಕೋಲಾಟ! ಇವೆಲ್ಲಾ ಒಂದೇ ಬಾರಿ ಅನುಭವಕ್ಕೆ ತಂದು ಕೊಟ್ಟಿತು ಸಿಡ್ನಿ ದಸರಾ. ನಾಡು, ನುಡಿ, ಸಂಸ್ಕೃತಿಯ ತುಡಿತವು ನಮ್ಮ ನಾಡ ಬಾಂಧವರಿಗೆ ದೂರವಿದ್ದಷ್ಟೂ ಹೆಚ್ಚಾಗುತ್ತದೆ ಎನ್ನುವುದಕ್ಕೆ ಈ ಹಬ್ಬಾಟರಣೆ ಮತ್ತೊಮ್ಮೆ ಸಾಕ್ಷಿಯಾಯಿತು.

ಸಿಡ್ನಿಗೆ ವಲಸೆ ಬಂದ ಕನ್ನಡಿಗರು ಸಾಮೂಹಿಕವಾಗಿ ಆಚರಿಸುವ ಈ ಹಬ್ಬದ ಆಚರಣೆಗೆ ಕಳೆದ ವರ್ಷ 'ಸುಗಮ ಗಾನ ಸಮಾಜ'ದ ವತಿಯಿಂದ ನಾಂದಿ ಹಾಡಲಾಯಿತು. ಅದರ ಜನಪ್ರಿಯತೆಯು ವರ್ಷದಿಂದ ವರ್ಷಕ್ಕೆ ಅದ್ದೂರಿಯಾಗಿ ಆಚರಿಸಿಕೊಂಡು ಹೋಗುವ ಸಂಕಲ್ಪಕ್ಕೆ ಕಾರಣವಾಗಿ, ಎರಡನೇ ವರ್ಷದಲ್ಲಿ ಇಲ್ಲಿನ ಶಾಲೆಯೊಂದರ ಸಭಾಂಗಣದಲ್ಲಿ ಹಿಂದಿನ ವರ್ಷಕ್ಕಿಂತ ಹೆಚ್ಚಿನ ವೈಭವದಿಂದ ಆಚರಿಸಿದ್ದು, ತುಂಬಿದ್ದ ಸಭಾಂಗಣದಲ್ಲಿದ್ದ ಎಲ್ಲಾ ಅಭಿಮಾನಿ ಬಾಂಧವರ ಹೃದಯ ಸೂರೆಗೊಂಡಿತು.

ಬಣ್ಣ ಬಣ್ಣದ ಆಕರ್ಷಕ, ಸ್ವಾಗತ ರಂಗೋಲಿ ಹಾಕುವ ಕಾರ್ಯಕ್ರಮದಿಂದ ಪ್ರಾರಂಭವಾದ ಸಡಗರವು, ಬೊಂಬೆಗಳನ್ನು ಜೋಡಿಸುವುದರಿಂದ ಮುಂದುವರೆದು, ಸುಂದರವಾದ ಜೋಡಣೆಯು 'ಮೈಸೂರು ದಸರಾ' ವೈಭವವನ್ನು ಮರುಕಳಿಸುವಂತೆ ಮಾಡಿದ್ದುವು. ಜಂಬೂ ಸವಾರಿಯನ್ನು ಹೊತ್ತ ಆನೆ, ಸೈನಿಕರು ಎಲ್ಲವೂ ಆಕರ್ಷಕ ಬೊಂಬೆಗಳೇ ಆದರೂ ನಮ್ಮಗಳ ಸ್ಮೃತಿಪಟಲಗಳ ಮೇಲೊಮ್ಮೆ ಎಲ್ಲಕ್ಕೂ ಜೀವ ಬಂದಂತಾಗಿ ಮೈಸೂರ ಸಡಗರವೆಲ್ಲ ಮೈಮನಗಳನ್ನಾವರಿಸಿದವು.

ಕೆಲವು ಕುಟುಂಬಗಳ ಪ್ರದರ್ಶನವಂತೂ, ಇಲ್ಲಿಗೆ ಬಂದು ದಶಕಗಳೇ ಕಳೆದರೂ ಇನ್ನೂ ಅವರು ಉಳಿಸಿಕೊಂಡು ಬಂದಿರುವ ಸೃಜನಾತ್ಮಕತೆ, ಮತ್ತು ಕಲಾವಂತಿಕೆಗಳನ್ನು ಎತ್ತಿ ತೋರುತ್ತಿದ್ದವು. ಇದನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೂ ಹಸ್ತಾಂತರಿಸುವಲ್ಲಿ ಸಫಲ ಹೆಜ್ಜೆಗಳನ್ನಿರಿಸುತ್ತಿದ್ದಾರೆಂಬುದಕ್ಕೆ ಸಾಕ್ಷಿಯಾಗಿತ್ತು ಇದರಲ್ಲಿ ಭಾಗವಹಿಸಿದ ಪುಟಾಣಿಗಳ ಸಡಗರ.

ಮುಂದೆ ನವರಾತ್ರಿಯ ಸಂಪ್ರದಾಯದಂತೆ ಗಣಪತಿ ಮತ್ತು ದೇವಿ ಪೂಜೆಯಿಂದ ಪ್ರಾರಂಭವಾದ ಕಾರ್ಯಕ್ರಮವು ದೇವರ ಪ್ರಾರ್ಥನೆಯಿಂದ ಮೊದಲುಗೊಂಡು "ಹಚ್ಚೇವು ಕನ್ನಡದ ದೀಪ...." ಎನ್ನುವ ಸಾಮೂಹಿಕ ನಾಡಗೀತೆಯಿಂದ ಮುಂದೆ ಸಾಗಿತು. ಮಕ್ಕಳ ಕನ್ನಡ ಕ್ಯಾರಯೋಕೆ ಗಾಯನ, ಚಿಣ್ಣರ ಆಕರ್ಷಕ ಕೋಲಾಟದಿಂದ ಮನತಣಿಸಿತು. ಯುವಕರು ಹಾಡುತ್ತಾ ಕುಣಿದ 'ಏಳು ಮಲೆ ಮಾದೇವ' ನೋಡುಗರ ಹರ್ಷೋದ್ಗಾರ ಉತ್ತುಂಗಕ್ಕೇರಿಸಿತು. ಈ ನೃತ್ಯ ಕರ್ನಾಟಕ ಜನಪದ ನೃತ್ಯ ಪ್ರಕಾರಗಳಾದ ಕಂಸಾಳೆ, ಡೊಳ್ಳು ಕುಣಿತ, ನಂದಿಕೋಲು, ಪಟ್ಟದ ಕುಣಿತ ಮುಂತಾದ ಎಲ್ಲಾ ನೃತ್ಯಗಳನ್ನೊಳಗೊಂಡು ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದವು. ಮೈಸೂರು ಪಾಕು ಸಿಹಿಯ, ಸ್ವಾದಿಷ್ಟ ಮೈಸೂರು ಭೋಜನದ ನಂತರ ಅನೇಕ ಗೀತೆಗಳು ಮತ್ತು ಯುಗಳ ಗಾನಗಳ ಗಾಯನಗಳ ಮಾಧುರ್ಯ ಬಹುದಿನಗಳ ಕಾಲ ನೆನಪಿನಲ್ಲಿ ಉಳಿಯುವಂಹವು.

ಮಕ್ಕಳಿಗೆ ಕನ್ನಡ ಶಾಲೆ, ವನಿತೆಯರಿಗೆ ಅಡುಗೆ ಶಾಲೆ, ಇಡೀ ಕುಟುಂಬಕ್ಕೆ ಕನ್ನಡದ ವೈದ್ಯರಿಂದ ಉಚಿತ ಆರೋಗ್ಯಕರ ಸಲಹೆ, ಮನರಂಜನೆಗೆಂದೇ ಈ ತರಹದ ಗಾಯನ/ನೃತ್ಯ/ಹಾಸ್ಯ /ಕನ್ನಡ ಚರ್ಚಾಕೂಟದಂತಹ ಜನೋಪಕಾರಿ ಸಂಜೆಗಳನ್ನು ಕಳೆದ 3-4 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಯುವಕಲಾವಿದರ ತಂಡ ಬಲು ಉತ್ಸಾಹದಿಂದ ಕನ್ನಡ ನಾಡು ನುಡಿಗಳನ್ನು ಮರೆಯದ ಹಾಗೆ ಮೆರೆಸುವ ಹಾಗೆ ಹೆಜ್ಜೆ ಹಾಕುತ್ತಿದೆ. ಈ ಸಂಸ್ಥೆಯ ಕೆಲಸದಲ್ಲಿ ಪಾಲ್ಗೊಂಡು ಪ್ರೋತ್ಸಾಹಿಸಿ, ಸಲಹುತ್ತಿರುವ ಎಲ್ಲರಿಗೂ ನನ್ನ ಅನಂತ ಧನ್ಯವಾದಗಳು.

ಕನ್ನಡದವರು ಹತ್ತಾರು ವರ್ಷಗಳಿಂದ ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸಿಡ್ನಿಯಲ್ಲಿ ನೆಲೆಸಿದ್ದರೂ ಈ ರೀತಿಯ ಕರುನಾಡ ನಿಜವಾದ ಮಣ್ಣಿನ ವಾಸನೆ ಬೀಸಿ ಬರುತ್ತಿರುವುದು ಇತ್ತೀಚಿಗಷ್ಟೆ. ಅದಕ್ಕೆ ಕಾರಣ ಈ ಯುವಕನ್ನಡಿಗರ ಉತ್ಸಾಹ. 'ಏನೇ ಮಾಡಲಿ ಕನ್ನಡ ತನವೊಂದಿರಲಿ' ಎನ್ನುವ ಈ ಬಳಗದವರ ವೆಬ್ ಸೈಟ್ www.sugamakannada.com ಗೆ ಒಮ್ಮೆ ಭೇಟಿ ಕೊಟ್ಟು ಮುಂದೆ ಸಿಡ್ನಿಯ ಎಲ್ಲ ಕನ್ನಡಿಗರೂ ಇಂತಹ ಕಾರ್ಯಕ್ರಮಗಳಿಗೆ ಹಾಜರಾಗಿರೆಂದು ಈ ವರದಿಯ ಮೂಲಕ ಕೇಳಿಕೊಳ್ಳುತ್ತೇನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X