ಡಾ. ವಸುಂಧರಾ ದೊರೆಸ್ವಾಮಿ ಅವರಿಂದ ಮನೋಜ್ಞ ಪ್ರದರ್ಶನ
ಕನ್ನಡದ ಪ್ರಸಿದ್ಧ ರಂಗ ಕರ್ಮಿ, ಸಾಹಿತಿ ಪ್ರೊ. ಉದ್ಯಾವರ ಮಾಧವ ಆಚಾರ್ಯ ಅವರ ಕೃತಿ ಗಂಗಾ ಲಹರಿಯ ಏಕವ್ಯಕ್ತಿ ನೃತ್ಯ ಪ್ರಯೋಗ ನ್ಯೂ ಜೆರ್ಸಿಯ ಬ್ರಿಡ್ಜ್‌ವಾಟರ್ ದೇವಸನ್ನಿಧಿಯ ಸಭಾಂಗಣದಲ್ಲಿ ಆಗಸ್ಟ್ 24 ನಡೆಯಿತು. ಅಂತಾರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಕಲಾವಿದೆ ಕರ್ನಾಟಕ ಕಲಾತಿಲಕ ಡಾ| ವಸುಂಧರಾ ದೊರೆಸ್ವಾಮಿ ಅವರ ನಾಟ್ಯ ಲೀಲೆಯಲ್ಲಿ ಗಂಗಾತವರಣ ದಾರಾಕಾರವಾಗಿ ಹರಿಯಿತು.
ಭಾರತದ ಪವಿತ್ರ ನದಿ ಗಂಗೆಯ ಜೀವನ ಪ್ರವಾಹವೇ ಈ ರೂಪಕದ ವಸ್ತು. ಗಂಗೆ ನದಿ ಮಾತ್ರವಲ್ಲ. ಹೆಣ್ತನದ ಪ್ರತೀಕ. ಪಾವಿತ್ರ್ಯದ ಸಂಕೇತ. ಜೀವನ-ಸಂಸ್ಕೃತಿ-ಆಧ್ಯಾತ್ಮದ ಸಂಗಮ ಎಂಬುದನ್ನು ಡಾ| ವಸುಂಧರಾ ಅವರು ತಮ್ಮ ಪ್ರಬುದ್ಧ ನೃತ್ಯ ಭಾಷೆಯ ಮೂಲಕ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದರು.
ಸ್ವರ್ಗದ ಶಾಪವನ್ನು ಕಳೆಯುವುದಕ್ಕೋಸ್ಕರ ಭೂಮಿಗೆ ಅವತರಿಸಿದ ಗಂಗೆ ತನ್ನ ಜೀವನದಲ್ಲಿ ಪಡೆದ ವಿವಿಧ ಪಾತ್ರಗಳನ್ನು, ನಲಿವುಗಳನ್ನು, ಸೆಳೆತ ಬಿಗಿತಗಳನ್ನು, ಮತ್ತೆ ಇಂದ್ರ ಲೋಕಕ್ಕೆ ಮರಳಲಾಗದೆ ಮಾನವ ಸಂತತಿಯ ಪಾಪಗಳನ್ನೆಲ್ಲ ತೊಳೆಯುವುದಕ್ಕೋಸ್ಕರ ಪವಿತ್ರ ನದಿಯೆಂದು ಆರಾಧಿಸಿಕೊಳ್ಳುತ್ತಾ ಇಳೆಯಲ್ಲೇ ಉಳಿದ ಜೀವನ ಗಾಥೆ ಈ ರೂಪಕದಲ್ಲಿ ಸುಮಾರು ಒಂದೂವರೆ ಗಂಟೆ ಕಾಲ ಹೃದಯಂಗಮವಾಗಿ ಪ್ರದರ್ಶನಗೊಂಡಿತು.
ಹಿನ್ನೆಲೆಯಲ್ಲಿ ವಿದುಷಿ ಪಿ ರಮಾ ಅವರ ಗಾಯನ, ವಿದುಷಿ ಭ್ರಮರಿ ಅವರ ನಟ್ಟುವಾಂಗ ಮತ್ತು ಗದ್ಯ ವಾಚನ, ವಿದ್ವಾನ್ ಲಕ್ಷ್ಮೀಶ ಶ್ರೀಧರ್ ಅವರ ಮೃದಂಗ ವಾದನ, ವಿದ್ವಾನ್ ಕೆ ಎಸ್ ಜಯರಾಮ್ ಅವರ ವೇಣುವಾದನ, ಶ್ರೀಮತಿ ಸುಚಿತ್ರಾ ಲಕ್ಷ್ಮೀಶ ಅವರ ವಯೋಲಿನ್ ವಾದನ ಇವೆಲ್ಲವೂ ಈ ಅಪೂರ್ವ ಕೃತಿಯ ಪ್ರಸ್ತುತಿಯಲ್ಲಿ ರಸಿಕರ ಗಮನ ಸೆಳೆದಿಟ್ಟುಕೊಳ್ಳುವುದರಲ್ಲಿ ವಿಶೇಷ ಪಾತ್ರ ವಹಿಸಿದವು.
ಇದೇ ಸಂದರ್ಭದಲ್ಲಿ ಕಳೆದ 3 ವರ್ಷಗಳಿಂದ ನ್ಯೂ ಜೆರ್ಸಿಯಲ್ಲಿ ನೃತ್ಯ ಶಿಕ್ಷಣ ನೀಡುತ್ತಿರುವ ವಿದುಷಿ ಭ್ರಮರಿ ಅವರ ಶಿಷ್ಯೆಯರ ಕಿರು ನೃತ್ಯ ಪ್ರದರ್ಶನವು ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.












Click it and Unblock the Notifications