ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಗ್ಲರ ನಾಡಿನಲ್ಲಿ ಕನ್ನಡಿಗರ ಬೆಳ್ಳಿಹಬ್ಬದ ಸಂಭ್ರಮ

By Staff
|
Google Oneindia Kannada News

Jayanth Kaikini and Nisar Ahmed at UKKB Silver Jubileeಇಂಗ್ಲೆಂಡಿನ ಕನ್ನಡ ಬಳಗಕ್ಕೆ 25 ತುಂಬಿಬಂದಿತು. ಒಂದು ಮೈಲಿಗಲ್ಲನ್ನು ದಾಟಿದ ಉತ್ಸಾಹವನ್ನು ಬೆಳ್ಳಿಗೆರೆಗಳಲ್ಲಿ ನಿರೂಪಿಸುವ ಮೂರು ದಿನಗಳ ಉತ್ಸವ ಬ್ರಿಟಿಷರ ಭೂಮಿಯಲ್ಲಿ ಸಾಂಗವಾಗಿ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮಗಳೇ ಹೆಚ್ಚಾಗಿದ್ದ ಈ ಕನ್ನಡ ಹಬ್ಬದ ಬಗ್ಗೆ ಒಂದು ಕ್ಲುಪ್ತ ವರದಿ.

ವರದಿ : ಡಾ. ರಾಜಾರಾಮ್ ಕಾವಳೆ

ಬ್ರಿಟಿಷ್ ಸಂಯುಕ್ತ ರಾಷ್ಟ್ರದ ಕನ್ನಡಬಳಗ ಯುಕೆ ಸಮುದಾಯದ ರಜತ ಮಹೋತ್ಸವವು ಚಶೈರ್ ಪ್ರಾಂತ್ಯಲ್ಲಿರುವ ನ್ಯಾಂಟ್ ವಿಚ್ ನಲ್ಲಿರುವ ಆಲ್ವಸ್ಟನ್ ಹಾಲ್ ನಲ್ಲಿ ಇದೇ ತಿಂಗಳ 22, 23 ಮತ್ತು 24ರಂದು ಅದ್ದೂರಿಯಾಗಿ ಆಚರಿಸಲಾಯಿತು. ತನ್ನ ಈ 25ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಕನ್ನಡಬಳಗ ಯುಕೆ 1983ರಲ್ಲಿ ಒಂದು ಸಣ್ಣ ಸಂಘವಾಗಿ ಆರಂಭವಾಗಿ ಈಗ ಬೆಳೆದು ನಿಂತ ಮಗಳಂತೆ ಶೋಭಿಸುತ್ತಿದೆ.

ಬೆಳ್ಳಿಹಬ್ಬದ ಕಾರ್ಯಕ್ರಮ ಮೋಹನ್ ಅರ್ಕಾನಾಥ್ ಮತ್ತು ಸಂಗಡಿಗರ "ಹಚ್ಚೇವು ಕನ್ನಡದ ದೀಪ" ಎಂಬ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಕನ್ನಡಬಳಗದ ಅಧ್ಯಕ್ಷೆ ಡಾ. ಭಾನುಮತಿಯವರು ಸಭಿಕರನ್ನು ಸ್ವಾಗತಿಸಿ, ಮುಖ್ಯ ಅತಿಥಿಗಳನ್ನು ಸಭಿಕರಿಗೆ ಪರಿಚಯ ಮಾಡಿಕೊಟ್ಟರು. ಈ ಉತ್ಸವದ ದಿನದಂದು ಮೂವರು ಗಣ್ಯವ್ಯಕ್ತಿಗಳಾದ ವಿಧಾನಪರಿಷತ್ ಸದಸ್ಯ ಜನಾರ್ಧನರೆಡ್ಡಿ, ಎಡ್ವರ್ಡ್ ಟಿಂಪ್ ಸನ್ ಮತ್ತು ಪದ್ಮಶ್ರೀ ನಿಸಾರ್ ಅಹಮದ್ ರವರು ವೇದಿಕೆಯನ್ನು ಅಲಂಕರಿಸಿದ್ದರು. ರಜತಮಹೋತ್ಸವದ ಆರಂಭೋತ್ಸವವನ್ನು ಪ್ರವಾಸೋದ್ಯಮ ಮತ್ತು ಮೂಲಭೂತ ಸೌಕರ್ಯ ಸಚಿವರಾದ ಜಿ. ಜನಾರ್ಧನ ರೆಡ್ಡಿ ಶುಕ್ರವಾರ 22ರಂದು ಉಧ್ಘಾಟಿಸಿದರು.

ಈ ಆರಂಭೋತ್ಸವವನ್ನು ಕರ್ನಾಟಕದ ಮುಖ್ಯಮಂತ್ರಿಗಳಾದ ಮಾನ್ಯ ಯಡಿಯೂರಪ್ಪನವರು ನೆರವೇರಿಬೇಕಾಗಿತ್ತು. ರಾಜ್ಯದಲ್ಲಿನ ನೆರೆ ಮತ್ತು ಪ್ರವಾಹಗಳ ಹಾವಳಿಗಳಿಂದ ಜನರಿಗೆ ಆಗುತ್ತಿರುವ ಅನೇಕ ನಷ್ಟಗಳನ್ನೆದುರಿಸಲು ಅವರು ಅಲ್ಲೇ ನಿಲ್ಲಬೇಕಾದುದು ಅನಿವಾರ್ಯವಾಯಿತೆಂದು ರೆಡ್ಡಿ ತಿಳಿಸಿದರು. ಅವರು ಕರ್ನಾಟಕದಲ್ಲಿರುವ ಪ್ರವಾಸ ಮತ್ತು ಮೂಲಭೂತ ಸೌಕರ್ಯಗಳಿಗಿರುವ ಅವಕಾಶಗಳನ್ನು ವಿವರಿಸಿದರು. ಮುಖ್ಯ ಅತಿಥಿಗಳಲ್ಲೊಬ್ಬರಾದ ನ್ಯಾಂಟ್ ವಿಚ್ಚಿನ ಪಾರ್ಲಿಮೆಂಟಿನ ಸದಸ್ಯರಾದ ಎಡ್ವರ್ಡ್ ಟಿಂಪ್ ಸನ್ ರವರು ಕರ್ನಾಟಕದ ವಿಚಾರದ ಬಗ್ಗೆ ತಿಳಿಯಪಡಿಸಿದುದರಿಂದ ಜನಾರ್ಧನ ರೆಡ್ಡಿಯವರನ್ನು ಶ್ಲಾಘಿಸಿ, ತಮಗೂ ಭಾರತ ಮತ್ತು ಕರ್ನಾಟಕವನ್ನು ಭೇಟಿಮಾಡುವ ಇಚ್ಛೆಯಿದೆ ಎಂದು ತಿಳಿಸಿದರು.

ಖ್ಯಾತ ಕವಿ ಪದ್ಮಶ್ರೀ ಪ್ರೊ. ನಿಸಾರ್ ಅಹಮದ್ ರವರು ಮಾತನಾಡಿ, ಬ್ರಿಟಿಷ್ ಪಾರ್ಲಿಮೆಂಟಿನ ಸದಸ್ಯರಾದ ಎಡ್ವರ್ಡ್ ಟಿಂಪ್ ಸನ್ ಅವರ ಉತ್ಸಾಹ ಮತ್ತು ಜ್ಞಾನವನ್ನು ಶ್ಲಾಘಿಸಿ, ಕರ್ನಾಟಕ, ಕನ್ನಡತನ ಮತ್ತು ಕನ್ನಡದ ಮಹಿಮೆಯನ್ನು ಸಭಿಕರಿಗೆ ವಿವರಿಸಿದರು. ರಜತ ಮಹೋತ್ಸವದ ಸ್ಮರಣ ಸಂಚಿಕೆಯನ್ನು ಮುಖ್ಯ ಆಹ್ವಾನಿತರು ಬಿಡುಗಡೆಮಾಡಿದರು. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯವರು ಕರ್ನಾಟಕದಲ್ಲಿರುವ ಕೈಗಾರಿಕಾ ಮತ್ತು ತಂತ್ರಜ್ಞಾನಗಳ ಬೆಳವಣಿಗೆಗಳಿಗೆ ಸರ್ಕಾರ ಕೊಡುವ ಅವಕಾಶಗಳಬಗ್ಗೆ ವಿವರಿಸುವ ಒಂದು ವಿಡಿಯೋ ಪ್ರದರ್ಶನವನ್ನು ತೋರಿಸಿದರು. ಕನ್ನಡಬಳದ ಸದಸ್ಯರು ನಿಸಾರ್ ಅಹಮದ್ ರವರಿಗೆ ಸನ್ಮಾನ ಮಾಡಿದರು. ಧೀರ್ಘವಾದ ಸನ್ಮಾನ ಪತ್ರವನ್ನು ಡಾ. ಉಮಾ ವೆಂಕಟೇಶ್ ರವರು ಓದಿ ಅವರಿಗೆ ಅರ್ಪಿಸಿದರು. ನಿಸಾರ್ ಅಹಮದ್‌ರವರು ಬಳಗದವನ್ನು ಅಭಿವಂದಿಸಿ ತಮಗೆ ಪ್ರಪಂಚದಲ್ಲಿ ಯಾರೂ, ಯಾವಾಗಲೂ ಇಷ್ಟು ಧೀರ್ಘವಾದ ಸನ್ಮಾನ ಪತ್ರ ಅರ್ಪಿಸಿಲ್ಲವೆಂದು ಸಂಸತ ವ್ಯಕ್ತಪಡಿಸಿದರು.

ನಂತರ ಮನೊರಂಜನೆಯ ಕಾರ್ಯಕ್ರಮಗಳು ಸಭಿಕರಿಗೆ ರಸದೌತಣ ಬಡಿಸಿದವು. ಕುಮಾರಿ ರೂಪಸಿ ಭಜನೆಹಟ್ಟಿಯವರಿಂದ ಪುಷ್ಪಾಂಜಲಿ, ದೇವಿಕಾ ರಾವ್ ಮತ್ತು ಶ್ರೀದೇವಿ ಕಾರಂತ್‌ರವರಿಂದ ಯಕ್ಷಗಾನ, ಮೋಹನ್ ಅರ್ಕಾನಾಥ್ ಮತ್ತು ಸಂಗಡಿಗರಿಂದ ಲಘು ಸಂಗೀತ ಮತ್ತು ಅನುಪಮ ಗಿಣಿಮಾವು, ಚಿನ್ಮಯಿ ಕಟ್ಟಿ, ದೇವಿಕಾರಾವ್, ರೂಪಸಿ ಭಜನೆಹಟ್ಟಿ, ರೊಶಿಣಿ ಸಾನಿಕೊಪ್ ಮತ್ತು ಶಿಲ್ಪ ಮೂರ್ತಿಯವರ ಜಾನಪದ ನೃತ್ಯ ಎಲ್ಲರ ಮನ ಸೆಳೆಯಿತು. ಬೆಂಗಳೂರಿನ ನೂಪೂರ್ ಆರ್ಟ್ಸ್‌ನ ಹರಿ ಮತ್ತು ಚೇತನ್ ಕಥಕ್ ನೃತ್ಯ ಪ್ರದರ್ಶಿಸಿದರು. ಕೊನೆಯದಾಗಿ ಪ್ರೊ. ಕೃಷ್ಣೇಗೌಡರಿಂದ ಹಾಸ್ಯ ಲಹರಿಯ ಪ್ರವಾಹದಲ್ಲಿ ಸಭಿಕರು ಕೊಚ್ಚಿಹೋದರು.

ಎರಡನೇ ದಿನ : ಶನಿವಾರ 23ರಂದು ಗಾಡ್ ಫ್ರಿ ಪಿಯರ್ಸನ್ ಲಿಮಿಟೆಡ್ ಎಂಬ ಆರ್ಥಿಕ ಸಲಹೆ ಸಂಸ್ಥೆಯವರಿಂದ ಒಂದು ಪ್ರವರ್ತಕ ಪ್ರದರ್ಶನವು ಸಭಿಕರ ಕುತೂಹಲವನ್ನು ಕೆರಳಿತು. ಇನ್ಫೊ ಟ್ರೆಂಡ್ಸ್ ಎಂಬ ಗೃಹನಿರ್ಮಾಣ ಸಂಸ್ಥೆಯ ವ್ಯವಸ್ಥಾಪಕರಾದ ಸಂದೀಪ್‌ರವರು ಮೈಸೂರಿನಲ್ಲಿ ಆಗುತ್ತಿರುವ ಒಂದು ಬೃಹತ್ ಗೃಹ ನಿರ್ಮಾಣ ಯೋಜನೆಯ ಬಗ್ಗೆ ಮಾತಾಡಿ, ತಾವು ನಿರ್ಮಿಸುತ್ತಿರುವ ಗೃಹಗಳ ವಿವರಣ ಚಿತ್ರಗಳನ್ನು ತೋರಿಸಿದರು. ಮಧ್ಯಾಹ್ನದ ಊಟದ ನಂತರ "ತ್ರಿಪುರ ಸಂಹಾರ" ಎಂಬ ನಾಟಕನೃತ್ಯವನ್ನು ಮುಂಬಯಿನ ಅರುಣೋದಯ ಕಲಾನಿಕೇತನ್ ಅವರಿಂದ ಪ್ರದರ್ಶಿಸಲಾಯಿತು. ಶ್ರೀನಿವಾಸ ಕಪ್ಪಣ್ಣನವರು ಕನ್ನಡಜಾನಪದಗಳ ವಿಚಾರವಾಗಿ ಒಂದು ಪ್ರದರ್ಶನವನ್ನು ಸಭಿಕರಿಗೆ ಅರ್ಪಿಸಿದರು. ಅಮೆರಿಕದ ಸ್ಯಾನ್ ಅಂಟೋನಿಯೊ ಟೆಕ್ ಸಾಸಿನಲ್ಲಿರುವ ಆರತಿ ಸ್ಕೂಲ್ ಆಫ್ ಇಂಡಿಯನ್ ಡ್ಯಾನ್ಸಿಂಗ್ ಅವರ ಸದಸ್ಯರುಗಳಿಂದ "ಶೇಡ್ಸ್ ಆಫ್ ಉಮನ್", ಮಹಿಳೆಯರ ಮನೋಭಾವನೆಗಳ ಬಗ್ಗೆ ಒಂದು ನಾಟ್ಯವನ್ನು ಪ್ರದರ್ಶಿಸಲಾಯಿತು. ಇದಾದಮೇಲೆ ಪ್ರೊ. ಕೃಷ್ಣೇಗೌಡರು ಸಭಿಕರನ್ನು ಹಾಸ್ಯದ ಕಡಲಿನಲ್ಲಿ ಮತ್ತೆ ಮುಳುಗಿಸಿದರು.

ಯುವಕನ್ನಡಿಗರಾದ ಅನು ಗಿಣಿಮಾವು, ರೂಪಸಿಭಜನೆಹಟ್ಟಿಯವರ ನೃತ್ಯ, ಮಲ್ಲಪ್ಪ ಕೋಲಾರರಿಂದ ಮಾತು ನವ್ಯ ಆನಂದರಿಂದ ನೃತ್ಯ ಮತ್ತು ತ್ರಿಶೂಲ್ ತೇಜಸ್ವಿ ಜಯರಾಮ್ ನಿರ್ದೇಶಿಸಿದ ಒಂದು ಸಣ್ಣ ಚಲನಚಿತ್ರವನ್ನು ಪ್ರದರ್ಶಿದರು. ಬೆಂಗಳೂರಿನ ವಿಕ್ರಮ್ ಸಂಪತ್ ಎಂಬ ಯುವಲೇಖಕ ನಾಲ್ಕು ವರ್ಷಗಳಿಗೂ ಹೆಚ್ಚು ಸಂಶೋಧನೆ ನಡೆಸಿ ಮೈಸೂರಿನ ರಾಜರ ಚರಿತ್ರೆಯ ಮೇಲೆ ಬರೆದ "ಸ್ಪ್ಲೆಂಡರ್ಸ್ ಆಫ್ ರಾಯಲ್ ಮೈಸೂರ್ : ಅನ್ ಟೋಲ್ಡ್ ಸ್ಟೋರಿ ಆಫ್ ಒಡೆಯರರ್ಸ್" ಎಂಬ ಪುಸ್ತಕದ ವಿಚಾರವಾಗಿ ತನ್ನ ವಿವರಣಾತ್ಮಕ ಭಾಷಣ ಮತ್ತು ವಿಡಿಯೊವನ್ನು ಚಿತ್ರಗಳನ್ನು ಪ್ರದರ್ಶಿಸಿ ಸಭಿಕರ ಮೆಚ್ಚುಗೆ ಪಡೆದನು. ಸಾಯಂಕಾಲದ ವಸುಂದರ ಅಯ್ಯಂಗಾರ್‌ರವರಿಂದ ಸಂಗೀತವಾದ ಮೇಲೆ ನೂಪುರ್ ಕಲಾವಿದರಾದ ಹರಿ ಮತ್ತು ಚೇತನರವರು ಕಥಕ್ ಪ್ರದರ್ಶಿಸಿದರು. ಶಂಕರ್ ಶಾನುಭೊಗ್ ಮತ್ತು ಸಂಗೀತ ಕಟ್ಟಿಯವರಿಂದ ಸಂಗೀತವು ಸಭಿಕರನ್ನು ಭಾವಸಾಗರದಲ್ಲಿ ತೇಲಾಡಿಸಿತು. ಹಿಂದಿನ ದಿನದಂತೆ ಕೋಲಾಟದೊಂದಿಗೆ ಈ ದಿನ ಮುಕ್ತಾಯವಾಯಿತು.

ಮೂರನೇಯದಿನ : ಭಾನುವಾರ ಆರ್ಡೆನ್ ಕೋರ್ಟ್ ಎಂಬ ಆರ್ಥಿಕ ಸಲಹೆ ಸಂಸ್ಥೆಯ ನಾತ್ ಪಾರ್ಮರ್ ಅವರು ಆರ್ಥಿಕವ್ಯವಸ್ಥೆಗಳನ್ನು ನೋಡಿಕೊಳ್ಳುವುದು ಹೇಗೆ ಎಂಬುದನ್ನು ತೋರಿಸಿದರು. ಇದಾದಮೇಲೆ ಕವಿಗೋಷ್ಠಿಯು ನಿಸಾರ್ ಅಹಮದ್ ಅವರ ಅಧ್ಯಕ್ಷತೆಯಲ್ಲಿ ಆರಂಭವಾಯಿತು. ಜಯಂತ್ ಕಾಯ್ಕಿಣಿ, ಮೋಹನ್ ಅರ್ಕಾನಾಥ್ ಮತ್ತಿತರರು ಭಾಗವಹಿಸಿದ್ದರು. ಡಾ. ಉಮಾ ವೆಂಕಟೇಶ್ ಅವರ ಸ್ವಾಗತ ಭಾಷಣದ ನಂತರ ನಿಸಾರ್ ಅವರು "ಕನ್ನಡ ಭಾಷೆ, ಅದರ ಸ್ಥಾನ ಮತ್ತು ಇತರ ಭಾರತೀಯ ಭಾಷೆಗಳ ಪ್ರಭಾವ" ಎಂಬ ವಿಚಾರವಾಗಿ ಭಾಷಣ ಮಾಡಿದರು. ಕವಿ ಜಯಂತ್ ಕಾಯ್ಕಿಣಿಯವರು ಪದ್ಯ ಓದಿದರೆ, ಪ್ರೊ. ಕೃಷ್ಣೇಗೌಡರು "ಹಾಸ್ಯ ಪ್ರಜ್ಞೆ" ಎಂಬ ಕುರಿತು ಮಾತನಾಡಿದರು. ಡಾ. ರಾಮಕೃಷ್ಣ ರಾವ್ ರವರು "ದಾಸ ಸಾಹಿತ್ಯದಲ್ಲಿ ಹಾಸ್ಯ" ಎಂಬ ವಿಷಯ ಕುರಿತು ಮಾತನಾಡಿದರು.

ಇದೇ ಸಮಯದಲ್ಲಿ ಕನ್ನಡಕವಿ ಜಿ ಪಿ ರಾಜರತ್ನಂ ಅವರ ಜನ್ಮಶತಾಬ್ಧಿಯ ಜ್ಞಾಪಕಾರ್ಥವಾಗಿ ಅವರ ಮಕ್ಕಳ ಪದ್ಯವಾದ "ಬಣ್ಣದ ತಗಡಿನ ತುತ್ತೂರಿ" ಕವನ ಓದಲಾಯಿತು. ವಿಕ್ರಮ್ ಸಂಪತ್ ರವರ "ಸ್ಪ್ಲೆಂಡರ್ಸ್ ಆಫ್ ರಾಯಲ್ ಮೈಸೂರ್: ಅನ್ ಟೋಲ್ಡ್ ಸ್ಟೋರಿ ಆಫ್ ದಿ ಒಡೆಯರ್ಸ್" ಎಂಬ ಆಂಗ್ಲಭಾಷೆಯಲ್ಲಿ ಬರೆದ ಪುಸ್ತುಕವನ್ನು ನಿಸಾರ್ ಅಹಮದ್ ರವರು ಬಿಡುಗಡೆ ಮಾಡಿದರು. ನಿಸಾರ್ ಅಹಮದ್ ರವರ ಅಣತಿಯಂತೆ ಡಾ. ರಾಜಾರಾಮ್ ಕಾವಳೆಯವರನ್ನು ಮೊದಲನೆಯ ವಿಶ್ವ ಕನ್ನಡಿಗರ ಸಮ್ಮೇಳನದಲ್ಲಿ ಓದಿದ "ವಿದೇಶೀ ಕನ್ನಡಿಗನ ಕೊರಗು" ಎಂಬ ಕವನವನ್ನು ಜ್ಞಾಪಿಸಿಕೊಂಡು ಓದಿದರು.

ಮಧ್ಯಾಹ್ನ ಊಟವಾದಮೇಲೆ ಪಾವಗಡ ಪ್ರಾಜೆಕ್ಟ್‌ನ ಉಚಿತ ಆಸ್ಪತ್ರೆಯನ್ನು ನಡೆಸುತ್ತಿರುವ ಜಪಾನಂದ ಸ್ವಾಮಿಯವರು ತಮ್ಮ ಆಸ್ಪತ್ರೆಯಲ್ಲಿ ಉಚಿತವಾಗಿ ಬಡವರಿಗೆ ಚಿಕಿತ್ಸೆ ನೀಡುವ ವಿಚಾರವಾಗಿ ಮಾತನಾಡಿದರು. ಕನ್ನಡಬಳಗದ ಮೂಲಕ ಕೇವಲ ಹತ್ತು ಪೌಂಡುಗಳಷ್ಟು ದಾನಮಾಡಿದರೆ ಅದು ಒಂದು ರೋಗಿಗೆ ದೃಷ್ಟಿ ಕೊಡುವುದಾಗಿ ಆ ಆಸ್ಪತ್ರೆಗೆ ಸಹಾಯ ಮಾಡುತ್ತಿರುವ ಡಾ. ಸೂರ್ಯನಾರಾಯಣ ಶೆಟ್ಟಿಯವರು ಹೇಳಿದರು.

ಕೆ ಎಸ್ ಎಲ್ ಸ್ವಾಮಿಯವರು ಆಶುಭಾಷಣ ಸ್ಪರ್ಧೆಯನ್ನು ನಡೆಸಿ ವಿಜೇತರಿಗೆ ಬಹುಮಾನವನ್ನು ನೀಡಿದರು. ಆನಂತರ ಸಾಯಂಕಾಲದ ಊಟವಾದನಂತರ ಯುವಕ ಕನ್ನಡತಿಯರು "ಸೀರೆ" ಯ ವಿಷಯವಾಗಿ ಭಾರತದ ಸೀರೆಯ ಸಂಪೂರ್ಣ ಚರಿತ್ರೆಯನ್ನು ಮತ್ತು ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಉಡುವ ಸೀರೆಯನ್ನು ಉದಾಹರಣೆಗಳೊಂದಿಗೆ ಪ್ರದರ್ಶಿಸಿ ವೀಕ್ಷಕರ ಮೆಚ್ಚುಗೆಯ ಪಾತ್ರರಾದರು. ಈ ಪ್ರದರ್ಶನದಲ್ಲಿ ಅನು ಗಿಣಿಮಾವು ಮತ್ತು ಮಿನೂ ಪುರಾಣಿಕ್ ರವರು ಕನ್ನಡದಲ್ಲೂ ಮತ್ತು ಇಂಗ್ಲಿಷಿನಲ್ಲು ವಿವರಿಸಿದರು. ಡಾ. ಭಾನುಮತಿ ಮತ್ತು ರಾಮಮೂರ್ತಿಯವರು ಎಲ್ಲರಿಗೂ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ಅಂತ್ಯದಲ್ಲಿ ನೂಪುರ್ ನಾಟ್ಯಶಾಲೆಯ ಹರಿ ಮತ್ತು ಚೇತನರಿಂದ ಬಹುವಿಸ್ಮಯಕರವಾದ ಪರ್ಷಿಯಾದ ಕವಿ ಮಿರ್ಜಾಘಾಲೀಬನ ಪ್ರೇಮಕಾವ್ಯವನ್ನು ಅಭಿನಯಿಸಿದರು. ಆ ನಂತರ ಕೃಷ್ಣೇಗೌಡರ ಹಾಸ್ಯ ಪವಾಹವು ಎಂದಿನಂತೆ ಹರಿದು ಸಂಗೀತಕಟ್ಟಿ ಮತ್ತು ಶಂಕರ ಶಾನುಭೋಗರ ಭಾವಗೀತೆಗಳೊಂದಿಗೆ ರಜತಮಹೋತ್ಸವದ ಕೊನೆಯ ತೆರೆ ಬೀದ್ದಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X