• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹರಿಯುವ ನೀರಲ್ಲಿ ಕೃಷಿಮಾಡದ ಅನಿವಾಸಿ ರೈತ!

By Staff
|

ಹರಿಯುವ ನೀರಲ್ಲಿ ಕೃಷಿಮಾಡದ ಅನಿವಾಸಿ ರೈತ!ವಾಷಿಂಗ್ ಟನ್, ಜ. 2: ಮೇರಿಲ್ಯಾಂಡಿನ ಕನ್ನಡ ಚಾವಡಿ "ಭೂಮಿಕಾ"ದ ವರ್ಷದ ಕೊನೆಯ "ತೆರೆದ ಮನೆ, ತೆರೆದ ಭೂಮಿಕೆ" ಕಾರ್ಯಕ್ರಮ ಇಲ್ಲಿನ ಬಾವರ್ ಕಮ್ಯುನಿಟಿ ಸೆಂಟರ್ ನಲ್ಲಿ ಇತ್ತೀಚೆಗೆ ನಡೆಯಿತು . ಡಿಸೆಂಬರ್ ತಿಂಗಳ ಕೊರೆಯುವ ಚಳಿಯಿದ್ದರೂ ವಾಷಿಂಗ್ಟನ್ ಸುತ್ತಲಿನವರೇ ಅಲ್ಲದೇ, ವರ್ಜೀನಿಯ, ನಾರ್ತ್ ಕೆರೊಲಿನ ಮುಂತಾದ ಪ್ರಾಂತ್ಯದಲ್ಲಿನ ಕನ್ನಡಿಗರ ಜತೆಗೆ ದೂರವಾಣಿಯ ಮೂಲಕ ನ್ಯೂಜೆರ್ಸಿ ಹಾಗೂ ಶಿಕಾಗೊಗಳಲ್ಲಿನ ಕನ್ನಡ ಅಭಿಮಾನಿಗಳೂ ಭಾಗವಹಿಸಿದ್ದರು.

ಮೊದಲಿಗೆ ಭೂಮಿಕಾದ ಸಂಚಾಲಕಿ ಡಾ.ವಿಜಯ ಕುಲಕರ್ಣಿಯವರು ಭೂಮಿಕಾದ 13 ವರ್ಷಗಳ ಪಯಣದ ಕಿರು ಪರಿಚಯಮಾಡಿಕೊಟ್ಟರು. ಭೂಮಿಕಾದ ಸಾಧನೆಗಳ ವರದಿ ನೀಡಿದ ನಂತರ, 2007ರಲ್ಲಿ ಭೂಮಿಕಾ ಮೈಗೂಡಿಸಿಕೊಂಡ ಕಾರ್ಯಕ್ರಮಗಳಲ್ಲಿನ ನಾವೀನ್ಯತೆ ಬಗ್ಗೆ ಪರಿಚಯಿಸಿದರು : ಮುಖ್ಯವಾಗಿ ವೈಜ್ಞಾನಿಕ ಹಾಗು ತಾಂತ್ರಿಕ ಬರಹಗಳು, ಪ್ರವಾಸ ಕಥನ ಇತ್ಯಾದಿ. ಆಲ್ಲದೇ ಸಣ್ಣಕಥೆಗಳಿಗೆಂದೇ ಮೀಸಲಾದ "ಒಂದಲ್ಲ ಒಂದು ಊರಲ್ಲಿ" ಎಂಬ ತ್ರೈಮಾಸಿಕ ಪತ್ರಿಕೆಯ ಮೊದಲ ಸಂಚಿಕೆಯ ಪೋಷಕರಾಗಿರುವುದನ್ನು ಪ್ರಸ್ತಾಪಿಸಿದರು. ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆಯಾದ ಈ ಸಂಚಿಕೆ ಹೆಚ್ಚಾಗಿ ಅನಿವಾಸಿ ಕನ್ನಡ ಸಣ್ಣಕತೆಗಾರರಿಗೆಂದೇ ನಿಯೋಜಿಸಲಾಗಿದ್ದು, ಬರಹಗಾರರನ್ನು ಆಹ್ವಾನಿಸಿದರು. ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಈ ಸಮಾರಂಭಕ್ಕೆಂದೇ ರಾಚೆಸ್ಟರ್(ಮಿನಸೋಟ)ನಿಂದ ಆಗಮಿಸಿದ್ದ, ಡಾ||ಗುರುಪ್ರಸಾದ್ ಕಾಗಿನೆಲೆಯವರು"ಇಂದಿನ ಕನ್ನಡ ಬರಹಗಾರರು" ಎಂಬ ವಿಷಯದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಕಾಗಿನೆಲೆಯವರ ಅನೇಕ ಕಥೆ ಹಾಗೂ ಲೇಖನಗಳು ಕನ್ನಡದ ಸಾಪ್ತಾಹಿಕಗಳಲ್ಲಿ, ವಿಶೇಷಾಂಕಗಳಲ್ಲಿ, ಅಂತರ್ ಜಾಲದಲ್ಲಿ ಪ್ರಕಟವಾಗಿವೆ. ವೃತ್ತಿಯಲ್ಲಿ ವೈದ್ಯರಾಗಿದ್ದು, ಸಣ್ಣಕತೆಗಾರರೆಂದು ಗುರುತಿಸಿಕೊಳ್ಳುವ ಕಾಗಿನೆಲೆ ಇಂದಿನ ಕನ್ನಡ ಮತ್ತು ಪಾಶ್ಚಿಮಾತ್ಯ ಸಾಹಿತ್ಯಗಳನ್ನು ಆಳವಾಗಿ ಗ್ರಹಿಸಿಕೊಂಡಿದ್ದಾರೆ. ಇಂದಿನ ಕನ್ನಡ ಬರಹಗಾರರ ಶೈಲಿ, ನಿಲುವು ಹಾಗು ಬರಹಗಳ ವ್ಯಾಪ್ತಿಯನ್ನು ಉದಾಹರಣೆಗಳೊಂದಿಗೆ ಅವರು ವ್ಯಾಖ್ಯಾನಿಸಿದರು.

ವೈದ್ಯವೃತ್ತಿಯ ಹಿನ್ನೆಲೆಯಲ್ಲಿ ಬಂದ ಕೃತಿಗಳನ್ನು ಕಾಗಿನೆಲೆ ಮೂರು ನೆಲೆಗಳಲ್ಲಿ ವಿಂಗಡಿಸುತ್ತಾರೆ. ಒಂದು ವೈದ್ಯರು, ವೈದ್ಯರಿಗಾಗಿ ಬರೆಯುವುದು. ಸಂಶೋಧನೆ, ಆವಿಷ್ಕಾರಗಳ ಬಗ್ಗೆ ವೈದ್ಯಕೀಯ ಜರ್ನಲ್‌ಗಳಲ್ಲಿ ಬರುವ ಲೇಖನಗಳು ಈ ಗುಂಪಿಗೆ ಸೇರುತ್ತವೆ. ಎರಡನೆಯದು ವೈದ್ಯರು ಜನಸಾಮಾನ್ಯರಿಗಾಗಿ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ, ಜನರಿಗೆ ಉಪಯೋಗವಾಗುವ ಆರೋಗ್ಯ, ಚಿಕಿತ್ಸೆಗೆ ಸಂಬಂಧಿಸಿ ಬರೆದವುಗಳು. ಮೂರನೆಯದು ಸೃಜನಶೀಲ ಸಾಹಿತ್ಯ. ಕತೆ, ಕಾದಂಬರಿ ಮುಂತಾದ ಪ್ರಕಾರಗಳಲ್ಲಿ ತೊಡಗಿಸಿಕೊಳ್ಳುವುದು. ಕಾಗಿನೆಲೆಯವರು ಇವುಗಳಲ್ಲಿ ಮೊದಲ ಗುಂಪಿನಲ್ಲಿ ಹೆಚ್ಚು ಬರೆದಿಲ್ಲ. ಮೂರನೆಯ ಗುಂಪಿನಲ್ಲಿ ಬರೆದವುಗಳಲ್ಲಿ ಸಣ್ಣಕತೆಗಳು ಹೆಚ್ಚು. ಕಾಗಿನೆಲೆಯವರ ಬಹಳಷ್ಟು ಕತೆಗಳಲ್ಲಿ ಅವರ ವೈದ್ಯವೃತ್ತಿಯ ಅನುಭವ ಒಂದಲ್ಲಾ ಒಂದು ಬಗೆಯಲ್ಲಿ ಕಂಡುಬರುತ್ತದೆ. ಉದಾಹರಣೆಗೆ, ಕಥಾನಾಯಕ ಅಥವಾ ನಿರೂಪಕ ವೈದ್ಯನಿರಬಹುದು, ಅಥವಾ ಮುಖ್ಯಪಾತ್ರ ಒಬ್ಬ ರೋಗಿಯೇ ಆಗಿರಬಹುದು.

ಎರಡನೆ ಗುಂಪಿಗೆ ಸಲ್ಲುವ ಹಲಕೆಲವು ಲೇಖನಗಳನ್ನು ಗುರುಪ್ರಸಾದ್ ಬರೆದಿದ್ದಾರೆ. ಅವುಗಳಲ್ಲಿ ಹೆಚ್ಚಿನವು ಓದುಗರ ಮೆಚ್ಚುಗೆ ಗಳಿಸಿವೆ, ಹಾಗೂ ಉಪಯುಕ್ತ ಬರಹಗಳೆಂಬ ಪ್ರತಿಕ್ರಿಯೆ ದೊರೆತಿವೆ. ಅಮೆರಿಕಾದಲ್ಲಿ ಆಗುವ ಸಂಶೋಧನೆಗಳು ಭಾರತದಲ್ಲಿ ಎಷ್ಟು ಪ್ರಸ್ತುತ ಎಂಬ ಪ್ರಶ್ನೆ ಕಾಗಿನೆಲೆಯವರಿಗೆ ಕಾಡಿದೆ. ಅಮೆರಿಕಾದಲ್ಲಿ ಸಾಕ್ಷ್ಯಾಧಾರ, ಪುರಾವೆಗಳ ಮೇಲೆ ಬಿಡುಗಡೆ ಹೊಂದುವ ಔಷಧಿ, ಚಿಕಿತ್ಸಾಕ್ರಮಗಳಿಗೆ, ಭಾರತದಲ್ಲಿ ಆರ್ಥಿಕ, ಸಾಮಾಜಿಕ ಮಾಪನಗಳು ಭಿನ್ನವಾದರೂ ಕುರುಡಾಗಿ ಉಪಯೋಗಿಸಿ, ತಮ್ಮ ರೋಗಿಗಳನ್ನು ದಾರಿತಪ್ಪಿಸುವ ಅನೇಕ ವೈದ್ಯರುಗಳನ್ನು ಕಂಡು, ಕೇಳಿ, ಸ್ಪಂದಿಸಿ ಕೆಲವು ಲೇಖನಗಳನ್ನು ಬರೆದಿದ್ದಾರೆ.

ತಮ್ಮನ್ನು ಪ್ರಮುಖವಾಗಿ ಸಣ್ಣಕತೆಗಾರರೆಂದು ಗುರುತಿಸಿಕೊಳ್ಳುವ ಕಾಗಿನೆಲೆ, ಕಾವ್ಯ ಕವನಗಳಿಗಿಂತಲೂ ಇತ್ತೀಚಿನ ಬಹಳಷ್ಟು ಕತೆಗಳನ್ನು ಓದಿದ್ದಾರೆ. ಅವರು ಕಂಡಂತೆ ಹೊಸಗುಂಪಿನ ಕತೆಗಾರರಲ್ಲಿ ಹೆಚ್ಚಿನವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಕನ್ನಡ ಮಾಧ್ಯಮದಲ್ಲಿ ಮಾಡಿದವರು. ಹಾಗೂ ಕನ್ನಡದ ಮನಸ್ಸಿನಿಂದ ಹೊರಜಗತ್ತನ್ನು ನೋಡಿದವರು. ಕಾಗಿನೆಲೆ ಇತ್ತೀಚಿನ ಹೆಚ್ಚಿನ ಬರಹಗಾರರ ಕೃತಿಗಳಲ್ಲಿ ಮೂರು ಘಟ್ಟಗಳನ್ನು ಗುರುತಿಸುತ್ತಾರೆ. ಮೊದಮೊದಲ ಕೃತಿಗಳಲ್ಲಿ ಒಂದು ರೀತಿಯ ಬೆರಗಿರುತ್ತದೆ. ಈ ಬೆರಗು ಹಳ್ಳಿಹುಡುಗ ಮೊದಲಿಗೆ ಬೆಂಗಳೂರಿಗೆ ಬಂದಾಗ, ಭಾರತೀಯನೊಬ್ಬ ಪಾಶ್ಚಿಮಾತ್ಯ ದೇಶಗಳಿಗೆ ಮೊದಲು ಹೋದಾಗ, ಅಥವಾ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿದ್ದರೂ ಅಲ್ಲಿನ ಇತ್ತೀಚಿನ ಬದಲಾವಣೆಗಳು, ಬಹುರಾಷ್ಟೀಯ ಕಂಪೆನಿಗಳ ಬದುಕನ್ನು ಮೊದಮೊದಲು ನೋಡಿದಾಗ ಅನುಭವಿಸುವಂತಹುದು.

ಎರಡನೇ ಘಟ್ಟದಲ್ಲಿ ಹೆಚ್ಚಿನ ಬರಹಗಾರ ಕೃತಿಗಳಲ್ಲಿ ಒಂದು ರೀತಿಯ ಪಾಪಪ್ರಜ್ಞೆಯನ್ನು ಕಾಗಿನೆಲೆ ಗುರುತಿಸುತ್ತಾರೆ. ಇದು ಬಹುಶಃ ಕನ್ನಡಕ್ಕೆ ನಾವು ಏನು ಮಾಡಿದ್ದೇವೆ ಎಂಬಂತಹ ಸ್ಪಂದನ. ಇನ್ನೂ ಮುಂದುವರೆದು ಬರೆದ ಕೃತಿಗಳಲ್ಲಿ ತಮ್ಮ ತಮ್ಮ ವೃತ್ತಿಯ ಅನಿವಾರ್ಯತೆಯ ಅರಿವು, ಅದರ ಇತಿಮಿತಿಗಳಲ್ಲಿ ಬರೆಯಬೇಕೆಂಬ ಸಿನಿಕತನ ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು.

ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಶೈಲಿಯ ಕೃತಿಗಳಲ್ಲಿ ಆಯಾ ಕಾಲದ ಸಾಮಾಜಿಕ ಅಗತ್ಯಗಳಿಗೆ ಸ್ಪಂದಿಸಿ ಬರೆದದ್ದನ್ನು ಕಾಣುತ್ತೇವೆ. ಸಾಮಾಜಿಕ ಪಲ್ಲಟ, ಬದಲಾವಣೆಗಳನ್ನು ಕಾಣುತ್ತೇವೆ. ಉದಾಹರಣೆಗೆ ನವೋದಯದಲ್ಲಿ ಸ್ವಾತಂತ್ರ್ಯ ಸಂಗ್ರಾಮ, ರಮ್ಯತೆ, ಉದಾತ್ತತೆ ಕಂಡರೆ, ಪ್ರಗತಿಶೀಲದಲ್ಲಿ ಸ್ವಾತಂತ್ರ್ಯಾನಂತರದ ಭ್ರಮನಿರಸನ, ಹಿಂಸೆ, ಶೋಷಣೆ, ಬಡತನದ ಬಗ್ಗೆ ಸಾಹಿತಿಯ ಸಾಮಾಜಿಕ ಜವಾಬ್ದಾರಿ ಕಾಣುತ್ತದೆ. ಇನ್ನು ನವ್ಯದಲ್ಲಿ ಸಮಾಜದ ಉದ್ಧಾರಕ್ಕೂ ಮುಂಚೆ ತಮ್ಮನ್ನು ತಾವು ಕಂಡುಕೊಳ್ಳಬೇಕೆಂಬ ಅಭಿಪ್ರಾಯ ಕಾಣುತ್ತದೆ. ಇತ್ತೀಚಿನ ಕನ್ನಡ ಬರಹಗಳು ನವ್ಯದ ಪ್ರಭಾವದಿಂದ ಸಂಪೂರ್ಣವಾಗಿ ತಪ್ಪಿಸಿಕೊಳ್ಳಲು ಆಗಿಲ್ಲ ಎಂದು ಕಾಗಿನೆಲೆ ಅಭಿಪ್ರಾಯಪಟ್ಟರು.

ಹಿಂದಿನ ಕನ್ನಡದ ಬರಹಗಾರು ಹಾಗೂ ವಿಮರ್ಶಕರಲ್ಲಿ ಹೆಚ್ಚಿನವರು ಇಂಗ್ಲೀಷ್ ಅಥವಾ ಕನ್ನಡದ "ಮೇಷ್ಟ್ರು"ಗಳು ಅಂದರೆ ಸಾಹಿತ್ಯಿಕ ಹಿನ್ನೆಲೆಯಲ್ಲಿ ಬಂದವರು, ಆದರೆ ಇತ್ತೀಚಿನ ಬರಹಗಾರರು ಬೇರೆ ಬೇರೆ ವೃತ್ತಿ, ಜೀವನಾನುಭವ, ಹಿನ್ನೆಲೆಯಲ್ಲಿ ಬೆಳೆದುಬಂದವರು ಎಂಬ ಬಗ್ಗೆ ಸಭಿಕರ ಗಮನ ಸೆಳೆದರು ಕಾಗಿನೆಲೆ. ಇದೇಕೆ ಮುಖ್ಯವೆಂದರೆ, ಒಂದೇ ವಸ್ತುವನ್ನು ಬೇರೆ ಬೇರೆ ವೃತ್ತಿಯವರು ನೋಡಿದಾಗ ಅವರ ದೃಷ್ಟಿಕೋನ, ಉಪಯೋಗಿಸುವ ಭಾಷೆ ಬದಲಾಗುತ್ತಾ ಹೋಗುತ್ತದೆ. ಇತ್ತೀಚೆಗೆ ಹಿಂದಿನಂತೆ ಸಾಹಿತ್ಯ ಕೃಷಿಯನ್ನು ಜೀವನವೃತ್ತಿ ಎಂದು ನಂಬಿದವರಿಲ್ಲ. ತಮ್ಮ ತಮ್ಮ ಅನುಭವ, ಸಂವೇದನೆಗಳು ಕಾಣುತ್ತವೆಯೇ ಹೊರತು, ಅರೆಯುವುದಕ್ಕೆಂದೇ ಸಂಶೋಧನೆ ಮಾಡಿರುವುದು ಕಂಡುಬರುವುದಿಲ್ಲ ಎಂದರು ಕಾಗಿನೆಲೆ.

ಕಾಗಿನೆಲೆಯವರಿಗೆ ಮುಖ್ಯವೆನಿಸಿದ ಕೆಲವು ಇತ್ತೀಚಿನ ಬರಹಗಳೆಂದರೆ: ಸುರೇಂದ್ರನಾಥರ "ನಾತಲೀಲೆ", ಸುನಂದಾರ "ಪುಟ್ಟ ಪಾದದ ಗುರುತು, "ಸುಮಂಗಳಾರ "ಜುಮುರು ಮಳೆ", ವಸುಧೇಂದ್ರರ "ಚೇಳು ಮತ್ತು ಯುಗಾದಿ", ವಿವೇಕ್ ಶ್ಯಾನುಭಾಗರ "ಮತ್ತೊಬ್ಬನ ಸಂಸಾರ", ಜಯಂತ್ ಕಾಯ್ಕಿಣಿಯವರ ಕತೆಗಳು ಮುಂತಾದುವು. ಇನ್ನು ಇತ್ತಿಚೆಗೆ blog ಗಳಲ್ಲಿ ಬರುತ್ತಿರುವ ಕೆಲವು ಬರಹಗಳು ಸಹಾ ಗಮನಾರ್ಹ ಎಂದರು.

ಇತ್ತೀಚಿನ ಕನ್ನಡ ಬರಹಗಳಲ್ಲಿ ಜಾಗತೀಕರಣದ ಅಂಶಗಳನ್ನು, ಪ್ರಭಾವವನ್ನು ಗುರುತಿಸಿ, ತಮ್ಮ ಕೆಲವು ಅನಿಸಿಕೆಗಳನ್ನು ಹಂಚಿಕೊಂಡರು ಕಾಗಿನೆಲೆ. ಉದಾಹರಣೆಗೆ 1993 ರಲ್ಲಿ ಬಂದ ವಿವೇಕ್ ಶ್ಯಾನುಭಾಗರ "ಹುಲಿಸವಾರಿ" ಕಥೆಯಲ್ಲಿ ಆಫ್ರಿಕಾದಿಂದ ಬಂದ ಉಚೆ, ಮುಂಬೈಯಲ್ಲಿ ಬಿಸಿನೆಸ್ ಸ್ಟ್ರಾಟೆಜಿ ಆಟದಲ್ಲಿ ಆಫ್ರಿಕಾಕಾದಲ್ಲಿ ವ್ಯಾಪಾರ ಮಾಡುವ ಉಪಾಯವನ್ನು ವಿರೋಧಿಸುತ್ತಾನೆ. ಯುದ್ಧಗಳು ಶುರುವಾಗುವುದು ಮೊದಲು ಪೇಪರ್ ಮೇಲೆ ಎಂದು ವಾದಿಸುತ್ತಾನೆ. ಈ ಕತೆಯ ಮುಖ್ಯಾಂಶ ಜಾಗತೀಕರಣ ಹುಲಿಸವಾರಿಯಿದ್ದಂತೆ, ಹತ್ತಿದ ಮೇಲೆ ಇಳಿಯುವಂತಿಲ್ಲ, ಇಳಿದರೆ ಹುಲಿ ತಿಂದುಬಿಡುತ್ತದೆ ಎಂಬ ರೂಪಕ.

ಇನ್ನು ಹೊರನಾಡಿನ ಕನ್ನಡಿಗರ ಬರಹಗಳಲ್ಲಿ ಅನಿವಾಸಿ ಪ್ರಜ್ಞೆಯನ್ನು ಕಾಣಬಹುದು. ಅನಿವಾಸಿ ಕನ್ನಡಿಗರು ಬರೆದರೂ ಕನ್ನಡದಲ್ಲಿ ಬರೆಯುತ್ತಾರೆ ಎನ್ನುವುದಷ್ಟೇ ಮುಖ್ಯ. ಏಕೆಂದರೆ ಬೇರೆ ದೇಶಗಳಲ್ಲಿ ಎಷ್ಟು ವರ್ಷಗಳಿದ್ದರೂ, ಅಲ್ಲಿನ ಪಾತ್ರಗಳನ್ನೇ ಉಪಯೋಗಿಸಿ ಬರೆದರೂ, ಕನ್ನಡದ ಮನಸ್ಸಿನಿಂದ ನೋಡಬಹುದೇ ಹೊರತು, ಬೇರೆ ರೀತಿ ಕಾಣುವುದು ಸಾಧ್ಯವಿಲ್ಲ. ಅಲ್ಲದೇ ಬಹಳಷ್ಟು ಅನಿವಾಸಿ ಬರಹಗಾರರು, ಕರ್ನಾಟಕದಲ್ಲಿ ಹೊಸದಾಗಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ಹೆಚ್ಚು ಪರಿಶ್ರಮಪಡದೆ, ತಾವು ದೇಶ ಬಿಟ್ಟು ಬಂದ ಕಾಲದಲ್ಲೇ ನಿಂತಿರುವುದನ್ನು ಅವರ ಬರಹಗಳಲ್ಲಿ ಕಾಣಬಹುದು ಎಂದು ಕಾಗಿನೆಲೆ ಅಭಿಪ್ರಾಯಪಟ್ಟರು.

ಯು.ಆರ್.ಅನಂತಮೂರ್ತಿಯಂಥ ಒಬ್ಬ ಬರಹಗಾರನಿಗೆ ತಾನು ಬರೆಯುತ್ತಿರುವ ಹಿಂದಿನ 50 ವರ್ಷಗಳ ಸಾಹಿತ್ಯ ಮಾತ್ರ ಪ್ರಭಾವ ಬೀರುತ್ತದೆ ಎಂಬರ್ಥದ ಮಾತನ್ನು ಕಾಗಿನೆಲೆ ಉಲ್ಲೇಖಿಸಿದರು. ಅಂದರೆ ಪಂಪ, ರನ್ನರಿರಲಿ, ನವೋದಯದ ಕಾಲದ ಸಾಹಿತಿಗಳೂ ಸಹಾ ಇಂದಿನ ಬರಹಗಳ ಮೇಲೆ ಹೆಚ್ಚು ಪ್ರಭಾವ ಬೀರಲಾರರು. ಕಾಲಕ್ಕೆ ಅನುಗುಣವಾಗಿ ಭಾಷಾಪಲ್ಲಟ ಸಹಾ ಇತ್ತೀಚಿನ ಬರಹಗಳಲ್ಲಿ ಕಾಣಬಹುದು. ಮಾಲು, ಮಾರ್ಟ್, ಸಾಫ್ಟ್ ವೇರ್ ಮುಂತಾದ ಅನೇಕ ಪದಗಳು ಕನ್ನಡ ಬರಹಗಳಿಗೆ ಆಮದಾಗಿವೆ. ಇವುಗಳ ಜೊತೆಗೆ ಅನೇಕ ಬರಹಗಾರರು ತಮ್ಮದೇ ಪದಗಳನ್ನು ಸೃಷ್ಟಿಸಿದ್ದಾರೆ. ಸ್ವತಃ ಕಾಗಿನೆಲೆ ತಮ್ಮ "ಬಿಳಿಯ ಚಾದರ" ಕಾದಂಬರಿಯುದ್ದಕ್ಕೂ, ಲ್ಯಾಪ್ ಟಾಪ್ ಎನ್ನುವುದಕ್ಕೆ "ತೊಡೆಯಮೇಲಿಗ" ಎಂಬ ಪದ ಬಳಸಿದ್ದಾರೆ!

ಕಾಗಿನೆಲೆಯವರ ಮಾತಿನ ನಂತರ ಇಂದಿನ ಬರಹಗಳ ಬಗ್ಗೆ ಹಾಗೂ ಅದಕ್ಕೆ ಸಂಬಂಧಿಸಿದ ಮುದ್ರಣ ಮಾರ್ಗದಲ್ಲಾಗಿರುವ ಕ್ರಾಂತಿ, ಇತ್ತೀಚಿನ ಪುಸ್ತಕ ಬಿಡುಗಡೆ ಸಮಾರಂಭಗಳ ಅದ್ದೂರಿ ಮುಂತಾದ ವಿಷಯಗಳ ಬಗ್ಗೆ ಚರ್ಚೆ ಮುಂದುವರೆಯಿತು. ಸಭೆಯಲ್ಲಿ ನೆರೆದವರಷ್ಟೇ ಅಲ್ಲದೇ, ಕಾರ್ಯಕ್ರಮದಲ್ಲಿ ದೂರವಾಣಿ ಮೂಲಕ ಭಾಗವಹಿಸಿದ್ದ ಸತೀಶ್‌ಕುಮಾರ್ "ಇಂದಿನ ಬರಹಗಾರರಿಗೆ ಜಾಗತೀಕರಣದ ವಿರುದ್ಧ ಬರೆಯುವುದು ಒಂದು ರೀತಿಯ ಫ್ಯಾಶನ್ ಆಗಿದೆ. ಜಾಗತೀಕರಣದಿಂದ ಎಷ್ಟೋ ಒಳ್ಳೆಯ ಪರಿಣಾಮಗಳಾಗಿವೆ ಎಂಬುದನ್ನು ನಾವು ಮರೆಯಬಾರದು" ಎಂದರು.

ಡಾ.ಗಣಪತಿ ಭೂಮಿಕಾದ ಪರವಾಗಿ ವಂದನಾರ್ಪಣೆ ಮಾಡುತ್ತಾ, ಕಾಗಿನೆಲೆಯವರ ಕೃತಿಗಳ ಬಗ್ಗೆ, ಮುಖ್ಯವಾಗಿ "ಬಿಳಿಯ ಚಾದರ"ಕಾದಂಬರಿಯ ಬಗ್ಗೆ ಮಾತನಾಡಿದರು. ರಶ್ಮಿಯ ಪಾತ್ರದ ಮೂಲಕ ಕಾಗಿನೆಲೆ ಅಮೆರಿಕಾದ ವೈದ್ಯಕೀಯ ವ್ಯವಸ್ಥೆಯಲ್ಲಿನ ದುಡ್ಡಿನ ಲೆಕ್ಕಾಚಾರದ ಮೇಲೆ ಮಾಡುವ ನಿರ್ಣಯಗಳನ್ನು ಪ್ರತಿಭಟಿಸುವ ಪ್ರಯತ್ನ ಮಾಡಿದ್ದಾರೆ. ಅವರು ಕಾದಂಬರಿಯುದ್ದಕ್ಕೂ ಬಳಸಿರುವ "ತೊಡೆಯ ಮೇಲಿಗ" ಪದಕ್ಕಿರುವ ಉದ್ದೇಶ ಓದುಗರಿಗೆ ಗೋಚರವಾಗುತ್ತದೆ ಎಂದರು. ಕಾಗಿನೆಲೆಯವರು ಒಂದು ರೀತಿಯಲ್ಲಿ ಹೊರನಾಡಿನ ಇಂದಿನ ಕನ್ನಡ ಬರಹಗಾರರ ಪ್ರತಿನಿಧಿ ಎಂದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more