• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತುಳಸಮ್ಮ ಯಾರು? ಅವಳಿಗಾದ ಅನ್ಯಾಯವೇನು?

By ವಿಶ್ವನಾಥ ಹುಲಿಕಲ್
|

ಹಿಂದೂ ನಾರಿಯರು ನಿತ್ಯ ತುಳಸಿಕಟ್ಟೆಗೆ ಪೂಜೆ ಮಾಡುವುದು ಸಂಪ್ರದಾಯ. ತುಳಸಿ ಯಾರು? ಅವಳನ್ನೇಕೆ ನಾವು ಪೂಜಿಸಬೇಕು ? ಪೌರಾಣಿಕ ಕಥೆಯನ್ನಾಧರಸಿ ಎಂ.ಬಿ.ಗೌರಮ್ಮ ಅವರು ರಚಿಸಿದ "ಸತೀ ಬೃಂದಾ" ಕಾವ್ಯ ಕೃತಿಯ ಒಳನೋಟಗಳು ಆಸಕ್ತರ ಕುತೂಹಲವನ್ನು ತಣಿಸುತ್ತದೆ.

ಸಾಹಿತ್ಯ ಗೋಷ್ಠಿಯ ಆಶ್ರಯದಲ್ಲಿ ಸಾರಾಟೋಗ ವಾಚನಾಲಯದ ಸಭಾಂಗಣದಲ್ಲಿ ದಿವಂಗತ ಎ.ಬಿ.ಗೌರಮ್ಮ ಅಚ್ಯುತರಾವ್ ಅವರು ರಚಿಸಿರುವ ನಡುಗನ್ನಡ ಕಾವ್ಯ 'ಸತೀ ಬೃಂದಾ"ದ ಬಗ್ಗೆ ಗಮಕ ವಾಚನ (ವಸಂತಲಕ್ಷ್ಮಿ) ಮತ್ತು ವ್ಯಾಖ್ಯಾನ (ವಿಶ್ವನಾಥ್ ಹುಲಿಕಲ್) ಕಾರ್ಯಕ್ರಮ ಸೆಪ್ಟೆಂಬರ್ 23, 2007ರಂದು ನಡೆಯಿತು. ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿರುವ ಈ ಕಾವ್ಯಕ್ಕೆ 1944,45ನೇ ಸಾಲಿನ ದೇವರಾಜ ಬಹದ್ದೂರ್ ಸ್ಮಾರಕ ಸಾಹಿತ್ಯ ಪ್ರಶಸ್ತಿ ದೊರಕಿರುವುದೊಂದು ವಿಶೇಷ. ಈ ಕಾವ್ಯದಲ್ಲಿ ನಿರೂಪಿತವಾಗಿರುವ ಬೃಂದೆಯ ಕಥೆ ಹೀಗಿದೆ:

ಶ್ರೀಮನೋಹರನಪ್ರತಿಮಗುಣ

ಧಾಮನೆನಿಪಾ ವ್ಯಾಸಮುನಿಪತಿ

ತಾಮಸವ ಪರಿಹರಿಪ ಪುರಾಣಗಳ ತಾ ಸೃಜಿಸಿ

ಆ ಮಹಾವನ ಬದರೀಕಾಶ್ರಮ

ಸೀಮೆಯೊಳು ಗುರುತಪದೊಳೆಸೆದಿರೆ

ತಾಮರಸಭವಸೂನು ಬಂದ ಸನತ್ಕುಮಾರಮುನಿ

ಪೌರಾಣಿಕ ಮಹತ್ವ : ಒಂದಾನೊಂದು ಕಾಲದಲ್ಲಿ ರಜತಗಿರಿಯಲ್ಲಿ ಶಿವನು ಗಿರಿಜೆ, ಷಣ್ಮುಖ ಮತ್ತು ಗಣೇಶರೊಡನೆ ಕಡುಸಂತೋಷದಿಂದ ಜೀವಿಸುತ್ತಾ, ತನ್ನ ಭಕ್ತರನ್ನು ಪಾಲಿಸುತ್ತಾ ಇದ್ದನು. ಹೀಗಿರುವಾಗ ಒಂದು ದಿನ ದೇವೇಂದ್ರನು ಶಿವನ ಒಡ್ಡೋಲಗಕ್ಕೆ ಬಂದು, ಅಮರಾವತಿಯಲ್ಲಿ ಅತಿಯಾದ ಸುಖಭೋಗಗಳಿಂದ ತನಗೆ ಬೇಸರವಾಗಿದೆಯೆಂದೂ, ತನಗೊಬ್ಬ ಶತ್ರುವನ್ನು ಕೊಡಬೇಕೆಂದೂ ಪ್ರಾರ್ಥಿಸಿದ. ಮಂದಮತಿಯಾದ ಇಂದ್ರನ ಬೇಡಿಕೆ ವಿಲಕ್ಷಣವಾದರೂ, ಶಿವ "ತಥಾಸ್ತು" ಎಂದು ಹೇಳಿ, ತನ್ನ ಹಣೆಗಣ್ಣನ್ನು ತೆರೆದ. ಅಲ್ಲಿಂದ ಹೊರಟ ಜ್ವಾಲೆಯಿಂದ ಒಂದು ಕಿಡಿಯು, ಭೂಮಂಡಲದ ಸಮುದ್ರಕ್ಕೆ ಬಿದ್ದು, ಆಶ್ಚರ್ಯಕರವಾದ ರೀತಿಯಲ್ಲಿ ಶಿಶುರೂಪವನ್ನು ತಾಳಿ, ಮುಳುಗದೆ ತೇಲುತ್ತಿತ್ತು.

ಇತ್ತ ಮಗಧ ದೇಶದಲ್ಲಿ, ಶ್ರೇಷ್ಠ ಪರಾಕ್ರಮಿ ಕಾಲನೇಮಿಯು ರಾಕ್ಷಸರ ಕುಲವನ್ನು ಅತ್ಯಂತ ಧರ್ಮಿಷ್ಠನಾಗಿ ಆಳುತ್ತಿದ್ದನು. ದುರದೃಷ್ಟವಶಾತ್ ಆ ರಾಜನಿಗೆ ಮಕ್ಕಳಿರಲಿಲ್ಲ. ಹೀಗಾಗಿ ಚಿಂತಿತಳಾಗಿರುವ ರಾಣಿಯ ಬೇಸರ ಪರಿಹಾರಕ್ಕಾಗಿ, ರಾಜ, ರಾಣಿ ಮತ್ತು ಪುರಜನರೆಲ್ಲರೂ ಸಮುದ್ರ ತೀರಕ್ಕೆ ವಿಹಾರಕ್ಕೆಂದು ಬಂದರು. ಸಮುದ್ರದಲ್ಲಿ ತೇಲುತ್ತಾ ದಂಡೆಯ ಬಳಿಗೆ ಬಂದ ಮಗುವನ್ನು ನೋಡಿದ. ರಾಜ ಅತ್ಯಾಶ್ಚರ್ಯನಾಗಿ, ಮಗುವನ್ನು ಮೇಲೆತ್ತಿ ತನ್ನ ಪತ್ನಿಗೆ ನೀಡಿದ. ಇದಾವ ಜನ್ಮದ ಸುಕೃತದ ಫಲವೋ ಎಂದುಕೊಂಡ ರಾಣಿ ತಾನು ಪುತ್ರವತಿಯಾದುದಕ್ಕೆ ಹಿರಿಹಿರಿ ಹಿಗ್ಗಿದಳು.

ರಾಜಧಾನಿಗೆ ವಾಪಸಾದ ನಂತರ, ಅಲ್ಲಿಗೆ ನಾರದ ಮುನಿಗಳ ಆಗಮನವಾಯಿತು. ಅವರು ಕಾಲನೇಮಿಗೆ, "ಶಿವನು ನಿನಗೊಲಿದು, ಈ ಶಿಶುವನ್ನು ದಯಪಾಲಿಸಿದ್ದಾನೆ; ಇದರಿಂದ ನಿನ್ನ ವಂಶಕ್ಕೆ ಒಳ್ಳೆಯದಾಗುವುದು." ಎಂದು ಹೇಳಿದರು. "ಇನ್ನು ಏಳು ವರ್ಷಗಳ ನಂತರ, ನಿನ್ನ ಹೆಂಡತಿ ಗರ್ಭವತಿಯಾಗಿ ಹೆಣ್ಣು ಶಿಶುವೊಂದಕ್ಕೆ ಜನ್ಮ ನೀಡುತ್ತಾಳೆ. ಆಕೆಯೇ ಮುಂದೆ ಈ ಮಗುವಿನ ಧರ್ಮಪತ್ನಿಯಾಗುವ ವಿಧಿನಿಯಾಮಕವಿದೆ" ಎಂದು ಸಹ ತಿಳಿಸಿ ಹೊರಟುಹೋದರು. ತದನಂತರ, ಆ ಮಗುವಿಗೆ ಜಲಂಧರನೆಂದು ನಾಕರಣ ಮಾಡಿ, ಸುಖ ಸಂತೋಷದಿಂದ ಸಂಭ್ರಮಿಸಿದರು. ಇದಾದ ಏಳು ವರ್ಷಗಳ ನಂತರ, ನಾರದರ ಮಾತಿನಂತೆ, ಆ ರಾಣಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು; ಆಕೆಗೆ ಬೃಂದಾ ಎಂಬ ಹೆಸರನ್ನಿಟ್ಟರು. [ಬೆಟ್ಟದ ನೆಲ್ಲಿಕಾಯಿಯ ಮಹಾತ್ಮೆ]

ಮುಂದೆ ಜಲಂಧರನಿಗೆ ಗುರುಮುಖೇನ ವಿದ್ಯೆಯನ್ನು ಶಾಸ್ತ್ರೋಕ್ತವಾಗಿ ನೀಡಲಾಯಿತು. ಶರವಿದ್ಯೆ, ನೃಪಧರ್ಮ, ಮುಂತಾದ ಎಲ್ಲಾ ವಿದ್ಯೆಗಳಲ್ಲೂ ಆತ ಪರಿಣಿತನಾದ. ಯೌವನದ ಪ್ರವರ್ಧಮಾನಕ್ಕೆ ಬಂದಾಗ ಜಲಂಧರ ತನ್ನ ತಂದೆಯ ಅನುಮತಿಯನ್ನು ಪಡೆದುಕೊಂಡು, ರಾಜ್ಯವಿಸ್ತರಣೆಗಾಗಿ ಯುದ್ಧಕ್ಕೆ ತೆರಳಿದ. ಅತ್ಯಂತ ಪರಾಕ್ರಮಿಯಾದ ಜಲಂಧರನು ಮಾಳವ, ಅಂಗ, ವಂಗ, ಕಳಿಂಗ, ಕಾಂಭೋಜ -- ಹೀಗೆ ಇನ್ನೂ ಅನೇಕ ರಾಜ್ಯಗಳನ್ನು ಗೆದ್ದು, ದಿಗ್ವಿಜಯ ಸಾಧಿಸಿ ತನ್ನ ರಾಜ್ಯಕ್ಕೆ ವಾಪಸಾದ.

ಕಾಲನೇಮಿಯ ಮಗಳು ಬೃಂದೆ ಅಷ್ಟರಲ್ಲಿ ಯೌವನವತಿಯಾಗಿ, ಆ ಲೋಕದಲ್ಲೇ ಆಕೆಯಷ್ಟು ಗುಣವತಿ, ಶೀಲವತಿ ಮತ್ತು ಸೌಂದರ್ಯವತಿ ಯಾರೂ ಇಲ್ಲವೆನ್ನುವ ರೀತಿ ಶೋಭಿಸುತ್ತಿದ್ದಳು. ಆಕೆಯ ಸ್ವಭಾವ ಹೇಗಿತ್ತೆಂದರೆ, ಪರರ ಕಷ್ಟಗಳಿಗೆ ಮರುಗುವ, ಪರರ ಸುಖ ಮತ್ತು ಉನ್ನತಿಯ ಬಯಸುವ ಮತ್ತು ಅವರ ಸುಖಗಳಲ್ಲಿ ಸಂಭ್ರಮಿಸುವ, ಬೇರೆಯವರ ದೋಷಗಳನ್ನೆತ್ತಿ ನುಡಿಯದ ಹಾಗೂ ಅವರ ಸದ್ಗುಣಗಳನ್ನು ಹೊಗಳುವ ರೀತಿಯಲ್ಲಿ ಆಕೆ ಪರಮ ಸದ್ಗುಣಗಳ ಸಾಗರದಂತೆ ಇದ್ದಳು. ನಾರದ ಮುನಿಗಳ ಮಾತಿನಂತೆ ಕಾಲನೇಮಿಯು, ಬೃಂದೆ ಮತ್ತು ಜಲಂಧರನ ವಿವಾಹವನ್ನು ವಿಜೃಂಭಣೆಯಿಂದ ಮಾಡಿ, ಅವರಿಗೆ ಹಿತೋಪದೇಶ ನೀಡಿ, ಜಲಂಧರನಿಗೆ ರಾಜ್ಯಾಭಿಷೇಕ ಮಾಡಿ, ವಾನಪ್ರಸ್ಥಾಶ್ರಮಕ್ಕೆ ತನ್ನ ಪತ್ನಿಯ ಜೊತೆ ತೆರಳಿದ.

ತದನಂತರ ಬೃಂದೆಯೊಡನೆ ಜಲಂಧರ ಸುಖ ಸಂತೋಷದಿಂದ ಜೀವಿಸುತ್ತಾ, ತನ್ನ ತಂದೆಯಂತೆ ನ್ಯಾಯಪರನಾಗಿ ರಾಜ್ಯವಾಳುತ್ತಿರುವಾಗ ಅಲ್ಲಿಗೆ ನಾರದ ಮುನಿಗಳು ಬಂದರು. ಅವರನ್ನು ಪ್ರೀತಿಯಿಂದ ಸತ್ಕರಿಸಿಯಾದ ಮೇಲೆ, ಗರ್ವದಿಂದ ತನ್ನ ಸಾಮ್ರಾಜ್ಯವನ್ನು ಹೊಗಳುತ್ತಾ, ಇಂತಹ ವೈಭವ ಭೂಲೋಕದಲ್ಲಿ ಬೇರೆಲ್ಲಾದರೂ ಇದೆಯೆ ಎಂದು ಅವರನ್ನು ಪ್ರಶ್ನಿಸಿದ. ನಾರದರು ಅದಕ್ಕುತ್ತರವಾಗಿ, ಭೂಲೋಕದಲ್ಲಿ ಇರದಿದ್ದರೂ, ಇಂದ್ರಲೋಕದ ಐಶ್ವರ್ಯಕ್ಕೆ ಸರಿಸಮನಾದುದು ಬೇರೆಲ್ಲೂ ಇಲ್ಲವೆಂದು ಹೇಳಿದರು.

ಆಗ ಜಲಂಧರ, ಇಂದ್ರನಿಗೆ ಅಷ್ಟೊಂದು ಸಿರಿಸಂಪತ್ತು ದೊರಕಿದಾದರೂ ಹೇಗೆ ಎನ್ನಲು, ನಾರದರು ಸಮುದ್ರ ಮಥನದ ಕಾಲದಲ್ಲಿ ನಾರಾಯಣನು ಮೋಹಿನಿಯ ರೂಪದಲ್ಲಿ ಬಂದು, ರಾಕ್ಷಸರಿಗೆ ಮೋಸಮಾಡಿ, ಸಾಗರದ ಸಂಪತ್ತೆಲ್ಲವನ್ನೂ ದೇವತೆಗಳಿಗೆ ಕೊಟ್ಟದ್ದನ್ನು ತಿಳಿಸಿದರು. ಅವರನ್ನು ಬೀಳ್ಕೊಟ್ಟ ಜಲಂಧರ ಕೊಂಚ ಕಾಲ ಚಿಂತಾಕ್ರಾಂತನಾಗಿದ್ದು, ನಂತರ ದೂತನೊಬ್ಬನನ್ನು ಅಮರಾವತಿಗೆ ಕಳುಹಿಸಿ, ಹಿಂದೆ ಮೋಸದಿಂದ ಪಡೆದುದೆಲ್ಲವನ್ನೂ ಮರಳಿ ಜಲಂಧರನಿಗೆ ಕೊಡಬೇಕೆಂದೂ, ಇಲ್ಲದಿದ್ದರೆ ಯುದ್ಧವನ್ನು ಎದುರಿಸಬೇಕೆಂದೂ ಸಂದೇಶ ಕಳುಹಿಸಿದ. ದೂತ ಬರಿಗೈಯಲ್ಲಿ ಹಿಂದಿರುಗಿದ್ದನ್ನು ಕಂಡು, ಜಲಂಧರ ತನ್ನ ಸೈನ್ಯವನ್ನು ತೆಗೆದುಕೊಂಡು ಇಂದ್ರನ ಮೇಲೆ ಯುದ್ಧಕ್ಕೆ ಹೋದ. ಆಲ್ಲಿ ವಿರಾವೇಶದಿಂದ ಹೋರಾಡಿ, ಇಂದ್ರನ ಮೇಲೆ ಜಯಗಳಿಸಿ, ಅಮರಾವತಿಯನ್ನು ತನ್ನ ವಶಕ್ಕೆ ತೆಗೆದುಕೊಂಡ.

ಅಪಜಯದಿಂದ ಕಂಗಾಲಾದ ಇಂದ್ರ, ನೈತಿಕಬಲ ಕಳೆದುಕೊಂಡ ಇತರ ದೇವತೆಗಳ ಸಂಗಡ, ಬ್ರಹ್ಮನನ್ನೂ ತಮ್ಮ ಜೊತೆಯಲ್ಲಿ ಕರೆದುಕೊಂಡು ವೈಕುಂಠಕ್ಕೆ ಹೋಗಿ, ಅಲ್ಲಿ ನಾರಾಯಣನಲ್ಲಿ ತಮ್ಮ ದುಃಖವನ್ನು ಹೇಳಿಕೊಂಡ. ಅವನಿಗೆ ಸಹಾಯಹಸ್ತ ಚಾಚಿದ ನಾರಾಯಣ, ತನ್ನ ಶಂಖವನ್ನು ಜೋರಾಗಿ ಊದಿ, ಇಂದ್ರನನ್ನು ಜಲಂಧರನಲ್ಲಿಗೆ ಕಳುಹಿಸಿದ. ಶಂಖನಾದವನ್ನು ಕೇಳಿದ ಆಸ್ಥಾನದಲ್ಲಿ ವಿರಾಜಿಸುತ್ತಿದ್ದ ಜಲಂಧರ ಸಿಂಹಾಸನದಿಂದಿಳಿದು, ಶಬ್ದವನ್ನು ಅನುಸರಿಸಿ ಅಮರಾವತಿಯ ಹೊರಗೆ ಬಂದ. ಅಲ್ಲಿ ಇಂದ್ರ ಅವನಿಗೆ ಸಡ್ಡುಹೊಡೆದು, ಯುದ್ಧಕ್ಕೆ ಆಹ್ವಾನಿಸಿದ. ಅಷ್ಟರಲ್ಲಿ ನಾರಾಯಣ ಅಲ್ಲಿಗೆ ಬಂದು, ಜಲಂಧರನ ಮೇಲೆ ಸುದರ್ಶನ ಚಕ್ರವನ್ನು ಬಿಟ್ಟನಲ್ಲದೆ ಗದಾಪ್ರಹಾರ ಮಾಡಿದ. ಕೆಳಗೆ ಬಿದ್ದ ಜಲಂಧರ, ಸಾವರಿಸಿಕೊಂಡು ಎದ್ದು, ಹರಿಯೆಡೆಗೆ ಗುರಿಯಿಟ್ಟು ಬಾಣಗಳನ್ನು ಬಿಟ್ಟನು. ಆಗ ನಾರಾಯಣ ಚೇತರಿಸಿಕೊಂಡು ಅವನ ಮೇಲೆ ಬಾಣಪ್ರಯೋಗ ಮಾಡಬೇಕೆನ್ನುವಷ್ಟರಲ್ಲಿ, ಅಶರೀರವಾಣಿ ನುಡಿಯಿತು: "ಜಲಂಧರನಿಗೆ ಬಾಣಗಳಿಂದ ಹೊಡೆಯಬೇಡ. ಯುದ್ಧ ನಿಲ್ಲಿಸು." ಇದನ್ನು ಕೇಳಿದ ನಾರಾಯಣ, ಯುದ್ಧವನ್ನು ಅಲ್ಲಿಗೇ ನಿಲ್ಲಿಸಿ, ವೈಕುಂಠಕ್ಕೆ ಮರಳಿದ.

ಜಲಂಧರನನ್ನು ಗೆಲ್ಲಲಾರದೇ ವಾಪಸಾದ ನಾರಾಯಣನನ್ನು ಲಕ್ಷ್ಮಿ ಛೇಡಿಸಿದಳು. ಆಗ ಅಲ್ಲಿಗೆ ನಾರದರು ಬಂದರು. ನಾರಾಯಣ ತಾನು ಜಲಂಧರನನ್ನು ವಧಿಸುವಷ್ಟರಲ್ಲಿಯೇ ಒಂದು ಅಶರೀರವಾಣಿಯ ಮುಖಾಂತರ "ಶಿವ ಜಲಂಧರನನ್ನು ವಧಿಸುತ್ತಾನೆ" ಎಂದು ಕೇಳಿಬಂದು, ತಾನು ಸುಮ್ಮನೆ ಹಿಂದುರಿಗಿದೆ ಎಂದನು. ಆಗ ನಾರದ, "ಬೃಂದೆಯ ಪಾತಿವ್ರತ್ಯದ ಬಲದಿಂದ ಜಲಂಧರ ಗೆದ್ದನು" ಎಂದು ನೈಜ ಸಂಗತಿಯನ್ನು ತಿಳಿಸಿದ. "ಅಷ್ಟೇ ಅಲ್ಲ, ಮುಂದೆ ನಡೆಯಲಿರುವ ಶಿವ-ಜಲಂಧರರ ನಡುವಿನ ಯುದ್ಧದಲ್ಲೂ, ಬೃಂದೆಯ ಸತಿಯ ಧರ್ಮಕ್ಕೆ ಹಾನಿತರದಿದ್ದರೆ, ಆ ರಾಕ್ಷಸನನ್ನು ಜಯಿಸುವುದು ಅಸಾಧ್ಯ" ಎಂದೂ ನಾರದ ಹೇಳಿದ.

ಆಗ ನಾರಾಯಣ, "ಮಾನಿನಿಯರನ್ನು ಸೆಣಸಿ, ಗೆಲ್ಲಲು ಸಾಧ್ಯವೆ?" ಎಂದು ಕೇಳಿದ. ಅದಕ್ಕೆ ನಾರದ ಕಣ್ಣು ಹೊಡೆದು, "ನೀನು ಜಲಂಧರನಂತೆ ವೇಷಹಾಕಿಕೊಂಡು, ಬೃಂದೆಯ ಮನೆಗೆ ಹೋದರೆ ಸಾಕು" ಎಂದ. ಆಗ ನಾರಾಯಣ ಧರ್ಮಸಂಕಟಕ್ಕೆ ಸಿಲುಕಿಕೊಂಡ: "ದೇವತೆಗಳನ್ನು ಕಾಪಾಡಲು ತಾನು ಬೇರೆಯವನ ಹೆಂಡತಿಯ ಜೊತೆ ಗುಟ್ಟಾಗಿ ಇರಲು ತೆರಳದಿದ್ದರೆ, ಮುಂದೆ ನಡೆಯಲಿರುವ ಕಾಳಗದಲ್ಲಿ ಶಿವನಿಗೆ ಸೋಲು ಶತಸಿದ್ಧ! ಒಂದುವೇಳೆ ತಾನು ಸಾಧ್ವಿ ಶಿರೋಮಣಿ ಬೃಂದೆಯ ಪಾತಿವ್ರತ್ಯವನ್ನು ಹಾಳುಮಾಡಿದರೆ, ಆಗ ಎಲ್ಲರೂ ನನ್ನನ್ನು ಕುತ್ಸಿತನೆಂದುಕೊಳ್ಳುತ್ತಾರೆ. ಈಗೇನು ಮಾಡುವುದು?" ಎಂದು ಹರಿ ಚಿಂತೆಗೊಳಗಾದ.

ಇತ್ತ ಅಮರಾವತಿಯಲ್ಲಿ ಜಲಂಧರನು ತನ್ನ ಪತ್ನಿ ಬೃಂದೆಯ ಜೊತೆ ಸಂತೋಷದಿಂದ ಜೀವಿಸುತ್ತಿದ್ದನು. ಆಗ ಅವನಿಗೆ ಶಿವನೊಡನೆ ಯುದ್ಧ ಮಾಡುವ ಬಯಕೆಯಾಯಿತು. ಆದರೆ ಅದಕ್ಕೆ ಬೃಂದೆ ಒಪ್ಪಲೇ ಇಲ್ಲ, ಏಕೆಂದರೆ ಶಿವ ಅವರ ಮನೆಯ ದೇವರು! ಈ ವಿಚಾರದಲ್ಲಿ ಗಂಡ-ಹೆಂಡಿರ ನಡುವೆ ವಾದವಾಗುತ್ತಿದ್ದಾಗಲೇ ಅಲ್ಲಿಗೆ ನಾರದರ ಆಗಮನವಾಯಿತು. ಸುದ್ದಿ ತಿಳಿದ ನಾರದರು ಬೃಂದೆಗೆ ಸಮಾಧಾನಹೇಳಿ, ಆಕೆಯನ್ನು ಒಳಗೆ ಕಳುಹಿಸಿದರು. ನಂತರ ಜಲಂಧರನಿಗೆ ಯುದ್ಧಕ್ಕೆ ಹೋಗಲು ಪ್ರೋತ್ಸಾಹಿಸಿ, ಆದರೆ ಆಕೆಗೆ ಹೇಳದೆಯೇ ಹೋಗಬೇಕೆಂದೂ, ತಾವಲ್ಲಿಯೇ ಬೃಂದೆಯನ್ನು ಸಂತೈಸುತ್ತಾ ಇರುವುದಾಗಿಯೂ ಆಶ್ವಾಸನೆ ನೀಡಿದರು.

ಜಲಂಧರ ಉತ್ಸಾಹದಿಂದ ರಜತಾದ್ರಿಯೆಡೆಗೆ ಯುದ್ಧಕ್ಕೆ ತೆರಳಿದ. ನಾರದ ಸ್ಮರಿಸುವಷ್ಟರಲ್ಲಿಯೇ ನಾರಾಯಣ ಜಲಂಧರನ ವೇಷದಲ್ಲಿ ಅಲ್ಲಿಗೆ ಬಂದಿಳಿದ. ಕೂಡಲೇ ಬೃಂದೆಯನ್ನು ಕರೆತರಲು ನಾರದ ಸೇವಕರನ್ನು ಕಳುಹಿಸಿದ. ತನ್ನ ಗಂಡನಿಗೆ ಒಳ್ಳೆಯಬುದ್ಧಿಯನ್ನು ಕೊಡು ಎಂದು ಪ್ರಾರ್ಥಿಸುತ್ತಿದ್ದ ಆಕೆ, ಪೂಜೆ ಮುಗಿಸಿಕೊಂಡು ಅಲ್ಲಿಗೆ ಬಂದ ಕ್ಷಣವೇ, ನಾರದ ಛಂಗನೇ ಆಕಾಶಕ್ಕೆ ಹಾರಿ ಅದೃಶ್ಯನಾದ. ಗಂಡನ ಪಾದಕ್ಕೆರಗಿದ ಆಕೆ, ನಾರದನ ಅನುಪಸ್ಥಿತಿಯನ್ನು ತಿಳಿದು ಅನ್ಯಮನಸ್ಕಳಾದಳು. ಆಗ ಜಲಂಧರನ ವೇಷದಲ್ಲಿದ್ದ ಹರಿ, ತಾನು ಶಿವನ ಬಗ್ಗೆ ದ್ವೇಷವನ್ನು ಬಿಟ್ಟಿರುವುದಾಗಿಯೂ, ಆಕೆ ಇನ್ನುಮುಂದೆ ನಿರ್ಯೋಚನೆಯಿಂದ ಇರಬಹುದಾಗಿಯೂ ಹೇಳಿ ಆಕೆಗೆ ಸಾಂತ್ವನನೀಡಿದ. ಹರಿಯ ಮೋಸವನ್ನರಿಯದೆ ಬೃಂದೆ, ಆತನನ್ನೇ ತನ್ನ ನಿಜವಾದ ಪತಿಯೆಂದುಕೊಂಡು, ಮೊದಲಿನಂತೆಯೇ ಅಮಿತವಾದ ಪ್ರೀತಿಯಿಂದ ಆತನನ್ನು ಸೇವಿಸುತ್ತಿದ್ದಳು.

ಇತ್ತಕಡೆ ಜಲಂಧರ ಕೈಲಾಸಪರ್ವತಕ್ಕೆ ಬಂದು ಶಿವನನ್ನು ಕರೆದ, "ನಿನ್ನಿಂದ ನನ್ನ ಹತ್ಯೆ ಎಂದು ಅಶರೀರವಾಣಿಯಾಗಲು, ಅದಕ್ಕಾಗಿ ನಿನ್ನೊಡನೆ ಯುದ್ಧಕ್ಕಾಗಿ ಬಂದಿದ್ದೇನೆ" ಎಂದು ತಿಳಿಸಿದ. ಅವರಿಬ್ಬರ ನಡುವೆ ಮಹಾ ಯುದ್ಧ ನಡೆಯಿತು. ಅದನ್ನು ನೋಡಲು ಆಕಾಶದಲ್ಲಿ ದೇವಾಧಿದೇವತೆಗಳೆಲ್ಲಾ ನೆರೆದರು. ಇದೇ ಸಮಯಕ್ಕೆ ಕಾಯುತ್ತಿದ್ದ ನಾರದ ಆಗ ಜಲಂಧರನ ಬಳಿ ಬಂದು, "ಆಕಾಶದಲ್ಲಿ ನೆರೆದಿರುವ ದೇವರುಗಳಲ್ಲಿ ಒಬ್ಬರು ಪತ್ತೆ ಇಲ್ಲ. ಅವರು ಯಾರೆಂದು ಗುರುತಿಸಬಲ್ಲೆಯಾ?" ಎಂದು ಕೇಳಿದ.

ಆಗ ಜಲಂಧರ ಸೂಕ್ಷ್ಮವಾಗಿ ನೋಡಿ, "ಹರಿ ಅಲ್ಲಿ ಇಲ್ಲ" ಎಂದು ಹೇಳಿದ. ಆಗ ನಾರದ ನಗುತ್ತಾ ಹೇಳಿದ: "ನೀನು ಯುದ್ಧಕ್ಕೆ ಬರಲು, ಇದನ್ನರಿತ ಹರಿ ನಿನ್ನ ವೇಷದಲ್ಲಿ ನಿನ್ನ ಮನೆಯಲ್ಲಿ ಆರಾಮವಾಗಿ ಬೃಂದೆಯೊಡನೆ ಇದ್ದಾನೆ". ಇದನ್ನು ಕೇಳಿದ ಜಲಂಧರನಿಗೆ ತನ್ನ ಸತಿಯ ಧರ್ಮ ಹಾಳಾದುದಕ್ಕೆ ಅತೀವ ಆಘಾತವಾಯಿತು. ಆಗ ನಾರದ, "ನಿನ್ನ ಹೆಂಡತಿಗೆ ಹೇಳದೇ ಯುದ್ಧಕ್ಕೆ ಬಂದುದಕ್ಕೆ ನಿನಗೀ ಗತಿಯಾಯಿತು" ಎಂದ. ಕೂಡಲೇ ತನ್ನ ಮನೆಗೆ ಹಿಂದಿರುಗಿ ಹರಿಯನ್ನು ಕೊಲ್ಲುವ ಆಲೋಚನೆ ಬಂದರೂ, ಜನರು ಯುದ್ಧರಂಗದಿಂದ ಪಲಾಯನ ಮಾಡಿದುದಕ್ಕೆ ಹಂಗಿಸುವರು ಎಂದು ತಿಳಿದು ಸುಮ್ಮನಾದ. ಆಗ ಶಿವ ಇವನಿಗೆ ಶರಣಾಗಲು ಆದೇಶನೀಡಿದ.

ಕೂಡಲೇ ಚೇತರಿಸಿಕೊಂಡು, ಶಿವನೊಡನೆ ವಿರಾವೇಶದಿಂದ ಕಲಿ ಜಲಂಧರ ಹೋರಾಡಿದ. ಈ ಯುದ್ಧ ಭೀಕರವಾಗಿ ಚಾತುರ್ಮಾಸಗಳ ಕಾಲ ನಡೆಯಿತು. ಆಕಾಶದಲ್ಲಿ ಹಾಜರಿದ್ದ ಪ್ರಮಥಗಣಗಳು ತಾವು ಇಂತಹ ಅತಿಶಯವಾದ ಯುದ್ಧವನ್ನು ನೋಡಿಯೇ ಇಲ್ಲ, ಜಲಂಧರನಂತಹ ಶೂರ ವೀರ ಹಿಂದೆ ಇರಲಿಲ್ಲ, ಮುಂದೆ ಹುಟ್ಟುವುದಿಲ್ಲ ಎಂದು ಕೊಂಡಾಡಿದರು. ಆಗ ಪಿನಾಕಧರ ತನ್ನ ಗಜಚರ್ಮವನ್ನು ಕಟ್ಟಿ, ತನ್ನ ತ್ರಿಶೂಲಕ್ಕೆ ದಿವ್ಯಾಸ್ತ್ರವನ್ನು ಹೂಡಿದ. ಆಗ ಸಾಗರ ಕುದಿಯಿತು, ಬೆಟ್ಟಗಳು ಸಿಡಿದವು ಮತ್ತು ಭೂಮಿಯು ಕುಸಿದು ಹೆದರಿ ನಡುಗಿತು. ಆ ತ್ರಿಶೂಲ ವೇಗವಾಗಿ ಬಂದು ಜಲಂಧರನ ಶಿರಚ್ಛೇದನ ಮಾಡಿತು. ಆಗ ಜಲಂಧರನ ಆತ್ಮ ಶಿವನ ಹಣೆಗಣ್ಣಿನೊಳಗೆ ಹೋಗಿ ಅಲ್ಲಿ ಐಕ್ಯವಾಯಿತು. ದುಷ್ಟಸಂಹಾರವಾದ್ದರಿಂದ ದೇವತೆಗಳು ಹರ್ಷಿಸಿದರು. ಸ್ವತಃ ಶಿವನೇ ಜಲಂಧರನ ಪ್ರರಾಕ್ರಮಕ್ಕೆ ಮೆಚ್ಚಿಕೊಂಡು ಹರಸಿದ.

ಇತ್ತ ಅಮರಾವತಿಯಲ್ಲಿ ಬೃಂದೆಯ ಜೊತೆ ಹರಿಯು ಅವಳ ನಿಜವಾದ ಗಂಡನಂತೆ ನಟಿಸುತ್ತಾ, ಎಂದಿನಂತೆ ಒಂದು ರಾತ್ರಿ ಪವಡಿಸಿದ್ದನು. ಆ ದಿನ ಬೆಳಗಿನ ಝಾವದಲ್ಲಿ ಬೃಂದೆಗೆ ಎಚ್ಚರವಾಗಿ, ಮುಕುಂದನು ತನ್ನ ಕನಸಿನಲ್ಲಿ, "ಓ ಇಂದುಮುಖಿಯೆ, ನೀನು ನನ್ನ ಮನಸ್ಸಿಗೆ ಆನಂದವ ನೀಡು", ಹೇಳಿದ ಹಾಗೆ ಕೇಳಿಸಿತು. ಆಗವಳ ಮನಸ್ಸಿನಲ್ಲಿ ಮೊಟ್ಟಮೊದಲ ಬಾರಿಗೆ ಅನುಮಾನ ಬಂದು, ಗಂಡನನ್ನು ಪರೀಕ್ಷಿಸಿದರೆ, ಆತ ಮೊದಲಿನಂತಿಲ್ಲವೆನಿಸಿತು. ತನ್ನ ಪಾತಿವ್ರತ್ಯಕ್ಕೆ ಧಕ್ಕೆ ಬಂತಲ್ಲಾ ಎಂದು ಆಕೆ ಕಂಗಾಲಾಗುತ್ತಿರುವಾಗಲೇ, ಜಲಂಧರನ ರುಂಡ ಹಾರಿ ಬಂದು ಬೃಂದೆಯ ಕೈಯಲ್ಲಿ ಬಿದ್ದಿತು. ತನ್ನ ಗಂಡ ಮೃತನಾದ ವಿಚಾರ ಮನಸ್ಸಿಗೆ ತಿಳಿದು, ಕೂಡಲೇ ಅವಳು ಮೂರ್ಛೆಹೋದಳು. ಕೊಂಚ ಸಮಯದ ನಂತರ ಎಚ್ಚೆತ್ತು, ಅಮಾಯಕಳಾಗಿ ಮೋಸಹೋದ ತನ್ನ ಬಗ್ಗೆ ಹಳಹಳಿಸಿ, ಕ್ರೋಧ ಉಕ್ಕೇರಿ, "ನನ್ನ ಪಾತಿವ್ರತ್ಯವನ್ನು ಕೆಡಿಸಿರುವ ನೀನು ಯಾರೇ ಆಗಲಿ, ಈಗಲೇ ಶಿಲೆಯಾಗು!" ಎಂದು ವೇಷಧಾರಿ ಗಂಡನಿಗೆ ಶಾಪವಿತ್ತಳು. ಕೂಡಲೇ ಹರಿ ಶಿಲೆಯಾಗಿಹೋದ. ವಿಧವೆಯಾದ ಅವಳ ದುಃಖ ಉಕ್ಕಿಹರಿಯಿತು.

ಆಗ ನಾರಾಯಣ ತನ್ನ ನೈಜರೂಪಿನಲ್ಲಿ ಪ್ರತ್ಯಕ್ಷನಾದ. ಬೃಂದೆ ನಾರಾಯಣನ ಪಾದಕ್ಕೆರಗಿ, ಆತನು ತನಗೆ ದರ್ಶನಭಾಗ್ಯವನ್ನು ಒದಗಿಸಿದ್ದಕ್ಕೆ ಹಿಗ್ಗುತ್ತಾ, ಪತಿತೆಯಾದ ತನ್ನನ್ನು ಉದ್ಧಾರಮಾಡಬೇಕೆಂದು ಪ್ರಾರ್ಥಿಸಿದಳು. ಆಗ ನಾರಾಯಣ ಬೃಂದ-ಜಲಂಧರರ ಪೂರ್ವೋತ್ತರವನ್ನೆಲ್ಲಾ ಹೇಳಿ, ಲೋಕಕಂಟಕ ಜಲಂಧರನ ವಧಿಸಲು ತನಗೆ ನಿನ್ನ ಸತೀಧರ್ಮವನ್ನು ಹಾನಿಗೊಳಿಸುವ ಅನಿವಾರ್ಯವಿತ್ತೆಂದು ತಿಳಿಸಿದ. "ಸತಿಗೆ ಪತಿಯೇ ಪರದೈವ ಎಂಬುದನ್ನು ನೀನು ನಿನ್ನ ಜೀವನದಲ್ಲಿ ಅನುಷ್ಠಾನಗೊಳಿಸಿ, ಜಗತ್ತಿಗೇ ಮಾದರಿಯಾಗಿರುವೆ. ನನ್ನ ದೋಷವನ್ನು ಮನ್ನಿಸಿ, ನಿನ್ನ ಶಾಪವನ್ನು ಕಳೆಯುವುದು", ಎಂದು ನಾರಾಯಣ ಬೃಂದೆಗೆ ಕೇಳಿದ.

"ನನ್ನೊಡನೆ ನೀನು ನಾಲ್ಕು ತಿಂಗಳ ಕಾಲ ಪತಿಯಂತೆ ವರ್ತಿಸಿದೆ. ಇನ್ನುಮುಂದೆ ಸಕಲರೂ ನಿನ್ನನ್ನು ಅರ್ಚಿಸುತ್ತಾ, ಚಾತುರ್ಮಾಸವನು ನಿಷ್ಠೆಯಿಂದ ಕಳೆವರು. ನಿನ್ನನ್ನು ಪೂಜಿಸಿದವರಿಗೆ ಸುಗತಿಯು ಪ್ರಾಪ್ತವಾಗುತ್ತದೆ" ಎಂದನು. ಆಗ ಬೃಂದೆ, "ನನ್ನ ಮಾತನ್ನು ವಿಫಲ ಮಾಡದಿರು" ಎಂದಳು.

"ನೀನು ಶಪಿಸಿದ ಶಿಲೆಯು ಸಾಲಿಗ್ರಾಮವಾಗಲಿ. ಅದನ್ನು ಪೂಜಿಸಿದ ಕಲಿಯುಗದ ನರರಿಗೆ ಸಕಲಾರ್ಥಗಳು ಫಲಿಸುವುವು. ಬೃಂದೆ, ನಿನಗೇನು ವರ ಬೇಕು, ಕೇಳಿಕೋ" ಎಂದು ನಾರಾಯಣನು ಕೇಳಿದನು. ಆಗ ಆಕೆ, "ನೀನೇ ನನಗೆ ಪತಿಯಾಗಿ, ನನ್ನಂತಹ ಪತಿತಳನ್ನು ಪಾವನಮಾಡಬೇಕು" ಎಂದು ಕೇಳಿಕೊಂಡಳು. ಆಗ ನಾರಾಯಣ, "ನೀನು ತುಳಸಿಯೆಂಬ ಅಭಿದಾನದಿಂದ ಪ್ರಸಿದ್ಧಳಾಗು. ನಾನು ಚಾತುರ್ಮಾಸ ಕಾಲ ಬೃಂದಾವನದಲ್ಲಿ ನಿನ್ನೊಂದಿಗೆ ಪತಿಯಾಗಿ ನೆಲಸುತ್ತೇನೆ. ನಮ್ಮಿಬ್ಬರನ್ನೂ ಪೂಜಿಸಿದ ಭಕ್ತರಿಗೆ ಸದ್ಗತಿ ದೊರೆಯುತ್ತದೆ" ಎಂದು ಹೇಳಿದ ತಕ್ಷಣ ಆಕೆಯ ಆತ್ಮಜ್ಯೋತಿ ನಾರಾಯಣನ ಪಾದದೊಳಗೆ ವಿಲೀನವಾಯಿತು.

ಲೀಲೆಯಾಂತಜನಿಂದ ಸೃಷ್ಟಿಯ

ಪಾಲನೆಯ ಹರಿಯಿಂದಲಾಗಿಸಿ

ತಾಳಿ ಲಯಕಾರ್ಯವನು ಸಕಲಕೆ ಮೂಲವಾಗಿರುವ

ಕಾಲಕಾಲ ಕೃಪಾಲವಾಲ ಕ

ಪಾಲಿ ಮಂಗಳವೆಸಗಿ ಜಗವನು

ಪಾಲಿಸಲಿ ವಿಶ್ವಾತ್ಮ ಶ್ರೀಕಂಠೇಶನತಿಹಿತದಿ

English summary
Tulai Brindaa(Kannada poetry of Ninteen Sixtees) : Why hindu women worship tulasee? The story of 'Sati Brindaa' written by gowramma achuta Rao provides answers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X