ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ‘ಸಿಂಗಾರ’ದ ಯಕ್ಷಗಾನ ತಾಳ ಮದ್ದಳೆ ನೋಡಿದೆ

By Staff
|
Google Oneindia Kannada News

‘ಯಕ್ಷಗಾನ ತಾಳ ಮದ್ದಳೆಯಲ್ಲಿ- ವಾಲಿ ವಧೆ’ ಕಾರ್ಯಕ್ರಮ ಎಂದು ಕನ್ನಡ ಸಂಘದ ಈ-ಮೇಲೆ ಕರೆಯೋಲೆ ಬಂದಾಗಿನಿಂದ ಈ ಕ್ರಾರ್ಯಕ್ರಮದ ಬಗ್ಗೆ ಕುತೂಹಲವಿತ್ತು. ‘ಯಕ್ಷಗಾನದ’ ಬಗ್ಗೆ ಮೈಸೂರಿನವಳಾದ ನನಗೆ ಅಲ್ಪ ಸ್ವಲ್ಪ ಮಾಹಿತಿ ತಿಳಿದಿತ್ತೇ ವಿನಹ ಹೆಚ್ಚು ವಿಷಯ ತಿಳಿದಿರಲಿಲ್ಲ. ಇದನ್ನು ನೋಡುವ ಅವಕಾಶಗಳೂ ಕೂಡಿ ಬಂದಿರಲಿಲ್ಲ. ಇದೇ ಕಾರಣದಿಂದ ‘ಯಕ್ಷಗಾನ ತಾಳ ಮದ್ದಳೆ’ ಎಂದಾಗ ‘ಯಕ್ಷಗಾನ’ ದ ಪಾತ್ರಧಾರಿಗಳ ವೇಷ ಭೂಷಣಗಳನ್ನು ಮನದಲ್ಲಿ ಕಲ್ಪಿಸಿಕೊಳ್ಳುತ್ತಾ ಹಳ್ಳಿಗಳಲ್ಲಿ ನಡೆಯುವ ಬಯಲು ನಾಟಕ ಇರಬಹುದೆಂದು ಊಹಿಸಿ ಸಭಾಂಗಣಕ್ಕೆ ಹೊರಟೆ.

ಸಂಜೆ ಐದು ಗಂಟೆಗೆ ಸಭಾಂಗಣದ ಒಳಗೆ ರಂಗಮಂಚದ ಮೇಲೆ ಚಾಪೆ ಹಾಸಿತ್ತು. ನಾಲ್ಕು ಮೈಕ್‌ ಸಜ್ಜಾಗಿತ್ತು. ಅನತಿ ದೂರದಲ್ಲೇ ಟೇಪ್‌ ರೆಕಾರ್ಡರ್‌ ತನ್ನ ಸ್ಥಾನ ಸ್ಥಾಪಿಸಿತ್ತು. ಹರಿಕಥೆಯ ಪರಿಯಿರಬಹುದೇ ಎಂಬ ಶಂಕೆ ಮನದಲಿ ಮೂಡಿತು. ರಂಗಮಂಚದ ಪಕ್ಕದ ಕೋಣೆಯ ಕಡೆ ಕಣ್ಣು ಹರಿದಾಗ ಅಲ್ಲಿ ಯಾರೂ ಕಾಣಬರಲಿಲ್ಲ. ಪ್ರಾಯಶಃ ಪಾತ್ರಧಾರಿಗಳು ಅಲಂಕಾರ ಮಾಡಿಕೊಳ್ಳುತ್ತಿರಬಹುದು ಎಂದು ಕಾದು ಕುಳಿತೆ.

Yakshgaana Tala Maddale in Sporeಸಂಗೀತಗಾರರಂತೆ ಪಂಚೆ ಶಲ್ಯ ತೊಟ್ಟ ನಾಲ್ವರು ಕೈಮುಗಿದು ವಂದಿಸುತ್ತಾ ಮೈಕಿನ ಬಳಿ ಬಂದು ಕುಳಿತರು. ಟೇಪ್‌ರೆಕಾರ್ಡ್‌ ಮೂಲಕ ಹೊಮ್ಮಿದ ಭಾಗವತರ ಕಂಠದಿಂದ ಗಜಮುಖನಿಗೆ ವಂದನೆ, ಆರತಿಯಾಯಿತು. ಇದೇನು ಗಜಮುಖನಿಗೆ ವಂದನೆಯಾದರೂ ಯಾರೂ ಬರಲಿಲ್ಲ ಎಂದು ಸ್ವಲ್ಪ ಆಶ್ಚರ್ಯ ಚಕಿತಳಾದೆ.

ವೇದಿಕೆಯ ಮೇಲೆ ಕುಳಿತಿದ್ದ ಕನ್ನಡ ಸಂಘದ ಅಧ್ಯಕ್ಷರು ಮತ್ತು ಯಕ್ಷಗಾನ ಕಲಾವಿದರೂ ಆದ ರಾಮಚಂದ್ರ ಹೆಗ್ಡೆಯವರು ಕಾರ್ಯಕ್ರಮ ಪ್ರಾರಂಭಿಸಿ ‘ಯಕ್ಷಗಾನ ತಾಳಮದ್ದಳೆ’ ಯ ಮಾಹಿತಿ ನೀಡುತ್ತಾ ‘ಯಕ್ಷಗಾನ ತಾಳಮದ್ದಳೆ’ ಇದು ಕರ್ನಾಟಕದ ದಕ್ಷಿಣ ಕರಾವಳಿಯ ಒಂದು ಜಾನಪದ ಮೇಳ. ಇದು ‘ಆಟವಿಲ್ಲದ ಕೂಟ’. ಯಕ್ಷಗಾನ ವೇಷಭೂಷಣ, ಸಂಗೀತ, ಹಿಮ್ಮೇಳನ ಇವುಗಳನ್ನೊಳಗೊಂಡ ಜಾನಪದ ನೃತ್ಯ. ಆದರೆ ‘ಯಕ್ಷಗಾನ ತಾಳಮದ್ದಳೆ’ ಎನ್ನುವುದು ನೃತ್ಯ, ವೇಷಭೂಷಣಗಳಿಲ್ಲದೆ ನಡೆಸುವ ರಂಗತಾಲೀಮು ಅಥವಾ ಪೂರ್ವ ಅಭಿನಯ. ಯಕ್ಷಗಾನದಂತೆ ಇಲ್ಲಿ ಹಿಮ್ಮೇಳ, ಚಂಡೆ ಮದ್ದಳೆ, ಭಾಗವತರ ಸಂಗೀತವಿದೆ. ಇದರಲ್ಲಿ ಬರುವ ಪಾತ್ರಧಾರಿಗಳನ್ನು ಅರ್ಥಧಾರಿಗಳು ಎಂದು ಕರೆಯುತ್ತಾರೆ. ಇವರು ಸಂಭಾಷಣೆ ಅಥವಾ ಮಾತುಗಳ ಮೂಲಕ ಸೃಷ್ಟಿಸಿದ ಪಾತ್ರಗಳನ್ನು ಕಾಲ್ಪನಿಕವಾಗಿ ಸಭಿಕರಿಗೆ ಅರ್ಥೈಸಿ ಪಾತ್ರಗಳ ಚಿತ್ರಣ ಮೂಡಿಸುತ್ತಾರೆ. ಇದನ್ನು ಮಾಡುವ ವ್ಯಕ್ತಿಗಳಿಗೆ ಪಾತ್ರಗಳು ನಿಯೋಜಿಸಲ್ಪಟ್ಟಿರುತ್ತದೆ. ಇವರು ವೇಷಭೂಷಣವಿಲ್ಲದೆ ರಂಗಮಂಚದ ಮೇಲೆ ಕುಳಿತು ಮಾತುಗಳ ಮೂಲಕ ಪಾತ್ರಗಳನ್ನು ಸಭಿಕರಿಗೆ ಪರಿಚಯಿಸಿ ಎದುರಿನ ಅರ್ಥಧಾರಿಗಳೊಂದಿಗೆ ಸಂಭಾಷಿಸಬೇಕು. ಇಲ್ಲಿ ಸಂಭಾಷಣೆ, ವಿಚಾರ ವಿನಿಮಯಗಳು ಕಾವ್ಯಮಯವಾಗಿ ಮಾತುಗಳ ಮೂಲಕ ಹೊರಹೊಮುತ್ತದೆ. ಧ್ವನಿಯ ಮೂಲಕ ಕೋಪ, ರೋಷ, ದ್ವೇಷ, ಪ್ರೀತಿ, ಅಭಿಮಾನ, ಪ್ರೇಮದ ಭಾವನೆಗಳನ್ನು ವ್ಯಕ್ತಪಡಿಸಿ ಸಭಿಕರನ್ನು ಕಾಲ್ಪನಿಕ ಲೋಕಕ್ಕೆ ಕರೆದೊಯ್ಯುತ್ತಾರೆ ಎಂದು ಮಾಹಿತಿ ನೀಡಿದರು.

ತಾಳಮದ್ದಳೆಯಲ್ಲಿ ಬರುವ ಅರ್ಥಧಾರಿಗಳು ಯಕ್ಷಗಾನ ಕಲಾವಿದರೇ ಆಗಬೇಕಾಗಿಲ್ಲ, ಕನ್ನಡ ಪಂಡಿತರು, ಕಾಲೇಜಿನಿನ ಉಪನ್ಯಾಸಕರು ಕೂಡ ಈ ಕಲೆಯಲ್ಲಿ ಬಹಳಷ್ಟು ಆಸಕ್ತಿ ವಹಿಸಿ, ಹವ್ಯಾಸ ಬೆಳೆಸಿಕೊಂಡು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ವರ್ಷಪೂರ್ತಿ ನಡೆಯುವ ತಾಳಮದ್ದಳೆ ಹೆಚ್ಚಾಗಿ ಮಳೆಗಾಲದಲ್ಲಿ ದೇವಸ್ಥಾನದ ಸಭಾಂಗಣದಲ್ಲಿ, ಶ್ರೀಮಂತ ಕಲಾಭಿಮಾನಿಗಳ ಮನೆಗಳಲ್ಲಿ ಕೂಡ ಪೂರ್ಣ ರಾತ್ರಿ ನಡೆಯುತ್ತದೆ ಎಂದು ರಾಮಚಂದ್ರ ಹೆಗ್ಡೆಯವರು ತಿಳಿಯಪಡಿಸಿದರು.

‘ಬಾ ರಾಮ ಬಾರಾ ರಾಮ’ ಎಂದು ಹೊರ ಹೊಮ್ಮಿದ (ಟೇಪ್‌ ರೆಕಾರ್ಡರ್‌) ನ ಹಿಮ್ಮೇಳನದೊಂದಿಗೆ ‘ವಾಲಿ ವಧೆ’ ಶುರುವಾಯಿತು. ರಾಮನನ್ನು ಋಷ್ಯಮೂಕ ಪರ್ವತಕ್ಕೆ ಸ್ವಾಗತಿಸುವ ಸುಗ್ರೀವನ ಸಂಭಾಷಣೆ, ವಾಲಿಯ ಭಾತೃ ಪ್ರೇಮ, ಅಗ್ನಿಸಾಕ್ಷಿಯಾಗಿ ಮೈತ್ರಿಯಿಂದೊಡಗೂಡಿದ ರಾಮ ಸುಗ್ರೀವರ ಸಂವಾದ, ಪತ್ನಿವಿಯೋಗದಿಂದ ಪರಿತಪಿಸುತ್ತಿರುವ ಸ್ನೇಹಿತರು ತೋಡಿಕೊಂಡ ಅಳಲು ಶುರುವಾದಾಗ ‘ತಾಳ ಮದ್ದಳೆ’ಯ ಸ್ಪಷ್ಟ ಚಿತ್ರಣ ಮೂಡಿ ಬಂದಿತು.

ಅರ್ಥದಾರಿಗಳ ಈ ಸಂಭಾಷಣೆಯು ರಾಮನ ಜನನದಿಂದ ಸೀತಾಪಹರಣದವರೆಗೆ ಪೂರ್ಣ ಚಿತ್ರಣ ಕೊಟ್ಟಿತು. ಅದೇ ಅಲ್ಲದೆ ಜಾಂಬವ, ಹನುಮರೊಡಗೂಡಿ ಸುಗ್ರೀವ ಋಷ್ಯಮೂಕಕ್ಕೆ ಬಂದ ಕಾರಣ, ನಡೆದ ಘಟನೆಗಳು, ವಾಲಿಯ ಪ್ರತಾಪ, ಕ್ರೋಧ, ಸುಗ್ರೀವನಿಗೆ ಸಹಾಯ ಮಾಡಲು ರಾಮ ನೀಡುವ ಅಭಯ ವಚನ, ಸುಗ್ರೀವನಿಂದ ಮತ್ತೆ ಯುದ್ಧಕ್ಕೆ ಆಹ್ವಾನಿತನಾದ ವಾಲಿಯ ಮನದ ಚಿಂತನೆ ಮತ್ತು ಸುಗ್ರೀವ ವಾಲಿಯ ಸಂಭಾಷಣೆಗಳು ತೃಪ್ತಿ ನೀಡಿದವು. ಯುದ್ಧಕ್ಕೆ ಹೊರಟ ವಾಲಿಯನ್ನು ತಡೆದ ತಾರೆ ಮತ್ತು ವಾಲಿಯ ಸಂವಾದ, ಮರೆಯಲ್ಲಿ ನಿಂತು ಏಕೆ ಬಾಣ ಹೂಡಿದೆ ಎಂದು ಕೇಳಿದ ವಾಲಿಯ ಪ್ರಶ್ನೆಗೆ ರಾಮನಿಂದ ಬಂದ ನಿರ್ದಿಷ್ಟ ಸಮಂಜಸ ಉತ್ತರ, ವಾಲಿಯ ಪಶ್ಚಾತ್ತಾಪ, ಸುಗ್ರೀವನ ಶರಣಾಗತಿ ಮತ್ತು ರಾಜ್ಯಾಭಿಷೇಕ ಇವುಗಳನ್ನೊಳಗೊಂಡು ಮಂಗಳದೊಂದಿಗೆ ‘ವಾಲಿ ವಧೆ’ ಮುಗಿದಾಗ ಕಾಲ್ಪನಿಕ ಲೋಕದಿಂದ ವಾಸ್ತವಿಕತೆಗೆ ನಮ್ಮನ್ನು ಕರೆ ತಂದಿತು. ಮೂರು ತಾಸು ಕಳೆದದ್ದು ಗೊತ್ತಾಗಲೇ ಇಲ್ಲ.

ಈ ಕಲೆ ಒಂದು ಹವ್ಯಾಸ. ಇದರಲ್ಲಿ ಪಾತ್ರ ವಹಿಸುವ ವ್ಯಕ್ತಿಗಳು ಸೊಗಸಾದ ಮಾತುಗಾರರೂ, ಯಕ್ಷಗಾನದ ಶೈಲಿಯಲ್ಲಿ ಮಾತನಾಡುವವರೂ, ಪಾತ್ರಗಳ ಅಧ್ಯಯನ, ವಿಷ್ಲೇಷಣೆ, ಧ್ವನಿಯ ಏರುಪೇರಿನಲ್ಲೇ ನವರಸಗಳನ್ನೂ ಹೊರಹೊಮ್ಮಿಸಬಲ್ಲ ಕಲೆಗಾರರೂ ಆಗಿರಬೇಕು.

ಕನ್ನಡ ತಾಯಿಯ ಪ್ರಭಾವಳಿ ಎಂದು ಕರೆಯುವ ಕರಾವಳಿಯ ಸುತ್ತ ಮುತ್ತಲ ಪ್ರದೇಶಗಳಲ್ಲಿ, ಶಿವಮೊಗ್ಗ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಕಡೆಗಳಲ್ಲಿ ‘ತಾಳಮದ್ದಳೆ’ ಮುಖ್ಯವಾಗಿ ಹಳ್ಳಿಗಳಲ್ಲಿ ರಾತ್ರಿಯ ಹೊತ್ತು ಈ ಕಾರ್ಯಕ್ರಮ ನಡೆಯುತ್ತದೆ.

ರಾಮನಾಗಿ ಜನಾರ್ಧನ ಭಟ್‌, ಸುಗ್ರೀವನಾಗಿ ಡಾ।ಪ್ರಕಾಶ್‌ ಹಂಡೆ, ತಾರಳಾಗಿ ಸತೀಶ್‌ ಶಾನ್‌ಭಾಗ್‌ ಮತ್ತು ವಾಲಿಯಾಗಿ ರಾಮಚಂದ್ರ ಹೆಗ್ಡೆಯವರು ‘ಯಕ್ಷಗಾನ ತಾಳ ಮದ್ದಳೆಯ’ ಕಾರ್ಯಕ್ರಮವನ್ನು ಅರ್ಥಧಾರಿಗಳಾಗಿ ಸಭಿಕರಿಗೆ ವಾಲಿ ವಧೆಯನ್ನು ಸುಂದರವಾಗಿ ಅರ್ಥೈಸಿದರು. ಹಿಮ್ಮೇಳದವರು, ಭಾಗವತರು, ಚಂಡೆ, ಮದ್ದಳೆಕಾರರು ಇದ್ದಲ್ಲಿ ಇದಕ್ಕೆ ಮೆರಗು ನೀಡಿ ‘ತಾಳ ಮದ್ದಳೆ’ ಎಂದು ಕರೆಯುವ ಈ ಕಾರ್ಯಕ್ರಮ ಇನ್ನೂ ಅರ್ಥಪೂರ್ಣವೆನಿಸುತ್ತಿತ್ತು.

ಪ್ರಾಯಶಃ ಹಿಮ್ಮೇಳ, ಚಂಡೆ ಮದ್ದಳೆ, ಭಾಗವತರಿಲ್ಲದೆ ಟೇಪ್‌ರೆಕಾರ್ಡ್‌ಗೆ ಶರಣು ಹೊಡೆದು ನಡೆದ ಯಕ್ಷಗಾನ ತಾಳಮದ್ದಳೆಯ ಪರಿ ಇದೇ ಮೊದಲ ಸಲವೇನೋ?

ನಗರೀಕರಾದ ನಮಗೆ ಬೇರೆ ಬೇರೆ ಪ್ರಾಂತ್ಯಗಳ ಕಲೆ, ಪರಿಸರ, ಅಲ್ಲಿನ ಭಾಷೆ ವಿಷಯಗಳ ಬಗ್ಗೆ ತಿಳಿಯುವ ಅಥವಾ ನೋಡುವ ಅವಕಾಶಗಳು ಕಮ್ಮಿ. ಪರದೇಶಗಳಿಗೆ ವಲಸೆ ಬಂದಾಗ ಅಲ್ಲಿ ನಡೆಯುವ ಸಂಘದ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕರ್ಣಾಟಕದ ಹಲವು ಪ್ರಾಂತ್ಯಗಳ ಭಾಷೆ, ಕಲಾಚಾರಗಳ ಪರಿಚಯವಾಗುತ್ತದೆ. ಸಿಂಗಾಪುರದಲ್ಲಿ ಇಂತಹ ಅವಕಾಶಗಳನ್ನು ಕಲ್ಪಿಸಿ ವಿವಿಧ ಕ್ಷೇತ್ರಗಳಲ್ಲಿನ ಕಲಾಚಾರವನ್ನು ಕನ್ನಡಿಗರಿಗೆ ಪರಿಚಯಿಸಲು ಪ್ರಯತ್ನಿಸುತ್ತಿರುವ ಕನ್ನಡ ಸಂಘದ ಪ್ರಯತ್ನ ಅತ್ಯಂತ ಶ್ಲಾಘನೀಯ. ದಕ್ಷಿಣ ಕರಾವಳಿಯ ಕಲಾ ಪ್ರಪಂಚದ ‘ಯಕ್ಷಗಾನ ತಾಳಮದ್ದಳೆಯ’ ಕಿರು ಪರಿಚಯವನ್ನು ಮಾಡಿಕೊಟ್ಟ ಕನ್ನಡ ಸಂಘಕ್ಕೆ ನಾವು ಆಭಾರಿಯಾಗಿರುತ್ತೇವೆ.

ಚುರುಗಟ್ಟಿದ ಉದರಕ್ಕೆ ಪಲಾವ್‌, ಮೊಸರನ್ನ, ಸಿಹಿಪೊಂಗಲ್‌ ತಂಪು ನೀಡಿದರೆ ತಾಳ ಮದ್ದಳೆ ಮನಕೆ ಹೊಸದನ್ನು ಕಲಿಸಿದ ಮುದ ನೀಡಿತು.

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X