• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಲ್ವಿಯಾ ಪ್ಲಾತ್‌ : ಬೆಂಕಿಯಲ್ಲಿ ಅರಳಿ ಶೈತ್ಯದಲ್ಲಿ ಕಮರಿದ ಹೂವು

By Staff
|

ಸಾಯುವುದು

ಒಂದು ಕಲೆ, ಮಿಕ್ಕೆಲ್ಲವುಗಳಂತೆ.

ನಾನದನ್ನು ಅಸಾಧಾರಣವೆನಿಸುವಷ್ಟು ಚೆನ್ನಾಗಿ ಮಾಡುತ್ತೇನೆ.

ಬೂದಿಯಿಂದ

ನನ್ನ ಕೆಂಗೂದಲೊಂದಿಗೆ ಮೇಲೇಳುವೆ

ಗಂಡಸರನ್ನು ಗಾಳಿಯಂತೆ ತಿನ್ನುವೆ.

ಆಕೆ ಸತ್ತ ಎರಡು ವರ್ಷದ ನಂತರ ಪ್ರಕಟವಾದ Ariel ಕವನ ಸಂಕಲನದ Lady Lazarus ಕವನದಲ್ಲಿ ಬರುವ ಸಾಲುಗಳಿವು.

ಆಕೆ ಹುಟ್ಟಿದ್ದು ಅಮೇರಿಕಾದ ಮೆಸಾಚುಸೆಟ್ಸ್‌ ರಾಜ್ಯದ ಬೋಸ್ಟನ್‌ನ ಬಳಿ, 1932ರಲ್ಲಿ ; ಜರ್ಮನ್‌ ಮೂಲದ ವಲಸಿಗ ದಂಪತಿಗಳಿಗೆ. ಅತಿ ಸೂಕ್ಷ್ಮ ಮನಸ್ಸಿನ, ಬುದ್ಧಿವಂತ ಹುಡುಗಿ ಸಿಲ್ವಿಯಾ ಪ್ಲಾತ್‌ ತನ್ನ ಪ್ರಥಮ ಕವನ ಪ್ರಕಟಿಸಿದ್ದು ಎಂಟು ವರ್ಷದ ವಯಸ್ಸಿನಲ್ಲಿ. ತನ್ನ ತಂದೆಯನ್ನು ಕಳೆದುಕೊಂಡಿದ್ದೂ ಆ ಸುಮಾರಿನಲ್ಲೆ. ಇವಳನ್ನು ಮತ್ತು ಇವಳ ಸೋದರನನ್ನು ಸಾಕಲು ಇವಳ ತಾಯಿ ಎರಡು ಕೆಲಸಗಳಲ್ಲಿ ದುಡಿಯುತ್ತಿದ್ದಳು. ತನ್ನ ಬರವಣಿಗೆಯಿಂದ ಪದವಿಗಾಗಿ ಕಾಲೇಜು ಸೇರುವಷ್ಟರಲ್ಲಿಯೇ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಳು.

Sylvia Plathಕಾಲೇಜು ವಿದ್ಯಾಭ್ಯಾಸದ ಸಮಯದಲ್ಲಿಯೇ ಸಿಲ್ವಿಯಾಳ ಸುಮಾರು ನಾಲ್ಕುನೂರು ಕವನಗಳು ಪ್ರಕಟಣೆಯಾಗಿದ್ದವು. ಅವಳ ಮೊದಲ ಪ್ರಶಸ್ತಿ ಪುರಸ್ಕೃತ ಕಥೆ ಪ್ರಕಟವಾದಾಗ ಕಾಲೇಜಿನಲ್ಲಿ ಓದುತ್ತಿದ್ದ ಆಕೆಗಿನ್ನೂ ಇಪ್ಪತ್ತು. ಮುಂದಿನ ವರ್ಷ ಕಾಲೇಜಿನ ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿಯಲ್ಲಿ ದುಡಿಯುತ್ತಿದ್ದಾಗ ಮಾನಸಿಕ ಖಿನ್ನತೆಯಿಂದಾಗಿ ಸಿಲ್ವಿಯಾ ಮೊದಲನೇ ಸಲ ಆತ್ಮಹತ್ಯೆ ಪ್ರಯತ್ನ ನಡೆಸಿದಳು. ಚಿಕ್ಕಂದಿನಿಂದಲೂ ಇದ್ದ ಮಾನಸಿಕ ಖಿನ್ನತೆ ಅವಳ ಸಾವಿನ ತನಕವೂ ಹಿಂಬಾಲಿಸಿತು. ಆದರೆ ವಿಶೇಷವಾಗಿ ಕಾಲೇಜಿನಲ್ಲಿದ್ದಾಗಿನ ಜೀವನ ಅವಳ ಪಾಲಿಗೆ ದಾರುಣವೆನಿಸುವಷ್ಟು ಕ್ರೂರವಾಗಿತ್ತು.

ತನ್ನ ಇಪ್ಪತ್ತೆರಡನೇ ವಯಸ್ಸಿನಲ್ಲಿ ಪ್ರತಿಷ್ಠಿತ ಫುಲ್‌ಬ್ರೆೃಟ್‌ ಸ್ಕಾಲರ್‌ಶಿಪ್‌ ಪಡೆದು ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ಗೆ ಉನ್ನತ ವ್ಯಾಸಂಗಕ್ಕೆ ಪಯಣ ನಡೆಸಿದ ಪ್ರತಿಭಾವಂತೆ ಸಿಲ್ವಿಯಾ. ಅಲ್ಲಿದ್ದಾಗ ಈಕೆ ತೆರೆದುಕೊಂಡಿದ್ದು ಮುಕ್ತ ಲೈಂಗಿಕತೆಗೆ. ಮಹಾನ್‌ ಸ್ತ್ರೀಸ್ವಾತಂತ್ರ್ಯ ಸ್ವೇಚ್ಚಾವಾದಿ. ಆ ಸಮಯದಲ್ಲೇ, ಮುಂದೆ ಇಂಗ್ಲೆಂಡ್‌ನ ಪ್ರಸಿದ್ಧ ಕವಿಯಾಗಲಿದ್ದ ಟೆಡ್‌ ಹ್ಯೂಸ್‌ನ ಪರಿಚಯ, ಪ್ರಣಯ ಮತ್ತು ಪರಿಣಯ. ಒಂದು ಆದರ್ಶ ದಾಂಪತ್ಯ ಕಾಣುವ ಕನಸು. ಈ ಮಧ್ಯೆ ಎರಡು ವರ್ಷಗಳ ಕಾಲ ಅಮೇರಿಕಾದಲ್ಲಿ ಸಾಹಿತ್ಯದ ಶಿಕ್ಷಕಿಯಾಗಿ ಕೆಲಸ ಮಾಡಿದ ಸಿಲ್ವಿಯಾ ಆನಂತರ ಇಂಗ್ಲೆಂಡ್‌ಗೆ ವಾಪಸ್ಸಾದಳು.

ಹಲವು ಯಶಸ್ವಿ ಕವನ ಸಂಕಲನಗಳ ಪ್ರಕಟಣೆ ; ಮುಂದಿನ ಎರಡು ವರ್ಷಗಳಲ್ಲಿ ಎರಡು ಮಕ್ಕಳ ತಾಯಿ. ಆದರೆ, ಗಂಡನ ದಾಂಪತ್ಯ ನಿಷ್ಠೆಯ ಮೇಲೆ ಸಿಲ್ವಿಯಾಗೆ ಸಂಶಯ. ಗಂಡ ಹೆಂಡಿರ ನಡುವೆ ವೈಯುಕ್ತಿಕ ಅಸೂಯೆ, ಮನಸ್ತಾಪ. ಖಿನ್ನತೆ ಮರುಕಳಿಸಲು ಇನ್ನೇನು ಬೇಕು? ಗಂಡ ಮತ್ತೊಂದು ಹೆಣ್ಣಿನೊಡನೆ ಬೇರೆಡೆಯಲ್ಲಿ ವಾಸ ಮಾಡಲಾರಂಭಿತೊಡಗಿದ. ಸಿಲ್ವಿಯಾ ತನ್ನ ಮಕ್ಕಳೊಂದಿಗೆ ಹಿಂದೊಮ್ಮೆ ಪ್ರಸಿದ್ದ ಕವಿ ಡಬ್ಲ್ಯು.ಬಿ.ಯೇಟ್ಸ್‌ ವಾಸಿಸಿದ್ದ ಮನೆಯಲ್ಲಿ ವಾಸಿಸತೊಡಗುತ್ತಾಳೆ.

ಈ ಏಕಾಂತದ ಸಮಯದಲ್ಲಿಯೇ ಸಿಲ್ವಿಯಾ The Bell Jar ಕಾದಂಬರಿ ರಚಿಸಿದಳು. ಮುಂದಿನ ದಿನಗಳಲ್ಲಿ ದಿ ಬೆಲ್‌ ಜಾರ್‌ ಕೃತಿ ಆಕೆಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು. 1963ರ ಜನವರಿಯಲ್ಲಿ ಅನಾಮಿಕ ಹೆಸರಿನಲ್ಲಿ ಪ್ರಕಟವಾದ ಈ ಕಾದಂಬರಿ, ಅವಳದೇ ಜೀವನದ, ಬಹಳಷ್ಟು ಮಟ್ಟಿಗೆ ಕಾಲೇಜು ಜೀವನದಲ್ಲಿ ಆಕೆ ಅನುಭವಿಸಿದ ಮಾನಸಿಕ ವೈಪರೀತ್ಯಗಳ, ಪೈತ್ಯಗಳ, ಭೀಭತ್ಸವೆನಿಸುವ ಚಿತ್ರಣ ಒಳಗೊಂಡಿದೆ. ಶತಮಾನದ ಶೀತಲ ಚಳಿಗಾಲದಲ್ಲೊಂದು ಎಂದೇ ಹೆಸರಾದ ಆ ವರ್ಷದ ಶೀತಲ ಚಳಿಗಾಲದಲ್ಲಿ ಏಕಾಂಗಿತನ, ಬಯಸಿದಷ್ಟು ಬರದ ಸಂಪಾದನೆ ಮತ್ತು ಹೆಸರು, ಶೀತಲ ಜೀವನ, ಸಕಾಲದಲ್ಲಿ ದೊರಕದ ಮಾನಸಿಕ ಚಿಕಿತ್ಸೆ-ಸಲಹೆ, ಮುಂತಾದವುಗಳಿಂದಾಗಿ ಫೆಬ್ರವರಿ ತಿಂಗಳಿನಲ್ಲಿ ಸಿಲ್ವಿಯಾ ಮತ್ತೊಮ್ಮೆ ಆತ್ಮಹತ್ಯಾ ಯತ್ನ ನಡೆಸಿದಳು. ಈ ಬಾರಿ ಬಳಸಿದ್ದು ಅಡಿಗೆ ಅನಿಲ. ಆಕೆಯ ಪ್ರಯತ್ನ ಹುಸಿಯಾಗಲಿಲ್ಲ .

ಮರಣಾನಂತರ ತನ್ನ ಸಾಹಿತ್ಯದಿಂದಾಗಿ, ವೈಯುಕ್ತಿಕ ದುರಂತ ಜೀವನದಿಂದಾಗಿ ಸಿಲ್ವಿಯಾ ಸಾಕಷ್ಟು ಪ್ರಸಿದ್ಧಿ ಪಡೆದಳು. ಆಕೆಯನ್ನು ಮರಣದ ಮೊದಲು ಕವಿ ಟೆಡ್‌ ಹ್ಯೂಸ್‌ ನಡೆಸಿಕೊಂಡ ರೀತಿಯಿಂದಾಗಿ ಆತನನ್ನು ಅವನ ಮರಣದ ತನಕವೂ ವಿವಾದ ಹಿಂಬಾಲಿಸಿತು. ಯಾವ ಹೆಣ್ಣಿಗಾಗಿ ಟೆಡ್‌ ಸಿಲ್ವಿಯಾಳನ್ನು ತೊರೆದಿದ್ದನೋ ಆಕೆ ಕೂಡ ಸಿಲ್ವಿಯಾಳಂತೆಯೇ ಅಡಿಗೆ ಅನಿಲ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಇನ್ನೊಂದು ವಿಧಿ ವಿಪರೀತ.

ಸಿಲ್ವಿಯಾ ಪ್ಲಾತ್‌ಳ ಪ್ರಸಿದ್ಧ ಕವನ ಟುಲಿಪ್‌ನ ಕೆಲವು ಸಾಲುಗಳು:

ನಾನು ಯಾರೂ ಅಲ್ಲ ; ಸ್ಫೋಟನೆಗಳಿಗೂ ನನಗೂ ಯಾವ ಸಂಬಂಧವೂ ಇಲ್ಲ.

ನನ್ನ ಹೆಸರು ಮತ್ತು ಹಗಲ್ಹೊತ್ತಿನ ದಿರಿಸುಗಳನ್ನು ನರ್ಸುಗಳಿಗೆ ಕೊಟ್ಟುಬಿಟ್ಟಿರುವೆ

ನನ್ನ ಚರಿತ್ರೆಯನ್ನು ಅನಾಸ್ತೆಟಿಸ್ಟ್‌ಗೂ ಮತ್ತು ದೇಹವನ್ನು ಸರ್ಜನ್ನರಿಗೂ.

ಹೀಗೆ ತಮ್ಮ ವೈಯುಕ್ತಿಕ ಜೀವನದ ದುರಂತವನ್ನು ತಮ್ಮ ಕೃತಿಗಳಲ್ಲಿ ಸಾಹಿತ್ಯಿಕವಾಗಿ ಅನಾವರಣಗೊಳಿಸಿದ ಸಾಹಿತಿಗಳು ಕನ್ನಡದಲ್ಲಿ ತುಂಬ ಕಡಿಮೆ ಎನ್ನಿಸುತ್ತದೆ. ಸ್ವಲ್ಪ ಮಟ್ಟಿಗೆ ತಮ್ಮ ವೈಯುಕ್ತಿಕ ಅನುಭವಗಳನ್ನು, ಸಂಬಂಧಗಳನ್ನು ಹಸಿಯಾಗಿ ಅಭಿವ್ಯಕ್ತಿಸಿದವರು ಹೆಚ್ಚಿಗೆ ನವ್ಯರು. ಸಮಾಜದ ಮೂಲಭೂತ ಗೋಜಲುಗಳಿಂದಾಗಿ ಬಹಳಷ್ಟು ಸಲ ವೈಯುಕ್ತಿಕ ಅನುಭವ ವರ್ಗ ಅಥವ ಜನಾಂಗದ ನೋವಾಗಿ ಬಂದದ್ದೇ ಹೆಚ್ಚು ಮತ್ತು ಅದು ಸಮರ್ಥನೀಯವೂ ಸಹ. ಇದರ ಜೊತೆಗೆ ನಮ್ಮಲ್ಲಿನ ಹೆಸರುವಾಸಿ, ಗಟ್ಟಿ ಚಿಂತನೆಯ ಸಾಹಿತಿಗಳು ತಮ್ಮ ವಯಸ್ಸು ಹೆಚ್ಚಾದಂತೆ ಮತ್ತು ತಮ್ಮ ವೈಯುಕ್ತಿಕ ಸರಕು ಮುಗಿದಂತೆ ತೆರೆದುಕೊಂಡದ್ದು ಸಮಾಜದ ಅನುಭವಕ್ಕೆ, ಅವ್ಯವಸ್ಥೆಗೆ, ಕ್ರೌರ್ಯಕ್ಕೆ.

Prathibha Nandakumarಸಿಲ್ವಿಯಾ ಪ್ಲಾತ್‌ ನೆನಪಿಗೆ ಬಂದಾಗ ಮತ್ತು ಅದೇ ಸ್ತರದಲ್ಲಿ ಕನ್ನಡದ ಲೇಖಕಿಯರ ಕುರಿತು ಚಿಂತಿಸುವಾಗ ನನಗೆ ತಕ್ಷಣ ಜ್ಞಾಪಕಕ್ಕೆ ಬರುವವರು ಪ್ರತಿಭಾ ನಂದಕುಮಾರ್‌. ಇವರೂ ಸಹ ಗಟ್ಟಿಸತ್ವದ ಕವನಗಳನ್ನು ಶುರುವಿನಲ್ಲಿ ರಚಿಸಿದ್ದು ವೈಯುಕ್ತಿಕ ಅನುಭವವನ್ನು ಅನಾವರಣಗೊಳಿಸಿಕೊಳ್ಳುವ ಮುಖಾಂತರ ಎಂದು ಒಂದು ವಿಮರ್ಶೆಯಲ್ಲಿ ಓದಿದ ನೆನಪು.

ಖುಷ್ವಂತ್‌ ಸಿಂಗ್‌ ಒಮ್ಮೆ ಪ್ರತಿಭಾರವರ ಬಗ್ಗೆ ಹೀಗೆ ಬರೆಯುತ್ತಾರೆ. 'ಮದುವೆಯ ಹೊಸದರಲ್ಲಿ ಆಕೆಯ ಕೆಲ ಬರವಣಿಗೆ ಸಂವೇದನಾತ್ಮಕ ಮತ್ತು ತೆರೆದುಕೊಳ್ಳುವುದಾಗಿತ್ತು". ಅದಕ್ಕೆ ಉದಾಹರಣೆಯಾಗಿ ಪ್ರತಿಭಾರವರ ಇಂಗ್ಲಿಷ್‌ ಕವಿತೆಯಾಂದನ್ನು ಉದಾಹರಿಸುತ್ತಾರೆ:

ನಾನು ತೆರೆದುತೋರಿಸಿದೆನೆ

ನಿರ್ಲಕ್ಷ್ಯದಿಂದ ಅಥವ ಉದ್ದೇಶಪೂರ್ವಕ ಲೋಕಾಭಿರಾಮದಲ್ಲಿ

ಹೆಸರಿಸಬಾರದ್ದನ್ನು?

ಇಲ್ಲದಿದ್ದಲ್ಲಿ ನಿನಗೇಗೆ ಗೊತ್ತು

ಆ ಎಲ್ಲ ಗಾಯಗಳು ಮತ್ತು ಕಪ್ಪುಕಲೆಗಳು

ನನ್ನ ಖಾಸಾ ಗುಪ್ತಾಂಗಗಳ ಮೇಲೆ

ಆರು ಗಜದಿಂದ ಭದ್ರವಾಗಿ ಮುಚ್ಚಿಟ್ಟಿರುವ?

ಇನ್ನೊಂದು ಕವನದಲ್ಲಿ :

ನೆನ್ನೆ ನಾನು ಹೇಳುತ್ತಿದ್ದ ಕಥೆಯಲ್ಲಿ

ಅವನು ಮೊದಲಿಗೆ ರಾಜಕುಮಾರನಾಗಿದ್ದ

ಕಪ್ಪೆಯಾಗಿ ಪರಿವರ್ತಿತನಾಗಿಬಿಟ್ಟ

ಅವಳು ಚುಂಬಿಸಿದ ನಂತರ.

ಆದರೆ ಇತ್ತೀಚಿನ ವರ್ಷಗಳಲ್ಲಿ ಇವರ ಬರವಣಿಗೆಯ ವಿಷಯದ ಮೂಲ ಬಹಳಷ್ಟು ಬಾರಿ ಸಮಾಜವೇ ಆಗಿದೆ. 1995ರಲ್ಲಿ ಸುಶೀಲ್‌ ಶರ್ಮಾ ನೈನಾ ಸಾಹ್ನಿಯನ್ನು ತಂದೂರಿಯಲ್ಲಿ ಬೇಯಿಸಿ ಕೊಂದಿದ್ದಕ್ಕೆ, ಅವರೇ ಹೇಳುವಂತೆ ರೋಷಾವೇಶದಲ್ಲಿ ವ್ಯಂಗ್ಯವಾಗಿ ಈ ರೀತಿ ಬರೆಯುತ್ತಾರೆ;

ಎಲ್ಲಿದ್ದೀಯೇ ನೈನಾ? ಇಲ್ಲೇ ಇದ್ದೀನಪ್ಪಾ

ಕಾಟ್‌ ಕಾಂಡೋಂ ಕ್ಯಾರಿಬ್ಯಾಗ್‌?

ಇಲ್ಲೇ ಇವೆಯಪ್ಪಾ.

ಊಟಕ್ಕೇನೇ ನೈನಾ?

ರೊಟ್ಟಿ ತಂದೆಯೇನೇ?

ಬೇಯ್ತಾ ಇದ್ದೀನಪ್ಪಾ

ಶರ್ಮಾ ತರ್ತಾನಪ್ಪಾ.

ಪ್ರತಿಭಾರವರು ಕನ್ನಡಪ್ರಭದಲ್ಲಿನ ತಮ್ಮ ಪ್ರತಿಧ್ವನಿ ಅಂಕಣದಲ್ಲಿ ಇತ್ತೀಚೆಗೆ ಬರೆದುಕೊಂಡಂತೆ, ಈ ಮೇಲಿನ ನೈನಾ ಸಾಹ್ನಿ ಕವನವನ್ನು ಅವರು ಕವಿ ಬಿ.ಸಿ. ರಾಮಚಂದ್ರ ಶರ್ಮ, ಲಂಕೇಶ್‌, ಮತ್ತಿತರರ ಸಮ್ಮುಖದಲ್ಲಿ ವಾಚಿಸಿದಾಗ ಶರ್ಮಾರವರು ಇದು ಬ್ಯಾಡ್‌ ಟೇಸ್ಟ್‌ ಎಂದರಂತೆ. ಅದಕ್ಕೆ ಪ್ರತಿಭಾರವರು ಕೊಲೆಯೋ ಕವನವೋ ಎಂದು ಗರಮ್ಮಾದಾಗ ಲಂಕೇಶರು 'ಶರ್ಮಾ, ಅವಳು ಆ ಶರ್ಮ ಬಗ್ಗೆ ಬರೆದಿದ್ದು, ನಿಮ್ಮ ಬಗ್ಗೆ ಅಲ್ಲ" ಎಂದು ವಾತಾವರಣವನ್ನು ತಿಳಿಗೊಳಿಸಿದರಂತೆ.

ಸಿಲ್ವಿಯಾ ಎಡೆಬಿಡದೆ ಕಾಡುತ್ತಾಳೆ ; ತನ್ನ ಬದುಕಿನ ದಾರುಣತೆ ಹಾಗೂ ಸಶಕ್ತ ಸಾಹಿತ್ಯದಿಂದಾಗಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X