ಕೆಂಡಸಂಪಿಗೆ ಲೇಖನಕ್ಕೆ ಕವಿ ನಟರಾಜ್ ಅವರದು ವಿಚಾರಚೋದಕ ಪ್ರತಿಕ್ರಿಯೆ. ಅನಿವಾಸಿ / ತವರು ಕನ್ನಡಿಗರ ನಡುವಿನ ಮಾತು ಮಥನದ ನಂತರ ‘ಸಾಹಿತ್ಯ- ಸಮ್ಮೇಳನ’ ಕುರಿತ ಚರ್ಚೆ ಕಾವೇರಿದೆ.
ಪ್ರಿಯ ಶಾಮಸುಂದರ್,
ನಿಮ್ಮ ಕೆಂಡಸಂಪಿಗೆಯ ಸುವಾಸನೆ ನನ್ನನ್ನು ಬಡಿದೆಬ್ಬಿಸಿದೆ. ಸುವಾಸನೆಯ ಸುಖದ ಜೊತೆಗೇ ಕೆಂಡದ ಬಿಸಿಯೂ ಸೇರಿ ಕಾಲು ಶತಮಾನಕ್ಕೂ ಹೆಚ್ಚು ಕಾಲ ಅಮೇರಿಕದಲ್ಲಿ ಕನ್ನಡ ಮೇಳಗಳನ್ನು ಸುತ್ತಿಬಂದಿರುವ ನನಗೆ ಬಗೆಬಗೆಯ ನೆನೆಪಿನ ಸುರುಳಿಗಳು ಒಮ್ಮೆಗೇ ಮುತ್ತಿಬಂದಿವೆ. ನಾನು ನ್ಯೂಯಾರ್ಕಿನ ಮೊಟ್ಟ ಮೊದಲ (1975) ಈಶಾನ್ಯ ಅಮೇರಿಕಾ ಕನ್ನಡ ಸಮ್ಮೇಳನದಿಂದ ಮೊದಲುಗೊಂಡು, ಫಿಲಡೆಲ್ಫಿಯ ಬಳಿ ಎರಡನೆಯ, ಬಾಸ್ಟನ್‌ನಲ್ಲಿ ಮೂರನೆಯ ಮತ್ತು ನಮ್ಮೂರಿನಲ್ಲಿ (ಅಂದರೆ ವಾಷಿಂಗ್ಟನ್ನಿನಲ್ಲಿ) ನಡೆದ ನಾಲ್ಕನೇ ಸಮ್ಮೇಳನ, ಹೀಗೆ ಇತ್ತೀಚಿನ ಡೆಟ್ರಾಯಿಟ್ ವರೆಗೂ ಅನೇಕ ಕನ್ನಡ ಮೇಳಗಳಲ್ಲಿ ಭಾಗವಹಿಸಿ ಗಳಿಸಿರುವ ಹಕ್ಕಿನಿಂದ ಕೆಲ ವಿಷಯಗಳನ್ನು ಧೈರ್ಯದಿಂದ ಬರೆಯಬಲ್ಲೆ .
ಇಲ್ಲಿ ನಡೆದಿರುವ ಯಾವ ಸಮ್ಮೇಳನವನ್ನೂ ಸಾಹಿತ್ಯ ಸಮ್ಮೇಳನವೆಂದು ಕರೆಯುವುದು ತಪ್ಪಾಗುತ್ತದೆ. ಇವು ಕನ್ನಡಿಗರ ಸಮ್ಮಿಳನ. ನಾನಾ ಉದ್ದೇಶಗಳಿಂದ ಒಂದೆಡೆ ಸೇರಲು ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಅನೇಕರು ಬರುತ್ತಾರೆ. ಅವರೆಲ್ಲರಿಗೂ ಸಾಹಿತ್ಯದಲ್ಲಿ ಆಸಕ್ತಿಯಿರುವುದೆಂದು ನಿರೀಕ್ಷಿಸಿದರೆ ನಿರಾಸೆಯಾಗುವುದು ಖಂಡಿತ. ಆದರೆ ಸಾವಿರಾರು ಜನರ ಪೈಕಿ ಐವತ್ತೊ ನೂರೋ ಜನರಿಗೆ ಸಾಹಿತ್ಯವನ್ನು ಕುರಿತು ಚಿಂತಿಸಲು, ವಿಚಾರಸಂಕಿರಣಗಳಲ್ಲಿ ಭಾಗವಹಿಸಲು ಆಸಕ್ತಿ ಇರುವುದಂತೂ ಖಂಡಿತ. ನಮ್ಮ ಕಾವೇರಿ ಕನ್ನಡ ಸಂಘದ ರಜತಮಹೋತ್ಸವದ ಸಮಯದಲ್ಲಿ ಸುಮಾರು 25-30 ಸಾಹಿತ್ಯಾಸಕ್ತರು ವಿವಿಧ ವಿಷಯಗಳಮೇಲೆ ವಿಚಾರಪೂರಿತ ಪ್ರಬಂಧಗಳನ್ನು ಮಂಡಿಸಿದ್ದೇ ಅಲ್ಲದೇ ಹಲವರು ತಮ್ಮ ಕವನಗಳನ್ನು ವಾಚಿಸಿದರು. ಸುಮಾರು ಮೂರು ಘಂಟೆಗಳಕಾಲ ನಡೆದ ಈ ಸಾಹಿತ್ಯಗೋಷ್ಠಿ ಅನೇಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಹ್ಯೂಸ್ಟನ್ ಸಮ್ಮೇಳನದಲ್ಲಿ ನಡೆದ ಸಾಹಿತ್ಯ ಗೋಷ್ಠಿಯಲ್ಲಿ ಸಹ ಕಾರ್ಯಕ್ರಮ ಉತ್ತಮಮಟ್ಟದಲ್ಲಿ ನಡೆಯಿತು. (ಕರ್ನಾಟಕದಿಂದ ಬಂದಿದ್ದ ಕವಿ ಲಕ್ಷ್ಮೀನಾರಾಯಣಭಟ್ಟ, ಜ್ಞಾನಪೀಠ ಪ್ರಶಸ್ತಿ ವಿಜೇತ ಅನಂತಮೂರ್ತಿಗಳು ಸಹ ಈ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.)
ಸಮ್ಮೇಳನಗಳು ವರ್ಷಕ್ಕೋ ಎರಡು ವರ್ಷಕ್ಕೋ ನಡೆದರೆ, ತಿಂಗಳು-ತಿಂಗಳು ಸಾಹಿತ್ಯಗೋಷ್ಠಿಗಳು ಅನೇಕ ಕಡೆಗಳಲ್ಲಿ ನಡೆಯುತ್ತಿವೆ. (ಕ್ಯಾಲಿಫೋರ್ನಿಯಾದಲ್ಲಿ ಎರಡು- ಲಾಸ್ ಏಂಜಲೀಸ್‌ನಲ್ಲಿ , ಸ್ಯಾನ್ ಫ್ರಾನ್ಸಿಸ್ಕೋನಲ್ಲಿ , ಪೆನ್ಸಿಲ್ವೇನಿಯ- ಡೆಲವೇರ್- ನ್ಯೂಜೆರ್ಸಿಗಳ ಒಕ್ಕೂಟದಲ್ಲಿ , ಚಿಕಾಗೋದಲ್ಲಿ , ಹಾಗೂ ಮೇರಿಲ್ಯಾಂಡಿನಲ್ಲಿ , ಇವು ನನಗೆ ತಿಳಿದಹಾಗೆ ನಡೆಯುವ ಚಟುವಟಿಕೆಗಳು, ಇನ್ನೂ ಕೆಲವು ಇರಬಹುದು.)
ಮೇಲೆ ಹೇಳಿದ ಸಾಹಿತ್ಯಸಲ್ಲಾಪಗಳು ತಿಂಗಳಿಗೊಮ್ಮೆ ನಡೆದರೆ, ಅಂತರ್ಜಾಲದಲ್ಲಿ ಪ್ರತಿನಿತ್ಯ ನಡೆಯುವ ವಿಚಾರಸಂಕಿರಣಗಳನ್ನು ನಾವು ಮರೆಯುವಂತಿಲ್ಲ. ಈ ವಿಚಾರಗೋಷ್ಠಿಗಳಿಗೆ ನಾವು ಪ್ರಯಾಣಮಾಡಬೇಕಿಲ್ಲ, ನೋಂದಾಯಿಸಿಕೊಳ್ಳಲು ಹಣ ತೆರಬೇಕಿಲ್ಲ, ನಮಗಿಷ್ಟವಿಲ್ಲದವರ ಮುಖನೋಡುವ ಅಗತ್ಯವಿಲ್ಲ , ಕಂಡರೂ ಮಾತನಾಡಿಸದ ‘ಮಿತ್ರವರೇಣ್ಯ’ರನ್ನು ಸಹಿಸುವ ಕಷ್ಟವಿಲ್ಲ , ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಅಥವಾ ಯಾರದೋ ಬಲಾತ್ಕಾರದಿಂದಾಗಿ ಭಾಗವಹಿಸಬೇಕಾಗಿಲ್ಲ . ಬೇಡದ ವಿಷಯಗಳನ್ನು ಕೇಳಬೇಕಾಗಿಲ್ಲ . ಬೇಕಾದಾಗ, ಬೇಕಾದ್ದನ್ನು, ಬೇಕಾದಷ್ಟು ಓದಿ, ಮನಸ್ಸಾದಾಗ ಪ್ರತಿಕ್ರಿಯಿಸಿ, ಇಲ್ಲದಿದ್ದಾಗ ತೆಪ್ಪನಿದ್ದು ಸುಖಪಡಬಹುದಾದಂಥ ವಿಚಾರಸಂಕಿರಣಗಳು ಪ್ರತಿನಿತ್ಯ ನಮ್ಮ ಮನೆಯಲ್ಲೇ ನಡೆಯುತ್ತಿರುವಾಗ ಇನ್ಯಾವ ಸಾಹಿತ್ಯ ಸಮ್ಮೇಳನ ತಾನೇ ಅಗತ್ಯವಿದೆ?
ಪ್ರಿಯ ಶಾಮ್, ನಾನು ನಿಮ್ಮಂತೆ ಸಮ್ಮೇಳನ ದ್ವೇಷಿಯೇನೂ ಅಲ್ಲ , ಅಥವಾ, ಸಮ್ಮೇಳನಗಳಿಂದ ಯಾವ ಉಪಯೋಗವೂ ಇಲ್ಲ ಎನ್ನುವ ಅತಿರೇಕಕ್ಕೂ ಹೋಗುವವನಲ್ಲ . ಒಂದೆಡೆ ಸೇರಿ ಖುಷಿಪಡಲು ಹಬ್ಬದಂಥಾ ವಾತಾವರಣವನ್ನು ಕಲ್ಪಿಸುವ ಸಮ್ಮೇಳನಗಳಿರಬೇಕು. ಅಂಥಾ ಸಮ್ಮೇಳನಗಳ ಮಧ್ಯೆ ಸಂಗೀತ, ನಾಟಕ, ನೃತ್ಯಗಳಿಗೆ ದೊರೆವಂತೆ ಸಾಹಿತ್ಯಕ್ಕೂ ಒಂದು ಮನ್ನಣೆ ಇರಬೇಕೆಂಬುದು ನನ್ನ ಮತ. ಹಾಗಾಗದಿದ್ದಲ್ಲಿ, ಸಾಹಿತ್ಯದಲ್ಲಿ ಉತ್ಸಾಹ ಉಳ್ಳವರು ಬೇರೆಡೆ ಸೇರಿದರೆ ತಪ್ಪಿಲ್ಲ. ಆದರೆ, ನಮಗಿರುವ ಕಷ್ಟಗಳನ್ನು ಇತಿ-ಮಿತಿಗಳನ್ನೂ ಗಮನಿಸಬೇಕು. ಅಂಥ ಒಂದು ಸಮ್ಮೇಳನಕ್ಕೆ ಬೇಕಾಗುವ ಸಮಯ, ಹಣ ಮತ್ತು ಅದಕ್ಕಾಗಿ ಪಡಬೇಕಾದ ಬವಣೆಗಳನ್ನು ನೆನೆಸಿಕೊಂಡರೆ ಮಾಡದೇ ಇರುವುದೇ ಮೇಲು ಎನಿಸುತ್ತದೆ.
ಹಣವನ್ನು ಕೂಡಿಸಿ, ಎಲ್ಲರಿಗೂ ಅನುಕೂಲವಾಗುವ ಸ್ಥಳವನ್ನೂ ಹುಡುಕಿ ಯಾವ ರಾಜಕೀಯಕ್ಕೂ ಎಡೆಕೊಡದೇ ವ್ಯವಸ್ಥೆ ಮಾಡುವ ನಿಸ್ವಾರ್ಥರೂ ನಿಷ್ಪಕ್ಷಪಾತಿಗಳೂ ಆದ ಮುಂದಾಳುಗಳೂ ದೊರೆತರೆ ಅಗತ್ಯವಾಗಿ ಮಾಡಬಹುದು. ಅದನ್ನು ಯಾವುದಾದರೋ ವಿಶ್ವವಿದ್ಯಾನಿಲಯದಂಥ ವಾತಾವರಣದಲ್ಲಿ ನಡೆಸಬೇಕು. ಕನಿಷ್ಠ ಪಕ್ಷ ಒಂದು ವರ್ಷದ ತಯಾರಿ ಇಲ್ಲದೇ ಆತುರದಲ್ಲಿ ನಡೆಸಿದರೆ ಎಡವಿ ಮುಗ್ಗರಿಸುವ ಸಾಧ್ಯತೆಯೇ ಹೆಚ್ಚು.
ಯಾರು ಮಾಡಲೀ ಬಿಡಲಿ, ನೀವಂತೂ ಮಾಡುತ್ತಿರುವ ಕೆಲಸವನ್ನು ಮುಂದುವರೆಸಿ. ಕನ್ನಡಿಗರು ಸ್ವದೇಶದಿಂದ ದೂರವಿದ್ದೂ ಕಿಂಚಿತ್ತಾದರೂ ಕನ್ನಡದ ಕೆಲಸ ಮಾಡುತ್ತಿದ್ದರೆ ಅದಕ್ಕೆ ಮೊದಲ ಕಾರಣ ‘ಬರಹ’ವನ್ನು ನಮಗೆ ಕೊಟ್ಟ ವಾಸು ಮತ್ತು ಎರಡನೆಯಕಾರಣ ನಿಮ್ಮಂಥ ಅಂತರ್ಜಾಲ ಪತ್ರಿಕೆಗಳು. ಇಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸಬಹುದಾದವರು ಮೂರನೆಯ ಸ್ಥಾನವನ್ನು ಪಡೆಯಲಿಕ್ಕೆ ಯಾವ ಅಡ್ಡಿಯೂ ಇಲ್ಲ!
ನಡುರಾತ್ರಿಯಾಗುತ್ತಿದೆ. ನಿಮ್ಮ ಕೆಂಡಸಂಪಿಗೆಯ ಪರಿಮಳ ಇನ್ನೂ ಘಮಘಮಿಸುತ್ತಿರುವಾಗಲೇ ನಿಮಗೆ ಶುಭರಾತ್ರಿಯನ್ನು ಕೋರಿ ವಿರಮಿಸುತ್ತೇನೆ. ನೀವು ಪ್ರತಿಕ್ರಿಯೆ ಕೇಳಿದಿರಿ, ಕೊಟ್ಟಿರುವೆ, ನಮಸ್ಕಾರ.
- ಮೈ. ಶ್ರೀ. ನಟರಾಜ.
[email protected]
ಪೂರಕ ಓದಿಗೆ-
ವಾಚಕರ ವಾಣಿ ; ಸಾಹಿತ್ಯ ಮತ್ತು ಸಮ್ಮೇಳನ !
ಫ್ಲಾರಿಡಾ ಸಮ್ಮೇಳನದ ‘ಓ ನಾಮ’ ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications