ವಿಭುವನ ಸಂಕಷ್ಟ ಚತುರ್ಥಿ 2026: ಜೂನ್ 3 ಅಥವಾ 4? ನಿಖರ ದಿನಾಂಕ, ಚಂದ್ರೋದಯ ಸಮಯ ಮತ್ತು ಪೂಜಾ ವಿಧಿ ಇಲ್ಲಿದೆ
ವಿಭುವನ ಸಂಕಷ್ಟಿ ಚತುರ್ಥಿಯು ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಪ್ರಮುಖ ಸಂಕಷ್ಟಿ ಚತುರ್ಥಿ ಆಚರಣೆಗಳಲ್ಲಿ ಒಂದು. ಈ ವಿಶೇಷ ಚತುರ್ಥಿಯು ಪ್ರತಿ ಮೂರು ವರ್ಷಗಳಿಗೊಮ್ಮೆ ಬರುತ್ತದೆ. ಇದು ಚಾಂದ್ರಮಾನ ಮಾಸವಾದ ಅಧಿಕ ಮಾಸದ ಕೃಷ್ಣ ಪಕ್ಷದ ಸಮಯದಲ್ಲಿ ಬರುತ್ತದೆ. ಮೂರು ವರ್ಷಗಳಿಗೊಮ್ಮೆ ಬರುವ ಕಾರಣ ಈ ಸಂಕಷ್ಟಿ ಚತುರ್ಥಿಯ ವೃತ ಮತ್ತು ಪೂಜಾ ಫಲ ಕೂಡಾ ಹೆಚ್ಚು ಎಂದು ಹೇಳಲಾಗುತ್ತದೆ.
ವಿಭುವನ ಸಂಕಷ್ಟ ಚತುರ್ಥಿ 2026 ದಿನಾಂಕ ಮತ್ತು ಸಮಯ
ಈ ವರ್ಷ, ವಿಭುವನ್ ಸಂಕಷ್ಟಿ ಚತುರ್ಥಿಯ ನಿಖರವಾದ ದಿನಾಂಕದ ಬಗ್ಗೆ ಭಕ್ತರಲ್ಲಿ ಕೆಲವು ಗೊಂದಲ ಮನೆ ಮಾಡಿದೆ. ಏಕೆಂದರೆ ಚತುರ್ಥಿ ತಿಥಿ ಜೂನ್ 3 ಮತ್ತು ಜೂನ್ 4 ರ ನಡುವೆ ಬರುತ್ತದೆ. ಪರಿಣಾಮವಾಗಿ, ಅನೇಕ ಭಕ್ತರು ಉಪವಾಸ ವೃತ ಆಚರಿಸಲು ಪೂಜಾ ವಿಧಿ ವಿಧಾನ ನೆರವೇರಿಸಲು ಸರಿಯಾದ ದಿನ ಯಾವುದು ಎನ್ನುವ ಅನಿಶ್ಚಿತತೆಯಲ್ಲಿದ್ದಾರೆ.

2026ರ ವಿಭುವನ ಸಂಕಷ್ಟಿ ಚತುರ್ಥಿಯು ಬುಧವಾರ ಅಂದರೆ ಜೂನ್ 3, 2026ರಂದು ಬರುತ್ತದೆ. ಚತುರ್ಥಿ ತಿಥಿಯು 2026ರ ಜೂನ್ 3 ರಂದು ರಾತ್ರಿ 9:21 ಕ್ಕೆ ಪ್ರಾರಂಭವಾಗಿ 4 ಜೂನ್ 2026ರಂದು ರಾತ್ರಿ 11:30 ಕ್ಕೆ ಕೊನೆಗೊಳ್ಳುತ್ತದೆ. ಚಂದ್ರೋದಯ ಸಮಯವು 2026ರ ಜೂನ್ 3 ರಂದು ರಾತ್ರಿ 9:54ಕ್ಕೆ ಇರುತ್ತದೆ.
ಅಧಿಕ ಮಾಸವು ಮೂರು ವರ್ಷಗಳಿಗೊಮ್ಮೆ ಮಾತ್ರ ಬರುವುದರಿಂದ ಆ ಅವಧಿಯಲ್ಲಿ ವಿಭುವನ ಸಂಕಷ್ಟಿ ಚತುರ್ಥಿಯನ್ನು ಒಮ್ಮೆ ಮಾತ್ರ ಆಚರಿಸಲಾಗುತ್ತದೆ. ಇದು ಗಣೇಶನ ಭಕ್ತರಿಗೆ ಅಪರೂಪದ ಮತ್ತು ಅತ್ಯಂತ ಮಹತ್ವದ ಸಂದರ್ಭವಾಗಿದೆ.
ವಿಭುವನ ಸಂಕಷ್ಟ ಚತುರ್ಥಿ 2026 ಶುಭ ಮುಹೂರ್ತ ವೃತ ಆರಂಭ: ಜೂನ್ 3, 2026 ರಂದು ಸೂರ್ಯೋದಯ
ಚತುರ್ಥಿ ತಿಥಿ ಆರಂಭ : ಜೂನ್ : 3 ರ ರಾತ್ರಿ 9:21 PM,
ಚತುರ್ಥಿ ತಿಥಿ ಕೊನೆ :4 ಜೂನ್ ರಾತ್ರಿ 11:30
ಚಂದ್ರೋದಯ : 3 ಜೂನ್ ರಾತ್ರಿ 9:54
ವೃತ ಕೊನೆಗೊಳ್ಳುವುದು : 3 ಜೂನ್ ರ ಚಂದ್ರನ ದರ್ಶನದ ನಂತರ
ಜೂನ್ 2026ರ ಸಂಕಷ್ಟಿ ಚತುರ್ಥಿ ಮಹತ್ವ
ಈ ದಿನವು ವಿಘ್ನ ನಿವಾರಕ ಮತ್ತು ಬುದ್ಧಿವಂತಿಕೆ, ಯಶಸ್ಸು ಮತ್ತು ಸಮೃದ್ಧಿಗೆ ಸಂಬಂಧಿಸಿದ ದೇವತೆಯಾದ ಗಣೇಶನ ಆರಾಧನೆಗೆ ಸಮರ್ಪಿತವಾಗಿದೆ.
ಈ ದಿನ ಭಕ್ತರು ಕಟ್ಟುನಿಟ್ಟಿನ ಉಪವಾಸವನ್ನು ಆಚರಿಸುತ್ತಾರೆ. ತಮ್ಮ ಮನಸ್ಸಿನ ಆಸೆ ಆಕಾಂಕ್ಷೆಗಳನ್ನು ಈಡೇರಿಸುವಂತೆ ಕೋರಿ ವಿಶೇಷ ಪ್ರಾರ್ಥನೆಗಳನ್ನು ಮಾಡುತ್ತಾರೆ. ಹಿಂದೂ ನಂಬಿಕೆಗಳ ಪ್ರಕಾರ, ಈ ದಿನದಂದು ಗಣಪತಿಯನ್ನು ಪೂಜಿಸುವುದರಿಂದ ಕಷ್ಟಗಳು ದೂರವಾಗುತ್ತವೆ. ಮನಸ್ಸಿಗೆ ಶಾಂತಿ ಸಿಗುತ್ತವೆ, ಸಂತೋಷ ಮತ್ತು ಸಮೃದ್ಧಿಯ ಹಾದಿ ಸುಗಮವಾಗುತ್ತದೆ.
ವಿಭುವನ ಸಂಕಷ್ಟಿ ಚತುರ್ಥಿಯನ್ನು ದೈವಿಕ ಆಶೀರ್ವಾದಗಳನ್ನು ಪಡೆಯಲು ಮತ್ತು ಎದುರಾಗಿರುವ ಸಮಸ್ಯೆಗಳನ್ನು ನಿವಾರಿಸಲು ಒಂದು ಪ್ರಬಲ ಸಂದರ್ಭವೆಂದು ಪರಿಗಣಿಸಲಾಗಿದೆ. ಇನ್ನು ಅಧಿಕ ಮಾಸದ ಸಮಯದಲ್ಲಿ ಅಂದರೆ ಪ್ರತಿ ಮೂರು ವರ್ಷಗಳಿಗೊಮ್ಮೆ ಮಾತ್ರ ಬರುವ ಈ ಸಂಕಷ್ಟಿ ಪ್ರಾರ್ಥನೆ, ಉಪವಾಸ ಮತ್ತು ಆಧ್ಯಾತ್ಮಿಕ ಕಾರ್ಯಗಳಿಗೆ ವಿಶೇಷವಾಗಿ ಶುಭವೆಂದು ಹೇಳಲಾಗುತ್ತದೆ.
ಈ ದಿನದಂದು ಗಣೇಶನನ್ನು ಶ್ರದ್ದಾ ಭಕ್ತಿಯಿಂದ ಪೂಜಿಸುವುದರಿಂದ ಜೀವನದಲ್ಲಿ ಎದುರಾಗಿರುವ ಅಡೆತಡೆಗಳು ನಿವಾರಣೆಯಾಗುವುದು. ಆಸೆ ಆಕಾಂಕ್ಷೆಗಳನ್ನು ಪೂರೈಸಲು ಮತ್ತು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಇದು ಸಹಾಯ ಮಾಡುತ್ತದೆ.
ಪೂಜಾ ವಿಧಿ ಮತ್ತು ಆಚರಣೆಗಳು
ಈ ಶುಭ ದಿನದಂದು ಭಕ್ತರು ಬೇಗನೆ ಎದ್ದು, ಸ್ನಾನ ಮಾಡಿ ಸಂಕಷ್ಟಿ ಉಪವಾಸವನ್ನು ಆಚರಿಸುವ ಸಂಕಲ್ಪ ಮಾಡುತ್ತಾರೆ. ಗಣೇಶನಿಗೆ ಗರಿಕೆ ಹುಲ್ಲು, ಮೋದಕ, ಹಣ್ಣುಗಳು ಮತ್ತು ಸಿಹಿತಿಂಡಿಗಳು ಸೇರಿದಂತೆ ವಿಶೇಷ ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ.ಭಕ್ತರು ಗಣೇಶ ಮಂತ್ರಗಳನ್ನು ಪಠಿಸುತ್ತಾರೆ.ಪ್ರಾರ್ಥನೆಗಳನ್ನು ಮಾಡುತ್ತಾರೆ.
ಉಪವಾಸ ಮುಕ್ತಾಯ
ಚಂದ್ರೋದಯದ ನಂತರವೇ ಉಪವಾಸವು ಮುಕ್ತಾಯಗೊಳ್ಳುತ್ತದೆ. ಭಕ್ತರು ಚಂದ್ರನಿಗೆ ಅರ್ಘ್ಯ ಅರ್ಪಿಸಿ ಅಡೆತಡೆಗಳಿಂದ ಮುಕ್ತ ಮತ್ತು ಸಮೃದ್ಧಿಯಿಂದ ತುಂಬಿದ ಜೀವನಕ್ಕಾಗಿ ಗಣೇಶನ ಆಶೀರ್ವಾದ ಪಡೆಯುತ್ತಾರೆ. ಚಂದ್ರ ದರ್ಶನದ ಜೊತೆಗೆ ಉಪವಾಸ ವೃತವೂ ಕೊನೆಯಾಗುತ್ತದೆ. ನಂತರ ಭಕ್ತರು ಆಹಾರ ಸೇವಿಸಬಹುದು.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications