• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಮ್ಮ ಬದುಕಿನ ಬಣ್ಣಗಳು, ಭಾವಗಳು ಯಾವುವು?

By Staff
|

* ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ

(ತವರು: ಕಡೂರು-ಚಿಕ್ಕಮಗಳೂರು ಜಿಲ್ಲೆ)

venivas@hotmail.com

ಜೀವನ, ಬಾಳ್ವೆ, ಬಾಳು ಎಂದೆಲ್ಲ ನಾವು ಕರೆಯುವ ಈ ಬದುಕು ಎಂದರೆ ಏನು? ಏನಿದು ಬದುಕು? ಏನಿದರ ಅರ್ಥ ? ಈ ಪ್ರಶ್ನೆ ಎಲ್ಲರನ್ನೂ ಜೀವನದ ಒಂದಲ್ಲಾ ಒಂದು ಹಂತದಲ್ಲಿ ಕಾಡದೆ ಇರಲಾರದು. ಆಹಾರ , ನಿದ್ದೆ , ಮೈಥುನ, ಓಡಾಟ, ಪ್ರಯಾಣ, ಹಾಡು-ಪಾಡು, ಇಷ್ಟು ನಗು, ಅಷ್ಟು ಅಳು, ಹಬ್ಬ, ಮದುವೆ, ಗೋಳಾಟ, ಗೊಣಗಾಟ, ಹುಚ್ಚಾಟಗಳ ನಡುವೆ ಹೇಗೋ ದಿನಗಳನ್ನು ಕಳೆದು ನೂರು ವರ್ಷವಲ್ಲದಿದ್ದರೂ ಅದಕ್ಕೆ ಹತ್ತಿರ ಹತ್ತಿರವಾಗಿ ಬಾಳಿ ಒಂದು ದಿನ ಮರೆಯಾಗಿ ಹೋಗುವುದೇ ಬದುಕೇ ಹಾಗಾದರೆ? ಅಲ್ಲವೇ? ಹಾಗೆಂದರೆ ಮತ್ತೇನು? ವಿಧಿ ಎಳೆದತ್ತ ಸಾಗುವ ಈ ಜಟಕಾ ಬಂಡಿಯಂತಹ ಬದುಕಿನ ಮೇಲೆ ನಮಗೆ ಯಾವ ನಿಯಂತ್ರಣವೂ ಇಲ್ಲವೇ?

ಬಾಲ್ಯದಲ್ಲಿ ನಿರಾಯಾಸವಾಗಿ ಸರಿದುಹೋಗುವ ನಿರಾತಂಕ ದಿನಗಳು, ಅಮೇಲೆ ಓದು, ಉದ್ಯೋಗ, ಸಂಸಾರ ತಾಪತ್ರಯ, ಸಮಾಜ ತಂದೊಡ್ಡುವ ನೂರಾರು ಸವಾಲುಗಳನ್ನು ಎದುರಿಸಿ ಎಲ್ಲರಿಗಿಂತ ಮುನ್ನುಗ್ಗುವ ಛಲ. ಈ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ದಾಟಿ ಬಂದು ಬಾಳ ಬಂಡಿ ಒಂದು ಸಮತಟ್ಟಾದ ಸರಹದ್ದಿಗೆ ತಲುಪಿದಾಗ ಬದುಕಿನ ಸಾರ್ಥಕ್ಯ, ಸಾಫಲ್ಯದ ಬಗ್ಗೆ ಯೋಚನೆ ಬರುವುದು ಸಹಜ. ಇದಿಷ್ಟೇ ಬದುಕೇ? ಇಷ್ಟಕ್ಕಾಗಿ ಬದುಕಿರಬೇಕಿತ್ತೇ? ಎಂಬ ಉದಾಸೀನ ಮನೋಭಾವ ಕೂಡ ಕೆಲವರನ್ನು ಆವರಿಸುವುದಿದೆ.

ಬದುಕನ್ನು ಅನೇಕರು ಅವರವರದ್ದೇ ಆದ ದೃಷ್ಟಿಕೋನಗಳಲ್ಲಿ ವಿಶ್ಲೇಷಿಸಿದ್ದಾರೆ. ದಾಸರು, ಶರಣರುಗಳು, ಕವಿಗಳು, ಬುದ್ಧಿಜೀವಿಗಳಿಂದ ಹಿಡಿದು ನಮ್ಮ ಸಿನಿಮಾ ಸಾಹಿತಿಗಳೂ ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. 'ಈ ಜಗವೊಂದು ರಂಗಮಂದಿರ, ನಾವೆಲ್ಲ ಬರೀ ಪಾತ್ರಧಾರಿಗಳು" - ಪ್ರಸಿದ್ಧ ಆಂಗ್ಲ ಕವಿ ಶೇಕ್ಸ್‌ ಪಿಯರ್‌ ಬದುಕಿನ ಬಗ್ಗೆ ನೀಡಿದ ಈ ವ್ಯಾಖ್ಯಾನ ಯಾರಿಗೆ ತಾನೇ ಗೊತ್ತಿಲ್ಲ? ಆದರೆ ನಮ್ಮ ಕನ್ನಡಕ್ಕೊಬ್ಬರೇ ಕೈಲಾಸಂ ಶೇಕ್ಸ್‌ ಪಿಯರನ ಈ ಉಕ್ತಿಗೆ ತಮ್ಮ ನಗೆಯ ಬಾಲಂಗೋಚಿ ಹಚ್ಚಿದ್ದು ಹೀಗೆ- 'ಹೌದು, ಹೌದು. ಆದರೆ ಇಲ್ಲಿ ನಟರಿಗೆ ಸುಸ್ತಾದಾಗ ಸುಧಾರಿಸಿಕೊಳ್ಳಕ್ಕೆ ನಾಟಕದಲ್ಲಿ ಇರುವಂತೆ ಸೈಡ್‌ ವಿಂಗ್‌ ಇರೊಲ್ಲ ಅಷ್ಟೇ."

ನಮ್ಮ ದಾಸರುಗಳು ಈ ಬದುಕನ್ನು 'ನೀರ ಮೇಲಿನ ಗುಳ್ಳೆ ನಿಜವಲ್ಲ" ಇದು ನಶ್ವರ ಎಂದೂ, ಈ ಭೂಮಿಯ ಮೇಲಿನ ನಮ್ಮ ಜೀವನ ಬಾಡಿಗೆ ಮನೆಯಲ್ಲಿದ್ದಂತೆ ಎಂದು ಬಣ್ಣಿಸಿ 'ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ" ಎಂಬ ಹಾಡಿನಲ್ಲಿ ಬದುಕಿನ ಬಗೆಗೆ ಅತಿ ಅಭಿಮಾನ ಸಲ್ಲದು ಎಂದು ವೈರಾಗ್ಯ ಬೋಧಿಸಿದರೂ 'ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲುಬೇಡಿ, ಹುಚ್ಚಪ್ಪಗಳಿರಾ" 'ಈಸಬೇಕು ಇದ್ದು ಜೈಸಬೇಕು" ಎಂದು ಬದುಕನ್ನು ಚಲನಶೀಲವಾಗಿರಿಸುವಂತೆ ಎಚ್ಚರಿಸಿಯೂ ಇದ್ದಾರೆ. ಬಸವಣ್ಣನವರಂತೂ 'ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ, ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು" ಎಂದು ಮಾನವ ಬದುಕಿಗೆ ಇನ್ನಿಲ್ಲದ ಪ್ರಾಮುಖ್ಯತೆ ಒದಗಿಸಿದ್ದಾರೆ. ಬದುಕನ್ನು ಶೂನ್ಯ, ಮಾಯೆ, ವ್ಯರ್ಥ ಎಂದು ಹೆದರಿಸಿ ನಮ್ಮ ಮನಸ್ಸಿನಲ್ಲಿ ಜೀವ ವಿರೋಧಿ ಧೋರಣೆ ಬಿತ್ತುವ ಶುಷ್ಕ ಪ್ರವಚನಗಳಿಗಿಂತ ಇಂತಹ ಜೀವನ ಪ್ರೀತಿಯ ಹಿರಿಮೆಯನ್ನು ಸಾರುವ ತತ್ವಗಳು ನನಗೆ ಬಹಳ ಪ್ರಿಯ.

ಇನ್ನು ನಮ್ಮ ಕನ್ನಡ ಕವಿಗಳಂತೂ ಬದುಕನ್ನು ಪ್ರೀತಿಸಿ, ಬದುಕೇ ಬರಹವಾದವರು. ಬಾಳಿನ ಬವಣೆಗಳ ನಡುವೆಯೂ ಅಳು ನುಂಗಿ ನಗು ನಕ್ಕ ನವನೀತ ಹೃದಯಿಗಳು. ತಾವು ಪಟ್ಟ ಪಾಡನ್ನೆಲ್ಲಾ ಹುಟ್ಟು ಹಾಡಾಗಿಸಿದವರು. 'ನಿನ್ನದೇ ನೆಲ, ನಿನ್ನದೇ ಜಲ, ನಿನ್ನದೇ ಆಕಾಶ" ಎಂದು ಈ ಮೃಣ್ಮಯ ಬದುಕಿನಿಂದ ನಾವು ಮೊಗೆದುಕೊಳ್ಳಬಹುದಾದ ಅನಂತ ಅವಕಾಶಗಳನ್ನು ತೆರೆದಿಟ್ಟವರು. ಬೇಂದ್ರೆಯವರು ಒಂದು ಕಡೆ ಬರೆದುಕೊಂಡಂತೆ- 'ಕವಿ ಜೀವದ ಬೇಸರ ಕಳೆಯಾಕ ಹೆಚ್ಚಿಗೇನು ಬೇಕ? ಹೂತ ಹುಣಿಸಿ ಮರ ಸಾಕ" ಎಂದು ಅನು ದಿನದ ಬದುಕಿನ ಸಣ್ಣ ಸಣ್ಣ ಸಂಗತಿಗಳಿಗೂ ಪುಳಕಗೊಂಡವರು. ನಮಗೆ ದಿನ ನಿತ್ಯದ ಮಾಮೂಲು ಸಂಗತಿಗಳಾದ ಸೂರ್ಯೋದಯ, ಸೂರ್ಯಸ್ತಗಳು ಕವಿ ಕಣ್ಣಿಗೆ ಅದು ಸೂರ್ಯನು ದಯ ಮಾಡಿ ನಮಗಿತ್ತ ವರವಾಗಿ ಕಾಣಿಸಿ 'ಉದಯಾಸ್ತಗಳಲಿ ಲೋಕ ತಾನಲ್ಲ ಬರಿಯ ಮಣ್ಣು, ಚೆಲುವೆದುರಿನಲಿ ಸತತ ಹೊಸದಾಗಬೇಕು ಕಣ್ಣು" ಎಂಬ ಚಂದದ ಸಾಲುಗಳು ಜೀವ ಪಡೆದುಕೊಳ್ಳುತ್ತವೆ. 'ಆನಂದ ಮಯ ಈ ಜಗ ಹೃದಯ ಏತಕೆ ಭಯ?" ಎಂಬ ಕವಿತೆಯಲ್ಲಿ ರಸಋಷಿ ಕುವೆಂಪು ಬದುಕಿನ ಅಲೌಕಿಕ ಸೌಂದರ್ಯವನ್ನು ಹಾಡಿ ಹೊಗಳುತ್ತಾರೆ.

ಕೆ.ಎಸ್‌. ನಿಸಾರ್‌ ಅಹಮದ್‌ ಅವರ 'ಬಿಡುವಿರದ ದುಡಿತದಲ್ಲಿ ಬಲಿಯಾಗದಿರಲಿ ಬದುಕು" ಎಂಬ ಸಾಲಿನಲ್ಲಿ ಏಕತಾನತೆಯ ದಿನಚರಿಗಳಿಂದ ನಾವು ಜೀವನದ ಸೊಬಗಿನಿಂದ ವಂಚಿತರಾಗಬಾರದೆಂಬ ಕಳಕಳಿ ಇದೆ. ನನ್ನ ಪ್ರೀತಿಯ ಕವಿ ಅಡಿಗರಂತೂ ಮಾನವ ಬದುಕಿನ ಎಲ್ಲಾ ಚಂಚಲತೆ, ಬಯಕೆ, ಗೊಂದಲ, ತಲ್ಲಣ, ನಿರಾಶೆ, ಹತಾಶೆಗಳನ್ನು ಒಟ್ಟುಗೂಡಿಸಿ ಒಂದೇ ಮಾತಿನಲ್ಲಿ 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ" ಎಂದು ಬಿಟ್ಟರು. ಇನ್ನು ನಮ್ಮ ಎಲ್ಲಾ ಕವಿಗಳು ಬದುಕಿನ ಬಗೆಗೆ ಬರೆದಿದ್ದನ್ನು ವಿವರಿಸಲು ಅದಕ್ಕೆ ಮತ್ತೊಂದು ಪ್ರತ್ಯೇಕ ಪ್ರಬಂಧವನ್ನೇ ಬರೆಯ ಬೇಕಾಗಬಹುದು.

ಇನ್ನು ಸಿನಿಮಾ ಸಾಹಿತಿಗಳು ಬದುಕಿನ ಬಗೆಗೆ ಏನನ್ನುತ್ತಾರೆ? ರಾಜಕುಮಾರ್‌ 'ಪ್ರೇಮದ ಕಾಣಿಕೆ"ಯಲ್ಲಿ ಬದುಕನ್ನು ಕುರಿತು 'ಇದು ಬರೆದ ಕಥೆಯೋ, ನನಗಾಗಿ ಬಂದ ವ್ಯಥೆಯೋ" ಎಂದು ವಿಷಾದಭರಿತರಾಗಿ ಹಾಡಿದ್ದು ಕೇಳಿರದ ಕನ್ನಡಿಗರಾರು? 'ಜೀವನವೇ ಸುಖ ಪಯಣ, ಒಲವಿನ ಕವನ" 'ಬಾಳೊಂದು ಭಾವಗೀತೆ, ಆನಂದ ತುಂಬಿದ ಕವಿತೆ" 'ಜೀವನವೇ ಹೂ ಬನವು" ಎಂದು ಪ್ರೇಮಿಗಳು ಆನಂದದಿಂದ ಕುಣಿದು ಕುಪ್ಪಳಿಸಿದರೆ, ಬಯಸಿದ ಪ್ರೇಮ ದೊರಕದ ಭಗ್ನ ಹೃದಯಿಗಳು 'ಬದುಕೇ ಬರೀ ಭ್ರಮೆಯೋ, ಒಲವು ಸಿಗದ ಸಿರಿಯೋ?" ಎಂದು ನಿಟ್ಟುಸಿರುಗರೆದಿದ್ದುಟು. 'ಯಾರಿಗೆ ಬೇಕು ಈ ಲೋಕ?" ಎಂದು ನಿರಾಶೆಯ ಕೂಪದಲ್ಲಿ ಮುಳುಗಿ ಹೋದವರೂ ಉಂಟು.

ಇದೆಲ್ಲಾ ಅವರಿವರ ದೃಷ್ಟಿಕೋನದಲ್ಲಿ ಬದುಕನ್ನು ಕಂಡಂತಾಯಿತು. ನನ್ನ ದೃಷ್ಟಿಯಲ್ಲಿ ಬದುಕು ಎಂದರೆ ಏನು? ನನ್ನ ಪ್ರಕಾರ 'ಒಲವೇ ಜೀವನ ಸಾಕ್ಷಾತ್ಕಾರ", 'ಒಲವೇ ಬದುಕು." ಬೇಂದ್ರೆಯವರು ಮತ್ತೊಂದು ಕಡೆ ಬರೆಯುವಂತೆ- 'ಬದುಕುವುದು ಎಂದರೆ ಒಲವನ್ನು ಜೀವಂತವಾಗಿರಿಸುವುದು"-ಇದು ನನ್ನ ಬಹು ಇಷ್ಟದ ಸಾಲು. ಎಂದಿಗೆ ಬದುಕಿನಲ್ಲಿ ಒಲವು ನಶಿಸುತ್ತದೋ ಅಂದೇ ಬದುಕಿನ ಅಂತ್ಯ. ಹೃದಯದ ಹೊಲವನ್ನು ಹದವಾಗಿರಿಸಿ, ಈ ಎದೆಯಾಲವನ್ನು ಬಾಡದಂತೆ ಕಾಪಾಡುವುದೇ ಪ್ರತಿ ಮನುಜನ ಬಾಳಿನ ಗುರಿಯಾಗಬೇಕು. ಬದುಕು ಬರಡಾಗದಂತೆ, ಬೋರಾಗಿ ಹೋಗದಂತೆ, ಕೊನೆ ತನಕ ಅದರಲ್ಲಿನ ರೋಚಕತೆ, ತಾಜಾತನ ಮಾಸಿ ಹೋಗದಂತೆ ಬಾಳಿ ಬದುಕಿದವರ ನೂರಾರು ಉದಾಹರಣೆಗಳು ನಮ್ಮ ಮುಂದಿವೆ.

ನಮ್ಮ ನಡುವಿನ ಅಪರೂಪದ ಜೀವಿ, ಶತಾಯುಷಿ ಎ.ಎನ್‌. ಮೂರ್ತಿರಾಯರು ಒಂದು ಸಂದರ್ಶನದಲ್ಲಿ ಹೇಳಿದ್ದು ಕೇಳಿದ ನೆನಪಿದೆ - 'ಈ ಜೀವನ ನನಗೆ ಎಂದಿಗೂ ಬೇಸರ ತರಿಸಿಲ್ಲ. ಈ ಬದುಕು ಸಾಕಾಯಿತು, ಪರಮಾತ್ಮ, ನನ್ನನ್ನು ನಿನ್ನ ಬಳಿಗೆ ಕರೆದುಕೊಳ್ಳಪ್ಪ ಎಂಬ ಒಂದು ದೀನ ಭಾವನೆ ಒಮ್ಮೆಯೂ ನನ್ನಲ್ಲಿ ಮೂಡಿದ್ದಿಲ್ಲ" ಈ ಮಾತು ಅವರ ಸಾರ್ಥಕ ಬದುಕಿಗೆ ಅವರೇ ಬರೆದುಕೊಂಡ ಭಾಷ್ಯ. ಇಂತಹ ಒಂದು ಅದಮ್ಯವಾದ ಜೀವನ ಪ್ರೀತಿಯ ಬೀಜ ನಮ್ಮ ಮನದಲ್ಲಿ ಇನ್ನಾದರೂ ಮೊಳಕೆಯಾಡೆಯದೇ ಹೋದಲ್ಲಿ ನೂರು ವರ್ಷವಿರಲಿ, ನಲವತ್ತಕ್ಕೇ ಅಕಾಲ ವೃದ್ಧಾಪ್ಯ ಮನಸ್ಸನ್ನು ಕಾರ್ಮೋಡದಂತೆ ಕವಿದು ಕೊಂಡು ಬಿಡಬಹುದು.

ಒಂದೇ ಸಕ್ಕರೆಯ ಪಾಕದಿಂದ ವಿವಿಧ ಆಕೃತಿಗಳು ತಯಾರಾಗುವಂತೆ ನಮ್ಮೆಲ್ಲರ ಬದುಕಿನ ಮೂಲ ದ್ರವ್ಯ ಒಂದೇ ಆದರೂ ಮೂಡಿ ಬಂದಿರುವ ಅಚ್ಚುಗಳು ಬೇರೆ ಬೇರೆ ಬಗೆಯವು. ಒಬ್ಬರ ಆಸೆ, ನಿರಾಸೆ ಇನ್ನೊಬ್ಬರಿಗಿಂತ ಭಿನ್ನ. ಒಬ್ಬರಿಗೆ ಸಿಹಿಯಾಗಿದ್ದು ಮತ್ತೊಬ್ಬರಿಗೆ ಕಹಿ, ಒಬ್ಬರಿಗೆ ಸೋಲು ಎನಿಸಿದ್ದು ಮತ್ತಾರದೋ ಗೆಲುವಾಗಿರಬಹುದು. ಒಬ್ಬೊಬ್ಬರ ಬದುಕು ಒಂದೊಂದು ತರ. ಬದುಕಿನ ಸೊಬಗು ಹೆಚ್ಚಲು ಈ ವೈವಿಧ್ಯತೆ ಕೂಡ ಕಾರಣ. ನಿಮ್ಮ ಬದುಕು ಹೇಗಿದೆ? ನಿಮ್ಮ ಅನಿಸಿಕೆಯಲ್ಲಿ ಏನು ಈ ಬದುಕು ಎಂದರೆ? ನಿಮ್ಮ ಬದುಕಿನ ಬಣ್ಣಗಳು, ಭಾವಗಳು ಯಾವುವು? ಇದನ್ನು ತಿಳಿಯುವ ಒಂದು ನಿರಪಾಯಕಾರಿಯಾದ ಕುತೂಹಲ ನನಗೆ. ತಿಳಿಸಲು ಸಮಯ ಇದ್ದರೆ, ಅಭ್ಯಂತರ ಇಲ್ಲದಿದ್ದರೆ ಬರೆಯಿರಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more