ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇದ ವ್ಯಾಸರಿಗೇ ತಿರುಗುಬಾಣ!

By Staff
|
Google Oneindia Kannada News

*ಕೆ. ಆರ್‌. ಎಸ್‌. ಮೂರ್ತಿ

K. R. S. Murthyಉತ್ತರ ಕ್ಯಾಲಿಫೋರ್ನಿಯದ ಸಾಹಿತ್ಯ ಗೋಷ್ಠಿಯು ಈಗಾಗಲೇ ಒಂದು ವರುಷದ ಮಗುವಾಗಿ ಬೆಳೆದು ನಿಂತಿದೆ. ಪ್ರತಿ ತಿಂಗಳೂ ತಪ್ಪದೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದು ಡಿಸೆಂಬರ್‌ 14 ರಂದು ಮೊದಲನೆಯ ವರುಷದ ಹುಟ್ಟುಹಬ್ಬವನ್ನು ವೈಭವದಿಂದ ನಡೆಸುವ ಯೋಜನೆ ನಡೆಯುತ್ತಿದೆ. ಈ ಸಮಾರಂಭದಲ್ಲಿ ಸಾಹಿತ್ಯ ಗೋಷ್ಠಿಯ ಸದಸ್ಯರು, ಇನ್ನಿತರ ಕನ್ನಡ ಸಾಹಿತ್ಯಾಭಿಮಾನಿಗಳೂ ಸಂಸಾರ ಸಮೇತ ಬಂದು ಪ್ರೋತ್ಸಾಹಿಸಿದರೆ, ಸದ್ಯದಲ್ಲೇ ಅಂಬೆಗಾಲಿಡುತ್ತಿದ್ದ ಕಂದನು ಎದ್ದು ನಿಂತು ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ, ಬೇಗ ಬೇಗನೆ ದಾಪುಗಾಲಿಟ್ಟು ಸರ್ರನೆ ಓಡುವ ಹಂಬಲದ ಮುದ್ದು ಕೃಷ್ಣನಾಗಿ ಕನ್ನಡ ಗೋಕುಲದಲ್ಲಿ ತುಂಟ ಸುಕುಮಾರನಾಗುವುದರಲ್ಲಿ ಸಂದೇಹವಿಲ್ಲ.

ಹೊಸ ಸಾಹಿತ್ಯ ಪ್ರಕಾರದ ಪ್ರಯೋಗ

ಕನ್ನಡ ಸಾಹಿತ್ಯದಲ್ಲಿ, ಭಾರತದ ಸೋದರ ಭಾಷೆಗಳಲ್ಲಿ, ಪ್ರಪಂಚದ ಮಿಕ್ಕೆಲ್ಲ ಭಾಷೆಗಳಲ್ಲಿ ಕೂಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಒಂದು ದಿಕ್ಕಿನಲ್ಲಿ ಮಾತ್ರ ಸಾಹಿತ್ಯ ನದಿಯು ಹರಿಯುತ್ತಿದೆ ಮತ್ತು ಇದುವರೆಗೂ ಹರಿದುಕೊಂಡು ಬಂದಿದೆ; ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ, ಲೇಖಕನು ಓದುಗರೊಂದಿಗೆ ತನ್ನ ಸೃಷ್ಟಿಯ ಪಾತ್ರಗಳ ಮೂಲಕವೂ, ಸನ್ನಿವೇಶಗಳ ಮೂಲಕವೂ, ಕೆಲವು ಸಾರಿ ನೇರವಾಗಿಯೂ ಮಾತನಾಡುತ್ತಾನೆ. ಕವನ, ಕಾವ್ಯ, ಸಣ್ಣ ಕಥೆ, ಕಾದಂಬರಿ, ನಾಟಕ ಮೊದಲಾದ ವಿವಿಧ ಸಾಹಿತ್ಯ ಪ್ರಕಾರಗಳಲ್ಲೆಲ್ಲಾ ಸಾಹಿತ್ಯದ ನದಿಯ ದಿಕ್ಕನ್ನು ಮಾತ್ರ ಬದಲಿಸಲು ಇದುವರೆಗೂ ವಿಶ್ವಾಮಿತ್ರರು ಯಾವ ಸಾಹಿತ್ಯದ ನಾಡುಗಳಲ್ಲೂ ಅವತರಿಸೇ ಇಲ್ಲ ! ಮಹಾ ಸಾಹಿತಿಗಳೂ, ಪ್ರಪಂಚದ ಸಾಹಿತ್ಯದ ದಿಗ್ಗಜಗಳೆಲ್ಲರೂ ಈ ನದಿಪ್ರವಾಹವನ್ನು ಎದುರಿಸುವ ಸೃಷ್ಟಿ ಶೀಲತೆಯನ್ನು ತೋರಿಸಿದ್ದೇ ಇಲ್ಲ. ಕೆಲವು ವರ್ಷಗಳ ಕೆಳಗೆ ಡಾಕ್ಟರ್‌ ಕೆ. ಆರ್‌. ಎಸ್‌. ಮೂರ್ತಿಯವರು ಈ ನದಿಯ ಪ್ರವಾಹವನ್ನು ಓದುಗರ ಕಡೆಯಿಂದ ಲೇಖಕನ ದಿಕ್ಕಿಗೆ ಹರಿಸುವ ಕನಸು ಕಂಡರು. ಈ ನೂತನ ಸಾಹಿತ್ಯ ಪ್ರಕಾರವನ್ನು ‘Talk Back to the Author’ ಎಂದು ಕರೆದು ‘Talk Back to Shakespeare‘ ಎಂಬ ಅನೇಕ ಪ್ರಯೋಗಗಳನ್ನು ಯೂರೋಪ್‌ ಮತ್ತು ಅಮೆರಿಕ ದೇಶಗಳಲ್ಲಿ ನಡೆಸಲು ಮೂಲ ಕಾರಣರಾದರು. ಈ, "Talk Back to the Author" OR "Talk Back" ಕನ್ನಡದಲ್ಲಿ ‘ಲೇಖಕನಿಗೇ ತಿರು ವಾದ’ ಅಥವಾ ‘ತಿರು ವಾದ’ ಸಾಹಿತ್ಯ ಪ್ರಕಾರವು ಪ್ರಪಂಚದಲ್ಲೇ ‘ದಿಕ್‌ ಪರಿವರ್ತಕ’ Paradigm Shift. ಧೀಮಂತ ವಿಶ್ವಾಮಿತ್ರ ಸೃಷ್ಟಿ. ಇದು ನೂತನ ಸಾಹಿತ್ಯ ಪ್ರಕಾರಮಾತ್ರವಲ್ಲ ; ಇದನ್ನು ಈಗಿರುವ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಉಪಯೋಗಿಸಬಹುದು. ಕವನ, ಸಣ್ಣಕಥೆ, ಕಾದಂಬರಿ, ನಾಟಕ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲೂ ಪರಿಣಾಮಕಾರಿಯಾಗಿ ಪ್ರಯೋಗಿಸಬಹುದು.

ವೇದವ್ಯಾಸರಿಗೆ ತಿರುಪ್ರಶ್ನೆ

ಕನ್ನಡದಲ್ಲಿ ಈ ನೂತನ ಸಾಹಿತ್ಯ ಪ್ರಕಾರವನ್ನು ‘ಲೇಖಕನಿಗೆ ತಿರುಪ್ರಶ್ನೆ’ ಮತ್ತು ’ಲೇಖಕನೊಡನೆ ತಿರು ಸಂವಾದ’ ಎಂದೂ ಕರೆಯಬಹುದು. ಸಾಹಿತ್ಯ ಗೋಷ್ಠಿಯ ಮೊದಲ ಹುಟ್ಟುಹಬ್ಬದಲ್ಲಿ ಇದರ ಕಿರುಪ್ರಯೋಗ ನಡೆಯಲಿದೆ. ಕರ್ಣನ ಪಾತ್ರವನ್ನು ಕೇಂದ್ರೀಕರಿಸಿಕೊಂಡು, ಈ ಪ್ರಯೋಗಕ್ಕೆ ‘ಕರ್ಣನಿಂದ ವ್ಯಾಸರಿಗೆ ತಿರುಗುಬಾಣ’ ಎಂದು ಹೆಸರಿಟ್ಟು ಗೋಷ್ಠಿಯ ಕೆಲವು ಸದಸ್ಯರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಮುಖ್ಯ ಪಾತ್ರಗಳಲ್ಲಿ ವಿಶ್ವನಾಥ್‌ ಹುಲಿಕಲ್‌ ಅರ್ಜುನನಾಗಿ, ಅನ್ನಪೂರ್ಣ ಹುಲಿಕಲ್‌ ಕುಂತಿಯಾಗಿ, ಪ್ರಕಾಶ್‌ ನಾಯಕ್‌ ದುರ್ಯೋಧನನಾಗಿ, ಹನುಮಂತ ಶೆಟ್ಟರು ಶ್ರೀ ಕೃಷ್ಣನಾಗಿ, ವಿಜಯ ಯೆಲಾಂಜಿಯವರು ಏಕಲವ್ಯನಾಗಿ, ಶಶಿಕಲ ನಿಂಬಾಳ್‌ ದ್ರೌಪದಿಯಾಗಿ ಮತ್ತು ಮೂರ್ತಿ ವ್ಯಾಸನಾಗಿ ಅಭಿನಯಿಸುತ್ತಿದಾರೆ. ಓ! ನಿಮ್ಮ ಕುತೂಹಲ ನನಗೆ ಚೆನ್ನಾಗಿಗೊತ್ತು: ಕರ್ಣನ ಪಾತ್ರಧಾರಿ ಯಾರೆಂದು ನಿಮ್ಮ ಮನಸ್ಸು ಕಾಡುತ್ತಿದೆ. ಈ ಮುಖ್ಯ ಗುಟ್ಟನ್ನು ತಿಳಿಯಲು ನೀವು ನಮ್ಮ ಹುಟ್ಟುಹಬ್ಬದ ಆಮಂತ್ರಿತರಾಗಿ ಬರಬೇಕು. ಈ ಕಾರ್ಯಕ್ರಮದಲ್ಲಿ ಸಭಿಕರಿಗೂ, ಹೊಸಬರೆಲ್ಲರಿಗೂ, ರಂಗಪ್ರವೇಶ ಮಾಡುವ ಸದವಕಾಶವಿದೆ.

ನಿಮಗೆಲ್ಲರಿಗೂ ಆದರದ ಆಮಂತ್ರಣವಿದೆ. ಈ ಕಾರ್ಯಕ್ರಮವು ಪುಕ್ಕಟೆ. ಸುಮ್ಮನೆ ಬಂದು ವೇದವ್ಯಾಸರಿಗೆ ಅವರ ಸೃಷ್ಟಿಯ ಪಾತ್ರಗಳೇ ತಿರುಗುಬಾಣ ಹೂಡುವ ವಿಭಿನ್ನ ಸಾಹಿತ್ಯ ಪ್ರಕಾರವನ್ನು ನೋಡಿ ಆನಂದಿಸಿ; ನೀವು ಕೂಡ ನಿಮ್ಮಬತ್ತಳಿಕೆಯ ತುಂಬ ಪ್ರಬಲ ಶಸ್ತ್ರಗಳನ್ನು ತನ್ನಿ. ಸಭಿಕರಿಗೆ ಅವಕಾಶವಿರುವುದರಿಂದ, ಮಹಾರಥಿಕರನ್ನೂ ಮೀರಿಸಿ ‘ಕಲಿಯುಗದ ಏಕಲವ್ಯರಾಗುವ’ ಅವಕಾಶ ಬಿಡಬೇಡಿ.

ಸಿಲಿಕಾನ್‌ ವ್ಯಾಲಿಯಿಂದ ದೂರ ಸ್ಥಳಗಳಲ್ಲಿರುವ, ಭಾರತದಲ್ಲಿರುವ ನೀವೆಲ್ಲರೂ ಆದಷ್ಟು ಬೇಗ ನಿಮ್ಮ ಪ್ರಶ್ನೆಗಳನ್ನು (ಅತಿ ಚೂಪಾದ ಶಸ್ತ್ರಗಳನ್ನು) ಮೂರ್ತಿಗೆ [email protected] OR [email protected]‘ ವಿಳಾಸಗಳಿಗೆ ಕನ್ನಡ ಅಥವ ಇಂಗ್ಲೀಷು ಭಾಷೆಗಳಲ್ಲಿ ಕಳಿಸಿಕೊಡಿ. ನಿಮ್ಮ ಪ್ರಶ್ನೆಗಳನ್ನು ನಿಷ್ಠೆಯಿಂದ ಉಪಯೋಗಿಸಲಾಗುತ್ತದೆ. ನಿಮ್ಮ ಹೆಸರು, ವಿಳಾಸ, ಈ-ಮೈಲ್‌ ವಿಳಾಸ ಗಳನ್ನು ಕಳಿಸಿಕೊಡಿ. ನಿಮ್ಮ ಪ್ರಶ್ನೆ / ತಿರುಗುಬಾಣ ಯಾವಪಾತ್ರದ ಪರವಾಗಿ ಕೇಳುತ್ತಿದ್ದೀರಿ ಎನ್ನುವುದನ್ನು ಸ್ಪಷ್ಟವಾಗಿ ಬರೆದುಕಳಿಸಿ. ವ್ಯಾಸರು ಕೊಟ್ಟ ಉತ್ತರಗಳನ್ನೂ, ಕಾರ್ಯಕ್ರಮದ ಪೂರ್ಣವರದಿಯನ್ನು ನಿಮಗೆ ಕಳಿಸಿಕೊಡುತ್ತೇವೆ.
ಈ ಕಾರ್ಯಕ್ರಮದ ಗುರಿಗಳು:

1. ಕರ್ಣನಪಾತ್ರದ ಬಗ್ಗೆ ಓದುಗರಿಗೆ, ಬಹುಮುಖ್ಯವಾಗಿ ವಿದ್ಯಾರ್ಥಿಗಳಿಗೆ ಚಿಂತನೆಯ ಮತ್ತು ವಿಶ್ಲೇಷಣೆಯ ಅವಕಾಶ.

2. ಕರ್ಣನಿಗೆ ಸಂಬಂಧಪಟ್ಟ ಎಲ್ಲ ಪಾತ್ರಗಳನ್ನೂ ವಿವರವಾಗಿ ವಿಶ್ಲೇಷಿಸುವುದು. ಉದಾಹರಣೆಗಳು: ಕುಂತಿ, ದುರ್ಯೋಧನ, ದ್ರೊಣ, ಭೀಷ್ಮ, ಅರ್ಜುನ, ಕೃಷ್ಣ.

3. ಕರ್ಣನ ಪಾತ್ರವನ್ನು ಹುಟ್ಟಿಸಿ, ಬೆಳೆಸಿ, ಪೋಷಿಸಿದ ರೀತಿಯ ಬಗ್ಗೆ ವ್ಯಾಸರನ್ನು ಪ್ರಶ್ನಿಸುವುದು. ಕರ್ಣನ ಜೀವನದಲ್ಲಿ ಆದ ಅನೇಕ ದುರಾದೃಷ್ಟದ, ಅನ್ಯಾಯ - ಮೋಸಗಳ ಘಟನೆಗಳ ಬಗ್ಗೆ ವ್ಯಾಸರನ್ನು ಪ್ರಶ್ನಿಸುವ ಮೂಲಕ ಚಿಂತನೆ ಮತ್ತು ವಿಶ್ಲೇಷಣೆ.

4. ಕರ್ಣನ ಪಾತ್ರಕ್ಕೆ ಸಂಬಂಧಪಟ್ಟಂತೆ ಅನೇಕ ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳ ಬಗ್ಗೆ ಮಹಾಭಾರತದ ಪಾತ್ರಗಳ ಮೂಲಕ, ಕವಿಯ ಮೂಲಕ (ಕವಿಯೇ ಒಂದು ಪಾತ್ರ ವಹಿಸಿಕೊಂಡು) ಸಂವಾದ ರೂಪದಲ್ಲಿ ಚರ್ಚೆ.

5. ನಾಯಕ- ಖಳ ಪಾತ್ರಗಳ ಆಯ್ಕೆ ಮತ್ತು ಪೋಷಣೆಗಳ ಬಗ್ಗೆ ಸಂವಾದ. ಉದಾಹರಣೆಗಳು: ಕರ್ಣ - ಅರ್ಜುನ, ಕೌರವರು - ಪಾಂಡವರು, ದುರ್ಯೋಧನ - ಧರ್ಮರಾಯ.

6. ಸಾಹಿತ್ಯಾಸಕ್ತರು, ಬರಹಗಾರರು, ವಿದ್ಯಾರ್ಥಿಗಳು, ಗಂಡಸರು, ಹೆಂಗಸರು, ಹಿರಿಯರು, ಯುವಕರು, ಮೇಧಾವಿಗಳು, ಹೊಸಬರು - ಈ ಎಲ್ಲರಿಗೂ ಸಮಾನ ಅವಕಾಶದ ರಂಗವನ್ನು ಕೊಡುವುದು. ಕವಿಯು ಕೂಡ ಓದುಗರೊಂದಿಗೆ ಒಡನಾಡಿ ಸಂವಾದ ಮಾಡುವ ವಿಭಿನ್ನ ಸಾಹಿತ್ಯ ಪ್ರಕಾರ.

7. ಈ ಕಾರ್ಯಕ್ರಮವು ಕೇವಲ ಒಂದು ಸಾರಿಯ ಪ್ರಯೋಗ ಮಾತ್ರವಲ್ಲ. ಈ ನೂತನ ಸಾಹಿತ್ಯ ಪ್ರಕಾರವನ್ನು ರಂಗದ ಮೇಲೂ, ಅಂತರ್ಜಾಲದಲ್ಲೂ, ವಿವಿಧ ಪ್ರಸಾರ - ಪ್ರಕಾಶನಾ ಮಾಧ್ಯಮಗಳಲ್ಲೂ ನಿತ್ಯವೂ / ಅನೇಕ ರೂಪಗಳಲ್ಲಿ ಸಂವಾದಗಳು ನಡೆಸಿಕೊಂಡು ಬರುವುದಕ್ಕೆ ನಾಂದಿ ಹಾಕುವುದು.

8. ವ್ಯಾಸರು ಸೃಷ್ಟಿಸಿರುವ ವಿವಿಧ ಪಾತ್ರಗಳ ಬಗ್ಗೆ ವ್ಯಾಸರನ್ನೇ ಪ್ರಶ್ನಿಸಿ ಕೇಳುವುದು:

- ವಿಶೇಷ ಸೌಲಭ್ಯ ಪಡೆದ ಪಾತ್ರಗಳು: ಅರ್ಜುನ, ಭೀಮ, ಕೃಷ್ಣ, ದ್ರೌಪದಿ, ನಕುಲ, ಸಹದೇವ.

- ಅತಿಶುಭ್ರ ಪಾತ್ರಗಳು: ಭೀಷ್ಮ, ಧರ್ಮರಾಯ, ವಿದುರ

-ಋಷಿಗಳು : ಪರಾಶರ, ವ್ಯಾಸ ಮುಂತಾದ ಋಷಿಗಳು ಮಹಾಭಾರತದ ಪೂರ್ತಿ ಬಹಳ ಮುಖ್ಯವಾದ ಪಾತ್ರಗಳಿಗೆ ವೀರ್ಯದಾನ ಮಾಡುವುದು.

- ದುರಾದೃಷ್ಟ ಪಾತ್ರಗಳು: ಪಾಂಡು, ಧೃತರಾಷ್ಟ್ರ

- ವಿವಾಹಕ್ಕೆ ಮುನ್ನವೇ ತಾಯಿಯಾಗುವುದು: ಕುಂತಿ, ಮತ್ಸ್ಯಗಂಧ

-‘ತಿರುವಾದ’ ಬರಿಯ ನೂತನ ಸಾಹಿತ್ಯ ಪ್ರಕಾರ ಮಾತ್ರವಲ್ಲ; ಇದು ಸಾಹಿತ್ಯಕ್ಕೆ ನವ್ಯ ದಿಕ್‌ ಸೃಷ್ಟಿ. ಒಂದುಕಾಲಿನಲ್ಲಿ ಕುಂಟುತ್ತಿದ್ದ ಸಾಹಿತ್ಯ ಎರಡು ಕಾಲುಗಳಿಂದಲೂ ರಭಸದಿಂದ ಓಡುವ ಕಾಲವನ್ನು ತರುವ, ಕಾಲ-ದಿಕ್ಕು ಗಳನ್ನು ಹಿಂದು-ಮುಂದು ಮಾಡಬಲ್ಲ ಸಾಹಿತ್ಯದ SpaceTime Machine.

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X