• search

ಡಿವಿಜಿಯವರ ಮುಕ್ತಕಗಳ ಮೆರುಗು ಹಾಗೂ ಮೌಲ್ಯಗಳ ಹರಹು

By oneindia staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    *ಪದ್ಮನಾಭ ರಾವ್‌, ಮಿಲ್ಪಿಟಾಸ್‌

    Padmanabha Rao, the authorಕಗ್ಗ ಹಾಗೂ ಕಗ್ಗದ ಡಿ.ವಿ.ಜಿಯವರನ್ನು ಕುರಿತು ಹೇಳುವುದೇ ಒಂದು ವಿಶೇಷವಾದ ಕೆಲಸ. ಡಿ.ವಿ.ಜಿಯವರ ಎಲ್ಲಾ ಕೆಲಸಗಳು ಅನುಭವದ ಆಳದಲ್ಲಿ ಹೆಕ್ಕಿ ಆರಿಸಿದ, ಆಣಿ ಪೋಣಿಸಿದ ಮುತ್ತುಗಳು.

    ಮಾನವನು ತನ್ನ ಬುದ್ಧಿಯು ವಿಕಾಸ ಹೊಂದಿದಂತೆಲ್ಲಾ ಜಗತ್ತಿನ ಮತ್ತು ಜೀವನದ ಒಳನೋಟ, ರಹಸ್ಯ ಹಾಗೂ ಪ್ರಕೃತಿಯ ವೈಚಿತ್ರ್ಯವನ್ನು ಅರಿಯಲು ಉತ್ಸುಕನಾಗುತ್ತಾನೆ, ಶ್ರಮಿಸುತ್ತಾನೆ. ಇದು ಸ್ವಲ್ಪ ಮಟ್ಟಿಗೆ ಅಥವಾ ಪೂರ್ಣ ಪ್ರಮಾಣದಲ್ಲಿ ಹೊರಬಂದಾಗ ದರ್ಶನ ಅಥವಾ ‘‘ಫಿಲಾಸಫಿ’’ ಆಗುತ್ತದೆ. ಇಂತಹ ಒಂದು ಕೊಡುಗೆ ಈ ಮಂಕುತಿಮ್ಮನ ಕಗ್ಗ. ಈ ಸಮ್ಯಗ್ದರ್ಶನವನ್ನು ನೋಡುವ ರೀತಿ ಅನೇಕ. ಕೆಲವರಿಗೆ ಇದು ಸುಭಾಷಿತವಾದರೆ ಹಲವರಿಗೆ ಇದು ಸಾಹಿತ್ಯ. ಜೀವನ ಮೌಲ್ಯಗಳಿರುವುದರಿಂದ ದರ್ಶನ. ಸರ್ವರ ವಿಚಾರಧಾರೆಯನ್ನು ನವೀಕರಿಸುವ ಸತ್ವ ಮತ್ತು ತತ್ವ ಇರುವುದರಿಂದ ಇದು ಸಾಹಿತ್ಯ. ಇದು ಡಿ.ವಿ.ಜಿಯವರ ಕೊಡುಗೆ- ಮನುಜ ಕುಲಕ್ಕೆ, ಬರಿ ಕನ್ನಡಿಗರಿಗಲ್ಲ !

    ಡಿ.ವಿ.ಜಿಯವರು ಇಟ್ಟುಕೊಂಡ, ಇತರರಿಗೆ ತಿಳಿಯಪಡಿಸಿದ, ಜೀವನ ಮೌಲ್ಯಗಳ ಅಳತೆಗೋಲು ಈ ಕಗ್ಗ. ಕಗ್ಗ ಮೊದಲು ಪ್ರಕಟವಾದದ್ದು 1943ರಲ್ಲಿ. ನಂತರ ಇದು 1950, 1958, 1964, 1969, 1973, 1977, 1980, 1987, 1988, 1993, 1996ರಲ್ಲಿ, ಲಕ್ಷ ಪ್ರತಿಗಳಿಗಿಂತ ಹೆಚ್ಚಾಗಿ ಪ್ರಕಟಗೊಂಡಿದೆ. ಕಗ್ಗದ ಬಗ್ಗೆ ಬಹಳಷ್ಟು ಜನ ವಿದ್ವಾಂಸರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರು ಕಗ್ಗವನ್ನು ಕುರಿತು ಹೇಳಿರುವ ಮಾತು....

    ಹಸ್ತಕ್ಕೆ ಬರಿ ನಕ್ಕೆ; ಓದುತ್ತ ಓದುತ್ತ
    ಮಸ್ತಕಕಿಟ್ಟು ಗಂಭೀರವಾದೆ
    ವಿಸ್ತರದ ದರ್ಶನಕೆ ತುತ್ತತುದಿಯಲಿ ನಿನ್ನ
    ಪುಸ್ತಕಕ್ಕೆ ಕೈಮುಗಿದೆ- ಮುಂಕುತಿಮ್ಮ ।।

    ಸ್ವತಃ ಡಿವಿಜಿಯವರೇ ತಮ್ಮ ಕಗ್ಗದ ಕುರಿತಾದ ಉದ್ದೇಶವನ್ನು ಹೀಗೆ ಹೇಳಿದ್ದಾರೆ-
    ವಿಶದಮಾದೊಂದು ಜೀವನಧರ್ಮದರ್ಶನವ।
    ನುಸುರಿಕೊಳೆ ತನ್ನ ಮನಸಿಗೆ ತಾನೆ ಬಗೆದು।।
    ನೆಸದವೊ ಗ್ರಂಥಾನುಭವಗಳಿಂದಾರಿಸುತ।
    ಹೊಸೆದನೀ ಕಗ್ಗವನು- ಮಂಕುತಿಮ್ಮ ।। 936 ।।

    ಜೀವನದ ರಹಸ್ಯವನ್ನು ಭೇದಿಸುವ ನಿಟ್ಟಿನಲಿ, ತನಗಾಗಿಯೆ ಒಂದು ಜೀವನದರ್ಶನದ ಸಿದ್ಧಿಗಾಗಿ, ಜೀವನದ ಗುರಿ ಸಾಧಿಸಲು, ತನಗೆ ತಾನೆ ಒಂದು ವಿವವರವಾದ ಜೀವನಧರ್ಮವನ್ನು ನಿರ್ಣಯಿಸಿಕೊಳ್ಳಲು ಹೊರಟು ಅನೇಕ ಗ್ರಂಥಗಳಿಂದ, ಅನುಭವದಿಂದ, ಸತ್ಯ ಏನು ಎಂದು ತಿಳಿಯುವ ಪ್ರಾಮಾಣಿಕ ಪ್ರಯತ್ನ ನಡೆಸಿದ ಡಿ.ವಿ.ಜಿಯವರು, ತಾವು ಕಂಡುಕೊಂಡ ಸತ್ಯವನ್ನು ಇತರರಿಗೂ ಸಹ ಹೇಳಬೇಕೆಂದು, ಬೇರೆಯವರಿಗೂ ಉಪಯೋಗವಾಗಬೇಕೆಂಬ ಉದ್ದೇಶದಿಂದ ಈ ಗ್ರಂಥವನ್ನು ರಚಿಸಿದ್ದಾರೆ.

    ತಿಮ್ಮ ಗುರುವಿನ ಭವ- ಭಾವ

    ಹೃದ್ಯ ಹೃದಯೇಂಗಿತಕೆ ರಾಗ ತಾಳದ ಕಟ್ಟು।
    ಗದ್ಯ ಲೌಕಿಕ ತಾತ್ವಿಕಕ್ಕಚ್ಚುಕಟ್ಟು।।
    ಮಧ್ಯದಲಿ ಮಿಸುಕಿ, ನೆಲಬಿಟ್ಟು, ಬಾನ್‌ ಮುಟ್ಟದಿಹ।
    ಪದ್ಯವಧಿಕಪ್ರಸಂಗಿ- ಮಂಕುತಿಮ್ಮ ।। 937।।

    ಸಾಮಾನ್ಯವಾಗಿ ಹೃದಯಕ್ಕೆ ಮುಟ್ಟುವಂಥದು, ಹೃದಯಕ್ಕೆ ಆನಂದವನ್ನು ತರುವಂಥದು, ಕಟುಕನನ್ನೂ ಕರಗಿಸುವ ಸಾಮರ್ಥ್ಯ ಇರುವುದು ಸಂಗೀತಕ್ಕೆ ಮಾತ್ರ. ರಾಗ ಮತ್ತು ತಾಳ ಕೈ ಕೈ ಜೋಡಿಸಿದರೆ ನಮ್ಮ ಹೃದಯ ಅದರಲ್ಲಿ ತಲ್ಲೀನಗೊಳ್ಳುತ್ತದೆ. ಆದರೆ ಲೌಕಿಕ ವಿಚಾರಗಳಿಗೆ ಸಂಬಂಧಿಸಿದಂತಹ ವಿಚಾರವನ್ನು ಓದುಗರಿಗೆ ತಲುಪಿಸಲು ಗದ್ಯ ಉತ್ತಮ ಸಾಧನ. ಇವೆರಡಕ್ಕು ಸೇರದೆ, ಮಧ್ಯದಲ್ಲಿ ಇರುವ, ನೆಲಬಿಟ್ಟು ಏಳದ, ಅಂದರೆ ಶಾಸ್ತ್ರ ಸಂಬಂಧ ಬಿಡದ, ಬಾನ್‌ ಮುಟ್ಟದ, ಅಂದರೆ ಹೃದಯದ ಭಾವನಾ ಲೋಕಕ್ಕೆ ಏರದ ಪದ್ಯ ರೂಪದಲ್ಲಿ ಈ ಕಗ್ಗದ ರಚನೆಯಾಗಿದೆ. ಈ ಪದ್ಯ ಸಾಧನವನ್ನು, ತನ್ನ ಜೀವನದರ್ಶನವನ್ನು ವಿವರಿಸಲು ಉಪಯೋಗಿಸಿಕೊಂಡಿರುವುದು ಅಧಿಕಪ್ರಸಂಗಿತನವೇನೋ ಎನಿಸುತ್ತದೆ- ತಿಮ್ಮ ಗುರುವಿಗೆ.

    ಕವಿಯಲ್ಲ, ವಿಜ್ಞಾನಿಯಲ್ಲ, ಹರಿ ತಾರಡಿ।
    ಅವನರಿವಿಗೆಟುಕುವವೊಲೊಂದಾತ್ಮನಯವ।।
    ಹವಣಿಸಿದನು ಪಾಮರಜನರ ಮಾತಿನಲಿ।
    ಕವನ ನೆನಪಿಗೆ ಸುಲಭ- ಮಂಕುತಿಮ್ಮ ।। 938।।

    ನಾನೇನು ಕವಿಯಲ್ಲ, ವಿಜ್ಞಾನಿಯಂತೂ ಅಲ್ಲವೇ ಅಲ್ಲ. ಶಾಸ್ತ್ರಗಳನ್ನು ಓದಿದವನಲ್ಲ. ನಾನು ಅದನ್ನೂ, ಇದನ್ನೂ ಓದಿಕೊಂಡವನು. ಜೀವನದಲ್ಲಿ ಸ್ವಲ್ಪವೇ ಅನುಭವಗಳನ್ನು ಪಡೆದುಕೊಂಡವನು. ನನ್ನ ಬುದ್ಧಿಯ ಸಾಮರ್ಥ್ಯದಲ್ಲಿ ಸಿಕ್ಕಿದ ಜ್ಞಾನವನ್ನು ಸಾಮಾನ್ಯ ಜನರಿಗೆ ಸಿಕ್ಕುವ, ಅರ್ಥವಾಗುವ ರೀತಿಯಲ್ಲಿ ಬರೆದಿದ್ದೇನೆ. ಕವನ ನೆನಪಿಗೆ ಸುಲಭ, ಮನನ ಕ್ರಿಯೆಗೆ ಉಪಯುಕ್ತ.

    ಸಂದೇಹವೀ ಕೃತಿಯಾಳಿನ್ನಿಲ್ಲವೆಂಬುದಿಲ್ಲ।
    ಇಂದು ನಂಬಿಹುದೆ ಮುಂದೆಂದುಮೆಂದಲ್ಲ।।
    ಕುಂದು ತೋರ್ದಂದದನು ತಿದ್ದಿಕೊಳೆ ಮನಸುಂಟು।
    ಇಂದಿಗೀ ಮತವುಚಿತ- ಮಂಕುತಿಮ್ಮ ।। 939।।

    ನಾನು ಇಲ್ಲಿ ಹೇಳುವುದೇ ಪರಮ ಸತ್ಯವಲ್ಲ. ಸಂದೇಹ ಬರಬಹುದು. ಇಂದು ನಂಬಿದ್ದು ನಾಳೆ ಸುಳ್ಳಾಗಬಹುದು. ನಾನು ನಿರೂಪಿಸಿರುವ ಜೀವನ ದರ್ಶನದಲ್ಲಿ ಏನಾದರೂ ಕೊರತೆ ಇದ್ದಲ್ಲಿ, ನಾನು ತಿದ್ದಿಕೊಳ್ಳುವೆ. ನನಗೆ ಸರಿಕಂಡ ಈ ಸತ್ಯ ನನಗೆ ಇಂದಿಗೆ ಉಚಿತ ಎಂದು ನನ್ನ ಭಾವನೆ.

    ವ್ಯಾಕರಣ ಕಾವ್ಯ ಲಕ್ಷಣಗಳನು ಗಣಿಸದೆಯೆ ।
    ಲೋಕತಾಪದಿ ಬೆಂದು ತಣಿಪನೆಳಸಿದವಂ ।।
    ಈ ಕಂತೆಯಲಿ ತನ್ನ ನಂಬಿಕೆಯ ನೇಯ್ದಿಹನು ।
    ಸ್ವೀಕರಿಕೆ ಬೇಳಪವರು- ಮಂಕುತಿಮ್ಮ ।। 940।।

    ನಾನು ಇದನ್ನು ಬರೆಯುವಾಗ ವ್ಯಾಕರಣ, ಕಾವ್ಯ, ಛಂದಸ್ಸು, ಲಕ್ಷಣ ಇತ್ಯಾದಿಯನ್ನು ಗಮನಿಸಿಲ್ಲ. ಲೋಕದ ಕಷ್ಟ-ಕಾರ್ಪಣ್ಯದಲ್ಲಿ ಬೆಂದು- ಬಸವಳಿದು ಅದರಿಂದ ಬಿಡುಗಡೆಯನ್ನು ಬಯಸಿದವನಿಗೆ ಒಂದು ಸಮಾಧಾನ ಬೇಕಾದರೆ, ಬಯಸಿ ಬಂದವನಿಗೆ ಈ ಕಂತೆ ಇದೆ. ನನ್ನ ನಂಬಿಕೆಗಳ ನಿರೂಪಣೆ ಇದೆ. ಯಾರಿಗೆ ಬೇಕೋ ಅವರು ಸ್ವೀಕರಿಸಲಿ. ಉಚಿತ ಸಲಹೆ ಇಲ್ಲಿ ಇಲ್ಲ. ಇದು ಮಕ್ಕಳಿಗಾಗಿ ಬರೆದಿಲ್ಲ.

    ಮಂಕುತಿಮ್ಮನ ಹೆಸರು ಬಿಂಕಕ್ಕೆ ಸಾಲದೆನೆ।
    ವೆಂಕನಿಗೊ ಕಂಕನಿಗೊ ಶಂಕರರಾರ್ಯನಿಗೊ।।
    ಅಂಕಿತವ ಮಾಳ್ಕೆ ಜನರವರೋದಿದರೆ ಸಾಕು।
    ಶಂಕೆ ನಿನಗೇನಿಹುದೋ- ಮಂಕುತಿಮ್ಮ ।। 941।।

    ಜೀವನಧರ್ಮವನ್ನು ನಿರೂಪಿಸುವ ಈ ಕಥೆಯನ್ನು ಬರೆದವನು ಒಬ್ಬ ಮಂಕುತಿಮ್ಮ ಎಂದರೆ... ಯಾರು ಓದುತ್ತಾರೆ. ಯಾವುದೋ ಒಂದು ದೊಡ್ಡ ಹೆಸರನ್ನು ಇಡಬಾರದೆ? ವೆಂಕಟರಮಣ, ಧರ್ಮರಾಯ ಅಥವಾ ಶಂಕರಾಚಾರ್ಯ ಹಾಗೂ ಇತರರ ಹೆಸರಿಂದ ಈ ರಚನೆಯನ್ನು ಗುರುತಿಸದೆ ಜನರು ಓದಿದರೆ ಸಾಕು. ಇದರಲ್ಲಿ ನಿನಗೆ ಅನುಮಾನವಿದೆಯೆ? ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಾರೆ.

    ಡಿವಿಜಿಯವರ ಇತರ ಕೃತಿಗಳನ್ನು ಓದಿದರೆ ಮಂಕುತಿಮ್ಮ ಅರ್ಥವಾದಾನು

    BGL Swamy with his father DVGಕಗ್ಗದ ಹಲವು ಪದ್ಯಗಳು ಮೇಲ್ನೋಟಕ್ಕೆ ಕೆಲವು ಕಡೆ ಹೊಂದಿಕೊಂಡಿಲ್ಲ ಎಂದು ಕೆಲವರಿಗೆ ಅನಿಸಬಹುದು. ಕಾರಣ ಇದು ಒಂದೇ ಬಾರಿಗೆ ಕುಳಿತು ಬರೆದಿದ್ದಲ್ಲ. ಆದರೆ ಅವರ ಮನಸ್ಸಿನಲ್ಲಿದ್ದ ತತ್ವ ಒಂದೆ. ಇದನ್ನು ಪ್ರತಿ ಪದದ ಅರ್ಥ ತಿಳಿದುಕೊಂಡು ಅಭ್ಯಾಸ ಮಾಡಬಹುದು ಅಥವಾ ಡಿ.ವಿ.ಜಿಯವರ ಇತರ ಗ್ರಂಥಗಳಾದ ‘ಶ್ರೀಮದ್ಭಗವದ್ಗೀತಾ ತಾತ್ಪರ್ಯ’, ‘ಜೀವನ ಸೌಂದರ್ಯ ಮತ್ತು ಸಾಹಿತ್ಯ’, ‘ಸಂಸ್ಕೃತಿ’, ‘ದೇವರು’, ‘ಋತು ಸತ್ಯ ಧರ್ಮ’, ‘ರಾಜ್ಯ ಶಾಸ್ತ್ರ’, ‘ಉಮರನ ಒಸಗೆ’ ಮುಂತಾದವುಗಳನ್ನು ಅಭ್ಯಾಸ ಮಾಡಿ, ಮಂಕುತಿಮ್ಮನ ಕಗ್ಗದ ಅರ್ಥ ತಿಳಿದುಕೊಳ್ಳಬಹುದು.

    ಡಿ.ವಿ.ಜಿಯವರು ಓದದ ವೇದಾಂತವಿಲ್ಲ. ಒಂದು ವಿಶೇಷವೆಂದರೆ ತಾವು ಓದಿದ ವೇದ, ಉಪನಿಷತ್ತು ಹಾಗೂ ಪಾಶ್ಚಾತ್ಯ ತತ್ವ ದರ್ಶನವನ್ನು ಪ್ರಾಪಂಚಿಕ, ದಿನ ನಿತ್ಯದ ಆಗು ಹೋಗುಗಳಿಗೆ ಹೋಲಿಸಿ, ತಮ್ಮ ಮೇಲೆ ಪ್ರಯೋಗಿಸಿ ಒಂದು ಸಿದ್ಧಾಂತಕ್ಕೆ ಬಂದಿದ್ದರು. ಮಂಕುತಿಮ್ಮನ ಕಗ್ಗದಲ್ಲಿ ಪ್ರತಿಪಾದಿಸಿರುವ ತತ್ವ, ನೀತಿ, ವೇದಾಂತ ಹಾಗೂ ಮೌಲ್ಯಗಳು ಅವರ ಈ ಸಿದ್ಧಾಂತಗಳು. ಏನು ಈ ಸಿದ್ಧಾಂತ?

    ಗೌರವಿಸು ಜೀವನವ, ಗೌರವಿಸು ಚೇತನವ।
    ಆರದೋ ಜಗವೆಂದು ಭೇದವೆಣಿಸದಿರು।।
    ಹೋರುವುದೆ ಜೀವನಸಮೃದ್ಧಿಗೋಸುಗ ನಿನಗೆ।
    ದಾರಿಯಾತ್ಮೋನ್ನತಿಗೆ- ಮಂಕುತಿಮ್ಮ ।। 475 ।।

    ಹೊರ ಜಗತ್ತಿನ ಆಕರ್ಷಣೆಯನ್ನು ಸವಿಯುವುದಕ್ಕಾಗಿ ನಮ್ಮ ಅಂತರಾತ್ಮ ಸದಾ ಉತ್ಸುಕವಾಗಿರುತ್ತದೆ. ದಶ ದಿಕ್ಕುಗಳಿಗೂ ಕೈ ಚಾಚುತ್ತಿರುತ್ತದೆ. ಇದು ನಮ್ಮ ಜೀವನ. ಇದನ್ನು ‘ಹೊಟ್ಟೆ ಹೊರೆದುಕೊಳ್ಳುವುದು’, ‘ಕರ್ಮ’, ‘ಕರ್ಮ ಸವೆಸಿಕೊಳ್ಳುವುದು’, ’ಏನೋ ಬದುಕಬೇಕಲ್ಲ ಸಾರ್‌‘ ಇತ್ಯಾದಿ ಹೀಯಾಳಿಸಿ ಜೀವನವನ್ನು ಕೀಳಾಗಿ ನೋಡಬಹುದು. ಆದರೆ ಇದು ನಿಜಕ್ಕೂ ನಮಗೆ ಸಿಕ್ಕಿರುವ ಪುಣ್ಯ ಎಂದು ಭಾವಿಸಿ, ವಿಶ್ವ ವೈಭವದಲ್ಲಿ ಪಾಲುಗಾರಿಕೆಯಂತಹ ಮಹೋದ್ದೇಶಕ್ಕಾಗಿ ಅವಕಾಶ ಮಾಡಿಕೊಟ್ಟಿರುವ ಜೀವನವನ್ನು ಗೌರವಿಸಬೇಕು. ಈ ಕೆಲಸವನ್ನು ಆಗ ಮಾಡಿಸುವ ಚೈತನ್ಯವನ್ನು ಗೌರವಿಸಬೇಕು. ಜೀವನ ಆತ್ಮ ವಿಸ್ತರಣಾಭ್ಯಾಸಕ್ಕೆ ಇರುವ ಸಾಧನ. ಆದ್ದರಿಂದ ಈ ಜಗತ್ತು ಬೇರೆ ಯಾರದೋ, ಇದರಲ್ಲಿ ನನಗೆ ಸಂಬಂಧವಿಲ್ಲ, ನಾನು ಬೇರೆ, ಅದು ಬೇರೆ ಎಂದು ಭೇದವೆಣಿಸದೆ, ಗುರಿ ಸಾಧನೆಗಾಗಿ ಹೋರಾಡು. ಈ ಹೋರಾಟ ನಮ್ಮ ಆತ್ಮೋನ್ನತಿಗೆ ದಾರಿ. ಇದು ನಮ್ಮ ಕರ್ತವ್ಯ ಸಹ.

    ಚೇತನ- ಚೈತನ್ಯದ ಬಗ್ಗೆ ಒಂದು ಮಾತು. ಪ್ರತ್ಯಕ್ಷವಾಗಿ ಕಾಣದಿರುವ ವಿಷಯದಲ್ಲಿ ಸಂದೇಹ ಸಹಜ. ಡಿ.ವಿ.ಜಿಯವರು ತಮ್ಮ ಮೊದಲ ಮೂರು ಪದ್ಯದಲ್ಲಿ ಇದನ್ನು ವಿಸ್ತಾರವಾಗಿ ಹೇಳಿದ್ದಾರೆ.

    ಆವುದನು ಕಾಣದೊಡಮಳ್ತಿಯಿಂ ನಂಬಿಹುದೋ।
    ಆ ವಿಚಿತ್ರಕೆ ನಮಿಸೋ- ಮಂಕುತಿಮ್ಮ ।। 1 ।।

    ಯಾವುದು ಕಾಣದಿದ್ದರೂ ಜನ ಅದನ್ನು ಪರಬ್ರಹ್ಮ, ದೇವರು, ಚೈತನ್ಯ ಂದು ನಂಬಿಕೊಂಡಿದ್ದಾರೋ ಆ ಆಶ್ಚರ್ಯಕರವಾದ, ಅನೇಕ ವಿಧವಾಗಿ ಕಾಣುತ್ತಿರುವ ಆ ವಿಚಿತ್ರಕೆ ನಮಸ್ಕರಿಸು.


    ಮುಖಪುಟ / ಸಾಹಿತ್ಯ ಸೊಗಡು

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more