ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 4ರಂದು ಅಮೆರಿಕಾದಲ್ಲಿ ಸ್ವಾತಂತ್ರ್ಯ ಹಬ್ಬ

By ಎಸ್‌.ಕೆ. ಹರಿಹರೇಶ್ವರ
|
Google Oneindia Kannada News

ಜಗತ್ತಿನ ಎಲ್ಲ ರಾಷ್ಟ್ರಗಳೂ ತಮ್ಮ ತಮ್ಮ ದೇಶದ, ಚಾರಿತ್ರಿಕ ಸಾಂಸ್ಕೃತಿಕ ಧಾರ್ಮಿಕ ಮಹತ್ವದ, ಕೆಲವು ಮುಖ್ಯ ಘಟನೆಗಳು ಸಂಭವಿಸಿದ ದಿನಗಳನ್ನು ನೆನಪಿಸಿಕೊಳ್ಳಲು, ಆ ದಿನವನ್ನು ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಪ್ರತಿವರ್ಷ ಆಚರಿಸುವುದು ಸಾಮಾನ್ಯ. ದೇಶದ ಕಾಲರೇಖೆಯಲ್ಲಿ ಈ ಮಹತ್ವದ ಮೈಲಿಗಲ್ಲಿಗೆ ಕಾರಣರಾದವರನ್ನು ಶ್ರದ್ಧೆಯಿಂದ ಸ್ಮರಿಸಿ, ಅವರಿಗೆ ಗೌರವ ಸಮರ್ಪಣೆ ಮಾಡುವುದಕ್ಕೂ ಈ ದಿನ ಮೀಸಲು.

ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಜ್ಯಗಳ ಒಕ್ಕೂಟವೂ ಸಹ ತಾನು ಸ್ವಾತಂತ್ರ್ಯ ಘೋಷಣೆಯ ಕಹಳೆಯನ್ನು ಮೊತ್ತ ಮೊದಲಿಗೆ ಊದಿದ ಜುಲೈ ನಾಲ್ಕನೆಯ ದಿನಾಂಕವನ್ನು 'ರಾಷ್ಟ್ರೀಯ ಸ್ವಾತಂತ್ರ್ಯ ದಿನ" ವನ್ನಾಗಿ ಆಚರಿಸುವುದು ಈ ಕಾರಣಕ್ಕೇ.

ಈ ಜುಲೈ ನಾಲ್ಕು ಅಮೆರಿಕಾ ದೇಶದ ಚರಿತ್ರೆಗೆ ಸಂಬಂಧ ಪಟ್ಟಿದುದರಿಂದ, ವಿವರ ತಿಳಿದುಕೊಳ್ಳಲು, ಚರಿತ್ರೆಯ ಕಾಲಯಂತ್ರದಲ್ಲಿ ಸ್ವಲ್ಪ ವೇಳೆ ಕುಳಿತು, ಹಿಮ್ಮುಖವಾಗಿ ಪ್ರಯಾಣಮಾಡೋಣ!

ಮೊಟ್ಟ ಮೊದಲು ಈ 'ಸ್ವಾತಂತ್ರ್ಯ ಘೋಷಣೆ"ಯ ಠರಾವು ಅನುಮೋದಿತವಾದದ್ದು ಜುಲೈ 4, 1776 ರಲ್ಲಿ. ಅಮೆರಿಕಾದಲ್ಲಿದ್ದ ವಸಾಹತುದಾರರು ತಮ್ಮನ್ನು ಆಳುತ್ತಿದ್ದ ಬ್ರಿಟೀಷರ ದೊರೆ ಮೂರನೇ ಜಾರ್ಜ್‌ಗೆ ನಿಷ್ಠೆಯನ್ನು ತೊರೆದು, ಆಗವರು ರೂಪಿಸಿಕೊಂಡಿದ್ದ 'ಕಾಂಟಿನೆಂಟಲ್‌ ಕಾಂಗ್ರೆಸ್‌" ಸಮಾವೇಶದಲ್ಲಿ , ಪೆನ್ಸಿಲ್ವೇನಿಯಾ ರಾಜ್ಯದ ಫಿಲಡೆಲ್ಫಿಯಾ ನಗರದಲ್ಲಿ ಈ ಸ್ವಾತಂತ್ರ್ಯ ಘೋಷಣೆಯನ್ನು ಮಾಡಿದರು. ಅಲ್ಲಿಯವರೆಗೆ ಇದ್ದ ಹದಿಮೂರು ಬ್ರಿಟಿಷ್‌ ಕಾಲೊನಿಗಳು ಕೊನೆಗೊಂಡು, ಆ ಜುಲೈ 4, 1776 ರಂದು ಅಮೆರಿಕಾ ಸಂಯುಕ್ತ ರಾಜ್ಯಗಳ ಒಕ್ಕೂಟ ಅಸ್ತಿತ್ವಕ್ಕೆ ಬಂತು!

USA : July 4th is Independence day

ವಸಾಹತುಶಾಹಿಗೆ ನಾಂದಿ ಹಾಡಿದ ಸಾಹಸಿ ನಾವಿಕರು
ಒಂದು ಸಂಶೋಧನೆಯ ಪ್ರಕಾರ ಅಕ್ಟೋಬರ್‌ 12, 1492 ರಂದು ಕ್ರಿಸ್ಟಾಫರ್‌ ಕೊಲಂಬಸ್‌ ಮತ್ತು ಅವನ ಸಂಗಡಿಗರು ಅಮೆರಿಕಾವನ್ನು ಕಂಡದ್ದು ! (ಈಗಿನ ಬಹಾಮಾ ಪ್ರದೇಶವನ್ನೇ ಅಂತೆ, ಮೊಟ್ಟ ಮೊದಲು ಅವರು ದರ್ಶನ ಮಾಡಿದ್ದು !) ಕೆಲವೇ ವರ್ಷಗಳಲ್ಲಿ ಹಲವಾರು ದೇಶಗಳಿಂದ ಸಾಹಸಿಗಳು ಸಹಸ್ರಾರು ಮೈಲಿ ಸಮುದ್ರಯಾನ ಮಾಡಿ, ಕೇಳಿದ, ಆದರೆ ಹಿಂದೆ ಕಾಣದ ಈ ಹೊಸ ನೆಲಕ್ಕೆ ಬಂದಿಳಿಯತೊಡಗಿದರು. ಅಲ್ಲಿಂದ ಪ್ರಾರಂಭವಾಯ್ತು ವಲಸೆ ಬಂದು ವಸಾಹತು ಹೂಡುವವರ ದಂಡು. 1620 ರ ವೇಳೆಗೆ, ಅಂಥವರಲ್ಲಿ ಎಲ್ಲರಿಗಿಂತ ಮೇಲ್ಗೈ ಆದದ್ದು ಬ್ರಿಟೀಷರದು! ಇಂಗ್ಲೆಂಡಿನ 'ಪ್ಲೆ ಮೂತ್‌" ನಗರದಿಂದ 'ಪ್ಲೆ ಮೂತ್‌ ಯಾತ್ರಿಕರು" ಎಂದೀಗ ನಾವು ಹೆಸರಿಸುವ 'ಚರ್ಚ್‌ ಆಫ್‌ ಇಂಗ್ಲೆಂಡ್‌"ನ್ನು ವಿರೋಧಿಸುವ ಜನರು, 'ಮೇ ಫ್ಲವರ್‌" ಎಂಬ ಜಹಜಿನಲ್ಲಿ ವರ್ಜಿನಿಯಾಕ್ಕೆಂದು ಹೊರಟದ್ದು ಸೆಪ್ಟಂಬರ್‌ 15, 1620; ಕೇಪ್‌ ಕಾಡ್‌ನ್ನು ತಲುಪಿದ್ದು ನವಂಬರ್‌ 19 ರಂದು. ಹೀಗೇ ಮುಂದುವರಿದು, ಯುರೋಪಿನವರು, ಹೆಚ್ಚಾಗಿ ಬ್ರಿಟೀಷರು ಬಂದು, ಕಾಲನಿಗಳು ಹುಟ್ಟಿಕೊಂಡವು; ವಸಾಹತುಗಳನ್ನು ನಿರ್ಮಿಸಿಕೊಂಡವರು ಎಲ್ಲೋ ದೂರದಲ್ಲಿದ್ದುಕೊಂಡು ಇಲ್ಲಿರುವವರನ್ನು ಆಳುವ ಮನೋಭಾವವನ್ನು ಸ್ಥಳೀಯರು ವಿರೋಧಿಸತೊಡಗಿದರು, ಸ್ವಾತಂತ್ರ್ಯಕ್ಕಾಗಿ ಹೋರಾಡತೊಡಗಿದರು.

1770 ರ ವೇಳೆಗೆ ಬ್ರಿಟನ್‌ ಮತ್ತು ಅದರ ಅಮೆರಿಕಾ ವಸಾಹತುಗಳ ನಂಟು ಹದಗೆಡುತ್ತಾ ಬಂತು. 1774 ರಲ್ಲಿ ವಸಾಹತುದಾರರ ಪ್ರತಿಭಟನೆ ಒಂದು ನಿರ್ದಿಷ್ಟರೂಪಕ್ಕೆ ಬಂದು, ಆಳುತ್ತಿದ್ದ ಬ್ರಿಟೀಷ್‌ ಸರ್ಕಾರದ ವಿರುದ್ಧ ಕ್ರಾಂತಿಯ ಸಮರ ಘೋಷಿತವಾಯಿತು. ಹನ್ನೆರಡು ಕಾಲನಿಗಳು ಒಂದುಗೂಡಿ, ಬೃಹತ್‌ ಸೈನ್ಯದ ತುಕಡಿಯಾಂದನ್ನೂ ರಚಿಸಿಕೊಂಡವು. ಯುದ್ಧ ಆರಂಭವಾಯಿತು. ದೀರ್ಘಕಾಲದ ಯುದ್ಧ , ತ್ಯಾಗ, ಕಷ್ಟನಷ್ಟಗಳಿಗೆ ಎದೆಗುಂದದೆ ಮುನ್ನಡೆದ ಸರಿನಡೆ- ಇವೆಲ್ಲವೂ, ಜೊತೆಗೆ ರಾಜನೀತಿಯ ಚಾಣಾಕ್ಷ್ಯಮತಿಗಳ ದೂರದರ್ಶಿತ್ವ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಅನುವಾಯಿತು. [ಅಮೆರಿಕ ನೀ ತಿಳಿಯೋ ಮನುಜ]

ಅಮೆರಿಕಾ ಸ್ವಾತಂತ್ರ್ಯ ಹಬ್ಬ (ಮುಂದುವರಿದ ಭಾಗ) »

English summary
An article by S.K. Harihareshwara on the occasion of US Independence Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X