ಅಮೆರಿಕಾ ಸ್ವಾತಂತ್ರ್ಯ ಹಬ್ಬ (ಮುಂದುವರಿದ ಭಾಗ)
ಜೂನ್ 7, 1776 :
ಫಿಲಡೆಲ್ಫಿಯಾ ನಗರದ 'ರಾಜ್ಯಭವನ". ಎರಡನೆಯ 'ಕಾಂಟಿನೆಂಟಲ್ ಕಾಂಗ್ರೆಸ್" ಸಮಾವೇಶದಲ್ಲಿ ಎಲ್ಲ ವಸಾಹತುಗಳ ಪ್ರತಿನಿಧಿಗಳೂ ಭಾಗವಹಿಸಿದ್ದಾರೆ. ರಾಜ್ಯಭವನದ ಗೋಪುರದ ಘಂಟೆಯ ಮೇಲೆ 'ನಾಡಿನಾದ್ಯಂತ ಎಲ್ಲರಿಗೂ ಸ್ವಾತಂತ್ರ್ಯ" ಎಂಬ ಒಕ್ಕಣೆಯನ್ನು ಕೆತ್ತಿದ್ದಾರೆ. ಇದೀಗ 'ಸ್ವಾತಂತ್ರ್ಯದ ಘಂಟೆ"!
ಮುಂಬಾಗಿಲ ಮೇಲೆ ದೊರೆಯ ಲಾಂಛನವೇನೋ ಇದೆ; ಇರಲಿ, ಅದು ಇನ್ನೂ ದೊರೆಯಾಂದಿಗೆ ಸಂಧಾನ ಮಾಡಿಕೊಳ್ಳಬಹುದೇನೋ ಎನ್ನುವ ಮಿತವಾದಿಗಳ ಮನಸ್ಸಮಾಧಾನಕ್ಕೆ, ಅಷ್ಟೆ . ವರ್ಜೀನಿಯಾದ ಪ್ರತಿನಿಧಿ ರಿಚರ್ಡ್ ಹೆನ್ರಿ ಲೀ ಒಂದು ಮಸೂದೆ ಮಂಡಿಸುತ್ತಿದ್ದಾನೆ: 'ಈ ಸಂಯುಕ್ತ ವಸಾಹತುಗಳು ಸ್ವತಂತ್ರವಾಗಿರಲು ಹಕ್ಕುಳ್ಳವು, ಸ್ವತಂತ್ರವಾಗ ಬಲ್ಲವು ಮತ್ತು ಈಗ ಸ್ವತಂತ್ರವಾಗಿವೆ!" ಜುಲೈ 2, ಮಸೂದೆ ಅಂಗೀಕೃತವಾಯಿತು.

ಜುಲೈ 4, 1776 :
ಪ್ರಧಾನ ಅಧಿವೇಶನ (ಜನರಲ್ ಕಾಂಗ್ರೆಸ್)ಸಮಾವೇಶಗೊಂಡಿದೆ. ಜಾನ್ ಹ್ಯಾನ್‌ಕಾಕ್ ಎಂಬುವನು ಅಧ್ಯಕ್ಷಪೀಠದಲ್ಲಿದ್ದಾನೆ. ಕಾರ್ಯದರ್ಶಿಯಾಗಿ ಚಾರ್ಲ್‌ಸ್ ಥಾಮಸ್ ಸಭೆ ನಡೆಸುತ್ತಿದ್ದಾನೆ. ಜಾನ್ ಆಡಮ್ಸ್, ಬೆಂಜಮಿನ್ ಫ್ರಾಂಕ್ಲಿನ್, ರಾಬರ್ಟ್ ಲಿವಿಂಗ್‌ಸ್ಟನ್ ಮತ್ತು ಥಾಮಸ್ ಜೆಪರ್‌ಸನ್- ಇವರುಗಳು ರಚಿಸಿದ 'ಸ್ವಾತಂತ್ರ್ಯ ಘೋಷಣೆ"ಯ ಠರಾವು ಇದೋ ಅನುಮೋದಿತವಾಯಿತು; ಎದ್ದು ನಿಲ್ಲಿ ಎಲ್ಲರೂ; ಹೊಡೆಯಿರಿ ಕೈ ಚಪ್ಪಾಳೆ!
'ಮನುಕುಲದ ಘಟನೆಗಳ ಹೆದ್ದಾರಿಯಲ್ಲಿ ನಡೆವಾಗ, ಇನ್ನೊಬ್ಬರೊಂದಿಗೆ ಜೊತೆಗೂಡಿಸಿರುವ ತಮ್ಮ ರಾಜಕೀಯ ಬೆಸುಗೆಗಳನ್ನು ತೊಡೆದುಹಾಕುವ ಸಂದರ್ಭಗಳು ಕೆಲವೊಮ್ಮೆ ತಲೆದೋರಿ, ಜನಗಳಿಗೆ ಈ ಬಿಡುಗಡೆ ಅಗತ್ಯವಾಗುತ್ತದೆ. .. .. " - ಎಂದು ಪ್ರಾರಂಭವಾಯಿತು ಸ್ವಾತಂತ್ರ್ಯ ಘೋಷಣೆ. ಅದು ಮುಂದುವರಿದು, .. .. 'ಈ ಮುಂದೆ ಹೇಳುವ ಸತ್ಯಗಳು ಸ್ವಯಂಸಿದ್ಧವೆಂದು ನಾವು ಪರಿಗಣಿಸುತ್ತೇವೆ : ಹುಟ್ಟಿದ ಎಲ್ಲಾ ಜನರು ಸಮಾನರು; ಸೃಷ್ಟಿಕರ್ತನು ಅನುಗ್ರಹಿಸಿದ, ಯಾರೂ ದೋಚಲಾಗದ ಕೆಲವು ಹಕ್ಕುಗಳನ್ನು ಎಲ್ಲ ಜನ ಪಡೆದಿದ್ದಾರೆ; ಈ ಹಕ್ಕುಗಳಲ್ಲಿ ಇವು ಸೇರಿವೆ: ಜೀವನ, ಸ್ವಾತಂತ್ರ್ಯ ಮತ್ತು ಸುಖ ಹುಡುಕಿ ಸಾಗುವ ಪ್ರವೃತ್ತಿ . ಈ ಹಕ್ಕುಗಳನ್ನು ಸುರಕ್ಷಿತವಾಗಿರಿಸಿಕೊಳ್ಳಲು ಜನರ ಸರ್ಕಾರಗಳು ರಚಿತವಾಗುತ್ತವೆ; ಯಾರನ್ನು ಆಳುತ್ತಾರೋ ಅವರ ಒಪ್ಪಿಗೆಯೇ ಆಳುವವರಿಗೆ ದೊರಕುವ ಅಧಿಕಾರದ ಶಕ್ತಿ. .... " ಎನ್ನುತ್ತಾ, ಕೊನೆಗೆ '.. .. ಇಲ್ಲಿ ಬಂದು ಈ ಅಧಿವೇಶನದಲ್ಲಿ ಸೇರಿದ ಅಮೆರಿಕಾದ ಸಂಯುಕ್ತ ಸಂಸ್ಥಾನದ ಪ್ರತಿನಿಧಿಗಳಾದ ನಾವು, .... ವಸಾಹತುಗಳ ಎಲ್ಲಾ ಒಳ್ಳೆಯ ಜನರ ಹೆಸರಿನಲ್ಲಿ ಮತ್ತು ಅವರ ಅಧಿಕಾರದ ಮೇರೆಗೆ, ವಿಧಿಪೂರ್ವಕವಾಗಿ ಘೋಷಿಸುತ್ತಿದ್ದೇವೆ: ಈ ಸಂಯುಕ್ತ ವಸಾಹತುಗಳು ಸ್ವತಂತ್ರವಾಗಿರಲು ಹಕ್ಕುಳ್ಳವು; ಸ್ವತಂತ್ರವಾಗಬಲ್ಲವು ಮತ್ತು ಈಗ ಸ್ವತಂತ್ರ ರಾಜ್ಯಗಳಾಗಿವೆ!.. .."

ಸ್ವಾತಂತ್ರ್ಯ ದಿನವೆಂದರೆ ಸಂಕೋಲೆ ಕಳಚಿದ ದಿನ ಅರ್ಥಾತ್ ಬೆಳಕಿನ ಹಬ್ಬ
ಈ ಘೋಷಣೆಯ ಪ್ರತಿಧ್ವನಿ ಜಗತ್ತಿನ ಎಲ್ಲೆಡೆ ಅನುರಣನವಾಯಿತು. ಅಂದಿನಿಂದ ಇಂದಿನವರೆಗೂ, ಕಟ್ಟಿದ ಸಂಕೋಲೆಗಳಿಂದ ಕಳಚಿಕೊಳ್ಳಲು ಬಿಡಿಸಿಕೊಳ್ಳಲು ತಡಕಾಡುವ ಎಲ್ಲ ದಾಸ್ಯ ರಾಷ್ಟ್ರಗಳ ಪ್ರಜೆಗಳಿಗೂ ಈ ಸ್ವಾತಂತ್ರ್ಯ ಘೋಷಣೆ ಬಿಡುಗಡೆಯ ಮಾರ್ಗದರ್ಶಕ ತಾರಕ ಮಂತ್ರವಾಯಿತು.
ಜುಲೈ 4 ಅಮೆರಿಕಾದ ರಾಜ್ಯಗಳ ಒಕ್ಕೂಟ ರಾಷ್ಟ್ರಕ್ಕೆ ಒಂದು ಮಹತ್ವದ ದಿನ. ಅನಿವಾರ್ಯ ಕೆಲಸಗಾರರನ್ನು ಉಳಿದು, ಎಲ್ಲಾ ಖಾಸಗೀ ಮತ್ತು ಸರ್ಕಾರೀ ಸಂಸ್ಥೆಗಳಿಗೂ ಜುಲೈ 4 ಬಿಡುವಿನ ದಿನ. ರಾಷ್ಟ್ರಾದ್ಯಂತ ಕೋಟ್ಯಾಂತರ ಜನ ಸಡಗರದಿಂದ ಈ ದಿನವನ್ನು ಆಚರಿಸುತ್ತಾರೆ. ಎಲ್ಲಾ ನಗರಗಳಲ್ಲೂ ಉದ್ಯಾನ ವಿಹಾರ, ಸಂತೋಷಕೂಟ, ಸಂಗೀತ, ಸಾಹಿತ್ಯ, ನೃತ್ಯ, ಕಲೆಯ ವಿವಿಧ ರೀತಿಯ ಪ್ರದರ್ಶನಗಳೊಂದಿಗೆ, (ಭಾರತದಲ್ಲಿನ ದೀಪಾವಳಿಯಂತೆ) ಸಂಜೆಯ ವೇಳೆ ಆಕಾಶದ ತುಂಬಾ ಪಟಾಕಿ, ಸಿಡಿಮದ್ದು, ಬಾಣ ಬಿರುಸುಗಳ ಸುರಿಮಳೆ ನಡೆಸುತ್ತಾರೆ.
ಎಂದೋ ಬಂದವರ ಮಕ್ಕಳಿಗಾಗಿ, ಇಲ್ಲೇ ಹುಟ್ಟಿ ಬೆಳೆದ ಪ್ರಜೆಗಳು ತಾನಾಗಿ ತಮಗೆ ಸಿಕ್ಕ ಈ ನಿರಾವಲಂಬನೆಯ ಸವಿಯನ್ನು ಚಪ್ಪರಿಸುವುದು ಒಂದು ಬಗೆ; ಹಲವು ಬಣ್ಣದ, ಛಾಯೆಯ ದಾಸ್ಯಕ್ಕೆ ತುತ್ತಾಗಿ ಇತ್ತ ಬಂದ ಶೋಷಿತರಿಗೆ, ನಿರಾಶ್ರಿತರಿಗೆ, ಅವಕಾಶಗಳನ್ನು ಅರಸಿ ಬಂದ ವಲಸೆಗಾರರಿಗೆ ಹಾಯಾಗಿ ಉಸಿರಾಡಲು ಸಿಕ್ಕಿರುವ ಸ್ವಾತಂತ್ರ್ಯದ ಈ ಗಾಳಿಯಲ್ಲಿ ಇಂದೇನೋ ವಿಶೇಷ ಪರಿಮಳ ಸೂಸುತ್ತಿರುವುದು ಇನ್ನೊಂದು ಬಗೆ!












Click it and Unblock the Notifications