ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಟಾಕ್‌ಟನ್‌ನಲ್ಲಿ ಸರ್ವಧರ್ಮ ಶಿಕ್ಷಣ

By Staff
|
Google Oneindia Kannada News

*ಎಸ್‌.ಕೆ.ಹರಿಹರೇಶ್ವರ

ಉತ್ತರ ಕ್ಯಾಲಿಫೋರ್ನಿಯಾದ ಸ್ಟಾಕ್‌ಟನ್‌ನಲ್ಲಿ ‘ಸ್ಟಾಕ್‌ಟನ್‌ ಮೆಟ್ರೋ ಮಿನಿಸ್ಟ್ರಿ’ ಎಂಬ ಸಂಸ್ಥೆಯಾಂದಿದೆ. ಇಲ್ಲಿನ ವಿವಿಧ ಧರ್ಮೀಯರನ್ನು ಒಂದುಗೂಡಿಸುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಹತ್ತು ವರ್ಷಕ್ಕೂ ಹೆಚ್ಚು ಕಾಲ ಸುತ್ತ ಮುತ್ತಣ ಪ್ರದೇಶದ ಜನರೆಲ್ಲರ ಅಭಿನಂದನೆಗೆ ಅದು ಪಾತ್ರವಾಗಿದೆ.

ಪ್ರತಿ ವರ್ಷವೂ ಅಮೆರಿಕಾದ ಕೆಲವು ಮುಖ್ಯ ರಾಷ್ಟ್ರೀಯ ಹಬ್ಬ- ದಿನಾಚರಣೆಗಳ ಸಂದರ್ಭದಲ್ಲಿ, ಉದಾಹರಣೆಗೆ ‘ವಂದನಾರ್ಪಣೆಯ ದಿನ’ (ಥ್ಯಾಂಕ್ಸ್‌ ಗಿವಿಂಗ್‌ ಡೇ), ‘ಸಂಸ್ಮರಣ ದಿನ’ (ಮೆಮೊರಿಯಲ್‌ ಡೇ) ಇತ್ಯಾದಿ ದಿನಗಳಲ್ಲಿ ಸಮಾವೇಶಗಳನ್ನು ನಡೆಸುತ್ತಾರೆ; ಹಿಂದೂಗಳು, ಇಸ್ಲಾಮೀಯರು, ಬೌದ್ಧರು, ಜೈನರು, ಸಿಖ್ಖರು, ಯಹೂದಿಗಳು, ಕ್ರಿಶ್ಚಿಯನ್ನರು, ಬಹಾಯಿಗಳು- ಹೀಗೆ, ಇಲ್ಲಿ ಇರುವ ಬೇರೆ ಬೇರೆ ಧರ್ಮಾವಲಂಬಿಗಳ ಪ್ರತಿನಿಧಿಗಳನ್ನು ಆಹ್ವಾನಿಸುತ್ತಾರೆ; ಆ ದಿನಕ್ಕೆ ಸಂಬಂಧಿಸಿದ ಒಂದು ಮೂಲ ಉದ್ದೇಶವನ್ನು ಗುರಿಯಾಗಿ ಇಟ್ಟು ಕೊಳ್ಳುತ್ತಾರೆ (ಉದಾಹರಣೆಗೆ, ವಂದನಾರ್ಪಣೆಯ ದಿನ ನಾನು ಉಪಕಾರ ಮಾಡಿದವರಿಗೂ ದೇವರಿಗೂ ಕೃತಜ್ಞತೆಯನ್ನು ಅರ್ಪಿಸುವುದು).

ಹಲವು ಜನಾಂಗಗಳಲ್ಲಿ ನಾವೆಲ್ಲ ತಮ್ಮ ತಮ್ಮ ಮತ, ಪದ್ಧತಿಗನುಸಾರವಾಗಿ ಈ ರೀತಿಯ ಉದ್ದೇಶದ ಹಬ್ಬವನ್ನು, ಧಾರ್ಮಿಕ ಚಟುವಟಿಕೆಯನ್ನು ಹೇಗೆ ಆಚರಿಸುತ್ತೇವೆ- ಎಂಬುದನ್ನು ಮಾತು, ಹಾಡು, ಮಂತ್ರ, ಆರಾಧನೆ ಇವುಗಳಿಂದ ಕೂಡಿದ ಒಂದು ಪ್ರಾತ್ಯಕ್ಷಿಕೆಯಾಗಿ ಸಭಿಕರೆದುರು ತೋರಿಸಲು ಕೇಳಿಕೊಳ್ಳುತ್ತಾರೆ. ಕೆಲವೊಮ್ಮೆ ವಿಚಾರ ಗೋಷ್ಠಿಗಳನ್ನು ನಡೆಸುತ್ತಾರೆ; ಈ ಸಂಕಿರಣಗಳಲ್ಲಿ ವಿವಿಧ ಧರ್ಮಗಳ ಪ್ರತಿನಿಧಿಗಳು ನಿರ್ದಿಷ್ಟ ವಿಷಯದ ಬಗ್ಗೆ (ಉದಾಹರಣೆಗೆ : ‘ನಮ್ಮ ಧರ್ಮದಲ್ಲಿ ಶಾಂತಿಯ ಪರಿಕಲ್ಪನೆ’) ಮಾತನಾಡಿ, ಸದ್ಯದ ಪರಿಸ್ಥಿತಿಗೆ ಈ ನಿಲುವಿನಿಂದ ಏನು ಪ್ರಯೋಜನ? ಎಂಬುದರ ಬಗ್ಗೆ ಸಭಿಕರೊಂದಿಗೆ ಮುಕ್ತ ಚರ್ಚೆ ನಡೆಸುತ್ತಾರೆ.

ಜಗಳ, ಹಿಂಸೆ, ಕ್ರೌರ್ಯ, ಸುಲಿಗೆ, ಕಳ್ಳತನ, ದರೋಡೆ, ಅಪಹರಣ, ಮಾನಭಂಗ, ಕೊಲೆ ಇತ್ಯಾದಿಗಳು ಕರಾಳ ನೃತ್ಯವಾಡುವ ಕೆಟ್ಟ ಪೆಟ್ಟಿಗೆಗಳು ಪ್ರತಿ ನಗರದ ಕತ್ತಲ ಮೂಲೆಗಳಲ್ಲಿ ತಲೆಯೆತ್ತುವುದು ಸಾಮಾನ್ಯ; ಸ್ಟಾಕ್‌ಟನ್‌ ಇದಕ್ಕೆ ಹೊರತೇನಲ್ಲ ! ಪರಧರ್ಮ ಅಸಹಿಷ್ಣುತೆ ಕೆಲವೊಮ್ಮೆ ಕೆಟ್ಟ ಕೆಲಸಗಳಿಗೆ ಕಾರಣವಾಗಬಹುದು. ಹೀಗಾಗಿ, ಸಮಾಜದ ಶಾಂತಿ ಮತ್ತು ಸೌಹಾರ್ದದ ಪರಿಪಾಲನೆಗೆ, ವಿವಿಧ ಧರ್ಮೀಯರ ಸಹಬಾಳ್ವೆಗೆ ಸಹಾಯಕವಾಗುವ, ಕಾರ್ಯಕ್ರಮಗಳು ಅವಶ್ಯಕ; ಸ್ಟಾಕ್‌ಟನ್‌ ಮೆಟ್ರೋ ಮಿನಿಸ್ಟ್ರಿಯೂ, ಇಲ್ಲಿನ ‘ಯೂನಿವರ್ಸಿಟಿ ಆಫ್‌ ಪೆಸಿಫಿಕ್‌’ನವರೂ ಇಂಥವನ್ನು ಚೆನ್ನಾಗಿ ನಡೆಸುತ್ತಿದ್ದಾರೆ.

ಈ 2001ರ ಬೇಸಗೆಯಲ್ಲಿ, ‘ಸ್ಟಾಕ್‌ಟನ್‌ ‘ಮೆಟ್ರೋ ಮಿನಿಸ್ಟ್ರಿ’ಯು ಸರ್ವಧರ್ಮ ಶಿಕ್ಷಣ ಶಾಲೆಯ ಹೆಸರಿನಲ್ಲಿ, ನಾಲ್ಕು ವ್ಯಾಸಂಗ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.

ವಿವರಗಳು :
1. ದಿನಾಂಕ : ಜುಲೈ 16, 2001

ವಿಷಯ : ನಮ್ಮ ಬಾಳಿಗೆ ಮಾರ್ಗದರ್ಶಕವಾಗಬಲ್ಲ ಕತೆಗಳು
ಭಾಗವಹಿಸುವ ಧರ್ಮಗಳು : ಹಿಂದೂ, ಬೌದ್ಧ, ಸಿಖ್ಖ ಧರ್ಮಗಳು
ಸ್ಥಳ : ಟೆಂಪಲ್‌ ಇಸ್ರೆೃಲ್‌, 5105 ಎಲ್‌ ಡೊರಾಡೋ ರಸ್ತೆ, ಸ್ಟಾಕ್‌ಟನ್‌

ಎಲ್ಲಾ ಜನಾಂಗಗಳಲ್ಲೂ ಎಲ್ಲಾ ಕಾಲಕ್ಕೂ ಕತೆ ಹೇಳಿ, ತಿಳಿಹೇಳಿ, ಸಮಾಜ ಕಟ್ಟಿದ್ದುಂಟು. ಇಲ್ಲಿ ಈಗದರ ಪುನರಾವರ್ತನೆ ಆಗಲಿದೆ. ಪ್ರತಿನಿಧಿಗಳು ತಮ್ಮ ತಮ್ಮ ಧರ್ಮಗ್ರಂಥಗಳಿಂದ ಆಯ್ದ ಮೂರು ಮೂರು ಕತೆಗಳನ್ನು ಹೇಳತ್ತಾರೆ, ನೀತಿಯೇನು ವಿವರಿಸುತ್ತಾರೆ. ಸಮಾಜಕ್ಕೆ ಇವುಗಳಿಂದ ಮಾರ್ಗದರ್ಶನವೇನಾದರೂ ಉಂಟೇ ಚರ್ಚಿಸುತ್ತಾರೆ.

2. ದಿನಾಂಕ : ಜುಲೈ 30, 2001

ವಿಷಯ : ಅಬ್ರಹಾಮೀಯ ಸಂಪ್ರದಾಯದ ಪಾತ್ರಗಳು - ಅವುಗಳೇ ಬೇರೆ ಬೇರೆ ಧರ್ಮಗಳಲ್ಲಿ ತೋರುವ ಬಗೆ

ಭಾಗವಹಿಸುವ ಧರ್ಮಗಳು : ಯಹೂದಿ, ಕ್ರಿಶ್ಚಿಯನ್‌ ಮತ್ತು ಇಸ್ಲಾಂ ಧರ್ಮಗಳು.

ಸ್ಥಳ : ಗ್ರೇಸ್‌ ಮೆಥೋಡಿಸ್ಟ್‌ ಚರ್ಚ್‌, 1625 ನಾರ್ತ್‌ ಲಿಂಕನ್‌ ರಸ್ತೆ, ಸ್ಟಾಕ್‌ ಟನ್‌

ಈ ಮೇಲಣ ಏಕದೇವತಾವಾದೀ ಮೂರೂ ಧರ್ಮಗಳ ಗ್ರಂಥಗಳಲ್ಲಿ ಒಂದೇ ಹೆಸರಿನ ಕೆಲವು ಪಾತ್ರಗಳು ಬರುತ್ತವೆ. ಜೋಸೆಫ್‌, ಅಬ್ರಹಾಂ, ಮೋಸೆಸ್‌, ಡೇವಿಡ್‌ ಮಹಾರಾಜ ಮುಂತಾದವರು. ಅವರ ಬಗ್ಗೆ ಅಲ್ಲಿರುವ ಕತೆಗಳು ಒಂದೆಯಾ ಅಥವಾ ಬೇರೆ ಬೇರೆಯಾ ? ಬೇರೆ ಬೇರೆ ಧರ್ಮಗಳಲ್ಲಿ ಇವರುಗಳ ನಡೆ ನುಡಿಗಳೇನು ? ಅನುಸರಿಸುವವರಿಗೆ ಈ ಪಾತ್ರಗಳು ಏನು ಪ್ರಭಾವ ಬೀರಿವೆ ?

3. ದಿನಾಂಕ : ಆಗಸ್ಟ್‌ 13, 2001

ವಿಷಯ : ಸಾವನ್ನು ಎದುರಿಸುವುದು ಹೇಗೆ ?

ಭಾಗವಹಿಸುವ ಧರ್ಮಗಳು : ಬಹಾಯಿ, ಬೌದ್ಧ ಮತ್ತು ಕ್ರಿಶ್ಚಿಯನ್‌ ಧರ್ಮಗಳು

ಸ್ಥಳ: ಅನನ್ಸಿಯೇಷನ್‌ ಕೆಥೆಡ್ರಲ್‌, 1100 ನಾರ್ತ್‌ ಲಿಂಕನ್‌ ರಸ್ತೆ, ಸ್ಟಾಕ್‌ ಟನ್‌ .

ನಿಮ್ಮ ಧಾರ್ಮಿಕ ಸಂಪ್ರದಾಯ ಜೀವನದ ಕೊನೆಯನ್ನು ಎದುರಿಸುವ ಬಗ್ಗೆ ಏನು ಹೇಳುತ್ತದೆ. ಸಾವು ಕಂಡು, ಕೇಳಿ ನೀವು ಶೋಕಿಸುವ ಬಗೆ ಹೇಗೆ ? ಸತ್ತವರ ಬಗ್ಗೆ ನಡೆಸುವ ಧಾರ್ಮಿಕ ವಿಧಿಗಳೇನು ? ಅಗಲಿದ ನಿಮ್ಮವರ ಭೌತಿಕ ದೇಹವನ್ನು ನೀವು ಕೊನೆಗಾಣಿಸುವುದು ಯಾವ ರೀತಿ ?

4. ದಿನಾಂಕ : ಆಗಸ್ಟ್‌ 27, 2001

ವಿಷಯ : ಲಜ್ಜಾಶೀಲ ಹೆಂಗಸರ ಉಡುಗೆ ತೊಡುಗೆಗಳು.

ಭಾಗವಹಿಸುವ ಧರ್ಮಗಳು : ಹಿಂದೂ ಯಹೂದಿ ಮತ್ತು ಇಸ್ಲಾಂ ಧರ್ಮಗಳು.

ಸ್ಥಳ : ಸ್ಟಾಕ್‌ ಟನ್‌ ಬೌದ್ಧ ಮಂದಿರ(ಬುದ್ಧಿಸ್ಟ್‌ ಚರ್ಚ್‌), 2820 ಷಿಮಿಂಜು ಡ್ರೆೃವ್‌, ಸ್ಟಾಕ್‌ ಟನ್‌.

ಒಬ್ಬ ಹೆಂಗಸು ತಾನು ಉಡುವ ತೊಡುವ ಬಟ್ಟೆ ಬರೆಗಳ ಆಯ್ಕೆಯ ಮೇಲೆ, ಆಕೆ ಅನುಸರಿಸುವ ಧರ್ಮದ ಪ್ರಭಾವ ಏನು ? ಎಷ್ಟು ? ಅವಳ ಆಯ್ಕೆಯ ಮೇಲೆ ಆ ಧರ್ಮ ಗ್ರಂಥಗಳ ಪಾತ್ರ ಎಷ್ಟು ಹಿರಿದು ? ತನ್ನ ದೇಹ, ಬೇರೆಯವರೊಡನೆ ಸಂಬಂಧ, ಸಮಾಜದ ಕಟ್ಟುಪಾಡಿನ ಎಲ್ಲೆ ಮತ್ತು ತಾನು ನಂಬಿದ ದೇವರು - ಇವುಗಳ ತಿಳಿವಳಿಕೆಯ ಹಿನ್ನೆಲೆಯಲ್ಲಿ ಒಬ್ಬ ಲಜ್ಜಾಶೀಲ ಹೆಂಗಸು ತಾನು ಸಾಮಾನ್ಯವಾಗಿ ಧರಿಸುವ ಬಟ್ಟೆಗಳಿಂದ ನೋಡುಗರಿಗೆ ಏನನ್ನು ಸೂಚಿಸಬಯಸುತ್ತಾಳೆ ?

ಸಾಮಾನ್ಯ ಸೂತ್ರಗಳು : ಪ್ರತಿ ಸಮಾವೇಶದಲ್ಲೂ ಆ ಒಂದು ನಿರ್ದಿಷ್ಟ ವಿಷಯದ ಬಗ್ಗೆ ಆ ಸಂಜೆಗೆ ನಿಗದಿಯಾದ ಕೇವಲ ಮೂರು ಧರ್ಮಗಳ ಪ್ರತಿನಿಧಿಗಳು ತಮ್ಮ ವಿಚಾರಧಾರೆಯನ್ನು ಮೊದಲು ಮಂಡಿಸಿ, ನಂತರ ಇತರ ಉಪನ್ಯಾಸಕರೊಂದಿಗೂ ಸಭಿಕರೊಂದಿಗೂ ಪ್ರಶ್ನೋತ್ತರಕ್ಕೆ ಅವಕಾಶ ಮಾಡಿಕೊಡುತ್ತಾರೆ. ವಿವಿಧ ಧರ್ಮೀಯರ ವಿಶ್ವಾಸಯುತ, ಗೌರವಾನ್ವಿತ, ಅರ್ಥಪೂರ್ಣ ಸಹಬಾಳ್ವೆಗೆ ಇಂಥ ವಿಚಾರಗೋಷ್ಠಿ ಮಾದರಿಯ ಅಧ್ಯಯನ ತರಗತಿಗಳು ತುಂಬಾ ಸಹಕಾರಿಯಾಗುತ್ತವೆ.

ವೇಳೆ : ಪ್ರತಿದಿನ ಸಂಜೆ 6.30 ರಿಂದ ರಾತ್ರಿ 9.00ರವರೆಗೆ

ಪ್ರವೇಶ ಉಚಿತ : ಎಲ್ಲರಿಗೂ ಸ್ವಾಗತ

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ಸ್ಟಾಕ್‌ಟನ್‌ ಮೆಟ್ರೋ ಮಿನಿಸ್ಟ್ರಿ- (209) 465-4611

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X