ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೂ ಅಂತೀಯ ಹಂಸಲೇಖ ಮತ್ತು ನಿತ್ಯೋತ್ಸವದ ನಿಸಾರ್‌

By Staff
|
Google Oneindia Kannada News

*ವಿ.ಲಕ್ಷ್ಮಿಕಾಂತ್‌, ಫ್ರೀಮಾಂಟ್‌

Hamsalekhaಈ ಶೀರ್ಷಿಕೆ ಓದಿ, ಅಯ್ಯಯೋ, ‘ನಿಸಾರ್‌ ಅಹಮದ್‌ ಎಲ್ಲಿ, ಹಂಸಲೇಖ ಎಲ್ಲಿ ?’ ಎಂದು ನಿಬ್ಬೆರಗಾಗಬೇಡಿ... ಪೂರ್ತಿ ಲೇಖನ ಓದಿ. ಕೆಲವು ತಿಂಗಳ ಹಿಂದೆ ಒಂದು ಕನ್ನಡ ವಾರಪತ್ರಿಕೆಯಲ್ಲಿ ಓದಿದ ಲೇಖನದಲ್ಲಿ, ನಿಸಾರ್‌ ಅಹಮದ್‌ರವರು ಹಂಸಲೇಖಾ ಅವರಿಗೆ ಒಂದು ಕವಿ ಸಮ್ಮೇಳನದಲ್ಲಿ , ‘ಹೂ ಅಂತಿಯಾ, ಹೂ ಹೂ ಅಂತಿಯಾ... ಎಂಬಂತಹ ಸಾಹಿತ್ಯ ಬರೆಯುವ ನಿಮ್ಮದು ಎಂತಹ ಸಾಹಿತ್ಯಾರೀ ?’ ಎಂದು ಪ್ರಶ್ನಿಸಿದ್ದರಂತೆ. ಇದರ ಬಗ್ಗೆ ಇಲ್ಲಿ ನನ್ನ ಕೆಲವು ಅನಿಸಿಕೆಗಳು ಹಾಗೂ ಒಂದು ವಿಶ್ಲೇಷಣೆ:

ಇಲ್ಲಿ, ನಿಸಾರ್‌ ಅಹಮದ್‌ರವರು ಎರಡು ತಪ್ಪು ಮಾಡಿದ್ದಾರೆ. ಮೊದಲಿಗೆ, ‘ಹೂ ಅಂತಿಯಾ, ಹೂ ಹೂ ಅಂತಿಯಾ..’ ಹಾಡಿನ ಸಾಹಿತಿ ಹಂಸಲೇಖಾ ಅಲ್ಲ... ಇದರ ಸಾಹಿತಿ ಆರ್‌.ಎನ್‌. ಜಯಗೋಪಾಲ್‌ ಮತ್ತು ಸಂಗೀತ ಮಾತ್ರ ಹಂಸಲೇಖ (ಚಿತ್ರ ಅಂಜದ ಗಂಡು) ಅವರದು. ಇನ್ನೊಂದು ತಪ್ಪು , ಎಲ್ಲಾ ಜನರು ಮಾಡುವ ಸಾಮಾನ್ಯವಾದ ತಪ್ಪು. ಸಮಾಜದಲ್ಲಿ ಒಬ್ಬ ವ್ಯಕ್ತಿಯನ್ನು ಗುರುತಿಸುವುದು ಆತ ಮಾಡಿರುವ ಒಳ್ಳೇ ಕೆಲಸದ ಬದಲು ಕೆಟ್ಟ ಕೆಲಸದಿಂದ.

ನಿಸಾರ್‌ರವರ ‘ಜೋಗದ ಸಿರಿ ಬೆಳಕಿನಲ್ಲಿ.... ನಿತ್ಯೋತ್ಸವ ...’ ಎಂಬಂತಹ ಸುಂದರ ಕವಿತೆಯನ್ನು ನಾನು ಓದಿರುವೆ, ಹಾಗೆಯೇ ಹಂಸಲೇಖಾರವರು ಬರೆದಿರುವ ‘ದೇವರು ಬೆಸೆದ ಪ್ರೇಮದ ದಾರ... ’ ಎಂಬತಹ ಅದ್ಭುತ ಸಾಹಿತ್ಯವನ್ನು ಸಹ ಕೇಳಿರುವೆ. ಬಹುಶ ಹಂಸಲೇಖರವರು ಬರೆದಿರುವಂತೆ ವಿಭಿನ್ನವಾದ ಗೀತೆಗಳನ್ನು ಕನ್ನಡ ಚಿತ್ರರಂಗದಲ್ಲಿ ಮತ್ಯಾವ ಸಾಹಿತಿಯೂ ಬರೆದಿರಲಿಕ್ಕಿಲ್ಲ.

ಇವರು ಬರೆದಿರುವ ಹಾಡುಗಳ ಅಂಕಿಅಂಶಗಳನ್ನು ನೋಡಿದಾಗ ಸುಮಾರು 80 % ಹಾಡುಗಳು ಸೃಜನಶೀಲತೆಯ ಮಟ್ಟದಲ್ಲಿಯೇ ಇದೆ. ಆಕಸ್ಮಿಕ, ಮುತ್ತಿನಹಾರ, ಶಾಪ, ಗಾನಯೋಗಿ ಪಂಚಾಕ್ಷರಿ ಗವಾಯಿ, ಚೈತ್ರದ ಪ್ರೇಮಾಂಜಲಿ, ಕಲಾವಿದ, ಹೂವು ಹಣ್ಣು , ಎಕೆ 47, ಓಂ, ಸಿಪಾಯಿ, ಒಂದೇ ಎರಡೇ... ಮತ್ತು ಎಲ್ಲೋ 20% ರಷ್ಟು ದ್ವಂದ್ವಾರ್ಥ ಸಾಹಿತ್ಯ ಬರೆದಿರಬಹುದು. ಹಾಗಂತ, ಹಂಸಲೇಖರನ್ನು ಈ 20% ಸಾಹಿತ್ಯದಿಂದ ಗುರುತಿಸಿದರೆ ಅದು ಪೂರ್ವಾಗ್ರಹಪೀಡಿತರಾದಂತಲ್ಲವೇ ? ಬಹುಶಃ ನಿಸಾರ್‌ ಅಹಮದ್‌ರವರು ಹಂಸಲೇಖರವರು ಬರೆದಿರುವ 80% ಉತ್ತಮ ಸಾಹಿತ್ಯವನ್ನು ಕೇಳಿಲ್ಲ ಎನಿಸುತ್ತದೆ.

ನಮ್ಮಲ್ಲಿರುವ ಕೆಲವು ಬುದ್ಧಿ ಜೀವಿಗಳು ಸಾಹಿತಿಗಳು ತಮ್ಮನ್ನು ‘ತಾವೇ ಶ್ರೇಷ್ಟರು’ ಎಂದುಕೊಂಡು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಇವರುಗಳು ಯಾಕೇ ತಮ್ಮ ತಮ್ಮದೇ ಪ್ರಪಂಚವನ್ನು ಬಿಟ್ಟು ಸ್ವಲ್ಪ ಹೊರಗೆ ಬಂದು ನೋಡಬಾರದು ? ಹಂಸಲೇಖ ಯಾವುದೇ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡಿಲ್ಲದಿರಬಹುದು. ಆದರೆ ಅವರಿಗೆ ಜನರ ಅಭಿರುಚಿಗೆ ತಕ್ಕಂತೆ ಸಾಹಿತ್ಯ ರಚಿಸುವ ಕಲೆ ಇದೆ. ಕೆಲವರಿಗೆ ಈ ಕಲೆಯನ್ನು ಆರಾಧಿಸುವ ‘ತಲೆ ’ ಇಲ್ಲ ಅಷ್ಟೇ.

ಸುಧಾ , ತರಂಗ ಮತ್ತಿತರ ವಾರಪತ್ರಿಕೆಗಳಲ್ಲಿ ಪ್ರಕಟವಾಗುವ ಎಷ್ಟೋ ಕವಿವರ್ಯರ ಅರ್ಥವಾಗದ ಕ್ಲಿಷ್ಟ ಕವಿತೆಗಳಿಗಿಂತ ಪ್ರತೀ ಜನಸಾಮಾನ್ಯನಿಗೂ ಅರ್ಥವಾಗುವಂತಹ ಸರಳ ಸಾಹಿತ್ಯ ರಚಿಸುವ ನಮ್ಮ ಹಂಸಲೇಖರವರು ಎಷ್ಟೋ ಉತ್ತಮರು.

ಕೊನೆಗೆ ಸ್ವಲ್ಪ ವಿಶ್ಲೇಷಣೆ ನಡೆಸಿದಾಗ ತಿಳಿಯುವುದೇನೆಂದರೆ, ನಮ್ಮ ಸಮಾಜದಲ್ಲಿ ಜನರು ಒಬ್ಬ ವ್ಯಕ್ತಿಯನ್ನು ಆತನ ಕೆಟ್ಟ ಗುಣಗಳ ಕೆಲಸಗಳ ಬಗ್ಗೆ ನೋಡುತ್ತಾರೆ ಹೊರತು, ಅದೇ ವ್ಯಕ್ತಿಯ ಕೆಲವು ಉತ್ತಮ ಒಳ್ಳೆಯ ಕೆಲಸಗಳ ಬಗ್ಗೆ ನೋಡುವುದಿಲ್ಲ. ಇದು ಜನರ ಮೂಲಭೂತ ದೌರ್ಬಲ್ಯ ಎನಿಸುತ್ತದೆ. ಆದರೆ ನಿಸಾರ್‌ ಅಹಮದ್‌ ರಂತಹ ಓದಿದ ವ್ಯಕ್ತಿಗಳೇ ಈ ರೀತಿ ತಪ್ಪು ಮಾಡಿದಾಗ, ಇನ್ನು ಜನ ಸಾಮಾನ್ಯ ಈ ರೀತಿಯ ತಪ್ಪುಗಳನ್ನು ಮಾಡದಿರುತ್ತಾನೆಯೇ ?

ಸಿನಿಮಾ ಸಾಹಿತಿಗಳನ್ನು ತಿರಸ್ಕಾರದ ಮನೋಭಾವದಿಂದ ನೋಡುವ ಕೆಲವು ಸಾಹಿತಿಗಳು, ಕವಿಗಳು ಯಾಕೆ ತಮ್ಮ ಪ್ರತಿಭೆಯನ್ನು ಯಾಕೆ ಸಿನಿಮಾ ರಂಗದಲ್ಲೂ ತೋರಿಸಬಾರದು ? ಸ್ಪರ್ಧೆ ಜಾಸ್ತಿಯಾದಾಗ ಗುಣಮಟ್ಟ ಸಹ ಜಾಸ್ತಿಯಾಗುತ್ತದೆ. ಗುಣಮಟ್ಟ ಜಾಸ್ತಿಯಾದಾಗ ಅದು ನಮ್ಮಂತಹ ಸಾಮಾನ್ಯ ಜನರಿಗೆ ಲಾಭ ತಾನೇ ?

ಸಿನಿಮಾ ಸಾಹಿತಿ ಎಂಬ ಹೆಸರಿನಲ್ಲಿ ಯಾವ ಕವಿಗೂ ಕಡಿಮೆ ಇಲ್ಲದಂತೆ ಮಿಂಚುತ್ತಿರುವ ಹಂಸಲೇಖ ಜೊತೆ ನಿಜವಾದ ಕವಿಗಳು ಯಾಕೆ ಸ್ಪರ್ಧಿಸಬಾರದು ? ಸ್ಪಧೆಂ ಎಲ್ಲರಿಗೂ ತೆರೆದಿದೆ ತಾನೇ ?

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X