ಗಂಟೆ ಶೇಷಾದ್ರಿ ಸಂಸಾರಕ್ಕೆ ನೆರವು ಕೊಡಿ
ಆಗಸ್ಟ್ 14. ಅಮೆರಿಕೆಯ ವಾಷಿಂಗ್ಟನ್ ಡಿಸಿಯಲ್ಲಿ ಮುಂಜಾನೆ 7 ಗಂಟೆಗೆ ರಸ್ತೆ ಅಪಘಾತವೊಂದರಲ್ಲಿ ಏನೂ ತಪ್ಪು ಮಾಡದ ಭಾರತೀಯರೊಬ್ಬರು ಮೃತರಾದರು. ಅವರು ಗಂಟೆ ಶೇಷಾದ್ರಿ, 41 ವರ್ಷ ವಯಸ್ಸಿನ ಸಂಸಾ-ರ-ಸ್ಥ-ರು.
ಇದೇನು ಅನ್ಯಾಯ ? : ‘ಇಂಟರ್‌ಸ್ಟೇಟ್‌ನ ಸೌತ್‌ಬೌಂಡ್ 95’ ರಸ್ತೆಯಲ್ಲಿ ಎಂದಿನಂತೆ ಕೆಲಸಕ್ಕೆ ತೆರಳುತ್ತಿದ್ದ ಶೇಷಾದ್ರಿ ‘ಡ್ರೆೃವರ್ ಆಲ್ಟರ್‌ಕೇಷನ್’ ಎಂಬ ಯಾರದೋ ಹುಚ್ಚಾಟಕ್ಕೆ ಬಲಿಪಶುವಾಗಿದ್ದರು. ಡ್ರೆೃವರ್ ಆಲ್ಟರ್‌ಕೇಷನ್ ಅಂದರೆ ಚಾಲಕರ ನಡುವಿನ ಕೆರಳಿಕೆ, ತಿಕ್ಕಾಟ. ಎರಡು ಕಾರುಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದವು. ಒಂದು ಕಾರಿನ ಚಾಲಕ ಮತ್ತೊಂದು ಕಾರನ್ನು ಓವರ್‌ಟೇಕ್ ಮಾಡಿ, ನಿಧಾನ ಚಲಿಸತೊಡಗಿದ. ಹಿಂದೆ ಬಿದ್ದ ಕಾರಿನ ಚಾಲಕನಲ್ಲಿ ಕಿಚ್ಚು ಹುಟ್ಟಿತು. ತಾನೂ ಓವರ್‌ಟೇಕ್ ಮಾಡಿ, ಮೊದಲ ಕಾರಿನ ಚಾಲಕನಂತೆಯೇ ನಿಧಾನ ಚಲಿಸತೊಡಗಿದ. ಇಬ್ಬರೂ ಈ ನಡಾವಳಿಯನ್ನು ಪುನರಾವರ್ತಿಸಿದರು. ಇದು ಹೀಗೇ ಮುಂದುವರೆದು, ಒಂದು ಹಂತದಲ್ಲಿ ನಡುರಸ್ತೆಯಲ್ಲಿ ಇದ್ದಕ್ಕಿದ್ದಂತೆ ಇಬ್ಬರೂ ಅಕ್ಕ- ಪಕ್ಕಕ್ಕೆ ಬಂದು ಕಾರುಗಳನ್ನು ನಿಲ್ಲಿಸಿದರು. ಹಿಂದೆ ಭರೋ ಅಂತ ಬರುತ್ತಿದ್ದ ಪಿಕ್‌ಅಪ್ ಟ್ರಕ್ ಚಾಲಕ ಕಷ್ಟಪಟ್ಟು ಬ್ರೇಕ್ ಹಾಕಿ ಗಾಡಿ ನಿಲ್ಲಿಸಿದ. ಆದರೆ ಅದರ ಬೆನ್ನಿಗೇ ಇದ್ದ ಟ್ರಾಕ್ಟರ್ ಟ್ರೇಲರ್ ಚಾಲಕ ಹಠಾತ್ ಬ್ರೇಕ್ ಹಾಕಲು ಆಗಲಿಲ್ಲ. ಕ್ಷಣಾರ್ಧದಲ್ಲೇ ಪಿಕ್‌ಅಪ್ ಟ್ರಕ್ ನುಜ್ಜುಗುಜ್ಜಾಗಿತ್ತು. ಅದರಲ್ಲಿದ್ದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದರು. ಅವರೇ ಗಂಟೆ ಶೇಷಾದ್ರಿ !
ಡ್ರೆೃವರ್ ಆಲ್ಟರ್‌ಕೇಷನ್ ಎಂಬುದು ಒಂದು ಹುಚ್ಚಾಟ. ಇದು ಇಂದು- ನಿನ್ನೆಯದಲ್ಲ. ಆದರೆ ಇದರಿಂದ ಒಬ್ಬ ಅಮಾಯಕ ಪ್ರಾಣ ಕಳೆದುಕೊಂಡಿರುವುದು ಸಲ್ಲ. ಮೇರಿಲ್ಯಾಂಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಟ್ರಾಕ್ಟರ್ ಟ್ರೇಲರ್‌ನ ಚಾಲಕ ಆರಾಮಾಗಿದ್ದಾನೆ. ಡ್ರೆೃವರ್ ಆಲ್ಟರ್‌ಕೇಷನ್‌ನಲ್ಲಿ ತೊಡಗಿದ್ದ ಒಬ್ಬ ಚಾಲಕ ಬಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ಇನ್ನೊಬ್ಬ ನಾಪತ್ತೆ. ಪೊಲೀಸರು ಆತನ ತಲಾಷಿನಲ್ಲಿದ್ದಾರೆ.
ಹೆಂಡತಿ- ಮಕ್ಕಳಿಗೆ ನೆರವು ಕೊಡಿ : ಈ ಹುಡುಗಾಟ ದೊಡ್ಡಾಟವಾದ ಪರಿಣಾಮ ಸಂಸಾರದ ದೊಡ್ಡ ನೊಗ ಹೊತ್ತಿದ್ದ ಒಬ್ಬ ಜವಾಬ್ದಾರಿಯುತ ವ್ಯಕ್ತಿ ಇಲ್ಲವಾಗಿದ್ದಾರೆ. ಶೇಷಾದ್ರಿ ಅವರಿಗೆ 3 ಹಾಗೂ 12 ವರ್ಷ ವಯಸ್ಸಿನ ಮಕ್ಕಳಿದ್ದಾರೆ. ಅವರ ಹೆಂಡತಿಗೆ ದಿಕ್ಕು ತೋಚದಂತಾಗಿದೆ. ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡ ತಂದೆಯನ್ನು ಕಂಡು, ಇತ್ತೀಚೆಗೆ ಭಾರತದಿಂದ ವಾಪಸ್ಸಾಗಿದ್ದ ಶೇಷಾದ್ರಿ ಎರಡು ತಿಂಗಳ ಹಿಂದಷ್ಟೇ ಲಾರೆಲ್‌ನಲ್ಲಿ ಮನೆಯಾಂದನ್ನು ಕೊಂಡು, ಕನಸಿನ ಬುತ್ತಿ ಕಟ್ಟಿಕೊಂಡಿದ್ದರು.
ಗಂಡನ ಕಳಕೊಂಡ ಹೆಂಡತಿ, ತಂದೆ ಇಲ್ಲದ ಮಕ್ಕಳ ಮುಂದಿನ ಜೀವನಕ್ಕೆ ಹಣ- ಕಾಸಿನ ಅವಶ್ಯಕತೆಯಿದೆ. ಇದಕ್ಕೆಂದೇ ಒಂದು ವೆಬ್‌ಸೈಟ್ ಉಂಟು. ನೆರವು ಮಾಡುವ ದೊಡ್ಡ ಮನಸ್ಸು ನಿಮ್ಮದಾಗಿದ್ದಲ್ಲಿ http://pages.ivillage.com/ghante/ghantesheshadri/ ಸಂಪರ್ಕಿಸಿ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications